August 29, 2017

ರಂಗಶಿಕ್ಷಣ Theater Education

ಜೂನ್ 2017ರ ಪ್ರಜಾಜಗತ್ತು ಪಾಕ್ಷಿಕದಲ್ಲಿ ಪ್ರಕಟವಾದ ನನ್ನ ಬರಹ.
ರಂಗಶಿಕ್ಷಣ

ಹಡಗಲಿ ಬಿ.ಆರ್.ಸಿ BRC HADAGALI

ಆಗಸ್ಟ್ 2017ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾದ ನನ್ನ ಬರಹ.
ಮಲ್ಲಿಗೆಯ ನಾಡಲ್ಲಿ ಸಂಪದ್ಭರಿತವಾದ
ಕ್ಷೇತ್ರ ಸಂಪನ್ಮೂಲ ಕೇಂದ್ರ


ಕುಟುಂಬದ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕುಟುಂಬವೇ ಮಾದರಿ ಕುಟುಂಬ ಆಗುತ್ತದೆ. ಅದೇರೀತಿ ಒಂದು ಕಛೇರಿ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕಛೇರಿ ವಾತಾವರಣವೇ ಬದಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕಛೇರಿ ಎಂದಾಕ್ಷಣ ಧೂಳು ಹಿಡಿದ ಕಡತಗಳು, ಜಾಡು ಕಟ್ಟಿದ ಮೂಲೆಗಳು, ಬಣ್ಣ ಮಾಸಿದ ಗೋಡೆಗಳು, ಇತ್ಯಾದಿ ದೃಶ್ಯಗಳು ಕಣ್ಮುಂದೆ ಹಾದು ಹೋಗುತ್ತವೆ. ಇಂತಹ ಎಲ್ಲಾ ಅಪಸ್ವರಗಳಿಗೆ ತಿಲಾಂಜಲಿ ಹೇಳಿ ಆಕರ್ಷಕ ಶೈಲಿಯಲ್ಲಿ ಕಛೇರಿ ಬದಲಾದರೆ ಹೇಗೆ? ನೋಡಲು ಸುಂದರವಾಗಿರುತ್ತದೆ ಅಲ್ಲವೇ? ಇದು ಹೇಳಲೇನೋ ಸುಲಭ. ಆದರೆ ಆಕರ್ಷಕವಾಗಿ ಮಾಡುವುದಾದರೂ ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲ ಹೊಂದಾಣಿಕೆ ಹೇಗೆ? ಎಂಬುದೇ ಎಲ್ಲರಿಗೂ ಯಕ್ಷ ಪ್ರಶ್ನೆ. ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲು ಸಜ್ಜಾಗಿದೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕ್ಷೇತ್ರ ಸಂಪನ್ಮೂಲ ಕೇಂದ್ರ.
ಕನಸಿನ ಬೆನ್ನೇರಿ : ಸಂಪನ್ಮೂಲ ಕೇಂದ್ರವು ಪಟ್ಟಣದ ಹೊರವಲಯದಲ್ಲಿದ್ದು ಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ತರಬೇತಿ ಹಾಗೂ ಇನ್ನಿತರೇ ಕಛೇರಿ ಕೆಲಸಕ್ಕೆಂದು ಬರುವ ಶಿಕ್ಷಕರು ಮತ್ತು ಪಾಲಕರಿಗೆ ಒಂದು ರೀತಿಯ ನೋವಿನ ಅನುಭವ ಕಾಡುತ್ತಿತ್ತು.   4-7-2016 ರಂದು ಹೆಚ್.ಕೆ.ಚಂದ್ರಪ್ಪ ಎಂಬುವವರು ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಇಲ್ಲಿಗೆ ಬಂದರು. ಇಲ್ಲಿನ ಭೌತಿಕ ವಾತಾವರಣ ಕಂಡು ಏನಾದರೂ ಹೊಸತನ ಮಾಡಬೇಕೆಂಬ ಕನಸು ಕಂಡರು. ಅದಕ್ಕೆ ಸಿಬ್ಬಂದಿಯ ಸಹಕಾರ ಬೇಡಿದರು. ಸಿಬ್ಬಂದಿಯೂ ಅದಕ್ಕೆ  ಸಕಾರಾತ್ಮಕವಾಗಿ ಸ್ಪಂದಿಸಿತು.  ಯೋಜನೆ ಸಿದ್ದಪಡಿಸಿದರು. ಅದರಂತೆ ಕಾರ್ಯತತ್ಪರರಾದರು.
ಬದಲಾದದ್ದಾರೂ ಏನು ? : ಒಂಭತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಡೀ ಕಛೇರಿಯ ವಾತಾವರಣವೇ ಬದಲಾಗಿದೆ. ಗೋಡೆಗಳು ಮಾಸಲು ಬಣ್ಣ ಕಳಚಿಕೊಂಡು ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತವೆ. ಈ ಬಣ್ಣ  ಆಕರ್ಷಕವಾಗಿ ಕಾಣಲು ವರ್ಲಿ ಚಿತ್ರಣಗಳನ್ನು ಚಿತ್ರಿಸಲಾಗಿದೆ. ಇಡೀ ಶಿಕ್ಷಣದ ರೂಪರೇಷಗಳನ್ನು ಬಿಂಬಿಸುವ ಚಿತ್ರಗಳನ್ನು ಅಲ್ಲಲ್ಲಿ ಬಿಡಿಸಲಾಗಿದೆ. ಕೆಂಪು ಬಣ್ಣದ ಸಿಮೆಂಟ್ ನೆಲ ಈಗ ಟೈಲ್ಸ್ ಕಲ್ಲುಗಳಿಂದ ಸಪೂರವಾಗಿದೆ. ದೂಳಿನಿಂದ ತುಂಬಿದ್ದ ಕಿಟಕಿಗಳು ಅಲುಗಾಡುತ್ತಿರುವ ಸುಂದರ ಕರ್ಟನ್ ಗಳನ್ನು ಹೊಂದಿವೆ. ನೀರಿಲ್ಲದೇ ಒಣಗಿದ್ದ ಶೌಚಾಲಯಗಳು ಆಹ್ಲಾದಕರ ಪರಿಮಳದಿಂದ ಕೂಡಿವೆ. ಕುಡಿಯಲು ಶುದ್ದ ನೀರಿನ ಘಟಕ ಅಳವಡಿಸಲಾಗಿದೆ. ಒಂದು ಕೊಠಡಿಯನ್ನು ಗ್ರಂಥಾಲಯವಾಗಿ ಮಾರ್ಪಾಟು ಮಾಡಲು ಸಕಲ ಸಿದ್ದತೆ ನಡೆದಿದೆ. ಇನ್ನೊಂದು ಕೊಠಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿವಿಧ ಕಲಿಕೋಪಕರಣಗಳುಳ್ಳ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲು ಸಿದ್ದತೆ ನಡೆದಿದೆ. ತಾಲೂಕಿನಲ್ಲಿ 350 ವಿಶೇಷ ಅಗತ್ಯವುಳ್ಳ ಮಕ್ಕಳಿದ್ದು, ಅವರಿಗೆ ಶಾಶ್ವತ ಫಿಜಿಯೋ ಥೆರಪಿ ಕೇಂದ್ರ ಪ್ರಾರಂಭಿಸಲು ಅಗತ್ಯ ಸಾಧನಗಳನ್ನು ವ್ಯವಸ್ಥೆ ಮಾಡಲಾಗಿದೆ.  
ಬದಲಾದ ತರಬೇತಿ ಕೊಠಡಿ : ಇಡೀ ತರಬೇತಿ ಕೊಠಡಿಯ ಚಿತ್ರಣ  ಬದಲಾಗಿದೆ. ಸಂಪೂರ್ಣ ಕೊಠಡಿ ಡಿಜಿಟಲ್ ಮಯವಾಗಿದೆ. 55 ಇಂಚಿನ ಎಲ್.ಇ.ಡಿ  ಟಿ.ವಿ ಗೋಡೆಯನ್ನು ಅಲಂಕರಿಸಿದೆ. ಅದಕ್ಕೆ ಪೂರಕವಾಗಿ ಹೋಮ್ ಥೇಟರ್ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ತರಬೇತಿ ಕೊಠಡಿಯಲ್ಲಿ ತಲೆ ಎತ್ತಿದರೆ ಸಾಕು ಇಡೀ ನಲಿ-ಕಲಿಯ ದಿವ್ಯ ದರ್ಶನವಾಗುತ್ತದೆ. ಅಂದರೆ ನಲಿ-ಕಲಿ ಪದ್ದತಿಗೆ ಪೂರಕವಾದ ಕ್ರಾಫ್ಟ್ ವರ್ಕ್ ಗಳನ್ನು ಚಪ್ಪರಕ್ಕೆ ನೇತುಹಾಕಲಾಗಿದೆ. ನೆಲಕ್ಕೆ ಮ್ಯಾಟ್ ಹಾಕಲಾಗಿದ್ದು, ಕುಳಿತುಕೊಳ್ಳಲು ಕಾಲಿಟ್ಟರೆ ಕೊಳಕಾಗುತ್ತದಲ್ಲ ಎಂಬ ಭಾವನೆ ಬರುತ್ತದೆ. ಜೊತೆಗೆ ಒಂದಿಷ್ಟು ಖಾಯಂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಸಮಯದಲ್ಲಿ ವಿಡೀಯೋ/ಆಡಿಯೋ ಬಳಸುವಾಗ ವಿದ್ಯುತ್ ಸರಬರಾಜು ಕಡಿತವಾಗುವ ಭಯವಿಲ್ಲ. ಬ್ಯಾಟರಿ ಮತ್ತು ಯು.ಪಿ.ಎಸ್ ಅಳವಡಿಸಿದ್ದು ಯಾವುದೇ ತೊಂದರೆ ಇಲ್ಲದೇ ನಿರಾಯಾಸವಾಗಿ ತರಬೇತಿ ಸಾಗುತ್ತವೆ. ಮೊದಲೆಲ್ಲಾ ಇಲ್ಲಿಗೆ ತರಬೇತಿಗೆ ಬಂದವರಿಗೆ ಆದಷ್ಟೂ ಬೇಗನೇ ಇಲ್ಲಿಂದ ಹೊರಹೋದರೆ ಸಾಕು ಎನಿಸುತ್ತಿತ್ತು. ಆದರೆ ಈಗ ಇಲ್ಲಿಂದ ಹೊರಹೋಗಲು ಮನಸ್ಸೇ ಬರುತ್ತಿಲ್ಲ ಎಂಬುದು ಶಿಕ್ಷಕರ ಅಭಿಮತ.
