April 30, 2014
April 28, 2014
ಇದ್ಹೇಗೆ ಮೇಲೇರಿತು?
ಇದ್ಹೇಗೆ ಮೇಲೇರಿತು?
ಒಮ್ಮೆ ನಮ್ಮ ಪುಟ್ಟ ಪಟ್ಟಣಕ್ಕೆ ತನ್ನ ತಂದೆ ಜೊತೆ ಬೈಕನ್ನೇರಿ ಹೋದ. ತಂದೆ ಜೊತೆ ಪಟ್ಟಣವನ್ನೆಲ್ಲ ಸುತ್ತಾಡಿ, ಬೇಕಾದ ಸಾಮಾನುಗಳನ್ನು ಖರೀದಿಸಿ, ಇಷ್ಟವಾದ ತಿಂಡಿ-ತಿನಿಸುಗಳನ್ನು ತಿಂದು ಕೊನೆಗೆ ತಂದೆ-ಮಗ ಇಬ್ಬರೂ ಬೈಕ್ ತೊಳೆಸಲೆಂದು ‘water service station’ ಗೆ ಹೋದರು ಅಲ್ಲಿ ಬೈಕ್ ತೊಳೆಯಲು ಬಿಟ್ಟು, ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತರು.
ಪುಟ್ಟ ಬಹಳ ಚುರುಕು ಬುದ್ದಿಯುಳ್ಳ ಹುಡುಗ. ಎಲ್ಲ ವಸ್ತುಗಳೂ, ದೃಶ್ಯಗಳೂ ಅವನ ಮನಸ್ಸನ್ನು ಕೆರೆಳಿಸಿ ಏಕೆ? ಏನು? ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿದ್ದವು. ಹೀಗೆ ‘water service station’ ನಲ್ಲೂ ಸಹ ಅವನಿಗೊಂದು ಪ್ರಶ್ನೆ ಉದ್ಭವಿಸಿತು. ಅದೇನೆಂದರೆ water service station ನಲ್ಲಿ ಇವರ ಬೈಕನ್ನು ತೊಳೆಯಲು ಬಿಟ್ಟ ಸಮಯದಲ್ಲಿ ಇನ್ನೊಂದು ಜೀಪು ಸಹ water service ಗೆಂದು ಬಂದಿತ್ತು. ಅದನ್ನೇ ನೋಡುತ್ತಾ ಕುಳಿತ ಪುಟ್ಟನಿಗೆ ಅದು ಒಮ್ಮೇಲೇ ಕೆಳಗಿನಿಂದ ಮೇಲಕ್ಕೆ ಏರಿದ್ದು ನೋಡಿ ಆಶ್ಚರ್ಯವಾಯಿತು. “ಯಾರೂ ಎತ್ತದೇ ಇದ್ಹೇಗೆ ಮೇಲೇರಿತು” ಎಂಬ ಪ್ರಶ್ನೆ ಮೂಡಿ ತನ್ನ ತಂದೆಯನ್ನು ಕೇಳಿದ.
“ಅಪ್ಪ ಈ ಜೀಪು ಹೇಗೆ ಮೇಲೇರಿತು? ಅದನ್ನು ಹೇಗೆ ಕೆಳಗಿಳಿಸುತ್ತಾರೆ” ಎಂದು ಪ್ರಶ್ನಿಸಿದ. ತಂದೆಗೆ ಉತ್ತರ ಗೊತ್ತಿರಲಿಲ್ಲ. ‘ನಿಮ್ಮ ತರಗತಿಯಲ್ಲಿ ವಿಜ್ಞಾನ ಶಿಕ್ಷಕರನ್ನು ಕೇಳು’ ಎಂಬ ಸಲಹೆ ನೀಡಿದರು.
ಮರುದಿನ ಶಾಲೆಗೆ ಬಂದ ಪುಟ್ಟ ವಿಜ್ಞಾನ ಶಿಕ್ಷಕರು ಒಳಬಂದ ತಕ್ಷಣ ತನ್ನ ಪ್ರಶ್ನೆಯನ್ನು ಅವರ ಮುಂದಿಟ್ಟ. ವಿಜ್ಞಾನ ಶಿಕ್ಷಕರು ಅವನ ಕುತೂಹಲವನ್ನು ಬಹಳವಾಗಿ ಮೆಚ್ಚಿ ಅವನ ಪ್ರಶ್ನೆಗೆ ಉತ್ತರಿಸತೊಡಗಿದರು.
“ವಾಹನವನ್ನು ಮೇಲಿತ್ತುವ ವ್ಯವಸ್ಥೆಯು ‘ಪ್ಯಾಸ್ಕಲ್‍ನ ನಿಯಮ’ವೆಂದೇ ಹೆಸರಾದ “ಹೈಡ್ರಾಲಕ್ ಪ್ರೇಷರ್” ನ ಮೂಲ ತತ್ವವಾಗಿದೆ. ಅಂದರೆ ದ್ರವ ವಸ್ತುವು ಒತ್ತಡವನ್ನು ಎಲ್ಲಾ ಕಡೆಗೂ ಸಮನಾಗಿ ವಿತರಿಸುತ್ತದೆಂದು ಪ್ಯಾಸ್ಕಲ್ ಪ್ರತಿಪಾದಿಸಿದ. ಒತ್ತುಗದ ಸಹಾಯದಿಂದ ಕಡಿಮೆ ಬಲದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಿದೆ. ಯಂತ್ರದ ರಚನೆ ಚಿತ್ರದಲ್ಲಿರುವಂತೆ ತೀರಾ ಸರಳವಾಗಿದ್ದು ನೀರಿನಿಂದ ತುಂಬಿದ ಒಂದು ಪಾತ್ರೆಯಿದ್ದು ಅದರಲ್ಲಿ ಚಿಕ್ಕ ಬೆಣೆಯನ್ನು ಕೆಳದೂಡಿದಾಗ ಅದು ದೊಡ್ಡ ಬೆಣೆಯ ಮುಖದ ವಿಸ್ತೀರ್ಣ ಹೆಚ್ಚಿರುವುದರಿಂದ ಮೇಲ್ಬದಿಗೆ ಆರೋಪಿಸುವ ಬಲದ ಪರಿಣಾಮ ಹೆಚ್ಚಾಗಿರುತ್ತದೆ. ಹೀಗೆ ಚಿಕ್ಕ ಬೆಣೆಯ ಮೇಲೆ ಕಡಿಮೆ ಬಲ ಉಪಯೋಗಿಸಿ ದೊಡ್ಡ ಬೆಣೆ ಮೇಲಿನ ಒಂದು ವಾಹನವನ್ನು ಮೇಲೆತ್ತಬಹುದು” ಎಂದು ವಿವರಿಸಿ ತಿಳಿಸಿದರು.
ಪ್ಯಾಸ್ಕಲ್‍ನ ತತ್ವದ ಬಗ್ಗೆ ತಿಳಿದ ಪುಟ್ಟನಿಗೆ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆನಿಸಿತು.“ಸಾರ್ ಪ್ಯಾಸ್ಕಲ್‍ನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸ್ರೀ” ಎಂದು ಕೇಳಿದ. ಶಿಕ್ಷಕರು ವಿವರಿಸುತ್ತಾ “ಪ್ಯಾಸ್ಕಲ್‍ನು 1623 ಜೂನ್ 19 ರಂದು ಪ್ರಾನ್ಸಿನಲ್ಲಿರುವ ಕ್ಲೆರ್‍ಮೆಂಟ್-ಫೆರಿಂಡ್ ಎಂಬಲ್ಲಿ ಜನಿಸಿದನು. ಅವನಿಗೆ ಚಿಕ್ಕಂದಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಎಷ್ಟಿತ್ತೆಂದರೆ ಹುಡುಗನಾಗಿದ್ದಾಗಲೇ ಯೂಕ್ಲಿಡ್‍ನ ರೇಖಾಗಣಿತದ ಪ್ರಮೇಯಗಳನ್ನು ಕಂಡುಹಿಡಿದನಂತೆ. ಹದಿನಾರನೇ ವಯಸ್ಸಿಗೆ ಶಂಕುವಿನ ಛೇದ ಮುಖಗಳಾದ ವರ್ತುಲ, ಎಲಿಪ್ಸ್, ಪ್ಯಾರಾಬೋಲ, ಹೈಪರ್ಬೋಲ ಮುಂತಾದ ಆಕೃತಿಗಳ ಜ್ಯಾಮಿತಿಯ ಬಗ್ಗೆ ಪುಸ್ತಕ ಬರೆದು ಪ್ರಕಟಿಸಿದನು.
ಪ್ಯಾಸ್ಕಲ್ ಕಂಡುಹಿಡಿದ ಲೆಕ್ಕಾಚಾರದ ಯಂತ್ರ ಗಣಕಯಂತ್ರಗಳ ಆವಿಷ್ಕಾರಕ್ಕೆ ಪ್ರಚೋದನೆ ನೀಡಿತು. ಪ್ಯಾಸ್ಕಲ್‍ನು “ಸಂಭವನೀಯತಾ ಸಿದ್ಧಾಂತ” ಕಂಡು ಹಿಡಿದನು. ಒಮ್ಮೆ ಪ್ಯಾಸ್ಕಲ್ ಕುದುರೆ ಸಾರೋಟಿನಲ್ಲಿ ಹೋಗುವಾಗ ಅಪಘಾತಕ್ಕಿ ಡಾಗಿ ಸಾವಿನ ದವಡೆಯಿಂದ ತಪ್ಪಿಸಿಕೊಂಡ. ಇದು ಅವನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತು. ದೇವರ ಅವಕೃಪೆಯೇ ಇದಕ್ಕೆ ಕಾರಣವೆಂದು ನಂಬಿದ ಪ್ಯಾಸ್ಕಲ್‍ನಿಗೆ ಅಂದಿನಿಂದ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಕಡಿಮೆಯಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ರಚನೆಯಲ್ಲಿ ತೊಡಗಿದ. ಪ್ಯಾಸ್ಕಲ್‍ನ ದೈವೀ ನಂಬಿಕೆಗಳೇನೇ ಇದ್ದರೂ ವಿಜ್ಞಾನ ಕ್ಷೇತ್ರದಲ್ಲಿ ಆತನ ಸಾಧನೆ ಗಮನಾರ್ಹವಾದುದು” ಎಂದು ಶಿಕ್ಷಕರು ಪ್ಯಾಸ್ಕಲ್‍ನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಇದನ್ನು ಕೇಳಿದ ಪುಟ್ಟನಿಗೆ ಮತ್ತು ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಬಲು ಖುಷಿಯಾಯಿತು.
‘ಟೀಚರ್’ ಅಕ್ಟೋಬರ್ 2003
- ಆರ್.ಬಿ.ಗುರುಬಸವರಾಜ
ಇದರ ಮೇಲೆ ತೆರಿಗೆ ಹಾಕಬಹುದು!
ಇದರ ಮೇಲೆ ತೆರಿಗೆ ಹಾಕಬಹುದು!
ಎಲ್ಲ ಮಕ್ಕಳಂತೆ ಶಾಲಾ ವಯಸ್ಸಿಗೆ ಶಾಲೆಗೆ ಸೇರಿ ನಲಿದಾಡಬೇಕಾದ ವಯಸ್ಸಿಗೆ ಆ ಹುಡುಗನಿಗೆ ದುಡುಮೆ ಅನಿವಾರ್ಯವಾಗಿತ್ತು. ಹದಿನಾಲ್ಕನೇ ವಯಸ್ಸಿಗಿಂತ ಮುಂಚೆಯೇ ಒಬ್ಬ ಪುಸ್ತಕ ವ್ಯಾಪಾರಿಯ ಬಳಿ ಪುಸ್ತಕಗಳಿಗೆ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡು ಪುಸ್ತಕಗಳಿಗೆ ರಟ್ಟು ಹಾಕುವ ಹುಡುಗನೊಬ್ಬ ಮುಂದೆ ವಿಜ್ಞಾನಿಯಾಗುತ್ತಾನೆಂದು ಯಾರೂ ಕನಸಿನಲ್ಲಿಯೂ ಎಣಿಸಿರಲಿಲ್ಲ.
ಶಾಲ ವಿದ್ಯಾಭ್ಯಾಸವಿಲ್ಲದೇ ವಿಜ್ಞಾನಿಯಾದ ಬಾಲಕನ್ಯಾರು ಗೊತ್ತೆ? ಅವನೇ ಮೈಕೆಲ್ ಫ್ಯಾರಡೆ. ಫ್ಯಾರಡೇ ಜನಿಸಿದ್ದು 1791 ಸೆಪ್ಟಂಬರ್ 22 ರಂದು ಒಂದು ಬಡ ಕಮ್ಮಾರನ ಕುಟುಂಬದಲ್ಲಿ. ಬಡತನದಿಂದಾಗಿ ಫ್ಯಾರಡೆ ಪಾಲಿಗೆ ವಿದ್ಯಾಭ್ಯಾಸ ದೂರವಾಯಿತು. ದುಡಿಮೆ ಅನಿವಾರ್ಯವಾಗಿ ರಟ್ಟು ಹಾಕುವ ಕೆಲಸಕ್ಕೆ ಸೇರಿಕೊಂಡ. ರಟ್ಟು ಹಾಕುತ್ತಲೇ, ರಟ್ಟು ಹಾಕಲು ಕೊಟ್ಟ ವಿಜ್ಞಾನ ಪುಸ್ತಕಗಳಿಂದ ಆಳವಾದ ಅಧ್ಯಯನ ಮಾಡಿ, ಓದಿದ್ದನ್ನು ಮನಸ್ಸಿನಲ್ಲಿ ತಿರುವಿಹಾಕಿ ಚಿತ್ರಗಳನ್ನು, ವಿವರಣೆಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ. ಅಲ್ಲಲ್ಲಿ ನಡೆಯುವ ಉಪನ್ಯಾಸಗಳನ್ನು ಕೇಳಿ ಟಿಪ್ಪಣಿಗಳನ್ನು ಬರೆದುಕೊಂಡು, ಪ್ರಯೋಗಗಳಿಗೆ ನೆರವಾಗುವ ಚಿತ್ರಗಳನ್ನು ರಚಿಸಿಕೊಳ್ಳುತ್ತಿದ್ದ.
ಸಂಗ್ರಹಿಸಿದ ಟಿಪ್ಪಣಿ ಹಾಗೂ ಚಿತ್ರಗಳನ್ನು ಸೇರಿಸಿ “ಸರ್ ಹಂಫಿಡೇವಿ” ಯವರಿಗೆ ಕಳಿಸಿಕೊಟ್ಟು ಅವರ ಬಳಿ ಕೆಲಸಕ್ಕಾಗಿ ಬೇಡಿದ. ವಿಜ್ಞಾನದಲ್ಲಿ ಅವನಿಗಿದ್ದ ಆಸಕ್ತಿ, ಆಳವಾದ ಅರಿವು ಆ ಟಿಪ್ಪಣಿಗಳಲ್ಲಿ, ಚಿತ್ರಗಳಲ್ಲಿ ಪ್ರತಿಬಿಂಬಗೊಂಡಿದ್ದವು. ತಕ್ಷಣ ಕೆಲಸ ಸಿಗಲಿಲ್ಲವಾದರೂ 1813ರಲ್ಲಿ ಡೇವಿಯವರ ಸಹಾಯಕನಾಗಿ ರಾಯಲ್ ಸೊಸೈಟಿ ಸೇರಿದ. ಆಗ ಯುರೋಪಿನ ಅನೇಕ ಮಂದಿ ಪ್ರಸಿದ್ಧಿ ವಿಜ್ಞಾನಿಗಳನ್ನು ಕಾಣುವ ಮತ್ತು ಅವರ ಉಪನ್ಯಾಸ ಕೇಳುವ ಅವಕಾಶ ದೊರೆಯಿತು.1816ರಲ್ಲಿ ಫ್ಯಾರಡೆ ತನ್ನ ಮೊದಲ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದನು. ಅದೇ ವರ್ಷ ಅವನು ಕೆಲವು ಹೊಸ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಿದನು.
