April 19, 2014

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ

ಆಡಿ,,, ಬಾ,,,, ನನ ಕಂದ

ಅಂಗಾಲ ತೊಳೆದೇನಾ

ತೆಂಗಿನ ಕಾಯಿ ತಿಳಿನೀರ.../ ತೆಂಗಿನ ಕಾಯಿ ತಿಳಿನೀರ

ತಕ್ಕೊಂಡು ಬಂಗಾರದ ಮುಖವ ತೊಳೆದೇನ.......

ಎಂಬ ಹಾಡನ್ನು ನಾವು ಚಿಕ್ಕವರಾಗಿದ್ದಾಗ ನಮ್ಮ ತಮ್ಮ-ತಂಗಿಯರನ್ನು ಮಲಗಿಸುವಾಗ ಕೇಳಿಸಿಕೊಂಡ ನೆನಪು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ನಮ್ಮ ತಾಯಂದಿರಿಗೆ ಮಕ್ಕಳನ್ನು ಜೋಗುಳ ಹಾಡಿ ತೂಗಿ ಮಲಗಿಸಲು ಪುರುಸೊತ್ತೆಲ್ಲಿದೆ? ಅಂದಿನ ದಿನಗಳ ಮಧುರ ನೆನಪುಗಳೆಲ್ಲವೂ ‘ಕಾಲಾಯ ತಸೈನಮಃ’ ಎಂಬಂತೆ ಕಾಲಗರ್ಭದಲ್ಲಿ ಹುದುಗಿ ಹೋಗಿವೆ.

ಅಂದಿನ ತಂದೆ ತಾಯಿಗಳು ಮಕ್ಕಳ ಲಾಲನೆ ಪಾಲನೆ ಆರೋಗ್ಯದ ಬಗೆಗಿನ ಕಾಳಜಿ, ಮಕ್ಕಳ ಇಷ್ಟಾರ್ಥಗಳನ್ನು ತಿಳಿದುಕೊಳ್ಳುವ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ರೀತಿ ಮಕ್ಕಳಿಗೆ ಅಪ್ಯಾಯಮಾನವೆನಿಸುತ್ತಿತ್ತು. ಆದರೆ ಇಂದಿನ ಜಂಜಡದ ಜೀವನದಲ್ಲಿ ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ತಂದೆ ತಾಯಿಗಳ ಸಂಖ್ಯೆ ತೀರಾ ಇಳಿಮುಖವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವುದಿರಲಿ ಅವರನ್ನು ಮಾತನಾಡಿಸದಷ್ಟೂ, ಅವರ ಇಷ್ಟ-ಕಷ್ಟಗಳನ್ನು ಆಲಿಸಲಾರದಷ್ಟೂ ವ್ಯವಧಾನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ.

ಪತಿ-ಪತ್ನಿಯರಿಬ್ಬರೂ ದುಡಿಮೆಯಲ್ಲಿ ತೊಡಗಿದ್ದರಂತೂ ಅವರ ಮಕ್ಕಳಿಗೆ ಆಯಾಳೆ ತಂದೆ-ತಾಯಿ, ಗುರು ಎಲ್ಲವೂ ಆಗಿರುತ್ತಾಳೆ. ಅಂತಹ ಮಕ್ಕಳಿಗೆ ಎಲ್ಲಾ ಸೌಲಭ್ಯಗಳು ಇರುತ್ತವಾದರೂ ಅವರು ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿ, ವಿವೇಚನಾ ರಹಿತ ಜೀವನಕ್ಕೆ ಹೊಂದಿಕೊಂಡು ಲೋಕ ಕಂಠಕರಾಗುವ ಸಾಧ್ಯತೆ ಹೆಚ್ಚು. ಕೇವಲ ಹಣ ಗಳಿಕೆಯನ್ನೇ ಪ್ರಧಾನ ಗುರಿಯಾಗಿಸಿಕೊಂಡ ನಾವಿಂದು ನಮ್ಮ ಮುಖ್ಯ ಆಸ್ತಿಗಳಾದ ಮಕ್ಕಳನ್ನು ಕಡೆಗಣಿಸಿ ಅವರ ಜೀವನವನ್ನು ನರಕ ಕೂಪವಾಗಿಸುತ್ತಿದೇವೆ.

ನಗರ ಜೀವನದಲ್ಲಿ ದುಡಿಯುವ ತಂದೆ-ತಾಯಿಗಳ ಮಕ್ಕಳ ಕಥೆ ಒಂದು ರೀತಿಯಾದರೆ ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ತಂದೆ-ತಾಯಂದಿರ ಮಕ್ಕಳ ವ್ಯಥೆ ಇನ್ನೊಂದು ರೀತಿಯದು. ತಮ್ಮ ಮಕ್ಕಳ ಬಗ್ಗೆ ಕಾಳಜಿಯೇ ಇಲ್ಲದ, ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಮಕ್ಕಳನ್ನೇ ಬಲಿಪಶು ಮಾಡುತ್ತಿರುವ ಪೋಷಕರಿಗೇನೂ ನಮ್ಮಲ್ಲಿ ಬರವಿಲ್ಲ. ಅವರು ತಮ್ಮ ಮಕ್ಕಳ ಕನಿಷ್ಠ ಅವಶ್ಯಕತೆಗಳಾದ ಅನ್ನ, ಅರಿವೆ, ಆರೋಗ್ಯ ಮುಂತಾದವುಗಳನ್ನು ವ್ಯವಸ್ಥೆಗೊಳಿಸಲಾರದ ಸ್ಥಿತಿಯಲ್ಲಿರುವಾಗ, ಮಕ್ಕಳ ಶಿಕ್ಷಣದ ಬಗ್ಗೆ, ಅವರ ಬೇಕು ಬೇಡಗಳ ಬಗ್ಗೆ, ಚಿಂತಿಸಲಾರದಷ್ಟು ಹೀನ ಸ್ಥಿತಿಯಲ್ಲಿದ್ದಾರೆ. ಇಂತಹ ಮಕ್ಕಳ ಸ್ಥಿತಿಗತಿ ನೋಡಿದರೆ ‘ಕೊಟಗಾನಹಳ್ಳಿ ರಾಮಯ್ಯ’ನವರು ಮಕ್ಕಳನ್ನು ಕುರಿತು ಬರೆದ

ಹಳ್ಳಿಗಾಡ ಹಸುಗೂಸೆ......

ಹಸು ಕಾಯೋ ಧೀರ ಬಾಲನೇ

ಶಾಲೆ ಮರೆತು ದಿನವೆಷ್ಟಾಯಿತೋ

ಓ ಹಾಲಿಗೆನ್ನೆಯಾ ಜೀತಗಾರ

ಜೀತ ಸೇರಿ ದಿನವೆಷ್ಟಾಯಿತೋ// ಎಂಬ ಕವನದ ಸಾಲುಗಳು ನೆನಪಾಗುತ್ತವೆ. ಹೌದು, ನಿಜಕ್ಕೂ ಗ್ರಾಮೀಣ ಪರಿಸರದಲ್ಲಿರುವ ಎಷ್ಟೋ ಮಕ್ಕಳ ಪರಿಸ್ಥಿತಿ ಇನ್ನೂ ಗಂಭಿರವಾಗಿಯೇ ಇದೆ. ಇಂತಹ ಮಕ್ಕಳ ಪರಿಸ್ಥಿತಿ ನಿವಾರಿಸುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಈ ಯೋಜನೆಗಳು ಯಾರನ್ನು ತಲುಪಬೇಕಾಗಿತ್ತೋ, ಹೇಗೆ ತಲುಪಬೇಕಾಗಿತ್ತೋ ಹಾಗೆ ಅವರನ್ನು ತಲುಪುತ್ತಿಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಪ್ರಗತಿಯಾಗಿದೆಯೇ ಹೊರತು ನಿಜ ಸ್ಥಿತಿಯಲ್ಲಿ ಅಲ್ಲ.

ಕೆಲವು ಬುದ್ದಿ ಜೀವಿಗಳು, ವಿಚಾರ ವಾದಿಗಳು, ಪ್ರಜ್ಞಾವಂತರು, ಸಮಾಜ ಸೇವಕರು, ಸಂಘಟನೆಗಳು ನವೆಂಬರ್ ಬಂತೆಂದರೆ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಹರಿಯಬಿಡುತ್ತಾರೆ. ಒಂದು ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ, ಅದರ ರಕ್ಷಣೆ ಕುರಿತಾದದ್ದು, ಇನ್ನೊಂದು ಮಕ್ಕಳನ್ನು ಕುರಿತಾದದ್ದು. ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಕೆಲವು ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಿ, ನಾಲ್ಕಾರು ಮೆಚ್ಚುಗೆಯ ಮಾತುಗಳನ್ನಾಡಿ ಪುನಃ ಮತ್ತದೇ ಯಾಂತ್ರಿಕ ಜೀವನಕ್ಕೆ ಒಗ್ಗಿ ಕೊಳ್ಳುತ್ತೇವೆ. ಇಂದಿಗೂ ಅನೇಕ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸರಿಯಾದ ಕಲ್ಪನೆ ಇಲ್ಲ ಅಲ್ಲದೇ ಹಕ್ಕುಗಳನ್ನು ಅನುಭವಿಸಲು ಸರಿಯಾದ ಅವಕಾಶಗಳು ಇಲ್ಲವೆಂದೇ ಹೇಳಬಹುದು.

ಯಾರಾದರೂ ಪರಿಚಯಸ್ತರೋ, ಸಂಬಂಧಿಗಳೋ ಸ್ನೇಹಿತರೋ ಸಿಕ್ಕಾಗ ಕುಶಲ ಸಮಾಚಾರದ ಜೊತೆಗೆ ಮಕ್ಕಳ ಕುಶಲ ಸಮಾಚಾರ ವಿಚಾರಿಸುವುದು ವಾಡಿಕೆ. ಇತ್ತೀಚಿಗೆ ಸರ್ಕಾರಿ ನೌಕರಿಯಲ್ಲಿರುವವರು ಭೇಟಿಯಾದರಂತೂ ‘ನಿಮ್ಮ ಮಕ್ಕಳ ಹೆಸರಿನಲ್ಲಿ ಎಷ್ಟೆಷ್ಟು ಹಣ ಇಟ್ಟಿದ್ದೀರಿ, ಅವರಿಗಾಗಿ ಏನೇನು ಆಸ್ತಿ ಮಾಡಿದ್ದೀರಿ’ ಎಂದು ಕೇಳುವವರೇ ಹೆಚ್ಚು. ಮಕ್ಕಳಿಗಾಗಿ ಆಸ್ತಿ ಮಾಡಿ ಎಂದು ಎಲ್ಲರೂ ಹೇಳುತ್ತಾರೆಯೇ ಹೊರತು ‘ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ’ ಎಂದು ಹೇಳುವವರೇ ಇಲ್ಲದಂತಾಗಿದೆ.

ಮಕ್ಕಳ ಬಗ್ಗೆ ನಿಜವಾದ ಕಾಳಜಿ ಇರುವ ತಂದೆ-ತಾಯಿಗಳು ಮೊದಲು ಆ ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳನ್ನು ಅನುಭವಿಸಲು ಮುಕ್ತ ಸ್ವಾತಂತ್ರ ಕೊಟ್ಟಾಗಲೇ ಮಕ್ಕಳು ಕುಟುಂಬದ ಹಾಗೂ ದೇಶದ ಆಸ್ತಿಗಳಾಗಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಪ್ರಚಾರಗೊಳಿಸುವ ಹಾಗೂ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ಬಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ‘ಮಕ್ಕಳ ಹಕ್ಕುಗಳ ಅಭಿಯಾನ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ. ಪ್ರತಿ ನೆವೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಹಂತದಲ್ಲಿ ‘ಮಕ್ಕಳ ಗ್ರಾಮಸಭೆ’ ನಡೆಸುವ ಮೂಲಕ ಈ ಅಭಿಯಾನ ಆಚರಿಸಲಾಗುತ್ತದೆ. ಮಕ್ಕಳ ಕೇವಲ ಇಂತಹ ಕಾರ್ಯಕ್ರಗಳಲ್ಲಿ ಭಾಗವಹಿಸಿದ್ದಾಗ ಮಾತ್ರ ತಮ್ಮ ಹಕ್ಕುಗಳನ್ನು ಅನುಭವಿಸದೇ ದಿನನಿತ್ಯವೂ ಅನುಭವಿಸುವಂತಾಗಲಿ ಎಂಬುದೇ ಮಕ್ಕಳ ಪ್ರೇಮಿಗಳ ಆಶಯವಾಗಿದೆ. ಈ ಆಶಯ ಈಡೇರಿಸಲು ಎಲ್ಲರೂ ಕೈ ಕೈ ಜೋಡಿಸಿ ಹೆಗಲಿಗೆ ಹೆಗಲು ಹಚ್ಚಿ, ಮನಸ್ಸು ಕೊಟ್ಟು ಶ್ರಮಿಸೋಣ ಬನ್ನಿ!.


