November 27, 2017

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ Children Development and Socialization

ದಿನಾಂಕ 27-11-2017ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ಮಕ್ಕಳ ಬೆಳವಣಿಗೆ ಮತ್ತು ಸಾಮಾಜಿಕರಣ


ಎಂಟನೇ ತರಗತಿಯಲ್ಲಿ ಓದುತ್ತಿರುವ ಕಾರ್ತೀಕ ಯಾವಾಗಲೂ ತಾನಾಯಿತು, ತನ್ನ ಓದುವ ಬರೆಯುವ ಕೆಲಸವಾಯಿತು ಎನ್ನುವಂತೆ ಇದ್ದಾನೆ. ರಜೆಯ ದಿನ ಅಪರೂಪಕ್ಕೆ ಎಂಬಂತೆ ವಠಾರದ ಮಕ್ಕಳೊಂದಿಗೆ ಆಟವಾಡಲು ಹೊರಗೆ ಹೋಗುತ್ತಾನೆ. ಸ್ವಲ್ಪ ಹೊತ್ತಿನಲ್ಲೇ ಜಗಳದೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಇತರೆ ಮಕ್ಕಳೊಂದಿಗೆ ಹೊಂದಿಕೊಂಡು ಆಡುವ ಗುಣ ತಿಳಿದಿಲ್ಲ. ಮನೆಗೆ ಯಾರೇ ಅಥಿತಿಗಳು ಬಂದರೂ ಅವರೊಂದಿಗೆ ಮಾತನಾಡುವುದಿಲ್ಲ. ಚಿಕ್ಕ ಚಿಕ್ಕ ಸಾಮಾನುಗಳನ್ನು ತರಲು ಅಂಗಡಿಗೆ ಕಳಿಸಿದರೆ ಸರಿಯಾಗಿ ಲೆಕ್ಕಾಚಾರ ಮಾಡದೇ ಕೊಟ್ಟ ಹಣವನ್ನೆಲ್ಲಾ ಅಂಗಡಿಯವನಿಗೆ ಕೊಟ್ಟು ಬರುತ್ತಾನೆ. ಈ ಬಗ್ಗೆ ಕೇಳಿದರೆ ರೇಗುತ್ತಾನೆ. ನಾನು ಇನ್ಮುಂದೆ ಅಂಗಡಿಗೆ ಹೋಗುವುದಿಲ್ಲ ಎಂದು ಹೆದರಿಸುತ್ತಾನೆ. ಮನೆಯ ಹಿರಿಯರಿಗೆ ಗೌರವವನ್ನೇ  ಕೊಡುವುದಿಲ್ಲ. ಇವನು ಹೀಗೇಕೆ ಎಂಬುದೇ ತಾಯಿಯ ಚಿಂತೆ.
ಆರನೇ ತರಗತಿಯಲ್ಲಿ ಓದುವ ಮೊನಿಕ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಮನೆಯವರು ಕರೆದ ತಕ್ಷಣ ಓಡಿಹೋಗಿ ಅವರು ಹೇಳಿದ ಕೆಲಸ ಮಾಡುತ್ತಾಳೆ. ರಜೆಯ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಗೆಳೆಯರೊಂದಿಗೆ ಆಟವಾಡುತ್ತಾಳೆ. ಅಂಗಡಿಗೆ ಹೋದರೆ ನಿಖರವಾಗಿ ಲೆಕ್ಕಾಚಾರ ಮಾಡಿ ಸರಿಯಾದ ಹಣ ನೀಡುತ್ತಾಳೆ. ಅಂಗಡಿವನಿಗೆ ಏನಾದರೂ ಒಂದು ತರಲೆ ಪ್ರಶ್ನೆ ಕೇಳಿ ಅದಕ್ಕೆ ತಾನೇ ಸೂಕ್ತ ಉತ್ತರ ನೀಡಿ ಬಹುಮಾನ ಪಡೆಯುತ್ತಾಳೆ. ಮನೆಯವರಿಗೆ ಅಷ್ಟೇ ಅಲ್ಲ ವಠಾರದ ಎಲ್ಲಾ ಹಿರಿಯರಿಗೂ ಗೌರವ ನೀಡುತ್ತಾಳೆ. ಅವರು ಹೇಳಿದ ಮಾತು ಕೇಳುತ್ತಾಳೆ. ಎಲ್ಲರಿಗೂ ಮೊನಿಕ ಎಂದರೆ ಪಂಚಪ್ರಾಣ.
