September 25, 2017

ಮಕ್ಕಳಿಗೆ ಒತ್ತಡ ಬೇಕೇ? Stress in children

ದಿನಾಂಕ 25-9-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಮಕ್ಕಳಿಗೆ ಒತ್ತಡ ಬೇಕೇ?

ಇತ್ತೀಚಿಗೆ ತರಬೇತಿಗೆಂದು ಮೈಸೂರಿಗೆ ಹೋಗಿದ್ದೆ. ಮಾರ್ಕೆಟ್‍ನಲ್ಲಿ ಸುತ್ತಾಡುತ್ತಿರುವಾಗ ಬಹುತೇಕ ಮಾರಾಟಗಾರರು ಕೈಯಲ್ಲಿ ಆಟಿಕೆಯೊಂದನ್ನು ಹಿಡಿದು ‘ನೂರಕ್ಕೊಂದು ನೂರುಕ್ಕೊಂದು, ತಿರುಗಿಸಿ ನೋಡಿ, ಟೆನ್ಶನ್ ಕಡಿಮೆ ಮಾಡ್ಕೊಳ್ಳಿ’ ಎಂದು ಕೂಗುತ್ತಿದ್ದರು.  ಅಲ್ಲಿಗೆ ಬಂದ ಪ್ರೌಢಶಾಲಾ ಹುಡುಗರ ಗುಂಪೊಂದು ನನ್ನನ್ನು ಆಕರ್ಷಿಸಿತು. ಅವರನ್ನು ಹಿಂಬಾಲಿಸಿದೆ. ಒಬ್ಬ ಹುಡುಗ ಕೈಯಲ್ಲಿ ಹಿಡಿದ ಆಟಿಕೆಯನ್ನು ತೋರಿಸಿ “ಅಂಕಲ್ ಇಂತಹ ಬಣ್ಣದ್ದು ಇದ್ದರೆ ಕೊಡಿ” ಎಂದು ಕೇಳುತ್ತಾ ಅಂಗಡಿಯಿಂದ ಅಂಗಡಿಯಿಂದ ಅಲೆದಾಡುತ್ತಿದ್ದರು. ಯಾವ ಅಂಗಡಿಯಲ್ಲೂ ಅವರಿಗೆ ಬೇಕಾದ ಬಣ್ಣದ ಆಟಿಕೆ ದೊರೆಯಲಿಲ್ಲ. ನನಗೆ ಕುತೂಹಲ ಹೆಚ್ಚಿತು. ಆ ಗುಂಪಿನ ಒಬ್ಬ ವಿದ್ಯಾರ್ಥಿಯನ್ನು ಈ ಬಗ್ಗೆ ಕೇಳಿದೆ. ‘ಅಂಕಲ್ ಇದು ಫಿಜೆಟ್ ಸ್ಪಿನ್ನರ್ ಎಂಬ ಆಟಿಕೆ. ಇದನ್ನು ಬೆರಳಲ್ಲಿ ಹಿಡಿದು ತಿರುಗಿಸಿದರೆ ಒತ್ತಡ ಕಡಿಮೆಯಾಗುತ್ತದೆಯಂತೆ. ಅದರಲ್ಲೂ ಆ ಹುಡುಗನ ಕೈಯಲ್ಲಿರುವ ಬಣ್ಣದ್ದು ತುಂಬಾ ಬೇಗನೇ ಒತ್ತಡ ಕಡಿಮೆ ಮಾಡುತ್ತದೆಯಂತೆ. ಇಲ್ಲೆಲ್ಲೂ ಅಂತಹದ್ದು ದೊರೆಯುತ್ತಿಲ್ಲ’ ಎಂದು ಸಾದ್ಯಂತ ವಿವರಿಸಿದ.
ಅವನೊಂದಿಗೆ ಮಾತನಾಡಿ ಮುಂದೆ ಹೆಜ್ಜೆ ಹಾಕಿದೆ. ಅವನ ಹೇಳಿಕೆಯು ಮನದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಮಕ್ಕಳಲ್ಲಿ ಇಷ್ಟೊಂದು ಗಂಭೀರವಾದ ಒತ್ತಡ ಇದೆಯಾ? ಈ ಒತ್ತಡಕ್ಕೆ ಕಾರಣಗಳೇನು? ಒತ್ತಡ ಹೋಗಲಾಡಿಸಲು ಫಿಜೆಟ್ ಸ್ಪಿನ್ನರ್‍ನಂತಹ ಕೇವಲ ಒಂದು ಆಟಿಕೆಯಿಂದ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿ ಬೃಹದಾಕಾರ ತಾಳತೊಡಗಿದವು. 
ಮನಸ್ಸು ಹಿಂದಕ್ಕೆ ಓಡಿತು. ಇದೇ ಜೂನ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 214 ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣ ಸುದ್ದಿಯತ್ತ ಮನಸ್ಸು ಕೇಂದ್ರಿಕೃತಗೊಂಡಿತು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ||ಕೆ.ಜಿ.ಜಗದೀಶ ಅವರು ಈ ಬಗ್ಗೆ ಮಾಹಿತಿ ನೀಡಿದ ವರದಿ ಪ್ರಕಟವಾಗಿತ್ತು. 2014 ರಿಂದ ಒಟ್ಟು 214 ನಾಪತ್ತೆಯಾಗಿದ್ದು, ಅವರಲ್ಲಿ 200 ಮಕ್ಕಳು ಪತ್ತೆಯಾಗಿದ್ದರು. ಅವರಲ್ಲಿ ಬಹುತೇಕ ಮಕ್ಕಳು ಶಾಲೆ ಹಾಗೂ ಪಾಲಕರ ಕಲಿಕೆಯ ಒತ್ತಡದಿಂದ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದರು. 
ಅಲ್ಲದೇ ಇದೇ ಜುಲೈ 20ಕ್ಕೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ಸಾವು ಇಡೀ ದೇಶದಾದ್ಯಂತ ಪೋಷಕರಲ್ಲಿ ಒಂದು ರೀತಿಯ ನಡುಕವನ್ನುಂಟು ಮಾಡಿತ್ತು. ಇದು ಮರೆಯುವ ಮುನ್ನವೇ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಆತ್ಮಹತ್ಯೆಗಳು ನಡೆದಿವೆ. ಆಗಸ್ಟ್ 17 ರಂದು ನಗರದ ಪ್ರೌಢದೇವ ಎಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ 18 ವರ್ಷದ ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆಗಸ್ಟ್ 22 ರಂದು ನಗರದ ಚಪ್ಪರದಹಳ್ಳಿಯಲ್ಲಿನ ಬಿ.ಸಿ.ಎಂ ಬಾಲಕಿಯರ ಹಾಸ್ಟಲ್‍ನಲ್ಲಿ 20 ವರ್ಷದ ಕಾವ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇದರ ಜೊತೆಗೆ ಮತ್ತೊಂದು ಷಾಕಿಂಗ್ ನ್ಯೂಸ್ ಎಂದರೆ ಆಗಸ್ಟ್ 30 ಕ್ಕೆ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ 18 ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ಎರಡನೇ ಅಂತಸ್ತಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತ ಚೆನ್ನೈನಲ್ಲಿ ನೀಟ್ ವಿರುದ್ದ ಕಾನೂನು ಹೋರಾಟ ನಡೆಸಿದ್ದ 18 ವರ್ಷದ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಈ ಮೇಲಿನ ಐದು ಪ್ರಕರಣಗಳಲ್ಲಿನ ನತದೃಷ್ಟರು ವಿದ್ಯಾರ್ಥಿನಿಯರು ಎನ್ನುವುದು ವಿಶೇಷ. ಅದರಲ್ಲೂ ಎಲ್ಲರೂ 15 ರಿಂದ 20 ವರ್ಷದೊಳಗಿನವರು ಎನ್ನುವುದು ಇನ್ನೂ ಆತಂಕ.
