June 5, 2020

ಕಪ್ಪುರಂಧ್ರ ಸೌರವ್ಯೂಹ ಪ್ರವೇಶಿಸಿದರೆ ಏನಾಗುತ್ತೆ?

ದಿನಾಂಕ 13-04-2019ರ ವಿಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಕಪ್ಪುರಂಧ್ರ ಸೌರವ್ಯೂಹ ಪ್ರವೇಶಿಸಿದರೆ ಏನಾಗುತ್ತೆ?

ನಮ್ಮ ಸೂರ್ಯ ಸುಂದರವಾದ ಮತ್ತು ಬೃಹತ್ ಸಂಖ್ಯೆಯ ಪರಿವಾರ ಹೊಂದಿದ್ದಾನೆ. ಅದರಲ್ಲಿ ಎಂಟು ಗ್ರಹಗಳು, ನೂರಾರು ಉಪಗ್ರಹಗಳು, ಸಾವಿರಾರು ಕ್ಷುದ್ರಗ್ರಹಗಳು, ಶತಕೋಟಿ ಧೂಮಕೇತುಗಳು ಸೇರಿವೆ. ಇಂತಹ ಬೃಹತ್ ಸಂಖ್ಯೆಯ ಪರಿವಾರಕ್ಕೆ ಕಪ್ಪುರಂಧ್ರವೆಂಬ ಅನಪೇಕ್ಷಿತ ಅತಿಥಿ ಬಂದರೆ ಏನಾಗುತ್ತೇ?

ಇಷ್ಟೊಂದು ಸಂಖ್ಯೆಯ ಪರಿವಾರ ಇರುವಾಗ ಒಬ್ಬ ಅತಿಥಿ ಬಂದರೆ ತೊಂದರೆ ಏನು? ಎಂಬ ಪ್ರಶ್ನೆ ಮೂಡದಿರದು. ಹಾಗಾದರೆ ಕಪ್ಪುರಂಧ್ರ ಎಂದರೇನು? ಅದರಿಂದ ಆಗುವ ಪರಿಣಾಮಗಳೇನು ಕುರಿತ ಮಾಹಿತಿಗಾಗಿ ಮುಂದೆ ಓದಿ.

ಕಪ್ಪುರಂಧ್ರ ಎಂದರೆ,,,,, : ಕಪ್ಪುರಂಧ್ರಗಳನ್ನು ಕಪ್ಪುಕುಳಿ ಎಂದೂ ಸಹ ಕರೆಯಲಾಗುತ್ತದೆ. ಕಪ್ಪುರಂಧ್ರಗಳು ಎಂದರೆ ನಿಖರವಾಗಿ ರಂಧ್ರಗಳಲ್ಲ. ಇದು ಬಾಹ್ಯಾಕಾಶಾದ ಒಂದು ಸ್ಥಳವಾಗಿದೆ. ಇಲ್ಲಿ ಗುರುತ್ವಾಕರ್ಷಣೆ ಹೆಚ್ಚಾಗಿದ್ದು, ಎಲ್ಲವನ್ನು ತನ್ನ ಕೇಂದ್ರಕ್ಕೆ ಸೆಳೆದುಕೊಳ್ಳುತ್ತದೆ. ಇಲ್ಲಿ ಬೆಳಕು ಹೊರಬರುವುದೇ ಇಲ್ಲ. ಸಂಪೂರ್ಣ ಕತ್ತಲು ಆವರಿಸಿರುತ್ತದೆ. ನಕ್ಷತ್ರಗಳು ಸಾಯುವಾಗ ಇದು ಸಂಭವಿಸುತ್ತದೆ. ಇಲ್ಲಿ ಬೆಳಕು ಹೊರಬರದ ಕಾರಣ ಇದನ್ನು ಕಪ್ಪುಕುಳಿ ಅಥವಾ ಕಪ್ಪುರಂಧ್ರ ಎನ್ನುತ್ತಾರೆ. ಕಪ್ಪುಕುಳಿಗಳನ್ನು ಬರಿ ಕಣ್ಣಿನಿಂದ ನೋಡಲಾಗುವುದಿಲ್ಲ. ಬಾಹ್ಯಾಕಾಶದ ದೂರದರ್ಶಕಗಳಿಂದ ಮಾತ್ರ ನೋಡಲು ಸಾಧ್ಯ.

ಕಪ್ಪುರಂದ್ರಗಳ ಬಗ್ಗೆ ಮೊದಲ ಮಾಹಿತಿ ನೀಡಿದವರು ಐನ್‌ಸ್ಟೀನ್. ಕೇವಲ ಸಾಪೇಕ್ಷ ಸಾಂದ್ರತೆ ಸಿದ್ದಾಂತದ ಲೆಕ್ಕಾಚಾರದಿಂದಲೇ ಕಪ್ಪುರಂದ್ರಗಳ ಸುಳಿವನ್ನು ನೀಡಿದ್ದರು. ನಂತರ ಕಪ್ಪುರಂದ್ರಗಳ ಬಗ್ಗೆ ಅತೀ ಹೆಚ್ಚು ಸಂಶೋಧನೆಗಳಲ್ಲಿ ತೊಡಗಿದ ಖಭೌತವಿಜ್ಞಾನಿ ಎಂದರೆ ಸ್ಟೀಫನ್ ಹಾಕಿನ್ಸ್. ಐನ್‌ಸ್ಟೀನ್ ನೀಡಿದ ಮಾಹಿತಿಗೆ ಪುರಾವೆ ಸಮೇತ ಕಪ್ಪುರಂದ್ರಗಳ ಬಗ್ಗೆ ಹಾಕಿನ್ಸ್ ತನ್ನ ವಾದವನ್ನು ಜಗತ್ತಿಗೆ ತಿಳಿಸಿದ. 10-04-2019 ಕಪ್ಪುರಂದ್ರಗಳ ಕುರಿತ ಮಹತ್ವದ ದಿನ. ಅಂದು ನಾಸಾ ಮೆಸ್ಸಿಯರ್-87 ನಕ್ಷತ್ರಪುಂಜದ ಕೇಂದ್ರಭಾಗದಲ್ಲಿನ ಕಪ್ಪುರಂದ್ರದ ಚಿತ್ರವನ್ನು ಬಿಡುಗಡೆ ಮಾಡಿತ್ತು. ಮೆಸ್ಸಿಯರ್-87 ನಕ್ಷತ್ರಪುಂಜವು ಭೂಮಿಯಿಂದ 53.5 ದಶಲಕ್ಷ ಬೆಳಕಿನವರ್ಷದಷ್ಟು ದೂರದಲ್ಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರ ಜೊತೆಗೆ ಸ್ಯಾಗಿಟ್ಯಾರಿಯನ್-ಎ* ಎಂಬ ಇನ್ನೊಂದು ನಕ್ಷತ್ರಪುಂಜದಲ್ಲೂ ಕಪ್ಪುಕುಳಿ ಇರುವುದು ಕಂಡುಬAದಿದೆ. ಇದು ಭೂಮಿಯಿಂದ ಕೇವಲ 26000 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಲಾಗಿದೆ. (ಒಂದು ಸೆಕೆಂಡಿಗೆ ಮೂರು ಲಕ್ಷ ಕಿ.ಮೀ ವೇಗದಲ್ಲಿ ಚಲಿಸುವ ಬೆಳಕು ಸತತವಾಗಿ ಒಂದು ವರ್ಷ ಚಲಿಸಿದರೆ ತಲುಪುವ ದೂರವೇ ಒಂದು ಬೆಳಕಿನ ವರ್ಷ) ಏಪ್ರಿಲ್ 2017ರಿಂದ 200ಕ್ಕೂ ಹೆಚ್ಚು ವಿಜ್ಞಾನಿಗಳು ಈ ಸಂಶೋಧನಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅವರು ಹವಾಯಿ, ಚಿಲಿ, ಅರಿಜೋನಾ, ಸ್ಪೇನ್, ಮೇಕ್ಸಿಕೋ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಎಂಟು ರೇಡಿಯೋ ಟೆಲಿಸ್ಕೋಪ್‌ಗಳನ್ನು ಬಳಸಿ ಕಪ್ಪುರಂದ್ರ ಕುರಿತ ಸಂಶೋಧನೆ ಮಾಡಿದ್ದರು.  ಈ ಚಿತ್ರದಿಂದ ಜಗತ್ತಿನ ಖಗೋಳ ವಲಯದಲ್ಲೊಂದು ಬಿಸಿ ಬಿಸಿ ಚರ್ಚೆ ಪುನಃ ಪ್ರಾರಂಭವಾಗಿದೆ.

ಗಾತ್ರ ಎಷ್ಟು? : ಕಪ್ಪುಕುಳಿಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಕೆಲವು ಪರಮಾಣುವಿನಷ್ಟು ಚಿಕ್ಕದಾಗಿದ್ದರೆ ಕೆಲವು ಸೂರ್ಯನಿಗಿಂತ 20 ಪಟ್ಟು ದೊಡ್ಡದಾಗಿವೆ. ಕಪ್ಪುಕುಳಿಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಪರ್ವತದಷ್ಟು ದ್ಯವ್ಯರಾಶಿ ಹೊಂದಿರುತ್ತವೆ. ಮೆಸ್ಸಿಯರ್-87 ಕಪ್ಪುರಂದ್ರವು ಭೂಮಿಗಿಂತ 30 ಲಕ್ಷ ಪಟ್ಟು ಅಗಲವಿದೆ. ಇದರ ತೂಕ ಸೂರ್ಯನಿಗಿಂತ 650ಕೋಟಿ ಪಟ್ಟು ಹೆಚ್ಚು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಮ್ಮ ಆಕಾಶಗಂಗೆ ಗೆಲಾಕ್ಸಿಯಲ್ಲಿ ಅನೇಕ ಕಪ್ಪುಕುಳಿಗಳು ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಸೌರವ್ಯೂಹಕ್ಕೆ ಸಮೀಪಿಸಿದರೆ ಏನಾಗುತ್ತೇ? : ಇಂತಹ ಅಗಾಧ ಶಕ್ತಿಯುತವಾದ ಕಪ್ಪುಕುಳಿಗಳು ನಮ್ಮ ಸೌರವ್ಯೂಹವನ್ನು ಸಮೀಪಿಸಿದರೆ ಏನಾಗುತ್ತದೆ? ಎಂಬುದೇ ಎಲ್ಲರನ್ನು ಕಾಡುವ ಪ್ರಶ್ನೆ. ಏನಾಗುತ್ತದೆ ಎನ್ನುವುದು ಕಪ್ಪುಕುಳಿಯ ಗಾತ್ರ ಹಾಗೂ ಅದು ಸೌರವ್ಯೂಹದಿಂದ ಎಷ್ಟು ದೂರದಲ್ಲಿ ಹಾದುಹೋಗುತ್ತದೆ ಎಂಬುದನ್ನು ಅವಲಂಬಿಸಿದೆ. ದೊಡ್ಡಗಾತ್ರದ ಕಪ್ಪುಕುಳಿ ನಮ್ಮ ಸೌರವ್ಯೂಹಕ್ಕೆ ಪ್ರವೇಶಿಸಿದರೆ ನಾವು ಬದುಕಿ ಉಳಿಯುವ ಅವಕಾಶಗಳು ತೀರಾ ಕಡಿಮೆ.

ಕಪ್ಪುಕುಳಿಗಳು ಕೆಲವೇ ಬೆಳಕಿನ ವರ್ಷಗಳ ದೂರದಲ್ಲಿ ಹೋದರೂ ಸಹ ಸೌರವ್ಯೂಹಕ್ಕೆ ಭೌತಿಕ ತೊಂದರೆಗಳು ಉಂಟಾಗುತ್ತವೆ. ಸಂಭಾವ್ಯವಾಗಿ ನಕ್ಷತ್ರಗಳು, ಗ್ರಹಗಳು, ಕ್ಷÄದ್ರಗ್ರಹಗಳು ಮತ್ತು ಧೂಮಕೇತುಗಳು ಕಪ್ಪುಕುಳಿಗಳನ್ನು ಸುತ್ತುತ್ತಿರುತ್ತವೆ. ಇವೆಲ್ಲವನ್ನೂ ಒಂದೇ ಉಸಿರಿಗೆ ಸ್ವಾಹ ಮಾಡುವಷ್ಟು ಗುರುತ್ವಾಕರ್ಷಣ ಶಕ್ತಿ ಈ ಕಪ್ಪುಕುಳಿಗಳಿಗೆ ಇದೆ.

ಕಪ್ಪುಕುಳಿಗಳು ಸೌರವ್ಯೂಹದ ಹೊರಗಿನ ಊರ್ಟ್ ಮೋಡದಲ್ಲಿ ಗುರುತ್ವವಾದ ಅವಸ್ಥೆಯನ್ನು ಉಂಟುಮಾಡುತ್ತವೆ. ಕಪ್ಪುಕುಳಿಯು ದೂಮಕೇತು ಮತ್ತು ಕ್ಷÄದ್ರಗ್ರಹಗಳನ್ನು ಸೌರವ್ಯೂಹದಲ್ಲಿ ತರಗೆಲೆಯಂತೆ ಹಾರಾಡಿಸಬಹುದು. ಇದರಿಂದ ಅವು ಪರಸ್ಪರ ಗ್ರಹಗಳಿಗೆ ಢಿಕ್ಕಿ ಹೊಡೆಯುತ್ತವೆ. ಭೂಮಿಗೂ ಇವು ಅಪ್ಪಳಿಸಬಹುದು. ಕಪ್ಪುಕುಳಿಗಳು ಸೌರವ್ಯೂಹದ ಸಮೀಪ ಹಾದುಹೋದರೆ ಗ್ರಹಗಳ ಕಕ್ಷೆಗಳು ಬದಲಾಗುತ್ತವೆ.
ಸಂಭಾವ್ಯವಾಗಿ ಕಪ್ಪುಕುಳಿ ನಮ್ಮ ಸೌರವ್ಯೂಹ ಪ್ರವೇಶಿಸಿದರೆ, ಗುರುಗ್ರಹಕ್ಕೆ ಅತೀ ಹೆಚ್ಚು ಅನಾಹುತ ಆಗುತ್ತದೆ. ಅದು ಗುರುಗ್ರಹದಲ್ಲಿರುವ ಎಲ್ಲಾ ಅನಿಲವನ್ನು ತನ್ನೆಡೆಗೆ ಎಳೆದುಕೊಳ್ಳುತ್ತದೆ. ಆಗ ಗುರುಗ್ರಹ ಕೇಲವ ಸುತ್ತುವ ಚಕ್ರದಂತೆ ಪರಿವರ್ತನೆ ಹೊಂದುತ್ತದೆ. ದೈತ್ಯಗ್ರಹ ಎನಿಸಿದ ಗುರುಗ್ರಹದ ಕಥೆ ಈ ರೀತಿಯಾದರೆ ಇನ್ನು ಭೂಮಿಯ ಪಾಡೇನು?.

