November 30, 2016

ಬಲಗೊಳ್ಳಲಿ ಶಾರೀರಿಕ ಶಿಕ್ಷಣ STRENGTHENING PHYSICAL EDUCATION

ದಿನಾಂಕ 26-09-2016ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಬಲಗೊಳ್ಳಲಿ ಶಾರೀರಿಕ ಶಿಕ್ಷಣ

ನೆಪ ಹೇಳಬೇಡಿ NEPASITIES

ದಿನಾಂಕ 12-10-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಕುಂಟುನೆಪ ತೋರದಿರಿ

ನಂಬಿಕೆಯ ನಿಗೂಢತೆ EFFECTS OF TRUST

ದಿನಾಂಕ 30-08-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ

ನಂಬಿಕೆಯ ನಿಗೂಢತೆ


ಗುಹೆ ಗಮ್ಮತ್ತು CAVES

ದಿನಾಂಕ 30-07-2016ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಗುಹೆ ಗಮ್ಮತ್ತು



June 3, 2016

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ MODEL TEACHER KOTRESH

ದಿನಾಂಕ 26-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕುಗ್ರಾಮದಲ್ಲೊಬ್ಬ ಆದರ್ಶ ಶಿಕ್ಷಕ 


ಬಿರುಬಿಸಿಲಿಗೆ ಹೆಸರುವಾಸಿಯಾದ ರಾಯಚೂರು ಜಿಲ್ಲೆಯಲ್ಲೊಂದು ಖಾಸಗೀ ಹಾಗೂ ಮಲೆನಾಡ ಶಾಲೆಗಳನ್ನು ಮೀರಿಸುವಂತಹ ಶಾಲೆಯೊಂದಿದೆ. ಅದುವೇ ಸಿಂಧನೂರು ತಾಲೂಕಿನ ಕುಗ್ರಾಮ ಗೊಣ್ಣಿಗನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.  ಈಗ ಅಲ್ಲಿ 300 ಕ್ಕೂ ಹೆಚ್ಚಿನ ಮರಗಳು ಫಲ ಮತ್ತು ನೆರಳು ನೀಡಲು ಸಜ್ಜಾಗಿವೆ. ಇದಕ್ಕಿಂತ ಮುಖ್ಯವಾಗಿ ಇಡೀ ಗ್ರಾಮವೀಗ ಬಯಲು ಶೌಚಮುಕ್ತ, ಹೊಗೆ ರಹಿತ ಗ್ರಾಮ ಹಾಗೂ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ. ಇದೆಲ್ಲಾ ಒಬ್ಬ ಶಿಕ್ಷಕನಿಂದ ಎಂದರೆ ಆಶ್ಚರ್ಯವಾಗುತ್ತದೆ. ನಂಬಲು ಅಸಾಧ್ಯ ಎನ್ನುವಂತಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕರಾದ ಕೊಟ್ರೇಶ್ ಹಿರೇಮಠ ಅವರೇ ಸಾಕ್ಷಿ. 
2004ಕ್ಕೂ ಮುಂಚೆ ಅದನ್ನು ಶಾಲೆ ಎನ್ನುವಂತಿರಲಿಲ್ಲ. ಕಟ್ಟಡದ ಸುತ್ತ ಬೆಳೆದ ಮುಳ್ಳು ಕಂಟೆಗಳು, ಕಳೆ ಗಿಡಗಳು, ಕಸದ ತಿಪ್ಪೆಗಳು, ಚರಂಡಿ ನೀರಿನ ಗುಂಡಿಗಳು. ಅಕ್ಷರಶಃ ಅದು ಶಾಲೆ ಎನ್ನುವ ಬದಲು ಪಾಳು ಕಟ್ಟಡ ಎನ್ನುವಂತಿತ್ತು. ಇಷ್ಟೆಲ್ಲಾ ಸಮಸ್ಯೆಗಳಿರುವ ಶಾಲೆಗೆ 2004ರಲ್ಲಿ ಹೊಸದಾಗಿ ಕೊಟ್ರೇಶ್ ಅವರು ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ಇವರನ್ನು ಸೇವೆಗೆ ಸೇರಿಕೊಳ್ಳಲು ಇನ್ನೊಬ್ಬ ಶಿಕ್ಷಕರೂ ಸಹ ಇಲ್ಲ. 
       ಇಂತಹ ಶಾಲೆಯ ವಾತಾವರಣ ನೋಡಿದ ಶಿಕ್ಷಕರಿಗೆ ಶಾಲೆಯ ಸಹವಾಸವೇ ಬೇಡ, ನೌಕರಿಯೂ ಬೇಡ ಎನ್ನಿಸಿತು. ಆದರೂ ಗಟ್ಟಿ ಮನಸ್ಸು ಮಾಡಿ ಸುಂದರ ಶಾಲೆಯನ್ನಾಗಿಸುವ ಪಣ ತೊಡುತ್ತಾರೆ. ಯೋಜನೆ ಸಿದ್ದ ಪಡಿಸುತ್ತಾರೆ. ಶ್ರಮವಹಿಸಿ ಶ್ರದ್ದೆಯಿಂದ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. 
ಸಮುದಾಯದ ಸಹಭಾಗಿತ್ವ
              ಶಾಲೆಯ ಸುತ್ತಮುತ್ತ ಇದ್ದ ಮೇವಿನ ಬಣವೆ, ತಿಪ್ಪೆಗಳನ್ನು ತೆರವುಗೊಳಿಸುವುದು ಸವಾಲಾಗಿತ್ತು. ತೆರವುಗೊಳಿಸುವಾಗ ಕೆಲವು ವೇಳೆ ಅವುಗಳ ಮಾಲೀಕರೊಂದಿಗೆ ವಾಗ್ವಾದವೂ ನಡೆದಿತ್ತು. ಆದರೂ ದೃತಿಗೆಡದೇ ಸಮುದಾಯದ ಸಹಕಾರ ಪಡೆದು ಬಣವೆ ತಿಪ್ಪೆಗಳನ್ನು ತೆರವುಗೊಳಿಸುವಲ್ಲಿ ಸಫಲರಾದರು. ಒತ್ತುವರೆಯಾಗಿದ್ದ 240ಚ.ಮೀ ಶಾಲಾ ಜಾಗವನ್ನು ಮರುವಶಪಡಿಸಿಕೊಂಡ ನಂತರ ತಂತಿಬೇಲಿ ನಿರ್ಮಿಸಿದರು. 2006ರಲ್ಲಿ ಶಾಲಾ ಆವರಣಕ್ಕೊಂದು ನಿಶ್ಚಿತ ಎಲ್ಲೆ ಹಾಗೂ ಭದ್ರತೆ ದೊರೆತ ಮೇಲೆ ಗಿಡಗಳನ್ನು ನೆಡಲು ಪ್ರಾರಂಭಿಸಿದರು. ನೀರಿನ ಕೊರತೆಯಿಂದ ಗಿಡಗಳನ್ನು ಬೆಳೆಸುವುದು ತೊಂದರೆಯಾಗಿತ್ತು. ವಿದ್ಯಾರ್ಥಿಗಳಿಂದ ಗಿಡಗಳಿಗೆ ನೀರುಣಿಸುವುದು ಸಮಸ್ಯೆಯಾದಾಗ ಗ್ರಾಮಸ್ಥರ ಸಹಕಾರದಿಂದ 2008ರಲ್ಲಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರು. 
       ಅಂತೆಯೇ ಮಕ್ಕಳಿಗೆ ಬಿಸಿಯೂಟಕ್ಕಾಗಿ ತಟ್ಟೆಲೋಟ ಸಂಗ್ರಹಿಸಿದರು. ಎಲ್ಲಾ ಮಕ್ಕಳಿಗೂ ಶಾಲಾ ಬ್ಯಾಗ್, ನೋಟ್ ಪುಸ್ತಕ, ಕಲರ್ ಪೆನ್ಸ್, ಟೈ-ಬೆಲ್ಟ್, ಕಂಪ್ಯೂಟರ್, ಟಿ.ವಿ, ಡೆಸ್ಕ್, ಪರೀಕ್ಷೆ ಬರೆಯಲು ಪ್ಯಾಡ್‍ಗಳನ್ನೂ ದಾನಿಗಳಿಂದ ಸಂಗ್ರಹಿಸಿದ್ದಾರೆ. ಏಕೋಪಾಧ್ಯಾಯ ಶಿಕ್ಷಕರಾದ ಕೊಟ್ರೇಶ್ ಅವರು ಬೋಧನೆಯಲ್ಲೂ ವಿಶಿಷ್ಠತೆ ಮೆರೆದಿದ್ದಾರೆ. ಪ್ರತಿವರ್ಷವೂ ಶೇಕಡಾ70 ರಷ್ಟು 5ನೇ ತರಗತಿ ಮಕ್ಕಳು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ, ನವೋದಯದಂತಹ ವಿವಿಧ  ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ. 
ಬದಲಾಯಿತು ಇಡೀ ಹಳ್ಳಿಯ ಚಿತ್ರಣ
         ಅಂದು ಕುಗ್ರಾಮ ಎಂಬ ಕುಖ್ಯಾತಿ ಹೊಂದಿದ್ದ ಗೊಣ್ಣಿಗನೂರು ಇಂದು ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಮಾದರಿ ಗ್ರಾಮವಾಗಲು ಸಜ್ಜಾಗುತ್ತಿದೆ. ಪ್ರಸ್ತುತ ಗ್ರಾಮದಲ್ಲಿ 92 ಮನೆಗಳಿದ್ದು, ಸಿಂಧನೂರಿನ ರುದ್ರಗೌಡ ಪಾಟೀಲ್ ಪ್ರತಿಷ್ಠಾನದ ನೆರವಿನೊಂದಿಗೆ  ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಣೆಯಾಗಿದೆ. ಈ ಘೋಷಣೆ ಕೇವಲ ದಾಖಲೆಯಲ್ಲಿ ಅಲ್ಲ. ಪ್ರತಿ ಕುಟುಂಬಗಳು ಶೌಚಾಲಯ ಬಳಸುತ್ತಿದ್ದಾರೆ. ಅಂತೆಯೇ ಸಿಂಧನೂರಿನ ಸೆಲ್ಕೋ ಸೋಲಾರ್ ನೆರವಿನೊಂದಿಗೆ ಪ್ರತೀ ಮನೆಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಪೂರ್ಣಗೊಂಡಿದೆ. ಅಲ್ಲದೇ ಸಿಂಧನೂರಿನ ಶ್ರೀಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸೀಸ್ ಇವರ ಸಹಕಾರದಿಂದ ಇಡೀ ಗ್ರಾಮ ಹೊಗೆ ಮುಕ್ತ ಗ್ರಾಮವಾಗಿದೆ. ಈಗಾಗಲೇ ಗ್ರಾಮದಲ್ಲಿ ಸಂಪೂರ್ಣ ಚರಂಡಿ ವ್ಯವಸ್ಥೆ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆಗಳು ಪ್ರಗತಿಯಲ್ಲಿವೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಶಿಕ್ಷಕರಿಂದ ಎಂಬುದು ಗ್ರಾಮಸ್ಥರ ಅಭಿಮತ. 
ಪಬ್ಲಿಕ್ ಹೀರೋ
             ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿ ಗ್ರಾಮದವರಾದ ಕೊಟ್ರೇಶ್ ಅವರು ಕೇವಲ ಸಾಮಾನ್ಯ ಶಿಕ್ಷಕರಲ್ಲ. ಅವರೊಬ್ಬ ಪಬ್ಲಿಕ್ ಹೀರೋ ಆಗಿ ರೂಪುಗೊಂಡಿದ್ದಾರೆ. ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉದಾರ ಸಹಾಯ ಮಾಡಿದ್ದಾರೆ. ಎಂ.ಎ, ಬಿ.ಇಡಿ ಪದವಿ ಪಡೆದ ಅವರು ಈಗಲೂ ಗ್ರಾಮದ ಉನ್ನತ ವ್ಯಾಸಂಗದಲ್ಲಿ ತೊಡಗಿದ ಮಕ್ಕಳಿಗೆ ಉಚಿತ ಮನೆಪಾಠ ಮಾಡುವ ಮೂಲಕ ಅವರ ಭವಿಷ್ಯದ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಿದ್ದಾರೆ.  ಶಿಕ್ಷಕರ ಸೇವೆಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸದ್ರಿ ಶಿಕ್ಷಕರಿಗೆ 2015ರಲ್ಲಿ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಪಬ್ಲಿಕ್ ಚಾನಲ್‍ನವರು ದಿನಾಂಕ 17-03-2016 ರಂದು ‘ಪಬ್ಲಿಕ್ ಹೀರೋ’ ಕಾರ್ಯಕ್ರಮದಲ್ಲಿ ಇವರ ಸೇವೆಯ ಬಗ್ಗೆ ಕಾರ್ಯಕ್ರಮ ಭಿತ್ತರಿದ್ದಾರೆ. ಈ ಕಾರ್ಯಕ್ರಮದ ನಂತರ ಶಾಲೆಗೆ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಚೆಕ್, ಡಿ.ಡಿಗಳ ಮೂಲಕ ಹಣವನ್ನು ಅಥವಾ ಅವಶ್ಯಕ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಲಿದ್ದಾರೆ. ಜೊತೆಗೆ ಗ್ರಾಮಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತಾರೆ  ಗ್ರಾಮಸ್ಥರು. ಗುಡಿಸಲು ಮುಕ್ತ ಗ್ರಾಮವನ್ನಾಗಿಸಲುವ ಭವಿಷ್ಯದ ಯೋಜನೆ ಕೊಟ್ರೇಶ್ ಹಿರೇಮಠ ಅವರದು. ಹೀಗೆ ವಿಭಿನ್ನ ವ್ಯಕ್ತಿತ್ವದ ಮೂಲಕ ಕೊಟ್ರೇಶ್ ಇತರರಿಗೆ ಪ್ರೇರಣೆಯಾಗಿದ್ದಾರೆ. 
ಆರ್.ಬಿ.ಗುರುಬಸವರಾಜ