1821 ಫ್ಯಾರಡೆ ಜೀವನದ ಮೈಲಿಗಲ್ಲು. ವಿದ್ಯುತ್ ಪ್ರವಹಿಸುವ ಒಂದು ತಂತಿ ಅದರ ಕೆಳಗೆ ನಿಲ್ಲಿಸಿದ್ದ ಅಯಸ್ಕಾಂತದ ಅಕ್ಷವನ್ನು ಬಳಸಿ ಸುತ್ತುತ್ತದೆ ಎನ್ನುವುದನ್ನು ತೀರಾ ಸರಳ ಉಪಕರಣಗಳನ್ನುಪಯೋಗಿಸಿ ತೋರಿಸಿದ. 1824ರಲ್ಲಿ “ರಾಯಲ್ ಸೊಸೈಟಿ” ಯ ಸದಸ್ಯನಾದನು.
“ಪ್ರಕೃತಿಯಲ್ಲಿನ ಎಲ್ಲಾ ಬಲಗಳು ಒಂದೇ ಮೂಲದಿಂದ ಹುಟ್ಟಿದ್ದು, ಒಂದು ಬಲವನ್ನು ಇನ್ನೊಂದು ಬಲವನ್ನಾಗಿ ಪರಿವರ್ತಿಸಲು ಸಾಧ್ಯ” ಎಂದು ಫ್ಯಾರಡೆ ನಂಬಿದ್ದ. ಈ ನಂಬಿಕೆಯೇ ಅವನ ಎಲ್ಲಾ ಪ್ರಯೋಗಗಳಿಗೂ ಆಧಾರವಾಗಿತ್ತು.ಕಾಂತ ಧೃವಗಳ ನಡುವೆ ಒಂದು ಲೋಹದ ಬಿಲ್ಲೆ ತಿರುಗಿಸಿ ಅದರಿಂದ ವಿದ್ಯುತ್ ಉತ್ಪಾದಿಸಬಹುದೆಂದು ಫ್ಯಾರಡೆ ತೋರಿಸಿದ. ಇದು ಮುಂz ಡೈನಾಮೋ ಸೃಷ್ಟಿಗೆ ಕಾರಣವಾಯಿತು.
ಫ್ಯಾರಡೆ ಸಾರ್ವಜನಿಕ ಭಾಷಣ ಮತ್ತು ಪ್ರದರ್ಶಗಳಿಗೆ ಹೆಸರುವಾಸಿಯಾಗಿದ್ದ. ಒಮ್ಮೆ ಅವನು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಪ್ರಯೋಗವನ್ನು ಪ್ರದರ್ಶಿಸಿ ವಿವರಿಸುತ್ತಿದ್ದಾಗ ಆ ದೇಶದ ವಿದೇಶಾಂಗ ಸಚಿವರು. ಈ ಪ್ರಯೋಗದಿಂದೇನು ಉಪಯೋಗ ಎಂದು ಕೇಳಿದರು. ತಟ್ಟನೇ ಫ್ಯಾರಡೇ “ಮಾನ್ಯರೇ ನೀವು ಮುಂದೆ ಇದರ ಮೇಲೆ ತೆರಿಗೆ ಹಾಕಬಹುದು” ಎಂದರಂತೆ.
ಆಡಂಬರದ ಬದುಕು ಫ್ಯಾರಡೆ ಜೀವನಕ್ಕೆ ಒಗ್ಗಲಿಲ್ಲ. ಅವನು ಕೀರ್ತಿಯನ್ನಾಗಲೀ, ಸ್ಥಾನವಾನ್ನಗಲೀ ಎಂದೂ ಬಯಸಲಿಲ್ಲ. ಮಕ್ಕಳಿಲ್ಲದ ಫ್ಯಾರಡೆಯ ಅವಿಶ್ರಾಂತ ದುಡಿಮೆಯಿಂದಾಗಿ ಆರೋಗ್ಯ ಕೆಟ್ಟಿತು. 1861 ಆಗಸ್ಟ್ 25 ರಂದು ಫ್ಯಾರಡೆ ದೇಹಾಂತ್ಯವಾದರೂ ಅವನ ಸಾಧನೆಗಳು ನಮ್ಮ ಕಣ್ಣೆದುರಿಗಿವೆ.
‘ಟೀಚರ್’ ಮೇ 2003
- ಆರ್.ಬಿ.ಗುರುಬಸವರಾಜ
ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ
ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ
“ಬರ್ಮುಡಾ ಟ್ರ್ಯಾಂಗಲ್ಸ” ಬಗ್ಗೆ ಯಾರಿಗೆಗೊತ್ತಿಲ್ಲ. ಹೇಳಿ. ಡೆವಿಲ್ಸ್ ಟ್ರ್ಯಾಂಗಲ್ ಎಂದು ಪ್ರಸಿದ್ಧವಾಗಿದ್ದ ಅದನ್ನು ಭೂತ ಪಿಶಾಚಿಗಳ ತಾಣ ಎಂತಲೂ ಸಹ ಕರೆಯುತ್ತಾರೆ. ಅದಕ್ಯಾಕೆ ಆ ಹೆಸರು ಎಂದಿರ! ಇದೊಂದು ಅಂಟ್ಲಾಟಿಕ್ ತೀರದಲ್ಲಿನ ಬರ್ಮುಡಾ, ಮಯಾಮಿ, ಪ್ಲೋರಿಡಾ, ಪೋರ್ಟೊರಿಕಾ, ಸಾನ್‍ಜುವಾನ್ ದೇಶಗಳ ನಡುವಿನ ತ್ರಿಕೋಣ ಪ್ರದೇಶವಾಗಿದ್ದು, ವಿಸ್ಮಯಗಳ ಹಾಗೂ ಕೌತುಕಗಳ ಆಗರವಾಗಿದೆ ಮತ್ತು ವಿಜ್ಞಾನಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ. ಈ ಪ್ರದೇಶದಲ್ಲಿ ನಡೆದ ವಿಮಾನ ಮತ್ತು ಹಡಗುಗಳ ನಾಪತ್ತೆ ಪ್ರಕರಣಗಳು ಜಗತ್ತಿನ ಬೇರೆ ಕಡೆ ನಡೆದ ಎಲ್ಲಾ ಪ್ರಕರಣಗಳಿಗಿಂತ ವಿಶಿಷ್ಠವಾದವು ಮತ್ತು ಗಮನಾರ್ಹವಾದವುಗಳಾಗಿವೆ.
ಇಲ್ಲಿ ನಡೆದ ನಾಪತ್ತೆ ಪ್ರಕರಣಗಳಿಗೆ ಕಾರಣಗಳ ಹಾದಿ ಹಿಡಿದು ಹುಡುಕಲು ಹೊರಟವರೂ ಸಹ ನಾಪತ್ತೆಯಾಗಿ ಸಂಶೋಧನೆಯ ಸ್ವರೂಪವೇ ಬುಡಮೇಲಾದ ಅನೇಕ ಪುರಾವೆಗಳು ದೊರೆತವಾದರೂ ನಂಬಲಸಾಧ್ಯವಾದ್ದರಿಂದ ಅವು ದಂತಕತೆಯಾಗಿಯೇ ಉಳಿದವು. ಆದರೆ ಸಾಧಕರಿಗೆ, ಸಂಶೋಧಕರಿಗೆ, ಸಾಹಸಿಗಳಿಗೆ ವೈಜ್ಞಾನಿಕ ಪುರಾವೆಗಳು ದೊರೆತರೆ ಅವರನ್ನು ತಡೆ ಹಿಡಿವವರ್ಯಾರು? ಬರ್ಮುಡಾ sಟ್ರ್ಯಾಂಗಲ್‍ನ ವಿಸ್ಮಯದ ಸಂಗತಿಗಳಿಗೆ ಕಾರಣಗಳನ್ನು, ಅದರ ಸ್ವರೂಪದ ಬಗ್ಗೆ ಕಂಡು ಕೇಳರಿಂiÀiದ ವ್ಯಕ್ತಿಯೊಬ್ಬ ಕನಸಿನಲ್ಲಿ ಕಂಡದನ್ನು ಹೇಳಿದಾಗ ಇಡೀ ಜಗತ್ತೇ ಮೂಕವಿಸ್ಮತವಾಗಿತ್ತು. ಏಕೆಂದರೆ ಬರ್ಮುಡಾ ಟ್ರ್ಯಾಂಗಲ್ ಕುರಿತು ಆ ವ್ಯಕ್ತಿ ಹೇಳಿದ ಮಾತು ಅಕ್ಷರ ಸಹ ನಂಬಲರ್ಹವಾಗಿತ್ತು. ಬರ್ಮುಡಾ ಟ್ರ್ಯಾಂಗಲ್ ಕುರಿತು ಮತೆ ಜನಮನದಲ್ಲಿ ಕುತೂಹಲ ಕೆರಳಿಸಿದ ಆ ವ್ಯಕ್ತಿಯೇ ಎಡ್ಗರ್ ಕೇಸಿ.
ಎಡ್ಗರ್ ಕೇಸಿ ಅಮೇರಿಕಾದ ಕೆಂಟುಕಿ ಎಂಬಲ್ಲಿ 1877ರಲ್ಲಿ ಜನಿಸಿದನು. ಬಾಲ್ಯದಲ್ಲಿ ಪ್ರತಿಭಾವಂತನೆನಿಸಿಕೊಳ್ಳದಿದ್ದರೂ ತನ್ನ ವಿಲಕ್ಷಣವಾದ ಕೆಲವು ವರ್ತನೆಗಳಿಂದ ಇತರರನ್ನು ಆಕರ್ಷಿಸಿಕೊಂಡಿದ್ದ.ತನಗೆ ಸತ್ತವರೊಂದಿಗೆ ಮಾತನಾಡುವ ವಿಶಿಷ್ಠ ಶಕ್ತಿಯಿದೆ ಎಂದು ಆಗಾಗ್ಗೆ ಹೇಳುತ್ತಿದ್ದರೂ, ಪೋಷಕರು ಅದೊಂದು ಅವನ ಹುಚ್ಚಾಟ ಎಂದು ಹೇಳಿ ಅವನನ್ನು ಗದರಿಸುತ್ತಿದ್ದರು.
ಒಮ್ಮೆ ಅವನಿಗೆ ಹದಿವಯಸ್ಸಿನಲ್ಲುಂಟಾದ ಗಂಟಲು ಬೇನೆ ಯಾವ ವೈದ್ಯಕೀಯ ಔಷಧೋಪಚಾರದಿಂದಲೂ ಫಲಕಾರಿಯಾಗದಿರುವುದರಿಂದ ರೋಸಿ ಹೋದ ಕೇಸಿ ತನ್ನ ಸ್ನೇಹಿತನ ಸಹಾಯದಿಂದ ಸುಪ್ತನಿದ್ರಾವಸ್ಥೆಗೆ ತೆರೆಳಲ್ಪಟ್ಟು ತನ್ನ ಸಂಕಷ್ಟಗಳಿಗೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಹೇಳುವ ಅವನ ರೀತಿ ಸುತ್ತಮುತ್ತಲ ಹಳ್ಳಿಗಳಿಗೆ ಹಬ್ಬಿತ್ತು. ರೋಗ ಉಪಶಮನಕ್ಕೆಂದು ತಿಳಿಸಿದರೆ ಸಾಕು, ಈತ ಸುಪ್ತಾನಿದ್ರಾವಸ್ಥೆಗೆ ತೆರಳಿ ರೋಗಕ್ಕೆ ಕಾರಣ ಹಾಗೂ ನಿವಾರಣಾ ಮಾರ್ಗವನ್ನು ಹೇಳುತ್ತಿದ್ದ. ಇದರಿಂದ ಅನೇಕ ರೋಗಿಗಳು ಗುಣಮುಖರಾದರು. ಕೆಲವರು ಜಗತ್ತಿನ ಆಗುಹೋಗುಗಳ ಪ್ರಶ್ನೆಗಳಿಗೆ ಕೇಸಿ ಸೂಕ್ತ ಉತ್ತರ ನೀಡುತ್ತಾ ಕನವರಿಕೆಯ ಪ್ರವಾದಿ ಎನಿಸಿಕೊಂಡ.
ಎಚ್ಚೆತ್ತ ಸಹಜ ಸ್ಥಿತಿಯಲ್ಲಿ ಕೇಸಿ ಎಲ್ಲರಂತೆ ತೀರಾ ಸಾಧಾರಣ ವ್ಯಕ್ತಿಯಾಗಿರುತ್ತಿದ್ದ. ಆದರೆ ಸುಪ್ತನಿದ್ರಾವಸ್ಥೆಯಲ್ಲಿ ಸಾವಿರಾರು ಜನರ ಸಂಕಷ್ಟಹರ ಚಿಕಿತ್ಸಕನಾಗಿದ್ದುದು ಅವನ ಹಿರಿಮೆಯ ಗರಿ. ಕೇಸಿ ತನ್ನೂರಿನ ಶಾಲಾ ಮಕ್ಕಳ ಪ್ರೀತಿಯ ಮಾಸ್ತರನಾಗಿ, ಉತ್ತಮ ಛಯಾಗ್ರಾಹಕನಾಗಿ, ಮನೆಮಂದಿಯ ಆತ್ಮೀಯ ಒಡನಾಡಿಯಾಗಿ ಜೀವನ ನಡೆಸಿದ್ದ.
ತನ್ನ ಸಹಜ ಸ್ಥಿತಿಯಲ್ಲಿ ಅಟ್ಲಾಂಟಿಸ್ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದ ಕೇಸಿ ಸುಪ್ತನಿದ್ರಾವಸ್ಥೆಯಲ್ಲಿ ಅಂಟ್ಲಾಂಟಿಸ್ ಕುರಿತು ನೂರಾರು ಬಾರಿ ಕನವರಿಸಿದ್ದಾನೆ. ಅದು ಅವನಿಗೇ ಆಸ್ಚರ್ಯದ ಸಂಗತಿಯಾಗಿತ್ತು. ಈಗಿನ ಬಿಮಿನಿ ದ್ವೀಪದಲ್ಲಿ ಹಿಂದೊಮ್ಮೆ ಉನ್ನತವಾದ ನಾಗರೀಕತೆಯೊಂದು ಬೆಳೆದು, ಜಗತ್ತಿನ ಶ್ರೇಷ್ಠ ಜನಾಂಗವಾಗಿ ಮೆರೆದು, ತನ್ನ ಕೈಯಾರ ತಾನೇ ಅವಸಾನ ಹೊಂದಿತೆಂದು ಕೇಸಿ ಹೇಳುತ್ತಿದ್ದನು. ಅಟ್ಲಾಂಟಿಸ್‍ನ ಅವಸಾನಕ್ಕೆ ಅಣುಶಕ್ತಿಯ ದುರುಪಯೋಗವೇ ಕಾರಣವೆಂದು ಹೇಳಿದ ಕೇಸಿ ಬರ್ಮುಡಾ ಟ್ರ್ಯಾಂಗಲ್‍ನ ಎಲ್ಲಾ ನಾಪತ್ತೆ ಪ್ರಕರಣಗಳಿಗೆ ಅಟ್ಲಾಂಟಿಸ್ ನಾಗರಿಕತೆಯಲ್ಲಿ ಶಕ್ತಿ ಸ್ಥಾವರಗಳ ಶಕ್ತಿಯೇ ಕಾರಣವೆಂದು ತಿಳಿಸಿದ್ದಾನೆ. ಲೇಸರ್ ಕಿರಣಗಳನ್ನು (1942) ಕಂಡು ಹಿಡಿಯುವುದಕ್ಕಿಂತ ಮೊದಲೇ ಅಟ್ಲಾಂಟಿಸ್ ನಾಗರೀಕತೆಯ ಜನರು ಲೇಸರ್ ಮತ್ತು ಮೇಸರ್ ಕಿರಣಗಳನ್ನು ಪಳಗಿಸಿಕೊಂಡಿದ್ದರು ಎಂದು ಹೇಳಿದ್ದಾನೆ.