ಉತ್ತರ ಭಯಾನಕವಾಗಿರುತ್ತದೆ. ಕಪ್ಪುಕುಳಿಗಳು ಪ್ಲೂಟೋದ ಬಳಿ ಬರುತ್ತಿದ್ದಂತೆ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಅದು ನಮ್ಮ ವಾಸಯೋಗ್ಯ ವಲಯದಿಂದ ನಮ್ಮನ್ನು ಎಳೆದು ಹಾಕುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ನಾವು ಸಿದ್ದರಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ನಮ್ಮ ಬಳಿ ಇರುವುದಿಲ್ಲ. ಕಪ್ಪುಕುಳಿ ಭೂಮಿಯನ್ನು ಸಮೀಪಿಸುತ್ತಿದ್ದಂತೆ ಅದು ಭೂಗ್ರಹದ ಹೊರಪದರದಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಇದರಿಂದ ತೀವ್ರವಾದ ಭೂಕಂಪ ಮತ್ತು ಜ್ವಾಲಾಮುಖಿಗಳು ಉಂಟಾಗುತ್ತವೆ. ಸಮುದ್ರದ ಅಲೆಗಳೂ ಸಹ ನಾಶವಾಗುತ್ತವೆ. ಕಪ್ಪುಕುಳಿ ಭೂ ಕಕ್ಷೆಯನ್ನು ಹಾದು ಹೋಗುವ ವೇಳೆಗೆ ಭೂಗ್ರಹದಲ್ಲಿ ಏನೂ ಉಳಿದಿರುವುದಿಲ್ಲ. ಶೀಲೀಂದ್ರಗಳೂ ಸಹ ಶಿಲಾಪಾಕದಿಂದ ಆವರಿಸಿಕೊಳ್ಳುತ್ತವೆ.

ಕಪ್ಪುಕುಳಿಯ ಅನಾಹುತದಿಂದ ಭೂಮಿಯು ಸಂಪೂರ್ಣವಾಗಿ ಸೌರವ್ಯೂಹದಿಂದ ಹೊರಹಾಕಲ್ಪಡಬಹುದು. ಇನ್ನೊಂದು ಆಯಾಮದಲ್ಲಿ ಕಪ್ಪುಕುಳಿ ಸೂರ್ಯನಿಗೆ ಹತ್ತಿರವಾದಾಗ, ಸೂರ್ಯನಲ್ಲಿರುವ ಎಲ್ಲಾ ಅನಿಲವನ್ನು ಸ್ವಾಹ ಮಾಡಬಹುದು. ಆಗ ಸೌರವ್ಯೂಹದ ಗುರುತ್ವ ಕಪ್ಪುಕುಳಿಯ ಒಡಲೊಳು ಸೇರಿ ಭೂಮಿಯೂ ಅದರೊಳಗೆ ಸೇರಬಹುದು. ಅಂದರೆ ಭೂಮಿ ಮತ್ತು ಇತರ ಎಲ್ಲಾ ಗ್ರಹಗಳು ಕಪ್ಪುಕುಳಿಯ ಒಡಲೊಳು ಸೇರಿಕೊಳ್ಳುತ್ತವೆ. ಆಗ ನಮ್ಮ ಸೌರವ್ಯೂಹ ಸಂಪೂರ್ಣವಾಗಿ ನಾಶವಾಗುತ್ತದೆ.
ಸಂಭವ ತೀರಾ ಕಡಿಮೆ : ಅದೃಷ್ಟವಶಾತ್ ಈ ಮೇಲಿನ ಎಲ್ಲಾ ಘಟನೆಗಳು ನಡೆಯುವ ಸಂಭವ ತೀರಾ ಕಡಿಮೆ. ಏಕೆಂದರೆ ನಮ್ಮ ಬ್ರಹ್ಮಾಂಡದಲ್ಲಿ ಕಪ್ಪುಕುಳಿಗಳ ಚಟುವಟಿಕೆ ಅಷ್ಟೊಂದು ತೀವ್ರವಾಗಿಲ್ಲ ಎಂಬುದೇ ಸದ್ಯಕ್ಕೆ ನಿಶ್ಚಿಂತೆ. ಕಪ್ಪುಕುಳಿಗಳ ಬಗ್ಗೆ ನಾಸಾ ಸಾಕಷ್ಟು ಅಧ್ಯಯನಗಳನ್ನು ಕೈಗೊಂಡಿದೆ. ಇದಕ್ಕಾಗಿ ವಿಜ್ಞಾನಿಗಳ ತಂಡ ಹಗಲಿರುಳೂ ಟೆಲಿಸ್ಕೋಪ್‌ಗಳ ಸಹಾಯದಿಂದ ಕ್ಷಣಕ್ಷಣದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.




ಇ-ಲೈಬ್ರರಿ / E-Library

ದಿನಾಂಕ 10-04-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಇ-ಲೈಬ್ರರಿ ಎಂಬ ಮಾಹಿತಿ ಮನೆ


ಜ್ಞಾನ ದಾಹ ತಣಿಸುವ ಗ್ರಂಥಾಲಯಗಳು ನಮ್ಮೆಲ್ಲರ ಮೆದುಳಿನ ಆಸ್ತಿ. ಪ್ರತಿಯೊಬ್ಬರಿಗೂ ಸುಲಭವಾಗಿ ಸಮೀಪದ ಪ್ರದೇಶದಲ್ಲಿ ದೊರೆಯುವ ಇವು ‘ಮಾಹಿತಿ ಮನೆ’ ಎಂದೇ ಹೆಸರುವಾಸಿಯಾಗಿವೆ. ಗ್ರಂಥಾಲಯಗಳ ಕಲ್ಪನೆ ತುಂಬಾ ಪ್ರಾಚೀನವಾದುದು. ಕ್ರಿ,ಪೂ, 3200ರಲ್ಲಿಯೇ ಗ್ರಂಥಾಲಯದ ಕಲ್ಪನೆ ಮೂಡಿತ್ತು ಎಂದರೆ ಅಚ್ಚರಿಯೇನಲ್ಲ. ಕಾಲದಿಂದ ಕಾಲಕ್ಕೆ ಗ್ರಂಥಾಲಯಗಳ ಸ್ವರೂಪ ಮತ್ತು ಬಳಕೆಯ ವಿಧಾನಗಳು ಬದಲಾಗುತ್ತಿರುವುದನ್ನು ಗಮನಿಸಬಹುದು. 13ನೇ ಶತಮಾನದಲ್ಲಿ ಅಂದರೆ 1250ರಲ್ಲಿ ಪ್ಯಾರಿಸ್‌ನ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥಿತ ರೂಪದ ಗ್ರಂಥಾಲಯ ಪ್ರಾರಂಭವಾಯಿತು. 13ನೇ ಶತಮಾನದ ಒಂದು ರೀತಿಯ ಜ್ಞಾನ ವಿಕಾಸದ ಕಾಲಘಟ್ಟ. ಅಂದಿನಿAದ ಗ್ರಂಥಾಲಯಗಳು ವಿವಿಧ ರೀತಿಯಲ್ಲಿ ಬೆಳವಣಿಗೆ ಕಾಣುತ್ತಾ ಸಾಗಿದವು. ಆಧುನಿಕ ಗ್ರಂಥಾಲಯಗಳು 20ನೇ ಶತಮಾನದ ಮಧ್ಯಭಾಗದಲ್ಲಿ ವಿಶಿಷ್ಠ ರೂಪದೊಂದಿಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿದವು. ಜಗತ್ತಿನ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಗ್ರಂಥಾಲಯಗಳು ಸ್ಥಾಪಿತವಾದವು. 21ನೇ ಶತಮಾನದಲ್ಲಿ ವ್ಯಾಪಕತೆ ಪಡೆದುಕೊಂಡ ಗ್ರಂಥಾಲಯಗಳು ಶಾಲಾ ಕಾಲೇಜುಗಳಲ್ಲಿಯೂ ಪ್ರಾರಂಭಗೊAಡವು. ಇತ್ತೀಚಿಗಿನ ಗ್ರಂಥಾಲಯದ ಸ್ವರೂಪ ತೀರಾ ವೇಗವಾಗಿ ಬದಲಾಗುತ್ತಿದೆ. 
21ನೇ ಶತಮಾನದಲ್ಲಿ ಎಲ್ಲಾ ಕ್ಷೇತ್ರಗಳು ನಾವಿನ್ಯತೆ ಪಡೆದವು. ಗ್ರಂಥಾಲಯಗಳು ಇದಕ್ಕೆ ಹೊರತಲ್ಲ. ಪಾರಂಪರಿಕ ಗ್ರಂಥಾಲಯಗಳು ಡಿಜಿಟಲ್ ಸ್ಪರ್ಶ ಪಡೆದು ಇಡೀ ಜಗತ್ತಿನಾದ್ಯಂತ ಪ್ರಚಲಿತದಲ್ಲಿವೆ. 
ಇ-ಲೈಬ್ರರಿ ಎಂದರೆ,,,,, : ಡಿಜಿಟಲ್ ಗ್ರಂಥಾಲಯ ಅಥವಾ ಇ-ಲೈಬ್ರರಿಗಳು ಸಹ ಗ್ರಂಥಾಲಯಗಳೇ ಆಗಿದ್ದು ಇಲ್ಲಿನ ಎಲ್ಲಾ ಮಾಹಿತಿ ಡಿಜಿಟಲ್ ತಂತ್ರಜ್ಞಾನದಲ್ಲಿರುತ್ತದೆ. ಕಂಪ್ಯೂಟರ್, ಸ್ಮಾರ್ಟ್ಫೋನ್, ಟ್ಯಾಬ್ ಮುಂತಾದ ಎಲೆಕ್ಟಾçನಿಕ್ ಸಾಧನಗಳ ಸಹಾಯದಿಂದ ಮಾಹಿತಿ, ಪುಸ್ತಕ, ಲೇಖನಗಳು, ಇತ್ಯಾದಿಗಳನ್ನು ಓದುವ ಅಥವಾ ನೋಡುವ ವ್ಯವಸ್ಥೆಯೇ ಡಿಜಿಟಲ್ ಗ್ರಂಥಾಲಯ. ಲೇಖನ, ಪುಸ್ತಕ, ಪತ್ರಿಕೆ, ನಿಯತಕಾಲಿಕೆ, ಚಿತ್ರಗಳು, ಧ್ವನಿಗಳು ಹಾಗೂ ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಹೀಗೆ ಸಂಗ್ರಹವಾದ ಮಾಹಿತಿಯನ್ನು ಇಂಟರ್‌ನೆಟ್ ಮೂಲಕ ಜಗತ್ತಿನಾದ್ಯಂತ ಯಾರು ಬೇಕಾದರೂ, ಎಲ್ಲಿಯಾದರೂ ಬಳಸಬಹುದಾದ ಸಾಮಗ್ರಿಗಳ ಸಂಗ್ರಹವೇ ಡಿಜಿಟಲ್ ಗ್ರಂಥಾಲಯ. ಈಗಾಗಲೇ ಸಂಗ್ರಹವಾದ ಸಾಂಪ್ರಾದಾಯಿಕ ಪುಸ್ತಕಗಳು, ಮಾಹಿತಿಗಳು, ಬರಹಗಳು, ಚಿತ್ರಗಳು ಇತ್ಯಾದಿಗಳನ್ನು ಎಲೆಕ್ಟಾçನಿಕ್ ರೂಪದಲ್ಲಿ ಸಂಗ್ರಹಿಸಿಡುವ ಮತ್ತು ಎಲ್ಲರಿಗೂ ಅದು ದೊರೆಯುವಂತೆ ಮಾಡುವ ಬಹು ವಿಸ್ಕೃತವಾದ ವ್ಯವಸ್ಥೆಯೇ ಡಿಜಿಟಲ್ ಲೈಬ್ರರಿ. ಬಹುತೇಕವಾಗಿ ಇಲ್ಲಿನ ಮಾಹಿತಿಗಳನ್ನು hಣmಟ ಮತ್ತು  ಠಿಜಜಿ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡು ಅದನ್ನು ಬಳಸುತ್ತಾರೆ. 
ಡಿಜಿಟಲ್ ಲೈಬ್ರರಿಯ ಉದ್ದೇಶಗಳು:
ಮಾಹಿತಿಗಳನ್ನು, ಪುಸ್ತಕಗಳನ್ನು ಸಂಗ್ರಹಿಸುವ, ಸಂಘಟಿಸುವ ಹಾಗೂ ವ್ಯವಸ್ಥಿತವಾಗಿ ಅವುಗಳನ್ನು ಅಭಿವೃದ್ದಿಪಡಿಸುವುದು.
ಅಳಿವಿನ ಅಂಚಿನಲ್ಲಿರುವ ಮಾಹಿತಿ/ಪುಸ್ತಕಗಳನ್ನು ಎಲ್ಲರೂ ಬಳಸಲು ಅನುಕೂಲವಾಗುವಂತೆ ಹೊಸ ರೂಪದೊಂದಿಗೆ ಸಂಗ್ರಹಿಸುವುದು.
ಎಲ್ಲಾ ಬಳಕೆದಾರರೂ ಆರ್ಥಿಕ ಹೊರೆ ಇಲ್ಲದ ರೀತಿಯಲ್ಲಿ ಮಾಹಿತಿಯನ್ನು ಬಳಸಲು ಅನುಕೂಲತೆ ನೀಡುವುದು.
ಸಂಶೋಧನಾ ಕಾರ್ಯದಲ್ಲಿ ನಿರತರಾದವರಿಗೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ಸಂಪನ್ಮೂಲ ಕೈಗೆಟುಕುವಂತೆ ಮಾಡುವುದು. 
ಶೈಕ್ಷಣಿಕ ಸಂಸ್ಥೆಗಳ ನಡುವೆ ಸಂವಹನ ಮತ್ತು ಸಹಯೋಗವನ್ನು ಬಲಪಡಿಸುವುದು.
ನವ ಪೀಳಿಗೆಯಲ್ಲಿ ನಾಯಕತ್ವವನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಜ್ಞಾನ ಪ್ರಸಾರ ಮಾಡುವುದು.
ಸಾಂಸ್ಥಿಕ ಸಹಯೋಗದೊಂದಿಗೆ ಹೊಸ ಸಂಶೋಧನೆಗಳಿಗೆ ನೆರವು ನೀಡುವುದು.