ಬದಲಾದ ಔಟ್ ಲುಕ್ : ಕೊಠಡಿಯೊಳಗಿನ ಚಿತ್ರಣ ಬದಲಾದಂತೆ ಕಟ್ಟಡದ ಹೊರಗಿನ ಔಟ್ ಲುಕ್ ಕೂಡಾ ಬದಲಾಗಿದೆ. ಹೊರಭಾಗವೂ ಕೂಡಾ ವರ್ಲಿ ಚಿತ್ರಣಗಳೊಂದಿಗೆ ಆಕರ್ಷಕ ರೂಪು ಪಡೆದಿದೆ. ಕಟ್ಟಡದ ಸುತ್ತಲೂ ರಡಿಮೇಡ್ ಕಾಂಪೌಂಡ್ ಹಾಕಲಾಗಿದ್ದು ಅಲ್ಲಿಯೂ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಪ್ರವೇಶದ್ವಾರದ ಗೇಟ್ ನಲ್ಲಿ ಶಿಕ್ಷಣದ ಮಹತ್ವ ಸಾರುವ ಥೀಮ್ ಆಧಾರಿತ ಚಿತ್ರ ಎಲ್ಲರ ಕಣ್ಮನ ಸೆಳೆಯುತ್ತವೆ. ಇಲ್ಲಿನ ಎಲ್ಲಾ ಚಿತ್ರಗಳು ರಮೇಶ ಮರೋಳ್ ಅವರ ಕುಂಚದಿಂದ ಮೂಡಿಬಂದಿವೆ.
ದಾನಿಗಳಿಂದ ಸಂಪದ್ಭರಿತ : ಇಲ್ಲಿನ ಎಲ್ಲಾ ಬದಲಾವಣೆಗಳ ಪ್ರಾಯೋಜಕರು ದಾನಿಗಳು. ಬದಲಾವಣೆಗೆ ಪ್ರೇರಕ ಶಕ್ತಿ ಸಮನ್ವಯಾಧಿಕಾರಿಗಳು ಮತ್ತು  ಸಿಬ್ಬಂದಿ. ಇವರೆಲ್ಲರ ಒಮ್ಮತದ ಕಾರ್ಯದಿಂದ ಸಂಪನ್ಮೂಲ ಕೇಂದ್ರವು ಸಂಪದ್ಭರಿತವಾಗಿದೆ.  ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು, ಶಿಕ್ಷಣಾಭಿಮಾನಿಗಳು ಜನಪ್ರಿನಿಧಿಗಳು, ಪಾಲಕ-ಪೋಷಕರು ಸ್ವಪ್ರೇರಣೆಯಿಂದ ದಾನ ನೀಡಿದ್ದಾರೆ.
ದಾನಗಳ ವಿವರ : ಪೇಂಟ್, ಪೇಂಟಿಂಗ್ ಕೂಲಿ, ಫ್ಲೋರಿಂಗ್ ಟೈಲ್ಸ್, ಫ್ಲೋರಿಂಗ್ ಮ್ಯಾಟ್, ಪ್ಯಾನ್ ಮತ್ತು ಕರ್ಟನ್ಸ್, ರಾಷ್ಟ್ರ ನಾಯಕರ ಫೋಟೋ, ಟೇಬಲ್, ಸಿಂಟೆಂಕ್ಸ್, ಬೋರ್ ವೆಲ್, ಪಂಪ್ ಮತ್ತು ಪೈಪ್ಸ್, 55 ಇಂಚಿನ ಎಲ್.ಇ.ಡಿ ಟಿ.ವಿ, ಹೋಮ್ ಥೇಟರ್, ಯು.ಪಿ.ಎಸ್ ಮತ್ತು ಬ್ಯಾಟರಿ, ಡಿಶ್ ಕನೆಕ್ಷನ್, ಮಹಾದ್ವಾರ ಮತ್ತು ಗೇಟ್, ಕಾಂಪೌಂಡ್ ವಾಲ್, ಧ್ವಜಸ್ಥಂಭ, ಪಾರ್ಕಿಂಗ್ ಟೈಲ್ಸ್, ಪಾರ್ಕ್ ಸ್ವಚ್ಛತೆ ಮತ್ತು ಮಣ್ಣು ಹೇರಿದ್ದು, ಶುದ್ದ ಕುಡಿಯುವ ನೀರಿನ ಘಟಕ, ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಹೀಗೆ ಒಟ್ಟು 8ಲಕ್ಷ 20 ಸಾವಿರ ಮೌಲ್ಯದ ದೇಣಿಗೆ ಸಂಗ್ರಹಿಸಲಾಗಿದೆ. ಸಮಗ್ರ ಬದಲಾವಣೆಯೂ ಸ್ವಯಂ ಪ್ರೇರಿತ ದಾನಿಗಳಿಂದ ಸಾಧ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಕಟ್ಟಡದ ಬಳಿಯ ಜಾಗೆಯಲ್ಲಿ ಪಾರ್ಕ್ ನಿರ್ಮಿಸುವ ಯೋಜನೆ ಇದೆ. ಅದಕ್ಕೆ  ಅಗತ್ಯವಿರುವ ಸಸಿಗಳನ್ನು ವಿತರಿಸಲು ದಾನಿಗಳು ಮುಂದೆ ಬಂದಿದ್ದಾರೆ. ಇದೆಲ್ಲಾ ಕೇವಲ ಒಂದು ವಾರ ಅಥವಾ ಒಂದು ತಿಂಗಳಲ್ಲಿ ಆದ ಕೆಲಸವಲ್ಲ. ಇಷ್ಟೆಲ್ಲಾ ಆಕರ್ಷಣೆ ಹಾಗೂ ಬದಲಾವಣೆಯ ರೂಪು ಪಡೆಯಲು ಒಂದು ವರ್ಷದ ಕಾಲಾವಧಿ ಬೇಕಾಗಿದೆ.
 ಇದೆಲ್ಲಾ ತುಂಬಾ ರಿಸ್ಕಿನ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹೇಗೋ ಒಂದಿಷ್ಟು ಕಾಲಹರಣ ಮಾಡಿ ಮನೆಗೆ ಹೋದರೆ ಅಂದಿನ ಡ್ಯೂಟಿ ಮುಗಿಯಿತು ಎಂಬುವವರೇ ಹೆಚ್ಚು. ಆದರೆ ಇಲ್ಲಿನ ಸಿಬ್ಬಂದಿ  10 ರಿಂದ 5 ರವರೆಗೆ ಕಛೇರಿ ಕೆಲಸಗಳನ್ನು ಮುಗಿಸಿಕೊಂಡು 5 ಗಂಟೆಯ ನಂತರ ಬದಲಾವಣೆಯ ಕೆಲಸವನ್ನು ಪೂರೈಸಿದ್ದಾರೆ. ದಾನಿಗಳ ಭೇಟಿ ಹಾಗೂ  ಕೆಲಸದ ಮೇಲುಸ್ತುವಾರಿ ವಹಿಸುವುದರಲ್ಲಿ ಮಗ್ನರಾಗಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು : ಇಷ್ಟೆಲ್ಲಾ ಕಾರ್ಯಭಾರಗಳ ನಡುವೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ. ತಾಲೂಕಿನಾದ್ಯಂತ ಬದಲಾವಣೆಯ ಗಾಳಿ ಬೀಸತೊಡಗಿದೆ. ಬದಲಾದ ಬಿ.ಆರ್.ಸಿ ಸನ್ನಿವೇಶ ಗಮನಿಸಿದ ಶಿಕ್ಷಕರು ತಮ್ಮ ಶಾಲಾ ವಾತಾವರಣವನ್ನು ಬದಲಾಯಿಸುವ ಮನಸ್ಸು ಮಾಡಿದ್ದಾರೆ. ಅನೇಕ ಶಾಲೆಗಳು ಪ್ರಗತಿಯತ್ತ ಹೆಜ್ಜೆ ಹಾಕಿವೆ. ಪ್ರಾರಂಭದಲ್ಲಿ ತಾಲೂಕಿನಾದ್ಯಂತ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಿವೆ. ಬಿ.ಆರ್.ಸಿಯ ಸಮಗ್ರ ಚಿತ್ರಣ ಬದಲಾದ್ದರಿಂದ ಮಲ್ಲಿಗೆಯ ನಾಡಲ್ಲಿ ಶಿಕ್ಷಣದ ಪರಿಮಳ ಸೂಸುತ್ತಿದೆ.
ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಎಂತಹ ಕಾರ್ಯವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಮ್ಮ ಬಿ.ಆರ್.ಸಿ ಹೊಸ ರೂಪು ಪಡೆದಿರುವುದೇ ಸಾಕ್ಷಿ. ಇಲ್ಲಿನ ಅಧಿಕಾರಿಗಳು ಆದೇಶಕ್ಕಿಂತ ಕಾರ್ಯ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಪಾರದರ್ಶಕವಾಗಿ ಅಭಿವೃದ್ದಿ ಕೆಲಸ  ಮಾಡಿದ್ದಾರೆ. ಮೊದಲು ಇಲ್ಲಿಗೆ ಬರಲು ಎಲ್ಲರಿಗೂ ಒಂದು ರೀತಿಯ ಕಿರಿಕಿರಿ ಎನಿಸುತ್ತಿತ್ತು. ಆದರೆ ಈಗ ಎಲ್ಲರೂ ಖುಷಿಯಿಂದ ಬರುತ್ತಾರೆ.
        ಸುರೇಶ ಅರುಣಿ. (ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು).