ಕೇಶ ರಕ್ಷಣೆಗೆ ಹಾಗಲಕಾಯಿ ಜ್ಯೂಸ್

ದಿನಾಂಕ 23-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಕೇಶ ರಕ್ಷಣೆಗೆ  ಹಾಗಲಕಾಯಿ ಜ್ಯೂಸ್


ಆಯುರ್ವೇದ ವೈದ್ಯ ಪದ್ದತಿಯಲ್ಲಿ ಹಾಗಲಕಾಯಿ ತನ್ನದೇ ಆದ ಪ್ರಮುಖ ಸ್ಥಾನ ಪಡೆದಿದೆ. ಇದು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಸಿಹಿಯನ್ನುಂಟು ಮಾಡುತ್ತದೆ. ಮಧುಮೇಹಿ ರೋಗಿಗಳಿಗಂತೂ ಹಾಗಲಕಾಯಿ ಅತ್ಯುತ್ತಮ ತರಕಾರಿಯಾಗಿದೆ.
‘ಮೊಮೊರ್ಡಿಕಾ ಚಾರಂಟಿಯಾ’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಹಾಗಲಕಾಯಿ ಹೆಚ್ಚಾಗಿ ಏಷಿಯಾ, ದಕ್ಷಿಣ ಅಮೇರಿಕಾ ಹಾಗೂ ಆಫ್ರಿಕಾದ ಉಷ್ಣವಲಯಗಳಲ್ಲಿ ದೊರೆಯುತ್ತದೆ. ಇದು ಭಾರತ ಮೂಲದ ತರಕಾರಿಯಾಗಿದ್ದು ಚೀನಾಕ್ಕೆ ವಲಸೆ ಹೋಯಿತು. ನಂತರ ಅಲ್ಲಿಂದ ವಿವಿಧ ರಾಷ್ಟ್ರಗಳಿಗೆ ಪ್ರಸಾರವಾಯಿತು.
ಹಾಗಲಕಾಯಿ ಕೇವಲ ಚರ್ಮ ಮತ್ತು ಉತ್ತಮ ಆರೋಗ್ಯಕ್ಕೆ ಅಲ್ಲದೇ ಕೂದಲಿನ ವಿವಿಧ ಸಮಸ್ಯೆಗಳಿಗೂ ಸೂಕ್ತ ಔಷಧವಾಗಿದೆ. ಈ ಕುರಿತ ಒಂದಷ್ಟು ಟಿಪ್ಸ್ ಇಲ್ಲಿವೆ.
ಕಪ್ಪು ಕೂದಲಿಗಾಗಿ : ಕೂದಲಿನ ಕಪ್ಪು ಬಣ್ಣವನ್ನು ಕಾಪಾಡಲು ಮತ್ತು ನಯವಾದ ಕೂದಲನ್ನು ಪಡೆಯಲು ಹಾಗಲಕಾಯಿ ರಸ ಅತ್ಯುತ್ತಮವಾದುದು. 
ಬೇಕಾಗುವ ಸಾಮಗ್ರಿಗಳು: (1)ಅಡುಗೆ ಎಣ್ಣೆ (2)ಹಾಗಲಕಾಯಿ (3) ಕೊಬ್ಬರಿ ಎಣ್ಣೆ
ವಿಧಾನ : ಒಂದು ಹಾಗಲಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಕತ್ತರಿಸಿ 4 ಚಮಚ ಅಡುಗೆ ಎಣ್ಣೆಯಲ್ಲಿ ಹಾಕಿ 4 ದಿನಗಳವರೆಗೆ ನೆನೆಯಲು ಬಿಡಿ. 4 ದಿನಗಳ ನಂತರ ಎಣ್ಣೆಯಲ್ಲಿನ ಹೋಳುಗಳನ್ನು ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಅದು ತಣ್ಣಗಾದ ನಂತರ ಕೊಬ್ಬರಿ ಎಣ್ಣೆ ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ತಲೆಗೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ಕೂದಲನ್ನು ಸ್ವಚ್ಚವಾಗಿ ತೊಳೆಯಬೇಕು. ನಿಯಮಿತವಾಗಿ ಈ ಪ್ರಕ್ರಿಯೆ ಪುನರಾವರ್ತಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಕೂದಲು ಉದುರುವುದನ್ನು ತಡೆಯಲು :  ಸ್ವಚ್ಚವಾಗಿ ತೊಳೆದ ಹಾಗಲಕಾಯಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಸ್ವಲ್ಪ ನೀರನ್ನು ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟನ್ನು ನೆತ್ತಿಯ ಭಾಗಕ್ಕೆ ಅಥವಾ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು. 15-20 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
ತಲೆಹೊಟ್ಟು ನಿವಾರಿಸಲು : ಇಂದಿನ ಆಹಾರ ಸೇವನೆಯ ಪದ್ದತಿಗಳಿಂದ ತಲೆಹೊಟ್ಟು ಸಾಮಾನ್ಯವಾದ ಕೂದಲಿನ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಹಾಗಲಕಾಯಿ ಉತ್ತಮ ಪರಿಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು: (1) ಹಾಗಲಕಾಯಿ (2) ಜೀರಿಗೆ
ವಿಧಾನ : ಮೊದಲು ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ರುಬ್ಬಿ ಕಾಲು ಕಪ್ ರಸ ತಯಾರಿಸಿಕೊಳ್ಳಿ. ಅದಕ್ಕೆ 2 ಚಮಚ ಜೀರಿಗೆ ಪುಡಿಯನ್ನು ಚೆನ್ನಾಗಿ ಕಲಸಿ ಲತೆಗೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಪ್ರಕ್ರಿಯೆ ಮುಂದುವರೆಸಿ. ಉತ್ತಮ ಫಲಿತಾಂಶ ದೊರೆಯುತ್ತದೆ.
ಒರಟು ಕೂದಲಿನಿಂದ ಮುಕ್ತಿ ಪಡೆಯಲು : ತಾಜಾ ಹಾಗಲಕಾಯಿಯ ಪೇಸ್ಟನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಸ್ವಚ್ಚವಾದ ನೀರಿನಿಂದ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ನಯವಾದ ಕೂದಲನ್ನು ಹೊಂದುತ್ತೀರಿ.
ಬಾಲನೆರೆ ತಡೆಯಲು : ಹಾಗಲಕಾಯಿ ರಸವನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತಲೆಸ್ನಾನ ಮಾಡಬೇಕು. 10 ದಿನಗಳಿಗೊಮ್ಮೆ ಈ ಪ್ರಕ್ರಿಯೆ ಪುನರಾವರ್ತನೆ ಮಾಡುವುದರಿಂದ ಬಾಲನೆರೆ ತಡೆಯಬಹುದು.
ಹೊಳೆಯುವ ಕೂದಲಿಗಾಗಿ : ಒಂದು ಕಪ್ ಹಾಗಲಕಾಯಿ ರಸಕ್ಕೆ ಸ್ವಲ್ಪ ಮೊಸರು ಸೇರಿಸಿ ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ನಂತರ ಕೂದಲನ್ನು ಚೆನ್ನಾಗಿ ತೊಳೆಯಬೇಕು. ತಿಂಗಳಿಗೆ 2 ಬಾರಿ ಈ ರೀತಿ ಮಾಡುವುದರಿಂದ ಹೊಳೆಯುವ ರೇಶಿಮೆಯಂತಹ ಕೂದಲು ನಿಮ್ಮದಾಗುತ್ತದೆ.