ಡಿಜಿಟಲ್ ಲೈಬ್ರರಿಯ ಲಕ್ಷಣಗಳು :
ಸಂಗ್ರಹಣೆ ಮತ್ತು ಬಳಕೆ ಸುಲಭ.
ಅಧಿಕ ಸಂಗ್ರಹಣಾ ಸಾಮರ್ಥ್ಯ.
ಕಡಿಮೆ ನಿರ್ವಹಣಾ ವೆಚ್ಚ.
ಭೌತಿಕ ಪರಿಮಿತ ಇಲ್ಲದ ವ್ಯಾಪಕ ಬಳಕೆಯ ಅವಕಾಶಗಳು.
ಅನುಕೂಲಕರ ಸಮಯದಲ್ಲಿ ಬಳಕೆಯ ಅವಕಾಶ.
ಮಾಹಿತಿಯ ಪುನರ್ ಬಳಕೆಗೆ ಹೆಚ್ಚು ಅವಕಾಶ.
ಸುಲಭ ಸಂರಕ್ಷಣೆ.
ಕಾಗದಗಳ ನಿರ್ವಹಣಾ ವೆಚ್ಚವಿಲ್ಲ.
ಪರಿಸರ ಸ್ನೇಹಿ ಬಳಕೆಯ ವ್ಯವಸ್ಥೆ.

ಲಾಭಗಳು :
ಕಲಿಕಾರ್ಥಿಗಳ ಸಂಪನ್ಮೂಲ ಮಿತಿಯನ್ನು ನೀಗಿಸಿ, ಜ್ಞಾನದ ಹರವನ್ನು ವಿಸ್ತರಿಸುತ್ತದೆ.
ಮಾಹಿತಿಯನ್ನು ಮುಂದಿನ ಪೀಳಿಗೆಗೆ ಸುಲಭವಾಗಿ ರವಾನಿಸುತ್ತದೆ ಮತ್ತು ನಾವೀನ್ಯತೆಯನ್ನು ಕಾಪಾಡುತ್ತದೆ. 
ಅಪರೂಪದ ಪುಸ್ತಕ/ಪತ್ರಿಕೆ/ಚಿತ್ರ/ಮಾಹಿತಿಗಳ ಸುಲಭ ಸಂರಕ್ಷಣೆ.
ಪುಸ್ತಕ/ಮಾಹಿತಿಯ ಅಭಾವವನ್ನು ನೀಗಿಸುತ್ತದೆ.
ಶೈಕ್ಷಣಿಕ ಹಿತದೃಷ್ಟಿಯಿಂದ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.
ಸಂಶೋಧನೆ ಹಾಗೂ ಸಂವಹನಕ್ಕೆ ಸಾಕಷ್ಟು ಅವಕಾಶಗಳು.
ಬಳಕೆದಾರ ಸ್ನೇಹಿ ಮಾಹಿತಿ ಲಭ್ಯತೆ.
ವಿಸ್ಕೃತ ಮತ್ತು ವ್ಯಾಪಕ ಮಾಹಿತಿ ಲಭ್ಯತೆ.
ವಿರಾಮ ವೇಳೆಯ ಸದುಪಯೋಗ.
ಕಡಿಮೆ ವೆಚ್ಚದಲ್ಲಿ ಹೆಚ್ಚು ಮಾಹಿತಿ ಲಭ್ಯತೆ.

ಆರ್.ಬಿ.ಗುರುಬಸವರಾಜ


ಜೀವವೈವಿಧ್ಯ/Bio diversity

ಮಾರ್ಚ 2019ರ ಜೀವನ ಶಿಕ್ಷಣ ಮಾಸಿಕದಲ್ಲಿ  ಪ್ರಕಟವಾದ ನನ್ನ ಬರಹ.

ಜೀವವೈವಿಧ್ಯ ಉಳಿಸೋಣ ಸ್ವಾಯತ್ತತೆ ಮೆರೆಯೋಣ

ಭಾರತವು ಜೈವಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ದೇಶವಾಗಿದೆ. ವಿಶ್ವದ 10 ಮಹಾ ಜೈವಿಕ ಸಂಪತ್ತಿನ ದೇಶಗಳಲ್ಲಿ ಒಂದಾಗಿದೆ. ಕೃಷಿ, ಮೀನುಗಾರಿಕೆಯಂತಹ ಚಟುವಟಿಕೆಗಳ ಪಾರಂಪರಿಕ ಜ್ಞಾನಸಂಪತ್ತನ್ನು ಹೊಂದಿರುವ ಅತಿಹೆಚ್ಚು ಜನಸಮುದಾಯಗಳು ಮತ್ತು ಚಲನಶೀಲ ಗುಂಪುಗಳು ಭಾರತ ದೇಶದಲ್ಲಿವೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಜೈವಿಕ ವೈವಿಧ್ಯ ಮತ್ತು ಪಾರಂಪರಿಕ ಜ್ಞಾನವೂ ಸೇರಿದಂತೆ ಜೀವವೈವಿಧ್ಯಕ್ಕೆ ಸಂಬಂಧಿತ ಜ್ಞಾನದ ಮೌಲ್ಯವರ್ಧನೆಯಾಗಿದೆ. ಹಿಂದಿಗಿಂತಲೂ ಇಂದು ಜೈವಿಕವೈವಿಧ್ಯ, ಜೈವಿಕ ಸಂಪನ್ಮೂಲಗಳು, ಸಂಬಂಧಿಸಿದ ಪಾರಂಪರಿಕ ಜ್ಞಾನದ ಬೆಳವಣಿಗೆಯ ಮಹತ್ವವು ನಿಚ್ಛಳವಾಗಿ ಮನವರಿಕೆಯಾಗಿದೆ. ಜೈವಿಕವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆಯ ದಾಖಲಾತಿಯು ಜೀವವೈವಿಧ್ಯ ದಾಖಲಾತಿಯ ಮೊದಲ ಹೆಜ್ಜೆಯಾಗಿದೆ. 
ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿ : ಇದು ಸ್ಥಳೀಯ ಸಂಸ್ಥೆಗಳ ಅಂದರೆ ಗ್ರಾಮ ಪಂಚಾಯ್ತಿ/ಸ್ಥಳೀಯ ಸರಕಾರಗಳ ವ್ಯಾಪ್ತಿಯಲ್ಲಿನ ಜೀವ ಪರಂಪರೆಯನ್ನು ದಾಖಲಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಸಮಿತಿಯಾಗಿದೆ. ಆ ಪ್ರದೇಶದ ಗಿಡ, ಮರ, ಪ್ರಾಣಿ, ಪಕ್ಷಿ ಒಟ್ಟಾರೆ ಜೀವಸಂಕುಲದ ಮಾಹಿತಿಯನ್ನು ದಾಖಲಿಸುವ ಏಕೈಕ ಅಧಿಕೃತ ಸಮಿತಿಯಾಗಿದೆ. 
ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಮುಖ್ಯ ಕಾರ್ಯವೆಂದರೆ, ಜನರ ಜೀವವೈವಿಧ್ಯತೆ ದಾಖಲೆಗಳನ್ನು ತಯಾರಿಸುವದು. ಜನತಾ ಜೀವವೈವಿಧ್ಯ ದಾಖಲಾತಿಯು ಜೈವಿಕ ಸಂಪನ್ಮೂಲಗಳು ಮತ್ತು ಅವುಗಳಿಗೆ ಸಂಬAಧಿಸಿದ ಸಾಂಪ್ರದಾಯಿಕ ಜ್ಞಾನಗಳನ್ನು ತಿಳಿಯುವ ವಿಸ್ತಾರವಾದ ಸರಳ ದಾಖಲಾತಿಯಾಗಿದೆ. ಈ ಜೀವವೈವಿಧ್ಯ ದಾಖಲಾತಿಗಳ ತಯಾರಿಕೆಯು ಮಹತ್ತರ ಕಾರ್ಯವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಜ್ಞಾನ ಹೊಂದಿರುವ ವ್ಯಕ್ತಿಗಳು ಪಾಲ್ಗೊಂಡಿರುತ್ತಾರೆ.
ಯುವಕರಿಗೆ ಆಗುವ ಪ್ರಯೋಜನಗಳು:
ಜನತಾ ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವುದಿರಿಂದ ಅನೇಕ ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಲಾಗಿದೆ.
ಸ್ಥಳೀಯ ಸಂಪನ್ಮೂಲದ ಜ್ಞಾನ ದೊರೆಯುತ್ತದೆ.
ಸ್ಥಳೀಯ ಸಸ್ಯ, ಪ್ರಾಣಿ, ಕೀಟ ಹಾಗೂ ಪಕ್ಷಿ ಪ್ರಪಂಚದ ಅರಿವು ಮೂಡುತ್ತದೆ. 
ಪ್ರತೀ ಪ್ರಾಣಿ. ಪಕ್ಷಿ, ಸಸ್ಯಗಳ ವೈಜ್ಞಾನಿಕ ಹೆಸರು ಹಾಗೂ ಅವುಗಳ ಮೂಲದ ಬಗ್ಗೆ ಜ್ಞಾನ ದೊರೆಯುತ್ತದೆ.
ಪರಿಸರ ವ್ಯವಸ್ಥೆಯ ರಚನೆ, ಕಾರ್ಯ ಮತ್ತು ಪರಸ್ಪರ ಕ್ರಿಯೆಗಳ ಕುರಿತ ಸಂಶೋಧನೆ ಕೈಗೊಳ್ಳಲು ಸಹಕಾರಿ.
ಸ್ಥಳೀಯ ಸಂರಕ್ಷಣಾ ಯೋಜನೆಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಮುಂದಿನ ಜೀವನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಹಕಾರಿ.
ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಹೊಸ ಆಲೋಚನೆಗಳ ಸೃಷ್ಟಿ.
ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯನ್ನು ತಳುಕು ಹಾಕುವುದು.
ಸ್ಥಳೀಯ ಔಷಧ ಸಸ್ಯಗಳನ್ನು ಬಳಸಿ ಔಷದೋಪಚಾರ ನೀಡುವ ನಾಟಿ ವೈದ್ಯಜ್ಞಾನ ಬೆಳೆಸಿಕೊಳ್ಳಲು ಸಹಕಾರಿ.
ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳ ಸಂರಕ್ಷಣೆಯ ಅರಿವು ಮೂಡುತ್ತದೆ.
ಸ್ಥಳೀಯ ಸರಕಾರಕ್ಕೆ ಪ್ರಜ್ಞಾವಂತಿಕೆಯ ಕೊಡುಗೆ ನೀಡಿದ ಧನ್ಯತೆ ದೊರೆಯುತ್ತದೆ.
ಸ್ಥಳೀಯ ಸರಕಾರದ ಆಡಳಿತದಲ್ಲಿ ಭಾಗಿಯಾದ ಸಂತಸ ದೊರೆಯುತ್ತದೆ. 
ದಾಖಲಾತಿ ಸಮಯದಲ್ಲಿ ವಿವಧ ಜ್ಞಾನಶೀಲ ವ್ಯಕ್ತಿಗಳ ಪರಿಚಯವಾಗುತ್ತದೆ. ಇದು ಮುಂದಿನ ಜೀವನಕ್ಕೆ ಸಹಕಾರಿ.
ಮಹತ್ತರ ದಾಖಲಾತಿಯಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಜನರಿಂದ ಪ್ರಶಂಶೆ ದೊರೆಯುತ್ತದೆ.
ದಾಖಲಾತಿಯ ಅವಶ್ಯಕತೆ : ಸ್ಥಳಿಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಸ್ಥಳೀಯ ಜ್ಞಾನ/ಸಂಪನ್ಮೂಲಕ್ಕೆ ಸ್ವಾನುಭೂತ(ಪೇಟೆಂಟ್) ಪಡೆಯುವುದು. ಇತ್ತೀಚಿನ ವರ್ಷಗಳಲ್ಲಿ ಅಮೇರಿಕಾ, ಜಪಾನ, ಯುರೋಪ ದೇಶಗಳು ಭಾರತೀಯ ಮೂಲದ ಬಾಸುಮತಿ, ಬೇವು, ಅರಿಷಿಣ, ನೆಲ್ಲಿ, ಮತ್ತು ಸಾಸಿವೆಗಳನ್ನು ಪೇಟೆಂಟ್ ಮಾಡಿಕೊಂಡಿವೆ. ಇಂತಹ ಸ್ಥಳೀಯ ಸಂಪನ್ಮೂಲಗಳನ್ನು ಸಂರಕ್ಷಿಸುವ, ಅದು ದೇಶಾಂತರಗೊಳ್ಳದAತೆ ಹಾಗೂ ಅದರ ಲಾಭಾಂಶ ಬೇರೆಯವರ ಪಾಲಾಗದಂತೆ ತಡೆಯುವುದು ಇಂದಿನ ಅಗತ್ಯವಾಗಿದೆ.
ಜೀವವೈವಿಧ್ಯ ದಾಖಲಾತಿಯ ಉದ್ದೇಶಗಳು :
ಜೈವಿಕ ಸಂಪನ್ಮೂಲಗಳ ಕಳ್ಳಸಾಗಣೆ ತಡೆಯುವುದು.
ಸ್ಥಳೀಯ ಜೀವವೈವಿಧ್ಯತೆಯಿಂದ ಬಂದ ಲಾಭದಲ್ಲಿ ಸಮಪಾಲು ಪಡೆಯುವ ಹಕ್ಕು ಒದಗಿಸುವುದು.
ಜನಪರ ಯೋಜನೆಗಳನ್ನು ಜೀವವೈವಿಧ್ಯ ದಾಖಲಾತಿ ಅಡಿಯಲ್ಲಿ ತರುವುದು.
ಸ್ಥಳೀಯ ಸಂಪನ್ಮೂಲಗಳ ಜ್ಞಾನ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದೊರೆಯುವಂತೆ ಮಾಡುವುದು.
ಸ್ಥಳೀಯ ಜೀವವೈವಿಧ್ಯತೆ ಆಧರಿಸಿ ಸಂಶೋಧನೆಗಳನ್ನು ಕೈಗೊಳ್ಳುವುದು.
ದಾಖಲಿಸುವ ಅಂಶಗಳು : ಆ ಪ್ರದೇಶ ವ್ಯಾಪ್ತಿಯಲ್ಲಿನ ಸಸ್ಯ, ಪ್ರಾಣಿ ಹಾಗೂ ಪಕ್ಷಿಸಂಕುಲಗಳು, ಔಷಧಿಯ ಸಸ್ಯಗಳು, ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು, ತರಕಾರಿಗಳು, ಹಣ್ಣುಗಳು, ಹೂಗಳು, ಮಸಾಲೆ ಪದಾರ್ಥಗಳು, ಹುಲ್ಲು ಸಸ್ಯಗಳು, ಅಲಂಕಾರಿಕ ಸಸ್ಯಗಳು, ಬೇಲಿ ಸಸ್ಯಗಳು, ಮಣ್ಣಿನ ವಿಧಗಳು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು, ಕೀಟಗಳು, ಚಿಟ್ಟೆಗಳ ಪ್ರಾದೇಶಿಕ ಹೆಸರುಗಳು ಮತ್ತು ಅವುಗಳ ವೈಜ್ಞಾನಿಕ ಹೆಸರುಗಳು, ವಿವಿಧ ಜನ ಸಮುದಾಯಗಳು(ವೃತ್ತಿ ಪರರು), ವಿವಿಧ ಭೂದೃಶ್ಯಗಳು(ಗುಡ್ಡ, ಬೆಟ್ಟ, ಸಮತಟ್ಟು, ಅರಣ್ಯ, ಕೆರೆ, ಹಳ್ಳ, ಬಾವಿ, ಚೆಕ್ ಡ್ಯಾಂ, ನದಿ), ಅಲ್ಲಿನ ಜನಸಂಖ್ಯೆ, ಸಾಕ್ಷರತೆಯ ಮಟ್ಟ, ಮೂಲಭೂತ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ವ್ಯವಸ್ಥೆ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ಜನರ ವಾರ್ಷಿಕ ತಲಾ ಆದಾಯ  ಹೀಗೆ ಆ ಪ್ರದೇಶದ ಒಟ್ಟಾರೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ದಾಖಲಿಸುವಾಗ ಯುವಕರು ಗಮನಿಸಬೇಕಾದ ಅಂಶಗಳು :
ಜೈವಿಕವೈವಿಧ್ಯ ದಾಖಲಾತಿಗೆ ಸಮಯದಲ್ಲಿ ಯುವಕರು ಈ ಕೆಳಕಂಡ ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
ಗ್ರಾಮದ ವಿವಿಧ ರೀತಿಯ ಜನತೆಯ ಸಹಭಾಗಿತ್ವ ಪದ್ಧತಿಯಲ್ಲಿ ದಾಖಲಾತಿಯನ್ನು ಕೈಗೊಳ್ಳಬೇಕು.
ಗಂಡಸರ/ಹೆAಗಸರ ಜ್ಞಾನ ಮತ್ತು ದೃಷ್ಠಿ ಕೋನಗಳನ್ನು ದಾಖಲಿಸಬೇಕು.
ಜನತೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ದಾಖಲಾತಿಯನ್ನು ಮಾಡುವುದಕ್ಕಿಂತ ಮುಂಚೆ, ತಜ್ಞ ಸಲಹಾ ಗುಂಪಿನಿAದ ಪರಿಶೀಲನೆ, ವಿಂಗಡಣೆ ಮತ್ತು ವಿಚಾರಣೆಗೊಳಪಡಿಸಬೇಕು.
ಜನತಾ ಜೀವವೈವಿಧ್ಯದಾಖಲಾತಿಯು ಬಹು ಮುಖ್ಯ ಮೂಲವಾದ ಕಾನೂನಾತ್ಮಕ ಪ್ರಥಮ ಪ್ರಾಶಸ್ತö್ಯದ ಜ್ಞಾನವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ದಾಖಲಾತಿ ಮಾಡಬೇಕು.
ಯಾವುದೇ ಪ್ರಾಣಿ, ಪಕ್ಷಿ, ಸಸ್ಯ, ಕೀಟಗಳು ದಾಖಲಾತಿಯಿಮದ ಹೊರಗುಳಿಯದಂತೆ ಜಾಗ್ರತೆ ವಹಿಸುವುದು.
ಜೈವಿಕವೈವಿಧ್ಯ ದಾಖಲಾತಿಯು, ಶಾಲಾ-ಕಾಲೇಜುಗಳಲ್ಲಿ ಪರಿಸರ ಅಧ್ಯಯನ ಕುರಿತು ಬೋಧಿಸಲು ಸೂಕ್ತ ಮತ್ತು ಉಪಯುಕ್ತ ಆಧಾರವಾಗಿದೆ. ಆದ್ದರಿಂದ ಪಾರದರ್ಶಕ ದಾಖಲಾತಿ ಆಗುವಂತೆ ಎಚ್ಚರಿಕೆ ವಹಿಸುವುದು. 
ಜೈವಿಕವೈವಿಧ್ಯ ದಾಖಲಾತಿಗೆ ಪೂರಕ ಮತ್ತು ಹೊಸ ಮಾಹಿತಿಗಳು ಲಭ್ಯವಾದಾಗ ಮತ್ತು ನಿಯಮಿತ ಅವಧಿಯಲ್ಲಿ ದಾಖಲಾತಿಯನ್ನು ಖಾತರಿಗೊಳಿಸುವುದು.
ಯುವಕರ ಪಾತ್ರ :
ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಸ್ಥಳೀಯ ಸಂಪನ್ಮೂಲ ಸಂರಕ್ಷಣೆ ಯುವಕರ ಹೊಣೆಯಾಗಿದೆ. ಇಂದಿನ ಯುವಕರೇ ನಾಳಿನ ಭವ್ಯ ಭಾರತದ ಪ್ರಜೆಗಳಾಗಿರುವುದರಿಂದ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಸ್ಥಳೀಯ ಜೀವವೈವಿಧ್ಯತೆಯ ಬಗ್ಗೆ ಮಾಹಿತಿ ತಿಳಿಯುವದರಿಂದ ಜ್ಞಾನವಲಯ ವಿಸ್ತರಿಸುತ್ತದೆ. ಸಕಾಲದಲ್ಲಿ ಆ ಜ್ಞಾವನ್ನು ವಿಸ್ತರಿಸುವ ಹಾಗೂ ಅದನ್ನು ಬಳಸುವ ಅವಕಾಶಗಳು ಹೆಚ್ಚುತ್ತವೆ. ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು ಕೆಳಗಿನ ಜವಾಬ್ದಾರಿಗಳನ್ನು ವಹಿಸಿದರೆ ಅಮೂಲ್ಯ ಮಾಹಿತಿಯುಳ್ಳ ಒಂದು ಉತ್ತಮ ಮಾರ್ಗದರ್ಶಿ ಕೈಪಿಡಿ ಹೊರತರಬಹುದು.
ಪಂಚಾಯ್ತಿ ಮಟ್ಟದಲ್ಲಿ ನಡೆಯುವ ಜೀವವೈವಿಧ್ಯ ದಾಖಲೀಕರಣಕ್ಕೆ ಅಗತ್ಯ ಸಹಾಯ ನೀಡುವುದು.
ಸ್ವಯಂ ಸೇವಕರಾಗಿ ದಾಖಲೀಕರಣದಲ್ಲಿ ಭಾಗವಹಿಸುವುದು.
ವಸ್ತುನಿಷ್ಠ ದಾಖಲೀಕರಣಕ್ಕೆ ಒತ್ತು ನೀಡುವುದು.
ಸ್ಥಳೀಯ ವಿಶೇಷ ಸಂಪನ್ಮೂಲಗಳನ್ನು ಗುರುತಿಸುವುದು.
ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಬಗ್ಗೆ ಅಧ್ಯಯನ/ಸಂಶೋಧನೆ ಕೈಗೊಳ್ಳುವುದು.
ಸ್ಥಳೀಯ ಸಂಪನ್ಮೂಲಗಳ ಲಾಭಾಂಶದ ಸಮಾನ ಹಂಚಿಕೆಯ ಬಗ್ಗೆ ಗಮನ ಹರಿಸುವುದು.
ಸಂಪನ್ಮೂಲವು ಸ್ಥಳೀಯ ಮೂಲವಾಗಿದ್ದರೆ ಪೇಟೆಂಟ್ ಪಡೆಯುವುದು.
ಸಂಪನ್ಮೂಲದ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಲಾಭ ದೊರೆಯುವಂತೆ ಮಾಡುವುದು.
ಸಂಪನ್ಮೂಲದ ಮಾಹಿತಿಯನ್ನು ಪರಸ್ಪರ ವರ್ಗಾವಣೆ/ಪ್ರಚಾರ ಮಾಡುವುದು.