ಬಿ.ಆರ್.ಸಿ.ಯ ಬದಲಾದ ಸ್ವರೂಪ ಖುಷಿ ತಂದಿದೆ. ಇಲ್ಲಿನ ಬದಲಾವಣೆಯಂತೆ ಪ್ರತಿ ಸರ್ಕಾರಿ ಶಾಲೆಯನ್ನೂ  ಬದಲಾಯಿಸಲು ಪ್ರತ್ನಿಸುತ್ತೇವೆ. ಗುಣಮಟ್ಟದ  ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂವನ್ನು ಕ್ರೂಢೀಕರಿಸಲು ಶ್ರಮಿಸುತ್ತಿದ್ದೇವೆ. ತರಬೇತಿಯಲ್ಲಿ ಕಲಿತ ವಿಷಯಗಳು ತರಗತಿ ಕೋಣೆಯಲ್ಲಿ ಬಳಕೆಯಾಗುವಂತೆ ಮೇಲುಸ್ತುವಾರಿ ವಹಿಸಲು ಆಧ್ಯತೆ ನೀಡಿದ್ದೇವೆ.
         ಜಿ.ಕೊಟ್ರೇಶ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೂವಿನಹಡಗಲಿ.

ಆರ್.ಬಿ.ಗುರುಬಸವರಾಜ ಹೊಳಗುಂದಿ
ಸಹ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ (ತಾ) ಬಳ್ಳಾರಿ(ಜಿ)

9902992905

ಹೋಂವರ್ಕ್ನ ಭೂತವೂ, ಮಕ್ಕಳ ಭವಿಷ್ಯವೂ! Home work and children future

ದಿನಾಂಕ 14-08-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಹೋಂವರ್ಕ್ನ ಭೂತವೂ,  ಮಕ್ಕಳ ಭವಿಷ್ಯವೂ!

