August 17, 2015

ವೆಬ್ ಡಿಸೈನರ್ WORLD'S FIRST YOUNG WEB DESIGNER


 ದಿನಾಂಕ 12-08-2015ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.

ಜಗತ್ತಿನ ಕಿರಿಯ ವೆಬ್ ಡಿಸೈನರ್

     ವೆಬ್ಸೈಟ್ಗಳನ್ನು ಸೃಜಿಸಲು .ಟಿ.ಯಂತಹ ಔಪಚಾರಿಕ ಶಿಕ್ಷಣ ಅಗತ್ಯ. ಇಂತಹ ಔಪಚಾರಿಕ ಶಿಕ್ಷಣದ ನೆರವಿಲ್ಲದೇ ವೆಬ್ಸೈಟ್ ಸೃಜಿಸುವುದು ಅಸಾಧ್ಯವೇ ಸರಿ. ಆದರೆಇದೂ ಸಾಧ್ಯ!’ ಎಂದು ಸಾಧಿಸಿ ತೋರಿಸಿದ್ದಾಳೆ ಶ್ರೀಲಕ್ಷ್ಮಿ ಸುರೇಶ್. ಅದೂ ಕೇವಲ ತನ್ನ ಎಂಟನೇ ವಯಸ್ಸಿನಲ್ಲಿ. ಜೊತೆಗೆ ಒಂದು .ಟಿ. ಕಂಪನಿಯ ಸಿ.. ಕೂಡಾ.
     ಶ್ರೀಲಕ್ಷ್ಮಿ ಸುರೇಶ್ ನೆರೆಯ ಕೇರಳ ರಾಜ್ಯದವಳು. ಪ್ರಸ್ತುತ ಕೇರಳದ ಕಾಲಿಕಟ್ ಸೇಂಟ್ ಜೋಸೆಫ್ ದೇವಗಿರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂ.ಬಿ. ಓದುತ್ತಿದ್ದಾಳೆ. ವಕೀಲರಾದ ತಂದೆ ಸುರೇಶ್ ಮೆನನ್ ಅವರ ಮಾತುಗಳಿಂದ ಸ್ಪೂರ್ತಿ ಪಡೆದು 8ನೇ ವಯಸ್ಸಿನಲ್ಲಿ ವೆಬ್ಸೈಟ್ ತಯಾರಿಸಿದಳು.
     2007ರಲ್ಲಿ 3ನೇತರಗತಿ ಓದುತ್ತಿದ್ದಾಗ ತನ್ನ ಶಾಲೆಗೊಂದು ವೆಬ್ಸೈಟ್ ಇಲ್ಲದಿರುವುದನ್ನು ಗಮನಿಸಿದ ಶ್ರೀಲಕ್ಷ್ಮಿ ಶಾಲೆಗಾಗಿ ವೆಬ್ಸೈಟ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿ ಯಶಸ್ವಿಯಾದಳು. ಅವಳ ಸಾಧನೆ ಇಡೀ ವಿಶ್ವದ ಗಮನ ಸೆಳೆಯಿತು. ಅದಕ್ಕಾಗಿ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಳು.
     “3ನೇ ವಯಸ್ಸಿನಲ್ಲೇ ಕಂಪ್ಯೂಟರ್ ಮೈಕ್ರೋಸಾಫ್ಟ್ ಪೇಂಟ್ ಮೂಲಕ ಚಿತ್ರ ರಚಿಸುವ ನಂತರ ಟೈಪಿಂಗ್ ಮಾಡುವ ಕೌಶಲ ಕಲಿತಳು. ಮುಂದೆ ನಮಗರಿವಿಲ್ಲದಂತೆ ಅವಳು ಉನ್ನತ ಹಂತಕ್ಕೆ ಬೆಳೆದಳು ಎಂದು ತಂದೆ ಸುರೇಶ್ ಅಭಿಮಾನದಿಂದ ಹೇಳುತ್ತಾರೆ.
     ಶಾಲೆಗಾಗಿ ವೆಬ್ಸೈಟ್ ತಯಾರಿಸಿದ ನಂತರ ತನ್ನದೇ ಆದ-ಡಿಸೈನ್ ಟೆಕ್ನಾಲಜಿಸ್ ಎಂಬ ವೆಬ್ಡಿಸೈನ್ ಕಂಪನಿಯೊಂದನ್ನು ಸ್ಥಾಪಿಸಿ ಅದರ ಸಿ.. ಆಗಿದ್ದಾಳೆ. ಹಾಗಾಗಿ ಜಗತ್ತಿನ ಕಿರಿಯ ಸಿ.. ಎಂಬ ಕೀರ್ತಿಗೂ ಭಾಜನಳಾಗಿದ್ದಾಳೆ. ಮಹತ್ಸಾಧನೆಗಾಗಿಅಸೋಸಿಯೇಷನ್ ಆಫ್ ಅಮೇರಿಕನ್ ವೆಬ್ಮಾಸ್ಟರ್ ಇವಳಿಗೆ ಸದಸ್ಯತ್ವ ನೀಡಿ ಗೌರವಿಸಿದೆ.
     ಕೇರಳ ಸರ್ಕಾರದ ಅಧಿಕೃತ ವೇಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ಸೈಟ್ಗಳನ್ನು ಸೃಜಿಸಿರುವ ಶ್ರೀಲಕ್ಷ್ಮಿ ಇಲ್ಲಿಯವರೆಗೆ ಒಟ್ಟು 150ಕ್ಕೂ ಹೆಚ್ಚು ವೆಬ್ಸೈಟ್ ರೂಪಿಸಿದ್ದಾಳೆ. ಈಗ ಓದಿನ ಕಡೆ ಹೆಚ್ಚು ಗಮನ ನೀಡಿದ್ದು ಮುಂದೆ -ಡಿಸೈನ್ ಕಂಪನಿಯನ್ನು ಜಗತ್ಪ್ರಸಿದ್ದ ಕಂಪನಿಯಾಗಿ ಬೆಳೆಸುವ ಕನಸು ಹೊಂದಿದ್ದಾಳೆ.
     ಅವಳ ವೆಬ್ಡಿಸೈನ್ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗವೆಬ್ಸೈಟ್ ರಚಿಸುವುದು ಕಷ್ಟವೇನಲ್ಲ. ಕಂಪ್ಯೂಟರ್ ಬಗ್ಗೆ ಮೂಲಮಾಹಿತಿ ಗೊತ್ತಿರುವ ಯಾರು ಬೇಕಾದರೂ ವೆಬ್ಸೈಟ್ ರಚಿಸಬಹುದು. ಆದರೆ ಕ್ರಿಯೇಟಿವ್ ಆಗಿ ರೂಪಿಸುವುದು ಕಷ್ಟದ ಕೆಲಸ. ಇದಕ್ಕೆ ಸಹನೆ ಮತ್ತು ಸೃಜನಶೀಲತೆ ಮುಖ್ಯ ಎನ್ನುತ್ತಾಳೆ.
     ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲಕರವಾದ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ತಯಾರಿಸುವ ಆಸೆ ಹೊಂದಿದ್ದಾಳೆ. “ಬಡತನ ಹಾಗೂ ನಿರುದ್ಯೋಗಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕಗಳು. ಬಡತನಕ್ಕೆ ನಿರುದ್ಯೋಗ ಮತ್ತು ಅನಕ್ಷರತೆಯೇ ಕಾರಣ ಹಾಗೂ ಅನಕ್ಷರತೆಯೇ ನಿರುದ್ಯೋಗದ ಮೂಲ. ಇವೆರಡನ್ನೂ ಹೊಡೆದೋಡಿಸಲು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎನ್ನುತ್ತಾಳೆ.
     ‘ಇಂದಿನ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಸತತ ಪರಿಶ್ರದಿಂದ ಮಾತ್ರ ಸ್ಪರ್ಧೆಯಲ್ಲಿ ಗೆಲ್ಲಲು ಮತ್ತು ಗುರಿಯನ್ನು ತಲುಪಲು ಸಾಧ್ಯ ಎನ್ನುವ ಅವಳ ನಂಬಿಕೆ ನಮ್ಮ ಯುವಕರಿಗೆ ಸ್ಪೂರ್ತಿಯಾದೀತೇ? ಕಾದು ನೋಡೋಣ!. ಶ್ರೀಲಕ್ಷ್ಮಿಯನ್ನು ಅವರ ತಂದೆಯ ಮೊಬೈಲ್ ಸಂಖ್ಯೆ 09847070002 ಗೆ ಡಯಲ್ ಮಾಡಿ ಸಂಪರ್ಕಿಸಬಹುದು(ಸಂಜೆ 6ಗಂಟೆಯ ನಂತರ ಮಾತ್ರ).
    