ಆರ್.ಬಿ. ಗುರುಬಸವರಾಜ 

ಸ್ಮರಣೆ ಎಂಬ ಸಂಪನ್ಮೂಲ/Memory as resource

ದಿನಾಂಕ 13-09-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಸ್ಮರಣೆ ಎಂಬ ಸಂಪನ್ಮೂಲ


ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ಮರಣೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ನಾವು ಕಲಿತ ಕೌಶಲ್ಯಗಳನ್ನು ನೆನಪಿಟ್ಟುಕೊಳ್ಳಲು, ಸಂಗ್ರಹವಾದ ಮಾಹಿತಿಯನ್ನು ಅಗತ್ಯವಿದ್ದಾಗ ಹಿಂಪಡೆಯಲು ಸ್ಮರಣೆ ಅಗತ್ಯ. ಮೆದುಳಿನ ಸಂಗ್ರಹದಲ್ಲಿರುವ ಮಾಹಿತಿಯನ್ನು ಸಕಾಲದಲ್ಲಿ ಸರಿಯಾಗಿ ಬಳಸದೇ ಹೋದರೆ ಸ್ಮರಣೆ ಸರಿಯಾಗಿಲ್ಲವೆಂದು ಅರ್ಥ. 
ಫೈಲಿಂಗ್ ಸಿಸ್ಟಮ್ : ಮೆಮೊರಿ ಅಥವಾ ಸ್ಮರಣೆ ಎಂಬುದು ಮೆದುಳಿನ ಒಂದು ಫೈಲಿಂಗ್ ಸಿಸ್ಟಮ್. ನಾವು ಕಲಿತ ಎಲ್ಲವನ್ನೂ ಅದು ಒಳಗೊಂಡಿದೆ. ಅದು ನಮ್ಮ ಮಾನಸಿಕ ವ್ಯವಸ್ಥೆಯ ತಾತ್ಕಾಲಿಕ ಆಯಾಮವನ್ನು ವಿವರಿಸುವ, ಉನ್ನತವಾದ ಅರಿವಿನ ಪ್ರಕ್ರಿಯೆಯಾಗಿದೆ. ಇದು ನಾವು ಗಳಿಸಿದ ಮಾಹಿತಿಯನ್ನು ಸಂಕೇತಿಕರಿಸಿ. ಸಂಗ್ರಹಿಸುತ್ತದೆ ಮತ್ತು ಅಗತ್ಯವಾದಾಗ ಸಂಕೇತಿಕರಣವನ್ನು ಜ್ಞಾನದ ಅನುಭವವನ್ನಾಗಿ ತೋರಿಸುವ ಸಾಮರ್ಥ್ಯವಾಗಿದೆ. ಸ್ಮರಣೆಯು ಹಿಂದಿನ ಕಲಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪ್ರಸ್ತುತ ಕಲಿಕೆಯನ್ನು ಒರೆಗೆ ಹಚ್ಚುತ್ತದೆ. ಹಾಗಾಗಿ ಸ್ಮರಣೆಯು ಹಿಂದಿನ ಮತ್ತು ಪ್ರಸ್ತುತತೆಯ ನಡುವೆ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಹಿಂದಿನ ಕಲಿಕಾ ಅನುಭವಗಳು ಸಕ್ರಿಯವಾಗಿದ್ದರೆ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ.
ವಯಸ್ಸಿಗೆ ಅನುಗುಣವಾಗಿ ಸ್ಮರಣಾಶಕ್ತಿ ವಿಭಿನ್ನವಾಗಿರುತ್ತದೆ. ಹಿರಿಯ ವಯಸ್ಕರಲ್ಲಿ ಸ್ಮರಣೆಯು ನಿಧಾನವಾಗಿ ಅವನತಿ ಹೊಂದುತ್ತಿರುತ್ತದೆ. ಆದರೆ ಯುವಪೀಳಿಗೆ ಮತ್ತು ವಯಸ್ಕರಲ್ಲಿ ಅದು ವ್ಯವಸ್ಥಿತವಾಗಿ ಇರಬೇಕಾದುದು ಅಪೇಕ್ಷಣೀಯ. ಮೆದುಳಿನಲ್ಲಿನ ನರಕೋಶಗಳ ಬಗೆಗಿನ ಅಧ್ಯಯನವನ್ನು ನ್ಯೂರೋಪ್ಲಾö್ಯಸ್ಟಿಸಿಟಿ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಪ್ರತಿದಿನವೂ ಮೆದುಳಿನಲ್ಲಿರುವ ಸ್ಮರಣಾ ನರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಮೆಮೊರಿ ಸಾಮರ್ಥ್ಯ ಸ್ಥಿರವಾಗಿಲ್ಲವೆಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೆಮೊರಿ ಸ್ಥಿರವಾಗಿಲ್ಲದೇ ಹೋದರೆ ಕಲಿಕೆಯು ಶಾಶ್ವತವಾಗಿ ಉಳಿಯುವುದಿಲ್ಲ. ಕಲಿಕೆ ಶಾಶ್ವತವಾಗದಿದ್ದರೆ ಅಗತ್ಯವಿದ್ದಾಗ ಅದನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಸ್ಮರಣಾ ಸಾಮರ್ಥ್ಯ ಉತ್ತಮವಾಗಿರಬೇಕಾದುದು ಅನಿವಾರ್ಯ. ಮೆಮೊರಿ ಸಾಮರ್ಥ್ಯ ಉತ್ತಮ ಪಡಿಸಲು ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿಲ್ಲ. ಕೆಲವು ತಂತ್ರಗಳು ಮತ್ತು ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಸ್ಮರಣೆಗೆ ಬಲ ತುಂಬಬಹುದು.  
ಅಂತಹ ಕೆಲವು ತಂತ್ರಗಳು ಹಾಗೂ ಚಟುವಟಿಕೆಗಳನ್ನು ಕೆಳಗೆ ನೀಡಲಾಗಿದೆ. ಇವುಗಳನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅನುಸರಿಸಿದಾಗ ಮಾತ್ರ ಅವರ ಸ್ಮರಣೆ ಹೆಚ್ಚುತ್ತದೆ ಎಂಬುದು ಗಮನದಲ್ಲಿರಲಿ. 
ಸ್ಮರಣೆಯನ್ನು ಹೆಚ್ಚಿಸುವ ಕೆಲವು ತಂತ್ರಗಳು
ಹೊಸದನ್ನು ಕಲಿಯಿರಿ : ಮೆಮೊರಿ ಸಾಮರ್ಥ್ಯ ಕೇವಲ ಸ್ನಾಯುವಿನ ಶಕ್ತಿಯಾಗಿದೆ. ಅದನ್ನು ನೀವು ಹೆಚ್ಚು ಹೆಚ್ಚು ಬಳಸಿದಷ್ಟೂ ಅದು ಪ್ರಬಲವಾಗುತ್ತದೆ. ಮೆದುಳನ್ನು ಪ್ರಬಲವಾಗಿಸಲು ಅದಕ್ಕೆ ಸವಾಲುಗಳನ್ನು ಒಡ್ಡುವುದು ಅನಿವಾರ್ಯ. ಅದಕ್ಕಾಗಿ ಹೊಸ ಹೊಸ ಕಲಿಕೆಯನ್ನು ಮೂಡಿಸಿಕೊಳ್ಳಬೇಕು. ಹೊಸ ಕೌಶಲ್ಯವನ್ನು ಕಲಿಯುವುದರಿಂದ ಮೆಮೊರಿ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕಾಗಿ ಹೊಸ ಸಂಗೀತ, ಭಾಷೆ, ಆಟ, ಕಲಿಯಿರಿ. ಚಿತ್ರಕಲೆ, ಕುಂಬಾರಿಕೆ, ಕಸೂತಿಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸುಡೋಕು, ಚೆಸ್‌ನಂತಹ ಮಾನಸಿಕ ಆಟಗಳನ್ನು ಆಡಿ. ಹೊಸ ಶೈಲಿಯ ನೃತ್ಯ ಕಲಿಯಿರಿ. 
ಪುನರಾವರ್ತಿಸಿ ಮತ್ತು ಹಿಂಪಡೆಯಿರಿ : ನೀವು ಕಲಿತ ಹೊಸ ಮಾಹಿತಿಯ ತುಣುಕೊಂದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರಿ. ಅಂದರೆ ಕಲಿಕೆಯನ್ನು ಪುನರಾವರ್ತಿಸಿದರೆ ಅದು ಮಾನಸಿಕವಾಗಿ ದಾಖಲಿಸಲ್ಪಡುತ್ತದೆ. ಕೇಳಿದ್ದನ್ನು ವಾಕ್ಯದ ರೂಪದಲ್ಲಿ ದಾಖಲಿಸಿ ಮತ್ತು ಅದನ್ನು ಪದೇ ಪದೇ ಗಟ್ಟಿಯಾಗಿ ಓದಿ. ನಂತರ ಪುನರಾವರ್ತನೆಯನ್ನು ಸರಳಗೊಳಿಸಿ. ಹೀಗೆ ಗಳಿಸಿಕೊಂಡ ಕಲಿಕೆಯನ್ನು ಆಗಾಗ ನೆನಪಿಸಿಕೊಂಡು ಬಳಸಿ. ಕಲಿಕೆಯನ್ನು ಒರೆಗೆ ಹಚ್ಚಿ. ಪುನರಾವರ್ತಿತ ಅಭ್ಯಾಸದಿಂದ ಅರ್ಥಪೂರ್ಣ ಕಲಿಕಾ ಅನುಭವ ಸೃಷ್ಟಿಯಾಗುತ್ತದೆ. 
ಸಂಕ್ಷೇಪಣಗಳನ್ನು ಬಳಸಿ : ಕಲಿಕೆ ಸರಳವಾಗಲು ಸಂಕೇತಿಕರಣ ಮತ್ತು ಸಂಕ್ಷೇಪಿಕರಣಗಳು ಅಗತ್ಯ. ಧೀರ್ಘವಾದ ಕಲಿಕೆಯನ್ನು ಹೀಗೆ ಸಂಕೇತಿಕರಣ/ ಸಂಕ್ಷೇಪಿಸುವುದರಿಂದ ಕಲಿಕೆ ಶಾಶ್ವತವಾಗುತ್ತದೆ. ಹಾಡುಗಳು/ಪ್ರಾಸಗಳ ರೂಪದಲ್ಲಿ ಕಲಿಕಾಂಶವನ್ನು ಸಂಕೇತಿಕರಿಸುವುದರಿಂದ ಜ್ಞಾಪಕ ಶಕ್ತಿ ವೃದ್ದಿಸುತ್ತದೆ. 
ಚಂಕ್ : ಹೊಸದಾಗಿ ಕಲಿತ ಮಾಹಿತಿಯನ್ನು ಗುಂಪುಗಳನ್ನಾಗಿ ವಿಂಗಡಿಸುವ ಪ್ರಕ್ರಿಯೆಯೇ ಚಂಕ್. ಉದಾಹರಣೆಗೆ ನಿಮ್ಮ ಆಧಾರ್ ಸಂಖ್ಯೆಯು 12 ಅಂಕಿಗಳನ್ನು ಒಳಗೊಂಡಿದೆ. ಇವುಗಳನ್ನು ಜ್ಞಾಪಕದಲ್ಲಿಡುವುದು ಕಷ್ಟ. ಆಧಾರ್‌ನ ಮುದ್ರಿತ ಪ್ರತಿಯಲ್ಲಿ ನೀಡಿದಂತೆ ನಾಲ್ಕಂಕಿಯ ಗುಂಪುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ. ಹೀಗೆ ಪ್ರತೀ ಕಲಿಕೆಯನ್ನು ನಿರ್ದಿಷ್ಟ ಗುಂಪುಗಳನ್ನಾಗಿ ವಿಂಗಡಿಸಿದರೆ ನೆನೆಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. 