ಪಕ್ಕದ ಮನೆಯ ಮೂರು ವರ್ಷದ ಹುಡುಗ ರವಿತೇಜ ಪ್ರತಿದಿನವೂ ನಮ್ಮ ಮನೆಗೆ ಬರುತ್ತಿದ್ದ. ಇತ್ತಿÃಚೆಗೆ ಅವನು ಬರುವುದು ಅಪರೂಪವಾಯಿತು. ಬಂದರೆ ಅದೂ ಸಂಜೆ ಮಾತ್ರ ಯಾವಾಗಲೋ ಒಮ್ಮೆ ಬರುತ್ತಿದ್ದ. ಯಾಕೆ ಹೀಗೆ? ಎಂದು ವಿಚಾರಿಸಿದಾಗ ‘ಅವನು ಶಾಲೆಗೆ ಹೋಗುತ್ತಿದ್ದಾನೆ, ಸಂಜೆ ಹೋಂವರ್ಕ್ ಮಾಡುತ್ತಾನೆ’ ಎಂಬ ಉತ್ತರ ಬಂತು. ಅರೆ! ಅವನಿಗಿನ್ನೂ ಮೂರು ವರ್ಷ ತುಂಬಿಲ್ಲವಲ್ಲ. ಅದ್ಯಾಕೆ ಶಾಲೆಗೆ ಸೇರಿಸಿದಿರಿ? ಎಂದಾಗ, ‘ಇಲ್ಲ ಸರ್, ಮನೆಯಲ್ಲಿ ಅವನ ಕಾಟ ಹೆಚ್ಚಾಗಿದೆ. ಅದಕ್ಕೆ ಶಾಲೆಗೆ ಹಾಕಿದ್ದೆವೆ’ ಎಂದರು. ನನಗೆ ತುಂಬಾ ಬೇಜಾರೆನಿಸಿತು. ‘ನೀವು ಮಾಡಿದ್ದು ಸರಿಯಿಲ್ಲವೇನೋ? ಎನಿಸುತ್ತಿದೆ. ಯೋಚನೆ ಮಾಡಿ ನೋಡಿ’ ಎಂದು ಹೇಳಿ ಬಂದೆ.
ಮೊಟಕಾದ ಬಾಲ್ಯ : ಇದು ಕೇವಲ ಒಬ್ಬ ಬಾಲಕ/ಬಾಲಕಿಯ ಕಥೆಯಲ್ಲ. ವಿಶ್ವದ ಎಲ್ಲಾ ಮಕ್ಕಳ ಬಾಲ್ಯವೂ ಹೀಗೆ ಕಮರುತ್ತಿದೆ. ಆಡಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಪಂಜರದ ಪಕ್ಷಿಗಳನ್ನಾಗಿ ಮಾಡುತ್ತಿದ್ದೆÃವೆ. ಎಲ್ಲದರಲ್ಲೂ ನಮ್ಮ ಮಕ್ಕಳು ಮುಂದಿರಬೇಕೆಂಬ ಬಯಕೆಯಿಂದ ಮಕ್ಕಳನ್ನು ಪೈಪೋಟಿಗೆ ಇಳಿಸಿದ್ದೆÃವೆ. ಇದರಿಂದ ಅವರ ಬಾಲ್ಯ ಮೊಟಕಾಗುತ್ತಿದೆ. ಮಗುವಿನಲ್ಲಿ ಮಾನಸಿಕ, ಬೌದ್ದಿಕ ಹಾಗೂ ಸಾಮಾಜಿಕ ಬೆಳವಣಿಗೆಗಳು ಕುಂಟಿತವಾಗುತ್ತವೆ. ಮಗು ಸಾಮಾಜೀಕರಣಗೊಳ್ಳುವ ಬದಲು ಸಮಾಜಕ್ಕೆ ಕಂಟಕವಾಗುತ್ತದೆ.
ಒತ್ತಾಯವೇ ಒತ್ತಡ :  ‘ನಮ್ಮ ಮಗುವಿಗೆ ಸ್ವಲ್ಪ ಜಾಸ್ತಿ ಹೋಂವರ್ಕ್ ಕೊಡಿ’- ಇದು ಮಕ್ಕಳನ್ನು ಶಾಲೆಗೆ ಕಳಿಸುವ ಬಹುತೇಕ ಪಾಲಕರ ಬೇಡಿಕೆ.  ಹೆಚ್ಚು ಹೆಚ್ಚು ಹೋಂವರ್ಕ್ ಮಾಡಿದರೆ ಮಗು ಬುದ್ದಿವಂತ ಆಗುತ್ತದೆ ಎಂಬುದು ಅವರ ಅನಿಸಿಕೆಯಾಗಿದೆ. ಇನ್ನು ಕೆಲವು ಪಾಲಕರು ಸಂಜೆ ಟಿ.ವಿ. ನೋಡುವುದಕ್ಕಾಗಿ ಮಕ್ಕಳಿಗೆ ಹೆಚ್ಚು ಹೋಂವರ್ಕ್ ಕೊಡಲು ಕೇಳುತ್ತಾರೆ. ಹೋಂವರ್ಕ್ ನೆಪದಲ್ಲಿ ಮಗುವನ್ನು ಟಿ.ವಿ.ಯಿಂದ ದೂರವಿಡುವ ಹುನ್ನಾರ. ಕೆಲ ಮಕ್ಕಳು ಹೋಂವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಇಂತಹ ಸಂಧರ್ಭಗಳಲ್ಲಿ ಪಾಲಕರು ಮಕ್ಕಳ ಕೈಹಿಡಿದು ಶಾಲೆಯವರೆಗೂ ತೆರಳಿ ಶಿಕ್ಷಕರಿಗೆ ಸಮಜಾಯಷಿ ಹೇಳಿ ಬರುವುದನ್ನು ಕಾಣುತ್ತೆÃವೆ. ಈ ಎಲ್ಲಾ ತಾಪತ್ರಯಗಳನ್ನು ತಪ್ಪಿಸಲು ಬಹುತೇಕ ಸಂಧರ್ಭಗಳಲ್ಲಿ ಪಾಲಕರೇ ಮಕ್ಕಳ ಹೋಂವರ್ಕ್ ಮಾಡುವುದುಂಟು.
‘ಯಾಕೋ ಹೋಂವರ್ಕ್ ಮಾಡಿಲ್ಲ?’ ಎಂದು ಶಾಲೆಯಲ್ಲಿ, “ಹೋಂವರ್ಕ್ ಮಗಿಸುವವರೆಗೆ ಊಟವೂ ಇಲ್ಲ!, ನಿದ್ದೆಯೂ ಇಲ್ಲ!” ಎಂದು ಪಾಲಕರು ಮಗುವನ್ನು ಪೀಡಿಸುವುದು ಸಹಜವಾಗಿಬಿಟ್ಟಿದೆ. ಹೋಂವರ್ಕ್ ಕುರಿತ ಇಂತಹ ಹೇಳಿಕೆಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಪಾಲಕರಿಗೆ ತಿಳಿಯುವುದು ಇನ್ನೂ ಯಾವಾಗ? ಹೋಂವರ್ಕ್ ಕೇವಲ ಬರವಣಿಗೆಗೆ ಮಾತ್ರ ಸೀಮಿತವಾಗಿರುವುದೇ ದುರಂತ. ಕಲಿಕೆಯ ಅಭ್ಯಾಸ/ರೂಢಿಯ ಹೆಸರಿನಲ್ಲಿ ಶಾಲೆಗಳಲ್ಲಿ ಪುಟಗಟ್ಟಲೆ ನೀಡುವ ಹೋಂವರ್ಕ್ನಿಂದ ಮಕ್ಕಳ ಕಲಿಕೆಯೇನೂ ಉನ್ನತ ಮಟ್ಟಕ್ಕೆ ಏರಿಲ್ಲ.