ಆರ್.ಬಿ.ಗುರುಬಸವರಾಜ.


ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ EXAM PREPARE

ಏಪ್ರಿಲ್ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಕಿರುಬರಹ

ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ


ವರ್ಷಾಂತ್ಯಕ್ಕೆ ನಡೆಯುವ ಪರೀಕ್ಷೆ ಕೇವಲ ಮಕ್ಕಳ ಭವಿಷ್ಯಕ್ಕೆ ಅಲ್ಲ. ಅದು ಶಿಕ್ಷಕರ ಹಾಗೂ ಶಾಲಾ ಪರಿಸರಗಳ ಗುಣಮಟ್ಟದ ಪ್ರತೀಕ ಎಂದರೆ ತಪ್ಪಲ್ಲ. ಇತ್ತೀಚೆಗೆ ವಾರ್ಷಿಕ ಫಲಿತಾಂಶವೇ ಶಾಲಾ ಮಾನಕಗಳಾಗಿರುವುದು ನಮ್ಮ ದುರ್ದೈವ. ಶಿಕ್ಷಕರಾದ ನಾವು ಈ ವ್ಯವಸ್ಥೆಗೆ ಹೊಂದಿಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಅನಿವಾರ್ಯ. 
ಪ್ರಸ್ತುತ ಶಿಕ್ಷಕರ ಮುಂದಿರುವ ಬಹುದೊಡ್ಡ ಸವಾಲು ಎಂದರೆ ಉತ್ತಮ ಫಲಿತಾಂಶದೊಂದಿಗೆ ಶಾಲೆಯನ್ನು ಮುನ್ನಡೆಸುವುದು. ಉತ್ತಮ ಫಲಿತಾಂಶ ಪಡೆಯಲು ಮಕ್ಕಳನ್ನು ಪರೀಕ್ಷೆಗೆ ಉತ್ತಮವಾಗಿ ಸಿದ್ದಪಡಿಸುವುದು ನಮ್ಮೆಲ್ಲರ ಮೇಲಿನ ಗುರುತರ ಹೊಣೆಗಾರಿಕೆಯಾಗಿದೆ. ವರ್ಷದುದ್ದಕ್ಕೂ ಕಲಿಕೆ-ಬೋಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರೂ ಪರೀಕ್ಷೆಯ ವೇಳೆ ಯಾವ ಮಕ್ಕಳ ಫಲಿತಾಂಶ ಏನಾಗುವುದೋ ಎಂಬ ಆತಂಕ ಸಹಜ. ಈ ಆತಂಕ ನಿವಾರಣೆಗಾಗಿ ಪ್ರತಿಯೊಬ್ಬ ಶಿಕ್ಷಕರೂ ಕೆಲವು ಯೋಜಿತ ತಂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. 
ಫೆಬ್ರವರಿ ಅಂತ್ಯದ ವೇಳೆಗೆ ಪ್ರತೀ ಮಗುವಿನ ಕಲಿಕೆಯ ಅಂದಾಜು ಮಟ್ಟ ನಮಗೆ ತಿಳಿದಿರುತ್ತದೆ. ಕಲಿಕೆಯ ಪರಿಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಮಾನಸಿಕ ಮತ್ತು ಬೌದ್ದಿಕ ಮಟ್ಟಕ್ಕನುಗುಣವಾಗಿ ಮಕ್ಕಳಿಗೆ ಸ್ವಾವಲೋಕನ ಕಾರ್ಡ್‍ಗಳನ್ನು ತಯಾರಿಸಬೇಕು. ಅವುಗಳನ್ನು ಮಕ್ಕಳಿಗೆ ನೀಡಿ ಅವರ ಕಲಿಕಾ ಮಟ್ಟವನ್ನು ಅವರೇ ಕಂಡುಕೊಳ್ಳಲು ಯೋಜನೆ ರೂಪಿಸಿಬೇಕು. ಇದು ತೀರಾ ಸಂಕೀರ್ಣ ಎನಿಸಿದರೂ ಪ್ರತೀ ಮಗುವೂ ತನ್ನ ಸಾಮಥ್ರ್ಯ ತಿಳಿದು ಪರೀಕ್ಷೆ ಎದುರಿಸಲು ಸಿದ್ದತೆ ನಡೆಸಲು ಇದು ಸಹಕಾರಿ. 
ಪ್ರತೀ ಮಕ್ಕಳ ಕಲಿಕಾ ಮಟ್ಟ ತಿಳಿದ ನಂತರ ಅವರನ್ನು ನಿಗದಿತ ಗುಂಪುಗಳಾಗಿ ವಿಂಗಡಿಸಿ. ಗುಂಪುವಾರು ಅಧ್ಯಯನಕ್ಕೆ ಆಧ್ಯತೆ ನೀಡಿ. ಮೇಲುಸ್ತುವಾರಿ ವಹಿಸುತ್ತಾ ಮಾರ್ಗದರ್ಶನ ನೀಡಿ. ಸಮಯ ಹೊಂದಾಣಿಕೆ ಮಾಡಿಕೊಂಡು ಪೂರ್ಣಗೊಳಿಸಿದ ಘಟಕಗಳನ್ನು ಪುನರಾರ್ತನೆಗೊಳಿಸಿ. ಕೆಲವು ಮಕ್ಕಳಿಗೆ ಪುನರಾವರ್ತನೆ ಬೇಜಾರಾಗಬಹುದು. ಇದನ್ನು ನಿವಾರಿಸಲು ದೈನಂದಿನ ಸಾಮಾನ್ಯ ಬೋಧನೆಗಿಂತ ವಿಭಿನ್ನವಾದ ತಂತ್ರಗಾರಿಕೆ ಬಳಸಿ. ಕಲಿತ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಲು ಪುನರಾವರ್ತನೆ ತುಂಬಾ ಸಹಕಾರಿ. 
ಪರೀಕ್ಷೆ ಪ್ರಾರಂಭಕ್ಕೂ ಒಂದು ತಿಂಗಳು ಮುನ್ನವೇ ಅದರ ಭಯ ನಮ್ಮಲ್ಲಿ ಆವರಿಸುವುದು ಸಹಜ. ಸಿಲಬಸ್ ಮುಗಿಸಿಲ್ಲ ಎಂಬ ಬಗ್ಗೆಯಾಗಲೀ, ಮಕ್ಕಳು ಹೇಗೆ ಉತ್ತರಿಸುತ್ತಾರೋ ಎಂಬ ಬಗ್ಗೆಯಾಗಲೀ ಭಯಭೀತರಾಗಿರುವುದು ಯಾವುದೇ ಕಾರಣಕ್ಕೂ ಮಕ್ಕಳಿಗೆ ತಿಳಿಯಬಾರದು. ಪರೀಕ್ಷೆಯ ಭಯ ನಮ್ಮನ್ನು ಆವರಿಸಿರುವುದು ಮಕ್ಕಳಿಗೆ ತಿಳಿದರೆ ಅವರು ಅಧೀರರಾಗುವ ಸಂಧರ್ಭ ಇರುತ್ತದೆ. ಮೊದಲು ನಮ್ಮಲ್ಲಿನ ಭಯ ಬಿಟ್ಹಾಕಿ ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸೋಣ. 
ನಿತ್ಯವೂ ಮಕ್ಕಳಿಗೆ ನಿಗದಿತ ಕಲಿಕಾ ಗುರಿಗಳನ್ನು ನೀಡುವುದು ಒಂದು ಉತ್ತಮ ಪ್ರಯತ್ನ. ವಾಸ್ತವಾಂಶಗಳಿಂದ ಕೂಡಿದ, ಮಕ್ಕಳು ನಿರ್ವಹಿಸಲು  ಸಾಧ್ಯವಿರುವ ಗುರಿಗಳನ್ನು ನೀಡಬೇಕು. ಗುರಿ ಸಾಧಿಸಿದಾಗ ಅವರನ್ನು ಪ್ರಶಂಸಿಸಿ ಭಾವನಾತ್ಮಕವಾಗಿ ಸದೃಢಗೊಳಿಸಿ. ಆಗ ಇತರೇ ಮಕ್ಕಳಲ್ಲಿಯೂ ಸ್ವಾಭಿಮಾನದ ಕಿಚ್ಚು ಹೆಚ್ಚುತ್ತದೆ. ತಾವೂ ಇತರರಂತೆ ಮುಂದೆ ಬರಲು ಪ್ರಯತ್ನಿಸುತ್ತಾರೆ. ಇದರಿಂದ ಅವರಲ್ಲಿ ಪರೀಕ್ಷಾ ಭಯ ಹಿಮ್ಮೆಟ್ಟುತ್ತದೆ. 
