December 11, 2021

‘ಬಾಡ’ದ ಕನಕ ಚರಿತ್ರೆ

 ದಿನಾಂಕ  03-11-2019ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


‘ಬಾಡ’ದ ಕನಕ ಚರಿತ್ರೆ



ಕನಕದಾಸರು ಎಂದೊಡನೆ ಅವರ ಕೀರ್ತನೆ, ಸುಳಾದಿಗಳು, ಉಗಾಬೋಗಗಳು ನೆನೆಪಾಗುತ್ತವೆ. ಕರ್ನಾಟಕದ ಹರಿದಾಸರಲ್ಲಿ ಕನಕದಾಸರು ಅಗ್ರಗಣ್ಯರು. ಅಂತಹ ಮಹಾನ್ ಚೇತನನ ಜೀವನ ಚರಿತ್ರೆಯನ್ನು ಕಣ್ಣಾರೆ ಕಂಡು ಅರಿಯಲು ಸಾಧ್ಯವಾಗಿದ್ದರೆ ಹೇಗೆ ಎಂಬ ಚಿಂತನೆ ಮೂಡದಿರದು. ಇಪ್ಪತ್ತೊಂದನೇ ಶತಮಾನದಲ್ಲಿ ಜೀವಿಸಿದ ನಮಗೆ ಹದಿನಾರನೇ ಶತಮಾನದ ಕನಕದಾಸರ ಜೀವನಚರಿತ್ರೆಗೆ ಸಂಬAಧಿಸಿದ ಕೆಲವು ಸಾದೃಶ್ಯಗಳನ್ನು ಕಣ್ಣಾರೆ ಕಾಣಲು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಾಡದಲ್ಲಿ ಸಕಲ ವ್ಯವಸ್ಥೆ ಲಭ್ಯವಿದೆ. ಕನಕದಾಸರ ಜನ್ಮಭೂಮಿಯಾದ ಬಾಡಾದಲ್ಲಿ ಅವರ ಜೀವಿತದ ಗತವೈಭವವನ್ನು ಮರುಸೃಷ್ಟಿಸಲಾಗಿದೆ. 

ಅರಮನೆಯಲ್ಲಿ ಚರಿತ್ರೆಯ ಅನಾವರಣ : ಅರಮನೆಯಲ್ಲಿ ಕನಕದಾಸರ ಬದುಕಿನ ಯಶೋಗಾಥೆ ತಿಳಿಸುವ ಹಲವು ಚಿತ್ರಣಗಳಿವೆ. ಅರಮನೆಯೊಳಗಿನ ತೈಲವರ್ಣಗಳು ಹಾಗೂ ಉಬ್ಬುಶಿಲ್ಪಗಳು ಕನಕದಾಸರು ಹಾಗೂ ಅವರ ಪೂರ್ವಿಕರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಇತಿಹಾಸವನ್ನು ವರ್ಗಾಯಿಸುತ್ತವೆ. ಇತಿಹಾಸ ಅರಿಯುವ ಹಂಬಲ ಇರುವ ಪ್ರತಿಯೊಬ್ಬರಿಗೂ ಇವು ಅಮೂಲ್ಯ ಆಕರಗಳಾಗಿವೆ. ಬಾಲ ತಿಮ್ಮಪ್ಪನಾಯಕ ಡಣಾಯಕನಾಗಿ ನಂತರ ಕನಕದಾಸರಾಗಿ ಪರಿವರ್ತನೆ ಹೊಂದಿದ ಸನ್ನಿವೇಶದ ಚಿತ್ರಣಗಳು ಮನಸ್ಸಿಗೆ ಮುದ ನೀಡುತ್ತವೆ. ಆರ್ಟ್ ಗ್ಯಾಲರಿ ಮಾದರಿಯಲ್ಲಿ ಗೋಡೆಗೆ ನೇತುಹಾಕಿದ ವರ್ಣಚಿತ್ರಗಳು ಕನಕದಾಸರ ಜೀವನ ಚರಿತ್ರೆಯನ್ನು ಸಾರಿ ಹೇಳುತ್ತವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿರುವ ಕನಕದಾಸರ ಕೀರ್ತನೆಗಳನ್ನು ಅರಮನೆಯ ಒಳಾಂಗಣದ ಗೋಡೆಗೆ ಬಂಧಿಸಲಾಗಿದೆ. ಇವು ನಮ್ಮ ಅಂತರಾತ್ಮಕ್ಕೆ ಬೆಳಕನ್ನು ಹರಿಸುತ್ತವೆ. ಅರಮನೆ ಪ್ರವೇಶ ದ್ವಾರಕ್ಕೆ ಎದುರಿಗೆ ಸ್ಥಾಪಿಸಲಾದ ಕನಕದಾಸರ ಮೂರ್ತಿ ನಮ್ಮೊಳಗಿನ ಅಹಂಭಾವವನ್ನು ತಗ್ಗಿಸುತ್ತದೆ. 