ಹೋಂವರ್ಕ್ ಎನ್ನುವುದು ಮಕ್ಕಳಿಗೆ ಮತ್ತು ಪಾಲಕರಿಗೆ ದುಃಸ್ವಪ್ನ ಮತ್ತು ಹಿಂಸೆಯಾಗಿದೆ. ಪ್ರೌಢಶಿಕ್ಷಣ ಹಂತದಲ್ಲಾದರೆ ಮಕ್ಕಳಿಗೆ ಒಂದಿಷ್ಟು ಮಾನಸಿಕ ಸ್ಥಿಮಿತ ಇರುತ್ತದೆ. ನಾವು ಯಾಕೆ ಕಲಿಯಬೇಕು? ಶಿಕ್ಷಣದಿಂದ ನಮಗಾಗುವ ಲಾಭಗಳೇನು? ಎಂಬುದರ ಬಗ್ಗೆ ಅರಿವು ಇರುತ್ತದೆ. ಆದರೆ ಪ್ರಾಥಮಿಕ ಹಂತದ ಅದರಲ್ಲೂ ಕಿರಿಯ ಪ್ರಾಥಮಿಕ ಹಂತದ ಮಕ್ಕಳಿಗೆ ನಾವು ಯಾಕೆ ಕಲಿಯಬೇಕೆಂಬ ಬಗ್ಗೆ ಕಿಂಚಿತ್ತೂ ಅರಿವು ಇರುವುದಿಲ್ಲ. ಅಂತಹ ಮಕ್ಕಳಿಗೆ ನೀಡುವ ಹೋಂವರ್ಕ್ ಒಂದು ರೀತಿಯ ಹಿಂಸೆಯಲ್ಲವೇ? ಇನ್ನು ಶಾಲಾಪೂರ್ವ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಎಲ್.ಕೆ.ಜಿ, ಯು.ಕೆ.ಜಿ, ಪ್ಲೆÃಗ್ರೂಪ್, ಪ್ಲೆÃಹೋಂಗಳ ಮಕ್ಕಳ ಪಾಲಿಗಂತೂ ಹೋಂವರ್ಕ್ ಎನ್ನುವುದು ಕೊರಳ ಉರುಳು ಎನ್ನಬಹುದು.
ಹೋಂವರ್ಕ್ ಏಕೆ ಬೇಕು? : ಮಕ್ಕಳು ಶಾಲೆಯಲ್ಲಿ ಕಲಿತ ಕಲಿಕಾಂಶಗಳನ್ನು ಮನನ ಮಾಡಿಕೊಳ್ಳಲು ಹೋಂವರ್ಕ್ ಅಗತ್ಯ. ಮಕ್ಕಳು ಸ್ವತಂತ್ರವಾಗಿ ಕಲಿಯುವಂತೆ ಮಾಡುವುದು ಹೋವರ್ಕ್ನ ಉದ್ದೆÃಶ. ಹೋಂವರ್ಕ್ ಇಂದಿನ ಮತ್ತು ನಾಳಿನ ತರಗತಿಗಳ ಸ್ನೆÃಹ ಸೇತುವೆಯಾಗಬೇಕು. ಅಂದರೆ ಇಂದಿನ ತರಗತಿಗಳಲ್ಲಿ ಕಲಿತ ಕಲಿಕಾಂಶಗಳನ್ನು ಮನನ ಮಾಡಿಕೊಂಡು ನಾಳಿನ ತರಗತಿಗಳಿಗೆ ಮಗು ಪೂರ್ವ ತಯಾರಿ ನಡೆಸಬೇಕು. ನಾಳೆ ನಾನು ಏನೇನು ಕಲಿಯಬಹುದು ಎಂದು ಮಗು ಊಹಿಸುವಂತಾಗಬೇಕು. ಹೋಂವರ್ಕ್ ಎಂಬುದು ಕಲಿಕಾಂಶ/ಪರಿಕಲ್ಪನೆಯ ಮುಂದಿನ ಭಾಗಕ್ಕೆ ಮಗುವನ್ನು ಕರೆದೊಯ್ಯುವ ಮಾನಸಿಕ ಸಿದ್ದತೆ.
ಹೋಂವರ್ಕ್ನ ವ್ಯಾಪಕ ಲಾಭಗಳು ಹೀಗಿವೆ. ಮಕ್ಕಳಲ್ಲಿ ಉತ್ತಮ ಓದಿನ ಹವ್ಯಾಸ ಬೆಳೆಸುತ್ತದೆ. ಶಾಲೆ ಮತ್ತು ಶಿಕ್ಷಣದ ಬಗೆಗಿನ ಸಕಾರಾತ್ಮಕತೆಯನ್ನು ಇಮ್ಮಡಿಗೊಳಿಸುತ್ತದೆ. ಶಾಲೆ/ತರಗತಿ ಹೊರಗೂ ಸಹ ಸಂತೋಷದಿಂದ ಕಲಿಯಬಹುದು ಎಂಬುದನ್ನು ಮಕ್ಕಳಿಗೆ ತಿಳಿಸುತ್ತದೆ. ಶಾಲೆ ಮತ್ತು ಕುಟುಂಬದ ನಿತ್ಯ ಸಂವಹನದ ಸೇತುವೆ. ಮಗು ಶಾಲೆ ಮತ್ತು ಶಾಲೆಯ ಹೊರಗೆ ಹೇಗೆ ಕಲಿಯುತ್ತಿದೆ ಎಂಬುದನ್ನು ಪಾಲಕರು ತಿಳಿಯಲು ಸಹಕಾರಿ.
ಯಾವ ಹಂತಕ್ಕೆ ಎಷ್ಟು ಹೋಂವರ್ಕ್? : ಇಂದು ಮಗುವಿನ ಆಹಾರ, ಆರೋಗ್ಯ ಮತ್ತು ನಿದ್ರೆಗಳಿಗಿಂತ ಹೋಂವರ್ಕ್ಗೇ ಮೊದಲ ಆಧ್ಯತೆಯಾಗಿದೆ.  ಹೋಂವರ್ಕ್ ಕಡ್ಡಾಯವಾಗಿ ಬೇಕು ಎನ್ನುವುದಾದರೆ ಯಾವ ತರಗತಿಗೆ ಎಷ್ಟು ಹೋಂವರ್ಕ್ ಬೇಕು? ಎಂಬುದು ಚರ್ಚೆಯ ವಿಷಯವಾಗಿದೆ. ‘ಮಗು ನಿನಗೆ ಹೋಂವರ್ಕ್ ಬೇಕೆ?’ ಎಂದು ಕಿರಿಯ ಪ್ರಾಥಮಿಕ ಹಂತದ ಮಕ್ಕಳನ್ನು ಕೇಳಿದರೆ ಬೇಡ ಎನ್ನುತ್ತಾರೆ. “ಪ್ರತೀ ಮಗುವೂ ಅಂದರೆ ಉನ್ನತ ಮತ್ತು ಕಡಿಮೆ ಕಲಿಕಾ ಹಂತದಲ್ಲಿರುವ ಪ್ರತೀ ಮಗುವೂ ಹೋಂವರ್ಕ್ನ್ನು ದ್ವೆÃಷಿಸುತ್ತದೆ” ಎಂದು ಬೋಸ್ಟನ್‌ನ ಮಾನವ ಅಭಿವೃದ್ದಿ ಮತ್ತು ಮನಶಾಸ್ತçಜ್ಞರಾದ ಪ್ರೊ||ಜಾನೈನ್ ಬೆಮ್‌ಪೆಚಾಟ್ ಅಭಿಪ್ರಾಯ ಪಡುತ್ತಾರೆ. ಹೋಂವರ್ಕ್ ಮಗುವಿನ ಮಾನಸಿಕ ಸ್ಥಿಮಿತಕ್ಕೆ ಅನುಗುಣವಾಗಿ ಇರಬೇಕೆಂಬುದು ಶಿಕ್ಷಣ ತಜ್ಞರು ಮತ್ತು ಮನೋವೈದ್ಯರ ವಾದ.