ಈಗ್ಗೆ ಹನ್ನೆರಡು ಸಾವಿರ ವರ್ಷಗಳ ಹಿಂದೆ ಅವಸಾನ ಹೊಂದಿದ ಇಂತಹ ಶಕ್ತಿ ಕೇಂದ್ರಗಳು ಬರ್ಮುಡಾ ಟ್ರ್ಯಾಂಗಲ್‍ನಲ್ಲಿ ಈಗಲೂ ಸಹ ಕ್ರಿಯಾಶೀಲವಾಗಿವೆಯೆಂದರೆ ನಂಬುವುದು ಸ್ವಲ್ಪ ಕಷ್ಟದ ಸಂಗತಿಯಾದರೂ ಅಪೋಲೋ-12 ರ ಗಗನಯಾತ್ರಿಗಳು ಕಂಡಂತೆ ಬಿಳಿ ನೀರಿನ ಬುಗ್ಗೆಯೊಂದು ಹೊರನುಗ್ಗಿ ಇತರೆಡೆ ಹರಿದು ಪ್ರಕಾಶಮಾನವಾಗಿ ಹೊಳೆಯುವ ದೃಶ್ಯ ಕಂಡಿದ್ದರಿಂದ ಅದು ಸಾಗರದಾಳದಲ್ಲಿ ಅದುಮಿಟ್ಟ ಅನಿಲಗಳು ಹೊರನುಗ್ಗುವ ಘಟನೆಯ ಪರಿಣಾಮ ಇದ್ದರೂ ಇರಬಹುದು ಎಂದು ತೀರ್ಮಾನಿಸಲಾಯಿತು.
ಹೀಗೆ ಅಟ್ಲಾಂಟಿಸ್‍ನ ದಂತ ಕತೆಗಳಲ್ಲಿ ಒಂದು ಪಾತ್ರವಾಗುಳಿದ ಕೇಸಿ 1940ರಲ್ಲಿ ಒಂದು ಮಹತ್ತರವಾದ ಕನವರಿಕೆಯನ್ನು ಹೊರಹಾಕಿದೆ. ಅದೇನೆಂದರೆ 1968-69ರಲ್ಲಿ ಅಟ್ಲಾಂಟಿಸ್‍ನ ಭಾಗವಾದ ಪೊಸಿಡಿಯಾ ಮತ್ತೊಮ್ಮೆ ಮೇಲೆದ್ದು ಬರುತ್ತದೆಂದು ಹೇಳಿದ. ಅವನ ಈ ಕನವರಿಕೆಯನ್ನು ನಿಜಪಡಿಸಲೆಂಬಂತೆಯೋ ಅಥವಾ ಪರೀಕ್ಷೀಸಲೆಂಬತೆಯೋ 1967 ರಲ್ಲಿ ಡಾ!! ಮೆವರ್ ಹಾಗೂ ಶ್ರೀಮತಿ ವರ್ಮೋಲ್ ಎಂಬ ಸಂಶೋಧಕರು ಆ ಪೊಸಿಡಿಯಾ ಪ್ರದೇಶದಲ್ಲಿ ಸಮುದ್ರಮಟ್ಟದಿಂದ ಕೇವಲ 30 ಅಡಿ ಆಳದಲ್ಲಿ ಲಾವಾ ಶಿಲೆಗಳಡಿ ಹುದುಗಿದ್ದ ಮಿನೂಂವ್ ಎಂಬ ಮುಳುಗಡೆಯಾದ ನಗರವನ್ನು ಪತ್ತೆ ಹಚ್ಚಿದರು. ಕೇಸಿಯ ಭವಿಷ್ಯದ ಕನವರಿಕೆಯ ಕಾಕತಾಳೀಯವೆಂಬಂತೆ ಅಲ್ಲೊಂದು ಮುಳುಗಿದ ನಗರದ ಕುರುಹು ಪತ್ತೆಯಾಗಿತ್ತು.
ಹೀಗೆ ಕನವರಿಕೆಗಳ ಸರಮಾಲೆಯನ್ನೇ ಹೊತ್ತುಕೊಂಡಿದ್ದ ಎಡ್ಗರ್‍ಕೇಸಿ 1945ರ ಜನವರಿ 3 ರಂದು ಮರಣಹೊಂದಿ ಇಂದಿಗೂ ಜಗತ್ತಿನ ಕನವರಿಕೆಯಾಗೇ ಉಳಿದನು.
‘ಟೀಚರ್’ ಜುಲೈ 2006
- ಆರ್.ಬಿ.ಗುರುಬಸವರಾಜ
ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು
ಹಾಕಿ ಮಾಂತ್ರಿಕ ಧ್ಯಾನ್‍ಚಂದ್: ಒಂದು ನೆನಪು
1928ರಲ್ಲಿ ಆಮ್‍ಸ್ಟರ್‍ಡಮ್‍ನಲ್ಲಿ ಭಾರತ ಪ್ರಥಮವಾಗಿ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಪಡೆದಾಗ “ಹಾಕಿ ಒಂದು ಆಟವಲ್ಲ, ಅದೊಂದು ಯಕ್ಷಿಣಿ ವಿದ್ಯೆ” “ಹಾಕಿ ಯಕ್ಷಿಣಿಗಾರ – ಧ್ಯಾನ್‍ಚಂದ್” ಎಂದೆಲ್ಲಾ ಅಂದಿನ ಪತ್ರಿಕೆಗಳು ವರ್ಣಿಸಿದವು. ಈ ಎಲ್ಲಾ ಖ್ಯಾತಿಗೆ ಭಾಜನರಾದವರು ಭಾರತದ ಖ್ಯಾತ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್.
ಧ್ಯಾನ್‍ಚಂದ್ ಕೇವಲ ಭಾರತದ ಭಾರತದ ಹಾಕಿ ಆಟಗಾರನಾಗಿ ಹೆಸರುಗಳಿಸಲಿಲ್ಲ. ಭಾರತದ ಸೇನಾನಾಯಕ (ಮೇಜರ್)ನಾಗಿಯೂ ಹೆಸರುಗಳಿಸಿದವರು. ಬಾಲ್ಯದಲ್ಲಿ ಆಟಗಳಲ್ಲಿ ಅನಾಸಕ್ತಿ ಹೊಂದಿದ್ದರೂ ಪ್ರಾಮಾಣಿಕ ಪ್ರಯತ್ನಗಳಿಂದ ಹುಟ್ಟಿದ ದಿನವನ್ನು “ರಾಷ್ಟ್ರೀಯ ಕ್ರೀಡಾದಿನ”ವನ್ನಾಗಿ ಆಚರಿಕೊಳ್ಳುವ ಹಂತಕ್ಕೆ ಬೆಳೆದ ಏಕೈಕ ವ್ಯಕ್ತಿಯೆಂದರೆ ಮೇಜರ್ ಧ್ಯಾನ್‍ಚಂದ್.
ಧ್ಯಾನ್‍ಚಂದ್ ಹುಟ್ಟಿದ್ದು 29ನೇ ಆಗಸ್ಟ್ 1905ರಂದು ಅಲಹಾಬಾದಿನ ಪ್ರಯಾಗದಲ್ಲಿ. ತಂದೆ ಸಮೇಶ್ವರದತ್ತ ಭಾರತೀಯ ಸೇನೆಯಲ್ಲಿದ್ದ ಇವರೂ ಸಹ ರೆಜಿಮೆಂಟಿನಲ್ಲಿ ಉತ್ತಮ ಹಾಕಿ ಪಟುವಾಗಿದ್ದರು. ತಂದೆಯ ಪದೇಪದೇ ವರ್ಗಾವಣೆಯಿಂದಾಗಿ ಕುಟುಂಬವು ಒಂದಡೆ ನೆಲೆನಿಲ್ಲಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಧ್ಯಾನ್‍ಚಂದ್ ಸರಿಯಾಗಿ ವಿದ್ಯಾಭ್ಯಾಸ ಮಾಡಲಾಗದೇ ಆರನೇ ತರಗತಿ ಶಾಲೆ ಬಿಡಬೇಕಾಯಿತು.
ಬಾಲ್ಯದಲ್ಲಿ ಮಲ್ಲಯುದ್ಧ ಮತ್ತು ಕುಸ್ತಿಗಳಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ಧ್ಯಾನ್‍ಸಿಂಗ್ ಇತರೆ ಎಲ್ಲಾ ಆಟಗಳಲ್ಲಿ ನಿರಾಸಕ್ತಿ ಹೊಂದಿದ್ದರು. 1922ರಲ್ಲಿ ಅಂದರೆ 16ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದರು. ಆಗ ರೆಜಿಮೆಂಟಿನವರು ಹಾಕಿ ಆಟವನ್ನೇ ವಿಶೇಷವಾಗಿ ಅಭ್ಯಾಸ ಮಾಡಿಸುತ್ತಿದ್ದರು. ಸಣ್ಣಗಾತ್ರದ ಚುರುಕು ನಡೆನುಡಿಯ ಅದಮ್ಯ ಚೇತನಾಶೀಲನಾದ ಧ್ಯಾನ್‍ಚಂದ್‍ನ ಪ್ರತಿಭೆಯನ್ನು ಸೂಕ್ಷ್ಮವಾಗಿ ಪತ್ತೆಹಚ್ಚಿದ ಸುಬೇದಾರ್ ಬಾಳೆ ತಿವಾರಿಯವರು ಅವರನ್ನು ಉತ್ತಮ ಹಾಕಿ ಪಟುವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದರು. ಅಲ್ಲದೇ ಅವರ ಎಲ್ಲಾ ಜವಾಬ್ದಾರಿಗಳನ್ನು ತಾವೇ ಹೊತ್ತರು.
ಹಗಲಿನಲ್ಲಿ ಸೇನಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಧ್ಯಾನ್‍ಚಂದ್‍ರಿಗೆ ಹಾಕಿಯಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕಾಗಿ ಅವರು ರಾತ್ರಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ಮಾಡತೊಡಗಿದರು. ಇದನ್ನು ಗಮನಿಸಿದ ಅವರ ಮೊದಲ ಕೋಚ್ ಪಂಕ್‍ಗುಪ್ತಾ ‘ಧ್ಯಾನಸಿಂಗ್’ ಎಂದಿದ್ದ ಅವರ ಹೆಸರನ್ನು “ಧ್ಯಾನ್‍ಚಂದ್” ಎಂದು ಬದಲಾಯಿಸಿದರು.
1926ರಲ್ಲಿ ಭಾರತ ಹಾಕಿ ತಂಡ ಪ್ರಥಮ ಬಾರಿಗೆ ವಿದೇಶ ಪ್ರವಾಸಕೈಗೊಂಡಿತು. ನ್ಯೂಜಿಲೆಂಡಿನ ಪ್ರಥಮ ಕೈಗೊಂಡ ಆ ತಂಡದಲ್ಲಿ ಧ್ಯಾನ್‍ಚಂದ್ ಇದ್ದರು. ಅಲ್ಲಿ ನಡೆದ 20 ಪಂದ್ಯಗಳಲ್ಲಿ ಭಾರತವು 18 ಪಂದ್ಯಗಳಲ್ಲಿ ವಿಜಯಿಯಾಯಿತು. 18 ಪಂದ್ಯಗಳಲ್ಲಿ ಭಾರತ 192 ಗೋಲುಗಳಿಸಿತು. ಅದರಲ್ಲಿ ಧ್ಯಾನಚಂದ್ ಒಬ್ಬರೇ 100 ಗೋಲುಗಳನ್ನು ಪಡೆದದ್ದು ಪ್ರೇಕ್ಷಕರನ್ನು ಮೂಕವಿಸ್ಮಿರನ್ನಾಗಿಸಿತು. ಈ ಪಂದ್ಯಗಳಲ್ಲಿ ಅವರು ಅತ್ಯಂತ ಮಹತ್ವದ ಸೆಂಟರ್ ಪಾರ್ವರ್ಡ್ ಆಟಗಾರ ಎಂಬ ಖ್ಯಾತಿ ಪಡೆದರು. ನ್ಯೂಜಿಲ್ಯಾಂಡ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ಭಾರತೀಯ ಸೇನೆ ಇವರನ್ನು ಸೇನಾನಾಯಕರಾಗಿ ಬಡ್ತಿ ನೀಡಿತು. 1928ರ ಆಮ್‍ಸ್ಟರ್‍ಡಮ್, 1932ರ ಲಾಸ್‍ಏಂಜಲೀಸ್ ಹಾಗು 1936ರ ಬರ್ಲಿನ್‍ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಧ್ಯಾನ್‍ಚಂದ್ ಈ ಮೂರು ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಪಡೆದರು. 1936ರ ಬರ್ಲಿನ್ ಒಲಿಂಪಿಕ್ಸ್‍ನ ವಿಜಯದ ನಂತರ “ಅಡಾಲ್ಫ ಹಿಟ್ಲರ್” ಇವರನ್ನು ಜರ್ಮನ್ ಸೇನೆಗೆ ಸೇನಾಧಿಪತಿಯಾಗಿ ಆಹ್ವಾನಿಸಿದರು. ಆದರೆ ಧ್ಯಾನ್‍ಚಂದ್ ಅದನ್ನು ನಿರಾಕರಿಸಿದರು.
ಚೆಂಡಿನ ಚಲನೆಯನ್ನು ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದ ಧ್ಯಾನ್‍ಸಿಂಗ್ ವೇಗದಲ್ಲಿ ಬೇಟೆನಾಯಿಯಂತೆ ನುಗ್ಗುತ್ತಿದ್ದರು. ಗೋಲಿನ ಕಡೆ ಚೆಂಡಿನ್ನು ನುಗ್ಗಿಸುವಾಗ ಎದುರಾಳಿಗಳಾರೂ ಸಮೀಪಕ್ಕೆ ಬಾರದಂತೆ ತಡೆಗಟ್ಟುತ್ತಾ ನೋಡು ನೋಡುತ್ತಿದ್ದಂತೆಯೇ ಗೋಲು ಹೊಡೆಯುತ್ತಿದ್ದ ಅವರ ಪರಿ ಎದುರಾಳಿ ತಂಡದವರಿಗೆ ಸೋಜಿಗವನ್ನುಂಟು ಮಾಡುತ್ತಿತ್ತು.
ಒಮ್ಮೆ ಹಾಲೆಂಡ್‍ನೊಂದಿಗೆ ಆಟವಾಡುತ್ತಿದ್ದಾಗ ಇವರ ಬ್ಯಾಟಿನಲ್ಲಿ ಅಯಸ್ಕಾಂತವಿರಬಹುದೆಂಬ ಗುಮಾನಿಯಿಂದ ಬ್ಯಾಟನ್ನೂ ಮುರಿದು ಹಾಕಲಾಯಿತು. ಇನ್ನೊಮ್ಮೆ ಒಬ್ಬ ಮಹಿಳಾ ಪ್ರೇಕ್ಷಕಿ ತನ್ನ ಊರುಗೋಲಿನಿಂದ ಆಟವಾಡಿ ಗೆದ್ದು ಎಲ್ಲಾರನ್ನೂ ಬೆರೆಗುಗೊಳಿಸಿದರು.
ಧ್ಯಾನ್‍ಸಿಂಗ್ ಅವರ ಸಹೋದರ ರೂಪ್‍ಸಿಂಗ್ ಹಾಗೂ ಮಗ ಅಶೋಕ್ ಕುಮಾರ್ ಸಹ ಖ್ಯಾತ ಹಾಕಿ ಆಟಗಾರರು. ಇವರ ಆಟವನ್ನೂ ತಪ್ಪದೇ ನೋಡುತ್ತಿದ್ದ ಶ್ರೇಷ್ಠ ಕ್ರಿಕೆಟಿಗ ಬ್ರಾಡ್‍ಮನ್ ಧ್ಯಾನ್‍ಚಂದ್ ಕುರಿತು “ಕ್ರಿಕೆಟ್‍ನಲ್ಲಿ ರನ್ ಗಳಿಸುವಷ್ಟು ವೇಗವಾಗಿ ಗೋಲು ಗಳಿಸುತ್ತಿದ್ದರು” ಎಂದು ಉದ್ಗರಿಸಿದರು.
ಇವರ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ 1956ರಲ್ಲಿ “ಪದ್ಮಭೂಷಣ” ಪ್ರಶಸ್ತಿ ನೀಡಿ ಗೌರವಿಸಿತು. ಜೊತೆಗೆ ಪ್ರತಿವರ್ಷ “ಧ್ಯಾನ್‍ಚಂದ್ ಟ್ರೋಫಿ ಹಾಕಿ ಟೂರ್ನಮೆಂಟ್” ಕೂಡಾ ನಡೆಸುತ್ತದೆ.
