March 29, 2018

ಹವಾಯಿ ಅವಾಂತರ Hawai in college

ವಿಜಯವಾಣಿಯ ಯುಗಾದಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಕಿರುಬರಹ

ಹವಾಯಿ ಅವಾಂತರ

ಈಗ್ಗೆ 28 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಡೆದ ಪಜೀತಿಯನ್ನು ನೆನೆದರೆ ಈಗಲೂ ಮೈಜುಮ್ ಎನ್ನುತ್ತದೆ. ಹತ್ತನೇ ತರಗತಿ ಮುಗಿಸಿ ಹೂವಿನಹಡಗಲಿಯ ಜಿ,ಬಿ,ಆರ್ ಕಾಲೇಜಿನಲ್ಲಿ ಪಿಯುಸಿ(ವಿಜ್ಞಾನ ವಿಭಾಗ)ಗೆ ಸೇರಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಮದ್ಯಾಹ್ನ ಹನ್ನೆರಡರವರೆಗೆ ತರಗತಿಗಳು ನಡೆಯುತ್ತಿದ್ದವು. ವಾರದಲ್ಲಿ ಮೂರುದಿನ ಮದ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತಿದ್ದವು.
ಕಾಲೇಜಿಗೆ ಸೇರಿದಾಗಲೇ ಮೊದಲ ಬಾರಿಗೆ ಚಪ್ಪಲಿ ಹಾಕಿಕೊಂಡದ್ದು. ಹವಾಯಿ ಚಪ್ಪಲಿ ಅಂದಿನ ಟ್ರೆಂಡ್. ಅವುಗಳನ್ನು ಹಾಕಿಕೊಂಡು, ಅವುಗಳಿಂದ ಪಟ್ ಪಟ್ ಎಂಬ ಸದ್ದು ಮಾಡುತ್ತಾ ನಡೆಯುವುದೇ ಒಂದು ಮೋಜು. ಅಂದು ನಮಗೆ ಕೆಮಿಷ್ಟ್ರಿ ಲ್ಯಾಬ್ ಇತ್ತು.  ಊರಿನಿಂದ ತಂದಿದ್ದ ಊಟ ಮುಗಿಸಿ ಮದ್ಯಾಹ್ನ ಹನ್ನೆರಡೂವರೆಗೆ ಗೆಳೆಯ ಇಸ್ರಾರ್ ಅಹ್ಮದ್ ಮತ್ತು ನಾನು ಕಾಲೇಜಿಗೆ ವಾಪಾಸಾದೆವು. ಪ್ರಾಯೋಗಿಕ ತರಗತಿಗೆ ಇನ್ನೂ ಅರ್ದಗಂಟೆ ಸಮಯವಿತ್ತು. ಕಾಲೇಜಿನಲ್ಲಿ ಯಾರೂ ಇರಲಿಲ್ಲ. ನೀರವ ಮೌನ ಅಲ್ಲಿ ನೆಲೆಸಿತ್ತು. ನಾವಿಬ್ಬರೂ ಪರಸ್ಪರ ಜೋಕ್ಸ್‍ಗಳನ್ನು ಹೇಳುತ್ತಾ ಜೋರಾಗಿ ನಗುತ್ತಾ ಲ್ಯಾಬ್ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಪ್ರಿನ್ಸಿಪಾಲ್ ಛೇಂಬರ್ ದಾಟಿ ಲ್ಯಾಬ್‍ಗೆ ಹೋಗಬೇಕಾಗಿತ್ತು.  ಕಾಲೇಜು ನಿಶಬ್ದವಾಗಿದ್ದರಿಂದ  ನಮ್ಮಿಬ್ಬರದೇ ನಗು ಮತ್ತು ಹವಾಯಿ ಚಪ್ಪಲಿ ಶಬ್ದ ಮಾರ್ಧನಿಸುತ್ತಿತ್ತು. ನಗುವಿಗಿಂತ ಚಪ್ಪಲಿ ಶಬ್ದ ಜೋರಾಗಿಯೇ ಇತ್ತು. ನಮಗೆ ಬೇರೆ ಯಾರ ಮತ್ತು ಯಾವುದರ ಪರಿವೆಯೇ ಇರಲಿಲ್ಲ. ಇಬ್ಬರೂ ನಗುವಿನಲ್ಲೇ ಮೈಮರೆತಿದ್ದೆವು.
ಆಗ ಇದ್ದಕ್ಕಿದ್ದಂತೆ “ಏಯ್ ಬನ್ರೋ ಇಲ್ಲಿ” ಎಂಬ ಮಾತು ಕೇಳಿ ಇಬ್ಬರೂ ಬೆಚ್ಚಿದೆವು. ಪ್ರಿನ್ಸಿಪಾಲರು ಛೇಂಬರಿನ ಬಾಗಿಲಲ್ಲಿ ನಿಂತು ಕರೆಯುವುದನ್ನು ಕಂಡು ಬೆಚ್ಚಿದೆವು. ಆಗ ಕೆ.ವಿರುಪಾಕ್ಷಗೌಡ್ರು ಪ್ರಿನ್ಸಿಪಾಲರಾಗಿದ್ದರು. ಶಿಸ್ತು ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ಕೆ.ವಿ.ಗೌಡ್ರು. ಅಂತಹ ಘನ ವ್ಯಕ್ತಿತ್ವಕ್ಕೆ ಸಿಟ್ಟು ಬಂದ್ದದ್ದು ಕಂಡು ಆಶ್ಚರ್ಯ ಮತ್ತು ಭಯ ಮಿಶ್ರಭಾವಗಳು ಉಂಟಾಗಿ ಕಾಲುಗಳು ನಡುಗತೊಡಗಿದವು. ಆ ಧ್ವನಿ ಮತ್ತೊಮ್ಮೆ ಬಂತು. “ಏಯ್ ಬನ್ರೋ ಇಲ್ಲಿ, ಕರೆದದ್ದು ಕೇಳಲಿಲ್ವಾ?”. ಕೈಕಟ್ಟಿಕೊಂಡು ಛೇಂಬರಿನತ್ತ ಹೆಜ್ಜೆ ಹಾಕಿದೆವು. ಅವರು ಅದಾಗಲೇ ತಮ್ಮ ಆಸನದಲ್ಲಿ ಕುಳಿತರು. ನಾವು ಒಳಹೋಗಿ ಕೈಕಟ್ಟಿಕೊಂಡು ತಲೆಬಗ್ಗಿಸಿಕೊಂಡು ನಿಂತೆವು. “ಯಾವ ಕ್ಲಾಸ್?” ಎಂಬ ಮೊದಲ ಸೌಮ್ಯ ಪ್ರಶ್ನೆಗೆ ‘ಪಿ.ಯು.ಸಿ. ಮೊದಲನೆ ವರ್ಷ ಸರ್’ ಎಂದೆನು. “ಯಾವ ಸೆಕ್ಷನ್?” ಎಂಬ ಎರಡನೆ ಪ್ರಶ್ನೆಗೆ ‘ಸ,,,ಸೈನ್ಸ್,,,’ ಎಂದು ತಡವರಿಸುತ್ತಾ ಉತ್ತರಿಸಿದೆ. “ಸೈನ್ಸ್ ಅಂತೀರಾ, ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇದೆಯಾ? ಕಾಲೇಜಿನ ಸಮಯ ಮುಗೀತಲ್ಲಾ. ನಿಮಗೇನು ಕೆಲಸ” ಎಂದರು. ‘ಸರ್ ನಮಗೆ ಲ್ಯಾಬ್ ಇದೆ. ಅದ್ಕೆ ಪುನಃ ಬಂದೆವು’ ಎಂದ ಗೆಳೆಯ. 
“ಹೌದಾ, ಇದೇನು ನಿಮ್ಮ ಮಾವನ ಮನೆ ಅಂದ್ಕೊಂಡಿದ್ದೀರಾ? ಇದು ಕಾಲೇಜು ಎಂಬ ಪ್ರಜ್ಞೆ ನಿಮಗಿದೆಯಾ. ಏನು ನೀವಿಬ್ರೇನಾ ಚಪ್ಪಲಿ ಹಾಕ್ಕೊಂಡಿರೋದು? ಚಟ್‍ಪಟ್ ಚಟ್‍ಪಟ್ ಅಂತ ಅನ್ಸುತ್ತಾ  ನಡೆಯೋಕೆ ನೀವೇನು ರೌಡಿಗಳಾ? ನೀವಿಲ್ಲಿ ಕಲಿಯೋಕೆ ಬರ್ತೀರಾ ಅಥ್ವಾ  ಧಿಮಾಕು ಮಾಡೋಕೆ ಬರ್ತೀರಾ? ನಿಮ್ಮ ತಂದೆ ತಾಯಿ ನಿಮ್ಗೆ ಚಪ್ಪಲಿ ಕೊಡ್ಸಿರೋದು ಕಾಲಿಗೆ ಹಾಕಿಕೊಂಡು ನಡೆಯೋಕಾ ಅಥ್ವಾ ಅದ್ರಿಂದ ಶಬ್ದ ಮಾಡುತ್ತಾ ಇನ್ನೊಬ್ರಿಗೆ ತೊಂದ್ರೆ ಕೊಡೋಕಾ? ಗೋತ್ತಾಗೋಲ್ವ ನಿಮ್ಗೆ. ನೀವೇನು ಇನ್ನೂ ಚಿಕ್ಕ ಮಕ್ಳು ಅಂದ್ಕೋಂಡಿದ್ರಾ? ನಿಮ್ಮಂಥಾವ್ರಿಗೆ ಯಾಕೆ ಕಾಲೇಜು. ದನ ಕಾಯೋಕೆ ಮಾತ್ರ ನೀವು ಲಾಯಕ್ಕು,,,,,” ಎಂದು ಬಯ್ಯುತೊಡಗಿದರು. 
ಆ ವೇಳೆಗಾಗಲೇ ಅನೇಕ ವಿದ್ಯಾರ್ಥಿಗಳು ಆಗಮಿಸಿ ನಮಗೆ ಮಂಗಳಾರತಿ ಆಗುವುದನ್ನು ಕಿಟಕಿಗಳಿಂದ ಇಣುಕಿ ನೋಡುತ್ತಿದ್ದರು. ಮೊದಲೇ ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆಲ್ಲಾ ಭಯ. ನಮಗೆ ಕಾಲುಗಳು ಸೋತ ಅನುಭವ. ತಗ್ಗಿದ ತಲೆ ಮೇಲೆ ಎತ್ತಲಾಗದ ಸಂಧಿಗ್ದ ಪರಿಸ್ಥಿತಿ. ಮುಖದಲ್ಲಿ ಬೆವರು ಹೆಚ್ಚಾಗಿ ಕೆಳಗಿಳಿಯುತಿದೆ. ಪ್ಯಾಂಟ್ ಜೇಬಿನಲ್ಲಿದ್ದ ಕರ್ಚೀಪ್ ತೆಗೆದು ಮುಖ ಒರೆಸಲೂ ಅಗದ ಪರಿಸ್ಥಿತಿ. ಕಿಟಿಕಿಯಲ್ಲಿ ಇಣುಕಿ ಹಾಕುವ ಕಣ್ಣುಗಳು ಒಂದೆಡೆಯಾದರೆ, ಬೈಗುಳದ ಸುರಿಮಳೆ ಮತ್ತೊಂದೆಡೆ. ಕಣ್ಣಲ್ಲಿನ ನೀರು ಹೊರಬರುವುದೊಂದೇ ಬಾಕಿ ಉಳಿದಿತ್ತು. ಇಂತದ್ದರ ನಡುವೆ “ಇನ್ನೊಮ್ಮೆ ಹೀಗೆ ಮಾಡಿದರೆ ನಿಮ್ಮನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡ್ತೀನಿ” ಎಂಬ ಮಾತು ಕೇಳಿ ನಿಜಕ್ಕೂ ಸೋತುಹೋದೆವು. ಕ್ಷಮಾಪಣೆ ಕೇಳಿ ಚಪ್ಪಲಿಯನ್ನು ಕಾಲಲ್ಲಿ ಬಿಗಿಯಾಗಿ ಹಿಡಿದುಕೊಂಡು ಸದ್ದು ಮಾಡದೇ ಮೆಲ್ಲನೇ ಛೇಂಬರ್‍ನಿಂದ ಹೊರಬಂದೆವು. ಆಗ ಇಂತದ್ದೆಲ್ಲಾ ಅಸಹಜವಾಗಿತ್ತು. ನೇರವಾಗಿ ಲ್ಯಾಬ್‍ಗೆ ತೆರಳಿದೆವು. ಅಂದು ಹವಾಯಿ ಚಪ್ಪಲಿ ತಂದ ಪಜೀತಿಯನ್ನು  ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಜೊತೆಗೆ ಪ್ರಿನ್ಸಿಪಾಲರು ಹೇಳಿದ ಉಪದೇಶದ ಮಾತುಗಳನ್ನು ಈಗಲೂ ನನಗೆ ದಾರಿದೀಪವಾಗಿವೆ.  ಅಂದಿನಿಂದ ಹವಾಯಿ ಚಪ್ಪಲಿ ಧರಿಸಿದಾಗಲೆಲ್ಲ ಮತ್ತು ಯಾವುದೇ ಕಛೇರಿಗಳಲ್ಲಿ ಹವಾಯಿ ಧರಿಸಿದವರನ್ನು ಕಂಡರೆ ಕಾಲೇಜಿನ ಪಜೀತಿ ಪ್ರಸಂಗ ನೆನಪಿಗೆ ಬರುತ್ತದೆ. 
ಆರ್.ಬಿ.ಗುರುಬಸವರಾಜ ಹೊಳಗುಂದಿ