‘ಟೀಚರ್’ ನವೆಂಬರ್ 2006

ಆರ್.ಬಿ.ಗುರುಬಸವರಾಜ

ಜವಾಬ್ದಾರಿಯುತರೇ ಮೈಮರೆತರೆ...

ಜವಾಬ್ದಾರಿಯುತರೇ ಮೈಮರೆತರೆ...
ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್ ಕಲಿಕೆ ಕುರಿತು ರಾಜ್ಯದಾದ್ಯಂತ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇಂಗ್ಲೀಷ್ ಕಲಿಕೆಯ ಅಗತ್ಯತೆಯನ್ನು ಕುರಿತು ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಬೇಕು ಎಂದು ಒಂದು ವರ್ಗ ವಾದಿಸಿದರೆ, ಕನ್ನಡ ಪರ ಹೋರಾಟ ನಡೆಸುತ್ತಿರುವ ಇನ್ನೊಂದು ಗುಂಪು  ಇಂಗ್ಲೀಷ್ ಕಲಿಕೆಯನ್ನು ವಿರೋಧಿಸುತ್ತದೆ. 
ಪ್ರಾಥಮಿಕ ಹಂತದಿಂದ ಇಂಗ್ಲೀಷ್ ಕಲಿಕೆಯ ಪರ ಮತ್ತು ವಿರೋಧ ಕುರಿತು ಚರ್ಚಿಸುವ ಮೊದಲು ಇಂಗ್ಲೀಷ್ ಕಲಿಕೆಯನ್ನು ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ, ಜಾಗತೀಕರಣ ಮತ್ತು ಖಾಸಗೀಕರಣದ ಹಿನ್ನಲೆಯಲ್ಲಿ ನೋಡುವ ಅಗತ್ಯವಿದೆ.
ಸಾಮಾಜಿಕ ಸಂರಚನೆಯ ಹಿನ್ನಲೆಯಲ್ಲಿ ನೋಡಿದಾಗ ಸಮಾಜದ ಕೆಳಸ್ತರದಲ್ಲಿರುವ ಬಡವರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇಂಗ್ಲೀಷ್ ಕಲಿಕೆಯ ಪರ ವಾದಿಸುತ್ತಿವೆ. ಏಕೆಂದರೆ ಸಮಾಜದ ಉನ್ನತ ವರ್ಗಗಳ, ಶ್ರೀಮಂತ ಮಕ್ಕಳಂತೆ ತಮ್ಮ ಮಕ್ಕಳೂ ಸಹ ಕಾನ್ವೆಂಟ್ ಶಾಲೆಗೆ ಹೋಗಬೇಕು, ಯೂನಿಫಾರಂ, ಬೂಟು ಟೈ ಹಾಕಿಕೊಂಡು ಟಾಕುಟೀಕಾಗಿರಬೇಕು ಮತ್ತು ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದಿಂದ ತಮ್ಮ ಸಂಕಷ್ಟಗಳು ಪರಿಹಾರವಾಗಬೇಕು ಎಂದು ಹಂಬಲಿಸುತ್ತಿದ್ದಾರೆ. 
ಸಮಾಜದ ಅನೇಕ ವರ್ಗಗಳ ಜನರು ಇಂಗ್ಲೀಷ್ ಬೇಕು ಎಂದು ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಲು  ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳೇ ಕಾರಣ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗೀಕರಣದ ಅಟ್ಟಹಾಸವನ್ನು ನೋಡುತ್ತಿದ್ದೇವೆ. ಅದು ಶಿಕ್ಷಣ ಕ್ಷೇತ್ರವನ್ನು ಸಹ ಬಿಟ್ಟಿಲ್ಲ. ಹೀಗಾಗಿ ಇಂದು ಖಾಸಗೀಕರಣ ವಿಸ್ತಾರಗೊಳ್ಳುತ್ತಿದೆ, ಸಾರ್ವಜನೀಕರಣ ಕುಗ್ಗುತ್ತಿದೆ. ಈ ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಕನ್ನಡ ನೆಲದಲ್ಲಿ ನಿಂತು ಅನೇಕ ಭಾಷೆಗಳ ನಡುವೆ ಬದುಕಬೇಕಾದ ಅನಿವಾರ್ಯತೆ ಇದೆ. ಇತ್ತ ಕನ್ನಡ ಬಿಡಲಾರದ ಅತ್ತ ಇಂಗ್ಲೀಷ್ ತಬ್ಬಿಕೊಳ್ಳಲಾರದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆಲ್ಲ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ. 
ಈಗ ಸರ್ಕಾರ ಪ್ರಸ್ತಾಪ ಮಾಡಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಿಕ್ಷಣ ನೀತಿಯೂ ಒಂದು ಅವೈಜ್ಞಾನಿಕ ನೀತಿಯಾಗಿದೆ. ಮಗುವಿನ ಶಿಕ್ಷಣ ಮಾತೃಭಾಷೆಯಲ್ಲಿ ಇರಬೇಕಾದುದು ಅಪೇಕ್ಷಣೀಯ. ಹಿರಿಯ ಪ್ರಾಥಮಿಕ ಹಂತ ತಲುಪುವ ವೇಳೆಗೆ ಆ ಮಗುವಿಗೆ ಎರಡು/ಮೂರು ಭಾಷೆಗಳನ್ನು ಕಲಿಯುವ ಸಾಮಥ್ರ್ಯ ಬರುತ್ತದೆ ಎಂಬುದೂ ಸತ್ಯ. ಆದರೆ ಮಗುವಿನ ಮಾತೃಭಾಷೆಯಲ್ಲೇ ಗುಣಮಟ್ಟದ ಶಿಕ್ಷಣ ದೊರೆಯದೇ ಹೋದರೆ, ಆ ಮಗು ಇನ್ನಿತರೆ ಭಾಷೆಗಳನ್ನು ಕಲಿಯಲು ಹೇಗೆ ಸಾಧ್ಯ? ತನ್ನ ಭಾವನೆಗಳನ್ನು, ಅನಿಸಿಕೆಗಳನ್ನು ಮುಕ್ತವಾಗಿ ಮಾತೃಭಾಷೆಯಲ್ಲೇ ಹಂಚಿಕೊಳ್ಳಲು ಅವಕಾಶವಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಇನ್ನೊಂದು ಭಾಷೆಯಲ್ಲಿ ವ್ಯವಹರಿಸಲು ಹೇಗೆ ಸಾಧ್ಯ?
2007-08ರಿಂದ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ‘1ನೇ ತರಗತಿಯಿಂದ ಇಂಗ್ಲೀಷ್ ಕಲಿಕೆ’ಯನ್ನು ಗಮನಿಸುತ್ತಿದ್ದೇವೆ. ಈ ಇಂಗ್ಲೀಷ್ ಕಲಿಕೆಯ ಸಾಧಕ-ಬಾಧಕಗಳ ಬಗ್ಗೆ ಅಂದರೆ, ಕಲಿಕಾ ಪದ್ದತಿಗಳ ಬಗ್ಗೆ, ಕಲಿಕೆಯ ಪರಿಣಾಮದ ಬಗ್ಗೆ, ಆದ ದೋಷಗಳ ಬಗ್ಗೆ, ಆಗಬೇಕಾದ ಬದಲಾವಣೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸದ ಸರ್ಕಾರ, ಏಕಾಏಕಿಯಾಗಿ ಸರ್ಕಾರಿ ಶಾಲೆಗಳಲ್ಲೇ ಇಂಗ್ಲೀಷ್ ಮಾಧ್ಯಮ ಶಿಕ್ಷಣ ನೀಡ ಹೊರಟಿರುವುದು ಶುದ್ದ ಅವೈಜ್ಞಾನಿಕ ಮತ್ತು ಖಾಸಗೀ ಪ್ರಚೋದಕ. 
ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದೇ ಒಂದು ದೊಡ್ಡ ದುರಂತ. ಅಲ್ಲಿಂದಲೇ ಸರ್ಕಾರಿ ಶಾಲೆಗಳ ಅವನತಿ ಶುರುವಾಯಿತು ಎನ್ನಬಹುದು. ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮಾತೃಭಾಷೆಯಲ್ಲೇ ನೀಡಬೇಕು ಎಂಬ ನಿಯಮವನ್ನು ಖಾಸಗೀ ಶಾಲೆಗಳು ಗಾಳಿಗೆ ತೂರಿ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿವೆ. ಇದಕ್ಕೆ ಪರ್ಯಾಯ ಮಾರ್ಗವೆಂದು ಸರ್ಕಾರ ‘1ನೇ ತರಗತಿಯಿಂದ ಇಂಗ್ಲೀಷ್ ಬೋಧನೆ’ ಜಾರಿಗೆ ಬಂದಿತು. ಇದ್ದ ಅಲ್ಪಸ್ವಲ್ಪ ಸರ್ಕಾರಿ ಶಾಲೆಗಳ ಮರ್ಯಾದೆ ಈ ನೀತಿಯಿಂದಾಗಿ ಹಾಳಾಯಿತು. 
ಇನ್ನು ಸರ್ಕಾರಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾದರೆ ಅವುಗಳು ಸಂಪೂರ್ಣವಾಗಿ ನಿರ್ನಾಮ ಆಗುವುದಂತೂ ಖಂಡಿತ. ಇಲ್ಲಿ ಸರ್ಕಾರ ಪರೋಕ್ಷವಾಗಿ ಖಾಸಗೀ ಶಾಲೆಗಳಿಗೆ ಉತ್ತೇಜನ ನೀಡುತ್ತಿರುವುದು ಕಂಡುಬರುತ್ತದೆ. ಇದು ಕೇವಲ ಮಾಧ್ಯಮದ ಅಥವಾ ಭಾಷೆಯ ಪ್ರಶ್ನೆಯಲ್ಲ. ಆ ಭಾಷೆಯನ್ನಾಡುವ ಜನರ ಆಶೋತ್ತರಗಳು, ನಂಬಿಕೆಗಳು, ಆಚಾರ ವಿಚಾರಗಳು, ಸಂಸ್ಕøತಿ ಮತ್ತು ಆ ಭಾಷೆಯ ಇತಿಹಾಸದ ಪ್ರಶ್ನೆ ಉದ್ಭವಿಸುತ್ತದೆ. 
ಕೇವಲ ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ ಜ್ಞಾನ ವೃದ್ದಿಸುತ್ತದೆ ಎನ್ನುವುದಾದರೆ ಇನ್ನುಳಿದ ಭಾಷೆಗಳೆಲ್ಲ ಜ್ಞಾನರಹಿತವೇ? ಪ್ರಾದೇಶಿಕತೆಗೆ, ಪ್ರಾದೇಶಿಕ ಭಾಷೆಗೆ ಅರ್ಥವೇ ಇಲ್ಲವೇ? ಅಲ್ಲಿನ ಜನಜೀವನ, ಸಂಸ್ಕøತಿ ಇವುಗಳ ಪಾಡೇನು? ಎಲ್ಲವನ್ನೂ ಜಾಗತೀಕರಣದ ದೃಷ್ಟಿಯಲ್ಲಿ ನೋಡುವುದಾದರೆ ನಮ್ಮತನಕ್ಕೆ ಬೆಲೆಯಿಲ್ಲವೇ? ಅಥವಾ ನಮ್ಮತನವನ್ನು ಇನ್ನೊಬ್ಬರಿಗೆ ಒತ್ತೆ ಇಟ್ಟು ಅವರ ಅಡಿಯಾಳಾಗಿ ಬಾಳಬೇಕೆ? ಪ್ರಾದೇಶಿಕತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊತ್ತ ಸರ್ಕಾರಗಳೇ ಅವುಗಳನ್ನು ಕಡೆಗಣಿಸುವುದು ಸರಿಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಸೂಕ್ತ ಉತ್ತರ ಕಂಡುಕೊಂಡು ನಿರ್ಧಾರ ಕೈಗೊಳ್ಳಬೇಕಾಗಿದೆ.
ನಮ್ಮ ಜನರು ಬಡವರಿರಬಹುದು. ಆದರೆ ನಮ್ಮ ಸರ್ಕಾರಿ ಶಾಲೆಗಳೇಕೆ ದರಿದ್ರವಾಗಬೇಕು? ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗೀಯವರನ್ನು ಬೆಳೆಸುವುದು ಯಾವ ನ್ಯಾಯ? ಖಾಸಗೀಕರಣವನ್ನು ಶಕ್ತಿಹೀನವಾಗಿ ಮಾಡಬೇಕಾದರೆ ನಾಡಿನ ಕನ್ನಡಿಗರೆಲ್ಲ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ. ಕನ್ನಡ ನೆಲದಲ್ಲಿ ನಿಂತು ಕನ್ನಡತ್ವ ಉಳಿಸಿಕೊಳ್ಳಲು ನಾವೆಲ್ಲರೂ ಒಕ್ಕೊರೆಲಿನಿಂದ ಹೋರಾಡಬೇಕಾಗಿದೆ. ಅದಕ್ಕಾಗಿ ಕನ್ನಡಿಗರು ಕೆಚ್ಚೆದೆಯ ವೀರರು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಾಗಿದೆ. ಬನ್ನಿ ಎಲ್ಲರೂ ಕೈಜೋಡಿಸಿ ಕರ್ನಾಟಕದಲ್ಲಿ ಕನ್ನಡತ್ವವನ್ನು, ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ.