1956ರಲ್ಲಿ ತಮ್ಮ 51ನೇ ವಯಸ್ಸಿನಲ್ಲಿ ಸೇನೆಯಿಂದ ನಿವೃತ್ತಿಯ ನಂತರ ರಾಜಸ್ಥಾನದ ಮೌಂಟ್‍ಅಬುವಿನಲ್ಲಿ ಹಾಕಿ ತರಬೇತಿ ಶಾಲೆ ಪ್ರಾರಂಭಿಸಿದರು. ನಂತರ ಪಾಟಿಯಾಲದಲ್ಲಿ ಭಾರತ ಹಾಕಿ ತಂಡದ ಕೋಚ್ ಆಗಿ ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.
ಇವರ ಕೊನೆಯ ದಿನಗಳು ಬಹಳ ಅಹಿತಕರವಾಗಿದ್ದವು. ಅರ್ಥಿಕ ಮುಗ್ಗಟ್ಟು ಹಾಗೂ ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರು “ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)”ಯಲ್ಲಿ ಜನರಲ್ ಪಾರ್ಟಿನಲ್ಲಿ ಸಾಮಾನ್ಯ ವ್ಯಕ್ತಿಯಂತೆ ದಾಖಲಾಗಿದ್ದರು ಎಂಬುದು ತಿಳಿಯುತ್ತದೆ. ಇದನ್ನು ಅವರು ಅತ್ಯಂತ ವಿಷಾದದಿಂದ ತಮ್ಮ ಆತ್ಮಚರಿತ್ರೆ “ಗೋಲ್”ನಲ್ಲಿ ಹಂಚಿಕೊಂಡಿದ್ದಾರೆ.
ಆದರೂ ಇವರ ಸಾಧನೆಯನ್ನು ಗಮನಿಸಿದ ಸರ್ಕಾರ 2002ರಿಂದ ಪ್ರತಿವರ್ಷ ಕ್ರೀಡೆಯಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಿದ ವ್ಯಕ್ತಿಗಳಿಗೆ ಜೀವಮಾನ ಸಾಧನೆಗಾಗಿ “ಧ್ಯಾನಚಂದ್ ಪ್ರಶಸ್ತಿ” ನೀಡಿ ಗೌರವಿಸುತ್ತದೆ. ಅದೇನೇ ಇರಲಿ ಆಗಸ್ಟ್ 29ರ ಇವರ ಹುಟ್ಟುಹಬ್ಬವೇ “ರಾಷ್ಟ್ರೀಯ ಕ್ರೀಡಾದಿನ” ವೆಂಬುದು ಮಾತ್ರ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.
‘ಶಿಕ್ಷಣ ವಾರ್ತೆ’ ಆಗಸ್ಟ್ 2011
- ಆರ್.ಬಿ.ಗುರುಬಸವರಾಜ
ಕಪ್ಪು ಹುಡುಗನ ಕಟ್ಟಿಗೆಯ ಗಡಿಯಾರ
ದಿನಾಂಕ 19-06-2014 ರ 'ವಿಜಯವಾಣಿ'ಯ ವಿದ್ಯಾರ್ಥಿ ಮಿತ್ರ ಪುರವಣಿಯಲ್ಲಿ ಪ್ರಕಟವಾದ ಲೇಖನ
ಅವನೊಬ್ಬ ಬಡ ಗುಲಾಮಿ ಹುಡುಗ, ಆದರೆ ಅವನ ಕಂಗಳಲ್ಲಿ ನಕ್ಷತ್ರಗಳ ಹೊಳಪು ತುಂಬಿತ್ತು. ಮನದಲ್ಲಿ ತುಡಿತ, ಕೆಲಸದಲ್ಲಿ ಸೃಜನಶೀಲತೆ ಇತ್ತು. ಯಾವುದನ್ನಾದರೂ ವಿಶೇಷ ಆಸಕ್ತಿಯಿಂದ ಗಮನಿಸುವ ಅವನ ಗುಣ, ಅದರಿಂದ ಹೊಸ ಲೋಕವನ್ನು ಸೃಷ್ಟಿಸುವ ಬಯಕೆ ಅದಮ್ಯವಾಗಿತ್ತು. ತನ್ನ ಸಂಬಂದಿಯ ಕೈಯಲ್ಲಿದ್ದ ಕೈಗಡಿಯಾರಕ್ಕೆ ಮೋಹಿತನಾದ ಆ ಹುಡುಗ ಅದನ್ನು ಪಡೆದು ಕೈಗೆ ಕಟ್ಟಿಕೊಂಡು ಬೀಗಿದ್ದ. ಆದರೂ ಅದರರೊಳಗಿನ ಭಾಗಗಳ ಕಾರ್ಯ ರಚನೆಯನ್ನು ತಿಳಿಯುವಾಸೆ. ಗಡಿಯಾರವನ್ನು ಬಿಚ್ಚಿ ಅವುಗಳ ಭಾಗಗಳನ್ನು ಅಧ್ಯಯನ ಮಾಡಿ ಕಟ್ಟಿಗೆಯಿಂದ ವಾಚನ್ನು ತಯಾರಿಸಿದ ಆ ಹುಡುಗನಾರು ಗೊತ್ತೇ? ಅವನೇ ಬೆಂಜಮಿನ್ ಬೆನ್ಹಕರ್.
ಬೆನ್ಹಕರ್ ಅಮೇರಿಕಾದ ಮೇರಿಲ್ಯಾಂಡಿನಲ್ಲಿ ನವೆಂಬರ್ 9 ರ 1731ರಲ್ಲಿ ಜನಿಸಿದನು. ಬಾಲ್ಯ ಜೀವನದಲ್ಲಿ ತೋಟದ ಮನೆಯೇ ಅವನ ಪ್ರಯೋಗಶಾಲೆಯಾಗಿತ್ತು. ವ್ಯವಸಾಯವೇ ಅಧ್ಯಯನ ವಸ್ತುವಾಗಿತ್ತು. ಯಾವ ಮಾರ್ಗದರ್ಶನವೂ ಇಲ್ಲದೇ ತಾನೇ ತನ್ನ ಕೆಲಸದಲ್ಲಿ ಸೃಜನಶೀಲತೆ ಸೃಷ್ಠಿಸಿಕೊಂಡಿದ್ದ. ತೋಟದ ಪಕ್ಕದ ಕಾಲುವೆಗೆ ಚಿಕ್ಕ ಆಣೆಕಟ್ಟೆಯೊಂದನ್ನು ನಿರ್ಮಿಸಿ ಅದರಿಂದ ತನ್ನ ಜಮೀನಿಗೆ ನೀರಾವರಿ ವ್ಯವಸ್ಥೆಯನ್ನು ಮಾಡಿದ. ಈ ಕಾರ್ಯದಿಂದ ಬೆನ್ಹಕರ್ ಒಣಭೂಮಿಯಲ್ಲಿ ನಳನಳಿಸುವ ಬೆಳೆಗಳನ್ನು ಬೆಳೆಯಬಹುದೆಂದು ತೋರಿಸಿಕೊಟ್ಟಿದ್ದ.
ಹತ್ತಿರದಲ್ಲಿ ಶಾಲೆಯಿಲ್ಲದ ಕಾರಣ ಅಜ್ಜಿಯಿಂದ ಓದುವುದನ್ನು ಕಲಿತುಕೊಂಡಿದ್ದ. ನಂತರ ತನ್ನ ಮನೆಯ ಸಮೀಪದಲ್ಲೇ ಬಾಡಿಗೆಗೆ ಬಂದ ಶಿಕ್ಷಕರಿಂದ, ಅನೌಪಚಾರಿಕ ಶಿಕ್ಷಣ ಪಡೆದ ಬೆನ್ಹಕರ್ ಅವರಿಂದ ಬರೆಯುವುದನ್ನು ಹಾಗೂ ಸಲ್ಪ ಗಣಿತವನ್ನೂ ಸಹ ಕಲಿತುಕೊಂಡ.
ಇಪ್ಪತೋಂದನೇ ವಯಸ್ಸಿನಲ್ಲಿ ನಡೆದ ಘಟನೆಯೊಂದು ಅವನ ಜೀವನದ ದಿಕ್ಕನ್ನೇ ಬದಲಿಸಿತು. ಅದೆಂದರೆ ಅವನೇ ರಚಿಸಿದ ಕಟ್ಟಿಗೆಯ ಕೈಗಡಿಯಾರ. ತನ್ನ ಸಂಬಂಧಿಯ ಕೈಯಲ್ಲಿ ಕೈಗಡಿಯಾರ ನೊಡಿದ ಬೆನ್ಹಕರ್ ಅದರ ಭಾಗಗಳ ಕಾರ್ಯ ವಿಧಾನ ತಿಳಿಯುದಕ್ಕಾಗಿ ಅದನ್ನು ಸಂಪೂರ್ಣವಾಗಿ ಬಿಚ್ಚಿಟ್ಟ. ಅದರ ಒಂದೊಂದು ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವುಗಳ ಚಿತ್ರ ಬರೆದುಕೊಂಡ. ನಂತರ ವಾಚಿನ ಭಾಗಗಳನ್ನು ಯಥಾವತ್ತಾಗಿ ಜೋಡಿಸಿ ಅದನ್ನು ಮೊದಲಿನಂತೆಯೇ ಹಿಂತಿರುಗಿಸಿದ. ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಿಗೆಯ ತುಂಡುಗಳಿಂದ ಭಾಗಗಳನ್ನು ಕೊರೆದುಕೊಂಡು ಗಡಿಯಾರವನ್ನು ತಯಾರಿಸಿದ. ಹೀಗೆ ತಯಾರಿಸಿದ ಕಟ್ಟಿಗೆ ಗಡಿಯಾರ ಜಗತ್ತಿನಾದ್ಯಂತ ಸುದ್ದಿಮಾಡಿತು. ಸುಮಾರು 50 ವರ್ಷಗಳ ಕಾಲ ಅದು ನಿಖರವಾಗಿ ಕಾರ್ಯ ನಿರ್ವಹಿಸಿತೆಂದರೆ ಎಲ್ಲರೂ ಆಶ್ಚರ್ಯ ಪಡಬೇಕಾದ ವಿಷಯ. ನಂತರ ಜೋಸೆಫ್ ಎಲಿಕಾಟ್ ಸಂಕೀರ್ಣ ಗಡಿಯಾರ ರಚಿಸಲು ಬೆನ್ಹಕರ್ ಸಹಾಯ ಮಾಡಿದ. ಇದರಿಂದ ಎಲಿಕಾಟ್ ಸಹೋದರರು ಒಳ್ಳೆಯ ಸ್ನೇಹಿತರಾದರು.
ಬೆನ್ಹಕರ್ ತನ್ನ 58ನೇ ವಯಸ್ಸಿನಲ್ಲಿ ಸ್ನೇಹಿತರಿಂದ ಹಾಗೂ ಶಿಕ್ಷಕರಿಂದ ಖಗೋಳಶಾಸ್ತ್ರ ಹಾಗೂ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನ ಪಡೆದು ಅಧ್ಯಯನ ಮಾಡಿದ. ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಿ ಅವುಗಳ ನಕಾಶೆ ರಚಿಸಿ. ಅದರಲ್ಲೂ ಮುಖ್ಯವಾಗಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಕುರಿತ ಅಧ್ಯಯನ ಮಾಡಿದ, ಖಗೋಳ ಅಧ್ಯಯನದ ಫಲವಾಗಿ ಖಗೋಳ ಪಂಚಾಂಗವನ್ನೇ ರಚಿಸಿದ. “ಬೆನ್ಹಕರ್ ಪಂಚಾಂಗ”ವೆಂದೇ ಪ್ರಸಿದ್ಧಿಯಾಗಿದ್ದ ಇದು 1792 ರಿಂದ 1797 ಅವಧಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯುಳ್ಳ ಪಂಚಾಂಗವಾಗಿತ್ತು. ತನ್ನ ಗುಡಿಸಲನ್ನೇ ಖಗೋಳ ವೀಕ್ಷಣಾಲವನ್ನಾಗಿಸಿಕೊಂಡಿದ್ದ ಬೆನ್ಹಕರ್ ದೀರ್ಘಕಾಲದ ವೀಕ್ಷಣೆಯಿಂದ ಮಾಹಿತಿಗಳ ಲೆಕ್ಕಾಚಾರ ಹಾಕುತ್ತಿದ್ದ. ಅದನ್ನು ತನ್ನ ಆಪ್ತರಿಗೆ ತೋರಿಸಿ ಅದರ ಫಲಿತಾಂಶಗಳನ್ನು ಪಂಚಾಂಗದಲ್ಲಿ ನಮೂದಿಸುತ್ತಿದ್ದ.
ಇವರ ವೀಕ್ಷಣಾ ಹಾಗೂ ನಕ್ಷೆ ರಚನಾ ಕೌಶಲ್ಯವನ್ನು ಗಮನಿಸಿದ ಜಾರ್ಜ್ ವಾಶಿಂಗ್ಟನ್‍ರವರು 1791ರಲ್ಲಿ ಇವರನ್ನು ಅಮೇರಿಕಾ ಸಂಯುಕ್ತ ರಾಜ್ಯಗಳ ಸರ್ವೇಕ್ಷಣಾ ಕಾರ್ಯಕ್ಕೆ ನೇಮಿಸಿಕೊಂಡರು. ಅಮೇರಿಕಾ ಸಂಯುಕ್ತ ರಾಜ್ಯಗಳಲ್ಲಿ ಇದೊಂದು ಗೌರವಾನ್ವಿತ ಸೇವೆಯಾಗಿತ್ತು. ಆ ಕಾರ್ಯವನ್ನು ಅತ್ಯಂತ ನಿಖರವಾಗಿ, ಪ್ರಾಮಾಣಿಕವಾಗಿ ನೆರವೇರಿಸಿದರು.
ಸಮಯ ದೊರೆತಾಗಲೆಲ್ಲಾ ಪ್ರತಿಯೊಬ್ಬರೂ ತಮ್ಮ ಜೀವನದ ಅಚಿತಿಮ ಗುರಿಯನ್ನು ತಲುಪುವಂತೆ ಜನರಿಗೆ ಕರೆ ನೀಡುತ್ತಿದ್ದರು. ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಅನೇಕ ಮಹತ್ತರ ಸಂಶೋಧನೆಗಳಿಂದ ಹೆಸರು, ಕೀರ್ತಿಗಳಿಸಿದ ಬೆನ್ಹಕರ್ “ಪ್ರಥಮ ನಿಗ್ರೋ ವಿಜ್ಞಾನಿ” ಎನಿಸಿಕೊಂಡಿದ್ದ. ಹೀಗೆ ಅಮೇರಿಕಾದ ಜನಮನದಲ್ಲಿ ನೆಲೆನಿಂತ ಬೆನ್ಹಕರ್ ಪ್ರಾಣ 1806ರ ಅಕ್ಟೋಬರ್ 9 ರಂದು ಅಂತರಿಕ್ಷದಲ್ಲಿ ಲೀನವಾಯಿತು. ಇಂತಹ ವ್ಯಕ್ತಿಗೆ 1980ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಅವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿ ಅವರ ಹೆಸರನ್ನು ಚಿರಾಯುವನ್ನಾಗಿಸಿತು.