ಈ ಎಲ್ಲಾ ಘಟನೆ ಹಾಗೂ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಕ್ಕಳು ನಿಜಕ್ಕೂ ಒತ್ತಡದಲ್ಲಿದ್ದಾರೆ ಎನ್ನಿಸಿದೇ ಇರದು. ಇಂತಹ ಒತ್ತಡಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ಅವು ನೇರವಾಗಿ ಪಾಲಕರ ಸುತ್ತ ಸುತ್ತತೊಡಗುತ್ತವೆ. ಹೌದು ಪಾಲಕರಾದ ನಾವು ಇತ್ತೀಚಿಗೆ ಕಲಿಕೆಯ ಹೆಸರಿನಲ್ಲಿ ಮಕ್ಕಳಿಗೆ ಒತ್ತಡ ನೀಡುತ್ತಿದ್ದೇವೆ. ನಮ್ಮ ಮಗು ಹೆಚ್ಚು ಅಂಕ ಗಳಿಸಬೇಕು ಎಂಬ ಅತಿಯಾದ ನಿರೀಕ್ಷೆಯೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಮೂಲ ಕಾರಣ. ಅಲ್ಲದೇ ಮಕ್ಕಳನ್ನು ಭವಿಷ್ಯದಲ್ಲಿ ಏನಾಗಿ ರೂಪಿಸಬೇಕೆಂಬ ನಿರ್ದಿಷ್ಟತೆ ಬಹುತೇಕ ಪಾಲಕರಿಗೆ ಇಲ್ಲ. 
ಬೆಳಿಗ್ಗೆ ನಿದ್ದೆಯಿಂದ ಮಗುವನ್ನು ಬಲವಂತವಾಗಿ ಎಬ್ಬಿಸಿ, ಜಿಮ್, ಕರಾಟೆ, ಏರೋಬಿಕ್ಸ್, ಸಂಗೀತ, ಯೋಗ, ಟ್ಯೂಶನ್ ಇತ್ಯಾದಿ ಕ್ಲಾಸ್‍ಗಳಿಗೆ ಕಳಿಸುತ್ತೇವೆ. ಅಲ್ಲಿಂದ ಬಂದ ಮಗುವಿಗೆ ದಣಿವಾಗಿದೆಯೋ ಇಲ್ಲವೋ ತಿಳಿಯದೇ ಅವಸರವಾಗಿ ಸ್ನಾನ ಮಾಡಿಸಿ ಬಲವಂತವಾಗಿ ಬಾಯಿಗೆ ಒಂದಿಷ್ಟು ಉಪಹಾರ ತುರುಕಿ, ಶಾಲೆಗೆ ಕಳಿಸುತ್ತೇವೆ. ಯಾಕೆಂದರೆ ಎಲ್ಲದರಲ್ಲೂ ನಮ್ಮ ಮಗುವೇ ಫಸ್ಟ್ ಬರಬೇಕು, ಆ ಮಗುವಿನ ಫೋಟೋದ ಜೊತೆಗೆ ನಮ್ಮ ಫೋಟೋ ಕೂಡಾ ಮಾಧ್ಯಮಗಳಲ್ಲಿ ಹರಿದಾಡಬೇಕೆಂಬ ಎಂಬ ಅತಿಯಾದ ನಿರೀಕ್ಷೆ. 
ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೇಗಿದೆ? ಯಾವ ವಿಷಯದಲ್ಲಿ ಮಗುವಿಗೆ ತೊಂದರೆ ಇದೆ? ಭವಿಷ್ಯದ ಬಗ್ಗೆ ಮಗುವಿನ ಕನಸುಗಳೇನು? ಆ ಕನಸನ್ನು ಸಾಕಾರಗೊಳಿಸಲು ನಮ್ಮ ಪಾತ್ರವೇನು? ಎಂಬುದರ ಬಗ್ಗೆ ಬಹುತೇಕ ಪಾಲಕರು ಅರಿಯದಿರುವುದೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಕಾರಣವಾಗಿದೆ. 
ಮಗುವಿನ ಆಸಕ್ತಿಯಂತೆ ಓದಿಸಲು ಆಗುವುದಿಲ್ಲ ಎಂಬುದು ಬಹುತೇಕ ಪಾಲಕರ ಅಭಿಮತ. ಇದೇ ಪಾಲಕರು ಮಾಡುವ ಬಹು ದೊಡ್ಡ ತಪ್ಪು. ಅದೇನು ಚಿಕ್ಕ ಮಗು. ಅದಕ್ಕೇನೂ ಗೊತ್ತಾಗೋದೇ ಇಲ್ಲ. ನಾವು ಹೇಳಿದಂತೆ ಕೇಳುತ್ತದೆ ಮತ್ತು ಕೇಳಬೇಕು ಎನ್ನುವ ಮನೋಧೊರಣೆಯೇ ಮಕ್ಕಳ ಮಾನಸಿಕ ಒತ್ತಡದ ಮೂಲ. ಅಲ್ಲದೇ ತಮ್ಮ ಮಕ್ಕಳಿಗೆ ನೈತಿಕ ಸ್ಥೈರ್ಯ ಹಾಗೂ ಮಾನಸಿಕ ಧೈರ್ಯ ತುಂಬುವಷ್ಟು ತಾಳ್ಮೆ ಮತ್ತು ಸಮಯ ಬಹುತೇಕ ಪಾಲಕರು ಉಳಿಸಿಕೊಂಡಿಲ್ಲ. ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ತುಂಬುವಂತಹ ತರಗತಿಗಳು ಇಲ್ಲವಾಗಿದೆ. 