ಡಿ.ಪಿ.(ಪ್ರೋಫೈಲ್ ಪಿಕ್ಚರ್) D.P (profile picture)

ದಿನಾಂಕ 07-03-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ವ್ಯಕ್ತಿತ್ವಕ್ಕೆ ಕೈಗನ್ನಡಿ ಡಿ.ಪಿ.



ಪ್ರೋಫೈಲ್ ಪಿಕ್ಚರ್
ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲ ತಾಣಗಳು ದೈನಂದಿನ ಜೀವನದ ಕೇಂದ್ರ ಅಂಶಗಳಾಗಿವೆ. ಅದರಲ್ಲೂ ಫೇಸ್ಬುಕ್, ವಾಟ್ಸಪ್, ಲಿಂಕ್ಡ್‍ಇನ್, ಟ್ವಿಟರ್ ಮುಂತಾದ ಚಾಟಿಂಗ್ ತಾಣಗಳ ಪ್ರೋಫೈಲ್ ಪಿಕ್ಚರ್ ಎಲ್ಲರ ಆಕರ್ಷಣೆಯ ಬಿಂದುಗಳಾಗಿವೆ. ಡಿ.ಪಿ.(ಡಿಸ್‍ಪ್ಲೇ ಪಿಕ್ಚರ್) ಎಂದು ಕರೆಯುವ ಪ್ರೋಫೈಲ್ ಪಿಕ್ಚರ್ ತನ್ನದೇ ವಿಶಿಷ್ಠತೆ ಹೊಂದಿದೆ. ತಮ್ಮ ಮೆಚ್ಚಿನ ಚಿತ್ರವನ್ನು ಪ್ರೋಫೈಲ್ ಪಿಕ್ಚರ್ ಆಗಿ ಇಡೀ ಜಗತ್ತಿಗೆ ತೋರಿಸುವ ತವಕ ಎಲ್ಲರಲ್ಲೂ ಹೆಚ್ಚುತ್ತಿದೆ. ಪ್ರತಿಯೊಂದು ತಾಣಗಳು ತಮ್ಮದೇ ಆದ ವಿಭಿನ್ನ ಹಾಗೂ ಆಕರ್ಷಕ ರೀತಿಯ ಫ್ರೇಮುಗಳೊಂದಿಗೆ ಪ್ರೋಫೈಲ್ ಪಿಕ್ಚರ್ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿವೆ. 
ಪ್ರತಿಯೊಂದು ಸಾಮಾಜಿಕ ಜಾಲ ತಾಣಗಳು ವೈವಿಧ್ಯಮಯ ಸಾಧನಗಳನ್ನು ಒದಗಿಸುತ್ತವೆ. ಸೂಕ್ತವಾದ ಪ್ರೋಫೈಲ್ ನಿರ್ಮಿಸಲು ಸಹಾಯ ಮಾಡುವ ಜೊತೆಗೆ ಪರಿಚಿತರು, ಸ್ನೇಹಿತರು ಮತ್ತು ಕುಟುಂಬ ವರ್ಗದವರನ್ನು ಒಂದು ವೇದಿಕೆಯಲ್ಲಿ ಸೇರಿ ವಿಷಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ. ಕೆಲವು ಜಾಲ ತಾಣಗಳು ಬಳಕೆದಾರರ ಬೇಡಿಕೆಗನುಗುಣವಾದ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ತಿಳಿಸುತ್ತವೆ. 
ಪ್ರತಿ ಜಾಲ ತಾಣದ ಪ್ರಮುಖ ವೇದಿಕೆಯೆಂದರೆ ಪ್ರೋಫೈಲ್ ಪಿಕ್ಚರ್. ಇದು ನಮ್ಮನ್ನು ನಾವು ದೃಶ್ಯೀಕರಣದ ಮೂಲಕ ಹೊರಜಗತ್ತಿಗೆ ತೋರಿಸಿಕೊಳ್ಳುವ ಪ್ರಮುಖ ವೇದಿಕೆ ಇದ್ದಂತೆ. ನಮ್ಮ ಪ್ರೋಫೈಲ್ ಪಿಕ್ಚರನ್ನು ಯಾರು ಬೇಕಾದರೂ ನೋಡಲು ಮುಕ್ತ ಅವಕಾಶ ಇರುತ್ತದೆ. 
ಎಲ್ಲಾ ವೇದಿಕೆಗಳಲ್ಲಿ ಮಾನವ ಸಂವಹನ ಹೆಚ್ಚಾಗಿ ಅಮೌಖಿಕ ರೂಪದಲ್ಲಿರುತ್ತದೆ. ಚಿತ್ರ, ಪದ ಅಥವಾ ದೃಶ್ಯೀಕರಣದ ಮೂಲಕ ನಮ್ಮ ನಡವಳಿಕೆಗಳು, ಭಾವನೆಗಳು, ವಿಚಾರಗಳನ್ನು ಜಗತ್ತಿಗೆ ತೆರೆದು ತೋರಿಸುತ್ತವೆ. ಜಾಲ ತಾಣಗಳ ಮೂಕ ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ನಮ್ಮ ಮುಖದ ಅಭಿವ್ಯಕ್ತಿ, ಸನ್ನೆಗಳು, ದೇಹಭಾಷೆ, ಕಣ್ಣಿನ ಸಂಪರ್ಕ ಮತ್ತು ದೈಹಿಕ ಅಂತರಗಳು ಎಲ್ಲರೂ ಚರ್ಚೆಗೆ ಗ್ರಾಸವಾಗುತ್ತವೆ. ಪ್ರೋಫೈಲ್ ಪಿಕ್ಚರ್‍ನ ಸಂಕೇತಗಳು ಇತರೆ ಜನರನ್ನು ಅರ್ಥ ಮಾಡಿಕೊಳ್ಳಲು ಸಹಾಚಿiÀು ಮಾಡುತ್ತದೆ. 
ವಾಸ್ತವ ಜಗತ್ತಿನಲ್ಲಿ ಜಾಲತಾಣಗಳ ಮೂಲಕ ಸಂಭಾಷಿಸುವ ವ್ಯಕ್ತಿಯು ಬಹಿರಂಗ ಪಡಿಸುವ ಅಮೌಖಿಕ ಸಂವಹನಕ್ಕೆ ಯಾವುದೇ ಭರವಸೆ ಇಲ್ಲ. ಸಾಮಾನ್ಯವಾಗಿ ಪ್ರೋಫೈಲ್ ಪಿಕ್ಚರ್ ಬದಲಾದೊಡನೆ ಅದರ ಮೇಲೆ ಅನೇಕ ಅಭಿಪ್ರಾಯ/ಅನಿಸಿಕೆಗಳು ಪ್ರಕಟಗೊಳ್ಳುತ್ತವೆ. 
ಪ್ರೋಫೈಲ್ ಪಿಕ್ಚರ್ ಏನನ್ನು ಹೇಳುತ್ತದೆ?
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುವಂತೆ ನಿಮ್ಮ ಪ್ರೋಫೈಲ್ ಚಿತ್ರ ನಿಮ್ಮ ಬಗ್ಗೆ ಸಾವಿರಾರು ಪದಗಳನ್ನು ತಿಳಿಸುತ್ತದೆ. ಪ್ರೋಫೈಲ್ ಚಿತ್ರದಲ್ಲಿ ನೀವು ಕ್ಲೋಸಪ್‍ನಲ್ಲಿದ್ದರೆ ಅದು ನಿಮ್ಮ ಮುಕ್ತತೆಯನ್ನು ತಿಳಿಸುತ್ತದೆ. ಚಿತ್ರವು ಲಾಂಗ್‍ಶಾಟ್‍ನಲ್ಲಿದ್ದರೆ ಇತರರಿಂದ ದೂರ ಇರಲು ಬಯತ್ತೀರೆಂಬುದನ್ನು ತಿಳಿಸುತ್ತದೆ. ಚಿತ್ರದಲ್ಲಿ ಆಪ್ತರೊಂದಿಗೆ ಕಾಣಿಸಿಕೊಂಡಿದ್ದರೆ ಅದು ನಿಮ್ಮ ಅವರ ನಡುವಿನ ಗಟ್ಟಿಯಾದ ಸಂಬಂಧ ತಿಳಿಸುತ್ತದೆ. ಹೂವುಗಳೊಂದಿಗೆ ಕಾಣಿಸಿಕೊಂಡಿದ್ದರೆ ಪುಷ್ಟ ಪ್ರಿಯರೆಂಬುದನ್ನು, ಪ್ರಾಣಿಗಳೊಂದಿಗೆ ಕಾಣಿಸಿಕೊಂಡಿದ್ದರೆ ಪ್ರಾಣಿ ಪ್ರಿಯರೆಂಬುದನ್ನು ತಿಳಿಸುತ್ತದೆ. ನಿಸರ್ಗದಲ್ಲಿನ ನಿಮ್ಮ ಚಿತ್ರವು ನೀವು ನಿಸರ್ಗ ಪ್ರಿಯರೆಂಬುದನ್ನು, ಮಕ್ಕಳೊಂದಿಗಿನ ಚಿತ್ರವು ನಿಮ್ಮ ಮುಗ್ದತೆಯನ್ನು ತಿಳಿಸುತ್ತದೆ. ಅಲ್ಲದೇ ಇತ್ತಿಚೆಗೆ ಬಡ/ಅನಾಥ ಅಥವಾ ಸಂಕಷ್ಟದಲ್ಲಿನ ಮಕ್ಕಳೊಂದಿನ ಚಿತ್ರದ ಟ್ರೆಂಡ್ ಕೂಡಾ ಹೆಚ್ಚುತ್ತಿದೆ. ಇದು ಬಡ/ಅನಾಥ ಮಕ್ಕಳ ಮೇಲಿನ ಕಾಳಜಿ ತಿಳಿಸುತ್ತದೆ. ಅಂತೆಯೇ ಚಿತ್ರದಲ್ಲಿನ ಪ್ರತಿಯೊಂದು ಭಂಗಿಯೂ ನಿಮ್ಮ ಗುಣಾವಗುಣಗಳ ಬಗ್ಗೆ ತಿಳಿಸುತ್ತದೆ. 