‘ಭಾಸ್ಕರಪ್ರಭೆ’ ಬಳ್ಳಾರಿ ಜಿಲ್ಲಾ ವಿಜ್ಞಾನ ಪ್ರದರ್ಶನ ಸಂಚಿಕೆ
- ಆರ್.ಬಿ.ಗುರುಬಸವರಾಜ
ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’
ಶಿಕ್ಷಕರ ಶಿಕ್ಷಕನಿಗೊಲಿದ ‘ಬಸವಶ್ರೀ’
‘ಹರಮುನಿದರೂ ಗುರು ಕಾಯುವನು’ ಎಂಬ ಮಾತು ಜಗಜ್ಜನಿತವಾದದು. ನಾಡು ಮತ್ತು ನಾಡಿನ ಜನತೆ ಸಂಕಷ್ಟದಲ್ಲಿರುವಾಗ ಅಭಯ ಹಸ್ತ ಚಾಚಿದವರೆಂದರೆ ಗುರುಗಳು. ಸೆಪ್ಟಂಬರ್ ಬಂತಂದರೆ ಸಾಕು ಶಿಕ್ಷಕರ ಮೇಲಿನ ಅಭಿಮಾನ ಉಕ್ಕಿ ಹರಿಯುತ್ತದೆ. ಅಂತೆಯೇ ವಿಶಿಷ್ಟ ಸೇವೆ ಸಲ್ಲಿಸಿದ ಗುರುಗಳನ್ನು ಸನ್ಮಾನಿಸುವುದು ನಮ್ಮ ನಾಡಿನ ಪರಂಪರೆ ಮತ್ತು ಗುರುಭಕ್ತಿಯ ಪ್ರತೀಕ. ನಮ್ಮಲ್ಲಿ ಗುರುಗಳಿಗೆ ಅವರ ಸೇವೆಗನುಗುಣವಾಗಿ ತಾಲ್ಲೂಕು ಹಂತದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಪ್ರಶಸ್ತಿಗಳಿವೆ. ಇವೆಲ್ಲವುಗಳಿಗಿಂತ ವಿಶಿಷ್ಟವಾದ 2010ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ನೆರೆಯ ಶ್ರೀಲಂಕಾದ ಸರಳ, ಸಜ್ಜನ, ದೀನಬಂಧು, ದಲಿತೋದ್ದಾರ, ಶ್ರೀಲಂಕಾಭಿಮಾನ್ಯ ಲಂಕಾದಗಾಂಧಿ ಎಂದೆಲ್ಲ ಬಿರುದುಗಳಿಸಿದ ಅಪ್ಪಟ ಗಾಂಧಿವಾದಿ 80ರ ಹರೆಯದ ‘ಅಹಂಗಮೆ ತೋಡರ ಆರ್ಯರತ್ನೆ’. ಅವರು ಶ್ರೀಲಂಕಾದಲ್ಲಿ ‘ಸರ್ವೋದಯ ಶ್ರಮದಾನ ಚಳುವಳಿ’ ಸ್ಥಾಪಿಸಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ. ಶಿಕ್ಷಕ ಕೇವಲ ಶಾಲಾ ಶಿಕ್ಷಣಕ್ಕೆ ಅಡಿಗಲ್ಲಾದರೆ ಸಾಲದು ಅಲ್ಲಿನ ಸಮುದಾಯಕ್ಕೆ ಮತ್ತು ರಾಷ್ಟ್ರ ನಿರ್ಮಾಣಕ್ಕೂ ಅಡಿಗಲ್ಲಾಗಬೇಕೆಂಬುದನ್ನು ಆರ್ಯರತ್ನೆ ತೋರಿಸಿಕೊಟ್ಟಿದ್ದಾರೆ.
ಬಾಲ್ಯ ಮತ್ತು ಶಿಕ್ಷಣ : 1931ರ ನವೆಂಬರ್ 5ರಂದು ಶ್ರೀಲಂಕಾದ ಗಾಲೆ ಜಿಲ್ಲೆಯ ಉನುವಂತುನ ಎಂಬಲ್ಲಿ ಜನಿಸಿದ ಆರ್ಯರತ್ನೆ ಗಾಲೆಯ ಮಹಿಂದಾ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಡೆದರು. ನಂತರ ವಿದ್ಯೋದಯ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಪಡೆದು ಮುಂದೆ ಅದೇ ವಿ.ವಿ.ಯ ಗೌರವ ಡಿ.ಲಿಟ್ ಪದವಿ ಭಾಜನರಾದರು.
ಸಮಾಜೋದ್ದಾರ : ಬೌದ್ಧ ಧರ್ಮ ಹೆಚ್ಚು ಪ್ರಚಲಿತದಲ್ಲಿರುವ ಶ್ರೀಲಂಕಾದಲ್ಲಿ ಆ ಧರ್ಮದ ತತ್ವಗಳನ್ನು ದೇಶದ ಪ್ರಗತಿಗೆ ಹೇಗೆ ಬಳಸಿಕೊಳ್ಳಬಹುದೆಂದು ತೋರಿಸಿಕೊಟ್ಟರು. ಗಾಂಧೀಜಿಯವರ ಅಹಿಂಸೆ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವತ್ಯಾಗ ತತ್ವಗಳಿಂದ ಸ್ಫೂರ್ತಿಗೊಂಡು ಅವುಗಳನ್ನೇ ಜೀವನುದುದ್ದಕ್ಕೂ ಪಾಲಿಸುತ್ತಾ ಬಂದ ಆರ್ಯರತ್ನೆ 1958ರಲ್ಲಿ ‘ಸರ್ವೋದಯ ಶ್ರಮದಾನ ಚಳುವಳಿ’ಯನ್ನು ಸ್ಥಾಪಿಸುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಕೊಲಂಬೋದ ನಲಂದಾ ಕಾಲೇಜಿನಲ್ಲಿ ಶಿಕ್ಷಕರ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರ್ಯರತ್ನೆ ಅಲ್ಲಿನ 40 ವಿದ್ಯಾರ್ಥಿಗಳು ಹಾಗೂ 12 ಜನ ಶಿಕ್ಷಕರ ಒಂದು ತಂಡ ರಚಿಸಿಕೊಂಡು ‘ಶೈಕ್ಷಣಿಕ ಪ್ರಯೋಗಗಳು’ ಎಂಬ ಹೊಸ ರೀತಿಯ ಪ್ರಯೋಗಗಳನ್ನು ಪ್ರಾರಂಭಿಸಿದರು. ಎಲ್.ಟಿ.ಟಿ.ಇ ಉಗ್ರರಿಂದ ತತ್ತರಿಸಿದ್ದ ಶ್ರೀಲಂಕಾದ ಜನತೆ ಅಶಾಂತಿಯ ಮಡುವಿನಲ್ಲಿ ನಲುಗಿ ಹೋಗಿದ್ದರು. ಹಳ್ಳಿಗಳ ಸೇವೆಗೆ ಪಣತೊಟ್ಟ ಆರ್ಯರತ್ನೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು. ಹಲವು ದಶಕಗಳವರೆಗೆ ಶಾಂತಿ ಮೂಡಿಸಲು ಪ್ರಯತ್ನಿಸಿದರು. ಹೀಗೆ ಪ್ರಾರಂಭವಾದ ಸರ್ವೋದಯ ಶ್ರಮದಾನ ಚಳುವಳಿ ಉತ್ತಮ ಯಶಸ್ಸು ಕಂಡಿತು. ಗಾಂಧೀಜಿಯವರ ಆದರ್ಶಗಳು, ಬೌದ್ಧಧರ್ಮದ ತತ್ವಗಳು, ಅರ್ಥಶಾಸ್ತ್ರೀಯ ಆಧ್ಯಾತ್ಮವಾದ ಇವು ಸವೋದಯ ಶ್ರಮದಾನ ಚಳುವಳಿ ಮಂತ್ರಗಳಾದವು.
ಸರ್ವೋದಯ ಅಂದರೆ ಸ್ವರಾಜ್ಯ (ಸ್ವ ಸರಕಾರ) ಶ್ರಮದಾನವೆಂದರೆ ಕಾರ್ಮಿಕರ ಕೊಡುಗೆ, ಆರ್ಯರತ್ನೆ ಪ್ರಕಾರ ಸರ್ವೋದಯವೆಂದರೆ ‘ಸಕಲ ಬೆಳವಣಿಗೆ’ ಅಂದರೆ ಮಾನವನ ವೈಯಕ್ತಿಕ ವ್ಯಕ್ತಿತ್ವದಿಂದ ಮಾನವೀಯತೆವರೆಗಿನ ಎಲ್ಲ ಬೆಳವಣಿಗೆಯಾಗಿದೆ. ಈ ಬೆಳವಣಿಗೆ ನೈತಿಕ, ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಳತೆಗಳನ್ನೊಳಗೊಂಡಿದೆ. ಇವುಗಳಲ್ಲಿ ಯಾವುದಾದರೊಂದು ಅಭಿವೃದ್ಧಿ ಹೊಂದಲು ಉಳಿದವು ಸಹಕರಿಸುವಂತಾಗಬೇಕು ಎಂಬುದೇ ಅವರ ಆಶಯ.
ಹಳ್ಳಿಗಳಲ್ಲಿನ ಜನತೆ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇರುವ ತೊಡಕುಗಳನ್ನು ತಾವೇ ನಿವಾರಿಸಿಕೊಳ್ಳುವಂತಹ ಕೌಶಲಗಳನ್ನು ಬೆಳೆಸುವುದೇ ಸರ್ವೋದಯದ ಮುಖ್ಯ ಗುರಿ. ವಿವಿಧ ಪ್ರಗತಿ ಪೂರಕ ಕಾರ್ಯಕ್ರಮಗಳ ಮೂಲಕ ಹಳ್ಳಿಗಳ ಜನತೆ ಅಲ್ಲಿನ ಆಡಳಿತ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನೀತರೇ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಹೆಚ್ಚು ಶ್ರಮಿಸಿದರು ಆರ್ಯರತ್ನೆ. ಇಂದು ಶ್ರೀಲಂಕಾದಲ್ಲಿ 38 ಸಾವಿರ ಹಳ್ಳಿಗಳಿದ್ದು ಅದರಲ್ಲಿ 15 ಸಾವಿರ ಹಳ್ಳಿಗಳಲ್ಲಿ ಸರ್ವೋದಯ ಶ್ರಮದಾನ ಚಳುವಳಿ ಕಾರ್ಯ ನಿರ್ವಹಿಸುತ್ತದೆ. 11 ಮಿಲಿಯನ್ ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಇಂದು ಅಲ್ಲಿನ ಜನರು ‘ಸಂಪತ್ ಬ್ಯಾಂಕ್’ಗಳೆಂಬ ಗ್ರಾಮೀಣ ಬ್ಯಾಂಕ್‍ಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ದಿಟ್ಟ ಹೆಜ್ಜೆಯನ್ನಿಡಲು ಆರ್ಯರತ್ನೆ ಕಾರಣಿಭೂತರಾಗಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಲ್ಲಿನ ನಾಗರಿಕರಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಪ್ರಯತ್ನಿಸಿದ ಹರಿಕಾರನಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲಿದಿವೆ.
ಹೀಗೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿ ವಿಶ್ವದಾದ್ಯಂತ ಹೆಸರು ಪಡೆದ ಆರ್ಯರತ್ನೆ ಎಲ್ಲ ಶಿಕ್ಷಕರಿಗೆ ಸ್ಫೂರ್ತಿಯ ಸೆಲೆಯಾಗಲಿ ಎಂಬುದೇ ಎಲ್ಲರ ಆಶಯ.
ಬಸವಶ್ರೀ ಪ್ರಶಸ್ತಿ ಬಗ್ಗೆ :
ಬಸವಾದಿ ಶರಣರ ತತ್ವ ಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯ ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರು ಮತ್ತು ಶರಣರ ಆದರ್ಶಗಳನ್ನಾಧರಿಸಿ ನಡೆಯುವವರಿಗೆ ಪ್ರಶಸ್ತಿ ಮೀಸಲು. ಇದು ಮೂರು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣ ಫಲಕಗಳನ್ನೊಳಗೊಂಡಿರುತ್ತದೆ.
‘ಟೀಚರ್’ ಅಕ್ಟೋಬರ್ 2011
-ಆರ್.ಬಿ.ಗುರುಬಸವರಾಜ
ಆಲೂರರ ಕನ್ನಡತ್ವದ ವಿಚಾರಗಳು
ಆಲೂರರ ಕನ್ನಡತ್ವದ ವಿಚಾರಗಳು
ಇಡೀ ವಿಶ್ವಕ್ಕೆ ಏಳು ಜಗತ್ಪ್ರಸಿದ್ಧ ಸ್ಥಳಗಳಿರುವಂತೆ ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನಪೀಠಗಳು ರಾರಾಜಿಸುತ್ತಿದ್ದವು. ಈಗ ಅದಕ್ಕೆ ಇನ್ನೊಂದು ಗರಿ ಸೇರಿಕೊಂಡು ಅಷ್ಟಮಣಿ ಮುಕುಟದಂತೆ ಕನ್ನಡ ಸಾಹಿತ್ಯವನ್ನು ಪ್ರಜ್ವಲಗೊಳಿಸಿವೆ. ಡಾ.ಚಂದ್ರಶೇಖರ ಕಂಬಾರರಿಗೆ ದೊರೆಕಿದ ಜ್ಞಾನಪೀಠ ಪ್ರಶಸ್ತಿ ಕನ್ನಡ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದೆ. ಉತ್ತರ ಕರ್ನಾಟಕ ನೆಲದ ಸೊಗಡನ್ನು ಎಲ್ಲೆಡೆ ಹರಡಲು ಪ್ರಯತ್ನಿಸಿದವರಲ್ಲಿ ಕಂಬಾರರೂ ಒಬ್ಬರು. ಒಂದು ಕಾಲದಲ್ಲಿ ಇದೇ ಪ್ರದೇಶಿಕ ನೆಲೆಯಲ್ಲಿ ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದ ಸಮಯದಲ್ಲಿ ಕನ್ನಡ ನಾಡಿನ ಕಂಪನು, ಕರ್ನಾಟಕದ ಅಸ್ತಿತ್ವವನ್ನು ಜಗಕೆ ಸಾರಲು ಹರಸಾಹಸ ಮಾಡಿದವರೆಂದರೆ ‘ಕನ್ನಡ ಕುಲಪುರೋಹಿತ’ ಎಂದು ಖ್ಯಾತರಾಗಿದ್ದ ಆಲೂರು ವೆಂಕಟರಾಯರು.
ಕನ್ನಡತ್ವದ ಕಿಚ್ಚು ಹತ್ತುವ ಮುನ್ನ : ಆಲೂರರ ಕನ್ನಡತ್ವ ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಖಂಡ ಕರ್ನಾಟಕದೆಲ್ಲೆಡೆ ಕನ್ನಡತ್ವ, ಕರ್ನಾಟಕತ್ವದ ಪರಿಕಲ್ಪನೆಯನ್ನು ಬಿತ್ತಿ ಉತ್ತಮ ಬೆಳೆ ಬೆಳೆಯಲು ಸಕಲ ವಾತಾವರಣ ನಿರ್ಮಿಸಿದರು. ಕರ್ನಾಟಕದಲ್ಲಿ ಕನ್ನಡವೆಂದರೆ ಕೇವಲ ಮೈಸೂರು ಪ್ರಾಂತಕ್ಕೆ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಕನ್ನಡತ್ವ ಹಾಗೂ ಕರ್ನಾಟಕತ್ವ ವಿಚಾರಗಳನ್ನು ಹೈದ್ರಾಬಾದ್, ಕೊಡಗು, ಮದ್ರಾಸ್ ಮತ್ತು ಬೆಳಗಾವಿ ಪ್ರಾಂತಗಳಲ್ಲಿನ ಜನರಿಗೆ ತುಂಬಿ ಅವರೂ ಸಹ ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಒಂದು ಕಾಲದಲ್ಲಿ ಧಾರವಾಡ ಮರಾಠಿಗಳ ತವರಿನಂತೆಯೇ ಆಗಿತ್ತು. ಇದನ್ನು ಗಮನಿಸಿದ ಆಲೂರರ ಕೆಚ್ಚದೆಯ ಕಿಚ್ಚು ಹೊತ್ತಿ ಉರಿಯತೊಡಗಿತ್ತು. ಕಳೆದ ಶತಮಾನದ ಕೊನೆಗೆ ಧಾರವಾಡದಲ್ಲಿ 29 ಮರಾಠಿ ಶಾಲೆಗಳಿದ್ದರೆ ಕೇವಲ ಎರಡೇ ಎರಡು ಕನ್ನಡ ಶಾಲೆಗಳಿದ್ದವು. ಮರಾಠಿಗಳು ಧಾರವಾಡದಲ್ಲಿ ತಮ್ಮ ಸ್ವಂತ ತವರಿನಲ್ಲಿ ನೆಲೆಸುವಂತೆ ಗಟ್ಟಿಯಾಗಿ ನೆಲೆಗೊಂಡಿದ್ದರು. ಹಾಡಲು ಕನ್ನಡದಲ್ಲಿ ಒಂದು ಪದ್ಯವಿಲ್ಲ, ಆಡಲು ಒಂದು ನಾಟಕವಿಲ್ಲ. ಇಂತಹ ಸಂಧರ್ಭದಲ್ಲಿ ಜಾಗೃತಗೊಂಡ ಆಲೂರರು ಕನ್ನಡಿಗರಿಗೆ ತಮ್ಮ ಪರಿಸ್ಥಿತಿ ಅರಿವನ್ನು, ಕನ್ನಡ ನಾಡಿನ ಇತಿಹಾಸವನ್ನು ನೆನಪಿಸಿಕೊಟ್ಟರು.