ಶ್ರೀಲಕ್ಷ್ಮಿಯ ಮುಡಿಗೇರಿದ ಕೆಲವು ಪ್ರಶಸ್ತಿಯ ಗರಿಗಳು
* ಗ್ಲೋಬಲ್ ಇಂಟರ್ನೆಟ್ ಡೈರೆಕ್ಟರಿಸ್ ಅವಾರ್ಡ್(ಯು.ಎಸ್.)
* ವಲ್ರ್ಡ್ ವೆಬ್ ಅವಾರ್ಡ್ ಆಫ್ ಎಕ್ಸಲೆನ್ಸ್(ಯು.ಎಸ್.)
* ಸಿಕ್ಸ್ಟಿ ಪ್ಲಸ್ ಎಜುಕೇಷನ್ ಅವಾರ್ಡ್ ಆಫ್ ಎಕ್ಸಲೆನ್ಸ್(ಕೆನಡಾ)
* ಲಾ ಲುನಾ ನಿಕ್ ಬೆಸ್ಟ್ ಆಫ್ ವೆಬ್ ಅವಾರ್ಡ್(ಯು.ಕೆ)
* ಪೋಯಟಿಕ್ ಸೋಲ್ ಅವಾರ್ಡ್(ಬ್ರೆಜಿಲ್)
* ಅಲೋಹ ಅವಾರ್ಡ್ ಫಾರ್ ಎಕ್ಸಲೆನ್ಸ್ ವೆಬ್ಸೈಟ್(ಹವಾಯಿ)
* ಸ್ವದೇಶಿ ಸೈನ್ಸ್ ಮೂಮೆಂಟ್ ಎಕ್ಸಲೆನ್ಸ್ ಅವಾರ್ಡ್ 2007(ಭಾರತ)
* ಲಯನ್ಸ್ ಕ್ಲಬ್ ಬಿಗ್ ಅಚೀವರ್ ಅವಾರ್ಡ್ 2007(ಭಾರತ)
* ವಿಶೇಷ ಸಾಧನೆಗಾಗಿ ನ್ಯಾಷನಲ್ ಚೈಲ್ಡ್ ಅವಾರ್ಡ್ 2008(ಭಾರತ)

ಆರ್.ಬಿ.ಗುರುಬಸವರಾಜ ಹೊಳಗುಂದಿ


August 9, 2015

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

 ಜುಲೈ 2015ರ 'ಶಿಕ್ಷಣವಾರ್ತೆ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಪಠ್ಯದ ಜೊತೆಗೆ ಸಹಪಠ್ಯವೂ ಇರಲಿ!

    ಇಂದಿನ ಪಾಲಕರು ಅಂಕಗಳಿಸುವುದೇ ತಮ್ಮ ಮಕ್ಕಳ  ಮುಖ್ಯ ಗುರಿ ಎಂಬಂತೆ ಅವರನ್ನು ಬೆಳೆಸುತ್ತಿದ್ದಾರೆ. ಇದು ಮಕ್ಕಳಲ್ಲಿ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ. ಹೋವರ್ಕ್, ಟ್ಯೂಷನ್‍ಗಳ ಹೆಸರಿನಲ್ಲಿ ಮಕ್ಕಳ ಆಟ, ಮನೊರಂಜನೆಗೆ ಕಡಿವಾಣ ಬೀಳುತ್ತಿದೆ. ಇದರಿಂದ ಮಕ್ಕಳಲ್ಲಿ ಖಿನ್ನತೆ, ಮಾನಸಿಕ ತೊಳಲಾಟಗಳಂತಹ ಮಾನಸಿಕ ಕಾಯಿಲೆಗಳು ಅಂಟಿಕೊಳ್ಳುತ್ತಿವೆ.
    ಪಠ್ಯ ಚಟುವಟಿಕೆಗಳು ಎಷ್ಟು ಪ್ರಮುಖವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂಬುದು ಪಾಲಕರಿಗೆ ಇನ್ನೂ ಅರ್ಥವಾದಂತಿಲ್ಲ ಅಥವಾ ಅರ್ಥವಾದರೂ ಪ್ರತಿಷ್ಠೆಗಾಗಿ ಅಥವಾ ಅನಿವಾರ್ಯತೆಯ ಸೃಷ್ಟಿಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಕರಾಳಕ್ಕೆ ನೂಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗುತ್ತಿದೆ.
    ಯಾವುದೇ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಮುನ್ನುಗಲು ಶೈಕ್ಷಣಿಕ ಅರ್ಹತೆಯೊಂದಿಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ವ್ಯಕ್ತಿಯ ಮನೋಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಪಠ್ಯೇತರ ಚಟುವಟಿಕೆಗಳು ಪೂರಕ ಎಂಬುದನ್ನು ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ನಾವ್ಯಾರು ಈ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಲೇ ಇಲ್ಲ. ಮಕ್ಕಳ ಧನಾತ್ಮಕ ಬೆಳವಣಿಗೆಯ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಆಲೋಚಿಸಿ ಅದರಂತೆ ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ತರಬಹುದು.
ಜೀವನ ಕೌಶಲ್ಯಗಳ ಕಲಿಕೆ : ಮಕ್ಕಳು ಹೊರಗಡೆ ಹೋಗಿ ಆಟ ಆಡುವುದರಿಂದ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಯುತ್ತಾರೆ. ಈ ಕೌಶಲ್ಯಗಳು ಮುಂದಿನ ಜೀವನಕ್ಕೆ ಅತ್ಯುಪಯುಕ್ತವಾದವುಗಳು. ಪಠ್ಯೇತರ ಚಟುವಟಕೆಗಳು ಯಾವುದೇ ಶಾಲೆ ಕಾಲೇಜುಗಳು ಕಲಿಸಲಾರದಂತಹ ಜೀವನ ಕೌಶಲ್ಯಗಳಾಗಿವೆ. ಸಾಕಷ್ಟು ಮಕ್ಕಳು ಒಂದೆಡೆ ಸೇರಿ ಆಟವಾಡುವುದರಿಂದ ಅವರಲ್ಲಿ ತಂಡಸ್ಪೂರ್ತಿ ಮತ್ತು ಕ್ರೀಡಾ ಮನೋಭಾವ ಬೆಳೆಯುತ್ತವೆ.
ಸಾಮಾಜಿಕ ಅಭಿವೃದ್ದಿ : ಸ್ನೇಹಿತರೊಂದಿಗಿನ ಪರಸ್ಪರ ಸಂವಹನ ಕೌಶಲ್ಯಗಳೇ ಸಾಮಾಜಿಕ ಕೌಶಲ್ಯಗಳಾಗಿರುತ್ತವೆ. ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳು ಸಾಕಷ್ಟು ಹೊರ ಸ್ನೇಹಿತರನ್ನು ಗಳಿಸುತ್ತಾರೆ ಮತ್ತು ಅವರೊಂದಿಗೆ ಬೆರೆಯುತ್ತಾರೆ. ಇದು ಮುಂದೆ ಟೀಂವರ್ಕ್ ಮಾಡಲು ಸಹಾಯ ಮಾಡುತ್ತದೆ. ಸಾರ್ವಜನಿಕವಾಗಿ ಮಾತನಾಡುವುದನ್ನು ಮತ್ತು ಭಾಗಿಯಾಗುವುದನ್ನು ಮಕ್ಕಳು ಕಲಿಯುತ್ತಾರೆ.
ಸಂಕೋಚ ಕಡಿಮೆಯಾಗುತ್ತದೆ : ನಿಮ್ಮ ಮಗು ತರಗತಿಯಲ್ಲಿ ಅಥವಾ ಅತಿಥಿಗಳ ಮುಂದೆ ನಿಂತು ಹಾಡು ಹೇಳಲು ಅಥವಾ ಪದ್ಯ ಹೇಳಲು ಸಂಕೋಚಪಡುತ್ತದೆಯೇ? ಹೌದು ಎಂದಾದರೆ ನಿಮ್ಮ ಮಗುವನ್ನು  ಹಾಡು, ನೃತ್ಯ, ಚಿತ್ರಕಲೆ ಅಥವಾ ಗುಂಪು ಆಟಗಳಲ್ಲಿ ತೊಡಗಲು ಪ್ರೋತ್ಸಾಹಿಸಿ. ಇದು ಅವರ ನಾಚಿಕೆ ಸ್ವಭಾವವನ್ನು ಹೋಗಲಾಡಿಸುತ್ತದೆ.
ದೈಹಿಕ ಬೆಳವಣಿಗೆ : ದೈಹಿಕ ಆರೋಗ್ಯ ಹೆಚ್ಚಿದರೆ ಮಾನಸಿಕ ಮತ್ತು ಆರೋಗ್ಯವೂ ವೃದ್ದಿಸುತ್ತದೆ. ಪಠ್ಯೇತರ ಚಟುವಟಕೆಗಳು ಮಕ್ಕಳನ್ನು ಸಧೃಢರನ್ನಾಗಿ ಬೆಳೆಸಲು ಸಹಕಾರಿ.
ಶೈಕ್ಷಣಿಕ ಸಾಧನೆಯೂ ವೃದ್ದಿ : ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡರೆ ಪಟ್ಯ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬುದು ಪಾಲಕರ ತಪ್ಪು ಕಲ್ಪನೆಯಾಗಿದೆ. ಆದರೆ ಶಾಲಾ ವೇಳೆಯ ನಂತರ ನಿಗದಿತ ಅವಧಿಯವರೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು  ಇತರ ಮಕ್ಕಳಿಗಿಂತ ಹೆಚ್ಚು ಶೈಕ್ಷಣಿಕವಾಗಿ ಮುಂದೆ ಇರುವುದು ಸಾಬೀತಾಗಿದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳನ್ನು ಓದಿನ ಕಡೆಗೆ ಆಸಕ್ತರನ್ನಾಗಿ ಮಾಡುತ್ತದೆ.
ಸಮಯ ಪ್ರಜ್ಞೆ :  ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಗು ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತದೆ.  ಶಾಲಾ ದಿನಗಳಲ್ಲಿ ಬೆಳೆಸಿಕೊಂಡ ಈ ಸಮಯಪ್ರಜ್ಞೆ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ.
ಒತ್ತಡ ನಿವಾರಿಸುತ್ತದೆ : ಟ್ಯೂಷನ್, ಹೋಂವರ್ಕ್, ಪರೀಕ್ಷೆಗಳು ಮಕ್ಕಳಿಗೆ ಮಾನಸಿಕ ಒತ್ತಡ ನೀಡುತ್ತಿವೆ. ಇದರಿಂದಾಗಿ ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಮತ್ತು ಪರೀಕ್ಷೆಗಳಲ್ಲಿ ಮಾನಸಿಕವಾಗಿ ಒತ್ತಡ ಅನುಭವಿಸುವಂತಾಗುತ್ತದೆ. ಪಠ್ಯೇತರ ಚಟುವಟಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ನಿರಾಳವಾಗಿ ಒತ್ತಡ ಮುಕ್ತರಾಗುತ್ತಾರೆ.
    ಹಾಗಾಗಿ ಮಕ್ಕಳಿಗೆ ಇಷ್ಟವಾಗುವ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ಸಮಸ್ಯೆ ಎದುರಿಸುವ ಕೌಶಲ್ಯಗಳನ್ನು ಬೆಳೆಸಬಹುದಾಗಿದೆ. ಮಕ್ಕಳ ಹವ್ಯಾಸಗಳೇ ಅವರಿಗೆ ಮಾರ್ಗದರ್ಶಿಯೂ ಆಗಬಹುದು. ಆಗ ಮಾತ್ರ ನೀವೊಬ್ಬ ಮಕ್ಕಳ ಮನಸ್ಸನ್ನು ಅರಿತ ಪಾಲಕರಾಗುತ್ತೀರಿ.
                                                                                                    ಆರ್.ಬಿ.ಗುರುಬಸವರಾಜ