ಪೋಷಕರಿಗೆ ನಿಜವಾಗಿಯೂ ತಮ್ಮ ಮಗುವಿನ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಒತ್ತಡ ರಹಿತ ಕಲಿಕಾ ವಾತಾವರಣ ನಿರ್ಮಿಸಬೇಕು. ಕೇವಲ ಫಿಜೆಟ್ ಸ್ಪಿನ್ನರ್‍ನಂತಹ ಆಟದ ವಸ್ತುಗಳಿಂದ ಮಗುವಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಮಗುವಿಗೆ ಅಗತ್ಯವಿರುವ ನಿದ್ರೆ, ಪೌಷ್ಟಿಕ ಆಹಾರ ಮತ್ತು ಮಾನಸಿಕ ನೆಮ್ಮದಿ ನೀಡಬೇಕಾಗಿದೆ. ದೈಹಿಕ ಕಸರತ್ತಿನ ಆಟಗಳು, ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳು ಮಗುವನ್ನು ಒತ್ತಡದಿಂದ ಮುಕ್ತಗೊಳಿಸುವ ಸಾಧನಗಳಾಗಿವೆ. ಅದಕ್ಕಾಗಿ ಮಗುವನ್ನು ಯಾವಾಗಲೂ ಸಂತಸದಿಂದ ಇಡಬೇಕಾದುದು ಅನಿವಾರ್ಯ. ಮಗುಸ್ನೇಹಿ ವಾತಾವರಣ ನಿರ್ಮಾಣದಿಂದ ಮಾತ್ರ ಮಗುವನ್ನು ಸಂತಸದಿಂದ ಇಡಲು ಸಾಧ್ಯ. ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ತಮ್ಮ ಮಗುವಿನ ಮನಸಿನಾಳದಲ್ಲಿ ನಿಂತು ಯೋಚಿಸಬೇಕಾಗಿದೆ. ಮಗುವಿನ ಬೇಕು ಬೇಡಿಕೆಗಳು, ತಲ್ಲಣಗಳು, ಗೊಂದಲಗಳನ್ನು ನಿವಾರಿಸಿಬೇಕಿದೆ.  ‘ಮಗು ದೇಶದ ನಗು’ ಎಂದು ಹೇಳುವ ನಾವು ಆ ನಗುವನ್ನು ಅಳಿಸಿಹಾಕುವುದು ಸರಿಯೇ? ಯೋಚಿಸಿ  ನೋಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


ಪುಸ್ತಕಕ್ಕೆ ಬಾರ್ ಕೋಡ್ Barcode for Books ISBN

ದಿನಾಂಕ 13-9-2017ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಪುಸ್ತಕಕ್ಕೆ ಬಾರ್ ಕೋಡ್ ಏಕೆ ಬೇಕು?
ನೀವು ಪುಸ್ತಕ ಮಳಿಗೆಯೊಂದಕ್ಕೆ ಹೋಗುತ್ತೀರಿ. ನಿಮಗೆ ಬೇಕಾದ ಪುಸ್ತಕ ಹುಡುಕಾಡುತ್ತೀರಿ. ಅದರ ಬೆಲೆಗಾಗಿ ಹೊಂಬದಿ ರಕ್ಷಾಪುಟ ನೋಡುತ್ತೀರಿ. ಅಲ್ಲೊಂದು ಬಾರ್‍ಕೋಡ್ ನಿಮ್ಮನ್ನು ಆಕರ್ಷಿಸುತ್ತದೆ. ಈ ಬಾರ್‍ಕೋಡ್‍ನ ಅರ್ಥವೇನು? ಇದರಿಂದ ಓದುಗನಿಗೆ ಏನಾದರೂ ಲಾಭಗಳಿವೆಯಾ? ಇತ್ಯಾದಿ ಪ್ರಶ್ನೆಗಳು ತಲೆಯೊಳಗೆ ಸುಳಿದಾಡುತ್ತವೆ. ಹಾಗಾದರೆ ಈ ಬಾರ್‍ಕೋಡ್ ಯಾವುದು? ಇದರ ಅಗತ್ಯವೇನು? ಇದು ಏನನ್ನು ತಿಳಿಸುತ್ತದೆ? ಮುಂತಾದ ಪ್ರಶ್ನೆಗಳು ಕಾಡಿವೆಯಾ? ಹಾಗಿದ್ದರೆ ಇದನ್ನು ನೀವು ಖಂಡಿತ ಓದಲೇಬೇಕು. 
ಏನಿದು ಐ.ಎಸ್.ಬಿ.ಎನ್? : ಐ.ಎಸ್.ಬಿ.ಎನ್(ಇಂಟರ್‍ನ್ಯಾಶನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್)  ಎಂಬುದು ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ. ಇದು 10 ಅಥವಾ 13 ಸಂಖ್ಯೆಗಳನ್ನು ಹೊಂದಿರುತ್ತದೆ. ಇದು ಪ್ರಕಾಶಕರು  ಲೇಖಕರು, ಪ್ರಕಟಣೆಯ ವರ್ಷ ಹಾಗೂ ಪುಸ್ತಕದ ಬೆಲೆ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ. 
ಐ.ಎಸ್.ಬಿ.ಎನ್ ಇತಿಹಾಸ : ಆಯಾ ದೇಶದಲ್ಲಿ ಪ್ರಕಟವಾಗುವ ಪುಸ್ತಕಗಳ ಸಂಖ್ಯೆ ಮತ್ತು ಗುಣಮಟ್ಟ ಆಧರಿಸಿ ಈ ಸಂಖ್ಯೆಗಳನ್ನು ನೀಡಲಾಗುತ್ತದೆ. ಡಬ್ಲಿನ್‍ನ ಟ್ರಿನಿಟಿ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪ್ರೊಫೆಸರ್ ಆಗಿದ್ದ ‘ಗೊರ್ಡಾನ್ ಫಾಸ್ಟರ್’ ಎಂಬುವವರು 1965ರಲ್ಲಿ ವಾಣಿಜ್ಯ ಪುಸ್ತಕಗಳಿಗಾಗಿ ಸಂಖ್ಯೆ ನೀಡುವ ಪದ್ದತಿ ಜಾರಿಗೆ ತಂದರು. ಪುಸ್ತಕವನ್ನು ನೊಂದಣಿ ಮಾಡಿಸಿಕೊಂಡ ಪ್ರಕಾಶಕರಿಗೆ ಮಾತ್ರ ಆ ಪುಸ್ತಕ ಮಾರಾಟದ ಹಕ್ಕು ನೀಡಲಾಗುತ್ತಿತ್ತು. ಅಮೇರಿಕಾ ಹಾಗೂ ಯುನೈಟೆಡ್ ಕಿಂಗ್‍ಡಮ್‍ಗಳು 1966-67ರಲ್ಲಿಯೇ ಐ.ಎ.ಬಿ.ಎನ್ ಸಂಖ್ಯೆ ನೀಡುವ ಪದ್ದತಿ ರೂಢಿಸಿಕೊಂಡಿದ್ದವು. ಪ್ರಾರಂಭದಲ್ಲಿ 9 ಅಂಕೆಗಳ ಸಂಖ್ಯೆ ನೀಡಲಾಗುತ್ತಿತ್ತು. ನಂತರ 10 ಸಂಖ್ಯೆಗಳನ್ನು ನೀಡಲಾಯಿತು. 1970ರ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕತೆ ಸಾಧಿಸಲು 13 ಸಂಖ್ಯೆಗಳನ್ನು ನಿಗದಿಪಡಿಸಲಾಯಿತು. 
ಉಪಯೋಗವೇನು? : ಐ.ಎಸ್.ಬಿ.ಎನ್ ಮುಖ್ಯವಾಗಿ ಆ ಪುಸ್ತಕದ ಕತೃ, ಪ್ರಕಾಶಕರು, ಮಾರಾಟಗಾರರು, ಹಕ್ಕು ಸ್ವಾಮ್ಯತೆ, ಗ್ರಂಥಾಲಯದ ಸ್ವಾಮ್ಯತೆ, ಆನ್‍ಲೈನ್ ಮಾರುಕಟ್ಟೆಯ ಲಭ್ಯತೆ, ದೇಶ, ಭಾಷೆ, ರಕ್ಷಾಪುಟ ಹಾಗೂ ಒಳಪುಟಗಳಿಗೆ ಬಳಸಿದ ಕಾಗದದ ಮಾಹಿತಿ, ಪ್ರಕಟಣಾ ವರ್ಷ, ಬೆಲೆ ಮುಂತಾದ ಪ್ರಮುಖ ಮಾಹಿತಿಗಳನ್ನು  ಒಳಗೊಂಡಿರುತ್ತದೆ. ಇದರಿಂದ ಆನ್‍ಲೈನ್ ಮೂಲಕ ಪುಸ್ತಕ ಖರೀದಿಸುವವರಿಗೂ ಹಾಗೂ ಮಾರಾಟ ಮಾಡುವವರಿಗೂ ತುಂಬಾ ಅನುಕೂಲ. ಇದರಲ್ಲಿ ಯಾವುದೇ ರೀತಿಯ ಮೋಸ ಹಾಗೂ ವಂಚನೆ ಮಾಡಲು ಅವಕಾಶ ಇರುವುದಿಲ್ಲ. 
ಯಾರು ಅರ್ಹರು? : ಪುಸ್ತಕ ಪ್ರಕಟಣೆಯಲ್ಲಿ ತೊಡಗಿಕೊಂಡ ಲೇಖಕರು, ಪ್ರಕಟಣಾ ಸಂಸ್ಥೆಗಳು, ಸಹಕಾರಿ ಸಂಘಗಳು, ಮುದ್ರಕರು, ವಿಶ್ವ ವಿದ್ಯಾನಿಲಯಗಳು, ಸರ್ಕಾರಿ ಇಲಾಖೆಗಳು ಒಟ್ಟಾರೆ ಪುಸ್ತಕ ಪ್ರಕಟಣೆಗೆ ಸಂಬಂಧಿಸಿದ ಎಲ್ಲರೂ ಈ ಸಂಖ್ಯೆ ಪಡೆಯಬಹುದಾಗಿದೆ. ಆಯಾ ದೇಶಗಳ ನಿಯಾವಳಿಗಳ ಪ್ರಕಾರ ಈ ಸಂಖ್ಯೆ ನೀಡಲಾಗುತ್ತದೆ. 
ಎಂತಹ ಪ್ರಕಟಣೆಗೆ ಲಭ್ಯವಿದೆ
ಮುದ್ರಿತ ಸಾಮಗ್ರಿಗಳು
ಸೂಕ್ಷ್ಮಯೋಜನೆಗಳು
ಶೈಕ್ಷಣಿಕ ವೀಡಿಯೋಗಳು ಮತ್ತು ಚಲನಚಿತ್ರಗಳು
ಮಿಶ್ರಮಾಧ್ಯಮ ಪ್ರಕಟಣೆಗಳು
ಮೈಕ್ರೋ ಕಂಪ್ಯೂಟರ್ ತಂತ್ರಾಂಶ(ಶೈಕ್ಷಣಿಕ)
ಭೂಪಟ, ಅಟ್ಲಾಸ್ ಹಾಗೂ ನಕ್ಷೆಗಳು
ಎಲೆಕ್ಟ್ರಾನಿಕ್ ಪ್ರಕಟಣೆಗಳು(ಶೈಕ್ಷಣಿಕ)

ಎಂತಹ ಪ್ರಕಟಣೆಗೆ ಲಭ್ಯವಿಲ್ಲ
ಜಾಹೀರಾತು ವಸ್ತುಗಳು
ಮಾರಾಟ ಪಟ್ಟಿಗಳು, ಕೈಪಿಡಿಗಳು, ದರಪಟ್ಟಿಗಳು, ಪ್ರಚಾರ ಸಾಮಗ್ರಿಗಳು.
ವಾಲ್‍ಪೋಸ್ಟರ್, ಪ್ರಚಾರ ಪತ್ರಿಕೆಗಳು, 
ಮಾಹಿತಿ ಇಲ್ಲದ ವಸ್ತುಗಳ ಮಾರಾಟ ಬ್ರೋಷರ್
ಸಂಗೀತ, ನಾಟಕ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮ ಪಟ್ಟಿಗಳು
ಭಾಷಣಗಳು ಹಾಗೂ ಬೋಧನಾ ಸಾಮಗ್ರಿಗಳು
ದಿನಚರಿಗಳು ಹಾಗೂ ಕ್ಯಾಲೆಂಡರ್‍ಗಳು
ವಿವಿಧ ಅರ್ಜಿ ನಮೂನೆಗಳು ಹಾಗೂ ಬಣ್ಣದ ಪುಸ್ತಕಗಳು
ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

ಐ.ಎಸ್.ಬಿ.ಎನ್ ಸಂಖ್ಯೆ ಕಡ್ಡಾಯವೇ? : ಈ ಸಂಖ್ಯೆ ಪಡೆಯುವುದು ಕಡ್ಡಾಯವೇನಲ್ಲ. ಆದರೆ ಈ ಸಂಖ್ಯೆ ಪಡೆಯುವುದರಿಂದ ಆ ಉತ್ಪನ್ನವು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಠವಾಗಿ ಗುರುತಿಸಲ್ಪಡುತ್ತದೆ. ಅಲ್ಲದೇ ಉತ್ಪನ್ನದ ಮೇಲಿನ ಬಾರ್‍ಕೋಡ್ ಬಳಸಿ ಬಿಲ್ ರಚಿಸಲು ಹಾಗೂ ಮಾರಾಟದ ವಿವರ ತಿಳಿಯಲು ಸಹಕಾರಿಯಾಗಿದೆ. 
ಪ್ರತೀ ಉತ್ಪನ್ನಕ್ಕೂ ಪ್ರತ್ಯೇಕ ಸಂಖ್ಯೆ ಪಡೆಯಬೇಕೇ?: ಹೌದು ಪ್ರತೀ ಉತ್ಪನ್ನಕ್ಕೂ ಪ್ರತ್ಯೇಕ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಪ್ರತ್ಯೇಕ ರಕ್ಷಾಪುಟ(ಪೇಪರ್ ಬ್ಯಾಕ್ ಹಾಗೂ ಬಟ್ಟೆ ಹೊದಿಕೆ)ದ ಗುಣಮಟ್ಟಕ್ಕೂ ಬೇರೆ ಬೇರೆ ಸಂಖ್ಯೆ ಪಡೆಯಬೇಕು. ಅಲ್ಲದೇ ಒಂದೇ ಉತ್ಪನ್ನದ ಬೇರೆ ಬೇರೆ ಭಾಷೆಗಳ ತರ್ಜುಮೆಗೂ ಕೂಡಾ ಪ್ರತ್ಯೇಕ ಸಂಖ್ಯೆ ಪಡೆಯಬೇಕು. 
ಉಚಿತ : ಐ.ಎಸ್.ಬಿ.ಎನ್ ಸಂಖ್ಯೆ ಪಡೆಯುವುದು ಸಂಪೂರ್ಣ ಉಚಿತ. ಆದರೆ ಅಗತ್ಯ ದಾಖಲೆಗಳನ್ನು ಪಡೆಯುವವರು ಸಲ್ಲಿಸಬೇಕಷ್ಟೇ.

ಪಡೆಯುವುದು ಹೇಗೆ? : ವಿವಿಧ ದೇಶಗಳು ಐ.ಎಸ್.ಬಿ.ಎನ್ ಸಂಖ್ಯೆ ನೀಡಲು ಬೇರೆ ಬೇರೆ ಸಂಸ್ಥೆಗಳನ್ನು ನಿಯಮಿಸಿವೆ. ಭಾರತದಲ್ಲಿ “ರಾಜಾ ರಾಮ್ ಮೋಹನ್ ರಾಯ್ ನ್ಯಾಶನಲ್ ಏಜೆನ್ಸಿ ಫಾರ್ ಐ.ಎಸ್.ಬಿ.ಎನ್ ಸಂಸ್ಥೆ” ಈ ಸಂಖ್ಯೆಯನ್ನು ನೀಡುತ್ತದೆ. ಈ ಸಂಖ್ಯೆ ಪಡೆಯಲು ಇಚ್ಚಿಸುವವರು ಪುಸ್ತಕದ ಹೆಸರು, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ, ಹಕ್ಕುಸ್ವಾಮ್ಯ, ಮುದ್ರಣ ವರ್ಷ, ಮುದ್ರಣ ಸ್ಥಳ, ಪುಟಗಳು, ಬೆಲೆ, ವಿಷಯ, ಭಾಷೆ, ರಕ್ಷಾಪುಟದ ಗುಣಮಟ್ಟ, ಒಳಪುಟಗಳ ಗುಣಮಟ್ಟ, ಸಂಪರ್ಕ ವಿಳಾಸವುಳ್ಳ ಮಾಹಿತಿಯನ್ನು ಸ್ಪುಟವಾಗಿ ಬರೆದು  ಮುಖಪುಟ ಹಾಗೂ ಹಿಂಬದಿ ರಕ್ಷಾಪುಟದ ಚಿತ್ರ, ವಿಳಾಸದ ಪುರಾವೆಗಳು(ಗುರುತಿನ ಚೀಟಿ) ಹಾಗೂ ಸಾಕಷ್ಟು ಸ್ಟಾಂಪ್ ಲಗತ್ತಿಸಿದ ಸ್ವವಿಳಾಸದ ಅಂಚೆ ಲಕೋಟೆಗಳೊಂದಿಗೆ ಮೇಲಿನ ವಿಳಾಸಕ್ಕೆ ಕಳಿಸಬೇಕು. 
ಅರ್ಜಿ ಸಲ್ಲಿಸಬೇಕಾದ ವಿಳಾಸ : ರಾಜಾರಾಮ್ ಮೋಹನ್ ರಾಯ್ ಐ.ಎಸ್.ಬಿ.ಎನ್ ಏಜೆನ್ಸಿ, ಉನ್ನತ ಶಿಕ್ಷಣ ಇಲಾಖೆ, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ, ರೂಂ ನಂ 13, ಜೀವನ್ ದೀಪ ಕಟ್ಟಡ, 4ನೇ ಮಹಡಿ, ಪಾರ್ಲಿಮೆಂಟ್ ಸ್ಟ್ರೀಟ್, ನವದೆಹಲಿ-110001

ಆರ್.ಬಿ.ಗುರುಬಸವರಾಜ ಹೊಳಗುಂದಿ


ತೆಳ್ಳಗಿರಬೇಕೆಂಬ ಸಮಸ್ಯೆ Anirexia narvosa

ದಿನಾಂಕ 06-09-2017 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ



ಅನೊರೆಕ್ಸಿಯಾ ನರ್ವೋಸಾ

ತೆಳ್ಳಗಿರಬೇಕೆಂಬ ಸಮಸ್ಯೆ

28 ವಯಸ್ಸಿನ ನಾಗವೇಣಿಗೆ ನಾಲ್ಕಾರು ವರ್ಷಗಳಿಂದ ವರಾನ್ವೇಷಣೆ ಪ್ರಾರಂಭವಾಗಿದೆ. ತೆಳ್ಳಗೆ ಬೆಳ್ಳಗೆ ಅಂದವಾಗಿಯೂ ಇದ್ದಾಳೆ. ಆದರೆ ಬಂದ ಗಂಡುಗಳೆಲ್ಲ ನಿರಾಕರಿಸುತ್ತಿವೆ. ಹಾಗಂತ ನಡತೆಯಲ್ಲಾಗಲೀ ಗುಣದಲ್ಲಾಗಲೀ ಯಾವುದೇ ದೋಷವಿಲ್ಲ. ಅಂತ್ರ, ತಂತ್ರ, ಮಂತ್ರ ಇವೆಲ್ಲವೂ ಮುಕ್ತಾಯಗೊಂಡಿದ್ದು ತಂದೆ-ತಾಯಿಗಳಿಗೆ ಇದೊಂದು ದೊಡ್ಡ ಚಿಂತೆ ಶುರುವಾಗಿದೆ. ತೆಳ್ಳಗಿನ ದೇಹವೇ ನಿರಾಕರಣೆಗೆ ಕಾರಣ ಎಂದು ಇತ್ತೀಚೆಗೆ ತಿಳಿದಿದೆ.