ಕೆಲವರು ಆಗಾಗ್ಗೆ ತಮ್ಮ ಪ್ರೋಫೈಲ್ ಚಿತ್ರವನ್ನು ಬದಲಾಯಿಸುತ್ತಲೇ ಇರುತ್ತಾರೆ. ಇದು ಅವರ ಚಂಚಲಚಿತ್ತವನ್ನು ಸೂಚಿಸುತ್ತದೆ. ಕುಟುಂಬದೊಂದಿಗಿನ ಚಿತ್ರವು ನೀವು ಕುಟುಂಬಕ್ಕೆ ಎಷ್ಟು ಹತ್ತಿರದವರೆಂಬುದನ್ನು ಹಾಗೂ ಕುಟುಂಬಕ್ಕೆ ನಿಮ್ಮ ಬೆಂಬಲ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಸಂಗಾತಿಯೊಂದಿಗಿನ ಚಿತ್ರವು ನಿಮ್ಮ ಬಡನಾಟದ ಬಾಂಧವ್ಯವನ್ನು ತಿಳಿಸುತ್ತದೆ. ಒಟ್ಟಾರೆ ಪ್ರೋಫೈಲ್ ಚಿತ್ರವು ನಿಮ್ಮನ್ನು ಪ್ರತಿನಿಧಿಸುತ್ತದೆ. ನಿಮ್ಮೊಳಗಿನ ಅಂತರಾಳವನ್ನು ಜಗತ್ತಿಗೆ ತೆರೆದು ತೋರಿಸುತ್ತದೆ. ನಿಮ್ಮ ಆಸಕ್ತಿಗಳು, ಲೌಕಿಕ ಹಾಗೂ ಅಲೌಕಿಕ ಗುಣಾವಗುಣಗಳನ್ನು ಪ್ರಕಟಿಸುತ್ತದೆ. 
ಯಶಸ್ವಿ ಪ್ರೋಫೈಲ್ ಚಿತ್ರದ ಪ್ರಮುಖ ಅಂಶಗಳು:
1. ಆಕರ್ಷಕ ಹಿನ್ನಲೆ: ವಿಭಿನ್ನ ದೃಷ್ಟಿಕೋನವುಳ್ಳ ಸುಂದರ ಹಿನ್ನಲೆಯ ಚಿತ್ರವು ಎಲ್ಲರನ್ನು ಆಕರ್ಷಿಸುತ್ತದೆ. ಹಿನ್ನಲೆ ಸಂಕೀರ್ಣವಾಗಿರದೇ ಸರಳವೂ ಸುಂದರವೂ ಆಗಿದ್ದರೆ ಅದನ್ನು ಎಲ್ಲರೂ ಇಷ್ಟಪಡುತ್ತಾರೆ. ಹೂವಿಗೆ ಚಿಟ್ಟೆ ಆಕರ್ಷಿತವಗುವಂತೆ ನಿಮ್ಮ ಚಿತ್ರ ಎಲ್ಲರನ್ನು ಆಕರ್ಷಿಸುವಂತಿರಲಿ.
2. ವೈಯಕ್ತಿಕತೆ: ನಿಮ್ಮ ಪ್ರೋಫೈಲ್ ಚಿತ್ರದಲ್ಲಿ ನಿಮ್ಮ ಆಪ್ತರು, ಸಹುದ್ಯೋಗಿಗಳು, ಸ್ನೇಹಿತರು ಇರಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಅವರಿಗೆ ಅದು ಮುಜುಗರ ತಾರದಿರಲಿ. ಆದ್ದರಿಂದ ವಿಶಿಷ್ಠತೆಯುಳ್ಳ ವೈಯಕ್ತಿಕ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ.
3. ಹೆಡ್ ಶಾಟ್: ವೀಕ್ಷಕರನ್ನೇ ನೋಡುತ್ತಿರುವ ಚಿತ್ರವು ಎಲ್ಲರನ್ನು ಆಕರ್ಷಿಸುತ್ತದೆ. ಅಂದರೆ ಚಿತ್ರ ತೆಗೆಯುವಾಗ ನಿಮ್ಮ ಕಣ್ಣುಗಳು ಕ್ಯಾಮೆರಾ ನೋಡುವಂತಿದ್ದರೆ ಅಂತಹ ಚಿತ್ರ ಪ್ರೋಫೈಲ್‍ಗೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ. 
4. ಬಣ್ಣದಿಂದ ವ್ಯಕ್ತಿತ್ವ: ನಿಮ್ಮ ಕಪ್ಪು ಬಿಳುಪು ಚಿತ್ರಕ್ಕೆ ಬಣ್ಣ ತುಂಬಿ. ಅಂದರೆ ನೀವು ಧರಿಸಿದ ಬಟ್ಟೆ ಹಾಗೂ ಅದರ ಹಿನ್ನಲೆಯ ಬಣ್ಣಗಳೂ ಸಹ ನಿಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ನಿಮಗಿಷ್ಟವಾದ ಬಣ್ಣ ಆಯ್ಕೆ ಮಾಡಿಕೊಳ್ಳಿ.
5. ನಗು : ‘ಉಚಿತ ನಗುವಿದ್ದಲ್ಲಿ ಖಚಿತ ಪ್ರೀತಿ ಇರುತ್ತದೆ’ ಎಂಬ ಮಾತಿದೆ. ಪ್ರೋಫೈಲ್ ಚಿತ್ರದಲ್ಲಿನ ನಿಮ್ಮ ನಗು ತ್ವರಿತ ಸಂಪರ್ಕವನ್ನು ಸೃಷ್ಟಿಸುತ್ತದೆ. ನಿಮ್ಮ ವೃತ್ತಿಪರತೆಯನ್ನು ಸಾಮಾಜಿಕರಣಗೊಳಿಸುತ್ತದೆ. ನಿಮಗೊಂದು ಬ್ರಾಂಡೆಡ್ ಐಡೆಂಟಿಟಿಯನ್ನು ನೀಡುತ್ತದೆ. 
ಹೀಗಿರಲಿ ನಿಮ್ಮ ಡಿ.ಪಿ
ಮುಖವು ಸ್ಪಷ್ಟವಾಗಿ ಕಾಣುವಂತಿರಲಿ.
ಆಕರ್ಷಕ ಹಿನ್ನಲೆ ಹೊಂದಿರಲಿ.
ಮುಖದಲ್ಲಿ ನಗು ತುಂಬಿರಲಿ.
ಚಿತ್ರವು ಆದಷ್ಟೂ ಕ್ಲೋಸ್‍ಅಪ್ ಆಗಿರಲಿ.
ನಿಮ್ಮದೇ ಸ್ವಂತ ಚಿತ್ರವಿರಲಿ.
ಬೇರೆಯವರ ಅಂದರೆ ಸೆಲೆಬ್ರಿಟಿಗಳ ಚಿತ್ರ ಬಳಸಬೇಡಿ.
ನಿಮ್ಮ ಉಡುಪು ಮುಜುಗರ ತರದಿರಲಿ.
ಇಡೀ ನಿಮ್ಮ ವ್ಯಕ್ತಿತ್ವದ ಪ್ರತೀಕವಾಗಿರಲಿ. 
ಗ್ರೂಫ್ ಫೋಟೋ ಆಗಿದ್ದರೆ ಎಲ್ಲರ ಮುಖಗಳು ಸ್ಪಷ್ಟವಾಗಿ ಕಾಣುವಂತಿರಲಿ.
ಇತರರನ್ನು ಕೆಣಕುವ, ಅಪಹಾಸ್ಯ ಮಾಡುವ ಚಿತ್ರಗಳು ಬೇಡ. 
ಕೃತಕವಲ್ಲದ ಸ್ವಾಭಾವಿಕ ಚಿತ್ರವಿರಲಿ. 
ಆರ್.ಬಿ.ಗುರುಬಸವರಾಜ ಹೊಳಗುಂದಿ