July 31, 2015

ಬಾಲಸ್ಥೂಲತೆ

 ಸುಧಾ(ಆಗಸ್ಟ್ 6) ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.



                                ಆಡುವ ಮಕ್ಕಳನ್ನು ಕಾಡುವ

                      ಬಾಲಸ್ಥೂಲತೆ

    ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ಸನು ತುಂಬಾ ಚೂಟಿ ಹುಡುಗ. ಸ್ನೇಹಿತರಿಂದ ‘ಡುಮ್ಮ’ ಎನ್ನುವ ಪಟ್ಟ. ಸ್ಥೂಲದೇಹಿಯಾದರೂ ಎಲ್ಲರಂತೆ ಆಟಪಾಠಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಊಟ ಮಾತ್ರ ಅಷ್ಟಕಷ್ಟೇ. ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಾನೆ. ಆದರೂ ದೇಹದ ಗಾತ್ರ ವಿಪರೀತವಾಗಿ ಏರುತ್ತಿದೆ.
    ನಾಲ್ಕನೆ ತರಗತಿಯ ಪ್ರಮೋದಿನಿಯದು ಭಿನ್ನಕಥೆ. ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರುತ್ತಾಳೆ. ಆಟೋಟಗಳಲ್ಲಿ ಭಾಗಿಯಾಗುವುದೇ ಇಲ್ಲ. ಯಾರೊಂದಿಗೂ ಹೆಚ್ಚು ಬೆರೆಯಲಾರಳು. ಏಕೆಂದರೆ ಸ್ಥೂಲತೆಯಿಂದಾಗಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಏದುಸಿರು ಬಿಡುವಂತಾಗುತ್ತದೆ. ಹಾಗಾಗಿ ಯಾವುದರಲ್ಲೂ ಅವಳಗೆ ಆಸಕ್ತಿ ಇಲ್ಲ.
    ಇವರಿಬ್ಬರ ಚಟುವಟಿಕೆಗಳು ಭಿನ್ನವಾಗಿದ್ದರೂ ಸಮಸ್ಯೆ ಒಂದೇ. ಬಾಲಸ್ಥೂಲತೆ. ಇತ್ತೀಚೆಗೆ ಬಾಲಸ್ಥೂಲತೆಯು ಪ್ರೀಸ್ಕೂಲ್ ಮಕ್ಕಳಿಂದ ಹಿಡಿದು ಪಿ.ಯು.ಸಿ.ವರೆಗಿನ ಮಕ್ಕಳ ಒಂದು ಗಂಭಿರ ಸಮಸ್ಯೆಯಾಗಿದೆ. ಬಾಲಸ್ಥೂಲತೆಯ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಪಾಲಕರು ಕಳವಳಕ್ಕೀಡಾಗುತ್ತಿದ್ದಾರೆ. ಬಾಲಸ್ಥೂಲತೆ ಮಕ್ಕಳಲ್ಲಿ ತೂಕ ಹೆಚ್ಚಳದ ಸಮಸ್ಯೆಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಸಹ ತಂದೊಡ್ಡಿದೆ.
ಏನಿದು ಬಾಲಸ್ಥೂಲತೆ? : ಮಕ್ಕಳ ವಯಸ್ಸಿಗೆ ಅನುಗುಣವಾದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕ ಮತ್ತು ಸಾಮಾನ್ಯ ಗಾತ್ರಕ್ಕಿಂತ ಹೆಚ್ಚು ದೇಹಗಾತ್ರ ಹೊಂದಿರುವುದೇ ಬಾಲಸ್ಥೂಲತೆಯಾಗಿದೆ. ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾದಾಗ ಸ್ಥೂಲತೆ ಉಂಟಾಗುತ್ತದೆ.
    ಮಕ್ಕಳು ಸೇವಿಸುವ ಆಹಾರದ ಪ್ರಮಾಣ, ಸೇವನೆಯ ವಿಧಾನ, ಮನೆಯ ವಾತಾವರಣ, ದೈಹಿಕ ಚಟುವಟಿಕೆಗಳೆಲ್ಲವೂ ಬಾಲಸ್ಥೂಲತೆಯ ಮೇಲೆ ಪ್ರಭಾವಬೀರುವ  ಅಂಶಗಳಾಗಿವೆ.
ಕಾರಣಗಳು :
•    ದೈಹಿಕ ಚಟುವಟಿಕೆಗಳ ಕೊರತೆ
•    ಅನಾರೋಗ್ಯಕರ ಆಹಾರ ಪದ್ದತಿ
•    ವಂಶವಾಹಿಗಳು
•    ಆರೋಗ್ಯ ಸಮಸ್ಯೆಗಳು
•    ಹಾರ್ಮೋನುಗಳ ಏರುಪೇರು
•    ಔಷಧಗಳ ಸೇವನೆ
•    ದೈಹಿಕ ಚಟುವಟಿಕೆಗೆ ಪೂರಕ ವಾತಾವರಣದ ಕೊರತೆ
•    ಆಹಾರ ಮತ್ತು ಆರೋಗ್ಯ ಶಿಕ್ಷಣದ ಕೊರತೆ
•    ಆಹಾರ ಸೇವನೆಯ ವಿಧಾನಗಳÀಲ್ಲಿ ಏರುಪೇರು
ಪರಿಣಾಮಗಳು :
* ಅಧಿಕ ರಕ್ತದೊತ್ತಡ * ಅಧಿಕ ಕೊಲೆಸ್ಟ್ರಾಲ್ ಸಂಗ್ರಹ * ಟೈಪ್-2 ಡಯಾಬಿಟಿಸ್ * ನಿದ್ರಾಹೀನತೆ * ಅಸ್ತಮಾ * ಕೀಲುನೋವು * ಅಸ್ಥಿಮಜ್ಜೆ ಅಸ್ವಸ್ಥತೆ * ಹೃದಯ ಸಂಬಂಧಿ ಕಾಯಿಲೆಗಳು * ಪಿತ್ತಜನಕಾಂಗದ ಕಾಯಿಲೆ
* ಮಾನಸಿಕ ಒತ್ತಡ, ಖಿನ್ನತೆ * ಪರಾವಲಂಬಿ ಜೀವನ * ಕಡಿಮೆ ಜೀವನೋತ್ಸಾಹ * ಚಯಾಪಚಯ ಕ್ರಿಯೆಗಳ ತೊಂದರೆ * ಕಲಿಕಾ ತೊಂದರೆಗಳು * ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಕ್ರಿಯೆಗಳಲ್ಲಿ ಏರಿಳಿತ

