September 25, 2017

ಮಕ್ಕಳಿಗೆ ಒತ್ತಡ ಬೇಕೇ? Stress in children

ದಿನಾಂಕ 25-9-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಮಕ್ಕಳಿಗೆ ಒತ್ತಡ ಬೇಕೇ?

ಇತ್ತೀಚಿಗೆ ತರಬೇತಿಗೆಂದು ಮೈಸೂರಿಗೆ ಹೋಗಿದ್ದೆ. ಮಾರ್ಕೆಟ್‍ನಲ್ಲಿ ಸುತ್ತಾಡುತ್ತಿರುವಾಗ ಬಹುತೇಕ ಮಾರಾಟಗಾರರು ಕೈಯಲ್ಲಿ ಆಟಿಕೆಯೊಂದನ್ನು ಹಿಡಿದು ‘ನೂರಕ್ಕೊಂದು ನೂರುಕ್ಕೊಂದು, ತಿರುಗಿಸಿ ನೋಡಿ, ಟೆನ್ಶನ್ ಕಡಿಮೆ ಮಾಡ್ಕೊಳ್ಳಿ’ ಎಂದು ಕೂಗುತ್ತಿದ್ದರು.  ಅಲ್ಲಿಗೆ ಬಂದ ಪ್ರೌಢಶಾಲಾ ಹುಡುಗರ ಗುಂಪೊಂದು ನನ್ನನ್ನು ಆಕರ್ಷಿಸಿತು. ಅವರನ್ನು ಹಿಂಬಾಲಿಸಿದೆ. ಒಬ್ಬ ಹುಡುಗ ಕೈಯಲ್ಲಿ ಹಿಡಿದ ಆಟಿಕೆಯನ್ನು ತೋರಿಸಿ “ಅಂಕಲ್ ಇಂತಹ ಬಣ್ಣದ್ದು ಇದ್ದರೆ ಕೊಡಿ” ಎಂದು ಕೇಳುತ್ತಾ ಅಂಗಡಿಯಿಂದ ಅಂಗಡಿಯಿಂದ ಅಲೆದಾಡುತ್ತಿದ್ದರು. ಯಾವ ಅಂಗಡಿಯಲ್ಲೂ ಅವರಿಗೆ ಬೇಕಾದ ಬಣ್ಣದ ಆಟಿಕೆ ದೊರೆಯಲಿಲ್ಲ. ನನಗೆ ಕುತೂಹಲ ಹೆಚ್ಚಿತು. ಆ ಗುಂಪಿನ ಒಬ್ಬ ವಿದ್ಯಾರ್ಥಿಯನ್ನು ಈ ಬಗ್ಗೆ ಕೇಳಿದೆ. ‘ಅಂಕಲ್ ಇದು ಫಿಜೆಟ್ ಸ್ಪಿನ್ನರ್ ಎಂಬ ಆಟಿಕೆ. ಇದನ್ನು ಬೆರಳಲ್ಲಿ ಹಿಡಿದು ತಿರುಗಿಸಿದರೆ ಒತ್ತಡ ಕಡಿಮೆಯಾಗುತ್ತದೆಯಂತೆ. ಅದರಲ್ಲೂ ಆ ಹುಡುಗನ ಕೈಯಲ್ಲಿರುವ ಬಣ್ಣದ್ದು ತುಂಬಾ ಬೇಗನೇ ಒತ್ತಡ ಕಡಿಮೆ ಮಾಡುತ್ತದೆಯಂತೆ. ಇಲ್ಲೆಲ್ಲೂ ಅಂತಹದ್ದು ದೊರೆಯುತ್ತಿಲ್ಲ’ ಎಂದು ಸಾದ್ಯಂತ ವಿವರಿಸಿದ.