ಮಾಲ್ವಿ ಸ್ಕೂಲ್

ದಿನಾಂಕ 03-02-2018ರ ವಿಜಯವಾಣಿಯಲ್ಲಿ ಪ್ರಕಟಬಾದ ನನ್ನ ಬರಹ
ಸರ್ಕಾರಿ ಶಾಲೆಯೂ ಸ್ಮಾರ್ಟ್ 

ಇತ್ತೀಚೆಗೆ ಸರ್ಕಾರಿ ಶಾಲೆಗಳೆಂದರೆ ಎಲ್ಲರಲ್ಲೂ ಒಂದು ರೀತಿಯ ಅಸಡ್ಡೆ. ಅಲ್ಲಿ ಸರಿಯಾಗಿ ಕಲಿಸುವುದಿಲ್ಲ, ಕಟ್ಟಡಗಳು ಆಕರ್ಷಕವಾಗಿರುವುದಿಲ್ಲ, ಕಂಪ್ಯೂಟರ್ ಬಳಕೆ ಇಲ್ಲ, ಆಟಕ್ಕೆ ಪರಿಕರಗಳಿಲ್ಲ, ವಿಜ್ಞಾನ ಪ್ರಯೋಗಾಲಯಗಳಿಲ್ಲ ಮುಂತಾದವುಗಳ ಕುರಿತು ದೂರುವವರೇ ಹೆಚ್ಚು. ಆದರೆ ಇದೆಲ್ಲಕ್ಕೆಕ್ಕೂ ಅಪವಾದವೆಂಬಂತೆ ಕೆಲ ಸರ್ಕಾರಿ ಶಾಲೆಗಳು ಖಾಸಗೀ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.
ಈ ಶಾಲೆ ವಿಶೇಷತೆಗಳ ಗುಚ್ಛ: ಉತ್ಸಾಹಿ ಶಿಕ್ಷಕರ ಬಳಗ ಈ ಶಾಲೆಯ ಮೊದಲ ವಿಶೇಷತೆ. ದಾನಿಗಳ ನೆರವಿನಿಂದ ಸರಕಾರಿ ಶಾಲೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದಕ್ಕೆ ಮಾಲವಿ ಶಾಲೆ ಸಾಕ್ಷಿಯಾಗಿದೆ. ಅಬ್ದುಲ್ ಕಲಾಂ ಸ್ಮಾರ್ಟ್ ಕ್ಲಾಸ್, ಯು.ಆರ್.ರಾವ್ ವಿಜ್ಞಾನ ಪ್ರಯೋಗಾಲಯ, ಚಿಗುರು ಶಾಲಾ ಮಕ್ಕಳ ಬ್ಯಾಂಕ್, ಮಕ್ಕಳಿಗೆ ಆಡಲು ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ವಿಶೇಷ ಉಪಕರಣಗಳು, ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಾಣ ಹೀಗೆ ಹತ್ತು ಹಲವು ಈ ಶಾಲೆಯ ವಿಶೇಷತೆಗಳಾಗಿದೆ.
ವಿಜ್ಞಾನ ಪ್ರಯೋಗಾಲಯ: ಸಾಮಾನ್ಯವಾಗಿ ಎಲ್ಲಾ ಪ್ರೌಢಶಾಲೆಗಳಲ್ಲೂ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಆದರೆ ಮಾಲವಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥಿತವಾಗಿ ನಾಡಿನ ಖ್ಯಾತ ವಿಜ್ಞಾನಿ ಪ್ರೋ||ಯು.ಆರ್.ರಾವ್ ಹೆಸರಿನ ಪ್ರಯೋಗಶಾಲೆ ನಿರ್ಮಿಸಲಾಗಿದೆ. ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ತಾವೇ ಸ್ವತಃ ನಡೆಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚುತ್ತಾರೆ. ಚಲನೆ, ಬಲ, ಶಕ್ತಿ, ವೇಗ, ವೇಗೋತ್ಕರ್ಷ, ಮುಂತಾದ ಅಮೂರ್ತ ಪರಿಕಲ್ಪನೆಗಳನ್ನು ಓರೆಗೆ ಹಚ್ಚಿ ಕಲಿಯುತ್ತಾರೆ. ಇದು ಅವರ ಮುಂದಿನ ಕಲಿಕೆಗೆ ಪೂರಕವಾಗಲಿದೆ ಎಂಬುದು ಅಲ್ಲಿನ ವಿಜ್ಞಾನ  ಶಿಕ್ಷಕ ಯು.ಮಲ್ಲೇಶ ಅವರ ಅಭಿಮತ. ಪ್ರಯೋಗಾಲಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂಕರವಾದ ರಸಾಯನಿಕಗಳು, ಭೌತಶಾಸ್ತ್ರದ ಪರಿಕರಗಳು, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸೂಕ್ಷ್ಮದರ್ಶಕ ಹಾಗೂ ಕೆಲ ಚಾರ್ಟ್‍ಗಳು ಸಹ ಕಲಿಕೆಗೆ ಪೂರಕವಾಗಿವೆ. 
ಸ್ಮಾರ್ಟ್‍ಕ್ಲಾಸ್ : ಹೆಸರೆ ಹೇಳುವಂತೆ ಇದು ಈ ಶಾಲೆಗೆ ಸ್ಮಾರ್ಟ್‍ನೆಸ್ ತಂದಿದೆ. ಅಂದಾಜು ಒಂದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆಕರ್ಷಕವಾಗಿ ದೇಶದ ಮಾಜಿ ರಾಷ್ಟ್ರಪತಿ ಮತ್ತು ಮಕ್ಕಳ ಪ್ರೇಮಿ ಅಬ್ದುಲ್ ಕಲಾಂ ಸ್ಮಾರ್ಟ್‍ಕ್ಲಾಸ್ ಹೆಸರಿನಲ್ಲಿ ನಿರ್ಮಿಸಲಾಗಿದೆ. ವಿಜ್ಞಾನ, ಗಣಿತ ಮತ್ತು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗೆ ಸಂಬಂಧಿಸಿದ ಪಾಠಗಳ ಕೆಲ ವಿಡೀಯೋಗಳನ್ನು ವೀಕ್ಷಿಸುತ್ತಾ ಮಕ್ಕಳು ಖುಷಿಯಿಂದ ಕಲಿಯುತ್ತಾರೆ. ಇಂಗ್ಲೀಷ್ ರೈಮ್ಸ್‍ಗಳನ್ನು ಮಕ್ಕಳು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎನ್ನವಂತೆ ಹೇಳುವುದು ಕೇಳಿದರೆ ಶಿಕ್ಷಕರ ಶ್ರಮ ತಿಳಿಯುತ್ತದೆ. ಕಂಪ್ಯೂಟರ್‍ನಲ್ಲಿ ಭಾಷಾ ಆಟಗಳ ಮೂಲಕ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಜೊತೆಗೆ ನಮ್ಮ ಸಾಲೆ ಮಕ್ಕಳ ಕಲಿಕೆ ನೋಡಿ ಎರಡು ಶಾಲೆಯಲ್ಲಿ ಸ್ಮಾರ್ಟ್‍ಕ್ಲಾಸ್ ಪ್ರಾರಂಭವಾಗಿವೆ ಎಂದು ಹೇಳುತ್ತಾರೆ ಕಂಪ್ಯೂಟರ್ ಉಸ್ತುವಾರಿ ಶಿಕ್ಷಕರಾದ ಪರಮೇಶ್ವರಯ್ಯ ಸೊಪ್ಪಿಮಠ ಅವರು. 
ಆಟದ ಪರಿಕರಗಳು: ಮಕ್ಕಳ ದೈಹಿಕ ಹಾಗೂ ಮನೋರಂಜನಾ ಆಟಕ್ಕಾಗಿ ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ಪರಿಕರಗಳನ್ನು ದಾನಿಗಳ ನೆರವಿನಿಂದ ಅಳವಡಿಸಲಾಗಿದೆ. ಜೊತೆಗೆ ಶಾಲೆಗೆ ನೂತನವಾಗಿ ನಿರ್ಮಿಸಿರರುವ ಆಕರ್ಷಕ ಸ್ವಾಗತ ಕಮಾನು ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತಿದೆ.  
ಚಿಗುರು ಮಕ್ಕಳ ಬ್ಯಾಂಕ್: ಮಕ್ಕಳು ತಾವು ಪೋಷಕರಿಂದ ಖರ್ಚಿಗೆಂದು ಪಡೆದ ಹಣದಲ್ಲಿ ಸ್ವಲ್ಪ ಉಳಿಸಿ ಶಾಲಾ ಬ್ಯಾಂಕ್‍ಗೆ ಠೇವಣಿ ರೂಪದಲ್ಲಿ ಕಟ್ಟುತ್ತಾರೆ ಮತ್ತು ಅಗತ್ಯವಿದ್ದಾಗ ಹಿಂಪಡೆಯುತ್ತಾರೆ. ಈ ಎಲ್ಲಾ ಜಮಾ ಖರ್ಚಿನ ಲೆಕ್ಕಾಚಾರವನ್ನು ಮಕ್ಕಳೇ ನಿರ್ವಹಿಸುತ್ತಿರುವುದು ಈ ಶಾಲೆಯ ವಿಶೇಷತೆ. ಮುಖ್ಯಗುರುಗಳು ಹಾಗೂ ಉಸ್ತುವಾರಿ ಶಿಕ್ಷಕರ ಹೆಸರಿನಲ್ಲಿ ಜಂಟಿ ಖಾತೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾಗಿದ್ದು, ಅಂದಿನ ಒಟ್ಟು ಜಮಾ ಹಣವನ್ನು ಈ ಖಾತೆಗೆ ಜಮಾ ಮಾಡಲಾಗುತ್ತದೆ. 18 ತಿಂಗಳ  ಅವಧಿಯಲ್ಲಿ ಒಟ್ಟು 76 ಸಾವಿರ ರೂಪಾಯಿಗಳನ್ನು ಮಕ್ಕಳು ಉಳಿತಾಯ ಮಾಡಿದ್ದಾರೆ. ಮಕ್ಕಳಲ್ಲಿ ಈಗಿನಿಂದಲೇ ಸ್ವಾವಲಂಬನೆಯ ಕನಸನ್ನು ಈ ಶಿಕ್ಷಕರು ಬಿತ್ತಿ ಸಾಕಾರಗೊಳಿಸಿದ್ದಾರೆ. 
                  ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಶಾಲಾ ಶಿಕ್ಷಕರೇ ಸಾಕ್ಷಿ. ಇಲ್ಲಿನ ಎಲ್ಲಾ ಶಿಕ್ಷಕರ ಕಾರ್ಯ ಬದ್ದತೆ ಹಾಗೂ ಪರಿಶ್ರಮಗಳ ಫಲವಾಗಿ ಗ್ರಾಮಸ್ಥರ ಸಹಕಾರದಿಂದ ಎರಡು ಲಕ್ಷ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಸ್ಮಾರ್ಟ್ ಕ್ಲಾಸ್ ಮತ್ತು ವಿಜ್ಞಾನ ಪ್ರಯೋಗಾಲಯಗಳು ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುತ್ತಿವೆ.  ಕಂಪ್ಯೂಟರ್ ಕೊಠಡಿಗೆ 12ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದು, ಈಗಾಗಲೇ ಟೆಂಡರ್ ಕಾರ್ಯ ಮುಗಿದಿದೆ. ಈ ಶಾಲಾ ಮಕ್ಕಳ ಪ್ರತಿಭೆ ಬೆಳಗಲು ಹೊಸಪೇಟೆ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮ ನೀಡಲಾಗಿದೆ. ಕೆಲವೇ ವರ್ಷದಲ್ಲಿ ಈ ಶಾಲೆಯಲ್ಲಿನ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದರ ಫಲವಾಗಿ ದಿನಂಪ್ರತಿ ಇತರೆ ಶಾಲೆಗಳಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ 9341444865ಸಂಪರ್ಕಿಸಬಹುದು.  
ಆರ್.ಬಿ.ಗುರುಬಸವರಾಜ ಹೊಳಗುಂದಿ