ಆರ್.ಬಿ.ಗುರುಬಸವರಾಜ. ಸ.ಶಿ





ಶಿಕ್ಷಣದಲ್ಲಿ ಋಣಾತ್ಮಕತೆ

ಶಿಕ್ಷಣದಲ್ಲಿ ಋಣಾತ್ಮಕತೆ

ಇತ್ತೀಚೆಗೆ ಶಿಕ್ಷಣದಲ್ಲಿ ಗುಣಾತ್ಮಕತೆಯ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಲಿವೆ. ಗುಣಾತ್ಮಕತೆಯನ್ನು ಅರ್ಥೈಸುವ, ಪರಿಭಾವಿಸುವ ಪ್ರಕ್ರಿಯೆಗಳು ವಿಭಿನ್ನವಾಗಿದ್ದು, ತಜ್ಞರು ವಿಭಿನ್ನ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಗುಣಾತ್ಮಕತೆಯನ್ನು ಅಳೆಯುವ ಮಾನದಂಡಗಳು, ಅವುಗಳಿಗಿರುವ ತಾತ್ವಕ ಹಿನ್ನಲೆ ಹಾಗೂ ಅವುಗಳ ಬಳಕೆಯ ವಿಧಾನಗಳು ವ್ಯಕ್ತಿಯಿಂದ ವ್ಯಕ್ತಿಗೆ, ಸಂಸ್ಥೆಯಿಂದ ಸಂಸ್ಥೆಗೆ ಭಿನ್ನವಾಗಿದ್ದು ಏಕತೆ ಎಂಬುದಿಲ್ಲ.
ಕೆಲವರು ಅಂಕಗಳ ಆಧಾರದ ಮೇಲೆ ಗುಣಾತ್ಮಕತೆಯನ್ನು ಅಳೆದರೆ, ಕೆಲವರು ಶ್ರೇಣಿಗಳ ಆಧಾರದ ಮೇಲೆ ಅಳೆಯುತ್ತಾರೆ. ಕೆಲವರು ಪಠ್ಯವಿಷಯಗಳನ್ನಷ್ಟೇ ಮೌಲ್ಯಮಾಪನ ಮಾಡಿದರೆ, ಇನ್ನು ಕೆಲವರು ಸಹಪಠ್ಯ ಚಟುವಟಿಕೆಗಳನ್ನೂ ಮೌಲ್ಯಮಾಪನಕ್ಕೆ ಒಳಪಡಿಸುತ್ತಾರೆ. ಪಠ್ಯ ವಿಷಯಗಳಾದರೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿವೆ. ಆದರೆ ಪಠ್ಯೇತರ ವಿಷಯಗಳಿಗೆ ನಿರ್ದಿಷ್ಟ/ಏಕರೂಪದ ಮೌಲ್ಯಮಾಪನ ಪದ್ದತಿಗಳಿಲ್ಲ. ಒಟ್ಟಾರೆ ಗುಣಮಟ್ಟದ ಅಳತೆಗೋಲು ಸರಿಯಾಗಿಲ್ಲ. ಇದರಿಂದ ಇತ್ತೀಚೆಗೆ ಗುಣಾತ್ಮಕತೆಯ ಬದಲಾಗಿ ಋಣಾತ್ಮಕತೆಯ ಕೂಗು ಹೆಚ್ಚಾಗುತ್ತಿದೆ. ಶಿಕ್ಷಣದ ಸಹ ಭಾಗೀದಾರರೆಲ್ಲರೂ ತಮ್ಮಲ್ಲಿನ ಲೋಪಗಳನ್ನು ಮರೆಮಾಚಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಹೋಗುತ್ತಿದ್ದಾರೆ.
ಪೋಷಕರು ಶಿಕ್ಷಕರ ಮೇಲೆ, ಶಿಕ್ಷಕರು ಪೋಷಕರು ಹಾಗೂ ಅಧಿಕಾರಿಗಳ  ಮೇಲೆ, ಅಧಿಕಾರಿಗಳು ವ್ಯವಸ್ಥೆಯ ಮೇಲೆ-ಹೀಗೆ ಒಂದು ವರ್ಗ ಇನ್ನೊಂದು ವರ್ಗದ ಮೇಲೆ, ತಮ್ಮ ತಪ್ಪುಗಳನ್ನು ಇನ್ನೊಬ್ಬರ ತಪ್ಪುಗಳೆಂಬಂತೆ ಬಿಂಬಿಸುತ್ತಿದ್ದಾರೆ. ಇದೆಲ್ಲದರ ಕೆಟ್ಟ ಪರಿಣಾಮ ಮಕ್ಕಳ ಮೇಲಾಗುತ್ತಿರುವ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ.
ಶಿಕ್ಷಕರನ್ನು ವಿಚಾರಿಸಿದರೆ “ಏನ್ಮಾಡೋದು ರೀ,,, ಈ ಹಾಳಾದ್ ಮಕ್ಳು ಎಷ್ಟು ಹೇಳಿಕೊಟ್ರೂ ಅಷ್ಟೇ, ಕಲಿಯೋದೇ ಇಲ್ಲ, ತಂದೆ-ತಾಯಿಗಳು ಸರಿಯಾಗಿ ಸಾಲಿಗೆ ಕಳ್ಸೋದಿಲ್ಲ. ಬರೆಯೋಕೆ ಪುಸ್ತಕ/ಪೆನ್ನು ಕೊಡ್ಸೋದೇ ಇಲ್ಲ. ಅಧಿಕಾರಿಗಳು ತರಗತಿ ಕಡೆಗೆ ಕಣ್ಣೇ ಹಾಕಲ್ಲ. ಎಷ್ಟು ಹೇಳಿದ್ರೂ ಇಷ್ಟೇ ಬಿಡ್ರಿ,,,” ಎಂದು ರಾಗ ಎಳೆಯುತ್ತಾರೆ. 
ಪೋಷಕರನ್ನು ಕೇಳಿದರೆ “ಸಾಲ್ಯಾಗ ಏನೂ ಸರ್ಯಾಗಿ ಕಲ್ಸಾದೇ ಇಲ್ಲ, ನಮ್ಮಕ್ಳಿಗೆ ನೆಟ್ಗ ಓದಾಕ-ಬರ್ಯಾಕ ಬರಲ್ಲ, ಮಕ್ಳಿಗೆ ನಯ-ವಿನಯ, ಸಂಸ್ಕøತಿ, ಶಿಸ್ತು ಅನ್ನೋದೇ ಇಲ್ಲ, ಏನ್ ಸಾಲಿನೋ ಏನ್ ಶಿಕ್ಷಣಾನೋ” ಎಂದು ಅಲವತ್ತುಕೊಳ್ಳುತ್ತಾರೆ.
ಅಧಿಕಾರಿಗಳ ಮಾತು ಇವೆರಡಕ್ಕೂ ವಿಭಿನ್ನ. “ಈ ಜನ ಪ್ರತಿನಿಧಿಗಳ ಕೈಯಾಗ ಸಾಕಾಗೈತಿ. ಹಗಲೂ ರಾತ್ರಿ ಜೀವ ತಿನ್ತಾರ. ಆ ಮಾಸ್ತರ ಹಂಗ, ಈ ಮಾಸ್ತರ ಹಿಂಗ, ಆ ಸಾಲಿ ಪಾಠ ಸರಿಯಿಲ್ಲ, ಈ ಸಾಲಿ ಊಟ ಸರಿಯಿಲ್ಲ ಅಂತಾರ. ಒಂದು ಕಡೆ ಜನಪ್ರತಿನಿಧಿಗಳ ಕಾಟ, ಇನ್ನೊಂದೆಡೆ ಮೇಲಾಧಿಕಾರಿಗಳ ಒತ್ತಡ, ಮತ್ತೊಂದೆಡೆ ಶಿಕ್ಷಕ ಸಂಘದವರ ಪರದಾಟ ಹೀಗೆ ಏನು ಅಂತ ನೋಡೋಕೆ ಆಗ್ತಾ ಇಲ್ಲ” ಎಂದು ಗೋಳಾಡುತ್ತಾರೆ. 
ಬಹುತೇಕ ಶಿಕ್ಷಕರುಗಳ ಅಭಿಪ್ರಾಯದಂತೆ ಇತ್ತೀಚೆಗೆ ಶಿಕ್ಷಣವೆಂಬುದು ಹಲವಾರು ಕಾರ್ಯಕ್ರಮಗಳ ಸಂಕೀರ್ಣತೆಯಿಂದ ಕೂಡಿದ ಪ್ರಕ್ರಿಯೆಯಾಗಿದೆ. ಯಾವುದನ್ನು ಮಾಡುವುದು, ಯಾವುದನ್ನು ಬಿಡುವುದು, ಯಾವುದಕ್ಕೆ ಎಷ್ಟು ಒತ್ತು ಕೊಡಬೇಕೋ ತಿಳಿಯುತ್ತಿಲ್ಲ.
ಒಂದು ಶೈಕ್ಷಣಿಕ ವರ್ಷಕ್ಕೆ 225 ರಿಂದ 230 ಕಲಿಕಾ ದಿನಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ದಿನಗಳ ಮಿತಿಯಲ್ಲಿಯೇ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಂಘಟಿಸಬೇಕಾಗುತ್ತದೆ. ಶಾಲೆಗಾಗಿ ನಾವು-ನೀವು, ದಾಖಲಾತಿ ಆಂದೋಲನ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ವಿವಿಧ ಸಹ ಪಠ್ಯ ಚಟುವಟಿಕೆಗಳ, ಜಯಂತೋತ್ಸವಗಳು, ದಿನಾಚರಣೆಗಳು, ವಿಜ್ಞಾನ ವಸ್ತು ಪ್ರದರ್ಶನ, ಗಣಿತ ಮೇಳ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ ಮುಂತಾದವುಗಳ ಪೂರ್ವ ತಯಾರಿ ಮತ್ತು ಆಯೋಜನೆ, ಎನ್.ಪಿ.ಇ.ಜಿ.ಇ.ಎಲ್ ಕಾರ್ಯಕ್ರಮ, ಕೇಳು ಕಿಶೋರಿ ಮತ್ತು ಮೀನಾ ಕಾರ್ಯಕ್ರಮಗಳು, ಶಿಕ್ಷಕರಿಗೆ ತರಬೇತಿಗಳು, ಇಲಾಖೇತರ ಶೈಕ್ಷಣಿಕ ಕಾರ್ಯಕ್ರಮಗಳು ಒಂದೇ,,, ಎರಡೇ,, ಹೀಗೆ ಪಟ್ಟಿ ಮಾಡುತ್ತಾ ಹೋದರೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಗಿ ಮುಗಿಸುವುದೇ ಶಿಕ್ಷಕರ ಕರ್ತವ್ಯವೇನೋ ಎನ್ನುವಂತಾಗಿದೆ. ಮೇಲಿನ ಎಲ್ಲಾ ಕಾರ್ಯಕ್ರಮಗಳು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದರೂ ಒಂದು ಪರಿಮಿತಿಯೊಳಗೆ ಇರುವುದು ಉಚಿತ. ನಾವಿಂದು ಯಾರೊಬ್ಬರೂ ತರಗತಿ ಪ್ರಕ್ರಿಯೆ ಬಗೆಗೆ, ಹೊಸ ಹೊಸ ಬೋಧನಾ ಕಲಿಕಾ ವಿಧಾನಗಳ ಬಗೆಗೆ, ನಾವಿನ್ಯ ಮೌಲ್ಯಮಾಪನ ತಂತ್ರಗಳ ಬಗೆಗೆ ಕಿಂಚಿತ್ತೂ ಯೋಚಿಸಲಾರದಷ್ಟು ಹೀನಾಯ ಸ್ಥಿತಿಗೆ ತಲುಪಿದ್ದೇವೆ.
ಇನ್ನೊಬ್ಬರ ವೀಕ್ಷಣೆ ಹಾಗೂ ಸೂಕ್ತ ಸಲಹೆ-ಸೂಚನೆಗಳಿಂದ ತನ್ನ ಬೋಧನೆಯನ್ನು ಪರಿಣಾಮಕಾರಿಯತ್ತ ಬದಲಾಯಿಸಿಕೊಳ್ಳಲು ಪ್ರತಿಯೊಬ್ಬ ಶಿಕ್ಷಕರು ಹಾತೊರೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪಾಠವೀಕ್ಷಣೆ’ ಎಂಬ ಪದ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಬಹುತೇಕ ಮೇಲುಸ್ತುವಾರಿ ಅಧಿಕಾರಿಗಳು ಪಾಠವೀಕ್ಷಣೆ ಮಾಡುವಲ್ಲಿ ಹಿಂದೆ ಬಳುತ್ತಿರುವುದು ಕಳವಳಕಾರಿಯಾಗಿದೆ. ಸಿ.ಆರ್.ಪಿ, ಬಿ.ಆರ್.ಪಿ, ಮತ್ತು ಮುಖ್ಯಶಿಕ್ಷಕರು ಇದಕ್ಕೆ ಹೊರತಲ್ಲ. ಇದು ಶಿಕ್ಷಕರಲ್ಲಿ ಋಣಾತ್ಮಕತೆಗೆ ದಾರಿ ಮಾಡಿಕೊಡುತ್ತದೆ. ತನ್ನ ಲೋಪಗಳನ್ನು ತಾವೇ ಪತ್ತೆ ಹಚ್ಚಿಕೊಂಡು ಸೂಕ್ತ ರೀತಿಯಲ್ಲಿ ಬದಲಾಯಿಸಿಕೊಳ್ಳುವಷ್ಟು ನೈಪುಣ್ಯತೆ ಎಲ್ಲರಲ್ಲೂ ಇರುವುದಿಲ್ಲ. ಇದಕ್ಕೆ ಇನ್ನೊಬ್ಬ ಪರಿಣಿತರ ಅವಶ್ಯಕತೆ ಇರುತ್ತದೆ. ತಪ್ಪು ಮಾಡಿದವರನ್ನು ಎಚ್ಚರಿಸುವವರೇ ಇಲ್ಲದಂತಾದರೆ ವ್ಯವಸ್ಥೆ ಹದಗೆಡುವುದಂತೂ ಖಂಡಿತ. ಈಗ ಆಗಿರುವುದೂ ಅದೇ ಅಲ್ಲವೇ?
2004-05ನೇ ಸಾಲಿನಿಂದ ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದ ಶಿಕ್ಷಕರ ತರಬೇತಿ ಕೇಂದ್ರಗಳೂ ಶಿಕ್ಷಣದಲ್ಲಿ ಋಣಾತ್ಮಕತೆಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರೆ ತಪ್ಪಲ್ಲ. ಏಕೆಂದರೆ ಬಹುತೇಕ ತರಬೇತಿ ಕೇಂದ್ರಗಳಲ್ಲಿ ನಿಮಯಮ ಮೀರಿ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಉಪನ್ಯಾಸಕರು ವ್ಯವಸ್ಥೆಯ ಬಗ್ಗೆ ನಕಾರಾತ್ಮಕ ಮನೋಭಾವ ಹೊಂದಿರುವುದು ಅವರ ನಡೆ-ನುಡಿಗಳಲ್ಲಿ ಎದ್ದು ಕಾಣುತ್ತದೆ. ಇದನ್ನೇ ತರಬೇತಿ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅದು ಈಗಾಗಲೇ ಅಂತರ್ಗತವಾಗಿರುತ್ತದೆ. ಸ್ಫರ್ದಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರೂ ಸಹ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದು ಆತಂಕಕಾರಿಯಾಗಿದೆ. 
ಒಂದಂತೂ ಸತ್ಯ. ಈ ಎಲ್ಲಾ ಅವಾಂತರಗಳಿಗೆ ವ್ಯವಸ್ಥೆಯ ಲೋಪ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಇದನ್ನು ಸರಿಪಡಿಸುವವರು ಯಾರು? ಪೋಷಕರೇ, ಶಿಕ್ಷಕರೇ, ಅಧಿಕಾರಿಗಳೇ, ಜನಪ್ರತಿನಿಧಿಗಳೇ, ತಜ್ಞರೇ, ಯಾರು? ಇದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಋಣಾತ್ಮಕ ಧೋರಣೆಗಳು ತಾರಕ್ಕೇರತೊಡಗಿದರೆ ಅವುಗಳ ನಿವಾರಣೆ ಕಷ್ಟಪ್ರದವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾಗೀರಾರರೂ ಎಚ್ಚೆತ್ತುಕೊಂಡು ತಮ್ಮ ನಡವಳಿಕೆಗಳನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡಾಗ ಮಾತ್ರ ಈ ರಾಜ್ಯಕ್ಕೆ, ರಾಜ್ಯದ ಶಿಕ್ಷಣಕ್ಕೆ ಉತ್ತಮ ಭವಿಷ್ಯವಿದೆ. ಇಲ್ಲದಿದ್ದರೆ ಘೋರ ದುರಂತವಂತೂ ಖಂಡಿತ. ದಯವಿಟ್ಟು ಈ ಬಗ್ಗೆ ಒಮ್ಮೆ ಯೋಚಿಸಿ ನೋಡಿ...!