ಕಾರ್ತೀಕ ಮತ್ತು ಮೊನಿಕ ಇಬ್ಬರೂ ಒಂದೇ ವಠಾರದವರಾದರೂ ಇಬ್ಬರ ಮನೆಯ ಪರಿಸರ ಬೇರೆ ಬೇರೆ. ಕಾರ್ತೀಕನನ್ನು ಅವರ ತಂದೆ ತಾಯಿ ಹೆಚ್ಚಾಗಿ ಮನೆಯಿಂದ ಹೊರಗೆ ಕಳಿಸುವುದಿಲ್ಲ. ಹಾಗಾಗಿ ಅವನಿಗೆ ಲೋಕಜ್ಞಾನ ತುಂಬಾ ಕಡಿಮೆ. ಮೊನಿಕ ದಿನದ ಹೆಚ್ಚು ಸಮಯ ಮನೆಯಿಂದ ಹೊರಗೆ ಇರುತ್ತಾಳೆ. ವಠಾರದ ಮಕ್ಕಳೊಂದಿಗೆ ಆಟವಾಡುತ್ತಾಳೆ. ಯಾರೊಂದಿಗೆ ಹೇಗಿರಬೇಕೆಂಬುದನ್ನು ಚೆನ್ನಾಗಿ ತಿಳಿದಿದ್ದಾಳೆ. ಆದ್ದರಿಂದ ಅವಳ ವ್ಯವಹಾರ ಜ್ಞಾನ ಚೆನ್ನಾಗಿದೆ. ಇದನ್ನೇ ಸಾಮಾಜಿಕರಣ ಎನ್ನುವುದು. ಸಾಮಾಜಿಕರಣಗೊಂಡ ಮಕ್ಕಳು ಎಲ್ಲರೊಂದಿಗೆ ಕೂಡಿ ಆಡುವ, ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿರುತ್ತಾರೆ.
ಸಾಮಾಜಿಕರಣ; ಹಾಗಂದರೇನು? : ಸಂಸ್ಕøತಿಯ ಭಾಗವಾಗುವುದನ್ನು ಕಲಿಯುವ ಸಾಮಾಜಿಕ ಪ್ರಕ್ರಿಯೆಯೇ ಸಾಮಾಜಿಕರಣ. ಸಾಮಾಜಿಕತೆಯ ಮೂಲಕ ತಮ್ಮ ಸಂಸ್ಕøತಿಯ ಭಾಷೆ, ದೈನಂದಿನ ಜೀವನದಲ್ಲಿ ತಮ್ಮ ಪಾತ್ರದ ಅಗತ್ಯತೆ ಮತ್ತು ಸಮಾಜದ ನಿರೀಕ್ಷೆಯ ಬಗ್ಗೆ ಕಲಿಯುವುದೇ ಸಾಮಾಜಿಕರಣ.