ಭಾವನಾತ್ಮಕ ಬುದ್ದಿವಂತಿಕೆ Emotional Intellegence

ದಿನಾಂಕ 31-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭಾವನಾತ್ಮಕ ಬುದ್ದಿವಂತಿಕೆ


ಬಿಗ್‍ಬಾಸ್ ಸೀಸನ್-5 ಮುಕ್ತಾಯಗೊಂಡಿದೆ. ಇಲ್ಲಿನ ಪ್ರತಿಯೊಬ್ಬ ಸ್ಪರ್ಧಿಯೂ ಅತ್ಯುತ್ತಮವಾಗಿ ಆಡಬೇಕು, ತಾನೇ ವಿನ್ನರ್ ಆಗಬೇಕೆಂಬ ಆಸೆಯಿಂದ ಆಡಿದರು. ಕೆಲವು ಸ್ಪರ್ಧಿಗಳಂತೂ ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಡಿದರು. ಎಲ್ಲರಂತೆ ಎಲ್ಲರ ಜೊತೆಯಲ್ಲಿಯೇ ಇದ್ದರೂ ಆದರೆ ಇತರರಿಗಿಂತ ಭಿನ್ನವಾಗಿ ಆಡಿದರು. ಟಾಸ್ಕ್ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರಲ್ಲೂ ಆಂತರಿಕ ಲೆಕ್ಕಾಚಾರ ಶುರುವಾಗುತ್ತಿತ್ತು. ಈ ಲೆಕ್ಕಾಚಾರ ಯಾರ ಕಣ್ಣಿಗೂ ಕಾಣದು, ಯಾರ ಅನುಭವಕ್ಕೂ ಬಾರದು. ಇದು ಅವರ ಜಾಣತನ ಎಂದು ಮಾತ್ರ ಹೇಳುತ್ತೇವೆ. ಈ ರೀತಿಯ ಜಾಣತನವನ್ನು ಮನಶಾಸ್ತ್ರದಲ್ಲಿ ಭಾವನಾತ್ಮಕ ಬುದ್ದಿವಂತಿಕೆ ಎನ್ನುತ್ತಾರೆ. ಹಾಗಾದರೆ ಭಾವನಾತ್ಮಕ ಬುದ್ದಿವಂತಿಕೆಯ ಬಗ್ಗೆ ಇನ್ನಷ್ಟು ವಿವರ ತಿಳಿಯೋಣವೇ?
ಭಾವನಾತ್ಮಕ ಬುದ್ದಿವಂತಿಕೆ-ಹಾಗಂದರೇನು?: ಸರಳವಾಗಿ ಹೇಳುವುದಾದರೆ ಇತರರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮತ್ತು ತಾವು ಏನೆಂದು ಇನ್ನೊಬ್ಬರಿಗೆ ಅರ್ಥವಾಗದ ವಿಧಾನ. ಅಂದರೆ ಇತರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ, ಅನುಭೂತಿ ತೋರಿಸಿ, ಅವರನ್ನು ತಮ್ಮೆಡೆ ಸೆಳೆದುಕೊಂಡು ಅವರ ಆಸೆ-ಆಕಾಂಕ್ಷೆಗಳು, ಆಚಾರ-ವಿಚಾರಗಳು, ನಡೆ-ನುಡಿಗಳು, ನಿಲುವುಗಳು, ಸಾಮಥ್ರ್ಯಗಳು, ಕೊರತೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಮತ್ತು ತಮ್ಮ ಬಗೆಗಿನ ನಿಖರವಾದ ಮಾಹಿತಿಯನ್ನು ಇತರರಿಗೆ ತಿಳಿಸದ ಜಾಣತನವೇ ಭಾವನಾತ್ಮಕ ಬುದ್ದಿವಂತಿಕೆ. ಸವಾಲುಗಳನ್ನು ಸ್ವೀಕರಿಸಿ ಸುಲಭವಾಗಿ ಜಯಿಸುವ ಮತ್ತು ಧನಾತ್ಮಕ ರೀತಿಯಲ್ಲಿ ಒತ್ತಡವನ್ನು ನಿವಾರಿಸುವ ಸಾಮಥ್ರ್ಯವೇ ಭಾವನಾತ್ಮಕ ಬುದ್ದಿವಂತಿಕೆ. ಇದು ಸ್ವಂತ ಭಾವನೆಗಳನ್ನು ಗುರುತಿಸುವ, ಬಳಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೂ ಆಗಿದೆ. 
ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕವೇ?: ಹೌದು. ಪ್ರತಿಯೊಬ್ಬರೂ ಭಾವನಾತ್ಮಕ ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಬಹಳವಾಗಿ ಪ್ರಭಾವಿಸುತ್ತದೆ. ನೀವು ಯಾರು? ನಿಮ್ಮ ಕೆಲಸ ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇತರರಿಗಿಂತ ನೀವು ಹೇಗೆ ಭಿನ್ನ? ವೃತ್ತಿಯಲ್ಲಿನ ನಿಮ್ಮ ಬಲವೇನು? ನಿಮ್ಮ ಕೊರತೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ. ಪ್ರತಿ ಕಾರ್ಯ ಸ್ಥಳವೂ ವಿಭಿನ್ನ ವ್ಯಕ್ತಿ ಮತ್ತು  ಶಕ್ತಿಗಳನ್ನು ಒಳಗೊಂಡಿರುತ್ತದೆ. ಆ ವ್ಯಕ್ತಿ ಮತ್ತು ಶಕ್ತಿಗಳು ಕೆಲಸ ಮಾಡುವ ರೀತಿಯನ್ನು ಅಭ್ಯಸಿಸಲು ಭಾವನಾತ್ಮಕ ಬುದ್ದಿವಂತಿಕೆ ಬೇಕು. 
ಗಮನಾರ್ಹ ಪ್ರಮುಖಾಂಶಗಳು
ಕೆಲಸದ ಸ್ಥಳದಲ್ಲಿ ವಿಭಿನ್ನವಾಗಿ ಕಾಣಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ ಎನ್ನುತ್ತಾರೆ ಅಮೇರಿಕಾದ ಖ್ಯಾತ ಮನಶಾಸ್ತ್ರಜ್ಞನಾದ ಡೇನಿಯಲ್ ಗೋಲ್ಮನ್. ಅವರು ಭಾವನಾತ್ಮಕ ಬುದ್ದಿವಂತಿಕೆಯಲ್ಲಿ ಐದು ಪ್ರಮುಖಾಂಶಗಳಿವೆ ಎಂದು ಹೇಳಿದ್ದಾರೆ. ಅವುಗಳೆಂದರೆ,
ಸ್ವಯಂ ಅರಿವು: ವ್ಯಕ್ತಿಗೆ ಸ್ವಯಂ ಅರಿವು ಇದ್ದರೆ ಆ ವ್ಯಕ್ತಿ ತನ್ನ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಆ ಮೂಲಕ ಇತರರ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಸ್ವಯಂ ಅರಿವುಳ್ಳ ವ್ಯಕ್ತಿಯು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರುತ್ತಾರೆ ಮತ್ತು ಅವರು ಟೀಕೆಗಳಿಂದ ರಚನಾತ್ಮಕ ಕಲಿಕೆ ಗಳಿಸಿಕೊಳ್ಳುತ್ತಾರೆ.
ಸ್ವಯಂ ನಿಯಂತ್ರಣ : ಭಾವನಾತ್ಮಕ ಬುದ್ದಿವಂತ ವ್ಯಕ್ತಿಯು ಅಗತ್ಯವಿದ್ದಾಗ ತನ್ನ ಭಾವನೆಗಳನ್ನು ಪ್ರಬುದ್ದವಾಗಿ ಬಹಿರಂಗಪಡಿಸುವ ಮತ್ತು ನಿಯಂತ್ರಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಭಾವನೆಗಳನ್ನು ದುರ್ಬಲಗೊಳಿಸುವ ಬದಲು ಸಂಯಮ ಮತ್ತು ನಿಯಂತ್ರಣದೊಂದಿಗೆ ವ್ಯಕ್ತಪಡಿಸುತ್ತಾರೆ. 
ಪ್ರೇರಣೆ : ಭಾವನಾತ್ಮಕ ಬುದ್ದಿವಂತರು ಸಾಮಾನ್ಯವಾಗಿ ಸ್ವಯಂ ಪ್ರೇರಿತರಾಗಿರುತ್ತಾರೆ. ಅವರು ಹಣ, ಅಂತಸ್ತು ಇನ್ಯಾವುದೇ ಪ್ರಭಾವಗಳಿಂದ ಪ್ರೇರಿತರಾಗುವುದಿಲ್ಲ. ಅವರು ಸ್ವಾಮಿ ವಿವೇಕಾನಂದರಂತೆ ಯಾವಾಗಲೂ ಆಶಾವಾದಿಗಳಾಗಿದ್ದು, ಆಶಾಭಂಗ ಮತ್ತು ಆಂತರಿಕ ಮಹತ್ವಾಕಾಂಕ್ಷೆಗಳಿಂದ ಚೇತರಿಸಿಕೊಳ್ಳುತ್ತಿರುತ್ತಾರೆ. 
ಪರಾನುಭೂತಿ : ಮಾನವನ ಸಹಜ ಸ್ವಭಾವದ ತಿಳುವಳಿಕೆ ಹೊಂದಬೇಕಾದರೆ ಆ ವ್ಯಕ್ತಿಯಲ್ಲಿ ಪರಾನುಭೂತಿ ಮತ್ತು ಸಹಾನುಭೂತಿಗಳು ಇರಬೇಕು. ಆಗ ಮಾತ್ರ ಇತರ ಜನರೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಇದು ಭಾವನಾತ್ಮಕ ಬುದ್ದಿವಂತರಲ್ಲಿ ಅಧಿಕವಾಗಿರುತ್ತದೆ. ಪರಾನುಭೂತಿಯು ಉತ್ತಮ ಸೇವೆ ನೀಡಲು ಮತ್ತು ಇತರರ ಕಾಳಜಿಗೆ ಪ್ರಾಮಾಣಿಕ ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಡುತ್ತದೆ. 