ಟೀಚರ್’ ಫೆಬ್ರವರಿ 2012
ಆರ್.ಬಿ.ಗುರುಬಸವರಾಜ

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

ಪ್ರಾಥಮಿಕ ಶಿಕ್ಷಣದಿಂದ ಮರೆಯಾದ ಗಾಂಧೀಜಿ

  ಆತ್ಮೀಯ ದೇಶ ಬಂಧುಗಳೇ, ಮಹಾತ್ಮ ಗಾಂಧಿಜಿಯವರ ತತ್ವದರ್ಶಗಳು ಇಡೀ ದೇಶಕ್ಕೆ ಅಲ್ಲ, ಇಡೀ ಪ್ರಪಂಚಕ್ಕೇ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ. “ನಡೆದಂತೆ ನುಡಿ, ನುಡಿದಂತೆ ನಡೆ” ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಹಾನ್ ಮಾನವತಾವಾದಿ ಮಹಾತ್ಮ ಗಾಂಧಿಯವರು.
ಅವರು ಹುಟ್ಟುತ್ತಲೇ ಮಹಾತ್ಮರಾಗಿ ಹುಟ್ಟಲಿಲ್ಲವಾದರೂ ಅವರ ನಡೆ-ನುಡಿ, ಆಚಾರ-ವಿಚಾರ, ತತ್ವ ಸಿದ್ದಾಂತಗಳ ಪಾಲನೆ ಅವರನ್ನು ಮಹಾತ್ಮರೆನಿಸಿದವು. ಇಂತಹ ಸ್ಪುರುಷನನ್ನು ಇತ್ತೀಚಿನ ವರ್ಷಗಳಲ್ಲಿ ನಮ್ಮ ಕರ್ನಾಟಕ ಪಠ್ಯ ಪುಸ್ತಕ ರಚನಾ ಸಮಿತಿ ಮರೆತುಬಿಟ್ಟಿದೆ. 
ಇತ್ತಿಚೆಗೆ ನಾನು 5 ನೇ ತರಗತಿ ಮಕ್ಕಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಾಹಾತ್ಮ ಗಾಂಧಿಯವರ ಹೆಸರು ಪ್ರಸ್ತಾಪಿಸಿ ಅವರು ಯಾರೆಂದು ಮಕ್ಕಳಿಗೆ ಕೇಳಿದರೆ ‘ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರು’ ಎಂದಷ್ಟೇ ಹೇಳಿದರು. ಹೌದು ಅವರು ನಮ್ಮ ದೇಶಕ್ಕೆ ಸ್ವಾತಂತ್ರವನ್ನು ಪುನರ್ ಸ್ಥಾಪಿಸುವಲ್ಲಿ ಶ್ರಮಿಸಿದವರೇನೋ ನಿಜ. ಆದರೆ ಮಕ್ಕಳಿಗೆ ಗಾಂಧೀಜಿಯವರ ವೈಯಕ್ತಿಕ ಜೀವನದ ಬಗ್ಗೆ ಅಂದರೆ ಅವರ ಜನನ, ತಂದೆ-ತಾಯಿ ಹೆಸರು, ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ನೀವು ಹಿಂದಿನ ತರಗತಿಗಳಲ್ಲಿ ಓದಿದ ಗಾಂಧೀಜಿಯವರ ವಿಚಾರಗಳನ್ನೊಮ್ಮೆ ನೆನಪಿಸಿಕೊಳ್ಳಿ ಎಂದು ಹೇಳಿದೆ. ಹಿಂದಿನ ಯಾವುದೇ ತರಗತಿಗಳಲ್ಲಿ ಗಾಂಧೀಜಿಯವರ ಬಗ್ಗೆ ಅಭ್ಯಾಸ ಮಾಡಿಯೇ ಇಲ್ಲ ಎಂಬ ಮಕ್ಕಳ ಉತ್ತರ ನನ್ನನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿತು. ಆಗಿನ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಗೊತ್ತಿದ್ದ ಕೆಲವೊಂದಿಷ್ಟು ಕಿರು ಮಾಹಿತಿಗಳನ್ನು ಹೇಳಿ ತರಗತಿಯಿಂದ ಹೊರಬಂದೆ. ತಕ್ಷಣವೇ 1 ರಿಂದ 4 ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಕಲೆಹಾಕಿ ಅವಲೋಕಿಸಿದೆ. ಅಲ್ಲೆಲ್ಲೂ ಗಾಂಧೀಜಿವರ ಬಗ್ಗೆ ಮಾಹಿತಿಯಾಗಲೀ, ಅವರ ಜೀವನದ  ಕಥೆಯ ತುಣುಕಾಗಲೀ ಎಲ್ಲೂ ಕಾಣಲಿಲ್ಲ. 
4ನೇ ತರಗತಿಯ ಕನ್ನಡ ಕಲಿ-ನಲಿ ಪಠ್ಯಪುಸ್ತಕದಲ್ಲಿ “ಪುಟ್ಟ ಕೌಮುದಿ” ಎಂಬ ಪಾಠದಲ್ಲಿ ಗಾಂಧೀಜಿಯವರ ಒಂದು ಆದರ್ಶ ಗುಣದ ಬಗ್ಗೆ  ಕಿರು ಮಾಹಿತಿ ಇದ್ದರೂ ಅವರ ವೈಯಕ್ತಿಕ ಜೀವನದ ಪರಿಚಯ ಇಲ್ಲ. ಅಲ್ಲದೇ 5 ರಿಂದ 7ನೇ ತರಗತಿಯ ಪಠ್ಯಪುಸ್ತಕದಲ್ಲೂ ಸಹ ಗಾಂಧೀಜಿಯವರ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಯಾವುದೇ ಪಾಠ ಇಲ್ಲ. ಒಮ್ಮೆಲೆ 8 ನೇ ತರಗತಿ ಕನ್ನಡ ಪಠ್ಯದಲ್ಲಿ ‘ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಎಂಬ ಪಾಠ ಇದ್ದು, ಅದರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವ ಬಗೆಗಿನ ಚಿತ್ರಣವಿದೆ. ಆದರೆ ಅವರ ಬಾಲ್ಯ, ವಿದ್ಯಾಭ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಎನ್ನುವಂತಾಗಿದೆ. ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಹಂತಕ್ಕೆ ಬಂದರೂ ರಾಷ್ಟ್ರಪಿತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಇಲ್ಲದಿರುವುದು ದುರದೃಷ್ಟವೇ ಸರಿ.
ನಾವು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಿನ ಪಠ್ಯಪುಸ್ತಕಗಳಲ್ಲಿ (3 ಅಥವಾ 4ನೇ ತರಗತಿ ಪಠ್ಯಗಳಲ್ಲೇ) ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ಆದರ್ಶಗಳ ಬಗ್ಗೆ ಪಾಠಗಳಿರುತ್ತಿದ್ದವು. ಅವು ನಮಗೆಲ್ಲಾ ಸ್ಪೂರ್ತಿದಾಯಕ ಆಗಿರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳ ಪಠ್ಯಪುಸ್ತಕಗಳಲ್ಲಿ (1-7ನೇ ತರಗತಿವರೆಗೆ) ಗಾಂಧೀಜಿಯವರ ಬಗ್ಗೆ ಯಾವುದೇ ಪಾಠಗಳನ್ನು ಅಳವಡಿಸದೇ ಇರುವುದು ಖೇದಕರ ಸಂಗತಿಯಾಗಿದೆ. 
ಶಿಕ್ಷಕರಾದ ನಾವು ತರಗತಿ ವೇಳಾಪಟ್ಟಿ ತಯಾರಿಸುವಾಗ ನೀತಿ ಶಿಕ್ಷಣ, ಮೌಲ್ಯ ಶಿಕ್ಷಣಕ್ಕೆಂದು ನಿಗದಿತ ಅವಧಿಗಳನ್ನು ಹಂಚಿಕೆ ಮಾಡಿಕೊಂಡಿರುತ್ತೇವೆ. ಆದರೆ ಅನೇಕ ವೇಳೆ ಬೇರೆ ಬೇರೆ ಕಾರ್ಯಭಾರದ ಒತ್ತಡಗಳಿಂದಾಗಿ ಆ ಅವಧಿಗಳನ್ನು ಪಠ್ಯವಿಷಯ ಬೋಧಿಸಲೋ ಅಥವಾ ಇನ್ಯಾವುದಕ್ಕೋ ಬಳಸಿಕೊಳ್ಳುತ್ತೇವೆ. ಹಾಗಾಗಿ ಮಕ್ಕಳಿಗೆ ನೀತಿ/ಮೌಲ್ಯಗಳ ಪರಿಚಯ ಕಡಿಮೆಯಾಗುತ್ತಿದೆ.
ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ, ಸಚ್ಛಾರಿತ್ರರ, ಸತ್ಪುರುಷರ ಜೀವನವನ್ನು ಬಿಂಬಿಸುವಂತಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡರೆ ವಿಷಯ ಬೋಧಿಸುವಾಗಲಾದರೂ ನೀತಿ/ಮೌಲ್ಯ, ತತ್ವಗಳನ್ನು ಮಕ್ಕಳಿಗೆ ತಿಳಿಸಬಹುದಲ್ಲವೇ? ಆ ಮೂಲಕವಾದರೂ ಮಕ್ಕಳು ಕೆಲವೊಂದಿಷ್ಟು ಮಾಹಾನ್ ಪುರುಷರ ಜೀವನ ಪರಿಚಯ ಮಾಡಿಕೊಳ್ಳುವರಲ್ಲವೇ? ಅಥವಾ ಕೇವಲ ಅವರ ಜನ್ಮದಿನ ಅಥವಾ ಪುಣ್ಯ ತಿಥಿಗಳಂದು ಮಾತ್ರ ಅವರ ನೆನಪು ಮಾಡಿಕೊಂಡರೇ ಸಾಕೇ? ಇನ್ನಾದರೂ ಪಠ್ಯಪುಸ್ತಕ ರಚನಾ ಸಮಿತಿ ಈ ಬಗ್ಗೆ ಗಮನ ಹರಿಸೀತೆ? ಕಾದುನೋಡಬೇಕಿದೆ.
ಟೀಚರ್’ ಆಗಸ್ಟ್ 2010
ಆರ್.ಬಿ.ಗುರುಬಸವರಾಜ

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?

ಶಿಕ್ಷಣದ ನಗರೀಕರಣ ಕೊನೆಗೊಂಡೀತೇ?
(ಗ್ರಾಮೀಣ ಪ್ರದೇಶದ ಶಿಕ್ಷಣ ಹಿಂದುಳಿಯುತ್ತಿರಲು ಕಾರಣಗಳು)
ಭಾರತ ಹಳ್ಳಿಗಳ ನಾಡು. ಶೇ 70 ರಷ್ಟು ಹಳ್ಳಿಗಳು ಭಾರತದಲ್ಲಿವೆ. ಮುಂದುವರೆಯುತ್ತಿರುವ ಭಾರತದಂತಹ ಹಳ್ಳಿಗಳ ಪ್ರಧಾನವಾದ ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಗ್ರಾಮೀಣ ಶಿಕ್ಷಣದ ವ್ಯವಸ್ಥೆ ಮಂದಗತಿಯಲ್ಲಿರುವುದು ಗೋಚರಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಶಿಕ್ಷಣ ಸೌಲಭ್ಯ ಕಡಿಮೆ. ನಗರಗಳಿಗೆ ಹೋಲಿಸಿದರೆ ಹಳ್ಳಿಗಳನ್ನು ಶೈಕ್ಷಣಿಕವಾಗಿ ನಿರ್ಲಕ್ಷಿಸಲಾಗಿದೆ ಎನ್ನಬಹುದು. ಆದರೆ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದಾಗ್ಯೂ ನಗರ ಮತ್ತು ಹಳ್ಳಿಗಳ ನಡುವೆ ತುಂಬಾ ತಾರತಮ್ಯವಿರುವುದು ಕಾಣುತ್ತದೆ. ಹೀಗಾಗಿ ಗ್ರಾಮೀಣ ಜನರು ನಗರ ಶಿಕ್ಷಣಕ್ಕೆ ಹೆಚ್ಚು ಮಾರಿ ಹೋಗುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಶಿಕ್ಷಣ ಮತ್ತು ನಗರ ಶಿಕ್ಷಣದ ನಡುವೆ ದೊಡ್ಡ ಕಂದರ ಏರ್ಪಡುತ್ತಿದೆ. 
ಪಾಲಕ ಪೋಷಕರು, ವಿದ್ಯಾರ್ಥಿಗಳು ನಗರ ಶಿಕ್ಷಣಕ್ಕೆ ಮಾರು ಹೋಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವು ಕೆಳಗಿನಂತಿವೆ.
  •   ಭಾರತ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರೂ ಸಹ ಅದಕ್ಕೆ ತಕ್ಕುದಾದ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳನ್ನು ಸರಿಯಾಗಿ ತಲುಪದಿರುವುದು.
  •   ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಶಿಕ್ಷಕರು ಅನೇಕ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಹಿಂಜರಿಯುತ್ತಾರೆ.
  •   ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳಾದ ಪಾಠೋಪಕರಣ, ಪೀಠೋಪಕರಣ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಭಾಂಗಣ ವ್ಯವಸ್ಥೆ ಸರಿಯಾಗಿರುವುದಿಲ್ಲ.
  •   ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಪ್ರಯೋಗಶಾಲೆ, ಗ್ರಂಥಭಂಢಾರ, ಆಟದ ಬಯಲು ಮತ್ತು ಮಾನಸಿಕ ಹಾಗೂ ಭೌಧ್ಧಿಕ ತರಬೇತಿ ಸೌಲಭ್ಯಗಳು ಸರಿಯಾಗಿ ಇಲ್ಲದಿರುವುದು.
  •   ಹಳ್ಳಿಗಳಲ್ಲಿ ವೃತ್ತಿ ತರಬೇತಿ ಶಿಕ್ಷಣ ಕೇಂದ್ರಗಳ ಅಭಾವವಿದ್ದು ನಗರ ಪ್ರದೇಶಗಳಲ್ಲಿ ದೊರೆಯುವ ಉತ್ತಮ ಶಿಕ್ಷಣ ವ್ಯವಸ್ಥೆ ಹಳ್ಳಿಗಳಲ್ಲಿ ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. 
  •   ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸೌಲಭ್ಯಗಳು ಹಳ್ಳಿಗಳಲ್ಲಿ ಇಲ್ಲದೇ ಇರುವುದರಿಂದ ಗ್ರಾಮೀಣರು ನಗರ ಶಿಕ್ಷಣಕ್ಕೆ ಮಾರು ಹೋಗುವಂತಾಗಿದೆ.
  •   ಭಾರತವು ವ್ಯವಸಾಯ ಪ್ರಧಾನ ದೇಶವಾಗಿದ್ದು,  ಮಕ್ಕಳಿಗೆ ಹಳ್ಳಿಗಳಲ್ಲಿ ವ್ಯವಸಾಯ ಮತ್ತು ವ್ಯವಸಾಯೋಧ್ಯಮ ಕ್ಷೇತ್ರಗಳಲ್ಲಿ ಶಿಕ್ಷಣ ಹಾಗೂ ತರಬೇತಿ ದೊರೆಯುತ್ತಿಲ್ಲ.
  •   ಹಳ್ಳಿಗಳಲ್ಲಿ ಹುಟ್ಟಿದ ನಿಮ್ನ ಹಾಗೂ ಹಿಂದುಳಿದ ವರ್ಗದ ವಿದ್ಯಾವಂತರು ಸಾಮಾಜಿಕ ಅಸಮಾನತೆಗೆ ಒಳಗಾಗಿದ್ದಾರೆ. ಅವರಿಗೆ ಪುರಸ್ಕಾರವಾಗಲೀ ಅಥವಾ ಸಾಮಾಜಿಕ ಮನ್ನಣೆಯಾಗಲೀ ದೊರೆಯುತ್ರತಿಲ್ಲ. ನಗರ ಪ್ರದೇಶಗಳಲ್ಲಿ ಜಾತಿ, ಧರ್ಮ, ಮತಗಳ ನಿರ್ಬಂಧವಿಲ್ಲದೇ ಅರ್ಹತೆಯಿಂದ ಅಂತಸ್ತು, ಮನ್ನಣೆ ಮತ್ತು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
  •   ಗ್ರಾಮೀಣ ಪ್ರದೇಶಗಳಲ್ಲಿ ಬಿಡುವಿನ ವೇಳೆಯಲ್ಲಿ ಕಲಿಯಲು ಅವಕಾಶವಿಲ್ಲದಿರುವುದು. ನಗರ ಪ್ರದೇಶಗಳಲ್ಲಿ ಬೆಳಗಿನ ಅಥವಾ ರಾತ್ರಿ ಪಾಳೆಯ ತರಗತಿಗಳನ್ನು ನಡೆಸುವಂತೆ ಹಳ್ಳಿಗಳಲ್ಲಿ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚು ಜನ ನಗರ ಶಿಕ್ಷಣದ ಕಡೆಗೆ ವಾಲುತ್ತಿದ್ದಾರೆ.
  •   ಗ್ರಾಮೀಣ ಪ್ರದೇಶದ ವಿದ್ಯಾವಂತರು ನಿಯಂತ್ರಣಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾಭ್ಯಾಸ, ಉದ್ಯೋಗ, ತಾಂತ್ರಿಕತೆ, ವ್ಯವಹಾರ ಮುಂತಾಧ ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರವಿಲ್ಲದೇ ತಂದೆ-ತಾಯಿ ಅಥವಾ ಪೋಷಕರ ನಿಯಂತ್ರಣಕ್ಕೊಳಗಾಗುತ್ತಿದ್ದಾರೆ.