ಮಕ್ಕಳಿಗೆ ಪರೀಕ್ಷೆಯ ವೇಳೆ ಅವರ ವಾಸ್ತವಿಕ ಕಲಿಕಾ ಮಟ್ಟವನ್ನು ತಿಳಿಸಿ. ಯಾವುದೇ ಕಾರಣಕ್ಕೂ ಅವರ ಕಲಿಕೆಯ ಮಟ್ಟವನ್ನು ಮರೆಮಾಚಬೇಡಿ. ತಮ್ಮ ನಿರೀಕ್ಷೆಗಳನ್ನು ಕಲಿಕಾ ಮಟ್ಟದೊಂದಿಗೆ ಹೋಲಿಸಿ ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕಾರಿಯಾಗುತ್ತದೆ. ಬಾಹ್ಯ ಒತ್ತಡ ಅಥವಾ ಆಮಿಷಗಳಿಂದ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸುತ್ತದೆ. 
ಶಾಲೆಯಲ್ಲಿನ ಪ್ರತಿ ಸಹುದ್ಯೋಗಿಯೂ ಒಂದು ಅಮೂಲ್ಯ ನಿಧಿ ಇದ್ದಂತೆ. ಸದಾ ನಮ್ಮ ಬಳಿ ಇರುವ ಈ ನಿಧಿಯ ಸದ್ಭಳಕೆ ಮಾಡಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು. ಬೋಧನಾ ವಿಧಾನ, ಮೌಲ್ಯಮಾಪನ ತಂತ್ರಗಳು, ಬಳಸಬಹುದಾದ ಆಕರಗಳು ಇತ್ಯಾದಿ ವಿಷಯಗಳನ್ನು ಸಹುದ್ಯೋಗಿಗಳೊಂದಿಗೆ ಚರ್ಚಿಸಿ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. 
ಪರೀಕ್ಷೆಗೆ ಮಕ್ಕಳನ್ನು ಸಿದ್ದ ಪಡಿಸುವುವಾಗ ಪ್ರತೀ ವಿಷಯದ ಮೂಲಾಂಶಗಳನ್ನು ಮನದಟ್ಟು ಮಾಡಿಸಬೇಕು. ಮೂಲಾಂಶಗಳ ಬಳಕೆಯಿಂದ ಅನ್ವಯಿಕ ಪ್ರಶ್ನೆಗಳಿಗೆ ತಾರ್ಕಿಕವಾಗಿ ಉತ್ತರಿಸುವ ಕಲೆಯನ್ನು ಅಭಿವೃದ್ದಿ ಪಡಿಸಬೇಕು. ಒಬ್ಬ ಮೌಲ್ಯಮಾಪಕರಾಗಿ ಮಕ್ಕಳಿಂದ ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನೇ ನಮ್ಮ ತರಗತಿಯ ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಕೈಬರಹದ ದೋಷಗಳನ್ನು ಸರಿಪಡಿಸಿ, ಸ್ಪುಟವಾಗಿ ಸುಂದರವಾಗಿ ಬರೆಯುವ ಕಲೆಯನ್ನು ಅಭಿವೃದ್ದಿಪಡಿಸಿ. ಕಾಗುಣಿತ, ಒತ್ತಾಕ್ಷರಗಳು, ಚಿಹ್ನೆಗಳು, ವ್ಯಾಕರಣಾಂಶಗಳು, ಸೂತ್ರಗಳು, ಚಿತ್ರಗಳು ಇತ್ಯಾದಿಗಳನ್ನು ದೋಷರಹಿತವಾಗಿ ಬರೆಯುವ ಅಭ್ಯಾಸ ಮಾಡಿಸಬೇಕು.
ಮಕ್ಕಳು ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೆಂಬ ಧಾವಂತದಲ್ಲಿ ಮಾರ್ಚ್ ತಿಂಗಳಲ್ಲಿ ದಿನವೂ ಪರೀಕ್ಷೆ ನಡೆಸುವ ಪರಿಪಾಠ ಬೆಳೆದು ಬಂದಿದೆ. ಇದು ನಿಲ್ಲಬೇಕು. ಪರೀಕ್ಷೆಗಾಗಿ ಪರೀಕ್ಷೆ ನಡೆಸದೇ ಮಕ್ಕಳನ್ನು ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ಪರೀಕ್ಷೆಗಳಿಗೆ ಸಿದ್ದಪಡಿಸಬೇಕು. ಕ್ವಿಜ್, ಗುಂಪುಚರ್ಚೆ, ಪ್ರಶ್ನೋತ್ತರ ಮಾಲಿಕೆ ಇತ್ಯಾದಿಗಳಿಂದ ಮಕ್ಕಳ ಕಲಿಕೆಯನ್ನು ದೃಢಪಡಿಸಬೇಕು. 
ಪರೀಕ್ಷೆಯ ವೇಳೆ ಪ್ರತೀ ಮಗುವಿನ ಆರೋಗ್ಯದ ಕಡೆಗೂ ಗಮನ ನೀಡಬೇಕು. ಮುಖ್ಯವಾಗಿ ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು. ಒತ್ತಡ  ನಿವಾರಿಸಿ ಮಾನಸಿಕ ಸ್ಥೈರ್ಯ ತುಂಬಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮತ್ತು ಅಗತ್ಯ ನಿದ್ರೆ ಮಾಡುವಂತೆ ಸಲಹೆ ನೀಡಬೇಕು. 
ಇವೆಲ್ಲಕ್ಕಿಂತ ಮುಖ್ಯವಾಗಿ ಪಾಲಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದೂ ಮುಖ್ಯ. ತರಗತಿ ಮಕ್ಕಳ ಕಲಿಕೆಯ ಬಗ್ಗೆ ನಿಮಯಮಿತವಾಗಿ ಪಾಲಕರೊಂದಿಗೆ ಚರ್ಚಿಸಬೇಕು. ಮಕ್ಕಳ ಕಲಿಕೆಯಲ್ಲಿ ಅವರೂ ಪಾಲುದಾರರು ಎಂಬ ಅಂಶವನ್ನು  ಮನವರಿಕೆ ಮಾಡಬೇಕು ಹಾಗೂ ತಮ್ಮ ಮಕ್ಕಳ ಕಲಿಕೆಯ ಮೇಲೆ ನಿಗಾವಹಿಸಲು ತಿಳಿಸಬೇಕು. ಆಧುನಿಕ ತಂತ್ರಜ್ಞಾನದ ಪರಿಕರಗಳಾದ ಟಿ.ವಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಂದ ಮಕ್ಕಳನ್ನು ದೂರ ಇಡಲು ಕಿವಿಮಾತು ಹೇಳಬೇಕು.
ಮೇಲಿನ ಕೆಲವು ಅಂಶಗಳಲ್ಲದೇ ಇನ್ನಿತರೇ ಉತ್ತಮಾಂಶಗಳನ್ನು ಅಳವಡಿಸಿಕೊಂಡು ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸಬೇಕಾದ ಅವಶ್ಯಕತೆ ಇದೆ. ಅನಾರೋಗ್ಯಕರ ಪ್ರಯತ್ನಗಳು ನಮ್ಮನ್ನು ಅದಃಪತನಕ್ಕೆ ನೂಕುತ್ತವೆ ಎಂಬ ಅರಿವು ನಮ್ಮಲ್ಲಿರಲಿ. ಆರೋಗ್ಯಕರ ಪ್ರಯತ್ನಗಳು ಮಾತ್ರ ನಮ್ಮನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಆರೋಗ್ಯಕರ ಪ್ರಯತ್ನಗಳನ್ನು ಕೈಗೊಳ್ಳುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ಬೆಂಬಲಿಸೋಣ. ಆ ಮೂಲಕ ಮೌಲ್ಯವರ್ಧಿತ ಸಮಾಜಕ್ಕೆ ಮುನ್ನುಡಿ ಬರೆಯೋಣ.