ಮೂಲತಃ ಬಳ್ಳಾರಿಯವರಾದ ಆಲೂರರು ತಮ್ಮ ತಂದೆಯವರ ಸರಕಾರಿ ಕೆಲಸದಿಂದಾಗಿ ರಾಜ್ಯದ ವಿವಿದೆಡೆ ಸಂಚರಿಸಿ ಈ ನೆಲದ ಮಣ್ಣಿನ ಸೊಗಡನ್ನು, ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದರು. ಇದೇ ಮುಂದೆ ಅವರಲ್ಲಿ ಕರ್ನಾಟಕತ್ವದ ಮೊಳಕೆ ಜಾಗೃತಗೊಳ್ಳಲು ಅನುವುಮಾಡಿಕೊಟ್ಟಿತ್ತು.
ತತ್ವಗಳ ಹಿಂದಿನ ಜೀವನಾದರ್ಶ : ಮಧ್ವಾಚಾರ್ಯರು, ವಿದ್ಯಾರಣ್ಯರು, ಅರವಿಂದಘೋಷರು ಹಾಗೂ ತಿಲಖರ ಸಿದ್ದಾಂತಗಳು ಮತ್ತು ವಿಚಾರಗಳಿಂದ ಪ್ರಭಾವಿತರಾದ ಆಲೂರರು ಭಗವದ್ಗೀತೆ ಹಾಗೂ ಮಹಾಭಾರತಗಳ ತತ್ವಾದರ್ಶಗಳನ್ನು ಬಲವಾಗಿ ಅಪ್ಪಿಕೊಂಡಿದ್ದರು. ಯಾವುದೋ ಒಂದು ತತ್ವ ಸಿದ್ದಾಂತಕ್ಕೆ ಒಗ್ಗಿಕೊಳ್ಳಲಿಲ್ಲ. ಅಲ್ಲದೇ ಅವರೆಂದೂ ‘ಕಿಂಗ್’ ಆಗಲಿಲ್ಲ, ಕಿಂಗ್ ಮೇಕರ್ ಆಗಿಯೇ ಉಳಿದರು. ಪ್ರೇರಕ ಶಕ್ತಿಯನ್ನು ಕೊಟ್ಟು ತೆರೆಯ ಒಂದೇ ನಾಣ್ಯದ ಎರಡು ಮುಖಗಳೆನ್ನುವುದನ್ನು ಬಲವಾಗಿ ನಂಬಿದ್ದರು. “ಜೀವನದಿಂದ ಬೇರ್ಪಟ್ಟ ತತ್ವಗಳು ತತ್ವಗಳಲ್ಲ, ತತ್ವಗಳಿಂದ ಬೇರ್ಪಟ್ಟ ಜೀವನ ಜೀವನವಲ್ಲ” ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದರು.
ಮಗ ವಕೀಲನಾಗಬೇಕೆಂಬ ಆಸೆಯಿಂದ ತಂದೆ ಭೀಮರಾಯರು ವೆಂಟರಾಯರನ್ನು ಪುಣೆಗೆ ಓದಲು ಕಳಿಸಿದರು. ಅಲ್ಲಿ ಮಹಾರಾಷ್ಟ್ರ ಜನರ ಮರಾಠೀ ಅಭಿಮಾನ ಹಾಗೂ ಅವರಿಂದ ಕನ್ನಡಿಗರ ಮೇಲೆ ನೆಡೆಯುತ್ತಿದ್ದ ಭೀಭತ್ಸ ಕೃತ್ಯಗಳು ವೆಂಕಟರಾಯರ ಕನ್ನಡಾಭಿಮಾನವನ್ನು ಹಾಗೂ ಕರ್ನಾಟಕದ ಮೇಲಿನ ಮೋಹವನ್ನು ಮತ್ತಷ್ಟು ಇಮ್ಮಡಿಗೊಳಿಸಿದವು. ಗ್ರಂಥಾಲಯಗಳಿಗೆ ಹೋದರೆ ಕೇವಲ ಕರ್ನಾಟಕದ ಮೂಲ ಇತಿಹಾಸ ಇತಿಹಾಸ ಸಾರುವ ಗ್ರಂಥಗಳನ್ನೆ ಓದುತ್ತಿದ್ದರು.
ಧಾರವಾಡಕ್ಕೆ ಬಂದಾಗಲೆಲ್ಲಾ ಕರ್ನಾಟಕ ಇತಿಹಾಸ ಮತ್ತು ಸಂಸ್ಕøತಿಯ ಕುರುಹುಗಳಾಗಿದ್ದ ಪ್ರಾಚೀನ ಕನ್ನಡ ನೆಲೆಗಳನ್ನು ಸುತ್ತಡುವುದು, ಅವುಗಳ ಬಗ್ಗೆ ಅಧ್ಯಯನ ಮಾಡುವುದು ಅವರ ಹವ್ಯಾಸವಾಗಿತ್ತು. ಕಾನೂನು ಪದವಿ ಪಡೆದ ನಂತರ ಧಾರವಾಡದಲ್ಲೇ ವಕೀಲಿ ವೃತ್ತಿ ಪ್ರಾರಂಭಿಸಿದ ಆಲೂರರಿಗೆ ಅಲ್ಲಿ ವಿರಾಮ ವೇಳೆಯಲ್ಲಿ ಕನ್ನಡ ನಾಡಿನ ಬಗ್ಗೆ ಚರ್ಚೆ ವಿಚಾರ ಮಂಥನ ಮಾಡಲು ಹೆಚ್ಚು ಹೆಚ್ಚು ಅವಕಾಶಗಳು ದೊರೆತವು. ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ನವಚೈತನ್ಯ ನೀಡಲು ಶ್ರಮಿಸಿದರು. ಅನೇಕ ಕಡೆಗಳಲ್ಲಿ ಉಪಾಧ್ಯಾಯರುಗಳ ಸ್ನೇಹ ಸಂಪರ್ಕ ಬೆಳೆಸಿಕೊಂಡು ಕನ್ನಡ ಕಾವ್ಯ, ವ್ಯಾಕರಣ, ಛಂದಸ್ಸುಗಳ ಬಗ್ಗೆ ವಿಚಾರ ಸಂಕಿರಣ ಮತ್ತು ಗೋಷ್ಠಿಗಳನ್ನು ನೆಡೆಸಿ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.
ಕರ್ನಾಟಕ ಗತವೈಭವಕ್ಕೆ ನಾಂದಿ : 1905 ರಲ್ಲಿ ಆದ ಆನೆಗೊಂದಿ ದರ್ಶನ ಅವರ ಮನದಲ್ಲಿ ಅನೇಕ ವಿಚಾರ ತರಂಗಗಳನ್ನು ಎಬ್ಬಿಸಿತ್ತು. ಜಿಜ್ಞಾಸೆಯ ಕಿರಣಗಳನ್ನು ಬೀರುತ್ತಿತ್ತು. ವಿಚಾರಗಳು ಜಲಪಾತಗಳಂತೆ ಭೋರ್ಗರೆದವು. ಇದೇ ಸಮಯದಲ್ಲಿ ಭಾರತದಾದ್ಯಂತ ಪ್ರಾಂರಭವಾಗಿದ್ದ ‘ವಂಗಭಂಗ’ ಚಳುವಳಿ ಆಲೂರರಲ್ಲಿ ಕರ್ನಾಟಕಭಂಗ ಚಳುವಳಿ ವಿಚಾರಗಳು ನಿಶ್ಚಲವಾಗಲು ಪ್ರೇರೇಪಿಸಿತು. ಆ ಸಂಧರ್ಭದಲ್ಲಿಯೇ ಕರ್ನಾಟಕತ್ವದ ಕಲ್ಪನೆ ಒಡಮೂಡಿತ್ತು. ಹೃದಯದಲ್ಲಿ ಒಡಮೂಡಿದ್ದ ಕರ್ನಾಟಕತ್ವದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮನ್ನು ತಾವು ಮಾನಸಿಕವಾಗಿ, ದೈಹಿಕವಾಗಿ ಅಣಿಗೊಳಿಸಿಕೊಂಡರು. ಕರ್ನಾಟಕದ ಬಗ್ಗೆ ಕನ್ನಡಿಗರಲ್ಲಿ ಆಳವಾದ ಅಭಿಮಾನದ ಅಭಾವವನ್ನು ಹೋಗಲಾಡಿಸಲು ಕರ್ನಾಟಕದ ನಿಜವೈಭವವÀÀನ್ನು ಕನ್ನಡಿಗರ ಮುಂದಿಡುವುದೇ ಮದ್ದು ಎಂಬ ಸಿದ್ದಾಂತಕ್ಕೆ ಬದ್ದರಾದರು.
ಅದಕ್ಕಾಗಿ ಸು 12 ವರ್ಷಗಳ ಕಾಲ ಕರ್ನಾಟಕದ ಐತಿಹಾಸ ಸ್ಥಳಗಳಾದ ಅಣ್ಣಿಗೇರಿ, ಲಕ್ಕುಂಡಿ, ಲಷ್ಕ್ಮೇಶ್ವರ, ಹಳೇಬೀಡು, ಬೇಲೂರು, ಕಾರ್ಲೆ, ಕಾನ್ಹೇರಿ, ಬಂಕಾಪುರ, ಬದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದವುಗಳನ್ನು ಎತ್ತಿನ ಬಂಡಿಯಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿದುದರ ಫಲವಾಗಿ 1917 ರಲ್ಲಿ “ಕರ್ನಾಟಕ ಗತವೈಭವ” ಎಂಬ ಉದ್ಗ್ರಂಥ ರೂಪುಗೊಂಡಿತು. ಇದು ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಮೂಡಿಸಿತಲ್ಲದೇ ಕರ್ನಾಟಕತ್ವದ ಕಿಚ್ಚನ್ನು ಹೊತ್ತಿಸಿ ತಾಯ್ನೆಲ ಮತ್ತು ತಾಯ್ನಾಡಿನ ರಕ್ಷಣೆಗಾಗಿ ಕನ್ನಡಿಗರನ್ನು ಬಡಿದೆಬ್ಬಿಸಿತು
ಕನಸಿನ ರಾಷ್ಟ್ರೀಯ ಶಾಲೆ : ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯವೆಂಬ ರಾಷ್ಟ್ರೀಯ ಶಾಲೆಯನ್ನು ಪ್ರಾರಂಬಿಸಿದರು. ಹುಬ್ಬಳ್ಳಿ, ನರಗುಂದ, ನವಲಗುಂದ, ಹಾನಗಲ್ಲು, ಅಗಡಿ, ಬಾಗಲಕೋಟೆ, ಬದಾಮಿ, ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಶಾಲೆಗಳನ್ನು ತೆರೆದರು. ಅಲ್ಲಿ ಕಲಿಯುವವರು ಸ್ವಾವಲಂಬಿಗಳಾಗಬೇಕೆಂದು ಬೆಂಕಿಕಡ್ಡಿ, ಸೀಸದಕಡ್ಡಿ, ಮಂಗಳೂರುಹೆಂಚು, ಸಕ್ಕರೆ ತಯಾರಿಕೆ, ಬಡಿಗತನ, ಮುದ್ರಣ ಮುಂತಾದ ಗುಡಿಕೈಗಾರಿಕೆಗಳನ್ನು ಕಲಿಸುತ್ತಿದ್ದರು. ನಂತರದ ದಿನಗಳಲ್ಲಿ ಕೈಗಾರಿಕೀಕರಣದ ಪೈಪೋಟಿ ಎದುರಿಸಲಾರದೇ ರಾಷ್ಟ್ರೀಯ ಶಾಲೆಗಳನ್ನು ಮುಚ್ಚುವ ಸ್ಥಿತಿ ತಲುಪಿತು. ಆದರೂ ಎದೆಗುಂದದೇ ಪುನಃ ವಕೀಲಿ ವೃತ್ತಿಗೆ ಇಳಿಯಬೇಕಾಯಿತು.
ಸಂಶೋಧನೆಗಳ ರೂವಾರಿ : ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ನಾಡಿನಾದ್ಯಂತ ಸಂಚರಿಸಿ, ಸಂಶೋಧನೆಗಳನ್ನು ಯಶಸ್ವಿಯಾಗಿ ನಡೆಸಿ ಸಂಶೋಧನಾ ಕ್ಷೇತ್ರಕ್ಕೆ ಹೊಸ ಸ್ಥಾನ ಮತ್ತು ಗೌರವ ದೊರೆಯುವಂತೆ ಮಾಡಿದರು. 1919 ರಲ್ಲಿ ಪುಣೆಯಲ್ಲಿ ಜರುಗಿದ ಅಂತರಾಷ್ಟ್ರೀಯ ಇತಿಹಾಸ ಸಮ್ಮೇಳನದಲ್ಲಿ ಕರ್ನಾಟಕ ಇತಿಹಾಸ ಮಂಡಳಿಯ ಪ್ರತಿನಿಧಿಯಾಗಿ ಭಾಗವಹಿಸಿ ಕರ್ನಾಟಕದ ಕಂಪನ್ನು ಎಲ್ಲೆಡೆ ಪಸರಿಸಿದರು.
1915 ರಿಂದ ಕರ್ನಾಟಕ ಏಕೀಕರಣ ಚಳುವಳಿ ಅತ್ಯಂತ ಬಿರುಸಿನಿಂದ ಸಾಗಿತು. ಆಲೂರರು ನಾರಾಯಣ ರಾಜ ಪುರೋಹಿತ, ನರಗುಂದದ ಭೀಮರಾಯರು, ನಾರಾಯಣ ದೇಶಪಾಂಡೆ ಮುಂತಾದವರು ಕೂಡಿಕೊಂಡು ಧಾರವಾಡ, ಬೆಳಗಾವಿಗಳಲ್ಲಿ ಹೋರಟ ನಡೆಸಿದರು. ಸಾರ್ವಜನಿಕ ಸಭೆಗಳನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿದ ಇವರುಗಳು ಕನ್ನಡಿಗರು ಕನ್ನಡದಲ್ಲಿಯೇ ಮಾತನಾಡಲು ಪ್ರೇರೇಪಿಸಿದರು. ರಾಜ್ಯದ ನಾನಾ ಭಾಗಗಳಲ್ಲಿ ಬೇರೆಬೇರೆ ನಾಯಕರ ನೇತೃತ್ವದಲ್ಲಿ ಚಳುವಳಿ ನಡೆಸುತ್ತಿದ್ದವರನ್ನೆಲ್ಲಾ ಒಂದೆಡೆ ಸೇರಿಸುವ ಉದ್ದೇಶದಿಂದ 1936 ರಲ್ಲಿ ಹಂಪಿಯಲ್ಲಿ ‘ವಿಜಯನಗರ ಶತಮಾನೋತ್ಸವ’ ವನ್ನು ಏರ್ಪಡಿಸಿದರು. ಈ ಉತ್ಸವದಲ್ಲಿ ಆಲೂರರು ಬೆನ್ನಲುವಾಗಿ ದುಡಿದರು.