ಸಾಮಾಜಿಕ ಕೌಶಲ್ಯಗಳು : ಭಾವನಾತ್ಮಕ ಬುದ್ದಿವಂತರು ತಂಡಸ್ಪೂರ್ತಿಯ ಬಾಂಧವ್ಯ ಹೊಂದಿರುತ್ತಾರೆ ಮತ್ತು ತಮ್ಮ ತಂಡದಲ್ಲಿ ತ್ವರಿತವಾಗಿ ಇತರರೊಂದಿಗೆ ಬೆರೆಯುತ್ತಾರೆ ಹಾಗೂ ಅವರನ್ನು ನಂಬುತ್ತಾರೆ. ಅವರು ಸಾಮಾನ್ಯವಾಗಿ ಇತರರೊಂದಿಗಿನ ಸಮಯವನ್ನು ಆನಂದಿಸುತ್ತಾರೆ. ಸುತ್ತಲಿನ ಇತರರನ್ನು ಗೌರವಿಸುತ್ತಾರೆ. ಇದರಿಂದ ಸುಲಭ ಜಯಗಳಿಸುತ್ತಾರೆ.
ಭಾವನಾತ್ಮಕ ಬುದ್ದಿವಂತಿಕೆಯ ಗುಣಲಕ್ಷಣಗಳು
ತಪ್ಪಿನಿಂದ ಕಲಿಕೆ: ಎಲ್ಲಾ ಬುದ್ದಿವಂತರೂ ಪರಿಪೂರ್ಣರೇನಲ್ಲ. ಅವರೂ ಇತರರಂತೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅವರು ಪ್ರತೀ ತಪ್ಪಿನಿಂದಲೂ ಕಲಿಯುತ್ತಾರೆ. ಪರಿಪೂರ್ಣತೆ ಹೊಂದಲು ತಪ್ಪಿನಿಂದ ಕಲಿಯುವುದು ಮತ್ತು ಪ್ರತಿದಿನವೂ ವೈಯಕ್ತಿಕವಾಗಿ ಶ್ರಮಿಸುವುದು ಮುಖ್ಯ.
ಸಮತೋಲನ: ದಿನದ ಹೆಚ್ಚು ವೇಳೆ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಕೊಂಡವರಿಗೆ ವೈಯಕ್ತಿಕ ಜೀವನದ ಅನಗತ್ಯ ಒತ್ತಡಗಳು ಮತ್ತು ಆರೋಗ್ಯದ ಸಮಸ್ಯೆಗಳು ಬಾಧಿಸುವುದು ಸಹಜ. ಆದರೆ ಭಾವನಾತ್ಮಕ ಬುದ್ದಿವಂತಿಕೆಯುಳ್ಳವರು ಇವುಗಳನ್ನು ಸಮತೋಲನಗೊಳಿಸಿ ಎಲ್ಲದಕ್ಕೂ ಸಮಾನ ಆಧ್ಯತೆಗಳನ್ನು ನೀಡುತ್ತಾರೆ. 
ಬದಲಾವಣೆಗೆ ಬದ್ದತೆ: ಬಹುತೇಕರು ಬದಲಾವಣೆಗೆ ಭಯಗೊಂಡು ಯಶಸ್ಸಿನಿಂದ ಹಿಂದೆ ಸರಿಯುತ್ತಾರೆ. ಆದರೆ ಭಾವನಾತ್ಮಕ ಬುದ್ದಿವಂತರು ಬದಲಾವಣೆ ಜೀವನದ ಒಂದು ಭಾಗವೆಂದು ತಿಳಿಯುತ್ತಾರೆ. ಅವರು ಬದಲಾವಣೆಗೆ ಹೊಂದಿಕೊಂಡು ಅದಕ್ಕೆ ತಕ್ಕ ಯೋಜನೆ ರೂಪಿಸುತ್ತಾರೆ. 
ಅವಧಾನದ ಮಟ್ಟ: ಭಾವನಾತ್ಮಕ ಬುದ್ದಿವಂತರು ತಮ್ಮ ಮುಂದಿರುವ ಟಾಸ್ಕ್ ಅಥವಾ ಕಾರ್ಯದ ಮೇಲೆ ಹೆಚ್ಚು ಅವಧಾನ ಕೇಂದ್ರೀಕರಿಸುತ್ತಾರೆ. ಹೊರಗಿನ ಯಾವುದೇ ಸಂಗತಿಗಳಿಂದ ಸುಲಭವಾಗಿ ವಿಚಲಿತರಾಗುವುದಿಲ್ಲ. ತಮ್ಮ ಕಾರ್ಯ ಪೂರ್ಣಗೊಳಿಸುವತ್ತ ಮಾತ್ರ ಅವರು ಚಿತ್ತ ವಹಿಸಿರುತ್ತಾರೆ. 
ಮುನ್ನುಗ್ಗುವಿಕೆ: ಭಾವನಾತ್ಮಕ ಬುದ್ದಿವಂತರು ಯಾವುದೇ ಕೆಲಸದಿಂದ ಹಿಂದುಳಿಯುವುದಿಲ್ಲ. ಬದಲಾಗಿ ಮುನ್ನುಗ್ಗುತ್ತಾರೆ. ಅವರಿಗೆ ನಿನ್ನೆಗಿಂತ ನಾಳೆ ಮುಖ್ಯ. ನಿನ್ನೆಯ ಅನುಭಾವದ ಆಧಾರದಲ್ಲಿ ನಾಳೆಯ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೋಲಿಗೆ ಕಾರಣವಾದ ಯಾರನ್ನೂ ಯಾವುದನ್ನೂ ದ್ವೇಷಿಸುವುದಿಲ್ಲ. ಉತ್ತಮಾಂಶಗಳೊಂದಿಗೆ ಮುಂದೆ ನಡೆಯುತ್ತಾರೆ.
ಸಕಾರಾತ್ಮಕತೆಗೆ ಗಮನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಮಯ ಮತ್ತು ಶಕ್ತಿ ವಿನಿಯೋಗಿಸುತ್ತಾರೆ. ಪ್ರತೀ ನಕಾರಾತ್ಮಕ ಅಂಶವನ್ನು ಸಕಾರಾತ್ಮಕವಾಗಿಸುವ ಪ್ರಯತ್ನ ಮಾಡುತ್ತಾರೆ. 
ಚೌಕಟ್ಟು ಅಳವಡಿಕೆ: ಭಾವನಾತ್ಮಕ ಬುದ್ದಿವಂತರು ತಮ್ಮದೇ ಆದ ಚೌಕಟ್ಟು ನಿರ್ಮಿಸಿಕೊಳ್ಳುತ್ತಾರೆ. ತಮ್ಮ ವೈಯಕ್ತಿಕ ಏಳಿಗೆಗಾಗಿ ಈ ಚೌಕಟ್ಟನ್ನು ದಾಟಿ ಅಲ್ಲಿನ ಉತ್ತಮಾಂಶಗಳನ್ನು ಪಡೆಯುತ್ತಾರೆ. ಆದರೆ ತಮ್ಮ ಅಭಿವೃದ್ದಿಗೆ ಮಾರಕವಾಗುವ ವ್ಯಕ್ತಿ ಅಥವಾ ಅಂಶಗಳನ್ನು ತಮ್ಮ ಚೌಕಟ್ಟಿನೊಳಗೆ ಬರದಂತೆ ನೋಡಿಕೊಳ್ಳುತ್ತಾರೆ. ಆದಷ್ಟೂ ನಕಾರಾತ್ಮಕ ಪ್ರೇರಕಾಂಶಗಳನ್ನು ದೂರ ಇಡುತ್ತಾರೆ. 
ತೀರ್ಮಾನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ನ್ಯಾಯಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸಮಸ್ಯೆಗೆ ಪೂರಕವಾದ ಮಾಹಿತಿಗಳನ್ನು ಎಲ್ಲಾ ಆಯಾಮಗಳಿಂದ ಸಂಗ್ರಹಿಸಿ ನಿಖರವಾದ ನಿರ್ಣಯ ಕೈಗೊಳ್ಳುವಲ್ಲಿ ಇವರು ನಿಷ್ಣಾತರು. 
ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕೇ?
ಚಾಣಕ್ಯ ಹುಟ್ಟಿದಾಗಿನಿಂದಲೇ ಬುದ್ದಿವಂತನಲ್ಲ. ಅಂತೆಯೇ ಯಾರೂ ಜನ್ಮಧಾರಭ್ಯ ಬುದ್ದಿವಂತರಲ್ಲ. ತಾವು ವಾಸಿಸುವ ಪರಿಸರ ಹಾಗೂ ಅಳವಡಿಸಿಕೊಂಡ ಆಚಾರ ವಿಚಾರಗಳು, ನೀತಿ ನಿಯಮಗಳು ಅವರನ್ನು ಬುದ್ದಿವಂತರನ್ನಾಗಿ ಮಾಡುತ್ತದೆ. ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕಾದರೆ ಕೆಳಗಿನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ,
ದೃಢವಾದ ಭಾವನಾತ್ಮಕ ಶಬ್ದಕೋಶ ಬೆಳೆಸಿಕೊಳ್ಳಿ.
ಸುತ್ತಲಿನ ಜನರನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಿ.
ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ.
ನಿಮ್ಮ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರಿಯಿರಿ.
ನ್ಯಾಯಪರವಾದ ತೀರ್ಮಾನ ಕೈಗೊಳ್ಳಿ.
ಅಪರಾಧಗಳಿಗೆ ಕೈ ಹಾಕಬೇಡಿ.
ನಿಮ್ಮ ಸಾಧನೆಗಳ ಬಗ್ಗೆ ಜಂಭ ಬೇಡ.
ಪ್ರತೀ ತಪ್ಪಿನಿಂದ ಪಾಠ ಕಲಿಯಿರಿ.
ನಿಮ್ಮ ಕೆಲಸಕ್ಕೆ ನಿರ್ದಿಷ್ಟವಾದ ಪ್ರತಿಫಲ ಬೇಡಬೇಡಿ.
ದ್ವೇಷ ಅಸೂಯೆಗಳನ್ನು ದೂರವಿರಿಸಿ.
ಇತರರಲ್ಲಿ ಪರಿಪೂರ್ಣತೆಯನ್ನು ಹುಡುಕಬೇಡಿ. 
ಆತ್ಮವಿಶ್ವಾಸ ಇರಲಿ, ಅಂಧಾನುಕರಣೆ ಬೇಡ.
ಇತರರ ಅಲ್ಪ ಉತ್ತಮ ಕಾರ್ಯವನ್ನೂ ಶ್ಲಾಘಿಸಿ, ಪ್ರಶಂಸೆ ನೀಡಿ.
ಯಾರೊಂದಿಗೂ ಸಂಪರ್ಕ ಕಳೆದುಕೊಳ್ಳಬೇಡಿ. 
ಮಾದಕ ವಸ್ತುಗಳಿಂದ ದೂರವಿರಿ.
ಇನ್ನೊಬ್ಬರ ಬಗ್ಗೆ ನಕಾರಾತ್ಮಕ ಮಾತುಗಳು ಬೇಡ.
ಸಂತೋಷವನ್ನು ಸೀಮಿತಗೊಳಿಸಿಕೊಳ್ಳಬೇಡಿ. 