32 ವಯಸ್ಸಿನ ಸುಮನ್‍ರಾಜ್‍ಗೆ ಸಿನೆಮಾದಲ್ಲಿ ನಟಿಸುವಾಸೆ. ಶಾಲೆ-ಕಾಲೇಜಿನಲ್ಲಿರುವಾಗಲೇ ನಾಟಕಗಳಲ್ಲಿ ನಟಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾನೆ. ಕಳೆದ ಏಳೆಂಟು ವರ್ಷಗಳಿಂದ ವಿವಿಧ ಭಂಗಿಗಳ ಫೋಟೋ ಆಲ್ಬಂ ಕೈಯಲ್ಲಿ ಹಿಡಿದು ನಿರ್ದೇಶಕರ ಹಿಂದೆ ಅಲೆದಾಡುತ್ತಿದ್ದಾನೆ. ಆದರೆ ಯಾವೊಬ್ಬ ನಿರ್ದೇಶಕರು ಒಂದು ಸಣ್ಣ ಪಾತ್ರವನ್ನೂ ನೀಡುತ್ತಿಲ್ಲ. ಕಾರಣ ಇವನ ಸಣಕಲ ದೇಹ. ತೀರಾ ತೆಳ್ಳಗಿನ ಸಪೂರ ದೇಹವೇ ಅವನಿಗೆ ಮುಳುವಾಗಿದೆ. ಇದರಿಂದ ಇತ್ತೀಚೆಗೆ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ. 
ಇತ್ತೀಚಿನ ಯುವಪೀಳಿಗೆಯಲ್ಲಿ ತೆಳ್ಳಗಿನ ದೇಹ ಹೊಂದಬೇಕೆಂಬ ಟ್ರೆಂಡ್ ಶುರುವಾಗಿದೆ. ಹದಿವಯಸ್ಸಿನಲ್ಲೇ ಇಂತಹ ಖಯಾಲಿ ಪ್ರಾರಂಭವಾಗುತ್ತದೆ. ಇದೊಂದು ತೀರಾ ಗಂಭೀರ ಸಮಸ್ಯೆ ಎಂಬುದು ಯುವಮನಸ್ಸುಗಳು ಮತ್ತು ಪಾಲಕರಿಗೆ ತಿಳಿದಿಲ್ಲ. ಇದು ‘ಅನೊರೆಕ್ಸಿಯಾ ನರ್ವೋಸಾ’ ಎಂಬ ಸಮಸ್ಯೆ ಎಂಬುದೂ ಕೂಡಾ ಬಹುತೇಕರಿಗೆ ತಿಳಿದಲ್ಲ.  
ಅನೊರೆಕ್ಸಿಯಾ ನರ್ವೋಸಾ ಎಂದರೆ ತಿನ್ನುವ ಸಮಸ್ಯೆ. ಈ ಸಮಸ್ಯೆಯಿರುವ ವ್ಯಕ್ತಿಯು ಅತೀ ಕಡಿಮೆ ದೇಹದ ತೂಕ ಹೊಂದಿದ್ದು,  ತೂಕ ಹೆಚ್ಚಾಗುವ ಬಗ್ಗೆ ವಿಪರೀತ ಭಯ ಮತ್ತು ದೇಹ ಸೌಂದರ್ಯದ ಬಗ್ಗೆ ತಪ್ಪಾದ ಗ್ರಹಿಕೆಯನ್ನು ಹೊಂದಿರುತ್ತಾರೆ. ಇವರು ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗೆ ಇದ್ದರೆ ಸುಂದರವಾಗಿ ಕಾಣುತ್ತೇವೆ ಎಂಬ ಅಂಧ ಆತ್ಮವಿಶ್ವಾಸ ಹೊಂದಿರುತ್ತಾರೆ. ಇದಕ್ಕಾಗಿ ತಮ್ಮ ಆಹಾರದ ಪ್ರಮಾಣವನ್ನು ಕಡಿಮೆ ಮಾಡಲು ಆರಂಭಿಸುತ್ತಾರೆ. ಇದನ್ನು ಸಾಧಿಸಲು ನಿಯಮಿತವಾಗಿ ಊಟವನ್ನು ತ್ಯಜಿಸಬಹುದು ಅಥವಾ ಕಾಲಕ್ರಮೇಣ ದಿನಗಟ್ಟಲೇ ಆಹಾರ ಸೇವಿಸುವುದನ್ನು ನಿಲ್ಲಿಸಬಹುದು. ತಿನ್ನುವಾಗಲೂ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಹುದು ಮತ್ತು ಅದಕ್ಕೂ ಪಶ್ಚಾತ್ತಾಪ ಪಡಬಹುದು. ದಿನ ಕಳೆದಂತೆ ಈ ನಿಯಂತ್ರಿತ ನಡವಳಿಕೆ ಮತ್ತು ತೆಳ್ಳಗಿನ ದೇಹ ಅವರಿಗೆ ಗೀಳಾಗಿ ಪರಿಣಮಿಸುತ್ತದೆ.  ಹಾಗಾಗಿ ಅವರ ದೇಹದ ತೂಕವು ಅವರ ವಯಸ್ಸು ಮತ್ತು ಎತ್ತರಕ್ಕೆ ಇರಬೇಕಾದ ಸಾಮಾನ್ಯ ತೂಕಕ್ಕಿಂತ ಕಡಿಮೆಯಾಗುತ್ತದೆ. ಇದಲ್ಲದೇ ತಮ್ಮ ದೇಹದ ಸೌಂದರ್ಯದ ಬಗ್ಗೆ ತಪ್ಪಾಗಿ ಪರಿಭಾವಿಸಿರುವುದರಿಂದ ಅತ್ಯಂತ ತೆಳ್ಳಗಿನ ದೇಹವನ್ನು ಹೊಂದಿದ್ದಾಗಲೂ ತಾವಿನ್ನೂ ದಪ್ಪಗಿದ್ದೇವೆ ಎಂದು ತಿಳಿದಿರುತ್ತಾರೆ.
ಬಹಳ ಜನ ತಿಳಿದಿರುವಂತೆ ಅನೊರೆಕ್ಸಿಯಾ ವ್ಯಕ್ತಿಯು ಆಯ್ದುಕೊಂಡ ಜೀವನ ಶೈಲಿಯ ವಿಧಾನವಲ್ಲ. ಬದಲಿಗೆ ಇದು ವ್ಯಕ್ತಿಯು ಭಾವನಾತ್ಮಕ ಒತ್ತಡದಿಂದ ಬಳಲಿದಾಗ, ತನ್ನ ಶರೀರದ ಬಗ್ಗೆ ಋಣಾತ್ಮಕ ಮತ್ತು ತಪ್ಪಾದ ಗ್ರಹಿಕೆ ಹೊಂದಿದಾಗ ಉಂಟಾಗುತ್ತದೆ. ಅವರು ತೂಕ ಹೆಚ್ಚುವ ಬಗ್ಗೆ ವಿಪರೀತವಾಗಿ ಭಯಭೀತರಾಗಿರುತ್ತಾರೆ. ಇದು ತೀವ್ರವಾದ ದೈಹಿಕ ಗುಣಲಕ್ಷಣಗಳನ್ನು ಹೊಂದಿರುವ ಗಂಭೀರ ಖಾಯಿಲೆಯಾಗಿದ್ದು ಈ ಬಗ್ಗೆ ಗಮನಹರಿಸಬೇಕಿದೆ. 