ಸಾಹಿತ್ಯ ಸೇವೆ : ಕರ್ನಾಟಕ ವಿದ್ಯಾವರ್ದಕ ಸಂಘದ ಮುಖವಾಣಿಯಾಗಿದ್ದ ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ತಿಳಿಸಿ ಅದಕ್ಕಾಗಿ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಹ ಲೇಖನಗಳನ್ನು ಬರೆದು ಪ್ರಕಟಿಸಿದರು. ಧಾರವಾಡದಲ್ಲಿ ‘ಕರ್ನಾಟಕ ಗ್ರಂಥ ಪ್ರಸಾರಕ ಮಂಡಳಿ’ಯನ್ನು ಸ್ಥಾಪಿಸುವ ಮೂಲಕ ಕನ್ನಡ ಗ್ರಂಥಗಳ ಪ್ರಕಟಣೆ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡರು.
ಕನ್ನಡ ನಾಡು ನುಡಿಯ ಸೇವೆಗಾಗಿ ಒಂದು ಪ್ರತ್ಯೇಕವಾದ ಸಂಸ್ಥೆಯ ಅವಶ್ಯಕತೆಯನ್ನು ಮನಗಂಡ ಆಲೂರರು 1914 ರಲ್ಲಿ ಬೆಂಗಳೂರನಲ್ಲಿ ‘ಕನ್ನಡ ಗ್ರಂಥಕರ್ತರ ಸಮ್ಮೇಳನ’ ನಡೆಸುವ ಮೂಲಕ ತಮ್ಮ ಮನದಾಳದ ಅನಿಸಿಕೆಯನ್ನು ಹರಿಯಬಿಟ್ಟರು. ನಂಜುಡಯ್ಯನವರ ಸಹಾನುಭೂತಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಬಲದಿಂದ 1915 ರಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್’ನ್ನು ಸ್ಥಾಪಿಸಲು ಕಾರಣೀಭೂತರಾದರು.
ಇನ್ನು ಆಲೂರರ ಸಾಹಿತ್ಯ ಕೃಷಿಯ ಬಗ್ಗೆ ಹೇಡಿಯನ್ನು ಮೀರನನ್ನಾಗಿ, ನಿಸ್ತೇಜ ಅಂತರ್ಮುಖಿಯನ್ನು ಬಹಿರ್ಮುಖಿಯನ್ನಾಗಿ, ನಾಸ್ತಿಕನ್ನು ಆಸ್ತಿಕನನ್ನಾಗಿ ಮಾಡುವ ಶಕ್ತಿ ಅಡಗಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ. ಒಮ್ಮೆ ಬರೆದ ಲೇಖನವನ್ನು ಅವರೆಂದಿಗೂ ತಿದ್ದಿ ಬರೆದವರಲ್ಲ. ಅಂದರೆ ಲೇಖನಿಗೆ ಕೆಲಸ ಕೊಡುವ ಮೊದಲೇ ತಲೆಯಲ್ಲಿನ ವಿಚಾರಗಳನ್ನು ಮಂಥನ ಮಾಡಿ ಅಕ್ಷರಗಳ ರೂಪ ಕೊಡುತ್ತಿದ್ದರು. ಯಥೇಚ್ಛವಾಗಿ ಸಾಹಿತ್ಯ ರಚನೆ ಮಾಡುವ ಉದ್ದೇಶವಿರದ ಆಲೂರರು ಮಾದರಿಗಾಗಿ ಬರೆಯುವ ಉದ್ದೆಶ ಹೊಂದಿರುವುದು ಅವರ ಕೃತಿಗಳಿಂದ ತಿಳಿದು ಬರುತ್ತದೆ. ಒಂದೊಂದು ವಿಶೇಷ ಉದ್ದೇಶದಿಂದ ಒದೊಂದು ಕೃತಿ ಹೊರಬಂದಿವೆ.
ಕೃತಿಗಳು : ಶಿಕ್ಷಣ ಮೀಮಾಂಸೆ(1908); ಕರ್ನಾಟಕ ಗತವೈಭವ(1917); ಗೀತಾ ಅಹಸ್ಯ(1918); ಕರ್ನಾಟಕದ ವೀರ ರತ್ನಗಳು(1930); ರಾಷ್ಟ್ರೀಯತ್ವದ ಮೀಮಾಂಸೆ ; ನನ್ನ ಜೀವನ ಸ್ಮøತಿಗಳು (ಆತ್ಮ ಕಥನ)(1940); ಹೀಗೆ ಅನೇಕ ಕೃತಿಗಳನ್ನು ರಚಿಸಿದ ಆಲೂರರು ಹ¯ವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅಲ್ಲದೇ ಅನೇಕ ಕನ್ನಡ ಪತ್ರಿಕೆಗಳಿಗೆ ಸಂಪಾದಕರಾಗಿ, ಲೇಖಕರಾಗಿ ಸೇವೆ ಸಲ್ಲಿಸಿದ್ದಾರೆ.
ಬರೀ ಗ್ರಂಥ ರಚನೆ ಮತ್ತು ಸಂಪಾದನೆಯನ್ನಷ್ಟೇ ಮಾಡದ ಆಲೂರರು ಜನರಲ್ಲಿ ವಾಚನಾಬಿರುಚಿಯನ್ನೂ ಸಹ ಹುಟ್ಟಿಸಿದರು. ಧಾರವಾಡದ ಜನರಿಗೆ ಮಹತ್ವದ ಗ್ರಂಥಗಳು ಯಾವತ್ತೂ ದೊರೆಯಬೇಕೆಂಬ ಉದ್ದೇಶದಿಂದ ತಮ್ಮ ಸ್ವಂತ ಹಣ ಹೂಡಿ ‘ಭಾರತ ಪುಸ್ತಕಾಲಯ’ ಎಂಬ ಹೆಸರಿನ ಗ್ರಂಥಾಲಯ ಪ್ರಾರಂಭಿಸಿದರು. ಅನೇಕ ಮಿತ್ರರ ಹಾಗೂ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸು.2000 ದಿಂದ 3000 ಗ್ರಂಥಗಳನ್ನು ಸೇರಿಸಿದರು. ದೊಡ್ಡ ಓದುಗರ ಬಳಗವನೇ ಸೃಷ್ಟಿಸಿದರು.
ಹೀಗೆ ಕನ್ನಡ ನಾಡು - ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯ. ಇಂದು ಕರ್ನಾಟಕಕ್ಕೆ ಪ್ರತ್ಯೇಕವಾದ ಅಸ್ತಿತ್ವ ಇದೆ ಎಂದಾದರೆ ಅದು ಆಲೂರರ ಇಚ್ಚಾಶಕ್ತಿ ಮತ್ತು ಹೋರಾಟವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಮಹಾನ್ ಜೀವಿಗಳು ಹೆಚ್ಚಿದ ಕರ್ನಾಟಕತ್ವದ ಕಿಚ್ಚು ಇಂದು ಕಡಿಮೆಯಾಗತೊಡಗಿದೆ. ನಾಡು-ನುಡಿಗಾಗಿ ನಿಸ್ವಾರ್ಥದಿಂದ ದುಡಿಯುವ ಕೈಗಳು ಇಂದು ಇಲ್ಲವಾಗಿವೆ. ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಇಚ್ಚಾಶಕ್ತಿಯ ಕೊರೆತೆ ಎದ್ದು ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಇ.ಎಸ್.ನ ಪುಂಡಾಟಿಕೆಗಳು ಹೆಚ್ಚಾಗಿವೆ. ಅದನ್ನು ತಡೆಯಲು ಮತ್ತೊಬ್ಬ ಆಲೂರರು ಹುಟ್ಟಬೇಕಿದೆ.
‘ಟೀಚರ್’ ನವೆಂಬರ್ 2011
- ಆರ್.ಬಿ.ಗುರುಬಸವರಾಜ
ಮರ್ಯಾದೆಯ ಗೋಡೆ
ಮರ್ಯಾದೆಯ ಗೋಡೆ
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಒಂದು ಪ್ರತಿಷ್ಟಿತ ಗ್ರಾಮ ಹೊಳಗುಂದಿ. ಸುಮಾರು ಎರಡು ಸಾವಿರ ಕುಟುಂಬಗಳಿರುವ ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಈ ಗ್ರಾಮದಲ್ಲಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಗುಮಾಸ್ತನಿಂದ ಹಿಡಿದು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಯವರೆಗೂ ವಿವಿಧ ಇಲಾಖೆಗಳಲ್ಲಿ, ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡುವ ಮಂದಿ ಇದ್ದಾರೆ. ಆದರೆ ದುರದೃಷ್ಟವೆಂದರೆ ಈ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ಮೂರಂಕಿ ದಾಟುವುದಿಲ್ಲ.
ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಜನರ ಮನೋಭಾವ. ಇನ್ನೊಂದು ಪ್ರಮುಖ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳದ ಕೊರತೆ. ಮನೆಗಳು ಒಂದರ ಪಕ್ಕ ಒಂದರಂತೆ ಕಿಕ್ಕಿರಿದಿರುವುದರಿಂದ ಶೌಚಾಲಯ ನಿರ್ಮಿಸಲು ಜಾಗವೇ ಇಲ್ಲ. ಹೀಗಾಗಿ ಹೊಳಗುಂದಿಯ ಜನರು ಶೌಚಲಯಕ್ಕಾಗಿ ಬಯಲು ಪ್ರದೇಶವನ್ನೇ ಆಶ್ರಯಿಸಿದ್ದಾರೆ.
ಗ್ರಾಮದ ಪುರುಷರು ಮತ್ತು ಮಹಿಳೆಯರು ಒಂದೇ ಬಯಲಿಗೆ ಶೌಚಲಯಕ್ಕೆ ಹೋಗುವಂತಿಲ್ಲ. ಇದು ಅಲಿಖಿತ ನಿಯಮ. ಹೀಗಾಗಿ ಗ್ರಾಮದ ಮೂರು ಕಡೆ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಶೌಚಲಯದ ವ್ಯವಸ್ಥೆ ಎಂದರೆ ಪ್ರತ್ಯೇಕ ಕಟ್ಟಡ ಎಂದು ತಿಳಿದುಕೊಳ್ಳಬೇಡಿ. ನಾಲ್ಕು ಕಡೆ ಗೋಡೆಗಳನ್ನು ಎಬ್ಬಿಸಿ ಮಾಡಿರುವ ತೆರೆದ ಶೌಚಾಲಯ ವ್ಯವಸ್ಥೆ. ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮರ್ಯಾದೆ ಗೋಡೆ ಎಂದು ಕರೆಯುತ್ತಾರೆ.
ಪ್ರತೀ ದಿನ ನೂರಾರು ಜನರು ಈ ಮಾರ್ಯಾದೆ ಗೋಡೆಯ ಹಿಂದೆ ಶೌಚಕ್ಕೆ ಕೂರುವುದರಿಂದ ಇದೊಂದು ಗಬ್ಬುನಾತ ಬೀರುವ ಕೊಂಪೆ. ಹುಲುಸಾಗಿ ಬೆಳೆದ ಮುಳ್ಳು ಗಿಡಗಳು. ವಿಷ ಜಂತುಗಳ ಕಾಟ ಮತ್ತು ದುರ್ನಾತದ ನಡುವೆ ಮಹಿಳೆಯರು ಕಾಲಿಡಲು ಕಸರತ್ತು ಮಾಡುತ್ತಾ ಇಲ್ಲಿ ಪ್ರವೇಶ ಪಡೆಯಬೇಕು. ಈ ಮಾರ್ಯದೆ ಗೋಡೆಯ ಅಕ್ಕ ಪಕ್ಕದ ನಿವಾಸಿಗಳಿಗೆ ಬದುಕು ನಿತ್ಯ ನರಕ. ದುರ್ನಾತದ ಗಾಳಿಯನ್ನೇ ಉಸಿರಾಡುತ್ತಾ ಬದುಕಬೇಕು.
ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಲ್ಲಿನ ಜನರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ಸ್ಪಂದಿಸದೆ ಇದ್ದಾಗ ಸ್ರ್ತೀಶಕ್ತಿ ಗುಂಪುಗಳ ಮಹಿಳೆಯರೇ ಚಂದಾ ಎತ್ತಿ ಸ್ವಚ್ಚಗೊಳಿಸುವ ಕಾರ್ಯ ಮಾಡಿದ್ದಾರೆ. ಇಂತಹ ಒಂದು ಬಯಲು ಶೌಚಾಲಯ ಶಾಲೆಯ ಪಕ್ಕದಲ್ಲೇ ಇದೆ. ಇದರಿಂದ ಬರುವ ದುರ್ನಾತವನ್ನು ಸಹಿಸಿಕೊಂಡು ಮಕ್ಕಳು ಮತ್ತು ಶಿಕ್ಷಕರು ನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಸರಕಾರ ನೈರ್ಮಲ್ಯ ವ್ಯವಸ್ಥೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಂಪೂರ್ಣ ನೈರ್ಮಲ್ಯ ಆಂದೋಲನ ದೇಶದಾದ್ಯಂತ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಶೌಚಾಲಯಗಳು ಮಾತ್ರವಲ್ಲದೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಹಣ ಸಹಾಯ ನೀಡಲಾಗುತ್ತಿದೆ. ಆದರೆ ಹೊಳಗುಂದಿ ಪಂಚಾಯತಿಯಲ್ಲಿ ಇವ್ಯಾವುವೂ ಜಾರಿಗೆ ಬಂದಿಲ್ಲ. ಇದಕ್ಕೆ ಯಾರು ಹೊಣೆ? ಈ ಗ್ರಾಮದ ಮಹಿಳೆಯರು ಇನ್ನೆಷ್ಟು ದಿನ ಇಂತಹ ದುಸ್ಥಿತಿಯಲ್ಲಿ ಬದುಕಬೇಕು?
‘ಸಾಲು ಹೆಜ್ಜೆ’ ಫೆಬ್ರವರಿ 2009
ಆರ್.ಬಿ.ಜಿ. ಹೊಳ್ಗುಂದಿ
ತಲೆಗೆಲ್ಲಾ ಒಂದೇ ಮಂತ್ರ!
ತಲೆಗೆಲ್ಲಾ ಒಂದೇ ಮಂತ್ರ!
ರಾಮರತ್ನಗಿರಿ ಎಂಬ ಪುಟ್ಟ ಊರು. ಅಲ್ಲಿ ಸೋಮಶೇಖರನೆಂಬ ಪಂಡಿತ ಹತ್ತಾರು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದ. ಸುತ್ತಲ ಗ್ರಾಮದ ಜನರು ತಮ್ಮ ಯಾವುದೇ ಕಾರ್ಯ ನೆರೆವೇರಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ವಿಧವೆಯರು ತಮ್ಮ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಆತನ ಬಳಿ ಬರುತ್ತಿದ್ದರು. ಒಂದು ದಿನ ಒಬ್ಬ ವಿಧವೆ ತನ್ನ ಕೇಶಮುಂಡನ ಮಾಡಿಸಲು ಮುಹೂರ್ತ ನಿಗದಿಗಾಗಿ ಕೇಳಿದಾಗ ಪಂಡಿತರು ‘ಬರುವ ಭಾನುವಾರ’ ಎಂದು ಹೇಳಿದರು. ಆ ಮಹಿಳೆ ಹೊರಟು ಹೋದಳು. ನಂತರ ಇನ್ನೊಬ್ಬ ಮಹಿಳೆ ಮೈನೆರೆದ ತನ್ನ ಮಗಳ ಮೈನೆರೆದ ತನ್ನ ಮಗಳ ತಲೆಗೆ ನೀರು ಹಾಕಲು ಮುಹೂರ್ತ ಕೇಳಿದಳು. ಆಗಲೂ ಪಂಡಿದರು ‘ಬರುವ ಭಾನುವಾರ’ ಎಂದು ಹೇಳಿದರು. ಆಗ ಮಹಿಳೆ ‘ಇದೇನು ಪಂಡಿತರೇ, ಕೇಶಮುಂಡನೆಗೂ ಅದೇ ದಿನ, ತಲೆಗೆ ನೀರು ಹಾಕಲು ಅದೇ ದಿನವೇ?’ ಎಂದು ಕೇಳಲು ಪಂಡಿತರು “ತಲೆಗೆಲ್ಲಾ ಒಂದೇ ಮಂತ್ರ!” ಎಂದರು.