ಸಾಮಾಜಿಕ ಪ್ರಕ್ರಿಯೆಯು ವ್ಯಕ್ತಿಯು ತಮ್ಮ ಸಂಸ್ಕøತಿಯ ಮೂಲಕ ಸಂಪೂರ್ಣ ಮಾನವನಾಗುವ ಪ್ರಕ್ರಿಯೆಯಾಗಿದೆ. ವ್ಯಕ್ತಿಯೊಬ್ಬ ಸಾಮಾಜಿಕರಣಗೊಳ್ಳದೇ ಹೋದರೆ ಸಾಮಾಜಿಕ ಕಂಟಕನಾಗಿ ಪರಿವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಮಕ್ಕಳಲ್ಲಿ ಸಾಮಾಜಿಕರಣದ ಅಗತ್ಯತೆ
“ಓಣಿಯ ಮಗು ಬೆಳೆಯಿತು, ಕೋಣಿಯ ಮಗು ಕೊಳೆಯಿತು” ಎಂಬ ಗಾದೆ ಮಾತು ಸಾಮಾಜಿಕರಣದ ಮಹತ್ವವನ್ನು ಒತ್ತಿ ಹೇಳುತ್ತದೆ. ಸಾಮಾಜಿಕರಣವು ಜೀವನಪರ್ಯಂತ ನಡೆಯುವ ಪ್ರಕ್ರಿಯೆಯಾದರೂ ಬಾಲ್ಯದ ಸಾಮಾಜಿಕರಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುತ್ತೇವೆ. ಭವಿಷ್ಯದ ಪ್ರಜೆಗಳು ಉತ್ತಮರಾಗಲು ಇಂದೇ ಸರಿಯಾದ ತರಬೇತಿ ಅಗತ್ಯ. ಈ ತರಬೇತಿಯೇ ಮಕ್ಕಳನ್ನು ಸಾಮಾಜಿಕರಣಗೊಳಿಸುವುದು. ಮಕ್ಕಳನ್ನು ಹೊರಗಿನ ಪ್ರಪಂಚಕ್ಕೆ ಬಿಡುವುದರಿಂದ ಅವರು ತಮ್ಮ ಸಮವಯಸ್ಕರೊಂದಿಗೆ ಸಂವಹನ ಮಾಡುವ ಕೌಶಲ್ಯ ಬೆಳೆಯುತ್ತದೆ ಮತ್ತು ಇತರೆ ಮಕ್ಕಳೊಂದಿಗೆ ಆಟವಾಡುವ ಮೂಲಕ ದೈಹಿಕ ಕೌಶಲ್ಯಗಳನ್ನು ಕಲಿಯುತ್ತಾರೆ. ತಮ್ಮ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ತಾವೇ ಮೈಗೂಡಿಸಿಕೊಳ್ಳುತ್ತಾರೆ.
ಗುಂಪು ಆಟಗಳಲ್ಲಿ ಭಾಗವಹಿಸುವ ಮೂಲಕ ಇತರರ ಆಲೋಚನೆಗಳನ್ನು ಗ್ರಹಿಸುವ ಹಾಗೂ ತನ್ನ ಆಲೋಚನೆಗಳನ್ನು ಇತರರಿಗೆ ತಿಳಿಸುವ ಕೌಶಲ್ಯ ಗಳಿಸುತ್ತಾರೆ. ಜೊತೆಗೆ ಉತ್ತಮ ಸಂವಹನ ಕೌಶಲ್ಯದಿಂದ ಎಲ್ಲರೊಂದಿಗೆ ಬೆರೆಯುವ ಗುಣ ಕಲಿಯುತ್ತಾರೆ. ತಾವೂ ಸಮಾಜದ ಒಂದು ಭಾಗ. ಹಾಗಾಗಿ ಸಮುದಾಯ/ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು ಎಂದು ಅರಿಯುತ್ತಾರೆ. ಸಾಮಾಜಿಕರಣವು ಮಕ್ಕಳಲ್ಲಿ ಭಾವನಾತ್ಮಕ, ಸಾಮಾಜಿಕ ಮತ್ತು ದೈಹಿಕ ಕೌಶಲ್ಯಗಳನ್ನು ಬೆಳೆಸುವ ಮೂಲಕ ಸರ್ವಾಂಗೀಣ ಅಭಿವೃದ್ದಿಗೆ ಸಹಾಯವಾಗುತ್ತದೆ.
ಮಕ್ಕಳು ಸಾಮಾಜಿಕರಣಕ್ಕೆ ಒಳಪಡುವುದರಿಂದ ಇತರರ ಯೋಗಕ್ಷೇಮ ವಿಚಾರಿಸುವುದನ್ನು ಕಲಿಯುತ್ತಾರೆ. ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸಿಕೊಳ್ಳುವ ಮೂಲಕ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ಆಲೋಚನಾ ಸಾಮಥ್ರ್ಯ ಹೆಚ್ಚುವುದರಿಂದ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ. ಭಾಷಾ ಬಳಕೆಯಲ್ಲಿ ಚತುರತೆ ಹೆಚ್ಚುತ್ತದೆ. ಭವಿಷ್ಯದಲ್ಲಿ ಜೀವನವನ್ನು ಹೇಗೆ ಚೆಂದಗೊಳಿಸಿಕೊಳ್ಳಬೇಕೆಂಬ ನಿಖರತೆ ಬೆಳೆಯುತ್ತದೆ.