ಇಂದ್ರಿಯಗಳನ್ನೂ ಬಳಸಿ : ಮೆಮೊರಿ ಉಳಿಸುವ ಮತ್ತೊಂದು ತಂತ್ರವೆAದರೆ ಇಂದ್ರಿಯಗಳ ಬಳಕೆ. ಮಾಹಿತಿಗಳನ್ನು ಬಣ್ಣ, ಅಭಿರುಚಿ ಮತ್ತು ವಾಸನೆಗಳ ಆಧಾರದ ಮೇಲೆ ಇಂದ್ರಿಯಗಳ ಸಹಾಯದಿಂದ ಸಂಗ್ರಹಿಸಿದರೆ ಬೇಗನೆ ಮರೆಯುವುದಿಲ್ಲ. ಆದ್ದರಿಂದ ಮಾಹಿತಿ ಸಂಗ್ರಹಣೆಗೆ ಇಂದ್ರಿಯಗಳನ್ನು ಬಳಸುವುದು ಒಂದು ತಂತ್ರಗಾರಿಕೆಯಾಗಿದೆ.
ಮಾನಸಿಕ ಸೋಮಾರಿತನ ಬೇಡ : ಇತ್ತೀಚಿನ ಆಧುನಿಕ ತಂತ್ರಜ್ಞಾನವು ನಮ್ಮನ್ನು ಮಾನಸಿಕ ಸೋಮಾರಿಗಳನ್ನಾಗಿಸುತ್ತದೆ. ಸಣ್ಣ ಸಣ್ಣ ಲೆಕ್ಕಾಚಾರಕ್ಕೂ ಕ್ಯಾಲ್ಕುಲೇಟರ್ ಮೊರೆಹೋಗುವುದು, ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್‌ನಲ್ಲಿ ಹುಡುಕುವುದು ಸಾಮಾನ್ಯವಾಗಿದೆ. ಪ್ರಶ್ನೆಗೆ ಉತ್ತರ ಅಥವಾ ಲೆಕ್ಕಾಚಾರಗಳಿಗೆ ಪರಿಹಾರವನ್ನು ಹಿಂದಿನ ಕಲಿಕೆಯ ಆಧಾರದ ಮೇಲೆ ಕಂಡುಕೊಳ್ಳಲು ಪ್ರಯತ್ನಿಸಬೇಕು. ಮೆದುಳಿನಲ್ಲಿ ಸಂಗ್ರಹವಾದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಇದರಿಂದ ಮೆದುಳಿನ ನರವ್ಯೂಹದ ಹಾದಿಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಜಿಪಿಎಸ್‌ಗೆ ಕಡಿವಾಣ ಹಾಕಿ : ಗೊತ್ತಿಲ್ಲದ ಪ್ರದೇಶದ ಹುಡುಕಾಟಕ್ಕಾಗಿ ಜಿಪಿಎಸ್ ಉತ್ತಮ ತಂತ್ರಜ್ಞಾನ. ಆದರೆ ಇದರ ಬಳಕೆಗೆ ಆದಷ್ಟೂ ಕಡಿವಾಣ ಹಾಕುವುದು ಉತ್ತಮ. ಜಿಪಿಎಸ್ ಬಳಕೆಯು ಮೆದುಳಿನ ಹಿಪ್ಪೋಕಾಂಪಸ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಹಿಪ್ಪೋಕಾಂಪಸ್ ತಾತ್ಕಾಲಿಕ ಮೆಮೊರಿ ಸಂಗ್ರಾಹಕವಾಗಿದ್ದು, ಇದು ತಾತ್ಕಾಲಿಕ ಮೆಮೊರಿಯನ್ನು ಧೀರ್ಘಕಾಲಿಕ ಮೆಮೊರಿಯನ್ನಾಗಿ ಪರಿವರ್ತಿಸುವ ಕಾರ್ಯ ಮಾಡುತ್ತದೆ. ಜಿಪಿಎಸ್‌ನಂತಹ ತಂತ್ರಜ್ಞಾನದ ಬಳಕೆಯು ತಾತ್ಕಾಲಿಕ ಮೆಮೊರಿಯನ್ನು ಹಾಳುಮಾಡುತ್ತವೆ. ಗೊತ್ತಿರದ ಪ್ರದೇಶಕ್ಕೆ ಮೊದಲ ಬಾರಿಗೆ ಹೋಗುವಾಗ ಜಿಪಿಎಸ್ ಬಳಸಿದರೆ ತಪ್ಪೇನಿಲ್ಲ. ವಾಪಾಸು ಬರುವಾಗಲೂ ಅಥವಾ ಪದೇ ಪದೇ ಅದೇ ಪ್ರದೇಶಕ್ಕೆ ಹೋದಾಗಲೂ ಅದರ ಬಳಕೆಗೆ ಕಡಿವಾಣ ಹಾಕಲೇಬೇಕು.
ಕಾರ್ಯನಿರತ ವೇಳಾಪಟ್ಟಿ ಇರಲಿ : ಸದಾ ಕಾರ್ಯನಿರತವಾಗಿರಲು ವೇಳಾಪಟ್ಟಿ ಅಗತ್ಯ. ಸಾಮಾನ್ಯವಾಗಿ ಓದಲು ಮಾತ್ರ ವೇಳಾಪಟ್ಟಿ ತಯಾರಿಸುವುದು ವಾಡಿಕೆ. ಇದರ ಬದಲಾಗಿ ಇಡೀ ದಿನದ ವೇಳಾಪಟ್ಟಿ ತಯಾರಿಸಿ ಅದರಂತೆ ಕಾರ್ಯನಿರವಾಗಿರಲು ಪ್ರಯತ್ನಿಸಿ. ಬಿಡುವಿಲ್ಲದ ವೇಳಾಪಟ್ಟಿ ಉತ್ತಮ ಜ್ಞಾನವನ್ನು ಕಾಪಾಡುತ್ತದೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ. 
ವ್ಯವಸ್ಥಿತವಾಗಿರಲಿ : ಕಲಿಕೆಗೆ ಸಂಬಂಧಿಸಿದ ನಿಮ್ಮ ಮಾಹಿತಿಗಳು ವ್ಯವಸ್ಥಿತವಾಗಿರಲಿ. ವಿವಿಧ ಮೂಲಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳುವುದು ನೆನಪಿನ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಕಲಿಕೆಯ ಪರಿಶೀಲನಾ ಪಟ್ಟಿಗಳನ್ನು ತಯಾರಿಸಿಕೊಳ್ಳಿ.
ನಿಯಮಿತ ವೇಳೆಯಲ್ಲಿ ನಿದ್ದೆ ಮಾಡಿ : ಪ್ರತಿರಾತ್ರಿಯೂ ನಿಯಮಿತ ವೇಳೆಗೆ ಮಲಗಿ, ಬೆಳಿಗ್ಗೆ ನಿಯಮಿತ ವೇಳೆಗೆ ಏಳಲು ಪ್ರಯತ್ನಿಸಿ. ವಾರಾಂತ್ಯಕ್ಕೆ ಬೇಕಿದ್ದರೆ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬಹುದು. ಮಲಗುವ ಮುನ್ನ ಸೆಲ್‌ಫೋನ್, ಟಿ.ವಿ, ಕಂಪ್ಯೂಟರ್ ಅಥವಾ ಇನ್ಯಾವುದೇ ಪ್ರಕಾಶಮಾನವಾದ ಸ್ಕಿನ್ ನೋಡುವುದನ್ನು ನಿಲ್ಲಿಸಿ. ಸ್ಕಿನ್‌ನಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೊನನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ಮರಣ ಶಕ್ತಿ ಹೆಚ್ಚಳಕ್ಕೆ ನಿಗದಿತ ನಿದ್ರೆ ಮತ್ತು ವಿಶ್ರಾಂತಿ ಅಗತ್ಯ. 
ಆರೋಗ್ಯ ಮತ್ತು ಆಹಾರ : ಉತ್ತಮ ಆರೋಗ್ಯಕ್ಕಾಗಿ ಸಾಧ್ಯವಾದಷ್ಟೂ ಸಸ್ಯ ಆಧಾರಿತ ಆಹಾರಗಳನ್ನು ಬಳಸಿ. ವಿಶೇಷವಾಗಿ ಸೊಪ್ಪು , ತರಕಾರಿಗಳು, ಹಣ್ಣುಗಳು, ಧಾನ್ಯಗಳು, ತೆಂಗಿನೆಣ್ಣೆ, ಮೀನಿನ ಎಣ್ಣೆ(ಓಮೇಗಾ-3) ಬಳಸಿ. ಸಕ್ಕರೆ, ಸಂಸ್ಕರಿಸಿದ ಹಾಗೂ ಪ್ಯಾಕೆಟ್ ಆಹಾರ ಪದಾರ್ಥಗಳು, ಕೆಂಪು ಮಾಂಸ, ಕರಿದ ಆಹಾರಗಳು, ಇವುಗಳನ್ನು ಆದಷ್ಟೂ ದೂರವಿಡಿ. ಕೊಬ್ಬು ಮತ್ತು ಸಕ್ಕರೆಯ ಅಂಶಗಳು ಹಿಪ್ಪೊಕಾಂಪಸ್‌ನ ಸ್ಮರಣೆಯನ್ನು ದುರ್ಬಲಗೊಳಸುತ್ತವೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ದೈಹಿಕ ವ್ಯಾಯಾಮ : ಮೆಮೊರಿ ಸಂಗ್ರಹಕ್ಕೆ ದೈಹಿಕ ವ್ಯಾಯಾಮ ಅತ್ಯಂತ ಅಗತ್ಯವಾಗಿದೆ. ವ್ಯಾಮಾವು ದೇಹಕ್ಕೆ ಅಗತ್ಯವಾದ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪೂರೈಸುವುದಲ್ಲದೇ ಹಿಪ್ಪೊಕಾಂಪಸ್‌ನ ಜೀವಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಶ್ರಮದಾಯಕವಲ್ಲದ ಕೆಲ ಲಘು ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಮೆಮೊರಿಯನ್ನು ಹೆಚ್ಚಿಸಬಹುದು.
ಸಾಮಾಜಿಕ ಜೀವನವೂ ಇರಲಿ : ಮಾನವ ಮೂಲತಃ ಸಂಘ ಜೀವಿ. ಮೆಮೊರಿ ಸಂಗ್ರಹಕ್ಕೆ ದೈಹಿಕ ಬೆಂಬಲದ ಅಗತ್ಯವಿರುವಂತೆ ಭಾವನಾತ್ಮಕ ಬೆಂಬಲದ ಅಗತ್ಯವೂ ಇದೆ. ಅದಕ್ಕಾಗಿ ಸುತ್ತಲಿನ ಜನರೊಂದಿಗೆ ಒಂದಷ್ಟು ವೇಳೆ ಕಾಲ ಕಳೆಯುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ದೊರೆಯುತ್ತದೆ. 
ಪ್ರಕೃತಿ ಮತ್ತು ಧ್ಯಾನ : ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಕಳೆಯುವುದರಿಂದ ಮನಸ್ಸು ಆಹ್ಲಾದಗೊಳ್ಳುತ್ತದೆ. ಹಾಗೆಯೇ ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಧ್ಯಾನವೂ ಕೂಡಾ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಇವೆರಡೂ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸ್ಮರಣಶಕ್ತಿ ವೃದ್ದಿಗೆ ಹೆಚ್ಚು ಸಹಾಯ ಮಾಡುತ್ತವೆ.
ಕೊನೆಸಾಲು : ಸ್ಮರಣೆ ಎಂಬುದೊಂದು ಕೌಶಲ್ಯ. ಸತತ ಅಭ್ಯಾಸದಿಂದ ಮಾತ್ರ ಅದನ್ನು ಸುಧಾರಿಸಬಹುದು. ಇಂದಿನ ಚಿಕ್ಕ ಪ್ರಯತ್ನ ನಾಳಿನ ಮಹಾನ್ ಸಾಧನೆ ಆಗುತ್ತದೆ. ನಿಮ್ಮಲ್ಲಿನ ಸಾಮಾನ್ಯ ಸ್ಮರಣಾ ಶಕ್ತಿಯನ್ನು ಉತ್ತಮಪಡಿಸಿಕೊಳ್ಳಲು ನೀವೇ ಪ್ರಯತ್ನಿಸಬೇಕೆ ಹೊರತು ಇತರರು ಅಲ್ಲ.
ಆರ್.ಬಿ.ಗುರುಬಸವರಾಜ