ಇಲ್ಲಿ ಈ ಕಥೆಯ ಔಚಿತ್ಯವೇನೆಂದರೆ ನಮ್ಮ ತರಗತಿ ಕೋಣೆಗಳಲ್ಲಿ ನಡೆಯುತ್ತಿರುವುದು ಇದೇ ಅಲ್ಲವೇ? ತರಗತಿಯಲ್ಲಿನ ಎಲ್ಲಾ ಮಕ್ಕಳಿಗೂ ಅದೇ ಪಾಠ, ಅದೇ ವಿಧಾನ, ಅದೇ ಚಟುವಟಿಕೆಗಳು. ಒಂದು ತರಗತಿಯೆಂದರೆ ಅದೊಂದು ‘ಪುಟ್ಟ ಪ್ರಪಂಚ’ ಇದ್ದಂತೆ ಎಂದು ನಾವು ಹೇಳುತ್ತೇವೆ. ಆ ಪ್ರಪಂಚದೊಳಗೆ ವಿವಿಧ ಕೌಟುಂಬಿಕ, ಸಾಮಾಜಿ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ ಹಿನ್ನಲೆಯುಳ್ಳ ಮಕ್ಕಳು ಇರುತ್ತಾರೆಂದು ನಾವು ಬಲ್ಲೆವು. ಅಲ್ಲದೇ ವಿವಿಧ ವಯೋಮಾನದ, ಬೌದ್ಧಿಕ ಹಾಗೂ ಮಾನಸಿಕ ಸ್ತರದ ಮಕ್ಕಳೂ ಅಲ್ಲಿರುತ್ತಾರೆ. ನಿಧಾನ, ವೇಗ ಮತ್ತು ಸಾಮಾನ್ಯ ಕಲಿಕೆಯ ಮಕ್ಕಳೂ ಅಲ್ಲಿರುತ್ತಾರೆ. ಅವರೆಲ್ಲರಿಗೂ ನಾವೂ ಏಕಪ್ರಕಾರದ ಬೋಧನೆ ಮಾಡುತ್ತೇವಲ್ಲವೇ?
ನಾವು ಮಾಡುವ ಬೋಧನೆ ಕೇವಲ ಯಾವುದಾದರೊಂದು ಗುಂಪಿನ ಮಕ್ಕಳಿಗೆ ಮಾತ್ರ ರುಚಿಸುತ್ತದೆ. ಇನ್ನುಳಿದ ಗುಂಪುಗಳ ಮಕ್ಕಳಿಗೆ ಅದೊಂದು ನೀರಸ ತರಗತಿಯೆನಿಸುತ್ತದೆ. ಬೋಧನೆ ನೀರಸವೆಂಬುದು ಮಕ್ಕಳಿಗೆ ಅರಿವಾದೊಡನೆ ಅವರು ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸಲು ತೊಡಗುತ್ತಾರೆ (ಅಶಿಸ್ತಿ ಎಂದರೆ ತರಗತಿಯಲ್ಲಿನ ಬೋಧನೆ, ಕಲಿಕೆಯ ವಾತಾವರಣವನ್ನು ಹಾಳು ಮಾಡುವುದು). ಆಗ ತರಗತಿ ನಿಭಾಯಿಸುವ ಶಿಕ್ಷಕರಿಗೆ ಕೋಪದ ಪಿತ್ತನೆತ್ತಿಗೇರಿ, ಅಶಿಸ್ತಿನಿಂದ ವರ್ತಿಸಿದ ಮಕ್ಕಳು ಶಿಕ್ಷೆಗೊಳಗಾಗುತ್ತಾರೆ. ನಾವು ಮಕ್ಕಳ ಅಶಿಸ್ತಿಗೆ ಕಾರಣಗಳನ್ನು ಕಂಡು ಹಿಡಿಯದೇ ಅಂತಹ ಮಕ್ಕಳಿಗೆ ಶಿಕ್ಷೆ ವಿಧಿಸುತ್ತೇವೆ. ಇಲ್ಲಿ ನಾವು ಅನುಸರಿಸುತ್ತಿರುವುದು ಮೇಲಿನ ಕಥೆಯ ತಂತ್ರವಲ್ಲವೇ? ಈ ರೀತಿಯ ಸನ್ನಿವೇಶಗಳಲ್ಲಿ ವಾಸ್ತವವಾಗಿ ತಪ್ಪು ಯಾರದು? ಎಂಬುದೇ ಚರ್ಚಾಸ್ಪದ ಸಂಗತಿ.
ಮಕ್ಕಳದೇ ತಪ್ಪು ಎನ್ನುವುದಾದರೆ ‘ಮಗು ಕೇಂದ್ರಿತ ಶಿಕ್ಷಣ’ದ ಪರಿಕಲ್ಪನೆಗೆ ಅರ್ಥವೆಲ್ಲಿಯದು? ಶಿಕ್ಷಕರದೇ ತಪ್ಪು ಎನ್ನುವುದಾದರೆ ಶಿಕ್ಷಕರಿಗಿರುವ ಮಾನಸಿಕ ಒತ್ತಡಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಭಾರತ ಸಂವಿಧಾನದ 21 (ಎ) ವಿಧಿಯ ಪ್ರಕಾರ ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಅಲ್ಲದೇ ಏಪ್ರಿಲ್ 2010ರಿಂದ “ಶಿಕ್ಷಣ ಕಡ್ಡಾಯ ಹಕ್ಕು” ಎಂದು ಜಾರಿಯಲ್ಲಿದೆ. ಇದರನ್ವಯ ಶಿಕ್ಷಣವೆಂಬುದು ಸಂಪೂರ್ಣವಾಗಿ ‘ಮಗು ಕೇಂದ್ರಿತವಾಗಿರಬೇಕು’. ಪಠ್ಯಕ್ರಮ, ಪಠ್ಯವಸ್ತು, ಬೋಧನಾ ವಿಧಾನ, ಮೂಲಭೂತ ಸೌಲಭ್ಯಗಳು, ಇವೆಲ್ಲವೂ ಮಗು ಕೇಂದ್ರಿತವಾಗಿರಬೇಕು. ಅಲ್ಲದೇ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ವಿಧಿಸುವಂತಿಲ್ಲ ಎಂಬುದೂ ಸಹ ಕಡ್ಡಾಯ ಶಿಕ್ಷಣ ಹಕ್ಕಿನ ಕಾಯ್ದೆಯಲ್ಲಿದೆ.
ಹಾಗಾದರೆ ‘ಶಿಸ್ತು’ ಎಂದರೆ ನಾವೇನು ಭಾವಿಸಿಕೊಂಡಿದ್ದೇವೆ? ಎಂಬ ಪ್ರಶ್ನೆ ಮೂಡುತ್ತದೆ. ಅಂದವಾದ ಸಮವಸ್ತ್ರ, ಬೂಟು, ಟೈಗಳು ಶಿಸ್ತುನ್ನು ಪ್ರತಿನಿಧಿಸುತ್ತವೆಯೋ? ಅಥವಾ ಮಗುವಿನ ಆಂತರಿಕ ಮತ್ತು ಬಾಹ್ಯ ಚಟುವಟಿಕೆಗಳು ಶಿಸ್ತನ್ನು ಪ್ರತಿನಿಧಿಸುತ್ತವೆಯೋ? ಎಂಬುದೇ ಗೊಂದಲದ ಗೂಡಾಗಿದೆ.
ಇಂದು ನಾವು ಶಿಸ್ತಿನ ಹೆಸರಿನಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುತ್ತಿದ್ದೇವೆ. ಅದು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. “ಎಲ್ಲಾ ಮಕ್ಕಳೂ ಕಡ್ಡಾಯವಾಗಿ ಬೂಟು, ಟೈಗಳನ್ನು ಹಾಕಿಕೊಂಡು ಬರಬೇಕು. ಶಾಲೆಯಲ್ಲಿ ಅವುಗಳನ್ನು ಬಿಚ್ಚಬಾರದು” ಎಂಬಂತಹ ಅಘೋಷಿತ ಕಾಯ್ದೆಗಳು ಶಾಲೆಗಳಲ್ಲಿ ಜಾರಿಯಲ್ಲಿರುತ್ತದೆ. ಇದು ಎಷ್ಟೊಂದು ಸಮಂಜಸ. ಬೆಳಗ್ಗೆಯಿಂದ ಕುತ್ತಿಗೆಗೆ ಉರುಳಿನಂತೆ ಕಟ್ಟಿದ ಟೈ, ಗಾಳಿಯಾಡದಂತೆ ಹಾಕಿದ ಬೂಟುಗಳು ಮಗುವಿಗೆ ಹಿಂಸೆಯಲ್ಲವೇ? ಇದು ಶಿಸ್ತಿನ ಹೆಸರಿನ ಶಿಕ್ಷೆಯಲ್ಲವೇ?
ತರಗತಿಯಲ್ಲಿ ಮಕ್ಕಳು ಅಶಿಸ್ತಿನಿಂದ ವರ್ತಿಸುತ್ತಾರೆ ಎಂದ ಕಾರಣಕ್ಕಾಗಿ ಅವರಿಗೆ ದೈಹಿಕ ಅಥವಾ ಮಾನಸಿಕ ಶಿಕ್ಷೆ ವಿಧಿಸುತ್ತೇವೆ ಎಂದಾದರೂ ನಾವೂ ಮಕ್ಕಳ ಈ ರೀತಿಯ ವರ್ತನೆಗಳಿಗೆ ಕಾರಣಗಳೇನೆಂದು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವಾ? ಅಥವಾ ಮಕ್ಕಳ ಆ ವರ್ತನೆಗಳಿಗೆ ಶಿಕ್ಷೆ ಹೊರತುಪಡಿಸಿ ಏನಾದರೂ ಪರ್ಯಾಯ ತಂತ್ರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆಯೋ? ಇಲ್ಲ! ಏಕೆಂದರೆ ನಾವಿನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇವೆ. ‘ಶಿಕ್ಷೆ’ ವಿಧಿಸುವಾತನೇ ‘ಶಿಕ್ಷಕ’ ಎಂದು ಬಹುತೇಕರು ಭಾವಿಸಿಕೊಂಡಿದ್ದೇವೆ. ಆದರೆ ಈ ಭಾವನೆ ತಪ್ಪು ಎಂಬುದು ಅನೇಕರಿಗೆ ತಿಳಿದಿಲ್ಲ. ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ದಲ್ಲಿ ಬರುವ ಕೆಳಗಿನ ಶ್ಲೋಕವೊಂದನ್ನು ಬಹುತೇಕರು ಸರಿಯಾಗಿ ಅರ್ಥೈಸಿಕೊಂಡಿಲ್ಲ.
ಶಿ(ಶ್ಲಿ)ಕ್ಷಾಃ ಕ್ರಿಯಾಃ ಕಸ್ಯಚಿದಾತ್ಮ ಸಂಸ್ಥಾಃ
ಸಂಕ್ರಾಂತಿ ರನ್ಯಸ್ಯ ವಿಶೇಷಯುಕ್ತಾ
ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ
ಧುರೀ ಪ್ರತಿಷ್ಠಾಪಯೀತವ್ಯ ವವ
ಅಂದರೆ ವಿಶಿಷ್ಟಶಕ್ತಿ ಇದ್ದವರು ಮಾತ್ರ ವಿಶಿಷ್ಟ ಕ್ರಿಯೆಗಳನ್ನು ಇತರರಿಗೆ ದಾಟಿಸಬಲ್ಲರು. ಯಾರಲ್ಲಿ (ವಿಶಿಷ್ಟ ಶಕ್ತಿ ಹಾಗೂ ವಿಶಿಷ್ಟ ಕ್ರಿಯೆ) ಇರುತ್ತವೆಯೋ ಅವರು ಮಾತ್ರ ಪ್ರತಿಷ್ಟಿತ ಶಿಕ್ಷಕರಾಗಬಲ್ಲರು. ವಿಶಿಷ್ಟ ಕ್ರಿಯೆಗಳನ್ನು ತನ್ನಲ್ಲೇ ಇಟ್ಟುಕೊಳ್ಳುವವನು ಶಿಕ್ಷಕನೆನಿಸುತ್ತಾನೆ ಎಂಬುದೇ ಇದರರ್ಥ. ಇನ್ನೊಬ್ಬರಿಗೆ ದಾಟಿಸುವುದು ಎಂದರೆ ಮಕ್ಕಳಿಗೆ ಕಲಿಸುವುದು ಎಂದರ್ಥ. ಕಲಿಸುವುದು ಎಂದರೆ ಯಾವೂದಾದರೂ ಮಾರ್ಗದಿಂದಲ್ಲ. ಅದು ಮಗು ಒಪ್ಪಿತ ರೀತಿಯಲ್ಲಿ ಎಂದು ಅರ್ಥೈಸಿಕೊಳ್ಳಬೇಕು. ಸಾಮಾನ್ಯವಾಗಿ ಮಕ್ಕಳು ಶಿಕ್ಷೆಯನ್ನು ಹೊರತುಪಡಿಸಿ ಯಾವುದೇ ಮಾರ್ಗದಲ್ಲಾದರೂ ಸರಿಯೇ ಅದನ್ನು ಮಗುವಿಗೆ ದಾಟಿಸುವವನೇ ಪರಿಪೂರ್ಣ ಅಥವಾ ಶ್ರೇಷ್ಠ ಶಿಕ್ಷಕನೆನಿಸುತ್ತಾನೆ.
ಮಗುವಿನ ಮನಸ್ಸು ಹೂವಿನಂತೆ ಎಂದು ಹೇಳುವ ನಾವು ಆ ಹೂವು ಬಾಡದ ರೀತಿಯಲ್ಲಿ, ಅದರ ಪರಿಮಳವನ್ನು ಎಲ್ಲರೂ ಆಘ್ರಾಣಿಸುವಂತೆ ಮಾಡಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಇದು ಬಹು ಪ್ರಯಾಸದ ಕೆಲಸವಾದರೂ ಸಾಧಿಸಿ ತೋರಿಸುವ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ಇಲಾಖೆಯೂ ಸನ್ನದ್ಧವಾಗಬೇಕಾದ ಅನಿವಾರ್ಯತೆ ಇದೆ.
ಪ್ರತಿವರ್ಷ ಶಿಕ್ಷಕರಿಗೆ 10-20 ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಬಹುತೇಕ ತರಬೇತಿಗಳು ಬೋಧನಾ ವಿಧಾನಗಳಿಗೆ ಸಂಬಂಧಿಸಿರುತ್ತವೆ. ಅದರ ಬದಲಾಗಿ ಮಕ್ಕಳ ಮನಃಶಾಸ್ತ್ರ ಅರಿಯುವಂತಹ, ಅದಕ್ಕೆ ತಕ್ಕದಾಗಿ ಸಿದ್ಧರಾಗುವಂತಹ ತರಬೇತಿ ನೀಡಿದರೆ ಒಳಿತು. ಏಕೆಂದರೆ ಸೇವಾಪೂರ್ವದಲ್ಲಿ ಅಭ್ಯಸಿಸಿದ ಮನಃಶಾಸ್ತ್ರ ಬಹುತೇಕ ಅಳಿಸಿ ಹೋಗಿರುತ್ತದೆ. ಮಕ್ಕಳ ಮನಃಶಾಸ್ತ್ರ ಅರಿಯುವ, ಅದಕ್ಕೆ ತಕ್ಕದಾಗಿ ವರ್ತಿಸುವಂತಹ, ಮಾನಸಿಕ ಸದೃಡತೆಯನ್ನು ಗಟ್ಟಿಗೊಳಿಸುವಂತಹ ತರಬೇತಿಗಳನ್ನು ನೀಡಿದಾಗ ಮಾತ್ರ ಶಿಕ್ಷೆ ಮುಕ್ತ ಶಿಸ್ತಿನ ಶಿಕ್ಷಣ ನೀಡ ಬಹುದಲ್ಲವೇ?
ಟೀಚರ್ ಸೆಪ್ಟಂಬರ್ 2010
- ಆರ್.ಬಿ.ಗುರುಬಸವರಾಜ
Subscribe to:
Posts (Atom)