ಅರಮನೆಯೊಳಗಿನ ಇನ್ನೊಂದು ವಿಶೇಷವೆಂದರೆ ದರ್ಬಾರ್ ಹಾಲ್. ಮೈಸೂರು ಅರಮನೆಯ ದರ್ಬಾರ್ ಹಾಲ್‌ನಂತೆ ಇಲ್ಲಿಯೂ ದರ್ಬಾರ್ ಹಾಲ್ ನಿರ್ಮಿಸಲಾಗಿದ್ದು, ನೋಡುಗರಿಗೆ ಅಚ್ಚರಿಯನ್ನುಂಟು ಮಾಡುತ್ತದೆ. ದರ್ಬಾರ್ ಹಾಲ್‌ನ ಲೋಹದ ಕುಸುರಿ ಕಲೆ ವೀಕ್ಷಕರಿಗೆ ಮುದ ನೀಡುತ್ತದೆ. ದರ್ಬಾರ್ ಎರಡು ಅಂತಸ್ತನ್ನು ಹೊಂದಿದ್ದು, ಹತ್ತಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ಅರಮನೆ ಮೇಲೆ ನಿಂತು ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿ ಹಸಿರಿನಿಂದ ಕಂಗೊಳಿಸುವ ಬಾಡಾದ ಸುಂದರ ಪ್ರಕೃತಿಯನ್ನು ಸವಿಯಬಹುದು. 2010ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇವರ ಕಲ್ಪನೆಯ ಕೂಸಾದ ಅರಮನೆಯು ಇಂದು ವೈಭವಯುತವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 20ಸಾವಿರ ಚದುರ ಅಡಿ ವಿಸ್ತೀರ್ಣದ ಈ ಅರಮನೆಯನ್ನು 2013ರಲ್ಲಿ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅರಮನೆಯ ಸುತ್ತಲೂ ಕೆಂಪುಕಲ್ಲಿನ ಕೋಟೆ ಇದೆ. ಪ್ರವಾಸಿಗರನ್ನು ಕ್ಷಣಹೊತ್ತು ಇತಿಹಾಸದ ಕಾಲಘಟ್ಟಕ್ಕೆ ಕರೆದೊಯ್ಯುವ ಈ ಮನಮೋಹಕ ಅರಮನೆ ನಿರ್ಮಿಸಿದ್ದು ಇಂದಿನ ಪೀಳಿಗೆಗೆ ಕನಕದಾಸರ ಇತಿಹಾಸವನ್ನು ಬಾಡದಂತೆ ಉಳಿಸುವ ಪ್ರಯತ್ನವಾಗಿದೆ.

ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿನ ಉದ್ಯಾನವನ ಪ್ರಕೃತಿ ಪ್ರಿಯರಿಗೆ ರಸದೌತಣ ನೀಡುತ್ತದೆ. ಎತ್ತರವಾದ ಗುಡ್ಡದ ಮೇಲೆ ನಿರ್ಮಿತವಾದ ಈ ಕೋಟೆ ಅನತಿ ದೂರದಿಂದಲೇ ತನ್ನ ಇರುವಿಕೆಯನ್ನು ಸೂಚಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕೋಟೆ ಏರಲು ಮೆಟ್ಟಿಲುಗಳಿದ್ದು, ಅಕ್ಕಪಕ್ಕದ ಉದ್ಯಾನವನ ಮನಸ್ಸಿಗೆ ಮುದ ನೀಡುತ್ತದೆ. ಮೇಲ್ಭಾಗದಲ್ಲಿ ನಿರ್ಮಿತವಾದ ಕಾವಲುಗಾರರ ಆಕರ್ಷಕ ಶಿಲ್ಪಗಳು ಕೋಟೆಗೆ ಮೆರಗನ್ನು ನೀಡಿವೆ. ವಾಹನ ಇಳಿಯುತ್ತಿದ್ದಂತೆ ಕೋಟೆಯ ಸೌಂದರ್ಯ ಮೊಬೈಲ್‌ನಲ್ಲಿ ಸುಂದರ ಚಿತ್ರಣಗಳನ್ನು ಪಟಪಟನೆ ಕ್ಲಿಕ್ಕಿಸುವಂತೆ ಮೋಡಿಮಾಡುತ್ತವೆ. ಕರ್ನಾಟಕ ಸೇರಿದಂತೆ, ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟçಗಳಿಂದ ಪ್ರತಿವರ್ಷ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿ ಇಲ್ಲಿನ ಸೌಂದರ್ಯನ್ನು ಕಣ್ತುಂಬಿಕೊಳ್ಳುತ್ತಾರೆ. ಕೋಟೆ ಮತ್ತು ಅರಮನೆ ಸಮುಚ್ಛಯಗಳನ್ನು ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರವು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಿದೆ.

ಹೋಲೋಗ್ರಾಮ್ ಚಿತ್ರಣ : ಬಾಡಾದ ಅರಮನೆಯ ಮತ್ತೊಂದು ವಿಶೇಷತೆ ಎಂದರೆ ‘ಹೋಲೋಗ್ರಾಮ್’ ಮೂಲಕ ‘ಕನಕ’ ಎಂಬ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದು 20 ನಿಮಿಷದ ಚಿತ್ರವಾಗಿದ್ದು, ಬೆಂಗಳೂರಿನ ನಿಚ್ಚೆ ನೆಟ್‌ವರ್ಕ್ ಹಾಗೂ ಸಿ.ಎಸ್. ಕ್ರಿಯೇಶನ್ ಈ ಕಿರುಚಿತ್ರ ನಿರ್ಮಾಣ ಮಾಡಿದೆ. ಹೈದ್ರಾಬಾದಿನ ಜೆನಿತೋನಿಯಾ ಮೀಡಿಯಾ ನೆಟ್‌ವರ್ಕ್ ಅತ್ಯಾಕರ್ಷಕ ಅನಿಮೇಶನ್ ಮಾಡಿದೆ. ಪ್ರದರ್ಶನಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಹೋಲೋಗ್ರಾಮ್ ಚಿತ್ರಪ್ರದರ್ಶನವು ಜರ್ಮನ್ ಮೂಲದ ತಂತ್ರಜ್ಞಾನವಾಗಿದ್ದು, ರಾಜ್ಯದಲ್ಲೇ ಪ್ರಥಮ ಹಾಗೂ ವಿನೂತನ ಪ್ರಯೋಗವಾಗಿದೆ. ಕಲಾವಿದರು ಪ್ರೇಕ್ಷಕರ ಎದುರು ನಿಂತುಕೊAಡು ಅಭಿನಯಿಸುತ್ತಿದ್ದಾರೆ ಎಂಬ ಅನುಭವ ಸಿಗುತ್ತದೆ. ಇಲ್ಲಿ ಪಾರದರ್ಶಕ ಪರದೆ ಇದ್ದು, ಪ್ರೇಕ್ಷಕ ಯಾವುದೇ ಕೋನದಿಂದ ವೀಕ್ಷಿಸಿದರೂ ಚಿತ್ರದ ನೈಜತೆ ಹಾಗೂ ಸ್ಪಷ್ಟತೆ ಈ ತಂತ್ರಜ್ಞಾನದಿAದ ಸಿಗುತ್ತದೆ. 