ಫೆಬ್ರವರಿ 2019ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.

ಕಲಿಕಾ ಕೊರತೆಯ ವಾಸ್ತವಾಂಶಗಳು

ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತು ಅನೇಕ ಸರ್ಕಾರೇತರ ಸಂಸ್ಥೆಗಳು ಪ್ರತಿವರ್ಷ ತಮ್ಮದೇ ಆದ ರೀತಿಯ ವರದಿಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇವುಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸರ್ಕಾರಿ ಶಾಲೆಗಳ ಗುಣಮಟ್ಟದ ಇಷ್ಟೊಂದು ಕೆಟ್ಟದಾಗಿದೆಯಾ? ಎಂಬ ಪ್ರಶ್ನೆ ಮೂಡುತ್ತದೆ. ವಿಶೇಷವಾಗಿ ಪಾಲಕರ ಮನಸ್ಸಿನ ಮೇಲೆ ಇಂತಹ ವರದಿಗಳು ಪರಿಣಾಮ ಬೀರುತ್ತವೆ. ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.
ಇಂತಹ ವರದಿಗಳನ್ನು ನೋಡಿದಾಗಲೆಲ್ಲ ಕೆಲವೊಂದಿಷ್ಟು ಪ್ರಶ್ನೆಗಳು ಮೂಡುತ್ತದೆ. ಗುಣಮಟ್ಟವನ್ನು ಅಳೆಯುವ ಮಾನಕಗಳೇನು? ನಿಜವಾದ ಕಲಿಕಾ ಕೊರತೆಯ ಕಾರಣಗಳನ್ನು ಪತ್ತೆ ಹಚ್ಚಲು ಈ ವರದಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಕೇವಲ ಸರ್ಕಾರಿ ಶಾಲೆಗಳ ಗುಟ್ಟಮಟ್ಟದ ಬಗ್ಗೆ ಮಾತನಾಡುವ ವರದಿಗಳು ಖಾಸಗೀ ಶಾಲೆಗಳ ಗುಣಮಟ್ಟದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂಬ ಪ್ರಶ್ನೆಗಳು ಮೂಡುತ್ತವೆ. 
 ಕಲಿಕಾ ಕೊರತೆಯ ವರದಿಗಳು ಇದೇ ಮೊದಲೇನಲ್ಲ. ಕಲಿಕಾ ಕೊರತೆಯ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗುತ್ತಿಲ್ಲ. ಇದಕ್ಕೆ ಮೂಲ ಕಾರಣಗಳನ್ನು ಹುಡುಕುವ ಪ್ರಯತ್ನಗಳಾಗದಿರುವುದೇ ಇದಕ್ಕೆಲ್ಲಾ ಕಾರಣ. 
ಕಲಿಕಾ ಕೊರತೆಯ ಕಾರಣಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಇಂತಹ ವರದಿಗಳು ಹಿಂದೆ ಬಿದ್ದಿವೆ. ಮೂಲ ಕಾರಣಗಳನ್ನು ಮರೆಮಾಚಿ ಕೇವಲ ಕಲಿಕಾ ಕೊರತೆಯನ್ನೇ ಎತ್ತಿ ಹೇಳುತ್ತಿರುವುದು ದುರಂತ. ಕಲಿಕಾ ಕೊರತೆಯ ಮೂಲ ಸಮಸ್ಯೆ ಎಂದರೆ ಗ್ರಾಮೀಣ ಮಕ್ಕಳ ಅನಿಯಮಿತ ಗೈರುಹಾಜರಿ. 
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೂನ್-ಜುಲೈ ತಿಂಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿತ್ತನೆ ಕಾರ್ಯಕ್ಕೆ ಕೃಷಿ ಕೂಲಿಗಳ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆ ನಿವಾರಣೆಗೆ ಪಾಲಕರು ಬಿತ್ತನೆ ಹಾಗೂ ಇನ್ನಿತರೇ ಕೃಷಿ ಚಟುವಟಿಕೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾಗಿದ್ದ ಆ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕಲಿಕಾ ಕೊರತೆಯನ್ನು ಅನುಭವಿಸುತ್ತಾರೆ. ಈ ಪ್ರಕ್ರಿಯೆ ಕೇವಲ ಜೂನ್ ಜುಲೈ ತಿಂಗಳಿಗೆ ಮಾತ್ರ ಸೀಮಿತವಲ್ಲ. ಸುಗ್ಗಿಯವರೆಗೂ ಮುಂದುವರೆಯುತ್ತದೆ. ಅಲ್ಲದೇ ಕೆಲ ಗ್ರಾಮೀಣ ಭಾಗಗಳಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಪಾಲಕರು ಮಕ್ಕಳೊಂದಿಗೆ ಮರ‍್ನಾಲ್ಕು ತಿಂಗಳುಗಳ ಕಾಲ ದುಡಿಮೆ ಅರಸಿ ವಲಸೆ ಹೋಗುತ್ತಾರೆ. ಕೆಲವು ವೇಳೆ ಚಿಕ್ಕ ಮಕ್ಕಳ ಪಾಲನೆ ಹಾಗೂ ಮನೆಕೆಲಸಗಳಿಗಾಗಿ ಶಾಲಾ ಮಕ್ಕಳನ್ನೇ ಬಳಸಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕಾ ದಿನಗಳು ಹಾಳಾಗುತ್ತಿವೆ. ಇಂತಹ ಅನಿಯಮಿತ ಗೈರುಹಾಜರಿ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. 
ಇಂತಹ ಮಕ್ಕಳನ್ನು ಶಾಲೆಗೆ ಕರೆತರುವುದೇ ಶಿಕ್ಷಕರ ದೊಡ್ಡ ಸವಾಲಾಗುತ್ತಿದೆ. ಪಾಲಕರ ಭೇಟಿಗೆಂದು ಮನೆಗೆ ಹೋದಾಗ ಬಹುತೇಕ ಸಮಯದಲ್ಲಿ ಪಾಲಕರು ಲಭ್ಯ ಇರುವುದಿಲ್ಲ. ಇನ್ನು ಕೆಲ ಪಾಲಕರು ಸಮಯದ ಅಭಾವದಿಂದಲೋ ಅಥವಾ ಶಿಕ್ಷಣದ ಬಗೆಗಿನ ನಿರ್ಲಕ್ಷದಿಂದಲೋ ಶಾಲೆಯತ್ತ ಸುಳಿಯುವುದೇ ಇಲ್ಲ.  ಇಂತಹ ಎಲ್ಲಾ ಮಕ್ಕಳ ಮನೆಗಳಿಗೆ ಭೇಟಿ ನೀಡಿ ವಾಪಾಸಾಗುವ ವೇಳೆಗೆ ಶಿಕ್ಷಕರ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇತ್ತ ಶಾಲೆಯಲ್ಲಿದ್ದ ಮಕ್ಕಳ ಕಲಿಕೆಯೂ ಕುಂಟಿತ, ಅತ್ತ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದೂ ವಿಫಲ. ಇಂತಹ ಅನೇಕ ವಿಫಲ ಪ್ರಯತ್ನಗಳ ನಡುವೆ ಕಲಿಕೆ ಸೊರಗುವುದು ಸಹಜ. ವಿಫಲ ಪ್ರಯತ್ನಗಳ ನಡುವೆಯೂ ಅಲ್ಲಲ್ಲಿ ಕೆಲವು ಶಾಲೆ/ಶಿಕ್ಷಕರು ಉತ್ತಮ ಪ್ರಯತ್ನಗಳು ಮರುಭೂಮಿಯ ಓಯಸಿಸ್‌ನಂತೆ ದಾರಿದೀಪಗಳಾಗುತ್ತಿವೆ. ಇಂತಹ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳಾಗಬೇಕಿರುವುದು ಅನಿವಾರ್ಯ. 
ಅನಿಮಿತ ಗೈರುಹಾಜರಾದ ಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಂಡು ಕಲಿಸಲು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಇರುವ ಸಮಯಾವಕಾಶದಲ್ಲಿ ಹಲವಾರು ಕಾರ್ಯಗಳನ್ನು ನಿಭಾಯಿಸಬೇಕಾದ ಶಿಕ್ಷಕರಿಗೆ ಕೆಲಸದ ಒತ್ತಡ ಸಹಜ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಕೇವಲ ಕಾರ್ಯಕ್ರಮಗಳಾಗಿ ಜಾರಿಯಲ್ಲಿರುವ ಅನೇಕ ಯೋಜನೆಗಳು ಬೋಧನಾ ಕಲಿಕಾ ಅವಧಿಯನ್ನು ಮೊಟಕುಗೊಳಿಸಿವೆ. 
ಹೆಚ್ಚಿನ ಗ್ರಾಮೀಣ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಕಲಿಕೆ ಉತ್ತಮವಾಗಲು ತರಗತಿಗೊಬ್ಬ ಶಿಕ್ಷಕ ಇರಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಆದರೆ ಇಂದು ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇದ್ದಾರೆ. ಎನ್.ಸಿ.ಎಫ್-2005, ಆರ್.ಟಿ.ಇ-2009 ಹಾಗೂ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಪ್ರಕಾರ ಶಿಕ್ಷಕ ಮತ್ತು ಮಕ್ಕಳ ಅನುಪಾತ 1:30 ಇರಬೇಕೆಂದು ಸ್ಪಷ್ಟ ನಿರ್ದೇಶನಗಳಿವೆ. ಪ್ರಸ್ತುತ ನಮ್ಮ ರಾಜ್ಯ ಮಟ್ಟದ ಅಂಕಿ-ಅAಶಗಳನ್ನು ಗಮನಿಸಿದರೆ ಇದೇ ಅನುಪಾತ ಇದೆ. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು ಶಿಕ್ಷಕರ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಅನುಪಾತದಂತೆ ಕಾರ್ಯ ನಿರ್ವಹಿಸಲು ಕೆಲವು ತಾಂತ್ರಿಕ ದೋಷಗಳಿವೆ. ಗ್ರಾಮೀಣ ಭಾಗಗಳಲ್ಲಿ ಈ ಅನುಪಾತದಲ್ಲಿ ತುಂಬಾ ವ್ಯತ್ಯಾಸಗಳಿವೆ.
ಇಂದು ಶಿಕ್ಷಕರ ಕಾರ್ಯಭಾರ ಹೆಚ್ಚಾಗಿದ್ದು, ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ದಾಖಲಾತಿ ನಿರ್ವಹಣೆ, ಬಿಸಿಯೂಟ/ಕ್ಷೀರಭಾಗ್ಯ, ಕಛೇರಿ ಪತ್ರಗಳ ಸರಬರಾಜು, ಪೋಷಕರು/ವಿದ್ಯಾರ್ಥಿಗಳ ದಾಖಲಾತಿ ನಿರ್ವಹಣೆ, ಇಲಾಖೆ ಹಾಗೂ ಇಲಾಖೇತರ ಸಭೆಗಳು ಇತ್ಯಾದಿ ಕಾರ್ಯಗಳಿಗೆಂದು ಅಲೆದಾಡುತ್ತಾ ಒಟ್ಟಾರೆ ಆಡಳಿತ ನಿರ್ವಹಣೆಗೆ ಮೀಸಲಾಗುತ್ತಿದ್ದಾರೆ. ಇಬ್ಬರು ಶಿಕ್ಷಕರು ಇರುವ ಶಾಲೆಗಳಲ್ಲಿ ಒಬ್ಬರು ಆಡಳಿತಕ್ಕೇ ಮೀಸಲಾದರೆ ಉಳಿದ ಒಬ್ಬರೇ ಶಿಕ್ಷಕರು, ಐದು ತರಗತಿಗಳ 21 ವಿಷಯಗಳ ಭೋದನೆ ಹಾಗೂ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆಗ ಶಿಕ್ಷಣದ ಗುಣಮಟ್ಟ ಎಂಬುದು ಕೇವಲ ಕಾಗದದ ಸರಕಾಗುತ್ತದೆ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಗಟ್ಟಿಗೊಳ್ಳಲು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಉತ್ತಮ ಗುಟ್ಟಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.  
ಇನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿಯೂ ಇದಕ್ಕಿಂತ ಭಿನ್ನವಾದ ಸಮಸ್ಯೆಗಳಿವೆ. ಎಂಟನೇ ತರಗತಿವರೆಗಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದಿರುವುದು ಕಲಿಕಾ ಕೊರತೆಗೆ ಮೂಲ ಕಾರಣವಾಗಿದೆ. ಅಲ್ಲದೇ ಅಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಐದಾರು ಜನ ಶಿಕ್ಷಕರು ಎಂಟು ತರಗತಿಗಳ ಎಲ್ಲಾ ವಿಷಯಗಳನ್ನು ಬೋಧಿಸಿಕೊಂಡು ಇಲಾಖೆಯ ಇನ್ನಿತರೇ ಕಾರ್ಯಚಟುವಟಿಕೆಗಳನ್ನು ಪೂರೈಸುವುದು ನಿಜಕ್ಕೂ ತ್ರಾಸದಾಯಕ. ಇಂತಹ ಸಂದರ್ಭಗಳಲ್ಲಿ ಕಾರ್ಯದ ಒತ್ತಡದಿಂದ ಮಕ್ಕಳಿಗೆ ವೈಯಕ್ತಿಕ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬಹುತೇಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ  ಕನಿಷ್ಠ ವಿಜ್ಞಾನ ಪ್ರಯೋಗಾಲಯಗಳು ಇಲ್ಲವೇ ಇಲ್ಲ. ಮಕ್ಕಳ ಜ್ಞಾನವೃದ್ದಿಗೆ ಪೂರಕವಾದ ಸುಸಜ್ಜಿತವಾದ ಗ್ರಂಥಾಲಯ ಹಾಗೂ ವಾಚನಾಲಯಗಳ ಕೊರತೆ ಇದೆ. ಬಹುತೇಕ ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳಿವೆ. ಆದರೆ ಕಾರಣಾಂತರಗಳಿಂದ ಅವು ಮಕ್ಕಳಿಗೆ ಓದಲು ದೊರೆಯುತ್ತಿಲ್ಲ. ಹೀಗಾಗಿ ಕಲಿಕಾ ಕೊರತೆ ಉಂಟಾಗುವುದು ಸಹಜ. ಇಂತಹ ಅನೇಕ ವಿಫಲ ಪ್ರಯತ್ನಗಳು ಶಿಕ್ಷಕರ ಮನೋಸ್ಥಿತಿಯನ್ನು ಕುಗ್ಗಿಸುವ ಪ್ರೇರಕಾಂಶಗಳಾಗಿರುವುದು ಶೋಚನೀಯ.
ಕಲಿಕಾ ಕೊರತೆಗೆ ಸಂಬಂಧಿಸಿದ ನಿಜವಾದ ಕಾರಣಗಳನ್ನು ಕಾರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಹರಿಸುವ ಪ್ರಯತ್ನಗಳಾಗಬೇಕು. ಅದರ ಜೊತೆಗೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಪ್ರಯೋಗಾಲಯ ವ್ಯವಸ್ಥೆಯಾಗಬೇಕು. ಅಂದರೆ ಈಗಿರುವ ತರಗತಿ ಕೊಠಡಿಗಳನ್ನೇ ವಿಷಯವಾರು ಪ್ರಯೋಗಾಲಯಗಳಾಗಿ ಪರಿವರ್ತಿಸಬೇಕು. ಅಲ್ಲಿಯೇ ವೇಳಾಪಟ್ಟಿಗೆ ಅನುಗುಣವಾಗಿ ತರಗತಿ ನಡೆಯಬೇಕು.  ಇದರಿಂದ ಮಕ್ಕಳಲ್ಲಿ ಕೆಲವು ಕೌಶಲ್ಯಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ “ಸ್ಕಿಲ್ ಇಂಡಿಯಾ”ಕ್ಕೆ ನಿಜವಾದ ಅರ್ಥ ಕೊಡಲು ಸಾಧ್ಯವಾದೀತು. 
ಆರ್.ಬಿ.ಗುರುಬಸವರಾಜ ಹೊಳಗುಂದಿ