ಸಾಮಾಜಿರಣದ ಲಾಭಗಳು :
ಸಂವಹನ (ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ) ಕೌಶಲ್ಯ ಹೆಚ್ಚುತ್ತದೆ.
ವಿಶ್ಲೇಷಣಾತ್ಮಕ ಮತ್ತು ಸಂಶೋಧನಾ ಮನೋಭಾವದ ಬೆಳವಣಿಗೆ.
ಹೊಂದಾಣಿಕೆಯ ಮಹತ್ವ ಅರಿಯುತ್ತಾರೆ.
ವೈಯಕ್ತಿಕ ಸಾಮಥ್ರ್ಯ ಹೆಚ್ಚುತ್ತದೆ.
ತೀರ್ಮಾನಗಳನ್ನು ಕೈಗೊಳ್ಳುವ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮಥ್ರ್ಯ ಬೆಳೆಯುತ್ತದೆ.
ಯೋಜನೆ, ಸಂಘಟನಾ ಚತುರತೆ ಗಳಿಸುತ್ತಾರೆ.
ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯ ಬೆಳೆಯುತ್ತವೆ.
ಧನಾತ್ಮಕ ಮತ್ತು ರಚನಾತ್ಮಕ ಮಾನವೀಯ ಸಂಬಂಧಗಳು ನಿರ್ಮಾಣಗೊಳ್ಳುತ್ತವೆ.
ಮನಸ್ಸು ನೈಜ ಆಲೋಚನೆಗಳನ್ನು ಆಕ್ರಮಿಸಿಕೊಳ್ಳುವುದರಿಂದ ಮಾನಸಿಕ ಕಾರ್ಯನಿರ್ವಹಣೆ ಹೆಚ್ಚುತ್ತದೆ.
ಒತ್ತಡ ಮತ್ತು ಆತಂಕಗಳು ದೂರವಾಗುತ್ತವೆ. ಖಿನ್ನತೆ ಆವರಿಸುವುದಿಲ್ಲ.
ವಿವಿಧ ರೀತಿಯ ಜನರನ್ನು ಮತ್ತು ಅವರ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಜಗತ್ತನ್ನು ಮುಖಾಮುಖಿಯಾಗಿ ಎದುರಿಸುವುದನ್ನು ಕಲಿಸುತ್ತದೆ. ಇದರಿಂದ ಆತ್ಮವಿಶ್ವಾಸ ವೃದ್ದಿಯಾಗುತ್ತದೆ.
ಸ್ನೇಹಿತರು ಅಥವಾ ಕುಟುಂಬದವರ ಕಷ್ಟಕಾಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸಹಚರರ ಪ್ರೀತಿ ವಿಶ್ವಾಸ ಮತ್ತು ಪ್ರಚೋದನೆಗಳಿಂದ ಜೀವನೋತ್ಸಾಹ ಹೆಚ್ಚುತ್ತದೆ.
ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿಡುತ್ತದೆ.
ಜೀವನವನ್ನು ಕಟ್ಟಿಕೊಳ್ಳುವ ಜೀವನಕಲೆ ತಿಳಿಯುತ್ತದೆ.