ಅವನೊಂದಿಗೆ ಮಾತನಾಡಿ ಮುಂದೆ ಹೆಜ್ಜೆ ಹಾಕಿದೆ. ಅವನ ಹೇಳಿಕೆಯು ಮನದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಮಕ್ಕಳಲ್ಲಿ ಇಷ್ಟೊಂದು ಗಂಭೀರವಾದ ಒತ್ತಡ ಇದೆಯಾ? ಈ ಒತ್ತಡಕ್ಕೆ ಕಾರಣಗಳೇನು? ಒತ್ತಡ ಹೋಗಲಾಡಿಸಲು ಫಿಜೆಟ್ ಸ್ಪಿನ್ನರ್‍ನಂತಹ ಕೇವಲ ಒಂದು ಆಟಿಕೆಯಿಂದ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿ ಬೃಹದಾಕಾರ ತಾಳತೊಡಗಿದವು. 
ಮನಸ್ಸು ಹಿಂದಕ್ಕೆ ಓಡಿತು. ಇದೇ ಜೂನ್ 22 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 214 ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣ ಸುದ್ದಿಯತ್ತ ಮನಸ್ಸು ಕೇಂದ್ರಿಕೃತಗೊಂಡಿತು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ||ಕೆ.ಜಿ.ಜಗದೀಶ ಅವರು ಈ ಬಗ್ಗೆ ಮಾಹಿತಿ ನೀಡಿದ ವರದಿ ಪ್ರಕಟವಾಗಿತ್ತು. 2014 ರಿಂದ ಒಟ್ಟು 214 ನಾಪತ್ತೆಯಾಗಿದ್ದು, ಅವರಲ್ಲಿ 200 ಮಕ್ಕಳು ಪತ್ತೆಯಾಗಿದ್ದರು. ಅವರಲ್ಲಿ ಬಹುತೇಕ ಮಕ್ಕಳು ಶಾಲೆ ಹಾಗೂ ಪಾಲಕರ ಕಲಿಕೆಯ ಒತ್ತಡದಿಂದ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದರು. 
ಅಲ್ಲದೇ ಇದೇ ಜುಲೈ 20ಕ್ಕೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾಳ ಸಾವು ಇಡೀ ದೇಶದಾದ್ಯಂತ ಪೋಷಕರಲ್ಲಿ ಒಂದು ರೀತಿಯ ನಡುಕವನ್ನುಂಟು ಮಾಡಿತ್ತು. ಇದು ಮರೆಯುವ ಮುನ್ನವೇ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಆತ್ಮಹತ್ಯೆಗಳು ನಡೆದಿವೆ. ಆಗಸ್ಟ್ 17 ರಂದು ನಗರದ ಪ್ರೌಢದೇವ ಎಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ 18 ವರ್ಷದ ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆಗಸ್ಟ್ 22 ರಂದು ನಗರದ ಚಪ್ಪರದಹಳ್ಳಿಯಲ್ಲಿನ ಬಿ.ಸಿ.ಎಂ ಬಾಲಕಿಯರ ಹಾಸ್ಟಲ್‍ನಲ್ಲಿ 20 ವರ್ಷದ ಕಾವ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇದರ ಜೊತೆಗೆ ಮತ್ತೊಂದು ಷಾಕಿಂಗ್ ನ್ಯೂಸ್ ಎಂದರೆ ಆಗಸ್ಟ್ 30 ಕ್ಕೆ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ 18 ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ಎರಡನೇ ಅಂತಸ್ತಿನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತ ಚೆನ್ನೈನಲ್ಲಿ ನೀಟ್ ವಿರುದ್ದ ಕಾನೂನು ಹೋರಾಟ ನಡೆಸಿದ್ದ 18 ವರ್ಷದ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಈ ಮೇಲಿನ ಐದು ಪ್ರಕರಣಗಳಲ್ಲಿನ ನತದೃಷ್ಟರು ವಿದ್ಯಾರ್ಥಿನಿಯರು ಎನ್ನುವುದು ವಿಶೇಷ. ಅದರಲ್ಲೂ ಎಲ್ಲರೂ 15 ರಿಂದ 20 ವರ್ಷದೊಳಗಿನವರು ಎನ್ನುವುದು ಇನ್ನೂ ಆತಂಕ.