ಹೀಗೆ ಇನ್ನೂ ಅನೇಕ ಕಾರಣಗಳಿಂದ ಶಿಕ್ಷಣವು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡು ಗ್ರಾಮೀಣ ಪ್ರದೇಶದ ಶಿಕ್ಷಣ ಸೊರಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಗ್ರಾಮೀಣ ಪ್ರದೇಶದ ಶಿಕ್ಷಣ ಮೂಲೆಗುಂಪಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಲಾದರೂ ಜನತೆ, ಜನನಾಯಕರು, ಸರ್ಕಾರದವರು ಎಚ್ಚೆತ್ತುಕೊಂಡರೆ ಗ್ರಾಮೀಣ ಶಿಕ್ಷಣವನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ ಹಳ್ಳಿಗಳ ಉದ್ದಾರವಾದೀತು. ಆಗ ಗಾಂಧೀಜಿಯವರ ‘ಗ್ರಾಮಸ್ವರಾಜ್ಯ’ದ ಕನಸು ನನಸಾದೀತು.

‘ಶಿಕ್ಷಣ ಶಿಲ್ಪಿ’ ಫೆಬ್ರವರಿ 2006
ಆರ್.ಬಿ.ಗುರುಬಸವರಾಜ

March 13, 2014

ಫುಟ್ ಪಾತ್ ಮೇಲಿನ ಷೋಕೇಸ್

'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ "ಫುಟ್ ಪಾತ್ ಮೇಲಿನ ಷೋಕೇಸ್ " ಎಂಬ ಲೇಖನ.


March 4, 2014


       ರಾಯಚೂರಿನ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 28-02-2014 ರಂದು ವಿಜ್ಞಾನ ದಿನಾಚರಣೆಯ ಅಂಗವಾಗಿ ನೀಡಿದ ವಿಶೇಷ ಸಾಧಕರ ಸನ್ಮಾನ




February 24, 2014

ಮಕ್ಕಳ ಶಾಲೆ ಮನೆಯೂ ಆಗಲಿ!


ಮಕ್ಕಳ ಶಾಲೆ ಮನೆಯೂ ಆಗಲಿ!




‘ಕಲಿಕೆ’ ಒಂದು ವಿಶಿಷ್ಟ ಹಾಗೂ ವೈವಿಧ್ಯಮಯ ಪ್ರಕ್ರಿಯೆ.  ಮಕ್ಕಳು ಕಲಿಕೆಯ ಬಗ್ಗೆ ಅಧೀರರಾಗುತ್ತಿದ್ದಾರೆ. ಕಲಿಕೆ ಎನ್ನುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿರುವ ಪರಿಣಾಮ ಇದು. ಮಕ್ಕಳ ಕಲಿಕೆಯಲ್ಲಿನ ನಿರುತ್ಸಾಹ ದೂರ ಮಾಡುವ ಬಗ್ಗೆ ಅಥವಾ ಕಲಿಕೆಯಲ್ಲಿ ಪ್ರಯಾಸ ಪಡುವುದನ್ನು ತಪ್ಪಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಮಕ್ಕಳ ಕಲಿಕೆಗೆ–ಗ್ರಹಿಕೆಗೆ ಅನುಕೂಲವಾಗಲಿ ಎಂದೇ ಅಷ್ಟಪಾದಗಳ ರಚನೆ ಮಾಡಲಾಗಿದೆ. ಈ ಪಾದಗಳು ತಮ್ಮ ಹಿಡಿತವನ್ನು ಬಲಪಡಿಸಿದಷ್ಟೂ ವಿಷಯದ ಮೇಲೆ ಮಕ್ಕಳು ಹಿಡಿತ ಸಾಧಿಸಬಹುದು.
ಓದುವ ಪ್ರೀತಿಯನ್ನು ಪ್ರೋತ್ಸಾಹಿಸಿ:ಪ್ರತಿದಿನ ಸಂಜೆ ಅಥವಾ ರಾತ್ರಿ ನಿಮ್ಮ ಮಗುವಿನ ಜೊತೆ ನೀವೂ ಓದಲು ಕುಳಿತುಕೊಳ್ಳಿ. ನೀವು ಓದುವುದನ್ನು ನೋಡಿ ಮಗುವಿನಲ್ಲಿ ಓದುವ ಹಂಬಲ ಸಹಜವಾಗಿ ಮೂಡುತ್ತದೆ. ನಿಯಮಿತವಾಗಿ ಸಮೀಪದ ಗ್ರಂಥಾಲಯಕ್ಕೆ ಮಗುವನ್ನು ಕರೆದೊಯ್ಯಿರಿ. ಅಲ್ಲಿ ಮಗುವಿಗೆ ಸೂಕ್ತವಾದ ಪುಸ್ತಕಗಳನ್ನು ಹುಡುಕಿಕೊಡಿ. ಹೀಗೆ ಮಾಡುವುದರಿಂದ ಮಗುವಿನಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ ಹಾಗೂ ಖಂಡಿತವಾಗಿಯೂ ಮಗು ನಿಮ್ಮ ಬಳಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತದೆ. ನಿಮ್ಮ ಮತ್ತು ಮಗುವಿನ ಅನುಬಂಧ ಹೆಚ್ಚುವುದಲ್ಲದೇ ಮಗುವಿನಲ್ಲಿ ಓದುವ ಬಗ್ಗೆ ಧನಾತ್ಮಕ ಮನೋಭಾವನೆ ಬೆಳೆಯುತ್ತದೆ.
ಓದಿದ್ದನ್ನು ಖಾತ್ರಿಪಡಿಸಿ: ಸಾಮಾನ್ಯವಾಗಿ ಮಕ್ಕಳು ಪೋಷಕರ ಚಟುವಟಿಕೆಗಳನ್ನು ಅನುಕರಿಸುತ್ತಾರೆ. ಆದ್ದರಿಂದ ನಾವು ಏನು ಓದುತ್ತಿದ್ದೇವೆ ಎಂಬುದು ಮಕ್ಕಳಿಗೂ ತಿಳಿಯಲಿ. ರಾತ್ರಿ ಊಟದ ವೇಳೆ ಅಥವಾ ಊಟದ ನಂತರ ನೀವು ಆ ದಿನ ಓದಿದ ವಿಷಯಗಳ ಬಗ್ಗೆ ಮಗುವಿಗೆ ತಿಳಿಸಿ ಹಾಗೂ ಮಗು ಓದಿದ ವಿಷಯಗಳನ್ನು ತಿಳಿಸಲು ಹೇಳಿ. ಪರಸ್ಪರ ವಿಷಯ ಹಂಚಿಕೊಳ್ಳಿ. ಮಗು ತಾನು ಕಲಿತ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಿ. ಮಗು ಖಂಡಿತವಾಗಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಇದಕ್ಕಿಂತ ಹೆಚ್ಚಿನ ಕಲಿಕೆ ಇನ್ನೇನಿದೆ? ಶಾಲೆಯ ಹೊರಗಿನ ಕಲಿಕೆಯನ್ನೂ ಸಹ ಉತ್ತೇಜಿಸಬೇಕೆಂದು ಎನ್.ಸಿ.ಎಫ್-೨೦೦೫ ಒತ್ತಿ ಹೇಳಿದೆ.
ಅನುಭವಗಳನ್ನು ಪ್ರೊತ್ಸಾಹಿಸಿ: ಅನುಭವಗಳ ಸಾರವೇ ಗುಣಾತ್ಮಕ ಕಲಿಕೆ. ಕಲಿಕೆಯ ವಿಭಿನ್ನ ಅನುಭವಗಳನ್ನು ಮಕ್ಕಳಿಗೆ ನೀಡಬೇಕು. ಅನುಭವ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ನೃತ್ಯ/ ವ್ಯಾಯಾಮ ತರಗತಿಗೆ ಸೇರಲು, ಹೊಸ ಕ್ರೀಡೆ ಕಲಿಯಲು, ವಿವಿಧ ಲೇಖಕರ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ. ಮಗು ಇಷ್ಟ ಪಡುವ ಇನ್ನಿತರೇ ಅಂಶಗಳನ್ನು ಸಂಗ್ರಹಿಸಿ. ಅದರಲ್ಲಿನ ಹೊಸತನವನ್ನು ಅನುಭವಿಸಲು ಪ್ರೋತ್ಸಾಹಿಸಿ. ಕಲಿಕೆ ಒತ್ತಾಯಪೂರಕವಾಗಿ ಹೇರುವಂತದ್ದಲ್ಲ. ಬದಲಾಗಿ ಅದು ಸಂತಸದಾಯಕ ಮತ್ತು ಸಕ್ರಿಯಾತ್ಮಕ ಪ್ರಕ್ರಿಯೆಗಳಿಂದ ಕೂಡಿದಾಗ ಮಾತ್ರ ಅದು ಶಾಶ್ವತವಾಗುತ್ತದೆ.
ಮಕ್ಕಳೊಂದಿಗೆ ಟ್ರಿಪ್ ಕೈಗೊಳ್ಳಿ: ಸಾಧ್ಯವಾದಾಗಲೆಲ್ಲಾ ಮಕ್ಕಳೊಂದಿಗೆ ಶೈಕ್ಷಣಿಕ ಟ್ರಿಪ್ ಕೈಗೊಳ್ಳಿ. ಪ್ರಾಣಿ ಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳು, ವಿಶ್ವ ಪಾರಂಪರಿಕ ತಾಣಗಳು, ರಕ್ಷಿತ ಅರಣ್ಯಗಳು, ಗುಡ್ಡ, ಬೆಟ್ಟ, ನದಿ, ಸರೋವರ, ಸಾಗರ, ಜಲಪಾತಗಳಂತಹ ನೈಸರ್ಗಿಕ ತಾಣಗಳು, ಸಂವಾದ, ಚರ್ಚೆ, ಗೋಷ್ಟಿ, ವಿಚಾರ ಸಂಕಿರಣ, ಉಪನ್ಯಾಸಗಳಂತಹ ವೈಚಾರಿಕ ಕಾರ್ಯಕ್ರಮಗಳು, ನಾಟಕ, ಸಿನೇಮಾ, ಸರ್ಕಸ್‌ಗಳಂತಹ ಮನೋರಂಜನಾ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯಿರಿ. ಅಲ್ಲಿ ಅವರು ನೋಡಿದ ಅನುಭವಿಸಿದ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಿ. ಆಗ ಅವರಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕ ಮತ್ತು ಪರಿಸರ ಪ್ರಜ್ಞೆ ಮೂಡುತ್ತದೆ.
ಸಮಸ್ಯೆ ನಿಖರವಾಗಿ ಗೊತ್ತಿರಲಿ: ನಿಮ್ಮ ಮಗು ಯಾವ ವಿಷಯದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಗೊತ್ತಿರಲಿ. ನಿಮ್ಮ ಮಗು ಕಠಿಣ ವಿಷಯಗಳಲ್ಲೂ ಸಹ ಉತ್ತಮ ಯಶಸ್ಸು ಗಳಿಸುವಂತೆ ಮಾಡಲು ಹಲವಾರು ವಿಧಾನಗಳಿವೆ. ಆ ವಿಷಯದ ಕುರಿತು ಇರುವ ಭಯ ಹೋಗಲಾಡಿಸಿ, ಸಮಸ್ಯೆ ತೀವ್ರವಾಗಿದ್ದರೆ ಶಾಲಾ ಶಿಕ್ಷಕರು ಅಥವಾ ಆಪ್ತ ಸಮಾಲೋಚಕರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.
ಸವಾಲಿಗೆ ಜವಾಬು ನೀಡಿ: ಕೆಲವು ಮಕ್ಕಳು ಹೆಚ್ಚು ತಿಳಿಯಲು ಸಾಮರ್ಥ್ಯ ಇದ್ದರೂ ಸಹ ಬೇರೆ ಬೇರೆ ಕಾರಣಗಳಿಗಾಗಿ ಕಲಿಕೆಯಿಂದ ವಿಮುಖರಾಗುತ್ತಾರೆ. ಈ ಬಗ್ಗೆ ತರಗತಿ ಶಿಕ್ಷಕರೊಂದಿಗೆ ಚರ್ಚಿಸಿ. ಮಗುವಿನ ಕಲಿಕಾ ಬೇಸರ ಕಾರಣ ಕಂಡುಕೊಳ್ಳಿ. ಮಗುವಿನ ಮುಂದುವರೆದ ಕಲಿಕೆಯ ಅವಶ್ಯಕತೆಗಳನ್ನು ಅರಿತು ಅದಕ್ಕನುಗುಣವಾದ ಸಾಮಗ್ರಿ/ ಸೌಲಭ್ಯಗಳನ್ನು ಪೂರೈಕೆ ಮಾಡಿ. ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳನ್ನೂ ನೀಡಿ.
ಧನಾತ್ಮಕ ಪ್ರಶಂಸೆ ಇರಲಿ: ಕೆಲವು ವೇಳೆ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ ಅಥವಾ ಕಲಿತದ್ದನ್ನು ಉತ್ತಮವಾಗಿ ಅಭಿವ್ಯಕ್ತಿಸುತ್ತಾರೆ. ಅಂತಹ ವೇಳೆ ಅವರಿಗೆ ಅಪ್ಪುಗೆಯ ಅಭಿನಂದನೆ ನೀಡಿ. ಸಾಂದರ್ಭಿಕ ಸತ್ಕಾರಗಳಿಂದ ಅವರ ಶ್ರಮವನ್ನು ಪ್ರೋತ್ಸಾಹಿಸಿ. ಧನಾತ್ಮಕ ಬಲವರ್ಧನೆಯಿಂದ ಕಲಿಕೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ನಿಮ್ಮ ಮಗುವಿನ ಉತ್ತಮ ಅಂಶಗಳನ್ನು ಮೆಚ್ಚದೇ ಕೇವಲ ತೆಗಳಿಕೆ ಅಥವಾ ದೂರುವುದರಿಂದ ಮಕ್ಕಳಲ್ಲಿ ಅನಪೇಕ್ಷಿತ ನಡವಳಿಕೆಗಳು ಉಂಟಾಗಬಹುದು.
ಕಲಿಕೆ ಅಜೀವ ಪರ್ಯಂತ ಎಂಬುದನ್ನು ಮನದಟ್ಟು ಮಾಡಿ: ಕಲಿಕೆಗೆ ಕೊನೆಯಿಲ್ಲ, ವಯಸ್ಸಿನ ಮಿತಿಯಿಲ್ಲ, ವಿಷಯದ ಹಂಗಿಲ್ಲ ಎಂಬುದನ್ನು ಮನದಟ್ಟು ಮಾಡಿ. ಅವರವರ ಜೀವನದಲ್ಲಿ ಕಂಡುಕೊಂಡ ಸಫಲತೆಯು ಅವರ ಕಲಿಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಉದಾಹರಣೆ ಸಹಿತ ತಿಳಿಸಿ. ವಿವಿಧ ಕ್ಷೇತ್ರಗಳ ಸಾಧಕರ ಶ್ರಮವನ್ನು ತಿಳಿಸಿ. ಇದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ. ನೀವೇ ನಿಮ್ಮ ಮಗುವಿನ ಮೊದಲ ಗುರುಗಳಾಗಿ. ಖಂಡಿತವಾಗಿಯೂ ಮನೆಯೇ ಮೊದಲ ಪಾಠಶಾಲೆಯಾಗುತ್ತದೆ.