ಆರ್.ಬಿ.ಗುರುಬಸವರಾಜ ಹೊಳಗುಂದಿ


ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ

ದಿನಾಂಕ 20-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ
 




  ಪುರಾಣೇತಿಹಾಸ ಕಾಲದಿಂದಲೂ ಕಲೆ ಮತ್ತು ಸಾಹಿತ್ಯದ ಕಥಾ ವಸ್ತುವಾಗಿರುವ ಚಂದ್ರ ಅಸಂಖ್ಯಾತ ಕೆಲಸಗಳಿಗೆ ಸ್ಪೂರ್ತಿಯಾಗಿದೆ. ಕಥೆ, ಕಾವ್ಯ, ಗದ್ಯ, ಪದ್ಯ, ಸಂಗೀತ, ಕಲೆ ಇತ್ಯಾದಿಗಳ ಸೃಷ್ಟಿಗೆ ಪ್ರೇರಕಾಂಶ. ಲೌಕಿಕ ಮತ್ತು ಅಲೌಕಿಕ ಬದುಕಿನ ಒಂದು ಭಾಗವಾದ ಚಂದ್ರ ಅಬಾಲವೃದ್ದರಿಗೂ ಪ್ರಿಯವಾದ ವಸ್ತು. ಅರಿಸ್ಟಾಟಲ್‍ನಿಂದ ಇಂದಿನವರೆಗೂ ಅಧ್ಯಯನ ವಸ್ತುವಾಗಿರುವ ಚಂದ್ರನ ಬಗ್ಗೆ ಮೊಗೆದಷ್ಟೂ ಕುತೂಹಲ ಕಥನಗಳು ಹುಟ್ಟುತ್ತಲೇ ಇವೆ. ಇದೇನಿದು ಚಂದ್ರನ ಬಗ್ಗೆ ಇಷ್ಟೊಂದು ವರ್ಣನೆ ಎನ್ನುತ್ತೀರಾ? ಇದೇ ಜನವರಿ 31 ಕ್ಕೆ ರಾತ್ರಿ ಬಾನಂಗಳದಲ್ಲಿ ಒಂದು ವಿಸ್ಮಯ ನಡೆಯಲಿದೆ. ಅದೇನೇಂದು ಬಲ್ಲಿರಾ? ಅದೇ ಈ ವರ್ಷದ ಮೊದಲ ಚಂದ್ರಗ್ರಹಣ. ನೀವು ಈಗಾಗಲೇ ಚಂದ್ರಗ್ರಹಣದ ಬಗ್ಗೆ ತಿಳಿದಿರುತ್ತೀರಿ. ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕಿಗೆ ಅಡ್ಡಲಾಗಿ ಭೂಮಿ ಬಂದು ಕೆಲಕಾಲ ಚಂದ್ರನ ಮೇಲೆ ಭೂಮಿಯ ನೆರಳು  ಬೀಳುತ್ತದೆ. ಆಗ ಭೂಮಿಯಲ್ಲಿದ್ದ ಜೀವರಾಶಿಗೆ ಚಂದ್ರ ಕೆಲಕಾಲ ಕಾಣದಂತೆ ಮಾಯವಾಗುತ್ತಾನೆ. ಇದನ್ನೇ ನಾವು ಚಂದ್ರಗ್ರಹಣ ಎಂದು ಶಾಲಾ ಪಠ್ಯದಲ್ಲಿ ಓದಿದ್ದೇವೆ. ಆದರೆ ಜನವರಿ 31ರ ಚಂದ್ರಗ್ರಹಣ ತುಂಬಾ ವಿಶೇಷವುಳ್ಳದ್ದಾಗಿದೆ. ವಿಶೇಷತೆ ಏನು ಅಂತಿರಾ? 
ವಿಶೇಷ ಚಂದ್ರಗ್ರಹಣ : ಇದು ಈ ವರ್ಷದ ಮೊದಲ ಗ್ರಹಣವಾಗಿದ್ದು ಮೋಡಗಳಿಲ್ಲದ ರಾತ್ರಿ ಸಂಭವಿಸುವುದರಿಂದ ವೀಕ್ಷಣೆಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೇ ಇದು ಸೂಪರ್ ಮೂನ್ ದಿನದಂದೇ ಸಂಭವಿಸುತ್ತದೆ. ಇನ್ನೊಂದು ವಿಶೇಷ ಎಂದರೆ  ಜನವರಿ 31ರ ಹುಣ್ಣಿಮೆಯನ್ನು ಬ್ಲೂಮೂನ್ ಎಂತಲೂ ಕರೆಯುತ್ತಾರೆ. ಅಲ್ಲದೇ ಈ ಗ್ರಹಣವು ಹೆಚ್ಚಾಗಿ ಕರ್ನಾಟಕದೆಲ್ಲೆಡೆ ಸಂಜೆ ಚಂದ್ರೋದಯದ ಸಮಯದಲ್ಲಿ ಸಂಭವಿಸುವುದರಿಂದ ವೀಕ್ಷಿಸಲು ಅನುಕೂಲ. ಗ್ರಹಣವು 18:15(ಸಂಜೆ 6:15)ಕ್ಕೆ ಪ್ರಾರಂಭವಾಗಿ 21:38(ರಾತ್ರಿ 09:38) ಕ್ಕೆ ಮುಕ್ತಾಯವಾಗುತ್ತದೆ. ಒಟ್ಟು 3ಗಂಟೆ 23ನಿಮಿಷಗಳ ಕಾಲ ಈ ಗ್ರಹಣವನ್ನು ನೋಡಬಹುದು. 
ಬರಿಗಣ್ಣಿನಿಂದಲೇ ವೀಕ್ಷಿಸಿ : ಚಂದ್ರಗ್ರಹಣ ನೋಡಲು ಯಾವುದೇ ವಿಶೇಷ ಉಪಕರಣಗಳೇನೂ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಿ ಆನಂದಿಸಬಹುದು ಮತ್ತು ಇದರಿಂದ ಕಣ್ಣಿಗೆ ಯಾವುದೇ ಅಪಾಯವಿಲ್ಲ. ಆದರೆ ಚಂದ್ರಗ್ರಹಣದ ಸಂಪೂರ್ಣ ವೀಕ್ಷಣೆಗೆ ಬೈನಾಕುಲರ್ ಅಥವಾ ದೂರದರ್ಶಕ ಯಂತ್ರಗಳಿದ್ದರೆ ಸಮೀಪದ ದೃಶ್ಯಾವಳಿಗಳ ಆನಂದ ಅನುಭವಿಸಬಹುದು. ಜೊತೆಗೆ ಚಂದ್ರಗ್ರಹಣದ ಸಂಪೂರ್ಣ ಗುಣಲಕ್ಷಣಗಳನ್ನು ನಿಖರವಾಗಿ ಅಧ್ಯಯನ ಮಾಡಬಹುದು. 