ಈ ಎಲ್ಲಾ ಘಟನೆ ಹಾಗೂ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಕ್ಕಳು ನಿಜಕ್ಕೂ ಒತ್ತಡದಲ್ಲಿದ್ದಾರೆ ಎನ್ನಿಸಿದೇ ಇರದು. ಇಂತಹ ಒತ್ತಡಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ಅವು ನೇರವಾಗಿ ಪಾಲಕರ ಸುತ್ತ ಸುತ್ತತೊಡಗುತ್ತವೆ. ಹೌದು ಪಾಲಕರಾದ ನಾವು ಇತ್ತೀಚಿಗೆ ಕಲಿಕೆಯ ಹೆಸರಿನಲ್ಲಿ ಮಕ್ಕಳಿಗೆ ಒತ್ತಡ ನೀಡುತ್ತಿದ್ದೇವೆ. ನಮ್ಮ ಮಗು ಹೆಚ್ಚು ಅಂಕ ಗಳಿಸಬೇಕು ಎಂಬ ಅತಿಯಾದ ನಿರೀಕ್ಷೆಯೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಮೂಲ ಕಾರಣ. ಅಲ್ಲದೇ ಮಕ್ಕಳನ್ನು ಭವಿಷ್ಯದಲ್ಲಿ ಏನಾಗಿ ರೂಪಿಸಬೇಕೆಂಬ ನಿರ್ದಿಷ್ಟತೆ ಬಹುತೇಕ ಪಾಲಕರಿಗೆ ಇಲ್ಲ. 
ಬೆಳಿಗ್ಗೆ ನಿದ್ದೆಯಿಂದ ಮಗುವನ್ನು ಬಲವಂತವಾಗಿ ಎಬ್ಬಿಸಿ, ಜಿಮ್, ಕರಾಟೆ, ಏರೋಬಿಕ್ಸ್, ಸಂಗೀತ, ಯೋಗ, ಟ್ಯೂಶನ್ ಇತ್ಯಾದಿ ಕ್ಲಾಸ್‍ಗಳಿಗೆ ಕಳಿಸುತ್ತೇವೆ. ಅಲ್ಲಿಂದ ಬಂದ ಮಗುವಿಗೆ ದಣಿವಾಗಿದೆಯೋ ಇಲ್ಲವೋ ತಿಳಿಯದೇ ಅವಸರವಾಗಿ ಸ್ನಾನ ಮಾಡಿಸಿ ಬಲವಂತವಾಗಿ ಬಾಯಿಗೆ ಒಂದಿಷ್ಟು ಉಪಹಾರ ತುರುಕಿ, ಶಾಲೆಗೆ ಕಳಿಸುತ್ತೇವೆ. ಯಾಕೆಂದರೆ ಎಲ್ಲದರಲ್ಲೂ ನಮ್ಮ ಮಗುವೇ ಫಸ್ಟ್ ಬರಬೇಕು, ಆ ಮಗುವಿನ ಫೋಟೋದ ಜೊತೆಗೆ ನಮ್ಮ ಫೋಟೋ ಕೂಡಾ ಮಾಧ್ಯಮಗಳಲ್ಲಿ ಹರಿದಾಡಬೇಕೆಂಬ ಎಂಬ ಅತಿಯಾದ ನಿರೀಕ್ಷೆ. 
ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೇಗಿದೆ? ಯಾವ ವಿಷಯದಲ್ಲಿ ಮಗುವಿಗೆ ತೊಂದರೆ ಇದೆ? ಭವಿಷ್ಯದ ಬಗ್ಗೆ ಮಗುವಿನ ಕನಸುಗಳೇನು? ಆ ಕನಸನ್ನು ಸಾಕಾರಗೊಳಿಸಲು ನಮ್ಮ ಪಾತ್ರವೇನು? ಎಂಬುದರ ಬಗ್ಗೆ ಬಹುತೇಕ ಪಾಲಕರು ಅರಿಯದಿರುವುದೇ ಮಕ್ಕಳಲ್ಲಿ ಒತ್ತಡ ಹೆಚ್ಚಲು ಕಾರಣವಾಗಿದೆ. 