    ದೇಹದ ಸ್ಥೂಲತೆ ಒಮ್ಮೆ ಹೆಚ್ಚಿದ ಮೇಲೆ ಅದರ ನಿಯಂತ್ರಣ ಕಷ್ಟ. ಏಕೆಂದರೆ ಅದನ್ನು ನಿಯಂತ್ರಿಸುವ ಚಿಕಿತ್ಸೆಗೆ ಹೆಚ್ಚು ಶ್ರಮ, ಸಮಯ ಮತ್ತು ಹಣ ವ್ಯಯವಾಗುತ್ತದೆ. ಕುಟುಂಬದ ಸಕ್ರಿಯ ಚಟುವಟಿಕೆಗಳು ಮತ್ತು ಆರೋಗ್ಯಕರ ಆಹಾರ ಪದ್ದತಿಯ ವಾತಾವರಣವು ಬಾಲಸ್ಥೂಲತೆಯನ್ನು ತಡೆಯುವ ಮಾರ್ಗದ ಮೊದಲ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಪಾಲಕರು ಕೆಲವು ವರ್ತನೆ ಮತ್ತು ನಡವಳಿಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.
ಹೀಗಿರಲಿ ನಮ್ಮ ನಡತೆ ಮತ್ತು ವರ್ತನೆಗಳು :
•    ಹೊರಗಿನಿಂದ ತರುವ ರೆಡಿಮೇಡ್ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣ ಇರಲಿ. ಮಕ್ಕಳ ವಯಸ್ಸಿಗನುಗುಣವಾದ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿಸಿ.
•    ಕಡಿಮೆ ಸಿಹಿಕಾರಕ ಪಾನಿಯಗಳನ್ನು ಮಾತ್ರ ಖರೀದಿಸಿ. ಸಾಧ್ಯವಾದಷ್ಟೂ ಸ್ವಾಭಾವಿಕ ಪಾನೀಯಗಳಾದ ನೀರು, ಹಾಲು, ಮೊಸರು, ಮಜ್ಜಿಗೆ, ಎಳನೀರು,  ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಲು ಪ್ರೋತ್ಸಾಹಿಸಿ.
•    ಮಕ್ಕಳಿಗೆ ನೀಡುವ ಆಹಾರದಲ್ಲಿ ಹಸಿ ತರಕಾರಿಗಳು, ಮೊಳಕೆ ಬರಿಸಿದ ಧಾನ್ಯಗಳು, ನಾರಿನಂಶ ಇರುವ ಆಹಾರಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಿ.
•    ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ಕಾಣುವಂತೆ ಮತ್ತು ಸುಲಭವಾಗಿ ಸಿಗುವಂತೆ ಇಡಿ. ಅನಾರೋಗ್ಯಕರ ಆಹಾರ ಪದಾರ್ಥಗಳು ಮತ್ತು ಅಧಿಕ ಕ್ಯಾಲೋರಿ ಇರುವ ಆಹಾರಾಂಶಗಳನ್ನು ಮಕ್ಕಳಿಗೆ ಸಿಗದಂತೆ ಇಡಿ.
•    ಆಹಾರ ಸೇವನೆಯ ವಿಧಾನ ಮತ್ತು ವ್ಯಾಯಾಮಗಳ ವಿಚಾರದಲ್ಲಿ ಪಾಲಕರು ಮಕ್ಕಳಿಗೆ ಆದರ್ಶಪ್ರಾಯವಾಗಿರಲಿ.
•    ಮಕ್ಕಳ ಜೊತೆ ಸೇರಿ ಊಟ ಮಾಡುವ ಪದ್ದತಿ ಬೆಳೆಸಿಕೊಳ್ಳಿ. ಇದು ಆಹಾರ ಸೇವನೆಯ ವಿಧಾನದ ಮಾರ್ಗದರ್ಶನಕ್ಕೆ ಉತ್ತಮ ಸಮಯ.
•    ಜಡ ಮನೋರಂಜನಾ ಅವಕಾಶಗಳನ್ನು ಕಡಿಮೆ ಮಾಡಿ. ಟಿ.ವಿ, ಕಂಪ್ಯೂಟರ್, ವೀಡಿಯೋ ಗೇಮ್‍ಗಳನ್ನು ಊಟದ ಕೊಠಡಿ ಮತ್ತು ಮಲಗುವ ಕೊಠಡಿಗಳಿಂದ ದೂರವಿಡಿ. ಇವು ಊಟ ಮತ್ತು ನಿದ್ರೆಗೆ ಭಂಗ ತರುತ್ತವೆ.
•    ಮಕ್ಕಳ ಟಿ.ವಿ. ನೋಡುವ ಅವಧಿಯನ್ನು ಮಿತಿಗೊಳಿಸಿ. ರಜಾದಿನಗಳಲ್ಲಿ 2 ಗಂಟೆಗಿಂತ ಹೆಚ್ಚು ಹೊತ್ತು ಟಿ.ವಿ. ನೋಡುವುದನ್ನು ನಿಷೇಧಿಸಿ.
•    ಹೆಚ್ಚು ಹೊತ್ತು ಟಿ.ವಿ. ನೋಡುವುದು ಮತ್ತು ನೋಡುತ್ತಾ ತಿನ್ನುವುದು ಎರಡು ರೀತಿಯ ದುಷ್ಪರಿಣಾಮಗಳನ್ನು ತರುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬಿನಾಂಶ ಶೇಖರಣೆ ಆಗುತ್ತದೆ ಮತ್ತು ನಿಷ್ಕ್ರಿಯತೆ ಉಂಟಾಗುತ್ತದೆ.
•    ಟಿ.ವಿ. ನೋಡುವ ಸಮಯವನ್ನು ಇತರೆ ಚಟುವಟಿಕೆಗಳಿಗೆ ಬದಲಾಯಿಸಿ.
•    ಸ್ಥೂಲದೇಹಿ ಮಕ್ಕಳ ಚಟುವಟಿಕೆಗಳ ಪಟ್ಟಿ ಮತ್ತು ಆಹಾರ ಪ್ರಮಾಣವನ್ನು ದಿನಚರಿ/ಕ್ಯಾಲೆಂಡರ್‍ಗಳಲ್ಲಿ ಮಕ್ಕಳಿಗೆ ಕಾಣುವಂತೆ ನಮೂದಿಸಿ. ಅದರಂತೆ ದೈನಂದಿನ ಚಟುವಟಿಕೆ ನಡೆಸುವಂತೆ ಪ್ರೋತ್ಸಾಹಿಸಿ.
•    ಮಕ್ಕಳು ಹೆಚ್ಚುಹೊತ್ತು ಪಾಲಕರೊಂದಿಗೆ ಸಮಯ ಕಳೆಯಲು ಅಥವಾ ಪಾಲಕರ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಷ್ಟಪಡುತ್ತಾರೆ. ನಿಮ್ಮ ಚಟುವಟಿಕೆಗಳಲ್ಲಿ ಅವರನ್ನು ಸೇರಿಸಿಕೊಳ್ಳಿ. ಇದರಿಂದ ಅವರಿಗೆ ಉತ್ತಮ ದೈಹಿಕ ಚಟುವಟಿಕೆ ದೊರೆಯುತ್ತದೆ ಹಾಗೂ ಮಕ್ಕಳು ಮತ್ತು ಪಾಲಕರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ.
•    ಮಕ್ಕಳು ಸಾಕಷ್ಟು ನಿದ್ದೆ ಮಾಡಲು ಅವಕಾಶ ನೀಡಿ. ಮಕ್ಕಳ ವಯಸ್ಸಿಗನುಗುಣವಾಗಿ ಅಗತ್ಯ ನಿದ್ದೆ ಮಾಡಿದ ಮಕ್ಕಳಲ್ಲಿ ಸ್ಥೂಲದೇಹದ ಸಾಧ್ಯತೆ ಕಡಿಮೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
        ಮಕ್ಕಳ ಮತ್ತು ಪಾಲಕರ ನಡವಳಿಕೆಗಳು ಬಾಲ ಸ್ಥೂಲತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ಆದ್ದರಿಂದ ಪಾಲಕರು ಮೊದಲು ಉತ್ತಮ ಆಹಾರ ಪದ್ದತಿಗಳನ್ನು ಪ್ರದರ್ಶಿಸಲಿ. ನಂತರ ಮಕ್ಕಳಲ್ಲಿ ಆ ಪದ್ದತಿಗಳನ್ನು ಬೆಳೆಸಲು ಪ್ರಯತ್ನಿಸಲಿ. ಮಕ್ಕಳ ಉತ್ತಮ ಪ್ರಯತ್ನಗಳನ್ನು ಪ್ರಶಂಸಿಸಿ.    
ಇವುಗಳನ್ನೂ ಗಮನಿಸಿ! :
    ನಿಮ್ಮ ಮಗು ಅಗತ್ಯಕ್ಕಿಂತ ಅಧಿಕ ತೂಕ ಹೊಂದಿದ್ದರೆ, ಆ ಮಗುವಿಗೆ ಇಡೀ ಕುಟುಂಬದ ದೈಹಿಕ, ಮಾನಸಿಕ ಬೆಂಬಲ ಅಗತ್ಯ. ಮಕ್ಕಳ ಭಾವನೆಗಳು ಹೆತ್ತವರ ಭಾವನೆಗಳನ್ನು ಆಧರಿಸಿವೆ. ಮಗು ಯಾವುದೇ ತೂಕ ಹೊಂದಿರಲಿ, ಮೊದಲು ನೀವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಆಗ ಮಗುವಿನಲ್ಲಿ ಆತಂಕ ಮರೆಯಾಗುತ್ತದೆ.
    ತೂಕದ ಬಗ್ಗೆ ಮಗುವಿನೊಂದಿಗೆ ಮಾತನಾಡಿ ಕಾಳಜಿ ಮತ್ತು ಅವಕಾಶಗಳನ್ನು ಹಂಚಿಕೊಳ್ಳಿ. ತೂಕದ ವಿಷಯ ಗಮನದಲ್ಲಿರಿಸಿಕೊಂಡು ಮಗುವನ್ನು ಪ್ರತ್ಯೇಕಿಸುವುದು  ಸೂಕ್ತವಲ್ಲ. ಬದಲಾಗಿ ಆಹಾರ ಸೇವನಾ ಪದ್ದತಿ ಮತ್ತು ದೈಹಿಕ ಚಟುವಟಿಕೆಗಳನ್ನು ಬದಲಿಸುವತ್ತ ಗಮನ ಹರಿಸಿ.
    ಮಗುವಿನ ಅಗತ್ಯತೆ ಮತ್ತು ಕಾರ್ಯ ಸಾಧ್ಯತೆಗಳ ಬಗ್ಗೆ ಸೂಕ್ಷ್ಮದಿಂದಿರಿ. ಸ್ಥೂಲದೇಹಿ ಮಕ್ಕಳು ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಲು ಅನಾಸಕ್ತಿ ಹೊಂದಿರುತ್ತಾರೆ. ಚಟುವಟಿಕೆಗಳು ಸ್ಥೂಲದೇಹಿ ಮಗುವಿಗೆ ಆತ್ಮವಿಶ್ವಾಸ ನೀಡುವಂತಿರಬೇಕೇ ಹೊರತು ಮಾನಸಿಕವಾಗಿ ಹಿಂಸೆ ನೀಡುವಂತರಬಾರದು.
    ಪ್ರತಿಯೊಂದು ಮಗುವೂ ಕೂಡಾ ರಾಷ್ಟ್ರದ ಆಸ್ತಿ. ಈ ಆಸ್ತಿಯನ್ನು ಉತ್ತಮವಾಗಿ ಬೆಳೆಸಿ. ದೇಶದ ಅಭಿವೃದ್ದಿಗೆ ಕೈಜೋಡಿಸೋಣವೇ?
                                                                                                               ಆರ್.ಬಿ.ಗುರುಬಸವರಾಜ.

July 15, 2015

NATA ಪರೀಕ್ಷೆ

 ದಿನಾಂಕ 15-07-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.


                 NATAಗೆ ನೀಟಾಗಿ ತಯಾರಾಗಿ
    ಅತೀ ಹೆಚ್ಚು ವೃತ್ತಿ ಅವಕಾಶಗಳನ್ನು ಹೊಂದಿದ ಆರ್ಕಿಟೆಕ್ಚರ್ ಕೋರ್ಸ್ ಸೇರಲು NATA(ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಎಂಬುದು ಕಡ್ಡಾಯ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದರೆ ಮಾತ್ರ 5 ವರ್ಷಗಳ ಆರ್ಕಿಟೆಕ್ಚರ್ ಕೋರ್ಸ್‍ಗೆ ಪ್ರವೇಶ ದೊರೆಯುತ್ತದೆ. ಆರ್ಕಿಟೆಕ್ಚರ್ ಕೌನ್ಸಿಲ್‍ನಿಂದ ಅಂಗೀಕೃತಗೊಂಡ ಯಾವುದೇ ಸರಕಾರಿ, ಅನುದಾನಿತ, ಅನುದಾನ ರಹಿತ, ಸ್ವಾಯತ್ತ ಕಾಲೇಜುಗಳು ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ NATA ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಯ ಚಿತ್ರಕಲೆ, ವೀಕ್ಷಣಾ ಕೌಶಲ್ಯ, ಸೌಂದರ್ಯ ಸಂವಹನಾ ಸಾಮಥ್ರ್ಯ, ನಿರ್ಣಾಯಕ ಚಿಂತನಾ ಸಾಮಥ್ರ್ಯಗಳನ್ನು ಅಳೆಯಲಾಗುತ್ತದೆ. ಹಾಗಾಗಿ ಆರ್ಕಿಟೆಕ್ಚರ್ ಸೇರಬಯಸುವವರಿಗೆ ಇದೊಂದು ಮಹತ್ವದ ಪರೀಕ್ಷೆಯಾಗಿದೆ.
ಅರ್ಹತೆ : NATA ಪರೀಕ್ಷೆ ಬರೆಯಲು ಯಾವುದೇ ಪದವಿ ಪೂರ್ವ ಪರೀಕ್ಷಾ ಮಂಡಳಿಯ ಪಿ.ಯು.ಸಿ.ಯಲ್ಲಿ ಶೇಕಡಾ 50 ರಷ್ಟು ಅಂಕಗಳಿಸಿ ಉತ್ತೀರ್ಣತೆ ಹೊಂದಿರಬೇಕು. ಜೊತೆಗೆ ಗಣಿತವನ್ನು ಒಂದು ವಿಷಯವಾಗಿ ಅಬ್ಯಾಸ ಮಾಡಿರಬೇಕು.
ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : NATA  ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. www.nata.in ವೆಬ್‍ತಾಣದಲ್ಲಿ ನೊಂದಣಿ ಮಾಡಿಕೊಂಡ ನಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 1250/-ರೂ.ಗಳನ್ನು ICIC ಬ್ಯಾಂಕ್‍ನಲ್ಲಿ ಚಲನ್ ಕಟ್ಟುವ ಮೂಲಕ ಹಣ ಪಾವತಿಸಬೇಕು ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ಪಾವತಿ ಮಾಡಬಹುದು.
    ನೊಂದಣಿಗೆ 19-08-2015 ಕೊನೆಯ ದಿನವಾಗಿರುತ್ತದೆ. ನೊಂದಣಿಯಾದ ನಂತರ ಪರೀಕ್ಷಾ ದಿನಾಂಕ ಮತ್ತು ಸ್ಥಳದ ಮಾಹಿತಿಯು ಪ್ರವೇಶ ಪತ್ರದಲ್ಲಿ ನಮೂದಾಗುತ್ತದೆ. ಪ್ರವೇಶ ಪತ್ರವನ್ನು ಅದೇ ವೆಬ್‍ತಾಣದಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷಾ ವಿಧಾನ : NATA ಪರೀಕ್ಷೆಯು ಲಿಖಿತ ಹಾಗೂ ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಡ್ರಾಯಿಂಗ್ ಟೆಸ್ಟ್ ಲಿಖಿತ ರೂಪದಲ್ಲಿದ್ದರೆ, ಸೌಂದರ್ಯ ಸಂವೇದನಾ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಪ್ರತಿವಿಭಾಗಕ್ಕೂ ಎರಡು ಗಂಟೆಗಳ ಸಮುಯಾವಕಾಶ ಇರುತ್ತದೆ. ಡ್ರಾಯಿಂಗ್ ಟೆಸ್ಟ್‍ನಲ್ಲಿ ಎರಡು ಮುಖ್ಯ ಪ್ರಶ್ನೆಗಳಿದ್ದು ನಾಲ್ಕು ಉಪ ಪ್ರಶ್ನೆಗಳಿರುತ್ತವೆ. ಸೌಂದರ್ಯ ಸಂವೇದನಾ ಪರೀಕ್ಷೆಯಲ್ಲಿ 40 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಒಮ್ಮೆ ಈ ಪರೀಕ್ಷೆ ಉತ್ತೀರ್ಣರಾದರೆ ಅದು 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಪರೀಕ್ಷಾ ವಿಷಯಗಳು
ಡ್ರಾಯಿಂಗ್ ಟೆಸ್ಟ್    ಸೌಂದರ್ಯ ಸಂವೇದನಾ ಟೆಸ್ಟ್
* ದೃಷ್ಟಿ ಚಿತ್ರಣ ಮತ್ತು ಸ್ಥಿರ ಚಿತ್ರಣ
* ನೆರಳು ಬೆಳಕಿನ ಪರಿಣಾಮದ ಚಿತ್ರಣ
* ಡ್ರಾಯಿಂಗ್ ಬಗೆಗಿನ ದೃಷ್ಟಿಕೋನ
* ಕಟ್ಟಡ/ ರಚನಾತ್ಮಕ ರೂಪದ 3 ಆಯಾಮಗಳ ಚಿತ್ರಗಳ ಸಂಯೋಜನೆ ಮತ್ತು ಹೋಂದಾಣಿಕೆ
* ನೀಡಿದ ರೂಪ ಮತ್ತು ಆಕಾರ ಬಳಸಿಕೊಂಡು ಆಸಕ್ತಿದಾಯಕ 2 ಆಯಾಮದ ಚಿತ್ರ ರಚನೆ
* ದೃಷ್ಟಿ ಸಮರಸ್ಯದ ವರ್ಣ ಸಂಯೋಜನೆ
* ಅಳತೆಯ ಮಾನಗಳನ್ನು ಅರ್ಥೈಸಿಕೊಂಡಿರುವಿಕೆ
* ದೈನಂದಿನ ಅನುಭವಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಮೆಮೊರಿ ಚಿತ್ರಗಳನ್ನಾಗಿಸುವುದು.   
 * ಗ್ರಹಿಕೆ, ಕಲ್ಪನೆ, ವೀಕ್ಷಣೆ, ಸೃಜನಶೀಲತೆ ಮತ್ತು ಸಂವಹನಗಳ ಮೂಲಕ ಕಟ್ಟಡ ರಚನಾ ಅರಿವು ಮತ್ತು ಸೌಂದರ್ಯ ಸಂವೇದನೆ.
* 2 ಆಯಾಮದ ಚಿತ್ರಗಳಿಂದ 3 ಆಯಾಮದ ವಸ್ತುಗಳ ರಚನಾ ಕೌಶಲ್ಯ
* ವಿವಿಧ ಭಂಗಿಗಳಲ್ಲಿ 3 ಆಯಾಮದ ವಸ್ತುಗಳ ರಚನೆ
* ಕಟ್ಟಡ ರಚನೆ ಮತ್ತು ಗುಣಗಳನ್ನು ಆಧರಿಸಿ ಬಳಸಲಾದ ವಿವಿಧ ವಸ್ತುಗಳನ್ನು ಗುರುತಿಸುವುದು
* ವಿಶ್ಲೇಷಣಾತ್ಮಕ ತಾರ್ಕಿಕತೆ
* ಮಾನಸಿಕ ಸಾಮಥ್ರ್ಯ
* ಕಾಲ್ಪನಿಕ ಅಭಿವ್ಯಕ್ತಿ ಕೌಶಲ್ಯ
* ಆರ್ಕಿಟೆಕ್ಚರ್ ಜಾಗೃತಿ

ತಯಾರಿ ಮುಖ್ಯ : ಪರೀಕ್ಷೆಗೆ ನಿರ್ದಿಷ್ಟ ಪಠ್ಯವಸ್ತು ಇಲ್ಲದೇ ಇರುವುದರಿಂದ ಕಠಿಣ ಶ್ರಮ ಅಗತ್ಯ. ಆದಾಗ್ಯೂ ವಿದ್ಯಾರ್ಥಿಗಳು ಆರ್ಕಿಟೆಕ್ಚರ್‍ಗೆ ಸಂಬಂಧಿಸಿದ ಪರಾಮರ್ಶನ ಗ್ರಂಥಗಳನ್ನು ಅಭ್ಯಾಸ ಮಾಡಬೇಕು. ಐತಿಹಾಸಿಕ ವಾಸ್ತುಶಿಲ್ಪಗಳ ಕಟ್ಟಡ ರಚನಾ ಕೌಶಲ್ಯಗಳನ್ನು ಅರಿಯಬೇಕು. ಜೊತೆಗೆ ನವೀನ ಮಾದರಿಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಸಿದ್ದ ಕಟ್ಟಡಗಳ ರಚನಾ ಕ್ರಮ ಹಾಗೂ ನಕ್ಷಾ ಸ್ವರೂಪ ತಿಳಿದಿರಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಅಭ್ಯಾಸ ಮಾಡಬೇಕು.
                                                                                                                     ಆರ್.ಬಿ.ಗುರುಬಸವರಾಜ.