ಆರ್.ಬಿ.ಗುರುಬಸವರಾಜ

May 16, 2016

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು

ದಿನಾಂಕ 16-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.

ಇಟ್ಟಿಗೆ ಗೂಡಲ್ಲಿ ಗಟ್ಟಿಗೊಂಡ ಬದುಕು


ಪ್ರತಿಯೊಬ್ಬರಿಗೂ ಒಂದು ಒಳ್ಳೆ ಮನೆ ಕಟ್ಟಬೇಕು, ಅದರಲ್ಲಿ ಸುಖವಾದ ಜೀವನ ಸಾಗಿಸಬೇಕೆಂಬ ಹಂಬಲ, ಕನಸು ಇರುವುದು ಸಹಜ. ಈ ಕನಸಿನ ಮಾಯಾಲೋಕದಲ್ಲಿ ವಾಸ್ತವವಾಗಿ  ಮನೆ ಕಟ್ಟಲು ಬೇಕಾಗುವ ಇಟ್ಟಿಗೆ ನಿರ್ಮಾತೃಗಳನ್ನೇ ಮರೆತುಬಿಡುತ್ತೇವೆ.  ಇಟ್ಟಿಗೆ ತಯಾರಕರ ಬದುಕನ್ನು ತೀರಾ ಹತ್ತಿರದಿಂದ ಕಂಡವರು ಬಹಳ ಕಡಿಮೆ. 
ಇಟ್ಟಿಗೆ ಬದುಕು ಕರ್ನಾಟಕದಲ್ಲಿ ಅತೀ ಪ್ರಮುಖ ದುಡಿಮೆ ಹಾಗೂ ವೃತ್ತಿಯಾಗಿದೆ. ಅದರಲ್ಲೂ ಮಧ್ಯ ಕರ್ನಾಟಕ ಎಂದೇ ಖ್ಯಾತಿಯಾದ ದಾವಣಗೆರೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಟ್ಟಿಗೆಯ ನಂಬಿ ಜೀವನ ಸಾಗಿಸುವವರೇ ಹೆಚ್ಚು. ಪ್ರತಿವರ್ಷ ಹರಿಹರದ ಸುತ್ತಮುತ್ತ ಸಾವಿರಾರು ಇಟ್ಟಿಗೆ ಭಟ್ಟಿಗಳು ತಲೆ ಎತ್ತುತ್ತವೆ. ಈ ಭಟ್ಟಿಗಳಲ್ಲಿ ಸಾವಿರಾರು ಕುಟುಂಬಗಳು ತಮ್ಮ ಮುಂದಿನ ಒಂದು ವರ್ಷದ ಜೀವನಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತವೆ. 
ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಮೂರ್ನಾಲ್ಕು ತಿಂಗಳುಗಳಿಗೆ ಬೇಕಾದ ಸಕಲ ವಸತಿ ಸೌಲಭ್ಯ ಒದಗಿಸುವುದು ಹಾಗೂ ಅವರ ಜೀವನ ನಿರ್ವಹಣೆಗೆ ಬೇಕಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇಟ್ಟಿಗೆ ಮಾಲೀಕರಿಗೆ ಸವಾಲಿನ ಕೆಲಸ. ಕೂಲಿಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ ಕೆಲಸಕ್ಕೆ ಖಾಯಂಗೊಳಿಸಿಕೊಳ್ಳುವುದು ಮೊದಲ ಆಧ್ಯತೆ. ಕೆಲವು ಭಟ್ಟಿಗಳಲ್ಲಿ ತಮಿಳುನಾಡು, ಆಂದ್ರಪ್ರದೇಶಗಳಿಂದ ಕೂಲಿ ಆಳುಗಳನ್ನು ಕರೆತರುವುದೂ ಉಂಟು.
ಇಟ್ಟಿಗೆ ತಯಾರಿಕೆಯಲ್ಲಿ ಮಾಲೀಕರು ಮತ್ತು ಕೂಲಿ ಕಾರ್ಮಿಕರರಲ್ಲಿ ಹೊಂದಾಣಿಕೆ ಮುಖ್ಯ. ಇವರಿಬ್ಬರೂ ಸೀಸನ್ ಇಲ್ಲದ ತಿಂಗಳುಗಳಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ನಿರತರಾಗಿದ್ದು, ಸೀಸನ್ ಪ್ರಾರಂಭಕ್ಕೆ ಮುಂಚೆ ಪರಸ್ಪರ ಭೇಟಿ ಮತ್ತು ಮಾತುಕತೆಯೊಂದಿಗೆ ವ್ಯವಹಾರ ಮತ್ತು ವೃತ್ತಿ ಪ್ರಾರಂಭವಾಗುತ್ತದೆ. 
ಸೀಸನ್ ಇಲ್ಲದ ಸಮಯದಲ್ಲಿ ಮಾಲೀಕರು ಇಟ್ಟಿಗೆ ತಯಾರಿಸಲು ಬೇಕಾದ ಮಣ್ಣು, ಮರಳು, ಹೊಟ್ಟು, ಕಲ್ಲಿದ್ದಲು ಇನ್ನಿತರೇ ಸಾಮಗ್ರಿಗಳ ಸಂಗ್ರಹಣೆಯಲ್ಲಿ ನಿರತರಾಗಿರುತ್ತಾರೆ. ಸುಟ್ಟ ಇಟ್ಟಿಗೆಗಳಿಗೆ ಹೆಚ್ಚು ಬೇಡಿಕೆ ಇದೆ. ಅದಕ್ಕನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಕೇವಲ ಕೆಲವೇ ತಿಂಗಳುಗಳ ಉದ್ಯೋಗ ಆಗಿರುವುದರಿಂದ ಬೇಡಿಕೆಗನುಗುಣವಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ. 
ಪ್ರತೀ ಮಾಲೀಕರೂ ಒಂದು ಸೀಸನ್‍ನಲ್ಲಿ ಕನಿಷ್ಟ 5-10 ಲಕ್ಷ ಇಟ್ಟಿಗೆಗಳ ಭಟ್ಟಿ ತಯಾರಿಸುತ್ತಾರೆ. ಒಟ್ಟಾರೆ ಒಂದು ಇಟ್ಟಿಗೆ ತಯಾರಾಗಲು ಕಚ್ಛಾ ಸಾಮಗ್ರಿ ಸಂಗ್ರಹಣೆ, ಕೂಲಿ ಕಾರ್ಮಿಕರ ವೇತನ, ಸುಡಲು ಬೇಕಾದ ಹೊಟ್ಟು ಮತ್ತು ಕಲ್ಲಿದ್ದಲು, ಸಾಮಗ್ರಿಗಳ ಸಾಗಾಣಿಕೆ ಎಲ್ಲಾ ನಿರ್ವಹಣಾ ವೆಚ್ಚ ಸೇರಿ 4-5ರೂ ತಗಲುತ್ತದೆ. ಬೇಡಿಕೆ ಹೆಚ್ಚಾದರೆ ಹೂಡಿದ ಬಂಡವಾಳಕ್ಕಿಂತ ಅಲ್ಪ ಆದಾಯ ದೊರೆಯುತ್ತದೆ. 
ತೀರಾ ಸೀಸನಲ್ ದುಡಿಮೆಯಾದ ಇಟ್ಟಿಗೆ ಬದುಕು ಕೇವಲ ಕೆಲವೇ ತಿಂಗಳುಗಳು ಮಾತ್ರ. ದೀಪಾವಳಿಯ ಆಸುಪಾಸು ಪ್ರಾರಂಭವಾಗುವ ಈ ಬದುಕು ಹೋಳಿ ಹುಣ್ಣಿಮೆಯಲ್ಲಿ ಅಂತ್ಯಗೊಳ್ಳುತ್ತದೆ. ಕೆಲವೊಮ್ಮೆ ಪ್ರಕೃತಿಯ ವಿಕೋಪ ಅಥವಾ ಅಕಾಲಿಕ ಮಳೆಯಿಂದ  ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಇಟ್ಟಿಗೆಯಿಂದ ಕಟ್ಟಿಕೊಂಡ ಬದುಕು ಮೂರಾಬಟ್ಟೆಯಾಗುತ್ತದೆ. ನಷ್ಟ ಅನುಭವಿಸಿದ ಕೆಲ ಮಾಲೀಕರು ಸಾವಿಗೆ ಶರಣಾಗುವುದೂ ಉಂಟು. 
ಬಹುತೇಕ ಇಟ್ಟಿಗೆ ಭಟ್ಟಿಗಳು ಉಳುಮೆ ಜಮೀನಿನಲ್ಲೇ ಪ್ರಾರಂಭವಾಗಿವೆ. ಅಕ್ಕಪಕ್ಕದವರು ಭಟ್ಟಿ ಪ್ರಾರಂಭಿಸಿದ್ದು ಕಂಡು ತಾವೂ ಪ್ರಾರಂಭಿಸಬೇಕೆಂಬ ಹಠಕ್ಕೆ ಬಿದ್ದು ಪ್ರಾರಂಭಿಸಿದವರೇ ಹೆಚ್ಚು. ಕಚ್ಛಾ ಸಾಮಗ್ರಿ ಸರಬರಾಜು, ಮಾರುಕಟ್ಟೆ ವ್ಯವಸ್ಥೆಯ ನಿರ್ವಹಣಾ ಕೌಶಲ್ಯ ಇಲ್ಲದೇ ಕೆಲವು ಮಾಲೀಕರು ನಷ್ಟ ಅನುಭವಿಸುತ್ತಾರೆ. ಸೂಕ್ತ ಮುಂಜಾಗರೂಕತೆ ವಹಿಸಿ ವ್ಯವಹಾರ ಕುದುರಿಸಿ ಈ ವೃತ್ತಿಯಲ್ಲಿ ಬದುಕನ್ನು ಗಟ್ಟಿಗೊಳಿಸಿಕೊಂಡವರೇ ಹೆಚ್ಚು. ಇತ್ತೀಚೆಗೆ ನಿರುದ್ಯೋಗಿ ವಿದ್ಯಾವಂತ ಯುವಕರು ಈ ವೃತ್ತಿಯನ್ನು ನಂಬಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವುದು ಸಂತೋಷದಾಯಕವಾಗಿದೆ. 