ಕೋಟೆಯ ಸಮೀಪದಲ್ಲಿ ಒಂದು ಸಾವಿರ ಜನರು ಕುಳಿತು ವೀಕ್ಷಿಸಬಹುದಾದ ವಿಶಾಲ ಬಯಲು ರಂಗಮAದಿರ ನಿರ್ಮಿಸಲಾಗಿದೆ. ಅಲ್ಲದೇ ಕೋಟೆಯ ಅನತಿ ದೂರದಲ್ಲೇ ಬಿಳಿ ಗ್ರಾö್ಯನೈಟ್ ಕಲ್ಲಿನಲ್ಲಿ ನಿರ್ಮಾಣವಾದ ಧ್ಯಾನಸ್ಥಿತಿಯಲ್ಲಿ ಕುಳಿತ ಕನಕರ ಮೂರ್ತಿ ಆಕರ್ಷಿಸುತ್ತದೆ. ಈ ಸ್ಥಳ ತುಂಬಾ ಪ್ರಶಾಂತವಾಗಿದ್ದು ಆಂತರ್ಯದಲ್ಲಿ ಭಕ್ತಿಯನ್ನು ಉದ್ದೀಪಿಸುತ್ತದೆ. 

ಅಕ್ಕಪಕ್ಕದ ಹಾಟ್‌ಸ್ಪಾಟ್ಸ್ : ಬಾಡಾದ ಸುತ್ತಮುತ್ತ ಸಾಕಷ್ಟು ಪ್ರವಾಸಿ ತಾಣಗಳಿವೆ. ಸಮೀಪದ ಬಂಕಾಪುರದ ನವಿಲುಧಾಮ ಹಾಗೂ ಐತಿಹಾಸಿಕ ನಗರೇಶ್ವರ ದೇವಸ್ಥಾನ. ಕಾಗಿನೆಲೆಯ ಕನಕದಾಸ ದೇವಸ್ಥಾನ, ಮುಂಡಗೋಡದ ಟಿಬೇಟಿಯನ್ ಟೆಂಪಲ್ ಹಾಗೂ ಗೋಟಗೋಡಿಯ ಉತ್ಸವ ರಾಕ್‌ಗಾರ್ಡನ್‌ಗಳಿದ್ದು ಎಲ್ಲವೂ ಆಕರ್ಷಕ ಪ್ರವಾಸಿ ತಾಣಗಳಾಗಿವೆ.

ಸುಲಭ ಮಾರ್ಗ : ಬಾಡಾಕ್ಕೆ ತಲುಪಲು ಸರ್ವಕಾಲಿಕ ಸುವ್ಯವಸ್ಥಿತ ರಸ್ತೆ ಇದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 25 ಕಿ.ಮೀ ಹಾಗೂ ತಾಲೂಕ ಕೇಂದ್ರ ಶಿಗ್ಗಾಂವದಿAದ 8 ಕಿ.ಮೀ ದೂರವಿದೆ. ಅಲ್ಲದೇ ಹುಬ್ಬಳ್ಳಿಯಿಂದ 53 ಕಿ.ಮೀ ಹಾಗೂ ಬೆಂಗಳೂರಿನಿAದ 361 ಕಿ.ಮೀ ದೂರವಿದೆ. ಇಲ್ಲಿಗೆ ಹಾವೇರಿವರೆಗೆ ರೈಲು ವ್ಯವಸ್ಥೆ ಇದೆ. ಹುಬ್ಬಳ್ಳಿಗೆ ವಿಮಾನ ವ್ಯವಸ್ಥೆ ಇದೆ. ಬಾಡಾದ ಅರಮನೆ ಹಾಗೂ ಇನ್ನಿತರೇ ಮಾಹಿತಿಗಾಗಿ ಕಾಗಿನೆಲೆ ಪ್ರಾಧಿಕಾರದ ಆಡಳಿತಾಧಿಕಾರಿ ಮಲ್ಲೇಶಪ್ಪ ಹೊರಪೇಟೆ 94483 38806 ಇವರನ್ನು ಸಂಪರ್ಕಿಸಿ.




No comments:

Post a Comment