ಹೋಂವರ್ಕ್ ಹೇಗಿರಬೇಕು? : ಮಕ್ಕಳ ಕಲಿಕೆಯಲ್ಲಿ ಪಾಲಕರ ಸಹಭಾಗಿತ್ವ ಅಗತ್ಯ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಲಕರು ಕಲಿಯಲು ಮಗುವಿನ ಮೇಲೆ ಮಾತ್ರ ಒತ್ತಡ ಹೇರುತ್ತಾರೆ. ಬದಲಾಗಿ ಮಗು ಚೆನ್ನಾಗಿ ಕಲಿಯಲು ತಾವೇನು ಮಾಡಬೇಕು? ಎಂದು ಬಹುತೇಕರು ಯೋಚಿಸುವುದೇ ಇಲ್ಲ. ಮಗುವಿನ ಸ್ಥಾನದಲ್ಲಿ ನಿಂತು ಕೊಂಚ ಯೋಚಿಸಿದರೆ ಒಂದಿಷ್ಟು ವಿಭಿನ್ನ ಆಯ್ಕೆಗಳು ದೊರೆಯುತ್ತವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು.
ಮಗುವಿನ ದೈಹಿಕ, ಮಾನಸಿಕ ಮತ್ತು ಬೌದ್ದಿಕ ವಯಸ್ಸಿಗನುಗುಣವಾಗಿ ಹೋಂವರ್ಕ್ ನೀಡುವುದು/ನೀಡಿಸುವುದು.
ಹೋಂವರ್ಕ್ನಿಂದ ಮಗುವಿನಲ್ಲಿ ಸಂತಸದಾಯಕ ಕಲಿಕೆ ಮೂಡಬೇಕು.
ಹೋಂವರ್ಕ್ ಶಾಲಾ ಕಲಿಕೆಗಿಂತ ವಿಭಿನ್ನವಾಗಿದ್ದು, ಒತ್ತಡ ರಹಿತವಾಗಿರಬೇಕು.
ಹೋಂವರ್ಕ್ನಿಂದ ಮಗು ಹೊಸತನ ಕಲಿಯುವಂತಿರಬೇಕು.
ಹೋಂವರ್ಕ್ ಮಗುವಿನಲ್ಲಿ ಸೃಜನಶೀಲತೆಯನ್ನು ಉತ್ತೆÃಜಿಸುವಂತಿರಬೇಕು.
ಹೋಂವರ್ಕ್ ಎಂಬುದು ತರಗತಿ ಹೊರಗಿನ ಕಲಿಕೆಯನ್ನು ಶಾಲಾ ಕೊಠಡಿಗೆ ಅನ್ವಯಿಸುವಂತಿರಬೇಕು.
ಹೋಂವರ್ಕ್ನಿಂದ ಮಗು ತನಗೆ ಬೇಕಾದ ಜ್ಞಾನವನ್ನು ತಾನೇ ಕಟ್ಟಿಕೊಳ್ಳಲು ಸಶಕ್ತವಾಗಬೇಕು.
ಪಾಲಕರ ಪಾತ್ರ : ಮಗುವಿನ ಹೋಂವರ್ಕ್ ನಿರ್ವಹಣೆಯಲ್ಲಿ ಪಾಲಕರ ಪಾತ್ರ ಮಹತ್ತರವಾದುದು. ಮಗು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಪಾಲಕರು ಭಾವನಾತ್ಮಕ ಬೆಂಬಲ ನೀಡಬೇಕೇ ವಿನಹ ಸಮಸ್ಯೆಯನ್ನು ಪರಿಹರಿಸುವುದಲ್ಲ. ಪಾಲಕರ ಅಲ್ಪ ಸಹಾಯ ಪಡೆದು ಹೋಂವರ್ಕ್ ಮಾಡುವುದು ಕಲಿಕಾರ್ಥಿಯ ಜವಾಬ್ದಾರಿ. ಮಕ್ಕಳೊಂದಿಗೆ ಸಂಭಾಷಣೆ ನಡೆಸುತ್ತ ಅವರೊಂದಿಗೆ ಪ್ರಿÃತಿಯ ಮಾತುಗಳನ್ನಾಡುತ್ತ ಹೋಂವರ್ಕ್ ಮಾಡುವಂತೆ ಪ್ರೆÃರೇಪಿಸಬೇಕು. ಆದಷ್ಟೂ ಅವರ ಆವೇಶಗಳನ್ನು ತಗ್ಗಿಸಬೇಕು. ಶಾಲೆಯಲ್ಲಿ ಮಗುವಿನ ಕಲಿಕಾ ಸಾಮರ್ಥ್ಯಗಳ ಕುರಿತು ಆಗಾಗ್ಗೆ ಶಿಕ್ಷಕರೊಂದಿಗೆ ಮಾತನಾಡಬೇಕು. ಮಗು ಉತ್ತಮ ಕಲಿಕಾ ಪ್ರದರ್ಶನ ನೀಡಿದಾಗ ಶ್ಲಾಘಿಸಬೇಕು. ಮನೆಯಲ್ಲಿ ಚೆನ್ನಾಗಿ ಓದಿದ್ದರಿಂದ ಇಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎಂದು ಪ್ರೊÃತ್ಸಾಹಿಸಬೇಕು.
ಮಗುವಿನ ಹೋಂವರ್ಕ್ಗಾಗಿ  ನಿತ್ಯವೂ ನಿಗದಿತ ಸಮಯವನ್ನು ಮೀಸಲಿಡಬೇಕು. ಅದು ಹೋಂವರ್ಕ್ ವೇಳೆ ಎಂದು ನಿಗದಿಯಾಗಬೇಕು. ಈ ಸಮಯದಲ್ಲಿ ಒಂದೊಂದು ಹಂತ/ವಿಷಯವನ್ನು ಮಗು ಪೂರ್ಣಗೊಳಿಸಿದಾಗ ಕೊಂಚ ಬಿಡುವು ನೀಡಬೇಕು. ಇದು ಮಗುವಿನ ಅವಧಾನವನ್ನು ಹೆಚ್ಚಿಸುತ್ತದೆ. ಪಾಲಕರು ಮಗುವಿಗೆ ಮಾರ್ಗದರ್ಶಕರಾಗಬೇಕೇ ಹೊರತು ಅವರೇ ಜವಾಬ್ದಾರಿ ಹೋರಬಾರದು.
ಮಗು ಶಾಲಾ ಕೆಲಸದಲ್ಲಿ ನಿರಾಸಕ್ತಿ ತೋರುತ್ತಿದ್ದರೆ ಮತ್ತು ಇತರರಿಂದ ಪಡೆದ ನೋಟ್ಸನ್ನು ಕಾಫಿ ಮಾಡುತ್ತಿದ್ದರೆ ಆ ಮಗು ಅನಪೇಕ್ಷಿತ ಒತ್ತಡದಲ್ಲಿದೆ ಎಂದರ್ಥ. ಅಂತಹ ಸಂಧರ್ಭಗಳಲ್ಲಿ ಪಾಲಕರು ಶಿಕ್ಷಕರೊಂದಿಗೆ ಮಾತನಾಡಿ ಮಗುವಿನ ಒತ್ತಡಕ್ಕೆ ಕಾರಣ ಕಂಡುಕೊಂಡು ನಿವಾರಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಮಗುವಿನ ಭವಿಷ್ಯ ಕಗ್ಗಂಟಾಗುತ್ತದೆ. ಹೋಂವರ್ಕ್ ಮಾಡಲು ಮಗುವಿಗೆ ಸ್ಥಳಾವಕಾಶ ಮಾಡಿಕೊಡಿ. ಅದು ಮಗು ಸ್ನೆÃಹಿ ವಾತಾವರಣದಿಂದ ಕೂಡಿರಬೇಕು. ಮಗು ಅತೀ ಕಡಿಮೆ ಅವಧಾನದ ಮಟ್ಟ ಹೊಂದಿರುತ್ತದೆ. ಹೋಂವರ್ಕ್ ಮುಗಿಸಲು ಹೆಚ್ಚು ಸಮಯ ಬಳಸಿಕೊಂಡರೆ ಮಗುವಿನ ಮೆದುಳಿನಲ್ಲಿ ಒತ್ತಡ ಏರ್ಪಡುತ್ತದೆ ಎಂಬುದನ್ನು ಮನಶಾಸ್ತçಜ್ಞರು ಒತ್ತಿ ಹೇಳುತ್ತಾರೆ.
ಶಿಕ್ಷಕರ ಪಾತ್ರ : ಹೋಂವರ್ಕ್ ನೀಡುವಲ್ಲಿ ಶಿಕ್ಷಕರ ಕಾಳಜಿ ಮತ್ತು ಬದ್ದತೆ ಎದ್ದು ಕಾಣುತ್ತದೆ. ಸೃಜನಶೀಲ ಶಿಕ್ಷಕರು ನೀಡುವ ಹೋಂವರ್ಕ್ ವಿಭಿನ್ನ ಹಾಗೂ ವಿಶಿಷ್ಠತೆಯಿಂದ ಕೂಡಿರುತ್ತದೆ. ಮಗುವೂ ಕೂಡಾ ಸೃಜನಶೀಲತೆ ಬೆಳೆಸಿಕೊಳ್ಳಲು ಬೇಕಾದ ವಾತಾವರಣ ಸೃಷ್ಟಿಸುತ್ತದೆ. ಹಾಗಾಗಿ ಶಿಕ್ಷಕರು ಕೇವಲ ನೇರ ಪ್ರಶ್ನೆಗಳನ್ನು ನೀಡದೇ ಅನ್ವಯಿಕ ಪ್ರಶ್ನೆಗಳನ್ನೂ ನೀಡಬೇಕು. ಹೋಂವರ್ಕ್ ಮಗುವಿನಲ್ಲಿ ಒತ್ತಡ ಹೇರುವಂತಿರಬಾರದು. ಬದಲಾಗಿ ಮಗು ಖುಷಿಯಾಗಿ ಮಾಡಿ ಮುಗಿಸುವಂತಿರಬೇಕು. ‘ಇಷ್ಟೆÃನಾ? ಇನ್ನಷ್ಟು ಇದ್ದಿದ್ದರೆ ಚೆನ್ನಾಗಿತ್ತು’ ಎನ್ನುವಂತಿರಬೇಕು. ಅಂದರೆ ಮಗುವಿನ ಭೌತಿಕ, ಮಾನಸಿಕ, ಶೈಕ್ಷಣಿಕ ಸ್ಥಿತಿಯನ್ನು ಅರ್ಥೈಸಿಕೊಂಡು ಅದನ್ನು ಉತ್ತಮ ಪಡಿಸಲು ಪೂರಕವಾಗುವಂತೆ ಹೋಂವರ್ಕ್ ನೀಡಬೇಕು. ಕೆಲಸದ ಒತ್ತಡದ ನೆಪ ಹೇಳಿ ಕೇವಲ ರೈಟ್ ಮಾರ್ಕ್ ಹಾಕುವುದಲ್ಲ. ಕಡ್ಡಾಯವಾಗಿ ಪರಿಶೀಲಿಸಬೇಕು. ಮಕ್ಕಳು ಮಾಡಿದ ತಪ್ಪನ್ನು ಕೆಂಪು ಮಸಿಯಿಂದ ಸೊನ್ನೆ ಸುತ್ತುವ ಬದಲು ಅದನ್ನು ಸರಿಪಡಿಸಲು ಇರುವ ಮಾರ್ಗವನ್ನು ತಿಳಿಸಬೇಕು. ಹೋಂವರ್ಕ್ನಲ್ಲಿ ಬರವಣಿಗೆಗೆ ನೀಡುವಷ್ಟು ಪ್ರಾಮುಖ್ಯವನ್ನು ಓದುವ ಮತ್ತು ಮಾತನಾಡುವ ಕ್ಷೆÃತ್ರಕ್ಕೂ ನೀಡಬೇಕು. ಆಗ ಮಾತ್ರ ಅದಕ್ಕೊಂದು ನಿರ್ದಿಷ್ಟತೆ ಸಿಗುತ್ತದೆ. ಹೀಗೆ ಮಾಡುವುದರಿಂದ ಹೋಂವರ್ಕ್ ಒತ್ತಡರಹಿತವಾಗಿ ಹ್ಯಾಪಿವರ್ಕ್ ಆಗುವುದರಲ್ಲಿ ಮತ್ತು ಮಕ್ಕಳ ಭವಿಷ್ಯವೂ ಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ. ಅಲ್ಲವೇ?
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