ಸಾಮಾಜಿಕಣದ ಏಜೆನ್ಸಿಗಳು:
ಕುಟುಂಬ: ಸಾಮಾನ್ಯವಾಗಿ ಕುಟುಂಬವನ್ನು ಸಮಾಜದ ಮುಖ್ಯ ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇಡೀ ನಮ್ಮ ಉಜ್ವಲ ಭವಿಷ್ಯಕ್ಕೆ ಕುಟುಂಬದ ಅವಲಂಬನೆ ಅನಿವಾರ್ಯವಾಗಿದೆ. ಹಾಗಾಗಿ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಕುಟುಂಬದ ಪಾತ್ರ ಪ್ರಧಾನವಾಗಿದೆ. ಗುಂಪಿನೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮನೋಭಾವ ಹಾಗೂ ಸಂಬಂಧಗಳ ಪರಿಕಲ್ಪನೆಯನ್ನು ಗಟ್ಟಿಗೊಳಿಸುವಲ್ಲಿ ಕುಟುಂಬವೇ ಮುಖ್ಯ ಸಾಮಾಜಿಕರಣದ ಸೂತ್ರಧಾರವಾಗಿದೆ. ಮೌಲ್ಯಗಳು, ರೂಢಿಗಳು, ಆಚರಣೆಗಳು, ನಂಬಿಕೆಗಳ ವ್ಯವಸ್ಥೆಯನ್ನು ಒದಗಿಸುತ್ತದೆ. ಕುಟುಂಬವು ಸಾಮಾನ್ಯವಾಗಿ ಸಾಮಾಜಿಕ ಸ್ಥಾನಮಾನ, ಧರ್ಮ, ಜನಾಂಗೀಯ ಗುಂಪು ಮೊದಲಾದವುಗಳ ಪ್ರತಿಬಿಂಬವಾಗಿದೆ.
ಶಾಲೆ: ಕುಟುಂಬದ ನಂತರ ಶಾಲೆಯೂ ಕೂಡಾ ಅತ್ಯಂತ ಪ್ರಮುಖ ಸಾಮಾಜಿಕರಣದ ಅಂಗವಾಗಿದೆ. ಸಾಮಾನ್ಯವಾಗಿ ಶಾಲೆಯು ವಿಷಯ ಜ್ಞಾನವನ್ನು ವರ್ಗಾವಣೆ ಮಾಡುತ್ತದೆ. ಜೊತೆಗೆ ಕೆಲವು ಜೀವನ ಕೌಶಲ್ಯಗಳನ್ನು ಅಧಿಕೃತವಾಗಿ ಕಲಿಸುತ್ತದೆ. ಶಾಲೆಯು ಮುಖ್ಯವಾಗಿ ಸಂವಹನ ಕೌಶಲ್ಯಗಳನ್ನು ಕಲಿಸುತ್ತದೆ. ಶಿಸ್ತು ಮತ್ತು ಸಂಯಮವನ್ನು ಕಲಿಸುವ ಏಕೈಕ ಕೇಂದ್ರ ಶಾಲೆಯಾಗಿದೆ.
ಸಹವರ್ತಿಗಳು: ಮಾನವೀಯ ಮೌಲ್ಯಗಳನ್ನು ಯಾವ ಪಠ್ಯಪುಸ್ತಕವೂ, ಯಾವ ವಿಶ್ವವಿದ್ಯಾನಿಲಯವೂ ಕಲಿಸಲಾರದು. ಆದರೆ ಸಹವರ್ತಿಗಳಿಂದ ಮಾತ್ರ ಇಂತಹ ಮೌಲ್ಯಗಳ ಕಲಿಕೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಸಹಕಾರ, ನಂಬಿಕೆ, ಕ್ಷಮೆ, ಸಹಾನುಭೂತಿ, ಬೆಂಬಲ, ಶಿಷ್ಟಾಚಾರಗಳಂತಹ ಮಾನವೀಯ ಮೌಲ್ಯಗಳನ್ನು ಸಹವರ್ತಿಗಳಿಂದ ಬೆಳೆಸಿಕೊಳ್ಳುತ್ತಾರೆ.
ಸಾಮಾಜಿಕರಣ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ:
ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಾಮಾಜಿಕರಣ ಪ್ರಕ್ರಿಯೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು. ಮಗುವನ್ನು ಸಾಮಾಜಿಕರಣಗೊಳಿಸಲು ಕೆಳಗಿನ ಅಂಶಗಳು ಸಹಕಾರಿಯಾಗುತ್ತವೆ.
ಮಗು ಅಂತರ್ಮುಖಿಯಾಗುವಂತಹ ಅಥವಾ ಅವಮಾನವಾಗುವಂತಹ ಅಂಶ ಯಾವುದೂ ಇಲ್ಲ ಎಂಬುದನ್ನು ಖಚಿತಪಡಿಸಿ.