January 20, 2014

ಕಣ್ಣಿನಾರೋಗ್ಯಕ್ಕೆ ಉಣ್ಣುವುದೇನು?

ದಿನಾಂಕ 18-01-2014 ರಂದು "ಪ್ರಜಾವಾಣಿ"ಯ 'ಭೂಮಿಕಾ' ಪುರವಣಿಯಲ್ಲಿ ಪ್ರಕಟವಾದ ಲೇಖನ  

 ಕಣ್ಣಿನಾರೋಗ್ಯಕ್ಕೆ ಉಣ್ಣುವುದೇನು?

             
           ನಮ್ಮ ದೇಹದ ಎಲ್ಲಾ ಅಂಗಗಳಿಗಿಂತ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಅಂಗ ಕಣ್ಣು. ನಿತ್ಯ ಜೀವನದಲ್ಲಿ ಕಣ್ಣಿನ ಪಾತ್ರ ಬೇರೆ ಯಾವುದೇ ಅಂಗಕ್ಕೆ ಸರಿಸಾಟಿಯಲ್ಲ. ಕಣ್ಣಿನ ದೃಷ್ಟಿ ನಿಖರವಾಗಿರಲು ಹಾಗೂ ಕಣ್ಣಿನ  ಆರೋಗ್ಯಕ್ಕೆ ಸೂಕ್ತ ಪ್ರಮಾಣದ ಪೌಷ್ಟಿಕಾಂಶ ಅತ್ಯಗತ್ಯ.  ನಮ್ಮ ಇಂದಿನ ಜೀವನ ಶೈಲಿಯಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಟಿ.ವಿ ಅಥವಾ ಕಂಪ್ಯೂಟರ್ ಪರದೆ ನೋಡುವಾಗ ಕಣ್ಣುಗಳು ಹೆಚ್ಚಿನ ಶ್ರಮ ವಹಿಸುತ್ತವೆ. ಇದರಿಂದಾಗಿ ಕಣ್ಣುಗಳು ಬೇಗನೇ ತಮ್ಮ ದೃಷ್ಟಿ ಶಕ್ತಿ ಕಳೆದುಕೊಳ್ಳಬಹುದು. ಇದನ್ನು ನಿಯಂತ್ರಿಸಲು ನಮ್ಮ ಆಹಾರ ಪದ್ದತಿ ಬದಲಾಗಬೇಕಿದೆ. ಕೆಲವು ಆಹಾರ ಪದಾರ್ಥಗಳು ದೃಷ್ಟಿ ಹೆಚ್ಚಿಸಲು ಹಾಗೂ ಕಣ್ಣಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ. ಅವುಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.
ಕ್ಯಾರೆಟ್ : ಕ್ಯಾರೆಟ್ ಕಣ್ಣಿನ ರಕ್ಷಣೆಗೆ ವಿಶೇಷವಾದ ಆಹಾರ. ಇದರಲ್ಲಿ ಉತ್ತಮ ಗುಣಮಟ್ಟದ ಮಿಟಮಿನ್ ಮತ್ತು ಖನಿಜಗಳಿದ್ದು ಇವು ಕಣ್ಣಿನ ರಕ್ಷಣೆಗೆ ಸಹಾಯ ಮಾಡುತ್ತವೆ. ಕ್ಯಾರೆಟ್ ಅತೀ ಹೆಚ್ಚು ಬೀಟಾ ಕ್ಯಾರೋಟೀನ್ ಅಂಶ ಹೊಂದಿದ್ದು, ಅದು ಕಣ್ಣಿನ ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಜೀವಸತ್ವಗಳು ಕಣ್ಣಿನ ಮೇಲೆ ಬೀಳುವ ಅತಿ ನೇರಳೆ ಕಿರಣಗಳನ್ನು ತಡೆ ಹಿಡಿದು ಕಣ್ಣನ್ನು ರಕ್ಷಿಸುತ್ತವೆ. ಕ್ಯಾರೆಟ್‍ನಲ್ಲಿನ ಲ್ಯೂಟೀನ್ ಎಂಬ ಪ್ರೋಟೀನ್ ಕಣ್ಣಿನ ಕಾಯಿಲೆಗಳನ್ನು ತಪ್ಪಿಸುವ ರಕ್ಷಾಕವಚವಿದ್ದಂತೆ. ಈ ಎಲ್ಲಾ ಕಾರಣಕ್ಕಾಗಿ ಕ್ಯಾರೆಟನ್ನು ನಿಮ್ಮ ಆಹಾರದ ಮೆನುವಿನಲ್ಲಿ ಪ್ರಮುಖ  ಆಹಾರ ಪದಾರ್ಥವಾಗಿ ಸಲಾಡ್ ಅಥವಾ ಪಲ್ಯದ ರೂಪದಲ್ಲಿ ಸ್ವಾಗತಿಸಿ.
ಹಸಿರೆಲೆ ತರಕಾರಿಗಳು :  ಹಸಿರೆಲೆ ತರಕಾರಿಗಳಾದ ಪಾಲಕ, ಹುಳಿಸೀಕ, ಮೆಂತ್ಯೆ, ಕೊತ್ತಂಬರಿ, ಸಬ್ಬಸಿಗೆ, ಪುದೀನ, ಎಲೆಕೋಸು, ಮೂಲಂಗಿ, ರಾಜಗಿರಿ ಇತ್ಯಾದಿಗಳಲ್ಲಿನ ಪ್ರೋಟೀನ್ ಅಂಶಗಳು ಕಣ್ಣಿನ ಅಕ್ಷಿಪಟಲದ ಹಾನಿಯನ್ನು ತಪ್ಪಿಸುತ್ತವೆ. ರೆಟಿನಾ ಕಣ್ಣಿನ ಪ್ರಮುಖ ಭಾಗವಾಗಿದ್ದು, ಹಸಿರೆಲೆ ತರಕಾರಿ ಮತ್ತು ಸೊಪ್ಪುಗಳು ಈ ರೆಟಿನಾವನ್ನು ಬೆಳಕಿನ ಉಪಟಳದಿಂದ ರಕ್ಷಿಸಿ, ಮಾಹಿತಿ ದಾಖಲಿಸಲು ಸಹಾಯ ಮಾಡುತ್ತವೆ.
ಮೊಟ್ಟೆ : ಮೊಟ್ಟೆ ಕೇವಲ ಪ್ರೋಟೀನ್‍ನ ಆಗರವಲ್ಲದೇ, ಆಂಟಿ ಆಕ್ಸಿಡೆಂಟ್ ಸಹ ಆಗಿರುವುದರಿಂದ ಕಣ್ಣಿನ ಪೊರೆಯ ರಕ್ಷಣೆಗೆ ಸೂಕ್ತ ಆಹಾರವಾಗಿದೆ. ವಯಸ್ಸಾದಂತೆಲ್ಲಾ ಅಕ್ಷಿಪಟಲದ ಶಕ್ತಿ ಕ್ಷೀಣವಾಗಿ ದೃಷ್ಟಿ ಮಂಜಾಗುತ್ತದೆ. ಆದರೆ ಮೊಟ್ಟೆಯಲ್ಲಿನ ಪ್ರೋಟೀನ್‍ಗಳು ಅಕ್ಷಿಪಟಲದ ಹಾನಿಯನ್ನು ತಪ್ಪಿಸಿ ದೃಷ್ಟಿಯನ್ನು ನಿಖರಗೊಳಿಸಲು ಸಹಾಯಮಾಡುತ್ತವೆ. ಅಲ್ಲದೇ ಮೊಟ್ಟೆಯಲ್ಲಿನ ಸಲ್ಫರ್ ಖನಿಜ ಮತ್ತು ಸಿಸ್ಟನ್ ಪ್ರೋಟೀನ್‍ಗಳು ದೃಷ್ಟಿ ಉತ್ತಮವಾಗಲು ಸಹಕರಿಸುತ್ತವೆ.
ಹಣ್ಣುಗಳು : ವಿಟಮಿನ್ `ಸಿ’ ರೆಟಿನಾ ಹಾಗೂ ಕಣ್ಣಿನ ಪೊರೆಯ ಹಾನಿಯನ್ನು ತಡೆಗಟ್ಟುವುದರ ಜೊತೆಗೆ ಕಣ್ಣಿನ ರಕ್ತ ನಾಳಗಳನ್ನು ಕ್ಯಾನ್ಸರ್‍ನಿಂದ ರಕ್ಷಿಸುತ್ತವೆ. ಇಂತಹ ವಿಟಮಿನ್ `ಸಿ’ ಸಿಟ್ರಸ್‍ಯುಕ್ತ ಹಣ್ಣುಗಳಾದ ಟೋಮಾಟೋ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಪೀಚ್, ಸ್ಟ್ರಾಬೆರ್ರಿ, ಇತರೆ ಹಣ್ಣುಗಳಲ್ಲಿ ಸಿಗುತ್ತದೆ. ಜೊತೆಗೆ ಕಾಳುಮೆಣಸು ಹಾಗೂ ಕೋಸುಗಡ್ಡೆಗಳಲ್ಲೂ ಸಹ ವಿಟಮಿನ್ `ಸಿ’ ಇರುತ್ತದೆ. ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣನ್ನು ರಕ್ಷಿಸಿಕೊಳ್ಳಬಹುದು.
ಮೀನು : ಮೀನಿನ ಓಮೇಗಾ-3 ಎಣ್ಣೆಯು ಕಣ್ಣಿನ ಜೀವಕೋಶಗಳ ಬೆಳವಣಿಗೆಗೆ ಹಾಗೂ ರೆಟಿನಾದ ರಕ್ಷಣೆಗೆ ಸಹಾಯಕವಾಗುತ್ತದೆ. ಇಂತಹ ಓಮೇಗಾ-3 ಕೊಬ್ಬಿನಾಂಶವು ಕೆಲ ಜಾತಿಯ ಮೀನುಗಳಾದ ಕಾಡ್, ಟನಾ ಮತ್ತು ಸಾಲ್‍ಮನ್‍ಗಳಲ್ಲಿ ದೊರೆಯುತ್ತದೆ.
ಧಾನ್ಯಗಳು : ಇರುಳು ದೃಷ್ಟಿಗೆ ವಿಟಮಿನ್ `ಎ’ ಅವಶ್ಯಕ. ವಿಟಮಿನ್ `ಎ’ ರೆಟಿನಾ ಹಾಗೂ ಅಕ್ಷಿಪಟಲದ ಹಾನಿಯನ್ನು ತಡೆಗಟ್ಟುತ್ತದೆ. ಇಂತಹ ಗುಣವುಳ್ಳ ವಿಟಮಿನ್ `ಎ’  ಧಾನ್ಯಗಳಲ್ಲಿ ಹೇರಳವಾಗಿರುತ್ತದೆ. ಧಾನ್ಯಗಳಾದ ಹೆಸರು, ಮಡಕೆ, ಕಡಲೆ, ಹುರುಳಿ ಇತ್ಯಾದಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಮೊಳಕೆ ಬರಿಸಿ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಬಾದಾಮಿ, ನೆಲಗಡಲೆ, ಕುಸುಬಿ ಹಾಗೂ ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ `ಎ’ ಹೇರಳವಾಗಿರುತ್ತದೆ.
ಈ ಜಗದ ಸೌಂದರ್ಯ ಸವಿಯಲು ಕಣ್ಣುಗಳು ಮುಖ್ಯವಲ್ಲವೇ? ಆದ್ದರಿಂದ  ದಿನನಿತ್ಯದ ನಮ್ಮ ಆಹಾರ ಪದ್ದತಿಯನ್ನು ಉದ್ದೇಶಿತ ರೀತಿಯಲ್ಲಿ ಬದಲಿಸಿಕೊಂಡು ನಮ್ಮ ದೃಷ್ಟಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸೋಣವೇ?
                                                                                       - ಆರ್.ಬಿ.ಗುರುಬಸವರಾಜ.

