November 10, 2018

ಆರ್ಕಿಡ್​ಗಳ ಬಣ್ಣದ ಲೋಕ/Orchids

ದಿನಾಂಕ 10-11-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆರ್ಕಿಡ್​ಗಳ ಬಣ್ಣದ ಲೋಕ



ಹೂಗಳನ್ನು ನೋಡಿದಾಗ ಮನಸ್ಸು ಕೂಡ ಹೂವಿನಂತೆ ಅರಳುವುದು ಸಹಜ. ಬಣ್ಣ ಹಾಗೂ ಸುವಾಸನೆಯಿಂದ ಎಲ್ಲರನ್ನೂ ಆಕರ್ಷಿಸುವ ಹೂವುಗಳನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅವುಗಳ ಸುವಾಸನೆಯಂತೂ ಇಡೀ ಪ್ರದೇಶವನ್ನೇ ವ್ಯಾಪಿಸಿ ಮೋಹಕಗೊಳಿಸುತ್ತದೆ. ಅದೆಷ್ಟು ಪ್ರಭೇದಗಳು, ಅದೆಷ್ಟು ವಿಭಿನ್ನತೆಗಳು. ಇಂತಿಪ್ಪ ಹೂಗಳ ಲೋಕದಲ್ಲಿಯೇ ಅತ್ಯಂತ ಹೆಚ್ಚು ಪ್ರಭೇದಗಳಿರುವ ಹೂಗಳೆಂದರೆ ಆರ್ಕಿಡ್​ಗಳು.
ಆರ್ಕಿಡ್ ವಿಶೇಷ ಬಗೆಯ ಹೂವು. ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಿಂದ ಕಣ್ಣು ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಕನ್ನಡದಲ್ಲಿ ಸೀತಾಳೆ ಹೂವು ಅಥವಾ ಸೀತೆ ಹೂವು ಎಂದು ಕರೆಯಲ್ಪಡುವ ಆರ್ಕಿಡ್​ಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ವೇದಿಕೆ ಅಂದಗೊಳಿಸಲು ಆರ್ಕಿಡ್​ಗಳನ್ನೇ ಹೆಚ್ಚು ಬಳಸಲಾಗುತ್ತವೆ. ಕೆಲವು ಆರ್ಕಿಡ್​ಗಳನ್ನು ಮನೆಯ ಬಳಿ ಅಲಂಕಾರಕ್ಕಾಗಿಯೂ ಬೆಳೆಸಲಾಗುತ್ತದೆ. ವಿವಿಧ ಬಣ್ಣಗಳ ಕಾಂಬಿನೇಷನ್ ಇವುಗಳ ವೈಶಿಷ್ಟ್ಯ ಒಂದೇ ಒಂದು ಕೊರತೆ ಎಂದರೆ, ಇವುಗಳಲ್ಲಿರುವ ಎಲ್ಲ ಪ್ರಭೇದಗಳು ನಮ್ಮ ಮನೆಯಂಗಳದ ಮಲ್ಲಿಗೆ, ಸಂಪಿಗೆಗಳಂತೆ ಸುವಾಸನೆಭರಿತವಾಗಿರುವುದಿಲ್ಲ. ಅಷ್ಟೇ ಅಲ್ಲ, ಕೆಲ ಆರ್ಕಿಡ್​ಗಳು ದುರ್ವಾಸನೆಯನ್ನೂ ಬೀರುತ್ತವೆ.
ಕಾಡು ಹೂವು ಆರ್ಕಿಡ್: ಜಗತ್ತಿನಾದ್ಯಂತ 35 ಸಾವಿರಕ್ಕಿಂತಲೂ ಹೆಚ್ಚಿನ ಆರ್ಕಿಡ್ ಪ್ರಭೇದಗಳಿರುವುದನ್ನು ಸಸ್ಯಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಉಷ್ಣ ವಲಯದ ಕಾಡುಗಳಲ್ಲಿ ಇಂತಹ ಆರ್ಕಿಡ್​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಭಾರತದ ಈಶಾನ್ಯ ಗಡಿರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಬಹುತೇಕ ಆರ್ಕಿಡ್​ಗಳು ಪರೋಪಜೀವಿಗಳು. ಮರ ಅಥವಾ ಇನ್ನಿತರ  ಕೊಳೆತ ಸಸ್ಯಗಳ ಮೇಲೆ ಬೆಳೆದು, ಅವುಗಳಿಂದಲೇ ಆಹಾರ ಪಡೆದು ಜೀವಿಸುತ್ತವೆ.