ಸೂಪರ್ ಮೂನ್ ಬ್ಲೂಮೂನ್
ಭೂಮಿಯ ಸುತ್ತ ಸುತ್ತುವ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತೀ ಕನಿಷ್ಠ ದೂರ ಇರುವ ದಿನವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ದಿನದಂದು ಚಂದ್ರನು ಸಾಮಾನ್ಯತೆಗಿಂತ 14% ಹೆಚ್ಚು ದೊಡ್ಡದಾಗಿ ಹಾಗೂ 30% ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. 3 ಡಿಸೆಂಬರ್ 2017, 1 ಜನವರಿ 2018 ಮತ್ತು 31 ಜನವರಿ 2018 ರ ಹುಣ್ಣಿಮೆಗಳು ಸೂಪರ್ ಮೂನ್‍ಗಳಾಗಿವೆ. ಎರಡು ಹುಣ್ಣಿಮೆಗಳ ನಡುವಿನ ಕಾಲಾವಧಿ 29.5 ದಿನಗಳು(709 ಗಂಟೆಗಳು). ಒಂದೇ ಕ್ಯಾಲೆಂಡರ ತಿಂಗಳಲ್ಲಿ ಎರಡು ಹುಣ್ಣಿಮೆಗಳಿದ್ದು, ಎರಡನೆ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯುಲಾಗುತ್ತದೆ. ಇದೇ ಜನವರಿ ತಿಂಗಳಲ್ಲಿ ಎರಡು ಹುಣ್ಣಿಮೆಗಳಿವೆ. ಜನವರಿ 1 ಹಾಗೂ  31.  ಹಾಗಾಗಿ ಜನವರಿ  31 ರ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ. 

ಭಯ ಬೇಡ : ಗ್ರಹಣ ಎಂದರೆ ನೆರಳಿನ ಕತ್ತಲು. ಗ್ರಹಣಗಳ ಬಗ್ಗೆ ಕೆಲವು ಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಗ್ರಹಣಗಳ ಸಮಯದಲ್ಲಿ ಹೊರಗೆ ಬರಬಾರದು, ಊಟ ಮಾಡಬಾರದು, ಬಸುರಿ ಮತ್ತು ಬಾಣಂತಿಯರಿಗೆ ಗ್ರಹಣದ ನೆರಳು ಬೀಳಬಾರದು ಇತ್ಯಾದಿ ತಪ್ಪು ಅಭಿಪ್ರಾಯಗಳಿವೆ. ಇವೆಲ್ಲಾ ತಪ್ಪು ಅಭಿಪ್ರಾಯಗಳೇ ಹೊರತು ಸತ್ಯವಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಹಿನ್ನಲೆಗಳಿವೆ. ಹಿಂದಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ದೀಪಗಳ ವ್ಯವಸ್ಥೆ ಇರಲಿಲ್ಲ. ಕತ್ತಲಿನಲ್ಲಿ ಊಟ ಮಾಡುವಾಗ ಹುಳು/ಕೀಟಗಳು ಆಹಾರದ ತಟ್ಟೆಯೊಳಗೆ ಬೀಳಬಹುದು ಎಂಬ ಕಾರಣಕ್ಕೆ ಗ್ರಹಣದ ವೇಳೆ ಆಹಾರ ಸೇವಿಸಬಾರದು ಎಂದು ಹೇಳಿರಬಹುದು. ಕತ್ತಲಲ್ಲಿ ಬಸುರಿ/ಬಾಣಂತಿ ಹೊರಗೆ ಬಂದರೆ ಬೀಳಬಹುದು ಎಂಬ ಕಾರಣಕ್ಕೆ ಹೊರಗೆ ಬರಬಾರದು ಎಂದು ಹೇಳಿದ್ದಾರೆಯೇ ವಿನಹ ಅನ್ಯ ಕಾರಣಗಳಿಗಲ್ಲ. ಗ್ರಹಣಗಳು ನಿಸರ್ಗದಲ್ಲಿ ನಡೆಯುವ ಅವಿಸ್ಮರಣೀಯ ವಿದ್ಯಮಾನಗಳು. ಇವು ಬೇಕೆಂದಾಗ ನೋಡಲು ಸಿಗುವುದಿಲ್ಲ. ಅವು ಸಂಭವಿಸಿದಾಗಲೇ ನೋಡಿ ಆನಂದಿಸಬೇಕು. ಸೂರ್ಯಗ್ರಹಣವನ್ನು ಮಾತ್ರ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರಗ್ರಹಣ ನೋಡಲು ಯಾವುದೇ ಅಭ್ಯಂತರ ಹಾಗೂ ಅಪಾಯಗಳಿಲ್ಲ. 
ನೆನಪಿರಲಿ :
ಹುಣ್ಣಿಮೆಯ ದಿನ ಚಂದ್ರಗ್ರಹಣ ಮತ್ತು ಅಮವಾಸ್ಯೆ ದಿನ ಸೂರ್ಯಗ್ರಹಣ ಸಂಭವಿಸುತ್ತವೆ. ಆದರೆ ಎಲ್ಲಾ ಹುಣ್ಣಿಮೆ ಅಥವಾ ಅಮವಾಸ್ಯೆ ದಿನ ಗ್ರಹಣ ಸಂಭವಿಸುವುದಿಲ್ಲ. ಗ್ರಹಣಗಳು ಸಂಭವಿಸಲು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬರಬೇಕು. ಆಗ  ಮಾತ್ರ ಗ್ರಹಣಗಳು ಸಂಭವಿಸುತ್ತವೆ.

ನೀವೇನು ಮಾಡಬಹುದು? : 
ಮೊದಲು ನಿಮ್ಮ ಮನೆಯ ಎಲ್ಲಾ ಸದಸ್ಯರಿಗೆ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿ. ಗ್ರಹಣದ ದಿನ ಮನೆಯವರೊಡಗೂಡಿ ಗ್ರಹಣ ವೀಕ್ಷಿಸಿ.
ನಿಮ್ಮ ಗ್ರಾಮ ಅಥವಾ ನಗರಗಳ ವಾರ್ಡ್ ಮಟ್ಟದಲ್ಲಿ ಗ್ರಹಣಗಳ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆ ಹೋಗಲಾಡಿಸಲು ಸಭೆ/ಗೋಷ್ಠಿಗಳನ್ನು ನಡೆಸಿ.
ಗ್ರಹಣ ಕುರಿತ ಜನರಲ್ಲಿನ ಅಂಧಾನುಕರಣೆ ಮತ್ತು ಮೌಢ್ಯತೆಗಳನ್ನು ಹೊಡೆದು ಹಾಕಲು ಮಾರ್ಗದರ್ಶನ ನೀಡಿ. 
ನಿಮ್ಮ ಸಮೀಪದ ಶಾಲಾ ಕಾಲೇಜುಗಳಲ್ಲಿ ಗ್ರಹಣ ಕುರಿತಾದ ಮಾಹಿತಿ ಕಾರ್ಯಾಗಾರ/ವೀಡಿಯೋ ಪ್ರದರ್ಶನ ಏರ್ಪಡಿಸಿ.
ಸಾಮಾಜಿಕ ಜಾಲತಾಣಗಳಲ್ಲಿ ಗ್ರಹಣ ವೀಕ್ಷಣೆಯ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುವುದು. ಆ ಮೂಲಕ ಜನಜಾಗೃತಿ ಮೂಡಿಸಿ.
ಗ್ರಹಣದ ದಿನ ಎತ್ತರವಾದ ಸ್ಥಳದಲ್ಲಿ ಗ್ರಹಣ ವೀಕ್ಷಣೆಗೆ ಸ್ಥಳ ಹುಡುಕಿಕೊಳ್ಳುವುದು. ಆದಷ್ಟೂ ಹೆಚ್ಚು ಜನರನ್ನು ಸೇರಿಸಿ ಗ್ರಹಣ ಕುರಿತಾದ ಚರ್ಚೆ ಹಾಗೂ ವೀಕ್ಷಣೆಗೆ ಅವಕಾಶ ಕಲ್ಪಿಸಿ.
ದೂರದರ್ಶಕ ಯಂತ್ರಗಳನ್ನು ಅಳವಡಿಸಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸುವುದು. ಆ ಮೂಲಕ ಗ್ರಹಣ ಕುರಿತು ಅಧ್ಯಯನ ಕೈಗೊಳ್ಳಿ.
ಗ್ರಹಣ ಸಮಯದಲ್ಲಿ ಸಾಮೂಹಿಕ ಭೋಜನ ಸೇವನೆ ಹಾಗೂ ಮನೋರಂಜನೆ ಕಾರ್ಯಕ್ರಮ ಏರ್ಪಡಿಸಿ.
ಗ್ರಹಣ ವೀಕ್ಷಣೆಯ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಿಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