January 1, 2014

ಕತೆ ಹೇಳುವ ಕಲ್ಲುಗಳು

ದಿನಾಂಕ 20-08-2013 ರ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ನನ್ನ ಲೇಖನ.
ಕತೆ ಹೇಳುವ ಕಲ್ಲುಗಳು

































 ‘ನಾನು ಒಂದು ಕಲ್ಲು. ಈ ಹಿಂದೆ ಅನಾಥನಾಗಿದ್ದ ನಾನು ಈಗ ಅನಾಥನಲ್ಲ. ಏಕೆಂದರೆ ಒಬ್ಬ ಶಿಲ್ಪಿ ನನಗೆ ಜೀವ ನೀಡಿದ್ದಾನೆ. ಆತನ ಸೃಜನಶೀಲತೆಯನ್ನು ನನ್ನ ಮೂಲಕ ಜಗಕ್ಕೆ ಪರಿಚಯಿಸಿದ್ದಾನೆ. ನನ್ನನ್ನು ಎಲ್ಲರೂ ಮೆಚ್ಚುವಂತೆ ಮಾಡಿ  ಪುನೀತಗೊಳಿಸಿದ್ದಾನೆ’ ಎಂದು ಕಲ್ಲುಗಳು ಮಾತನಾಡುತ್ತಿವೆ.
ಈ ಮಾತನಾಡುವ ಕಲ್ಲುಗಳನ್ನು ನೋಡಲು ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದ ಆವರಣದಲ್ಲಿನ “ಶಿಲ್ಪವನ”ಕ್ಕೆ ಭೇಟಿ ಕೊಡಬೇಕು. ‘ಶಿಲ್ಪವನ’ದಲ್ಲಿರುವ ಪ್ರತಿಯೊಂದು ಕಲ್ಲು ಒಂದೊಂದು ಕತೆಯನ್ನು ಹೇಳುವಂತಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಕಲೆಯ ಸ್ಪರ್ಶ ನೀಡಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗಿದೆ. ಕಲ್ಲುಗಳ ನೈಸರ್ಗಿಕತೆ ಹಾಳಾಗದಂತೆ ಹೊಸರೂಪ ಕೊಡುವ ಉದ್ದೇಶದಿಂದ ಈ “ಶಿಲ್ಪವನ” ನಿರ್ಮಿಸಲಾಗಿದೆ.

“ಸಾಂಪ್ರದಾಯಿಕ ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಉದ್ದೇಶದಿಂದ ಇಲ್ಲಿನ ಶಿಲೆಗಳಿಗೆ ಕಲೆಯ ಮೆರಗು ನೀಡಲಾಗುತ್ತದೆ ಹಾಗೂ ಇದನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ” ಎಂಬುದು ಇಲ್ಲಿನ ಶಿಲ್ಪಕಲಾ ವಿಭಾಗದ ಮುಖ್ಯಸ್ಥರಾದ ಡಾ//ಎಸ್.ಸಿ.ಪಾಟೀಲರ ಅಭಿಪ್ರಾಯ.

ಬಾದಾಮಿಯ ಶಿಲ್ಪಕಲಾ ವಿದ್ಯಾರ್ಥಿಗಳಿಂದ ಇಲ್ಲಿ ಪ್ರತಿವರ್ಷ 15-20 ದಿನಗಳ ಶಿಬಿರ ಏರ್ಪಡಿಸಲಾಗುತ್ತದೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ‘ಶಿಲ್ಪವನ’ದಲ್ಲಿನ ಶಿಲೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೊಸ ರೂಪ ನೀಡುತ್ತಾರೆ. ಕೇವಲ ವಿದ್ಯಾರ್ಥಿಗಳಿಂದ ಅಲ್ಲದೇ ಕೆಲವು ತಜ್ಞ ಶಿಲ್ಪಿಗಳಿಂದ ರಚಿಸಿದ ಕಲಾಕೃತಿಗಳೂ ಸಹ ಇಲ್ಲಿವೆ. ಕಳೆದ 10 ವರ್ಷಗಳಿಂದ ಈ ಶಿಲ್ಪವನ್ನು ಅಭಿವೃದ್ದಿ ಪಡಿಸುತ್ತಿದ್ದು ಭಿನ್ನ ಶೈಲಿ, ವಿವಿಧ ರೂಪ ಮತ್ತು ವಿಭಿನ್ನ ಆಕಾರದ ಕಲಾಕೃತಿಗಳು ಇಲ್ಲಿವೆ. ಆಧುನಿಕ, ಸಾಂಪ್ರದಾಯಿಕ ಹಾಗೂ ಕಲ್ಲಿನ ಗಾತ್ರಕ್ಕನುಗುಣವಾಗಿ ರಚಿಸಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತವೆ.

ಹೊಸ ಹೊಸ ಪ್ರತಿಭೆಗಳ ಶೋಧ ಮತ್ತು ಸಾಮಥ್ರ್ಯಗಳ ಸದ್ಬಳಕೆ ಕನ್ನಡ ವಿಶ್ವವಿದ್ಯಾನಿಲಯದ ಅಂತಃಶಕ್ತಿಯಾಗಿದ್ದು, ಅದಕ್ಕನುಗುಣವಾಗಿ ವೈಶಿಷ್ಟ್ಯಪೂರ್ಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಕನ್ನಡ ನಾಡಿನ ಐತಿಹಾಸಿಕತೆಯನ್ನು, ಸಾಂಸ್ಕøತಿಕತೆಯನ್ನು ವಿಶ್ವವ್ಯಾಪಿಯಾಗಿ ಪಸರಿಸುವ ಗುರಿ ಹೊಂದಿದ ಕನ್ನಡ ವಿಶ್ವವಿದ್ಯಾನಿಯದಲ್ಲಿನ ಕಲ್ಲುಗಳು ವಿಶಿಷ್ಟ ಕತೆಗಳನ್ನು ಬಿಚ್ಚಿಡುತ್ತವೆ. ಕೆಲವು ವಿಶ್ವವಿದ್ಯಾನಿಲಯಗಳು ಕೇವಲ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ಕನ್ನಡ ವಿಶ್ವವಿದ್ಯಾನಿಲಯದ ವ್ಯಾಪ್ತಿ ಅಖಂಡ ಕರ್ನಾಟಕವಲ್ಲದೇ, ದೇಶ ವಿದೇಶಗಳಲ್ಲೂ ಹಬ್ಬಿದೆ. ಕನ್ನಡ ನಾಡನ್ನು ಪ್ರೀತಿಸುವ, ನಾಡಿನ ಬಗ್ಗೆ ಕುತೂಹಲವಿರುವ ಪ್ರತಿಯೊಬ್ಬರೂ ನೋಡಲೇಬೇಕಾದ ವಿದ್ಯಾಸಂಸ್ಥೆ “ಕನ್ನಡ ವಿಶ್ವವಿದ್ಯಾನಿಲಯ”.
- ಆರ್.ಬಿ.ಗುರುಬಸವರಾಜ.