ಪ್ರಜಾವಾಣಿ 14-08-2017

ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ

2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ
ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ ಟಿ.ಎಂ.ವೀರಭದ್ರಯ್ಯ

ಸಾಮಾನ್ಯವಾಗಿ ದೈಹಿಕ ಶಿಕ್ಷಕರಿಗೆ ಶಾಲೆಯ ಶಿಸ್ತು ಹಾಗೂ ಸ್ವಚ್ಚತೆಯ ಜವಾಬ್ದಾರಿ ವರ್ಷವಿಡೀ ಇರುತ್ತದೆ. ಅದರಲ್ಲೂ ವರ್ಷದ ಮೂರು ತಿಂಗಳು ಮಾತ್ರ ಅಂದರೆ ಕ್ರಿಡಾಕೂಟಗಳು ಮುಗಿಯುವವರೆಗೆ ಮಾತ್ರ ಕಾರ್ಯದ ಒತ್ತಡ ಹೆಚ್ಚು. ಉಳಿದ ದಿನಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಹಾಗೂ ಪ್ರಾಯೋಗಿಕ ತರಗತಿಗಳಲ್ಲಿ ತೊಡಗಿರುತ್ತಾರೆ. ಆದರೆ ಇಲ್ಲೊಬ್ಬ ದೈಹಿಕ ಶಿಕ್ಷಕರು ವರ್ಷವಿಡೀ ಮಕ್ಕಳನ್ನು ತರಬೇತು ಮಾಡುವುದರಲ್ಲೆ ಕಾಲ ಕಳೆಯುತ್ತಾರೆ.  ಅವರೇ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಶ್ರಿ.ಗು.ಕ.ಸ.ಮಾ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಕರಾದ ಟಿ.ಎಂ.ವೀರಭದ್ರಯ್ಯ.
ಮಕ್ಕಳಿಗಾಗಿ ಮೀಸಲಾದ ಬದುಕು: ಇವರು ದಿನದ ಹೆಚ್ಚು ಹೊತ್ತು ಮಕ್ಕಳ ಜೊತೆಯಲ್ಲಿಯೇ ಕಾಲ ಕಳೆಯುತ್ತಾರೆ. ಅದರಲ್ಲೆನು ವಿಶೇಷ ಅಂತಿರಾ? ವಿಶೇಷ ಇರೊದೇ ಇವರ ವಿಶೇಷ ಚಟುವಟಿಕೆಗಳಲ್ಲಿ. ಬೆಳಿಗ್ಗೆ 6 ಗಂಟೆಗೆ ಶಾಲಾ ಆವರಣದೊಳಕ್ಕೆ ಬರುವ ಇವರು ಅಲ್ಲಿಯೇ ದೈಹಿಕ ವ್ಯಾಯಾಮದಲ್ಲಿ ತೊಡಗುತ್ತಾರೆ. 6;30ರಿಂದ 7;00 ಗಂಟೆಯೊಳಗೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಾರೆ. ಆಗಮಿಸಿದ ಎಲ್ಲಾ ಮಕ್ಕಳಿಗೂ ಯೋಗ ಮತ್ತು  ದೈಹಿಕ ಕಸರತ್ತುಗಳನ್ನು ಹೇಳಿಕೊಡುತ್ತಾರೆ. 8;30 ರವರೆಗೆ ಮಕ್ಕಳ ಜೊತೆಗಿದ್ದು ಮನೆಗೆ ತೆರಳುತ್ತಾರೆ. ಪುನಃ ಮನೆಯಿಂದ 9;00 ಗಂಟೆಗೆ ಶಾಲೆಗೆ ಆಗಮಿಸಿದರೆ ಮನೆಗೆ ತೆರಳುವುದು ಸಂಜೆ 7:00ಕ್ಕೆ. ಇದು ಕೇವಲ ಒಂದು ದಿನ ಅಥವಾ ಒಂದು ವಾರದ ಕಥೆಯಲ್ಲ. 20 ವರ್ಷಗಳ ಸೇವಾವಧಿಯುದ್ದಕ್ಕೂ ನಡೆದ ಅತ್ಯಮೂಲ್ಯ ಸೇವಾ ಬದುಕು.
ವೈವಿಧ್ಯಮಯ ಕಾರ್ಯಗಳು:  ಶಾಲಾ ಕೆಲಸದ ವೇಳೆಯಲ್ಲಿಯೂ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಸ್ವಚ್ಛತೆ, ಶಾಲಾವನದ ನಿರ್ವಹಣೆ, ಕ್ರಿಡಾಕೂಟಗಳ ಆಯೋಜನೆ, ವಿವಿಧ ಜಯಂತಿ ಹಾಗೂ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮತ್ತು ನಿರ್ವಹಣೆ ಹೀಗೆ ಇಡೀ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಇವರದ್ದೆ ಓಡಾಟ. ಜೊತೆಗೆ ತರಗತಿಗಳು ಖಾಲಿ ಇದ್ದಾಗ ಅಲ್ಲಿ ಹಾಜರಾಗಿ ಭಾಷಾ ಆಟಗಳ ಮೂಲಕ ಇಂಗ್ಲಿಷ್ ಬೋಧಿಸುತ್ತಾರೆ. ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಸದಾ ಶ್ರಮಿಸುತ್ತಿರುತ್ತಾರೆ.
ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಪ್ರಭಾತ್‌ಪೇರಿ ಹೊಗಬೇಕಿದ್ದರೆ ಇವರ ಬ್ಯಾಂಡ್‌ಸೆಟ್ ಮುನ್ನಡೆಯುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಸಿದ ಶಿಸ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿತವಾಗುತ್ತದೆ. ಪ್ರಮುಖ ರಾಷ್ಟಿಯ ದಿನಾಚರಣೆಗಳಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಮಕ್ಕಳಿಂದ ಆಕರ್ಷಕ ಕವಾಯತು ಮತ್ತು ಜನಜಾಗೃತಿ ಮೂಡಿಸುವ ಕಿರು ರೂಪಕಗಳ ಪ್ರದರ್ಶನ ಇರುತ್ತದೆ.
ವಿಶೇಷ ಚಟುವಟಿಕೆಗಳು: ಇವರು ಗುರುತಿಸಿಕೊಂಡಿರುವುದು ಇವರ ವಿಶೇಷ ಚಟುವಟಿಕೆಗಳಿಂದ. ಅವುಗಳೆಂದರೆ ತಬಲಾ ವಾದನ ಮತ್ತು ಚಿತ್ರಕಲೆ. ತಬಲ ವಾದನ ಮತ್ತು ಚಿತ್ರಕಲೆ ಇವರ ವಿಶೇಷ ಹವ್ಯಾಸವಾಗಿದ್ದು, ಮಕ್ಕಳಲ್ಲೂ ಅದನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಇವರು ತಬಲ ವಾದನದ ಸಾಥ್ ನೀಡುತ್ತಾರೆ. ಆಯಾ ದಿನದ ವಿಶೇಷಕ್ಕೆ ಅನುಗುಣವಾಗಿ ಸೂಚನಾಫಲಕದಲ್ಲಿ ಅಲಂಕಾರಿಕವಾಗಿ ಬರೆಯುತ್ತಾರೆ. ಜೊತೆಗೆ ಅದಕ್ಕೊಪ್ಪುವ ಮಾಹಿತಿ ನೀಡುವ ಕಿರುಚಿತ್ರವನ್ನೂ ಬರೆಯುತ್ತಾರೆ. ಇದು ನೋಡುಗರಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ ಮತ್ತು ದಿನದ ವಿಶೇಷತೆ ತಿಳಿಯುತ್ತದೆ. ದಿನವಿಡೀ ಮಕ್ಕಳ ಜೊತೆ ಹೆಚ್ಚುಹೊತ್ತು ಕಳೆಯುವ ಇವರು ಶಾಲಾ ಅವಧಿಯ ನಂತರ ಹೊಸ ಹೊಸ ಆಟಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾರೆ. ಶಾಲಾ ಶಿಕ್ಷಕರ ಸಹಕಾರದಿಂದ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಪ್ರತಿವರ್ಷ ಬೇಸಿಗೆ ಶಿಬಿರ ಆಯೋಜಿಸುತ್ತಾರೆ.
ಮುಡಿಗೇರಿದ ಪ್ರಶಸ್ತಿ ಪುರಸ್ಕಾರಗಳು: 
2004-05 ರಲ್ಲಿ ಎನ್.ಪಿ.ಇ.ಜಿ.ಇ.ಎಲ್ ವತಿಯಿಂದ “ಉತ್ತಮ ಶಿಕ್ಷಕ” ಪುರಸ್ಕಾರ.
2006-07 ರಲ್ಲಿ “ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಕ” ಪ್ರಶಸ್ತಿ
2007-08 ರಲ್ಲಿ ಸಿರಗುಪ್ಪದ ಮಾಜಿ ಶಾಸಕ ಸೋಮಲಿಂಗಪ್ಪ ಇವರಿಂದ “ಮಯಾರಶ್ರಿÔ ಪುರಸ್ಕಾರ.
2016-17 ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿ
ವಿಶೇಷ ಸಾಧನೆ : ಒಬ್ಬ ದೈಹಿಕ ಶಿಕ್ಷಕರಾಗಿ ವಿವಿಧ ಹಂತಗಳ ಕ್ರಿಡಾಕೂಟಗಳಿಗೆ ಮಕ್ಕಳನ್ನು ಸಿದ್ದಗೊಳಿಸುವ ಜೊತೆಗೆ ಪ್ರತಿಭಾ ಕಾರಂಜಿ, ಕಲಿಕೋತ್ಸವ, ಯೋಗಾಸನ, ಚಿತ್ರಕಲೆ ಮುಂತಾದ ಸ್ಪರ್ದೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಾರೆ. ಆಗಾಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸ್ಪರ್ದೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಉತ್ತೆಜಿಸುತ್ತಾರೆ.
ವೃತ್ತಿಗೆ ಸೇರಿದಾಗ ಇದ್ದ ವೃತ್ತಿನಿಷ್ಠೆ ಮತ್ತು ಸಮಯಪ್ರಜ್ಞೆಗಳು ಇಂದಿಗೂ ಮುನ್ನಡೆದಿವೆ. ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಇತರೆ ಶಿಕ್ಷಕರಿಗೆ ಮಾದರಿ ಶಿಕ್ಷಕರಾಗಿ ಸರಳ ಜೀವನ ನಡೆಸುತ್ತಿರುವ ವೀರಭ್ರದ್ರಯ್ಯ ಇತರರಿಗಿಂತ ಭಿನ್ನವಾಗಿದಾರೆ. ಅವರ ನಡೆ ನುಡಿ ಇತರರಿಗೆ ಪ್ರೆÃರಣೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು. ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ(ತಾ) ಬಳ್ಳಾರಿ(ಜಿ) 
9902992905


ಟೀಚರ್ ಆಗಸ್ಟ್-2017

ತಿನ್ನಲಾಗದ ಚಕ್ಕುಲಿ Millipeed

ಆಗಸ್ಟ್ 2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
ತಿನ್ನಲಾಗದ ಚಕ್ಕುಲಿ

 “ಪಪ್ಪಾ,,, ಬೇಗ ಬಾ ಇಲ್ಲಿ!” ಎಂದು ಮಗಳು ಶ್ವೆತಾ ಕೂಗುತ್ತಿದ್ದಂತೆ, ಪೇಪರ್ ಓದುತ್ತಿದ್ದ ತಂದೆ ಬೆಚ್ಚಿ ಬಿದ್ದರು. ಏನೋ ತೊಂದರೆಯಾಗಿದೆ ಎಂದು ಊಹಿಸಿ ಮನೆಯ ಪಕ್ಕದ ಕೈತೋಟಕ್ಕೆ ದೌಡಾಯಿಸಿದರು. ನೆಲದತ್ತ ಕೈ ತೋರಿಸುತ್ತಾ  ‘ಪಪ್ಪಾ ಇಲ್ನೊಡು! ಇವೇನು? ಎಲ್ಲಿಗೆ ಹೊರಟಿವೆ? ಯಾಕೆ ಹೀಗೆ ಗುಂಪಾಗಿ ಒಂದರ ಮೇಲೊಂದು ಹೊರಟಿವೆ? ಎಂದು ಮರ‍್ನಾಲ್ಕು ಪ್ರಶ್ನೆಗಳನ್ನು ಒಮ್ಮೆಲೇ ಹೊರ ಹಾಕಿದಳು. ‘ಪುಟ್ಟಾ ಇವು ಸಹಸ್ರಪದಿಗಳು. ಇಂಗ್ಲಿಷಿನಲ್ಲಿ ಇವುಗಳನ್ನು ಮಿಲ್ಲಿಪೀಡ್ ಎಂದೂ ಕರೆಯುತ್ತಾರೆ. ಇವು ಆಹಾರ ಹುಡುಕಿ ಹೊರಟಿವೆ. ಇವಿನ್ನೂ ಎಳೆಯ ಕೀಟಗಳು. ತಮ್ಮ ರಕ್ಷಣೆಗಾಗಿ ಹೀಗೆ ಗುಂಪಿನಲ್ಲಿ ಚಲಿಸುತ್ತವೆ. ಸ್ವಲ್ಪ ಬಲಿಷ್ಟವಾದ ನಂತರ ಒಂದೊಂದೇ ಸಂಚರಿಸುತ್ತವೆ’ ಎಂದು ಅವಳ ಪ್ರಶ್ನೆಗೆ ಉತ್ತರಿಸಿದರು.
ಅಷ್ಟು ಹೇಳಿ ಮೊಬೈಲ್‌ನಲ್ಲಿ ಅವುಗಳ ಫೋಟೋ ತೆಗೆಯಲು ಪ್ರಾರಂಭಿಸಿದರು. ಮರ‍್ನಾಲ್ಕು ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಂತೆ ಅವುಗಳೆಲ್ಲಾ ಚಕ್ಕುಲಿಯಂತೆ ಸುರುಳಿಯಾಕಾರದಲ್ಲಿ ಸುತ್ತಿಕೊಳ್ಳಲು ಆರಂಭಿಸಿದವು. ‘ಪಪ್ಪಾ ಯಾಕೆ ಹೀಗೆ ಚಕ್ಕುಲಿಯಂತೆ ಸುತ್ತಿಕೊಂಡವು?’ ಎಂಬ ಮತ್ತೊಂದು ಪ್ರಶ್ನೆ ಹಾಕಿದಳು. ಕ್ಯಾಮೆರಾ ಬೆಳಕು ಬಿದ್ದಿದ್ದರಿಂದ ಹೀಗೆ ಸುತ್ತಿಕೊಂಡಿರಬೇಕೆಂದು ಹೇಳಿದರು. ಆದರೆ ಅವುಗಳು ಸುತ್ತಿಕೊಂಡದ್ದು ಬೇರೆಯದಕ್ಕೆ ಎಂದು ನಂತರ ತಿಳಿಯಿತು. ಅವುಗಳ ಗುಂಪಿನ ಮೇಲೆ ಕಂಬಳಿಹುಳ (ಮೈತುಂಬಾ ರೋಮವಿರುವ ಕೀಟ) ಹರಿದು ಬಂದಿತ್ತು. ‘ಕಂಬಳಿ ಹುಳುವೂ ಒಂದು ಕೀಟವಲ್ಲವೇ? ಆದರೂ ಏಕೆ ಹೀಗೆ ಸುತ್ತಿಕೊಂಡವು? ಎಂದು ಮತ್ತೆ ಪ್ರಶ್ನಿಸಿದಳು.  ಅವು ಇನ್ನೊಂದು ಜೀವಿಯಿಂದ ರಕ್ಷಿಸಿಕೊಳ್ಳಲು ಹೀಗೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ತಮ್ಮನ್ನು ತಾವು ರಕ್ಷಸಿಕೊಳ್ಳುತ್ತವೆ ಎಂದು ಅವಳ ತಂದೆ ಹೇಳಿದರು.  ಅವಳ ಪ್ರಶ್ನೆಗಳ ಸುರಿಮಳಗೆ ಉತ್ತರವಾಗಿ ಕೆಳಗಿನ ವಿವರಣೆ ನೀಡಿದ್ದಾರೆ. ಇದು ನಿಮಗೂ ಉಪಯೋಗವಾಗುತ್ತದೆ. ಓದಿ ತಿಳಿದುಕೊಳ್ಳಿ.
ದೇಹ ರಚನೆ :
ಆರ್ತೋಪೋಡ ಕುಟುಂಬಕ್ಕೆ ಸೇರಿದ ಇವುಗಳ ದೇಹ ಉದ್ದವಾದ ಕೊಳವೆ ಆಕಾರದಲ್ಲಿರುತ್ತದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಇವು ತಂಪಾದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ತಲೆಯ ಭಾಗ ಹೊರತುಪಡಿಸಿ ಪ್ರತೀ ಭಾಗದಲ್ಲೂ ನಾಲ್ಕು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇವುಗಳಿಗೆ ಸಹಸ್ರಪದಿಗಳು ಎಂದು ಕರೆದಿರಬಹುದು. ನಿಜವಾಗಿಯೂ ಇವುಗಳಿಗೆ ಸಾವಿರ ಕಾಲುಗಳೇನೂ ಇರುವುದಿಲ್ಲ. ಇವುಗಳು ನಾಲ್ಕುನೂರರಿಂದ ಏಳುನೂರು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಡಿಗೆ ತುಂಬಾ ನಿಧಾನವಾಗಿರುತ್ತದೆ.
ಆಹಾರ ಮತ್ತು ಬೆಳವಣಿಗೆ :
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತವೆ. ಮಳೆಗಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವ ಇವುಗಳು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ತಂಪಾದ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಅಡಗಿರುತ್ತವೆ. ಒಣಗಿದ ಮತ್ತು ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರವಾಗಿದೆ. ಕೆಲವು ಜಾತಿಯ ಸಹಸ್ರಪದಿಗಳು ಎರೆಹುಳು ಹಾಗೂ ಕೆಲವು ಕೀಟಗಳನ್ನು ತಿನ್ನುತ್ತವೆ. ಕೆಲ ಜಾತಿಯ ಸಹಸ್ರಪದಿಗಳು ಸಸ್ಯಗಳ ಎಳೆ ಚಿಗುರನ್ನು ತಿನ್ನುತ್ತವೆ.
ಹೆಣ್ಣುಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿ ಮೊಟ್ಟೆಗಳನ್ನು ಇಡುತ್ತದೆ. ಕೆಲವು ಹುಳುಗಳು ಹತ್ತರಿಂದ ಮೂರುನೂರು ಮೊಟ್ಟೆಗಳನ್ನಿಡುತ್ತದೆ. ಪ್ರಕೃತಿಯ ಉಷ್ಣಾಂಶ ಹಾಗೂ ಇತರೆ ಕಾರಣಗಳಿಂದ ಕೆಲ ಮೊಟ್ಟೆಗಳು ನಾಶವಾಗುತ್ತವೆ. ಮರಿ ಹುಟ್ಟಿದಾಗ ದೇಹದ ಗಾತ್ರ ಚಿಕ್ಕದಾಗಿರುತ್ತದೆ ಹಾಗೂ ಕಾಲುಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ನಂತರ ಹೊರಚರ್ಮ ಎರಡು ಮೂರು ಬಾರಿ ಕಳಚಿ ದೊಡ್ಡದಾಗಿ ಬೆಳೆಯುತ್ತವೆ.
ರಕ್ಷಣಾ ತಂತ್ರ : 
ಸಹಸ್ರಪದಿಗಳ ರಕ್ಷಣಾ ತಂತ್ರ ಅತ್ಯಂತ ವಿಸ್ಮಯಕಾರಿ. ವೇಗವಾಗಿ ಓಡಲಾರದ, ಕಚ್ಚಲು ಅಥವಾ ಚುಚ್ಚಲು ಯಾವುದೇ ಅಂಗಗಳಿಲ್ಲ ಇವು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ನಿರುಪದ್ರವಿಗಳಾದ ಇವು ಇತರೆ ಜೀವಿಗಳಿಂದ ರಕ್ಷಸಿಕೊಳ್ಳಲು ದೇಹವನ್ನು ಚಕ್ಕುಲಿಯಂತೆ ಸುರುಳಿಯಾಗಿ ಸುತ್ತಿಕೊಂಡು ವೈರಿಗಳನ್ನು ಗಲಿಬಿಲಿಗೊಳಿಸುತ್ತವೆ. ದೇಹವನ್ನು ಸುತ್ತಿಕೊಳ್ಳುವಾಗ ಕಾಲುಗಳಿಗೆ ಘಾಸಿಯಾಗದಂತೆ ಹೊರಗೆ ಎಳೆದುಕೊಳ್ಳುತ್ತವೆ. ಚಿಕ್ಕವಿರುವಾಗ ಗುಂಪಾಗಿ ಚಲಿಸುವ ಇವುಗಳು ದೊಡ್ಡದಾಗಿ ಬೆಳೆದಂತೆ ಒಂಟಿಯಾಗಿ ಸಂಚರಿಸತೊಡಗುತ್ತವೆ.
ಕೆಲವು ಜಾತಿಯ ಸಹಸ್ರಪದಿಗಳು ತಮ್ಮ ರಕ್ಷಣೆಗೆ ರಸಾಯನಿಕ ಅಸ್ತç ಪ್ರಯೋಗಿಸುತ್ತವೆ. ವೈರಿಗಳನ್ನು ದೂರ ಓಡಿಸಲು ಕೆಟ್ಟ ವಾಸನೆ ಸ್ರವಿಸುತ್ತವೆ. ಕೆಲವು ವೇಳೆ ಚಿಕ್ಕ ಚಿಕ್ಕ ಕೀಟಗಳು ಸುಡುವಂತಹ ರಸಾಯನಿಕಗಳನ್ನು ಸ್ರವಿಸುತ್ತವೆ. ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಕೆಲವು ಸೋಂಕುರೋಗಗಳಾದ ಕಜ್ಜಿ ಅಥವಾ ಮೈಕಡಿತ ಉಂಟಾಗುತ್ತದೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟದಂತೆ ಎಚ್ಚರ ವಹಿಸಬೇಕು.
ಅವಸಾನದ ಅಂಚಿನತ್ತ,,, :
ಮಾನವ ಈ ಭೂಮಿ ಮೇಲೆ ವಾಸಿಸುವ ಮೊದಲೇ ಅಂದರೆ ನಾಲ್ಕುನೂರು ಮಿಲಿಯನ್ ವರ್ಷಗಳಿಗಿಂತ ಹಿಂದಿನಿಂದಲೂ ಭೂಮಿಯ ಮೇಲೆ ವಾಸಿಸುತ್ತಿವೆ. ಕಾಲದಿಂದ ಕಾಲಕ್ಕೆ ಆದ ಬದಲಾವಣೆಗಳಿಗೆ ಹೊಂದಿಕೊಂಡು ಬದುಕುತ್ತಾ ಬಂದಿವೆ. ಆದರೆ ಇತ್ತಿÃಚೆಗೆ ಮಾನವನ ಅತಿಯಾದ ಉಪಟಳದಿಂದ ಇವುಗಳ ಸಂತತಿ ಕಡಿಮೆಯಾಗುತ್ತಿದೆ. ಮನೆಯಂಗಳ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಸಿಮೆಂಟ್ ಅಥವಾ ಕಲ್ಲಿನ ನೆಲಹಾಸಿನಿಂದ ಇವುಗಳ ಓಡಾಟಕ್ಕೆ ಹಾಗೂ ಆವಾಸಕ್ಕೆ ತೊಂದರೆಯಾಗುತ್ತಿದೆ. ರಸಾಯನಿಕಗಳ ಬಳಕೆಯಿಂದ ಪರಿಸರ ಕಲಿಷಿತಗೊಂಡಿದ್ದು, ಅದರಲ್ಲಿ ಭೂಮಿಯೂ ವಿಷಮಯ ಆಗಿರುವುದರಿಂದ ಇವುಗಳ ಜೀವಕ್ಕೆ ಕುತ್ತು ಬಂದಿದೆ. ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನಗಳ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದೂ ಇವುಗಳ ಸಂತತಿ ಕಡಿಮೆಯಾಗಲು ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಇವು ನಮ್ಮಿಂದ ಕಣ್ಮರೆಯಾಗುತ್ತವೆ. ಜೀವ ವೈಧ್ಯತೆಯ ಕೊಂಡಿಯೊಂದು ಕಳಚಲಿದೆ.
ಆರ್.ಬಿ.ಗುರುಬಸವರಾಜ. ಹೊಳಗುಂದಿ
ಹಡಗಲಿ(ತಾ) ಬಳ್ಳಾರಿ(ಜಿ) 583219
9902992905

ಟೀಚರ್ ಆಗಸ್ಟ್-2017