ಮಗುವಿನ ಆಸಕ್ತಿಯಂತೆ ಓದಿಸಲು ಆಗುವುದಿಲ್ಲ ಎಂಬುದು ಬಹುತೇಕ ಪಾಲಕರ ಅಭಿಮತ. ಇದೇ ಪಾಲಕರು ಮಾಡುವ ಬಹು ದೊಡ್ಡ ತಪ್ಪು. ಅದೇನು ಚಿಕ್ಕ ಮಗು. ಅದಕ್ಕೇನೂ ಗೊತ್ತಾಗೋದೇ ಇಲ್ಲ. ನಾವು ಹೇಳಿದಂತೆ ಕೇಳುತ್ತದೆ ಮತ್ತು ಕೇಳಬೇಕು ಎನ್ನುವ ಮನೋಧೊರಣೆಯೇ ಮಕ್ಕಳ ಮಾನಸಿಕ ಒತ್ತಡದ ಮೂಲ. ಅಲ್ಲದೇ ತಮ್ಮ ಮಕ್ಕಳಿಗೆ ನೈತಿಕ ಸ್ಥೈರ್ಯ ಹಾಗೂ ಮಾನಸಿಕ ಧೈರ್ಯ ತುಂಬುವಷ್ಟು ತಾಳ್ಮೆ ಮತ್ತು ಸಮಯ ಬಹುತೇಕ ಪಾಲಕರು ಉಳಿಸಿಕೊಂಡಿಲ್ಲ. ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ತುಂಬುವಂತಹ ತರಗತಿಗಳು ಇಲ್ಲವಾಗಿದೆ. 
ಪೋಷಕರಿಗೆ ನಿಜವಾಗಿಯೂ ತಮ್ಮ ಮಗುವಿನ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಒತ್ತಡ ರಹಿತ ಕಲಿಕಾ ವಾತಾವರಣ ನಿರ್ಮಿಸಬೇಕು. ಕೇವಲ ಫಿಜೆಟ್ ಸ್ಪಿನ್ನರ್‍ನಂತಹ ಆಟದ ವಸ್ತುಗಳಿಂದ ಮಗುವಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಮಗುವಿಗೆ ಅಗತ್ಯವಿರುವ ನಿದ್ರೆ, ಪೌಷ್ಟಿಕ ಆಹಾರ ಮತ್ತು ಮಾನಸಿಕ ನೆಮ್ಮದಿ ನೀಡಬೇಕಾಗಿದೆ. ದೈಹಿಕ ಕಸರತ್ತಿನ ಆಟಗಳು, ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳು ಮಗುವನ್ನು ಒತ್ತಡದಿಂದ ಮುಕ್ತಗೊಳಿಸುವ ಸಾಧನಗಳಾಗಿವೆ. ಅದಕ್ಕಾಗಿ ಮಗುವನ್ನು ಯಾವಾಗಲೂ ಸಂತಸದಿಂದ ಇಡಬೇಕಾದುದು ಅನಿವಾರ್ಯ. ಮಗುಸ್ನೇಹಿ ವಾತಾವರಣ ನಿರ್ಮಾಣದಿಂದ ಮಾತ್ರ ಮಗುವನ್ನು ಸಂತಸದಿಂದ ಇಡಲು ಸಾಧ್ಯ. ಪ್ರತಿಯೊಬ್ಬ ಪಾಲಕರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ತಮ್ಮ ಮಗುವಿನ ಮನಸಿನಾಳದಲ್ಲಿ ನಿಂತು ಯೋಚಿಸಬೇಕಾಗಿದೆ. ಮಗುವಿನ ಬೇಕು ಬೇಡಿಕೆಗಳು, ತಲ್ಲಣಗಳು, ಗೊಂದಲಗಳನ್ನು ನಿವಾರಿಸಿಬೇಕಿದೆ.  ‘ಮಗು ದೇಶದ ನಗು’ ಎಂದು ಹೇಳುವ ನಾವು ಆ ನಗುವನ್ನು ಅಳಿಸಿಹಾಕುವುದು ಸರಿಯೇ? ಯೋಚಿಸಿ  ನೋಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment