December 11, 2021

ಸಾಹಿತ್ಯದ ರುಚಿ ಉಣಿಸುವ ನಲ್ಲಿಕಾಯಿ

 ದಿನಾಂಕ 26-09-2019ರ ಪ್ರಜಾವಾಣಿ ಯಲ್ಲಿ ಪ್ರಕಟವಾದ ನನ್ನ ಬರಹ. 


ಸಾಹಿತ್ಯದ ರುಚಿ ಉಣಿಸುವ  ನಲ್ಲಿಕಾಯಿ 



ನಲ್ಲಿಕಾಯಿ ಎಂದೊಡನೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಅದರ ಹುಳಿ, ವಗರು ರುಚಿ ಎಲ್ಲರಿಗೂ ಇಷ್ಟ. ಅದರ ಜೊತೆ ಒಂಚೂರು ಉಪ್ಪು, ಖಾರ, ಸಿಹಿ ಸೇರಿಸಿದರಂತೂ ಅದರ ರುಚಿಗೆ ಮರುಳಾಗದವರೇ ಇಲ್ಲ. ಈಗೇಕೆ ಈ ನಲ್ಲಿಕಾಯಿ ನೆನೆಪು ಅಂತೀರಾ. ಈಗ ನಾನಿಲ್ಲಿ ಹೇಳ ಹೊರಟಿರುವುದು ತಿನ್ನುವ ನಲ್ಲಿಕಾಯಿ ಬಗ್ಗೆ ಅಲ್ಲ. ಕೇಳುವ ನಲ್ಲಿಕಾಯಿ. ಕೇಳುವ ನಲ್ಲಿಕಾಯಿ ಎಂದ ಕೂಡಲೇ ಆಶ್ಚರ್ಯವಾಗುವುದು ಸಹಜ.  

ನಲ್ಲಿಕಾಯಿ ತಿನ್ಬೇಡಿ, ಕೇಳಿ : ‘ನಲ್ಲಿಕಾಯಿ’ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದ ಪೋಡ್‌ಕಾಸ್ಟ್ಗಳನ್ನು ಒಳಗೊಂಡ ಒಂದು ವೆಬ್‌ಸೈಟ್. ಇಲ್ಲಿ ವೈವಿಧ್ಯಮಯ ವಿಚಾರಗಳು ಆಡಿಯೋ ರೂಪದಲ್ಲಿವೆ. ಇಲ್ಲಿನ ವಿಚಾರಗಳನ್ನು ಓದಿ ತಿಳಿಯುವಂತಿಲ್ಲ. ಬದಲಾಗಿ ಕೇಳಿ ತಿಳಿಯಲು ಅನುಕೂಲವಾಗುವಂತೆ ವೆಬ್‌ಸೈಟ್ ಡಿಸೈನ್ ಮಾಡಲಾಗಿದೆ. ನಲ್ಲಿಕಾಯಿ ಸಂಪೂರ್ಣವಾಗಿ ಕನ್ನಡ ಸಾಹಿತ್ಯಕ್ಕೆ ಮೀಸಲಾದ ವೆಬ್‌ಸೈಟ್ ಆಗಿದೆ. ನಲ್ಲಿಕಾಯಿಗೆ ಉಪ್ಪು, ಖಾರ, ಸಿಹಿ ಸೇರಿದರೆ ಹೇಗೆ ರುಚಿ ಬದಲಾಗುವುದೋ ಹಾಗೆ ಸಾಹಿತ್ಯಕ್ಕೆ ಕಥೆ, ಕವನ, ಕಾದಂಬರಿ, ನಾಟಕ, ವಿವಿಧ ಪ್ರಕಾರಗಳ ಓದು ಸಾಹಿತ್ಯಾಭಿಮಾನಿಗಳಿಗೆ ರುಚಿಸುತ್ತದೆ. ಇದನ್ನು ಅರಿತ ನಲ್ಲಿಕಾಯಿ ಜನಕ ಇಲ್ಲಿ ಕಥೆ, ಕವನ, ಪುಸ್ತಕ ವಿಮರ್ಶೆ, ವಿಚಾರಗಳು ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ಆಡಿಯೋ ರೂಪದಲ್ಲಿ ಕೇಳಿಸುವ ಪ್ರಯತ್ನ ಮಾಡಿರುವುದು ಪ್ರಶಂಸಾರ್ಹ. 

ಜನಕನ ಮಾತು : ಈ ವೆಬ್‌ಸೈಟ್‌ನ ರೂವಾರಿ ಶರತ್. ಇಂದಿನ ಧಾವಂತ ಜೀವನದಲ್ಲಿ ಪುಸ್ತಕ, ಪತ್ರಿಕೆ ಓದಿ ವಿಚಾರಗಳನ್ನು ತಿಳಿಯಲು ಯಾರಿಗೂ ಪುರುಸೊತ್ತಿಲ್ಲ. ವಿಚಾರಗಳನ್ನು ತಿಳಿಯುವ ಹಪಹಪಿ ಇರುವ ಮನಸ್ಸುಗಳಿಗೆ ಶಬ್ದಗಳ ಮೂಲಕ ವಿಚಾರಗಳನ್ನು ರವಾನಿಸುವ ಉದ್ದೇಶದಿಂದ ಈ ಪೋಡ್‌ಕಾಸ್ಟ್ ವೆಬ್‌ಸೈಟ್ ರೂಪಿಸಲಾಗಿದೆ ಎನ್ನುತ್ತಾರೆ ಶರತ್. ಬೇರೆ ಬೇರೆ ಭಾಷೆಗಳ ಪೋಡ್‌ಕಾಸ್ಟ್ ವೆಬ್‌ಸೈಟ್‌ಗಳು ಸಾಕಷ್ಟು ಇರುವಾಗ ಕನ್ನಡದಲ್ಲಿ ಇದರ ಕೊರತೆ ಇರುವುದನ್ನು ಗಮನಿಸಿದ ಶರತ್ ಕನ್ನಡದಲ್ಲಿಯೇ ನಲ್ಲಿಕಾಯಿ ಪೋಡ್‌ಕಾಸ್ಟ್ ರೂಪಿಸಲು ಮತ್ತೊಂದು ಕಾರಣ.

“ಬಾಲ್ಯದಿಂದಲೂ ತಂದೆ ತಾಯಿಯವರಿಂದ, ಶಾಲೆಯ ಗುರುಗಳಿಂದ ಕನ್ನಡದ ಪದ್ಯ, ಕತೆ, ಕವಿತೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಇವುಗಳು ಪದೇ ಪದೇ ನೆನಪಾಗಿ ಕಿವಿಯಲ್ಲಿ ಗುಂಯ್ಯಗುಡುತ್ತಿದ್ದವು. ಆದರೆ ಈಗ ಇಂತಹ ಕತೆ. ಹಾಡು ಹೇಳುವ ತಂದೆ ತಾಯಿಗಳಿಲ್ಲ, ಪದ್ಯಗಳನ್ನು ರಾಗವಾಗಿ ಹಾಡುವ ಗುರುಗಳಿಲ್ಲ” ಎಂದು ಮನನೊಂದ ಶರತ್ ತನ್ನ ಬಾಲ್ಯದ ದಿನಗಳನ್ನು ನೆನೆಯುತ್ತಾರೆ. ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ರಸಾನುಭವವನ್ನು ಪೋಡ್‌ಕಾಸ್ಟ್ ಮೂಲಕ ಕೇಳಿಸುವ ಆಸೆ ಶರತ್ ಅವರದ್ದು. ಮೂಲತಃ ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪದವರಾದ ಶರತ್ ಈಗ ಬೆಂಗಳೂರಿನ ವೆಬ್‌ಜೇಡ ಎಂಬ ಸಾಫ್ಟ್ವೇರ್ ಕಂಪನಿಯಲ್ಲಿ ಸೀನಿಯರ್ ವೆಬ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಓದಿದರೂ ಕನ್ನಡ ಉಳಿಸುವ, ಬೆಳೆಸುವ ಕಾಯಕದಲ್ಲಿ ಸ್ವಯಂ ಸೇವಕನಂತೆ ತೊಡಗಿಸಿಕೊಂಡ ಶರತ್‌ನ ಕಾರ್ಯ ಶ್ಲಾಘನೀಯ. ಕನ್ನಡದಲ್ಲಿ ಪೋಡ್‌ಕಾಸ್ಟ್ಗಳ ಸಂಖ್ಯೆ ತೀರಾ ವಿರಳ. ಅಂತಹ ವಿರಳಾತಿವಿರಳದಲ್ಲಿ ನಲ್ಲಿಕಾಯಿ ವಿಭಿನ್ನವಾದದ್ದು.

ನಿಮ್ಮ ರುಚಿಯೂ ಇರಲಿ : ಸೆಪ್ಟಂಬರ್ 2015ರಲ್ಲಿ ಪ್ರಾರಂಭವಾದ ನಲ್ಲಿಕಾಯಿಯಲ್ಲಿ ಅನೇಕ ಆಡಿಯೋ ವಿಚಾರಗಳಿವೆ. ಕೇಳುಗರ ಶ್ರವಣ ಮತ್ತು ಮೆದುಳಿಗೆ ಆಪ್ಯಾಯಮಾನ ಅನುಭವ ನೀಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಆಡಿಯೋ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಬೆಳೆಸುವ ಉಳಿಸುವ ಮಹತ್ಕಾರ್ಯದಲ್ಲಿ ನಿಮ್ಮ ಪಾಲೂ ಇರಲಿ. ನಿಮ್ಮದೇ ಕತೆ, ಕವನ, ನೀವು ಓದಿದ ಪುಸ್ತಕ, ವಿಚಾರಗಳು, ದಿನಾಚರಣೆಗಳ ಮಹತ್ವ, ಇತ್ಯಾದಿಗಳನ್ನು ನಿಮ್ಮ ಮೊಬೈಲ್‌ನ ರೆಕಾರ್ಡರ್ ಮೂಲಕ ಧ್ವನಿಮುದ್ರಿಸಿ ಕಳಿಸಿದರೆ ಅದನ್ನು ನಲ್ಲಿಕಾಯಿಯಲ್ಲಿ ಪ್ರಕಟಿಸುತ್ತಾರೆ. ಆ ಮೂಲಕ ನೀವು ನಲ್ಲಿಕಾಯಿಗೆ ರುಚಿ ನೀಡಬಹುದು. ವಿವರಗಳಿಗೆ 8904475972 ಸಂಪರ್ಕಿಸಿ. ನಲ್ಲಿಕಾಯಿಯ ಸಾಹಿತ್ಯ ರುಚಿ ಸವಿಯಲು hಣಣಠಿs://ಟಿಚಿಟಟiಞಚಿಥಿi.ಛಿom/ ಗೆ ಭೇಟಿಕೊಡಿ.



No comments:

Post a Comment