ಆರ್.ಬಿ.ಗುರುಬಸವರಾಜ 


ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

ದಿನಾಂಕ 12-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.



ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿದ 
ಮಳೆಹುಚ್ಚ ಮತ್ತು ಬೆಪ್ಪ ತಕ್ಕಡಿ ಬೋಳೆ ಶಂಕರ

     ಬೇಸಿಗೆ ರಜೆ ಬಂತೆಂದರೆ ಸಾಕು ಗ್ರಾಮ ಮಟ್ಟದಿಂದ ರಾಜಧಾನಿಯವರೆಗೆ ಮಕ್ಕಳ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತವೆ. ವಿಪರ್ಯಾಸವೆಂದರೆ ಬಹುತೇಕ ಶಿಬಿರಗಳು ಮತ್ತೊಂದು ರೀತಿಯ ಟ್ಯೂಷನ್ ಕ್ಲಾಸ್‍ಗಳಂತಾಗಿವೆ. ಇವೆಲ್ಲವುಗಳ ನಡುವೆ ಕೇವಲ ಬೆರಳೆಣಿಕೆಯ ಶಿಬಿರಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ, ಅದಕ್ಕೊಂದು ಹೊಸ ಮಾರ್ಗವನ್ನು ಸೂಚಿಸುವ ಕೇಂದ್ರಗಳಾಗಿವೆ. ಅಂತಹ ವಿರಳಾತಿವಿರಳ ಶಿಬಿರಗಳಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ‘ರಂಗಭಾರತಿ’ ಸಂಸ್ಥೆ ನಡೆಸಿದ “ಚಿಣ್ಣರ ಮೇಳ” ವಿಶಿಷ್ಟವೂ  ವಿಭಿನ್ನವೂ ಆಗಿತ್ತು. ಏಕೆಂದರೆ ಇಲ್ಲಿನ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ರಂಗಭೂಮಿಯ ಕ್ರಿಯಾಶೀಲ ನಟರು, ನೃತ್ಯಗಾರರು, ರಂಗ ನಿರ್ದೇಶಕರು, ಸೃಜನಶೀಲ ಕಾರ್ಯಕರ್ತರು ಆಗಿದ್ದರಿಂದ ಶಿಬಿರ ವಿಶೇಷತೆಯಿಂದ ಕೂಡಿತ್ತು. ಸದಾ ಕ್ರಿಯಾಶೀಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡ ರಂಗಭಾರತಿ ಮಕ್ಕಳಲ್ಲಿ ಅಪೇಕ್ಷಿತ ಕ್ರಿಯೆಗಳನ್ನು ಹೊರಹೊಮ್ಮುವಂತೆ ಮಾಡಿತ್ತು. 
‘ಸಂಗೀತ, ನೃತ್ಯ ಮತ್ತು ನಾಟಕೋತ್ಸವ’ ಎಂಬ ಅಡಿಬರಹದಲ್ಲಿ 20 ದಿನಗಳ ಕಾಲ ಮೂಡಿಬಂದ ಶಿಬಿರದ ಸಮಾರೋಪದಲ್ಲಿ ನಡೆದ ಮಕ್ಕಳ ನಾಟಕಗಳು ಅಪಾರ ಪ್ರೇಕ್ಷಕರನ್ನು ರಂಜಿಸಿದವು. ಎರಡು ದಿನ ನಡೆದ ಸಮಾರೋಪದಲ್ಲಿ ಪ್ರತಿದಿನ ಒಂದು ಮಕ್ಕಳ ನಾಟಕ ಮತ್ತು ಇನ್ನೊಂದು ದೊಡ್ಡವರ ನಾಟಕ ಇದ್ದವು. ಜೊತೆಗೆ ಮಕ್ಕಳ ನೃತ್ಯ ರೂಪಕಗಳು ಇದ್ದವು.
     ದೊಡ್ಡವರ ನಾಟಕಗಳಿಗಿಂತ ಹೆಚ್ಚು ಖುಷಿ ನೀಡಿದ್ದು ಮಕ್ಕಳ ನಾಟಕಗಳು. ‘ಮಳೆಹುಚ್ಚ’ (ರಚನೆ: ಕೃಷ್ಣಮೂರ್ತಿ ಬಿಳಿಗೆರೆ) ಮತ್ತು ‘ಬೆಪ್ಪ ತಕ್ಕಡಿ ಬೋಳೆ ಶಂಕರ’ (ರಚನೆ: ಡಾ||ಚಂದ್ರಶೇಖರ ಕಂಬಾರ) ಪ್ರೇಕ್ಷಕರಿಗೆ ರಂಗಹುಚ್ಚು ಹಿಡಿಸಿ ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದವು. ಮಕ್ಕಳು ಹೇಗೆ ಅಭಿನಯಿಸಿದರೂ ಚೆಂದ ಸಾಮಾನ್ಯ ಭ್ರಮೆಗಿಂತ ಅವರ ವಾಸ್ತವದ ಪ್ರಯತ್ನಗಳು ಪ್ರೇಕ್ಷಕರಿಗೆ ಪ್ರಿಯವಾಗಿದ್ದವು. ಪ್ರೀತಿ, ಪ್ರೇಮ, ದುಗುಡ, ಸಿಟ್ಟು, ಆಕ್ರೋಶ, ಗಂಭೀರತೆ, ಶಾಂತತೆ, ನಿರಾಶೆ ಹೀಗೆ ಎಲ್ಲಾ ಭಾವನೆಗಳನ್ನು ಅಚ್ಚುಕಟ್ಟಾಗಿ ತಮ್ಮ ಹಾವ ಭಾವದಿಂದ ಪ್ರದರ್ಶಿಸಿದ ಪರಿ ಮನೋಜ್ಞವಾಗಿತ್ತು.  ಪಾತ್ರಗಳ ವ್ಯಕ್ತಿತ್ವವನ್ನು ತಮ್ಮಲ್ಲಿ ಅವಗಾಹಿಸಿಕೊಂಡು ಪಾತ್ರವೇ ತಾನೆಂಬಂತೆ ಅಭಿನಯಿಸಿದರು. ಇಲ್ಲಿ ದೊಡ್ಡವರ ಅನುಕರಣೆ ಇದ್ದರೂ ಅದರಲ್ಲಿ ಸೃಜನಶೀಲತೆ ಮತ್ತು ಕಲೆಯನ್ನು ಗೌರವಿಸುವ ಮನೋವಿಕಾಸದ ಮಾರ್ಗಗಳಿದ್ದವು. ಪರಸ್ಪರ ಪಾತ್ರಧಾರಿಗಳ ಕೌಶಲ್ಯಗಳನ್ನು ಗೌರವಿಸುತ್ತಾ, ತಮ್ಮ ತಂಡದ ಉತ್ತಮ ಪ್ರದರ್ಶನಕ್ಕಾಗಿ ಪ್ರಯತ್ನಿಸುತ್ತಿದ್ದರು. ಸಾಧನೆಯ ಹಂಬಲ ಗೊತ್ತಿಲ್ಲದ ಮಕ್ಕಳು ಮುಕ್ತವಾಗಿ ಅಭಿನಯಿಸಿದರು.
       ರಂಗಸ್ಥಳದ ಸದ್ಭಳಕೆ, ರಂಗಪರಿಕರ ಮತ್ತು ರಂಗಸಜ್ಜಿಕೆಯಲ್ಲಿ ಹಿರಿಯರನ್ನು ಮೀರಿಸಿದ ಅವರ ಜಾಣ್ಮೆ ಪ್ರೇಕ್ಷಕರಿಗೆ ಪ್ರಿಯವಾದವು. ಧ್ವನಿಯ ಏರಿಳಿತ, ಔಚಿತ್ಯಪೂರ್ಣ ಹಾವ ಭಾವಗಳು ಎಂತಹ ಪರಿಣಿತ ವೃತ್ತಿಪರ ರಂಗಕರ್ಮಿಗಳನ್ನೂ ಮೀರಿಸುವಂತಿದ್ದವು. ‘ಮಕ್ಕಳಿಗೆ ಸೂಕ್ತ ರಂಗ ತರಬೇತಿ ನೀಡಿದರೆ ಉತ್ತಮ ನಟರಾಗುತ್ತಾರೆ ಜೊತೆಗೆ ಮಾನವೀಯ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ’ ಎಂದು ಜ್ಹೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ ಎಂಬ ರಿಯಾಲಿಟಿ ಶೋ ಪ್ರಾರಂಭದಲ್ಲಿ ಹಿರಿಯ ನಟಿ ಲಕ್ಷ್ಮಿಯವರು ಹೇಳಿದ ಮಾತು ಅಕ್ಷರಶಃ ಸತ್ಯ. 20 ದಿನಗಳ ಚಿಣ್ಣರ ಮೇಳದಲ್ಲಿ ಕೆಲವೇ ದಿನಗಳು ನಡೆದ ರಂಗತಾಲೀಮು ಮಕ್ಕಳ ಕಲೆಯನ್ನು ಒರೆಗೆ ಹಚ್ಚಿದ್ದವು. 
          ‘ಕಲೆ ಎಂದರೆ ಕೇವಲ ಅಬ್ಬರದ ಪೋಷಾಕುಗಳ, ಧ್ವನಿವರ್ಧಕಗಳ, ದೀಪಗಳ ವ್ಯವಸ್ಥೆ ಅಲ್ಲ. ಅದೊಂದು ಕಲಿಕೆಯ ವ್ಯವಸ್ಥೆ. ಜೀವನದ ಪಾಠ. ವಿಚಾರ, ದೈಹಿಕ ಶ್ರಮ ಮತ್ತು ನೈತಿಕತೆಗಳನ್ನು ಕಲಿಸುವ ಏಕೈಕ ವೇದಿಕೆ’ ಎಂದು ಖ್ಯಾತ ರಂತಗಕರ್ಮಿ ಪ್ರಸನ್ನ ಅವರು ಸಮಾರೋಪ ನುಡಿಯಲ್ಲಿ ಮಕ್ಕಳ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಎಲೆಕ್ಟ್ರಾನಿಕ್ ಮಾಧ್ಯಮದ ಭರಾಟೆಯಲ್ಲೂ ಮಕ್ಕಳ ರಂಗಾಭಿನಯ ಪ್ರೇಕ್ಷಕರನ್ನು ಮೂಕವಿಸ್ಮತರನ್ನಾಗಿಸಿತು.
ಆರ್.ಬಿ.ಗುರುಬಸವರಾಜ 