ಅನೊರೆಕ್ಸಿಯಾದ ಲಕ್ಷಣಗಳು :
ಅನೊರೆಕ್ಸಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಂದ ತಮ್ಮ ನಡವಳಿಕೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೂ ಕೆಲವು ದೈಹಿಕ ಮತ್ತು ನಡವಳಿಕೆಯಲ್ಲಾಗುವ ಬದಲಾವಣೆಯಿಂದ ಈ ಸಮಸ್ಯೆಯನ್ನು ಪತ್ತೆಹಚ್ಚಬಹುದು.
ದೈಹಿಕ ಲಕ್ಷಣಗಳು:
ದೇಹದ ತೂಕ ತೀವ್ರವಾಗಿ ಕಡಿಮೆಯಾಗುವುದು ಮತ್ತು ಅತ್ಯಂತ ತೆಳ್ಳಗಾಗುವುದು.
ತಲೆ ತಿರುಗುವಂತಹ ಅನುಭವ ಮತ್ತು ಆಯಾಸವಾಗುವುದು.
ಅತಿಯಾಗಿ ಚಳಿಯೆನಿಸುವುದು.
ಕೂದಲು ತೆಳ್ಳಗಾಗುವುದು ಮತ್ತು ಉದುರುವಿಕೆ, ಚರ್ಮ ಅತಿಯಾಗಿ ಒಣಗುವುದು.
ಋತುಚಕ್ರದಲ್ಲಿ ಏರುಪೇರು, ಕೆಲವೊಮ್ಮೆ ಋತುಚಕ್ರವೇ ನಿಂತುಹೋಗುವುದು.
ನಡುವಳಿಕೆಯಲ್ಲಾಗುವ ಬದಲಾವಣೆಗಳು:
ತೂಕ ಹೆಚ್ಚುವುದು ಮತ್ತು ಆಹಾರದಲ್ಲಿನ ಕ್ಯಾಲೋರಿ ಮಟ್ಟದ ಕುರಿತು ಚಿಂತಿತರಾಗುವುದು. 
ಮತ್ತೆ ಮತ್ತೆ ತೂಕವನ್ನು ನೋಡಿಕೊಳ್ಳುವುದು ಮತ್ತು ದೇಹದ ಆಕೃತಿಯನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಳ್ಳುವುದು.
ಮನೆಯವರು ಮತ್ತು ಸ್ನೇಹಿತರೊಂದಿಗೆ ಊಟಮಾಡುವುದನ್ನು ತಪ್ಪಿಸಿಕೊಳ್ಳುವುದು, ತಮ್ಮ ಊಟವಾಗಿದೆ ಎಂದು ಅಥವಾ ಹಸಿವಿಲ್ಲವೆಂದು ಹೇಳುವುದು.
ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಮತ್ತು ಕಿರಿಕಿರಿಗೊಳ್ಳುವುದು.
ಅತಿಯಾಗಿ ವ್ಯಾಯಾಮ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ಲ್ಯಾಕ್ಸೆಟಿವ್‍ಗಳನ್ನು ಬಳಸುವುದು.
ಅನೊರೆಕ್ಸಿಯಾಕ್ಕೆ ಕಾರಣಗಳು : 
ಅನೊರೆಕ್ಸಿಯಾ ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಇದು ಮಾನಸಿಕ, ಜೈವಿಕ ಮತ್ತು ಪರಿಸರದ ಅಂಶಗಳಿಂದ ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯನ್ನು ನಿಭಾಯಿಸುವ ಹಂತದಲ್ಲಿ ಈ ಖಾಯಿಲೆಗೆ ಒಳಗಾಗಬಹುದು. ಆಹಾರಕ್ಕೆ ಸಂಬಂಧಿಸಿದಂತೆ ಕಂಪಲ್ಸಿವ್ ನಡವಳಿಕೆಯನ್ನು ಹೊಂದಿರುತ್ತಾರೆ. ಅಂದರೆ ಆಹಾರವನ್ನು ಪ್ರತಿ ಬಾರಿ ಅಳೆಯುವುದು, ಅವನ್ನು ಸಣ್ಣ ಭಾಗಗಳನ್ನಾಗಿ ಮಾಡುವುದು ಮುಂತಾದ ನಡವಳಿಕೆಯನ್ನು ಬೆಳೆಸಿಕೊಂಡಿರುತ್ತಾರೆ. ಕೆಲವು ವೇಳೆ ಪರಿಪೂರ್ಣತ್ವ ಅಥವಾ ಅತಿಯಾದ ಸೂಕ್ಷ್ಮ ಮನೋಭಾವವು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವು ಸಂಶೋಧನೆಗಳ ಪ್ರಕಾರ ಮೆದುಳಿನಲ್ಲಿನ ಸೆರೆಟೊನಿನ್ ಅಂಶದ ಮಟ್ಟವು ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿದು ಬಂದಿದೆ.
ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಯಾರಾದರೂ ಅವರ ತೂಕದ ಬಗ್ಗೆ ಹೀಯಾಳಿಸಿದ್ದರೆ ತೆಳ್ಳಗಾಗುವ ಗೀಳನ್ನು ಬೆಳೆಸಿಕೊಂಡಿರಬಹುದು. ಹರೆಯದ ಹೆಣ್ಣುಮಕ್ಕಳಲ್ಲಿ ಸಹವರ್ತಿಗಳ ಒತ್ತಡ ಕೂಡ ಈ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ಇದರಲ್ಲಿ ಮಾಧ್ಯಮ ಮತ್ತು ಸಮಾಜದ ಪಾತ್ರವೂ ಇಲ್ಲ ಎನ್ನುವಂತಿಲ್ಲ. ಸೌಂದರ್ಯ ಮತ್ತು ತೆಳ್ಳಗಿರುವುದು ಅನುರೂಪ ಪ್ರಕ್ರಿಯೆಗಳು ಎಂಬ ತಪ್ಪು ಗ್ರಹಿಕೆಯು ಕೆಲವೊಮ್ಮೆ ಇದಕ್ಕೆ ಪ್ರಭಾವ ಬೀರುತ್ತದೆ.