ಆಸ್ಟ್ರಿಚ್ ಪಾದದ ಜನ/Ostrich footed people

ದಿನಾಂಕ 12-01-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆಸ್ಟ್ರಿಚ್ ಪಾದದ ಜನ


ಆಫ್ರಿಕಾ ಅಚ್ಚರಿಗಳ ತಾಣ. ಇಡೀ ವಿಶ್ವದಲ್ಲಿಯೇ ವಿಶಿಷ್ಠತೆ ಪಡೆದ ಪ್ರದೇಶ. ಅಲ್ಲಿನ ಅಚ್ಚರಿಗೆ ಅನೇಕ ಕಾರಣಗಳಿವೆ. ಅಂತಹ ಒಂದು ಅಚ್ಚರಿಯೆಂದರೆ ಆಸ್ಟಿçಚ್ ಪಾದದ ಜನಾಂಗ. ಸಾಮಾನ್ಯವಾಗಿ ಮನುಷ್ಯನ ಪಾದಗಳಲ್ಲಿ ತಲಾ ಐದು ಕಾಲ್ಬೆರಳು ಇರುತ್ತವೆ. ಆದರೆ ಆಫ್ರಿಕಾದ ಈ ಜನಾಂಗದ ಪಾದಗಳಲ್ಲಿ ತಲಾ ಎರಡು ಕಾಲ್ಬೆರಳುಗಳಿವೆ. ಆಸ್ಟಿçಚ್ ಪಕ್ಷಿಯ ಪಾದ ಹೋಲುವ ರೀತಿಯ ಪಾದ ಹೊಂದಿದ್ದಾರೆ. 
ಜಿಂಬಾಬ್ವೆಯ ಉತ್ತರಕ್ಕೆ ವಾಸಿಸುವ ಬಾಡ್ವಾನ ಬುಡಕಟ್ಟಿನ ವಡೋಮ ಜನರು ಇಂತಹ ಪಾದಗಳನ್ನು ಹೊಂದಿದವರು. ಜಾಂಜ್ವೆ ನದಿ ಕಣಿವೆಯ ಉರುಗ್ವೆ ಮತ್ತು ಸಿಪೋಲಿಲೋ ಜಿಲ್ಲೆಗಳಲ್ಲಿ ವಡೋಮ ಜನಾಂಗ ವಾಸಿಸುತ್ತಿದೆ. ಈ ವಡೋಮ ಜನಾಂಗದ ಪ್ರತಿ ನಾಲ್ವರಲ್ಲಿ ಒಬ್ಬರು ಆಸ್ಟಿçಚ್ ಪಾದ ಹೊಂದಿದ್ದಾರೆ. ಪ್ರತಿ ಪಾದದಲ್ಲಿ ಮೊದಲ ಮತ್ತು ಕೊನೆಯ ಎರಡು ಬೆರಳುಗಳು ಮಾತ್ರ ಇದ್ದು, ಮಧ್ಯದ ಮೂರು ಬೆರಳುಗಳು ನಾಪತ್ತೆಯಾಗಿವೆ. ಈ ಎರಡೂ ಬೆರಳುಗಳು ಉದ್ದವಾಗಿ ಬೆಳೆದಿದ್ದು, ಒಳಭಾಗಕ್ಕೆ ಬಾಗಿಕೊಂಡಿವೆ.
ಇಂತಹ ಪಾದ ಇವರಿಗೆ ಯಾವುದೇ ತೊಂದರೆ ಆಗಿಲ್ಲ. ಇವರು ಎಲ್ಲರಂತೆ ನಡೆಯಲು ಮತ್ತು ಓಡಲು ಸ್ವಲ್ಪ ತೊಂದರೆ ಅನುಭವಿಸುತ್ತಾರೆ. ಆದರೆ ಇವರು ಎಲ್ಲರಿಗಿಂತ ಸುಲಭವಾಗಿ ಮರಹತ್ತುವ ಸಾಮರ್ಥ್ಯ ಹೊಂದಿದ್ದಾರೆ. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಇವರು ಪರ್ವತಾರೋಹಣ, ಬೇಟೆ, ಮೀನುಗಾರಿಕೆಗಳಲ್ಲಿ ಪ್ರವೀಣರು. ಜೊತೆಗೆ ಸುಲಭವಾಗಿ ಮರ ಏರುವ ಇವರು ಜೇನು ಮತ್ತು ಹಣ್ಣುಗಳನ್ನು ಕೀಳುವುದವರಲ್ಲಿ ನಿಸ್ಸೀಮರು. ಅಲೆಮಾರಿಗಳಾದ ಇವರನ್ನು ಸರ್ಕಾರವು ಮುಖ್ಯವಾಹಿಸನಿಗೆ ತರಲು ಎಷ್ಟೇ ಶ್ರಮಿಸಿದರೂ ಇದುವರೆಗೂ ಸಾಧ್ಯವಾಗಿಲ್ಲ.
ವೈಜ್ಞಾನಿಕವಾಗಿ ಇದನ್ನು ಎಕ್ಟೊಡಾಕ್ಲೆಟ್ ಎಂದು ವಿಶ್ಲೇಷಿಸಲಾಗಿದೆ. ಇದು ಆಟೋಸೋಮಲ್ ಪ್ರಾಬಲ್ಯದ ಸ್ಥಿತಿಯಾಗಿದ್ದು, ಕ್ರೋಮೋಸೋಮ್-7 ರ ರೂಪಾಂತರದ ಪರಿಣಾಮವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಡೋಮ ಆಫ್ರಿಕಾದ ಒಂದು ವಿಶೇಷ ಬುಡಕಟ್ಟು ಜನಾಂಗವಾಗಿದ್ದು, ಹೊರಗಿನ ಇನ್ನಿತರೇ ಜನಾಂಗದ ವೈವಾಹಿಕ ಸಂಬAಧ ಇರಿಸಿಕೊಂಡಿಲ್ಲ. ಹಾಗಾಗಿ ಇದೊಂದು ಅನುವಂಶಿಕ ಸ್ಥಿತಿ ಎಂದು ಹೇಳಲಾಗುತ್ತದೆ.
ಆರ್.ಬಿ.ಗುರುಬಸವರಾಜ

ಲೇಡಿ ಟಾರ್ಜನ್ ಜಮುನಾ /Lady Targen Jamuna

ದಿನಾಂಕ 07-01-2019ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ.

