May 16, 2016

ಬಸವಣ್ಣ ಮತ್ತು ಸಾಮಾಜಿಕ ಹೋರಾಟ

ದಿನಾಂಕ 09-05-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಕಿರುಬರಹ.


ಬಸವಣ್ಣ ಮತ್ತು ಸಾಮಾಜಿಕ ಹೋರಾಟ


ಹೆಣ್ಣಿಗಾಗಿ ಸತ್ತವರು ಕೋಟಿ,
ಮಣ್ಣಿಗಾಗಿ ಸತ್ತವರು ಕೋಟಿ,
ಹೊನ್ನಿಗಾಗಿ ಸತ್ತವರು ಕೋಟಿ,
ನಿನಗಾಗಿ ಸತ್ತವರರಾರನೂ ಕಾಣೆ ಗುಹೇಶ್ವರಾ !
ಇತಿಹಾಸದ ಪುಟಗಳನ್ನ ತಿರುವಿ ಹಾಕಿದರೆ ನಮಗೆ ಅಲ್ಲಿ ಸಿಗುವುದು ಹೆಣ್ಣು, ಹೊನ್ನು, ಮಣ್ಣಿಗಾಗಿ ಹೋರಾಡಿದ ರಾಜ-ಮಹಾರಾಜರ ಕಥೆ. ಇದನ್ನು ‘ಅಲ್ಲಮಪ್ರಭು’ ತಮ್ಮ ವಚನದಲ್ಲಿ ವಿಡಂಬನಾತ್ಮಕವಾಗಿ ಹೇಳಿರುವುದು ನಿಜಕ್ಕೂ ಸರ್ವ ಸಮ್ಮತ. ಇತಿಹಾಸದಲ್ಲಿ ತಾವು ಬಯಸಿದ ಹೆಣ್ಣಿಗಾಗಿ, ಹಣ-ಐಶ್ವರ್ಯಕ್ಕಾಗಿ, ಸಾಮ್ರಾಜ್ಯ ವಿಸ್ತರಣೆ ಅಥವಾ ಸಾಮ್ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಯುದ್ದಗಳು ನಡೆದಿವೆ. ಆದರೆ ತಮ್ಮ ಅನುಯಾಯಿಗಳಾದ ಸಾಮಂತರಿಗಾಗಲೀ, ಸೈನಿಕರಿಗಾಗಲೀ, ಜನಸಾಮಾನ್ಯರಿಗಾಗಲೀ ಯುದ್ದ ಮಾಡಿದವರಾರೂ ಇಲ್ಲವೆನ್ನಬಹುದು. ಮಾನವರೆಲ್ಲರ ಒಳಿತಿಗಾಗಿ, ಸಮಾಜದ ಹಿತಕ್ಕಾಗಿ ನಡೆದ ಹೋರಾಟಗಳು ಅತಿವಿರಳ.
ಅಂತಹ ವಿರಳಾತೀತ ಹೋರಾಟಗಳಲ್ಲಿ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಎಂದರೆ 12ನೇ ಶತಮಾನದ  ಬಸವಣ್ಣ. ಇವರ ಹೋರಾಟಗಳು ರಾಜ-ಮಹಾರಾಜರ ಹೋರಾಟಗಳಲ್ಲ, ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ನಡೆದ ಹೋರಾಟಗಳಲ್ಲ. ಅಖಂಡ ವಿಶ್ವದ ಜನರ ಕಲ್ಯಾಣವನ್ನು ಬಯಸಿ, ಸಕಲ ಜೀವಾತ್ಮರಿಗೆ ಒಳಿತನ್ನು ಉಂಟುಮಾಡುವ ಹೋರಾಟಗಳಾಗಿದ್ದವು. ಈ ಹೋರಾಟದ ಮೂಲಮಂತ್ರ `ಮಾನವೀಯತೆ` ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಜನರು ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮಾನತೆ ಸಾಧಿಸಲು ಹೋರಾಟವನ್ನು ರೂಪಿಸಿದವರು. ಜನಸಾಮಾನ್ಯರ ಕಷ್ಟ-ಸುಖ, ನೋವು-ನಲಿವುಗಳಿಗೆ ಸ್ಪಂದಿಸಿದ ಈ ಮಹಾನ್ ಚೇತನನ ಉದ್ದೇಶ ಮಾನವ ಸಮಾಜದ ಉದ್ದಾರವಾಗಿತ್ತೇ ವಿನಃ ಯಾವುದೇ ಸ್ವಾರ್ಥವಾಗಲೀ, ಅಧಿಕಾರದ ಲಾಲಸೆಯಾಗಲೀ, ಘನತೆ ಗೌರವಗಳ ಸ್ವಂತಿಕೆಯಾಗಲೀ ಇರಲಿಲ್ಲ. ಬಸವಣ್ಣನವರ ಹೋರಾಟಗಳು ಮಾನವನ ಸರ್ವಾಂಗೀಣ ಪ್ರಗತಿಗೆ ಪೂರಕವಾದ್ದರಿಂದಲೇ ಅಸಂಖ್ಯಾತ ಬೆಂಬಲಿಗರನ್ನು ಪಡೆದ ಹೋರಾಟಗಳಾಗಿದ್ದವು. 

ಬಸವಣ್ಣನವರು ವಚನಗಳ ಮೂಲಕ ತಮ್ಮ ಅನುಭಾವಗಳನ್ನು ಜನರಲ್ಲಿ ಪ್ರಚುರ ಪಡಿಸಿದರು.     ಅವರು ಜೀವಿಸಿದ್ದಂತಹ 12ನೇ ಶತಮಾನ ಹಲವಾರು ವೈರುಧ್ಯಗಳಿಂದ ಕೂಡಿದ ಕಾಲಮಾನ. ಧಾರ್ಮಿಕ ಆಚರಣೆ ಅಚಲವಾಗಿದ್ದ ಕಾಲ. ಇಂತಹ ಕಾಲಘಟ್ಟದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯ ಕಿಡಿಗಳನ್ನು ಹೊತ್ತಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಬಸವಣ್ಣನವರು ವಚನಗಳ ಮೂಲಕ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡಿದರು. ಶೋಷಿತರನ್ನೆಲ್ಲ ಸಂಘಟಿಸಿ ತಮ್ಮ ವಿಮೋಚನೆಗಾಗಿ ಹೋರಾಟಕ್ಕೆ ಹುರಿದುಂಬಿಸಿದರು. ಇವರ ಕ್ರಾಂತಿಯಲ್ಲಿ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ ಮತ್ತು ಶೋಷಣೆಯ ವಿರುದ್ದ ಹೋರಾಟದ ಧ್ವನಿಯನ್ನು ಕಾಣುತ್ತೇವೆ. ಮೇಲ್ಜಾತಿ, ಕೀಳ್ಜಾತಿಗಳ ನಡುವಿನ ಸಂಘರ್ಷ ನಿರಂತರವಾದುದು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿರುದನ್ನು ಅವರ ಅನೇಕ ವಚನಗಳಲ್ಲಿ ಕಾಣಬಹುದು. 

``ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ,
ಜಲವೊಂದೇ ಶೌಚಾಚಮನಕ್ಕೆ,
ಫಲವೊಂದೇ ಷಡುದರುಶನ ಮುಕ್ತಿಗೆ,
ಕುಲವೊಂದೇ  ತನ್ನ ತಾನರಿದವರಿಗೆ,
ನಿಲುವೊಂದೇ ಕೂಡಲ ಸಂಗಮದೇವಾ ನಿಮ್ಮನರಿದವರಿಗೆ’’  
ಎಂಬ ವಚನದಲ್ಲಿ ನೆಲ, ಜಲ, ಫಲ ಎಲ್ಲಾ ಜಾತಿ ಕುಲದವರಿಗೂ ಒಂದೇ ಎಂಬ ವಾಸ್ತವ ಸತ್ಯವನ್ನು ಹೊರಹಾಕಿದ್ದಾರೆ. ಬಸವಣ್ಣನವರು ‘ಎಲ್ಲಾ ದುರ್ಬಲ ವರ್ಗಗಳ ವಿಮೋಚನೆಯಾಗದ ಹೊರತು ನಾಡಿನ ಆಡಳಿತ ಅರ್ಥ ರಹಿತ’’ ಎಂಬ ಮೂಲತತ್ವ ಪ್ರತಿಪಾದಿಸಿದರು. 

ಮಾನವ ಸಂಘ ಜೀವಿ ಎನ್ನುತ್ತೇವೆ. ಆದರೆ ತಮ್ಮ ತಮ್ಮಲ್ಲೇ ಹೊಡೆದಾಟ, ಬಡಿದಾಟ, ಭಿನ್ನತೆ, ಮೇಲು-ಕೀಳು, ಸಿರಿತನ-ಬಡತನ, ಸ್ವಾರ್ಥತೆ ಇತ್ಯಾದಿ ಕಾರಣಗಳಿಗಾಗಿ ತನ್ನಂತೆ ಇರುವ ಇತರರನ್ನು ಪ್ರಾಣಿಗಳಿಗಿಂತ ಕೀಳಾಗಿ ಶೋಷಿಸುತ್ತಿರುವುದನ್ನು ಕಂಡರೆ, ಅವನು ಸಂಘಜೀವಿಯಾಗಿದ್ದುಕೊಂಡು ಹೀಗೇಕೆ ವರ್ತಿಸುತ್ತಾನೆ ಎಂಬುದೇ ಅಚ್ಚರಿಯ ವಿಷಯ. ಯಾವಾಗ ವ್ಯಕ್ತಿಯು ತಾನೊಬ್ಬನೇ ಶ್ರೇಷ್ಠ, ಇತರರು ಕನಿಷ್ಠವೆಂದು ಭಾವಿಸುತ್ತಾನೋ ಆಗಲೇ ಅವನು ಇತರರನ್ನು ಶೋಷಿಸಲು ಪ್ರಾರಂಭಿಸುತ್ತಾನೆ. 
``ಪ್ರಬಲ ಶಕ್ತಿಗಳು ಅತಿಕ್ರಮಣ ಮಾಡಿದಾಗ ದುರ್ಬಲ ಶಕ್ತಿಗಳು ಇಲ್ಲವಾಗುತ್ತವೆ’’ ಎಂಬ ‘ಡಾರ್ವಿನ್’ನ ಹೇಳಿಕೆ ಸರ್ವಕಾಲಿಕ ಸರ್ವಸಮ್ಮತ ಎಂಬುದನ್ನು ಇತಿಹಾಸ ಸಾರುತ್ತದೆ. ಪ್ರಬಲ ಜಾತಿಗಳು ದುರ್ಬಲ ಜಾತಿಗಳನ್ನು, ಆರ್ಥಿಕ ಸಬಲರು ಆರ್ಥಿಕ ದುರ್ಬಲರನ್ನು, ಮೇಲ್ವರ್ಗ ಕೆಳವರ್ಗವನ್ನು ಶೋಷಿಸುತ್ತಾ ಬಂದಿರುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಈ ದುಷ್ಟಶಕ್ತಿಗಳ ಪ್ರಾಬಲ್ಯ ಹೆಚ್ಚಾದಾಗಲೆಲ್ಲಾ ಒಬ್ಬೊಬ್ಬ ಅವತಾರ ಪುರುಷರು ಉದಯಿಸಿರುವುದನ್ನು ಪುರಾಣಗಳು ತಿಳಿಸುತ್ತವೆ. ಅಂತೆಯೇ 12ನೇ ಶತಮಾನದಲ್ಲಿನ ಜಾತಿ ಸಂಘರ್ಷವನ್ನು ತೊಡೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಉದಿಸಿ ಬಂದರು. 
ಮುಖ್ಯವಾಗಿ ನಾವಿಲ್ಲಿ ಚಿಂತನೆ ಮಾಡಬೇಕಾಗಿರುವುದು ಬಸವಣ್ಣನವರ ವಿಭಿನ್ನ ರೀತಿಯ ಆದರೆ ನಿರ್ದಿಷ್ಟ ಉದ್ದೇಶದ ಹೋರಾಟಗಳ ಬಗ್ಗೆ. ಬಸವಣ್ಣನವರು ಧಾರ್ಮಿಕ ಹಿನ್ನಲೆಯಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಹೋರಾಟ ಮಾಡಿದರು.
ಜಾತಿ ಪಂಥಗಳು ಅಗ್ರಸ್ಥಾನವಾದ ನಮ್ಮ ದೇಶದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ಭೇಧಗಳು ಮಾನವ ಕಲ್ಪಿತ ಎಂಬ ಕಟುಸತ್ಯ ನಮಗಿದ್ದರೂ, ಅವು ನಮ್ಮ ರಾಜಕೀಯ, ಸಾಮಾಜಿಕ , ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲ ಶಕ್ತಿಗಳಾಗಿವೆ. ಇಂಥಹ ವರ್ಣ, ವರ್ಗ ಪ್ರಧಾನ ಸಮಾಜದಲ್ಲಿ ಮಾನವೀಯತೆಗೆ ಜಾಗವಿಲ್ಲದಿರುವ ಸಂದರ್ಭದಲ್ಲಿ ಮನುಕುಲದ ಹೋರಾಟಕ್ಕಿಳಿದು ಕಷ್ಟನಷ್ಟ ಲೆಕ್ಕಿಸದೇ, ತಮ್ಮ ಧ್ಯೇಯಕ್ಕೆ, ಸಿದ್ದಾಂತಕ್ಕೆ ಬದ್ಧರಾಗಿದ್ದುಕೊಂಡು ಹೋರಾಡಿದ ಬಸವಣ್ಣನವರು ಎಂದೆಂದೂ  ಆದರ್ಶಪ್ರಾಯರಾಗಿ ನಿಲ್ಲುತ್ತಾರೆ. ಈ ಮಹನೀಯನಲ್ಲಿ ಇರುವ ಮಾನವೀಯ ಮೌಲ್ಯಗಳು, ಶೋಷಿತ ವರ್ಗ/ವರ್ಣ ವ್ಯವಸ್ಥೆಯ ವಿರುದ್ದ ಇವರು ಸಂಘಟಿಸಿದ ಹೋರಾಟ, ಮಾನವ ಜನಾಂಗಕ್ಕೆ ನೀಡಿದ ಸಂದೇಶಗಳು ಇಂದು ಸಮಾಜ ಸೇವಕರಾಗಬೇಕೆನ್ನುವವರಿಗೆ ದಾರಿದೀಪವಾಗಿವೆ. 
       ಪ್ರತಿವರ್ಷ ಬಸವಣ್ಣನವರ ಜಯಂತಿಯಂದು ಮಾತ್ರ ಅವರ ತತ್ವಾದರ್ಶಗಳನ್ನು ಕೊಂಡಾಡದೇ ಪ್ರತಿನಿತ್ಯ ನಮ್ಮ ಬದುಕಿನ ಒಂದು ಭಾಗವಾಗಿ ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವಣ್ಣ ಜನಿಸಿದ ನಾಡಿನಲ್ಲಿ ನಾವು ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಪ್ರತಿ ಸಂಧರ್ಭದಲ್ಲೂ ಅವರ ವಿಚಾರಗಳನ್ನು ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುತ್ತಾ ಅವರ ತತ್ವಗಳನ್ನು, ಜೀವನಾದರ್ಶಗಳನ್ನು ಪಾಲಿಸುತ್ತಾ ಸಾಗೋಣ. 
ಆರ್.ಬಿ.ಗುರುಬಸವರಾಜ 

No comments:

Post a Comment