ಅನೊರೆಕ್ಸಿಯಾಕ್ಕೆ ಚಿಕಿತ್ಸೆ
ಅನೊರೆಕ್ಸಿಯಾವು ದೇಹ ಮತ್ತು ಮನಸ್ಸು ಎರಡನ್ನೂ ಬಾಧಿಸುವುದರಿಂದ ಹಲವು ರೀತಿಯ ಚಿಕಿತ್ಸೆಗಳ ಅಗತ್ಯವಿದೆ. ಅನೊರೆಕ್ಸಿಯಾದಿಂದ ಬಳಲುವ ವ್ಯಕ್ತಿಯು ಅತಿಯಾದ ಅಪೌಷ್ಠಿಕತೆಗೆ ಗುರಿಯಾಗಿದ್ದರೆ ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಅವರ ದೇಹದ ತೂಕವು ಅತಿಯಾಗಿ ಕಡಿಮೆಯಾಗಿರದೇ ಮತ್ತು ವೈದ್ಯಕೀಯವಾಗಿ ಅಪಾಯದ ಸ್ಥಿತಿಯಲ್ಲಿಲ್ಲದಿದ್ದರೆ ಹೊರರೋಗಿಯಾಗಿ ಚಿಕಿತ್ಸೆಪಡೆಯಬಹುದು.
ಅನೊರೆಕ್ಸಿಯಾದ ಚಿಕಿತ್ಸೆಯು 3 ವಿಭಾಗಗಳನ್ನು ಹೊಂದಿದೆ.
ಮೊದಲನೆಯದಾಗಿ ತಿನ್ನುವ ಸಮಸ್ಯೆಯ ಕಾರಣದಿಂದ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಬೇಕು.
ಅವರಿಗೆ ಪೌಷ್ಠಿಕಾಂಶಗಳ ಚಿಕಿತ್ಸೆಯನ್ನು ನೀಡಿ ಅವರು ಆರೋಗ್ಯವಂತ ತೂಕಕ್ಕೆ ಮರಳುವಂತೆ ಮಾಡಬೇಕು. ತೂಕವನ್ನು ನಿಭಾಯಿಸಲು ಪೌಷ್ಠಿಕಾಂಶಗಳ ಕುರಿತು ಮಾಹಿತಿ ನೀಡಬೇಕು.
ತೂಕ ಹೆಚ್ಚಿಸುವುದರ ಬಗ್ಗೆ ಮತ್ತು ಅವರು ಹೊಂದಿರುವ ಭಯವನ್ನು ಹೋಗಲಾಡಿಸಲು ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಬೇಕು.
ತಜ್ಞ ವೈದ್ಯರುಗಳ ತಂಡವು ಸಕಾಲಿಕವಾಗಿ ಚಿಕಿತ್ಸೆಯನ್ನು ನೀಡುತ್ತದೆ. ಕೆಲವು ಸಂದರ್ಭದಲ್ಲಿ ಮನೆಯವರನ್ನು ಚಿಕಿತ್ಸಾ ಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಪಾಲಕರೇನು ಮಾಡಬಹುದು?
ನಿಮ್ಮಲ್ಲಿ ಯಾರಿಗಾದರೂ ಅನೊರೆಕ್ಸಿಯಾ ಕಂಡುಬಂದರೆ ಚಿಕಿತ್ಸೆ ಪಡೆಯಲು ಅವರನ್ನು ಒಪ್ಪಿಸಿ. ಈ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಬಗ್ಗೆ ರಕ್ಷಣಾತ್ಮಕವಾಗಿ ವರ್ತಿಸಬಹುದು ಅಥವಾ ಈ ತೊಂದರೆಯಿಲ್ಲ ಎಂದು ಹೇಳಬಹುದು. ಇಂತಹ ಸನ್ನಿವೇಶಗಳಲ್ಲಿ ಸಹನೆ ಮುಖ್ಯ. ಅವರಿಗೆ ತಿನ್ನಲು ಒತ್ತಾಯಿಸಬೇಡಿ. ನಿಮ್ಮ ಕಾಳಜಿಯನ್ನು ಪ್ರೀತಿಯಿಂದ ತಿಳಿಸಿ. ನೀವು ಅವರ ಜೊತೆ ಇರುವುದಾಗಿ ಭರವಸೆ ನೀಡಿ. ನಿಮ್ಮ ಮನೆಯಲ್ಲಿ ಯಾರಾದರೂ ಅನೊರೆಕ್ಸಿಯಾದಿಂದ ಬಳಲುತ್ತಿದ್ದರೆ, ಉಳಿದ ಸದಸ್ಯರು ಉತ್ತಮ ಪೌಷ್ಠಿಕ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಇದರಿಂದ ಸಮಸ್ಯೆಯಿರುವವರಿಗೆ ನೈಜ ಉದಾಹರಣೆ ದೊರೆಯುತ್ತದೆ.
ಅನೊರೆಕ್ಸಿಯಾವನ್ನು ನಿಭಾಯಿಸುವುದು
ಅನೊರೆಕ್ಸಿಯಾದ ಚಿಕಿತ್ಸೆಯು ಬಹಳ ಕಾಲದವರೆಗೆ ನಡೆಯುತ್ತದೆ.  ಇದನ್ನು ಹೋಗಲಾಡಿಸಲು ಸರಿಯಾದ ಡಯಟ್ ಮತ್ತು ಪೌಷ್ಠಿಕತೆಯ ಪ್ಲ್ಯಾನ್ ಅಳವಡಿಸಿಕೊಳ್ಳಬೇಕು. ಚಿಕಿತ್ಸಾ ಸಂದರ್ಭದಲ್ಲಿ ಮನೆಯವರು ಮತ್ತು ಸ್ನೇಹಿತರಿಂದ ದೂರವಿರಬೇಡಿ. ನಿಮ್ಮ ಆರೋಗ್ಯದ ಕಾಳಜಿಯನ್ನು ಮಾಡುವವರ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ನಿಮಗೆ ಸಮಾಧಾನವಾಗುತ್ತದೆ. ಅನೊರೆಕ್ಸಿಯಾದ ಬಗ್ಗೆ ಓದಿ ತಿಳಿದುಕೊಳ್ಳಿ. ಇದರಿಂದ ತೂಕ ಹೆಚ್ಚಾಗುವ ಬಗ್ಗೆ ನಿಮಗಿರುವ ಭಯವು ಕೇವಲ ಒಂದು ಸಮಸ್ಯೆಯ ಲಕ್ಷಣವೆಂದು ತಿಳಿಯುತ್ತದೆ. ಆರೋಗ್ಯ ಹೆಚ್ಚಿಸಲು ಇರುವ ಸಪೋರ್ಟ್ ಗ್ರೂಪುಗಳನ್ನು ಸೇರುವುದರಿಂದ ನಿಮ್ಮ ಭಯ ಕಡಿಮೆಯಾಗುತ್ತದೆ. ನಿಮ್ಮ ಆತ್ಮೀಯರನ್ನು ನಂಬಿ ಮತ್ತು ಅವರೊಂದಿಗೆ ನಿಮ್ಮ ತೊಂದರೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಕಡಿಮೆ ಮಾಡಿ ಬೇಗನೇ ಫಲ ನೀಡುತ್ತದೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