ಬಸವಣ್ಣ ಮತ್ತು ಸಾಮಾಜಿಕ ಹೋರಾಟ

ದಿನಾಂಕ 09-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.


ಬಸವಣ್ಣ ಮತ್ತು ಸಾಮಾಜಿಕ ಹೋರಾಟ


ಹೆಣ್ಣಿಗಾಗಿ ಸತ್ತವರು ಕೋಟಿ,
ಮಣ್ಣಿಗಾಗಿ ಸತ್ತವರು ಕೋಟಿ,
ಹೊನ್ನಿಗಾಗಿ ಸತ್ತವರು ಕೋಟಿ,
ನಿನಗಾಗಿ ಸತ್ತವರರಾರನೂ ಕಾಣೆ ಗುಹೇಶ್ವರಾ !
ಇತಿಹಾಸದ ಪುಟಗಳನ್ನ ತಿರುವಿ ಹಾಕಿದರೆ ನಮಗೆ ಅಲ್ಲಿ ಸಿಗುವುದು ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಡಿದ ರಾಜ-ಮಹಾರಾಜರ ಕಥೆ. ಇದನ್ನು ‘ಅಲ್ಲಮಪ್ರಭು’ ತಮ್ಮ ವಚನದಲ್ಲಿ ವಿಡಂಬನಾತ್ಮಕವಾಗಿ ಹೇಳಿರುವುದು ನಿಜಕ್ಕೂ ಸರ್ವ ಸಮ್ಮತ. ಇತಿಹಾಸದಲ್ಲಿ ತಾವು ಬಯಸಿದ ಹೆಣ್ಣಿಗಾಗಿ, ಹಣ-ಐಶ್ವರ್ಯಕ್ಕಾಗಿ, ಸಾಮ್ರಾಜ್ಯ ವಿಸ್ತರಣೆ ಅಥವಾ ಸಾಮ್ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಯುದ್ದಗಳು ನಡೆದಿವೆ. ಆದರೆ ತಮ್ಮ ಅನುಯಾಯಿಗಳಾದ ಸಾಮಂತರಿಗಾಗಲೀ, ಸೈನಿಕರಿಗಾಗಲೀ, ಜನಸಾಮಾನ್ಯರಿಗಾಗಲೀ ಯುದ್ದ ಮಾಡಿದವರಾರೂ ಇಲ್ಲವೆನ್ನಬಹುದು. ಮಾನವರೆಲ್ಲರ ಒಳಿತಿಗಾಗಿ, ಸಮಾಜದ ಹಿತಕ್ಕಾಗಿ ನಡೆದ ಹೋರಾಟಗಳು ಅತಿವಿರಳ.
ಅಂತಹ ವಿರಳಾತೀತ ಹೋರಾಟಗಳಲ್ಲಿ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಎಂದರೆ 12ನೇ ಶತಮಾನದ  ಬಸವಣ್ಣ. ಇವರ ಹೋರಾಟಗಳು ರಾಜ-ಮಹಾರಾಜರ ಹೋರಾಟಗಳಲ್ಲ, ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ನಡೆದ ಹೋರಾಟಗಳಲ್ಲ. ಅಖಂಡ ವಿಶ್ವದ ಜನರ ಕಲ್ಯಾಣವನ್ನು ಬಯಸಿ, ಸಕಲ ಜೀವಾತ್ಮರಿಗೆ ಒಳಿತನ್ನು ಉಂಟುಮಾಡುವ ಹೋರಾಟಗಳಾಗಿದ್ದವು. ಈ ಹೋರಾಟದ ಮೂಲಮಂತ್ರ `ಮಾನವೀಯತೆ` ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಜನರು ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಾನತೆ ಸಾಧಿಸಲು ಹೋರಾಟವನ್ನು ರೂಪಿಸಿದವರು. ಜನಸಾಮಾನ್ಯರ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸಿದ ಈ ಮಹಾನ್ ಚೇತನನ ಉದ್ದೇಶ ಮಾನವ ಸಮಾಜದ ಉದ್ದಾರವಾಗಿತ್ತೇ ವಿನಃ ಯಾವುದೇ ಸ್ವಾರ್ಥವಾಗಲೀ, ಅಧಿಕಾರದ ಲಾಲಸೆಯಾಗಲೀ, ಘನತೆ ಗೌರವಗಳ ಸ್ವಂತಿಕೆಯಾಗಲೀ ಇರಲಿಲ್ಲ. ಬಸವಣ್ಣನವರ ಹೋರಾಟಗಳು ಮಾನವನ ಸರ್ವಾಂಗೀಣ ಪ್ರಗತಿಗೆ ಪೂರಕವಾದ್ದರಿಂದಲೇ ಅಸಂಖ್ಯಾತ ಬೆಂಬಲಿಗರನ್ನು ಪಡೆದ ಹೋರಾಟಗಳಾಗಿದ್ದವು. 