July 10, 2015

ಕಥೆ ಹೇಳ್ತೀರಾ!

ಜುಲೈ16ರ  ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ

                                        ಕಥೆ ಹೇಳ್ತೀರಾ!

    ಕಥೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ಕಥೆಗಳೆಂದರೆ ಪಂಚಪ್ರಾಣ. ಭೂಮಿಯ ಮೇಲೆ ಮಾನವ ಉಗಮದೊಂದಿಗೆ ಕಥೆಗಳು ಉಗಮವಾಗಿವೆ ಎಂದರೆ ತಪ್ಪಲ್ಲ. ಏಕೆಂದರೆ ಕಥೆಗಳಿಗೂ ಮಾನವರಿಗೂ ಅವಿನಾಭಾವ ಸಂಬಂಧವಿದೆ. ವ್ಯಕ್ತಿಗಳ ಪರಸ್ಪರ ಸಂಪರ್ಕಕ್ಕೆ ಕಥೆಗಳು ಪರಿಣಾಮಕಾರಿ ಮಾರ್ಗಗಳಾಗಿವೆ. ಅಂತೆಯೇ ಕಥೆಗಳು ನಾಗರೀಕತೆಗಳ ನಡುವಿನ ಸಂಪರ್ಕ ಸೇತುವೆ ಇದ್ದಂತೆ. ಕಥೆಗಳು ಪ್ರಾಪಂಚಿಕ ಜ್ಞಾನವನ್ನು ವಿಷಯವಸ್ತುವಿನ ಮೂಲಕ ಅರ್ಥಗರ್ಭಿತವಾಗಿ ತಿಳಿಸುವ ಮಾಧ್ಯಮವಾಗಿವೆ.
    ಈ ಕಾರಣಕ್ಕಾಗಿ ಶಿಕ್ಷಣದಲ್ಲಿ ಕಥೆಗಳು ತುಂಬಾ ಮಹತ್ವ ಪಡೆದಿವೆ. ಶಿಕ್ಷಕರು ವಿದ್ಯಾರ್ಥಿಗಳ ಮನಸನ್ನು ತಲುಪಲು ಕಥೆಗಳೇ ರಹದಾರಿಗಳು. ಕಥೆಗಳು ಸುದ್ದಿ ಸಮಾಚಾರ ಅಥವಾ ಅಂಕಿ-ಅಂಶಗಳಿಗಿಂತ ಹೆಚ್ಚು ಗಾಢವಾಗಿ ಮನಸ್ಸಿನಲ್ಲಿ ಉಳಿಯುತ್ತವೆ. ತರಗತಿ ನಿರ್ವಹಿಸುವ ಶಿಕ್ಷಕರು ಅತ್ಯುತ್ತಮ ಕಥೆಗಾರರಾಗಿದ್ದಲ್ಲಿ ಯಾವುದೇ ಕ್ಲಿಷ್ಟದ ಪರಿಕಲ್ಪನೆಗಳನ್ನೂ ಸಹ ಅನೇಕ ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಧ್ಯವಿದೆ.
    ಕಥೆಗಳೆಂದರೆ ಒಂದು ವಿಷಯವನ್ನು ಚೆನ್ನಾಗಿ ನಿರೂಪಿಸುವುದಲ್ಲ. ಗಣಿತ ಹಾಗೂ ವಿಜ್ಞಾನದ ಪ್ರಕ್ರಿಯೆಗಳನ್ನು, ಪ್ರಯೋಗಗಳನ್ನು ವಿವರಿಸಲು ಕಥೆಗಳನ್ನು ಬಳಸಬಹುದಾಗಿದೆ. ಗಣಿತ ಅಥವಾ ವಿಜ್ಞಾನದ ಸೂತ್ರ, ತತ್ವಗಳನ್ನು ಕೇವಲ ಬಾಯಿಪಾಠ ಮಾಡಿಸುವ ಬದಲು ನಿತ್ಯ ಜೀವನದ ದುಷ್ಟಾಂತದೊಂದಿಗೆ ಕಥನ ಶೈಲಿಯಲ್ಲಿ ಅವುಗಳ ಬಳಕೆಯ ವಿಧಾನ ತಿಳಿಸಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಕಥೆಗಳು ನಿತ್ಯ ಜೀವನಕ್ಕೆ ಬೇಕಾದ ಮಾಹಿತಿಗಳನ್ನು ಜ್ಞಾನವನ್ನು ಹಾಗೂ ಸತ್ಯವನ್ನು ತಿಳಿಸುತ್ತವೆ. ಆದ್ದರಿಂದ ಉತ್ತಮ ಕಥೆಗಾರರಾಗುವ ಮುನ್ನ ಕೆಳಗಿನ ಅಂಶಗಳತ್ತ ಗಮನ ಹರಿಸಿ.
•    ಕಥೆ ವೈಜ್ಞಾನಿಕವಾಗಿರಲಿ ಅಥವಾ ಕಾಲ್ಪನಿಕವಾಗಿರಲಿ ಹೇಳಬೇಕಾದ ಪ್ರತೀ ಭಾಗವೂ ಮುಖ್ಯ. ಕಥೆಯ ಮೂಲ ಆಶಯ ಹಾಗೂ ಕಲಿಕೆಯ ಮೂಲಾಂಶಗಳು ಮಾಯವಾಗದಂತೆ ಕಥೆಗಳು ಪರಿಪೂರ್ಣವಾಗಿರಬೇಕು. ಆದ್ದರಿಂದ ಕಥೆಗಳನ್ನು ಹೆಣೆಯುವಾಗ ಕಲಿಕಾಂಶದ ಪ್ರತೀ ಭಾಗವೂ ಅಗತ್ಯ ಎಂಬುದನ್ನು ನೆನಪಿಡಿ.
•    ಕಥೆ ಹೇಳುವಾಗ ಕೇಳುಗರ ಅವಧಾನ ಹಿಡಿದಿಡುವುದು ಮುಖ್ಯ. ಕಥೆಯು ಆರಂಭದಿಂದ ಅಂತ್ಯದವರೆಗೂ ಕುತೂಹಲದಿಂದ ಕೂಡಿರಬೇಕು. ಅದಕ್ಕಾಗಿ ಉತ್ತಮ ಆರಂಭ ಮುಖ್ಯ. ಆರಂಭದಲ್ಲಿ ಯಾವುದಾದರೊಂದು ಸಮಸ್ಯೆ ನೀಡಿ ಕೇಳುಗರ ಮನಸ್ಸನ್ನು ಸೆಳೆಯಬೇಕು.
•    ಕಥೆಯಲ್ಲಿ ಅರ್ಥಗರ್ಭಿತವಾದ ಮತ್ತು ಆಳವಾದ ಥೀಮ್ ಇರಲಿ. ಮನಸ್ಸಿನಲ್ಲಿನ ಥೀಮ್‍ನಂತೆ ಕಥೆಯನ್ನು ಸಂಯೋಜಿಸುವುದು ಸುಲಭದ ಕೆಲಸವಲ್ಲ. ಹೇಳಬೇಕಾದ ಎಲ್ಲಾ ಅಂಶಗಳನ್ನು ಮೊದಲು ಬರೆದಿಟ್ಟುಕೊಂಡು ನಂತರ ಥೀಮ್ ಅಳವಡಿಸಬಹುದು.
•    ಕಥೆಯು ಸರಳವಾಗಿರಲಿ, ಸ್ಪಷ್ಟವಾಗಿರಲಿ ಹಾಗೂ ಗಟ್ಟಿಯಾದ ನೆಲೆಗಟ್ಟಿನ ಮೇಲೆ ನಿರೂಪಿತವಾಗಿರಲಿ. ಸಾಧ್ಯವಾದಷ್ಟೂ ನಿತ್ಯ ಜೀವನದ ಸಾದೃಶ್ಯಗಳಿರಲಿ.
•    ಕಥೆ ಹೇಳುವಾಗ ಕೇಳುಗರೊಂದಿಗೆ ನಿರಂತರವಾಗಿ ಕಣ್ಣುಗಳ ಸಂಪರ್ಕ ಇರಲಿ. ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಕೇಳುಗರ ಲವಲವಿಕೆಯ ಮಟ್ಟವನ್ನು ತಿಳಿಯಲು ಕಣ್ಣುಗಳ ಸಂಪರ್ಕ ಅಗತ್ಯ. ಇದು ಕೇಳುಗರ ಅವಧಾನವನ್ನು ಕೇಂದ್ರೀಕರಿಸುವುದಲ್ಲದೇ ವಿಶ್ವಾಸ ಮತ್ತು ಸತ್ಯಸಂಧತೆಯನ್ನು ರವಾನಿಸುವ ಅಸ್ತ್ರವಾಗಿದೆ.
•    ಕಥೆಯಲ್ಲಿ ಮಕ್ಕಳಿಗೆ ಅರ್ಥವಾಗುವ ವಿವಿಧ ಭಾಷೆಗಳನ್ನು ಬಳಸಿ. ಸಂಭಾಷಣೆಗಳಲ್ಲಿ ಸಾಧ್ಯವಾದಷ್ಟೂ ಮಕ್ಕಳನ್ನು ತೊಡಗಿಸಿಕೊಳ್ಳಿ.
•    ಕಥೆ ಹೇಳುವಾಗ ಕಥೆಯ ಭಾವನೆಗಳಿಗೆ ತಕ್ಕಂತೆ ದೇಹಭಾಷೆ(ಆಂಗಿಕ ಚಲನೆ) ಬಳಸಿ.
•    ಕಥೆಗಳಲ್ಲಿನ ಸಂಭಾಷಣೆಗಳನ್ನು ಧ್ವನಿಯ ಏರಿಳಿತದೊಂದಿಗೆ ನಾಟಕೀಯ ಶೈಲಿಯಲ್ಲಿ ಹೇಳಿ. ಇದು ಕೇಳುಗರಿಗೆ ರಂಜನಿಯ ಎನಿಸುತ್ತದೆ.
•    ಕಥೆ ಕೇವಲ ಕಿವಿಗಳಿಗೆ ಮಾತ್ರ ಎಂಬಂತಾಗಬಾರದು. ಧ್ವನಿ, ದೃಷ್ಟಿ, ಸ್ಪರ್ಶ, ರುಚಿ ಹಾಗೂ ವಾಸನೆಗಳ ಇಂದ್ರಿಯಾನುಭವ ನೀಡಿ. ಜೊತೆಗೆ ಕಥೆಗೆ ತಕ್ಕ ರಂಗ ಪರಿಕರಗಳನ್ನು ಬಳಸಿ.
•    ಕಥೆಯಲ್ಲಿ ಉತ್ತಮ ಪರಿಸರ ಸೃಷ್ಟಿಸುವ ನಿರ್ಣಾಯಕ ಅಂಶಗಳಿರಲಿ. ಅಂತೆಯೇ ಕಥೆಯಲ್ಲಿ ಹಳ್ಳಿಯ ಸೊಗಡು, ನಗರದ ಜಂಜಡ ವೈಭವ, ಸಮುದ್ರತೀರದ ಮೋಹಕತೆ, ಪ್ರಕೃತಿಯ ರಮ್ಯತೆ, ಅನ್ಯಗ್ರಹದ ರೋಚಕತೆ, ವೈವಿಧ್ಯಮಯ ಹವಾಮಾನ ವಾಯುಗುಣಗಳ ಪ್ರಾದೇಶಿಕ ಚಿತ್ರಣ ಹೀಗೆ ಸಾಮಾನ್ಯ ಕಥೆಯಲ್ಲಿ ಅಸಾಮಾನ್ಯತೆ ಇರಲಿ.
•    ಕಥೆ ಕೇವಲ ಗಂಭೀರವಾಗಿ ಸಾಗದೇ ಅಲ್ಲಲ್ಲಿ ಹಾಸ್ಯ ವಿನೋದಗಳಿರಲಿ. ಜೊತೆಗೆ ಸನನಿವೇಶಕ್ಕೆ ತಕ್ಕ ಹಾಡು ಸಂಗೀತ ಇರಲಿ.
•    ಕಥೆಗಳಲ್ಲಿ ಅನಗತ್ಯವಾದ ಪಾತ್ರ, ಘಟನೆಗಳು ಮತ್ತು ಸಂಭಾಷಣೆಗಳು ಬೇಡ. ಇದು ಕಥೆ ನೇರ ದಾರಿಯಲ್ಲಿ ಸಾಗಲು ಅನುಕೂಲ.
•    ನಿಗದಿತ ಸಮಯದಲ್ಲಿ ಕಥೆಯ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಮುಕ್ತಾಯಗೊಳಿಸಿ. ಕೇಳುಗರ ಮನಸ್ಸು ಚಂಚಲಗೊಳ್ಳುವ ಮುನ್ನ ನಿಗದಿತ ಸಂದೇಶ ತಲುಪಿಸಲು ಪ್ರಯತ್ನಿಸಿ.
•    ಕಥೆಯ ಕೊನೆಯಲ್ಲಿ ಉತ್ತಮವಾದ ತತ್ವ ಆದರ್ಶ ಸಂದೇಶಗಳಿರಲಿ. ಅವು ಕಥೆಯ ಕನಸನ್ನು ಸಾಕಾರಗೊಳಿಸುವಂತೆ ಇರಬೇಕು. ಅದಕ್ಕಾಗಿ ಪ್ರಾಸಭರಿತ ನುಡಿಗಟ್ಟು ಬಳಸಬಹುದು. ಕೊನೆಯಲ್ಲಿ ಸಮಸ್ಯೆಗೆ ಉತ್ತರ ದೊರೆಯುವಂತೆ ಇರಬೇಕೇ ವಿನಹ ಜಟಿಲತೆ ಉಳಿಯಬಾರದು.
        ಮೇಲಿನ ಅಂಶಗಳನ್ನು ಬಳಸಿ ಕಥೆಯನ್ನು ಸಂಯೋಜಿಸಿ ಬಳಸಿದ್ದೇ ಆದಲ್ಲಿ ಖಂಡಿತ ನೀವೊಬ್ಬ ಉತ್ತಮ ಕಥೆಗಾರರಾಗುತ್ತೀರಿ.
                                                                                                                         ಆರ್.ಬಿ.ಗುರುಬಸವರಾಜ ಸ.ಶಿ