ಗಾತ್ರ ವೈವಿಧ್ಯ!: ಆರ್ಕಿಡ್​ಗಳು ವಿವಿಧ ಗಾತ್ರಗಳಲ್ಲಿರುತ್ತವೆ. ಕೆಲವು ಆರ್ಕಿಡ್​ಗಳು ಸೆಂಟಿಮೀಟರ್​ಗಿಂತ ಕಡಿಮೆ ಗಾತ್ರ ಹೊಂದಿದ್ದರೆ ಇನ್ನು ಕೆಲವು ಆರ್ಕಿಡ್​ಗಳು 20 ಮೀಟರ್​ನಷ್ಟು ಉದ್ದಕ್ಕೆ ಬೆಳೆಯಬಲ್ಲವು. ಆರ್ಕಿಡ್​ಗಳು ಎರಡು ಆಯಾಮದ ಸಮಮಿತಿಗೆ ಒಳಪಟ್ಟಿರುತ್ತವೆ. ಅಂದರೆ, ಎರಡೂ ಅಂಚುಗಳನ್ನು ಮಡಿಸಿದರೆ ಸಮಮಿತಿಯ ಅರ್ಧ ಹೂವು ಕಾಣುತ್ತದೆ. ಪಳೆಯುಳಿಕೆ ದಾಖಲೆಗಳ ಪ್ರಕಾರ, ಆರ್ಕಿಡ್​ಗಳು 10 ಕೋಟಿ ವರ್ಷಗಳ ಹಿಂದಿನಿಂದಲೂ ಇರುವುದು ತಿಳಿದುಬಂದಿದೆ. ಕಪ್ಪುಬಣ್ಣವನ್ನು ಹೊರತುಪಡಿಸಿ ಪ್ರತಿಬಣ್ಣದಲ್ಲೂ ಆರ್ಕಿಡ್ ಲಭ್ಯ ಇರುವುದು ವಿಶೇಷ. ಕೆಲವು ಜಾತಿಯ ಆರ್ಕಿಡ್​ಗಳನ್ನು ಆಹಾರ, ಮಸಾಲೆ ಮತ್ತು ಗಿಡಮೂಲಿಕೆ ಔಷಧವಾಗಿ ಮತ್ತು ಸುಗಂಧದ್ರವ್ಯ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
ಮಂಕಿ
ಈ ಆರ್ಕಿಡ್ ಮಂಕಿಯ ಮುಖ ಹೋಲುವುದರಿಂದ ಇದಕ್ಕೆ ಮಂಕಿ ಆರ್ಕಿಡ್ ಎಂಬ ಹೆಸರಿದೆ. ಇದು ದಕ್ಷಿಣ ಪೂರ್ವ ಈಕ್ವೆಡಾರ್ ಮತ್ತು ಪೆರು ಮೌಂಟೇನ್ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಸಿಮಿಯಾನ್. ಇದು ಸಿಟ್ರಸ್ ವಾಸನೆಯನ್ನು ಹೊಂದಿರುತ್ತದೆ ಮತ್ತು ಸಂಪೂರ್ಣ ಅರಳಿದಾಗ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ.