ಬಸವಣ್ಣನವರು ವಚನಗಳ ಮೂಲಕ ತಮ್ಮ ಅನುಭಾವಗಳನ್ನು ಜನರಲ್ಲಿ ಪ್ರಚುರ ಪಡಿಸಿದರು.     ಅವರು ಜೀವಿಸಿದ್ದಂತಹ 12ನೇ ಶತಮಾನ ಹಲವಾರು ವೈರುಧ್ಯಗಳಿಂದ ಕೂಡಿದ ಕಾಲಮಾನ. ಧಾರ್ಮಿಕ ಆಚರಣೆ ಅಚಲವಾಗಿದ್ದ ಕಾಲ. ಇಂತಹ ಕಾಲಘಟ್ಟದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯ ಕಿಡಿಗಳನ್ನು ಹೊತ್ತಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಬಸವಣ್ಣನವರು ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡಿದರು. ಶೋಷಿತರನ್ನೆಲ್ಲ ಸಂಘಟಿಸಿ ತಮ್ಮ ವಿಮೋಚನೆಗಾಗಿ ಹೋರಾಟಕ್ಕೆ ಹುರಿದುಂಬಿಸಿದರು. ಇವರ ಕ್ರಾಂತಿಯಲ್ಲಿ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಮತ್ತು ಶೋಷಣೆಯ ವಿರುದ್ದ ಹೋರಾಟದ ಧ್ವನಿಯನ್ನು ಕಾಣುತ್ತೇವೆ. ಮೇಲ್ಜಾತಿ, ಕೀಳ್ಜಾತಿಗಳ ನಡುವಿನ ಸಂಘರ್ಷ ನಿರಂತರವಾದುದು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುದನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. 

``ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ,
ಜಲವೊಂದೇ ಶೌಚಾಚಮನಕ್ಕೆ,
ಫಲವೊಂದೇ ಷಡುದರುಶನ ಮುಕ್ತಿಗೆ,
ಕುಲವೊಂದೇ  ತನ್ನ ತಾನರಿದವರಿಗೆ,
ನಿಲುವೊಂದೇ ಕೂಡಲ ಸಂಗಮದೇವಾ ನಿಮ್ಮನರಿದವರಿಗೆ’’  
ಎಂಬ ವಚನದಲ್ಲಿ ನೆಲ, ಜಲ, ಫಲ ಎಲ್ಲಾ ಜಾತಿ ಕುಲದವರಿಗೂ ಒಂದೇ ಎಂಬ ವಾಸ್ತವ ಸತ್ಯವನ್ನು ಹೊರಹಾಕಿದ್ದಾರೆ. ಬಸವಣ್ಣನವರು ‘ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ನಾಡಿನ ಆಡಳಿತ ಅರ್ಥ ರಹಿತ’’ ಎಂಬ ಮೂಲತತ್ವ ಪ್ರತಿಪಾದಿಸಿದರು. 

ಮಾನವ ಸಂಘ ಜೀವಿ ಎನ್ನುತ್ತೇವೆ. ಆದರೆ ತಮ್ಮ ತಮ್ಮಲ್ಲೇ ಹೊಡೆದಾಟ, ಬಡಿದಾಟ, ಭಿನ್ನತೆ, ಮೇಲು-ಕೀಳು, ಸಿರಿತನ-ಬಡತನ, ಸ್ವಾರ್ಥತೆ ಇತ್ಯಾದಿ ಕಾರಣಗಳಿಗಾಗಿ ತನ್ನಂತೆ ಇರುವ ಇತರರನ್ನು ಪ್ರಾಣಿಗಳಿಗಿಂತ ಕೀಳಾಗಿ ಶೋಷಿಸುತ್ತಿರುವುದನ್ನು ಕಂಡರೆ, ಅವನು ಸಂಘಜೀವಿಯಾಗಿದ್ದುಕೊಂಡು ಹೀಗೇಕೆ ವರ್ತಿಸುತ್ತಾನೆ ಎಂಬುದೇ ಅಚ್ಚರಿಯ ವಿಷಯ. ಯಾವಾಗ ವ್ಯಕ್ತಿಯು ತಾನೊಬ್ಬನೇ ಶ್ರೇಷ್ಠ, ಇತರರು ಕನಿಷ್ಠವೆಂದು ಭಾವಿಸುತ್ತಾನೋ ಆಗಲೇ ಅವನು ಇತರರನ್ನು ಶೋಷಿಸಲು ಪ್ರಾರಂಭಿಸುತ್ತಾನೆ. 
``ಪ್ರಬಲ ಶಕ್ತಿಗಳು ಅತಿಕ್ರಮಣ ಮಾಡಿದಾಗ ದುರ್ಬಲ ಶಕ್ತಿಗಳು ಇಲ್ಲವಾಗುತ್ತವೆ’’ ಎಂಬ ‘ಡಾರ್ವಿನ್’ನ ಹೇಳಿಕೆ ಸರ್ವಕಾಲಿಕ ಸರ್ವಸಮ್ಮತ ಎಂಬುದನ್ನು ಇತಿಹಾಸ ಸಾರುತ್ತದೆ. ಪ್ರಬಲ ಜಾತಿಗಳು ದುರ್ಬಲ ಜಾತಿಗಳನ್ನು, ಆರ್ಥಿಕ ಸಬಲರು ಆರ್ಥಿಕ ದುರ್ಬಲರನ್ನು, ಮೇಲ್ವರ್ಗ ಕೆಳವರ್ಗವನ್ನು ಶೋಷಿಸುತ್ತಾ ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ದುಷ್ಟಶಕ್ತಿಗಳ ಪ್ರಾಬಲ್ಯ ಹೆಚ್ಚಾದಾಗಲೆಲ್ಲಾ ಒಬ್ಬೊಬ್ಬ ಅವತಾರ ಪುರುಷರು ಉದಯಿಸಿರುವುದನ್ನು ಪುರಾಣಗಳು ತಿಳಿಸುತ್ತವೆ. ಅಂತೆಯೇ 12ನೇ ಶತಮಾನದಲ್ಲಿನ ಜಾತಿ ಸಂಘರ್ಷವನ್ನು ತೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಉದಿಸಿ ಬಂದರು. 
ಮುಖ್ಯವಾಗಿ ನಾವಿಲ್ಲಿ ಚಿಂತನೆ ಮಾಡಬೇಕಾಗಿರುವುದು ಬಸವಣ್ಣನವರ ವಿಭಿನ್ನ ರೀತಿಯ ಆದರೆ ನಿರ್ದಿಷ್ಟ ಉದ್ದೇಶದ ಹೋರಾಟಗಳ ಬಗ್ಗೆ. ಬಸವಣ್ಣನವರು ಧಾರ್ಮಿಕ ಹಿನ್ನಲೆಯಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಹೋರಾಟ ಮಾಡಿದರು.
ಜಾತಿ ಪಂಥಗಳು ಅಗ್ರಸ್ಥಾನವಾದ ನಮ್ಮ ದೇಶದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ಭೇಧಗಳು ಮಾನವ ಕಲ್ಪಿತ ಎಂಬ ಕಟುಸತ್ಯ ನಮಗಿದ್ದರೂ, ಅವು ನಮ್ಮ ರಾಜಕೀಯ, ಸಾಮಾಜಿಕ , ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲ ಶಕ್ತಿಗಳಾಗಿವೆ. ಇಂಥಹ ವರ್ಣ, ವರ್ಗ ಪ್ರಧಾನ ಸಮಾಜದಲ್ಲಿ ಮಾನವೀಯತೆಗೆ ಜಾಗವಿಲ್ಲದಿರುವ ಸಂದರ್ಭದಲ್ಲಿ ಮನುಕುಲದ ಹೋರಾಟಕ್ಕಿಳಿದು ಕಷ್ಟನಷ್ಟ ಲೆಕ್ಕಿಸದೇ, ತಮ್ಮ ಧ್ಯೇಯಕ್ಕೆ, ಸಿದ್ದಾಂತಕ್ಕೆ ಬದ್ಧರಾಗಿದ್ದುಕೊಂಡು ಹೋರಾಡಿದ ಬಸವಣ್ಣನವರು ಎಂದೆಂದೂ  ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಈ ಮಹನೀಯನಲ್ಲಿ ಇರುವ ಮಾನವೀಯ ಮೌಲ್ಯಗಳು, ಶೋಷಿತ ವರ್ಗ/ವರ್ಣ ವ್ಯವಸ್ಥೆಯ ವಿರುದ್ದ ಇವರು ಸಂಘಟಿಸಿದ ಹೋರಾಟ, ಮಾನವ ಜನಾಂಗಕ್ಕೆ ನೀಡಿದ ಸಂದೇಶಗಳು ಇಂದು ಸಮಾಜ ಸೇವಕರಾಗಬೇಕೆನ್ನುವವರಿಗೆ ದಾರಿದೀಪವಾಗಿವೆ. 
       ಪ್ರತಿವರ್ಷ ಬಸವಣ್ಣನವರ ಜಯಂತಿಯಂದು ಮಾತ್ರ ಅವರ ತತ್ವಾದರ್ಶಗಳನ್ನು ಕೊಂಡಾಡದೇ ಪ್ರತಿನಿತ್ಯ ನಮ್ಮ ಬದುಕಿನ ಒಂದು ಭಾಗವಾಗಿ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣ ಜನಿಸಿದ ನಾಡಿನಲ್ಲಿ ನಾವು ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಪ್ರತಿ ಸಂಧರ್ಭದಲ್ಲೂ ಅವರ ವಿಚಾರಗಳನ್ನು ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುತ್ತಾ ಅವರ ತತ್ವಗಳನ್ನು, ಜೀವನಾದರ್ಶಗಳನ್ನು ಪಾಲಿಸುತ್ತಾ ಸಾಗೋಣ. 
ಆರ್.ಬಿ.ಗುರುಬಸವರಾಜ