ಮಗುವಿನ ಮನೋಧರ್ಮವನ್ನು ಅರ್ಥೈಸಿಕೊಳ್ಳಿ.
ವಿವಿಧ ಸಂದರ್ಭಗಳಲ್ಲಿ ಮಗುವಿಗೆ ಹೊಸ ಜನರನ್ನು ಪರಿಚಯಿಸಿ. ಅವರ ಸಂಬಂಧಗಳನ್ನು ತಿಳಿಸಿ.
ಕುಟುಂಬದ ಒಳಗೆ ಮತ್ತು ಹೊರಗೆ ಹಿರಿಯರಿಗೆ ಮತ್ತು ಕಿರಿಯರಿಗೆ ಗೌರವ ನೀಡುವ ಮೂಲಕ ಪ್ರತಿವ್ಯಕ್ತಿಯನ್ನು ಗೌರವಿಸಿ.
ಸಾಮಾಜಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮಗುವಿಗೆ ಅವಕಾಶ ನೀಡಿ.
ಮಗುವಿನ ಆರಂಭದ ಭಯ ಗೆಲುವಿನಲ್ಲಿ ಅಂತ್ಯ ಕಾಣುವುದನ್ನು ಖಚಿತಪಡಿಸಿ.
ಮಗುವಿನಲ್ಲಿ ಭಾವನೆಗಳು ಬೆಳೆಯಲು ಸಹಾಯ ಮಾಡಿ.
ಮಗುವಿನ ಅಂತರ್ಮುಖಿತ್ವ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ.
ಮಗುವಿನಲ್ಲಿ ಧನಾತ್ಮಕ ಸ್ವಾಭಿಮಾನ ಮೂಡಿಸಿ ಸ್ವಾವಲಂಬಿಯಾಗುವಂತೆ ಮಾಡಿ.
ಮಗುವಿನ ನಾಚಿಕೆ ಸ್ವಾಭಾವವನ್ನು ಹೊಡೆದೋಡಿಸಿ.
ಮಗುವಿನ ಸ್ನೇಹಿತರ ಮೇಲೆ ನಿಗಾ ಇರಲಿ.
ಸಮಯ ದೊರೆತಾಗಲೆಲ್ಲ ವೈಯಕ್ತಿಕ ಅಭಿವೃದ್ದಿಯ ಕುರಿತ ಘಟನಾವಳಿಗಳನ್ನು ಹೇಳಿ.
ಮಗುವಿನ ಮನೋಧರ್ಮ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ.
ಸಂಭಾವ್ಯ ವಿಚಿತ್ರ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿ.
ಮಗುವಿನಲ್ಲಿ ಹಾಸ್ಯ ಪ್ರಜ್ಞೆ ಮೂಡಿಸಿ.
ಸಾಮಾಜಿಕ ಮಾಲ್ಯಗಳ  ಕುರಿತು ಮಗುವಿನೊಂದಿಗೆ ಮಾತನಾಡಿ. ಸಾಮಾಜಿಕ ಗುರಿಯನ್ನು ಹಾಕಿಕೊಡಿ.
ಸಾಮಾಜಿಕ ಗುರಿಗಳನ್ನು ಬಲಪಡಿಸಲು ಸಹಾಯ ಮಾಡಿ. ಇದಕ್ಕೆ ಶಿಕ್ಷಕರು ಮತ್ತು ಸಲಹೆಗಾರರ ಮಾರ್ಗದರ್ಶನ ಪಡೆಯಿರಿ.
ಸಾಮಾಜಿಕ ಕೌಶಲ್ಯಗಳನ್ನು ಅಭ್ಯಾಸ ಮಾಡಿಸಿ.
ಮಗು ಇತರ ಮಕ್ಕಳೊಂದಿಗೆ ಬೆರೆಯುವಾಗ ಖರ್ಚು ವೆಚ್ಚಗಳ ಮೇಲ್ವಿಚಾರಣೆ ಇರಲಿ.
ಮಗುವಿಗೆ ಇತರರ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಬಗ್ಗೆ ಯೋಚಿಸಲು ಅವಕಾಶ ಮಾಡಿಕೊಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು
ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)
9902992905

No comments:

Post a Comment