July 9, 2015

ಸಿದ್ದಾಂತಗಳ ಹರಿಕಾರ ಹಾನ್ಸ್ ಬೆಥ್

        ಜುಲೈ 2015 ರ 'ಟೀಚರ್' ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

               ಸಿದ್ದಾಂತಗಳ ಹರಿಕಾರ ಹಾನ್ಸ್ ಬೆಥ್

    ವ್ಯಾಯಾಮ ಶಾಲೆಯಲ್ಲಿ ಓದುತ್ತಿದ್ದ ಆ ವಿದ್ಯಾರ್ಥಿಗೆ ತನ್ನ ಸಾಮಥ್ರ್ಯಗಳೇನು ಎಂಬುದು ತಿಳಿದಿರಲಿಲ್ಲ. ಆ ಹುಡುಗ ಗಣಿತದ ಸಮಸ್ಯೆಗಳನ್ನು ಪಟಪಟನೆ ಬಿಡಿಸುತ್ತಿದ್ದ. ಅವನಲ್ಲಿ ಗಣಿತಾತ್ಮಕ ಹಾಗೂ ಸಂಖ್ಯಾತ್ಮಕ ಸಾಮಥ್ರ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅವನಲ್ಲಿದ್ದ ಅಸಾಧಾರಣ ಗಣಿತದ  ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಅವನಿಗೆ ಗಣಿತ ಮತ್ತು ಭೌತಶಾಸ್ತ್ರ ಕಲಿಯುವಂತೆ ಮಾರ್ಗದರ್ಶನ ನೀಡಿದರು. ಅವನು ಹೈಡ್ರೋಜನ್ ಬಾಂಬ್ ತಯಾರಿಕೆಯ ವಿನ್ಯಾಸದಲ್ಲಿ ಭಾಗಿಯಾಗುತ್ತಾನೆ, 20ನೇ ಶತಮಾನದ ಶ್ರೇಷ್ಠ ವಿಜ್ಞಾನಿಯಾಗುತ್ತಾನೆ ಎಂದು ಶಿಕ್ಷಕರು ಊಹಿಸಿರಲಿಲ್ಲ. ಅಂತಹ ಜಗತ್ಪ್ರಸಿದ್ದ ಖಭೌತ ವಿಜ್ಞಾನಿಯೇ “ಹಾನ್ಸಬೆಥ್”.
    ಹಾನ್ಸ್‍ಬೆಥ್ 1906 ರ ಜುಲೈ 2 ರಂದು ಜರ್ಮನಿಯ ಸ್ಟ್ರಾಸ್‍ಬರ್ಗನಲ್ಲಿ ಜನಿಸಿದನು. 4 ನೇ ವಯಸ್ಸಿನಲ್ಲಿ ತನ್ನ ತಾಯಿಯಿಂದ ಓದುವುದು ಮತ್ತು ಬರೆಯುವುದನ್ನು ಪ್ರಾರಂಭಿಸಿದನು. ಬಾಲ್ಯದಲ್ಲಿಯೇ ಗಣಿತದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಹಾನ್ಸಬೆಥ್ ಗಣಿತದ ಯಾವುದೇ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿಯೇ ಬಿಡಿಸುತ್ತಿದ್ದ. 14ನೇ ವಯಸ್ಸಿಗೆ ಸ್ವಪ್ರಯತ್ನದಿಂದ ತನ್ನಷ್ಟಕ್ಕೆ ತಾನೇ ಕ್ಯಾಲ್ಕುಲಸ್(ಅಶ್ಮರಿ)ನ್ನು ಬೋಧಿಸಿಕೊಂಡ. 18ನೇ ವಯಸ್ಸಿನಲ್ಲಿ “ವಿಸರಣೆ ಮತ್ತು ಜೀವಿಗಳಲ್ಲಿ ದ್ರವ ಹರಿಯುವಿಕೆ” ಕುರಿತ ಸಂಶೋಧನಾ ಬರಹವನ್ನು ಪ್ರಕಟಿಸಿ ಮಂಡಿಸಿದನು. ಇದು ಇಡೀ ಸಂಶೋಧನಾ ವಲಯದಲ್ಲೇ ಅತೀ ಹೆಚ್ಚು ಸುದ್ದಿ ಮಾಡಿತು.
    1928 ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಿಂದ “ಸೈದ್ದಾಂತಿಕ ಭೌತಶಾಸ್ತ್ರ” ಎನ್ನುವ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದರು. ನಂತರ 1929-1933 ರವರೆಗೆ ಅದೇ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
    ಸೌರಶಕ್ತಿಯ ಮೂಲ ಕುರಿತ ಸಂಶೋಧನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ಹಾನ್ಸಬೆಥ್ ತಮ್ಮ ಪೀಳಿಗೆಯ ಪ್ರಮುಖ ‘ಸೈದ್ದಾಂತಿಕ ಭೌತವಿಜ್ಞಾನಿ’ ಎನಿಸಿಕೊಂಡರು. ಪರಮಾಣು ಸಮ್ಮಿಳನ ಕ್ಷೇತ್ರದ ಮೇಲೆ ಅನೇಕ ಸಂಶೋಧನೆಗಳನ್ನು ಕೈಗೊಂಡರು. ಇದು ಪರಮಾಣು ನ್ಯೂಕ್ಲಿಯಸ್ ಸಿದ್ದಾಂತವಾದ ‘ಹೊಸ ಕ್ವಾಂಟಮ್ ಸಿದ್ದಾಂತ’ವನ್ನು ಪ್ರತಿಪಾದಿಸಲು ದಾರಿ ಮಾಡಿಕೊಟ್ಟಿತು. ಕ್ವಾಂಟಮ್ ಮೆಕಾನಿಕಲ್ ಲೆಕ್ಕಾಚಾರಕ್ಕಾಗಿ ಗುಂಪು ವಿಧಾನಗಳನ್ನು ಅನ್ವಯಿಸಿದವರಲ್ಲಿ ಹಾನ್ಸಬೆಥ್ ಮೊದಲಿಗರು. ಒಟ್ಟಾರೆ ಕ್ವಾಂಟಮ್ ಭೌತಶಾಸ್ತ್ರ ಸ್ಥಾಪಕರಲ್ಲಿ ಹಾನ್ಸಬೆಥ್ ಒಬ್ಬರು.
    ಅವರ ವೈಜ್ಞಾನಿಕ ಸಂಶೋಧನೆಗಳು ಪರಮಾಣುವಿನ ನ್ಯೂಕ್ಲಿಯಸ್‍ಗಳ ರಚನೆ ಮತ್ತು ಅವುಗಳನ್ನು ನಿಯಂತ್ರಿಸುವ ಶಕ್ತಿ ಗುಣಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಹಾಯ ಮಾಡಿದವು. ಪರಮಾಣು ಸಾಗಾಣಿಕೆಯಲ್ಲಿ ವಿದ್ಯುತ್ ಕಣಗಳ ಶಕ್ತಿನಷ್ಟ ಕುರಿತಾದ ಅವರ ಸಿದ್ದಾಂತವು ಪರಮಾಣುಗಳ ಮಿಶ್ರಣ(ಸಮ್ಮಿಳನ)ದ ಮೇಲಿನ ಸಂಶೋಧನೆಗೆ ನಾಂದಿಯಾಯಿತು. ನಂತರ ಸಮ್ಮಿಳಿತ ಬಾಂಬುಗಳನ್ನು ಉತ್ಪಾದಿಸುವ ಕಾರ್ಯ ಸಾಧ್ಯತೆಯ ಸಂಶೋಧನೆಗಳಲ್ಲಿ ತೊಡಗಿಕೊಂಡರು.
    ಪರಮಾಣು ರಚನೆ ಮತ್ತು ಅವುಗಳ ಪ್ರತಿಕ್ರಿಯೆಗಳ ಮೇಲೆ ಸಾಕಷ್ಟು ಸಿದ್ದಾಂತಗಳನ್ನು ಮಂಡಿಸಿದರು. ಹೀಗಾಗಿ ಪ್ರಪಂಚದ 2ನೇ ಮಹಾಯುದ್ದದ  ಅವಧಿಯಲ್ಲಿ ಮೊದಲ ಅಣುಬಾಂಬ್ ಅಭಿವೃದ್ದಿ ಪಡಿಸಿದವರಲ್ಲಿ ಹಾನ್ಸಬೆಥ್ ಗಣನೀಯ ಪಾತ್ರ ವಹಿಸಿದರು. ಅಣುಬಾಂಬ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಪರಿಣಾಮಗಳೇನು? ಎಂಬುದನ್ನು ಕುರಿತು ವಿವರಿಸುವುದು ಅವರ ಕಾರ್ಯವಾಗಿತ್ತು.
    ಹಾನ್ಸಬೆಥ್ ಅವರ ಕುಸುರಿ ಕೆಲಸವು ಅವರ ಅನೇಕ ಕಾರ್ಯಗಳಲ್ಲಿ ಎದ್ದು ಕಾಣುತ್ತದೆ. ಪ್ರಯೋಗಕ್ಕೊಳಪಡಿಸದೇ ಯಾವುದೇ ಸಿದ್ದಾಂತವನ್ನು ಒಪ್ಪಿದವರಲ್ಲ. ಅವರ ಪ್ರತಿಯೊಂದು ಸಿದ್ದಾಂತಗಳು ಹೊಸ ವಿದ್ಯಮಾನಗಳನ್ನು ವಿವರಿಸಲು ಗಣಿತೀಯ, ಪರಿಮಾಣಾತ್ಮಕ ತಿಳುವಳಿಕೆ ಹೊಂದಿದ್ದವು. ಊಹೆಗೆ ಅವಕಾಶ ಇರುತ್ತಿರಲಿಲ್ಲ.
    ತಮ್ಮ ವಿಫುಲವಾದ ಜ್ಞಾನದ ಹರವಿನಿಂದ ವಿದ್ಯುತ್ ಕಾಂತೀಯ ಸಿದ್ದಾಂತ, ಅಘಾತ ತರಂಗಗಳ ಸಿದ್ದಾಂತಗಳು ಜನಮನ್ನಣೆ ಗಳಿಸಿದವು. ಬೈಜಿಕ ಭೌತವಿಜ್ಞಾನದ ಬಗ್ಗೆ ಆಳವಾದ ಸಂಶೋಧನೆಗಳನ್ನು ನಡೆಸಿದರು. ಶಕ್ತಿಯ ರಚನಾತ್ಮಕ ಸಿದ್ದಾಂತಗಳ ಸೂತ್ರೀಕರಣದಲ್ಲಿ ಅವರ ಸಂಶೋಧನೆಗಳು ಕೇಂದ್ರೀಕರಣಗೊಂಡಿದ್ದವು. ನಕ್ಷಕ್ರಗಳಲ್ಲಿನ ಶಕ್ತಿಯ ಉತ್ಪಾದನೆ ಮತ್ತು ಪ್ರತಿಕ್ರಿಯೆಗಳ ಮೇಲೆ ಇವರ ಸಂಶೋಧನೆ ಮುಂದುವರೆಯಿತು. ಮುಂದೆ ಇವರು “ಖಭೌತ ವಿಜ್ಞಾನ”(ಆಸ್ಟ್ರೋ ಫಿಸಿಕ್ಸ್) ಎಂಬ ಹೊಸ ವಿಜ್ಞಾನದ ಶಾಖೆಯನ್ನು ಸೃಷ್ಟಿಸಿದರು. ‘ನಕ್ಷತ್ರಗಳಲ್ಲಿನ ಶಕ್ತಿಯ ಉತ್ಪಾದನೆ’ಯ ಮೇಲಿನ ಸಂಶೋಧನೆಗಾಗಿ 1967 ರಲ್ಲಿ ಭೌತಶಾಸ್ತ್ರದಲ್ಲಿ ‘ನೊಬೆಲ್’ ಪ್ರಶಸ್ತಿ ದೊರೆಯಿತು. ಇದು ಇವರ ಜೀವಮಾನದ ಸಂಶೋಧನೆಗಾಗಿ ಒದಗಿದ ಮೌಲ್ಯಯುತ ಗೌರವವಾಗಿತ್ತು. ನಂತರ ಅಂತರಾಷ್ಟ್ರೀಯ ರಕ್ಷಣಾತ್ಮಕ ಮತ್ತು ಪರಮಾಣುಗಳ ಸಮಿತಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
    ವಿಜ್ಞಾನದಲ್ಲಿನ ಅಂತರ್ ಶಾಸ್ತ್ರೀಯ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಅವರಿಗೆ ಸಂಪೂರ್ಣ ತೃಪ್ತಿ ನೀಡಿವೆ. ಅನೇಕ ಮಹತ್ತರವಾದ ಸಂಶೋಧನೆಗಳು ಮತ್ತು ಸಿದ್ದಾಂತಗಳಿಗೆ ಸಾಕ್ಷಿ ಪುರಾವೆ  ಒದಗಿಸಿದ ಹಾನ್ಸ್‍ಬೆಥ್ ತಮ್ಮ 98 ನೇ ವಯಸ್ಸಿನಲ್ಲಿ ಅಂದರೆ 2005 ರ ಮಾರ್ಚ 6 ರಂದು ಹೃದಯಸ್ಥಂಬನದಿಂದ ನಿಧನರಾದರು. ಅಂದು ಇಡೀ ವಿಶ್ವವೇ ಕಂಬನಿ ಮಿಡಿಯಿತು.
                                                                                                                          ಆರ್.ಬಿ.ಗುರುಬಸವರಾಜ.