ಲೇಡಿ ಟಾರ್ಜನ್ ಜಮುನಾ


ಯಾರು ತಮ್ಮ ತೋಳ್ಬಲದಿಂದ ಹೋರಾಡಿ ಎದುರಾಳಿಯನ್ನು ಮಣ್ಣು ಮುಕ್ಕಿಸುತ್ತಾರೋ, ಯಾರು ಗಟ್ಟಿಯಾದ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುತ್ತಾರೋ, ಅವರೇ ನಿಜವಾದ ನಾಯಕರು. ಯಾರೂ ನಾಯಕರಾಗಿ ಹುಟ್ಟುವುದಿಲ್ಲ. ಬದಲಾಗಿ ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಮೂಲಕ ನಾವೇ ನಾಯಕರಾಗಬೇಕು ಎಂಬ ಮಾತನ್ನು ಜಮುನಾ ಅವರು ಸಾಧಿಸಿ ತೋರಿಸಿದ್ದಾರೆ. ಯಾರು ಈ ಜಮುನಾ ? ಅವರು ಮಾಡಿದ ಸಾಧನೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರವೇ ಈ ಬರಹ.
ಈಕೆಯ ಪೂರ್ಣ ಹೆಸರು ಜಮುನಾ ತುಡು. ಒಡಿಸ್ಸಾದಲ್ಲಿ ಜನಿಸಿದ ಜಮುನಾ ಈಗ ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ಭಾಮ್ ಜಿಲ್ಲೆಯ ಮುತುರ್ಖಮ್ ಗ್ರಾಮದ ನಿವಾಸಿ. 35ರ ಹರೆಯದ ಜಮುನಾ, ತನ್ನ ಗ್ರಾಮದ ಸುತ್ತಲೂ ಇರುವ 50 ಹೆಕ್ಟೇರ್ ಅರಣ್ಯವನ್ನು ಸಂರಕ್ಷಣೆ ಮಾಡುವ ಮೂಲಕ ‘ಲೇಡಿ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದಾಳೆ. ಕಳೆದ 18 ವರ್ಷಗಳಿಂದ ಅರಣ್ಯ ಮಾಫಿಯಾದ ಗ್ಯಾಂಗ್‌ಗೆ ಟಾರ್ಜನ್ ರೂಪದಲ್ಲಿ ಸಿಂಹಸ್ವಪ್ನವಾಗಿದ್ದಾಳೆ. 
ಪ್ರಕೃತಿಯೇ ದೇವರೆಂದು ಭಾವಿಸಿದ್ದ ಗೌರವಯುತ ಕುಟುಂಬದಲ್ಲಿ 1998ರಲ್ಲಿ ಜಮುನಾ ವಿವಾಹವಾದಳು. ಸಹಜವಾಗಿ ಪ್ರೀತಿ ವಿಶ್ವಾಸಗಳಿಂದ ಜೀವನ ಸಾಗಿತ್ತು. ಪ್ರಾರಂಭದಲ್ಲಿ ತನ್ನ ಕುಟುಂಬದವರೊAದಿಗೆ ಗ್ರಾಮದ ಪಕ್ಕದಲ್ಲಿನ ಅರಣ್ಯಕ್ಕೆ ತೆರಳಿ ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸಿಕೊAಡು ಬರುತ್ತಿದ್ದಳು. ಹೀಗೆ ಸಂಗ್ರಹಿಸಲು ಹೋದಾಗ ಪ್ರತಿದಿನ ಮರಗಳನ್ನು ಕಡಿದು ನಾಟಾಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ ವಿಷಯ ತಿಳಿಯಿತು. ಇದು ಅವಳಿಗೆ ಸರಿ ಎನಿಸಲಿಲ್ಲ. ಇಂತಹ ಅಗಾದ ಸಂಪತ್ತನ್ನು ಹೊಂದಿದ ಸುಂದರ ಕಾಡು ನಾಶವಾಗುತ್ತ ಹೋದರೆ ಮುಂದೊಂದು ದಿನ ಸಂಪೂರ್ಣವಾಗಿ ಇಲ್ಲದಂತಾಗುತ್ತದೆ ಎಂಬ ಕಳವಳ ಮೂಡಿತು. ಇದಕ್ಕೆ ಏನಾದರೂ ಉಪಾಯ ಹೂಡಲೇಬೇಕು ಎಂದುಕೊAಡಳು. ಆಗ ಮನಸ್ಸಿನಲ್ಲಿ ಮೂಡಿದ ಕನಸನ್ನು ಸಾಕಾರಗೊಳಿಸಲು ಸನ್ನಧಳಾದಳು.
ಹೋರಾಟದ ಮೊದಲ ಹೆಜ್ಜೆ
ಮಹಿಳೆಯರ ಸಹಕಾರದಿಂದ ಕಾಡನ್ನು ಸಂರಕ್ಷಿಸುವ ಯೋಜನೆ ರೂಪಿಸಿದಳು. ಅದಕ್ಕಾಗಿ ಗ್ರಾಮದ ಮಹಿಳೆಯರೊಂದಿಗೆ ಸಭೆ ನಡೆಸಿದಳು. ಪ್ರಾರಂಭದಲ್ಲಿ ಬಹಳ ಜನರು ಈ ಯೋಜನೆಯನ್ನು ತಿರಸ್ಕರಿಸಿದರು. ಯಾರಿಗೂ ಇಲ್ಲದ ಉಸಾಬರಿ ನಮಗ್ಯಾಕೆ ಎಂದರು. ಕುಟುಂಬದ ಸದಸ್ಯರೂ ಸಹ ಇದನ್ನು ನಿರಾಕರಿಸಿದರು. ಆದರೆ ಸಾಮಾಜಿಕ ಹೊಣೆಗಾರಿಕೆಯನ್ನು ಹೋರುವ ಬದ್ದತೆ ಜಮುನಾಳಲ್ಲಿ ಅಗಾಧವಾಗಿತ್ತು. ಮನದಲ್ಲಿ ಸಕಾರಾತ್ಮಕ ಯೋಚನೆಗಳು ತೇಲಾಡುತ್ತಿದ್ದವು. ಛಲಗಾತಿಯಾದ ಜಮುನಾ ಪುನಃ ಪುನಃ ಮಹಿಳೆಯರೊಂದಿಗೆ ಚರ್ಚೆ ಮಾಡಿ ಅವರನ್ನು ಹುರಿದುಂಬಿಸಿದಳು. ಇವಳ ಮಾತಿನ ಮೋಡಿಗೆ ಐದಾರು ಮಹಿಳೆಯರು ಕೈಜೋಡಿಸಿದರು. 
ಯೋಜನೆಯಂತೆ ಪ್ರತಿದಿನ ಕಾಡಿನ ಭಾಗವನ್ನು ಸುತ್ತಲು ನಿರ್ಧರಿಸಿದರು. ಬೀಸುಕೋಲು, ಬಿಲ್ಲು ಬಾಣ, ಹರಿತವಾದ ಆಯುಧಗಳು, ನೀರಿನ ಬಾಟಲ್ ಜೊತೆಗೆ ಕೆಲವು ನಾಯಿಗಳನ್ನು ಕರೆದುಕೊಂಡು ಕಾಡು ಸುತ್ತಲು ಹೊರಟರು. ಮರ ಕಡಿಯುವವರ ಬಳಿ ಸಾಗಿ ಮರ ಕಡಿಯುವುದು ತಪ್ಪೆಂದು ತಿಳುವಳಿಕೆ ಹೇಳುತ್ತಿದ್ದರು. ಕೇಳದಿದ್ದರೆ ಅವರೊಂದಿಗೆ ಮುಖಾಮುಖಿ ಹೋರಾಟಕ್ಕೆ ಇಳಿಯುತ್ತಿದ್ದರು. ಮಹಿಳೆಯರ ಸಂಘಟಿತ ಹೋರಾಟಕ್ಕೆ ಹೆದರಿದ ಮರಗಳ್ಳರು ಅಲ್ಲಿಂದ ಕಾಲುಕೀಳುತ್ತಿದ್ದರು. ಹೀಗೆ ಪ್ರತಿದಿನವೂ ಎರಡು ಮೂರು ಬಾರಿ ತಂಡದೊಂದಿಗೆ ಕಾಡು ಸುತ್ತುವುದು ಮುಂದುವರೆಯಿತು.
ಕಾಡಿನಿಂದ ಕಡಿದ ಮರಗಳನ್ನು ಜಾರ್ಖಂಡ್‌ನ ರೈಲುನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದರು. ಇದನ್ನು ತಡೆಯುವಂತೆ ಜಮುನಾ ರೈಲು ಅಧಿಕಾರಿಗಳಿಗೆ ಪತ್ರ ಬರೆದಳು.. ಅವರಿಂದ ಯಾವುದೇ ಸಹಾಯ ಸಿಗಲಿಲ್ಲ. ಏಕೆಂದರೆ ಅವರೂ ಅದರಲ್ಲಿ ಶಾಮೀಲಾಗಿದ್ದರು. ದಿನೇ ದಿನೇ ಹೆಚ್ಚಿದ ಜಮುನಾಳ ಕಾಟದಿಂದ ಜಂಗಲ್ ಮಾಫಿಯಾ ತಂಡ ತತ್ತರಿಸಿತು. ಕೋಪಗೊಂಡ ಮಾಫಿಯಾ ತಂಡ ಜಮುನಾ ತಂಡಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸಿತು. ಯಾವ ಬೆದರಿಕೆಗೂ ಬಗ್ಗದ ಜಮುನಾ ಮತ್ತಷ್ಟು ಉತ್ಸಾಹ ಹಾಗೂ ಕೆಚ್ಚೆದೆಯಿಂದ ಸಮಸ್ಯೆಯನ್ನು ಎದುರಿಸಲು ಸಜ್ಜಾದಳು. 
ಮತ್ತಷ್ಟು ಬೆಂಬಲ
ಇವರ ಹೋರಾಟದ ಸ್ವರೂಪ ಗಮನಿಸಿದ ಹಳ್ಳಿಯ ಇನ್ನಿತರೇ ಮಹಿಳೆಯರು ಜಮುನಾ ತಂಡವನ್ನು ಸೇರಿಕೊಂಡರು. “ವನ ಸಂರಕ್ಷಣಾ ಸಮಿತಿ” ಹೆಸರಿನ ಸಂಘವೊAದು ಅಸ್ಥಿತ್ವಕ್ಕೆ ಬಂದಿತು. ಮೂರು ತಂಡಗಳನ್ನು ರಚಿಸಿಕೊಂಡರು. ದಿನಕ್ಕೆ ಮೂರು ಪಾಳೆಯಂತೆ ಅರಣ್ಯ ಸಂರಕ್ಷಣಾ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾಡಿನ ಭ್ರಷ್ಠಾಚಾರದ ವಿರುದ್ದ ಧ್ವನಿ ಎತ್ತಿದರು. ಜಂಗಲ್ ಮಾಫಿಯಾ ತಂಡವನ್ನು ಅಲ್ಲಿಂದ ಓಡಿಸಿದರು. ಜೊತೆಗೆ ಈ ಮಾಫಿಯಾದಲ್ಲಿ ಶಾಮೀಲಾಗಿದ್ದ ಕೆಲ ಅರಣ್ಯ ಅಧಿಕಾರಿಗಳನ್ನು ಜೈಲಿಗೆ ಕಳಿಸಿದರು. 
ಮಾಫಿಯಾ ತಂಡ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿತು. ರಾತ್ರಿ ಕಾಡಿಗೆ ಬೆಂಕಿ ಹಚ್ಚಿ, ಮರಗಳನ್ನು ಕಡಿದು ಸಾಗಿಸಲು ಪ್ರಯತ್ನಿಸಿದರು. ಇದನ್ನರಿತ ಜಮುನಾ ರಾತ್ರಿ ವೇಳೆಯೂ ತಂಡದೊಂದಿಗೆ ಕಾಡು ಕಾಯುವ ಕೆಲಸಕ್ಕೆ ಮುಂದಾದಳು. ಮರಗಳ್ಳರು ಕಾಡಿನ ಯಾವುದೇ ಭಾಗದಲ್ಲಿದ್ದರೂ, ಅವರನ್ನು ಹಿಡಿದು ಪೋಲೀಸರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಜಮುನಾ ಹೊತ್ತಳು. ಈಗ ಅವಳ ತಂಡದಲ್ಲಿ ಸುಮಾರು 300 ಜನ ಮಹಿಳೆಯರಿದ್ದಾರೆ. 30 ಜನರ ತಂಡದಂತೆ 10 ತಂಡಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕೇವಲ ಕಾಡಿನ ಸಂರಕ್ಷಣೆ ಅಲ್ಲದೇ ಕಾಡಿನ ಮಹತ್ವ ಮತ್ತು ರಕ್ಷಣೆಯ ಕುರಿತು ಜನಾಂದೋಲನ ಪ್ರಾರಂಭಿಸಿದ್ದಾಳೆ. ಅಲ್ಲಲ್ಲಿ ಚಿಕ್ಕ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾಳೆ. 
ಕೊರತೆಯೇ ಸಂಪನ್ಮೂಲ
ಇಷ್ಟೆಲ್ಲಾ ಖ್ಯಾತಿ ಗಳಿಸಿದ ಜಮುನಾಳಿಗೆ ಕೊರತೆ ಇಲ್ಲವೆಂದೇನಿಲ್ಲ. ತನ್ನ ಕೊರತೆಯನ್ನೇ ಸಂಪತ್ತನ್ನಾಗಿಸಿಕೊAಡಿದ್ದಾಳೆ. ಮುದುವೆಯಾಗಿ 20ವರ್ಷವಾದರೂ ಮಕ್ಕಳಿಲ್ಲ ಎಂಬುದೇ ಅವಳ ಕೊರತೆ. ಈ ಬಗ್ಗೆ ಅವಳೆಂದೂ ಕೊರಗಿಲ್ಲ. “ಈ ವಿಷಯದಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕನೇ ನನಗೆ ಸ್ಪೂರ್ತಿ” ಎನ್ನುತ್ತಾಳೆ. ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನು ಬೆಳೆಸಿ ಸಾಕಿದರು. ಅಂತೆಯೇ ಮರಗಳೇ ತನ್ನ ಸರ್ವಸ್ವ ಎಂದು ತಿಳಿದ ಜಮುನಾ ಅವುಗಳನ್ನು ತನ್ನ ಮಕ್ಕಳಂತೆ  ರಕ್ಷಿಸುವ ಜವಾಬ್ದಾರಿ ಹೊತ್ತಿದ್ದಾರೆ. 
ಈಗ ಹಳ್ಳಿಗೆ ಅವಳೇ ನಾಯಕಿ. ಇಡೀ ಹಳ್ಳಿಯ ಮಹಿಳೆಯರು ಇವಳ ಹಿಂಬಾಲಕರಾಗಿದ್ದಾರೆ. ಮರಗಳನ್ನು ತಮ್ಮ ಸಹೋದರರಂತೆ ಪ್ರೀತಿಸುತ್ತಾರೆ. ರಕ್ಷಬಂಧನದ ದಿನ ಎಲ್ಲಾ ಮಹಿಳೆಯರೂ ಕಾಡಿಗೆ ತೆರಳಿ, ಅಲ್ಲಿನ ಎಲ್ಲಾ ಮರಗಳಿಗೂ ರಾಖಿ ಕಟ್ಟುತ್ತಾರೆ. ಆ ಮೂಲಕ ಮರಗಳಿಗೆ ರಕ್ಷಣೆಯ ಭರವಸೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 18 ಸಸಿಗಳನ್ನು ನೆಟ್ಟು ಸಂಭ್ರಮಿಸುತ್ತಾರೆ. ಹೆಣ್ಣು ಮಗಳ ಮದುವೆಯಾದರೆ 10 ಸಸಿಗಳನ್ನು ನೆಟ್ಟು ಬೆಳೆಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. 
ಅರಸಿ ಬಂದ ಪುರಸ್ಕಾರಗಳು
ಜಮುನಾಳ ಸಾಮಾಜಿಕ ಕಳಕಳಿಯ ಕಾರ್ಯ ಇಡೀ ದೇಶವೇ ಬೆರಗಾಗಿ ನೋಡುವಂತೆ ಮಾಡಿದೆ. ಅವಳ ಕಾರ್ಯವನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ. ಅದರಲ್ಲಿ ಪ್ರಮುಖವಾಗಿ 2013 ರಲ್ಲಿ ಗಾಡ್‌ಫ್ರೇ ಫಿಲಿಪ್ಸ್ ಬ್ರೇವರಿ ಪುರಸ್ಕಾರ, 2014 ರಲ್ಲಿ ಸ್ತಿç ಶಕ್ತಿ ಪ್ರಶಸ್ತಿ, 2017 ರಲ್ಲಿ ನೀತಿ ಆಯೋಗದ ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ. ಜಾರ್ಖಂಡ್‌ನ ಶಸ್ತçಸಜ್ಜಿತ ಪೋಲೀಸ್ ಇಲಾಖೆಯು ಜಮುನಾಳೊಂದಿಗೆ ಕಾಡಿನ ರಕ್ಷಣೆಯ ಕಾರ್ಯಕ್ಕೆ ಸಹಭಾಗಿತ್ವ ನೀಡಿದೆ. ಜೊತೆಗೆ ಅರಣ್ಯ ಇಲಾಖೆಯು ಅವಳ ಹಳ್ಳಿಗೆ ಶುದ್ದ ಕುಡಿಯುವ ನೀರು ಮತ್ತು ಸುಸಜ್ಜಿತ ಶಾಲಾ ಸೌಲಭ್ಯವನ್ನು ಒದಗಿಸಿದೆ. 
ಜಮುನಾಳ ಕಥೆಯು ಕೇವಲ ಮನೋರಂಜನಾತ್ಮಕ ಸಿನೆಮಾ ಅಲ್ಲ. ಅದೊಂದು ಯಶೋಗಾಥೆ. ಅಲ್ಲಿ ಸಾಕಷ್ಟು ನೋವು ಇದೆ. ಆದರೂ ಸಮುದಾಯದ ಸಹಭಾಗಿತ್ವದೊಂದಿಗೆ ಸಮಾಜ್ಜೋದ್ದಾರದ ಸಾಕಾರತೆ ಇದೆ. ಮಹಿಳಾ ಸಬಲೀಕರಣವು ಎಂತಹ ಸಾಹಸವನ್ನೂ ಕೂಡಾ ಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಹೆಣ್ಣೆಂದರೆ ಮೂಗು ಮುರಿಯುವ ಇಂತಹ ಕಾಲದಲ್ಲಿ ಪ್ರತಿ ಮನೆಯ ಹೆಣ್ಣೂ ಸಹ ಜಮುನಾಳಂತೆ ಸಾಮಾಜಿಕ ಬದಲಾವಣೆಯಲ್ಲಿ ಪಾಲ್ಗೊಂಡರೆ ದೇಶದ ಅಭಿವೃದ್ದಿ ಸುಲಭವಲ್ಲವೇ?
ಆರ್.ಬಿ.ಗುರುಬಸವರಾಜ