ಲೇಡಿ ಸ್ಲಿಪ್ಪರ್
ವಿಚಿತ್ರ ನೋಟವನ್ನು ಒಳಗೊಂಡ ಈ ಆರ್ಕಿಡ್ ಸ್ಲಿಪ್ಪರ್ ಆಕಾರದ ಚೀಲಗಳನ್ನು ಹೊಂದಿರುತ್ತದೆ. ಪರಾಗಸ್ಪರ್ಶಕ್ಕಾಗಿ ಚೀಲಗಳನ್ನು ಹೊಂದಿದ್ದು, ಇದಕ್ಕೆ ಕೀಟಗಳನ್ನು ಅಂಟಿಸಿಕೊಳ್ಳುತ್ತವೆ. ಇದು ಭೂ ಪ್ರದೇಶದಲ್ಲಿ ಬೆಳೆಯುವ ಆರ್ಕಿಡ್ ಆಗಿದ್ದು, ಎಲ್ಲ ರೀತಿಯ ಕಡಿಮೆ ಹಾಗೂ ಹೆಚ್ಚು ತಾಪಮಾನದಲ್ಲೂ ಬೆಳೆಯುತ್ತದೆ.
ಡಾನ್ಸಿಂಗ್ ಲೇಡಿ
ಹೆಸರೇ ಸೂಚಿಸುವಂತೆ ಇದು ನೋಡಲು ಸ್ತ್ರೀರೂಪದಲ್ಲಿ ಇರುತ್ತದೆ. ತಿಳಿಹಳದಿ, ಗಾಢ ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಕಾಣುವ ಇದು ನೃತ್ಯ ಮಾಡುವ ಮಹಿಳೆಯಂತೆ ಕಾಣುತ್ತದೆ. ಉಷ್ಣವಲಯದಲ್ಲಿ ಬೆಳೆಯುವ ಇದಕ್ಕೆ ನಿಯಮಿತ ನೀರಿನ ಅವಶ್ಯಕತೆ ಇದೆ. ಇದು ಅತಿಹೆಚ್ಚು ತಾಪಮಾನವನ್ನು ಅಂದರೆ 100 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸಹಿಸಿಕೊಳ್ಳಬಲ್ಲದು! ಅತ್ಯದ್ಭುತ ಪರಿಮಳ ಹೊಂದಿದ ಇದನ್ನು ಮನೆಯ ಆವರಣದಲ್ಲಿ ಬೆಳೆಯಬಹುದು. ನೋಡಲು ಅತ್ಯಾಕರ್ಷಕವಾಗಿರುತ್ತದೆ.
ಫ್ಲೈಯಿಂಗ್ ಡಕ್
ಹಾರಲು ತಯಾರಾದ ಬಾತುಕೋಳಿಯಂತೆ ಕಾಣುವ ಈ ಆರ್ಕಿಡ್ ಪೂರ್ವ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತದೆ. ಕ್ಯಾಲೀನಾ ಮೇಜರ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಸುಮಾರು 50 ಸೆಂಟಿಮೀಟರ್ ಉದ್ದ ಇರುತ್ತದೆ. ಇದು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುತ್ತದೆ.
ವೈಟ್ ಎಗ್ರೆಟ್
ಹೇಬೆನರಿಯಾ ರೇಡಿಯಾಟ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಇದು ಅಸಾಮಾನ್ಯ ಆರ್ಕಿಡ್ ಆಗಿದೆ. ಹಕ್ಕಿಯ ಬಿಳಿ ತುಪ್ಪಳದಂತೆ ಕಾಣುವ ಈ ಆರ್ಕಿಡ್ ಗಮನಾರ್ಹ ಆಕರ್ಷಣೆ ಹೊಂದಿದೆ. ಇದು ಮುಖ್ಯವಾಗಿ ದಕ್ಷಿಣ ಕೊರಿಯಾ, ರಷ್ಯಾ, ಚೀನಾ ಮತ್ತು ಜಪಾನ್​ಗಳಲ್ಲಿ ಕಂಡುಬರುತ್ತದೆ.
ಬೀ ಆರ್ಕಿಡ್
ಜೇನುನೊಣವು ಹಾರಿ ಹೋಗುತ್ತಿರುವಂತೆ ಕಾಣುವ ಈ ಆರ್ಕಿಡ್ ಇಂಗ್ಲೆಂಡ್, ಐರ್ಲೆಂಡ್​ಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಒಫ್ರೀಸ್ ಆಫಿಫೆರಾ. ಸಾಮಾನ್ಯವಾಗಿ ಇದು ಗುಲಾಬಿ ಬಣ್ಣದಲ್ಲಿರುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