October 6, 2013

ಬನ್ನಿ! ಒಂದಿಷ್ಟು ಆರೋಗ್ಯವಂತರಾಗೋಣ

 

      ಸ್ವಾತಂತ್ರ ನಂತರ ಭಾರತದಲ್ಲಿ ನಗರೀಕರಣದ ಪ್ರಭಾವದಿಂದಾಗಿ ಹಳ್ಳಿಗಳ ಜನಸಂಖ್ಯೆ ಕಡಿಮೆಯಾಗುತ್ತಾ ನಗರಗಳು ಬೆಳೆಯುತ್ತಲೇ ಬಂದವು. ನಗರೀಕರಣದ ಪ್ರಭಾವದಿಂದ ಜನರ ಸಂಸ್ಕೃತಿ,ಆಹಾರ,ಆರೋಗ್ಯ ಮುಂತಾದವುಗಳಲ್ಲಿ ಗಣನೀಯ ಬದಲಾವಣೆಗಳು ಆಗುತ್ತಿರುವುದನ್ನು ಗಮನಿಸಬಹುದು.
       ಇಂದು ನಗರ ಪ್ರದೇಶದ ಜನರ ಆಹಾರ ಮತ್ತು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದು ಕಂಡು ಬರುತ್ತದೆ. ನಗರಗಳಲ್ಲಿ ಭಾರತೀಯ ಆಹಾರ ಪದ್ದತಿ ಸಂಪೂರ್ಣವಾಗಿ ಪಾಶ್ಚ್ಯಾತೀಕರಣಗೊಂಡಿದೆ. ಅಡುಗೆ ಮನೆಯ ಸ್ಥಾನದಲ್ಲಿ ಹೋಟೆಲ್, ರೆಸ್ಟೋರೆಂಟುಗಳು ಬಂದಿವೆ. ರೊಟ್ಟಿ, ಮುದ್ದೆ, ಅನ್ನ-ಸಾಂಬಾರುಗಳ ಸ್ಥಾನದಲ್ಲಿ ಪಿಜ್ಜಾ, ಬರ್ಗರ್, ಫಾಸ್ಟಫುಡ್ ಗಳು ಬಂದಿವೆ. ಬಂದದೆಲ್ಲಾ ಬರಲಿ ಎಂದು ಸುಮ್ಮನೆ ಇರುವಂತಿಲ್ಲ. ಇದರಿಂದ ಆರೋಗ್ಯದಲ್ಲಿ ವೈಪರೀತ್ಯಗಳು ಆಗುತ್ತವೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
       ಕಳೆದ ವರ್ಷ 'ಅಪೋಲೋ ಆಸ್ಪತ್ರೆಯ ಸಮೂಹ ಸಂಸ್ಥೆಗಳು' ದೇಶದ ಪ್ರಮುಖ 8 ನಗರಗಳ 40,000 ಜನರ ಆಹಾರ ಪದ್ದತಿ ಮತ್ತು ಆರೋಗ್ಯ ಸ್ಥಿತಿಗತಿಯ ಬಗ್ಗೆ ನಡೆಸಿದ ಸಂಶೋಧನೆಯ ವರದಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. 
      ವರದಿಯ ಮುಖ್ಯಾಂಶಗಳ ಪ್ರಕಾರ ಶೇಕಡಾ 49 ರಷ್ಟು ಜನರು ಕಡಿಮೆ ಪ್ರೋಟೀನ್ ಯುಕ್ತ  ಆಹಾರ ಸೇವಿಸುತ್ತಾರೆ. ಶೇ.48 ರಷ್ಟು ಜನರು ಕರಿದ ಮತ್ತು ಮಸಾಲೆಯುಕ್ತ ಆಹಾರಗಳಿಗೆ ಮಾರುಹೋಗಿದ್ದಾರೆ. ಶೇ.51 ರಷ್ಟು ಜನರು ತಮ್ಮ ಆಹಾರದಲ್ಲಿ ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದಿಲ್ಲ. ಶೇ.54 ರಷ್ಟು ಜನರು ಅತಿಯಾದ ಸಿಹಿ ಮತ್ತು ಬೇಕರಿ ತಿನಿಸುಗಳಿಗೆ ಮಾರುಹೋಗಿದ್ದಾರೆ. ಶೇ.31 ರಷ್ಟು ಜನರ ಆಹಾರದಲ್ಲಿ ಕ್ಯಾಲ್ಸಿಯಂನ ಕೊರತೆ ಇದೆ. ಶೇ.72 ರಷ್ಟು ಜನರು ಮಾಂಸಹಾರಿಗಳಾಗಿದ್ದು ವಾರದಲ್ಲಿ ಎರಡು ಮೂರು ದಿನ ಚಿಕನ್ ಮತ್ತು ಮೀನು ಬಳಸುತ್ತಾರೆ. ಶೇ. 36 ರಷ್ಟು ಜನರು ರಸ್ತೆ ಬದಿಯ ಫಾಸ್ಟ್ ಫುಡ್ ಗಳನ್ನು ಸೇವಿಸುತ್ತಾರೆ.
      ಮೇಲಿನ  ಅಂಕಿ ಅಂಶಗಳನ್ನು ಗಮನಿಸಿದರೆ ಸಾಂಪ್ರದಾಯಿಕ ಆಹಾರ ಪದ್ದತಿ ಸಂಪೂರ್ಣವಾಗಿ ಮರೆಯಾಗಿರುವುದು ಕಂಡು ಬರುತ್ತದೆ. ಇದು ಘೋರ ಪರಿಣಾಮಗಳನ್ನು ತಂದೊಡ್ಡಿದೆ. ಅವೈಜ್ಞಾನಿಕ ಆಹಾರ ಪದ್ದತಿಯಿಂದ ಶೇ.48 ರಷ್ಟು ಜನರು ಸ್ಥೂಲದೇಹಿಗಳಾಗಿದ್ದಾರೆ. ಶೇ.34 ರಷ್ಟು ಜನರು ದೇಹದ ತೂಕ ಕಡಿಮೆ ಮಾಡಲು ಅಥವಾ ಆರೋಗ್ಯ ಸುಸ್ಥಿತಿಯಲ್ಲಿಡಲು ಯಾವುದೇ ವ್ಯಾಯಾಮ ಚಟುವಟಿಕೆಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ  ಶೇ.51 ರಷ್ಟು ಜನರು ದೈಹಿಕವಾಗಿ ಸಧೃಢರಲ್ಲ. ಅನಾರೋಗ್ಯದ ನಿಮಿತ್ತವಾಗಿ ಶೇ.33 ರಷ್ಟು ಜನರು ನಿತ್ಯವೂ ಔಷಧಿಗಳನ್ನು ಅವಲಂಬಿಸಬೇಕಾಗಿದೆ. ಶೇ.30 ರಷ್ಟು ಜನರು ದಂತ ಸಮಸ್ಯೆ ಅನುಭವಿಸುತ್ತದ್ದಾರೆ. ಶೇ. 26 ರಷ್ಟು ಜನರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಶೇ.17 ರಷ್ಟು ಜನರು ಮಧುಮೇಹಿಗಳಾಗಿದ್ದಾರೆ. ಶೇ.31 ರಷ್ಟು ಜನರು ಉದರ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ.
    ಹೀಗೆ ಒಂದೆಡೆ ನಗರ ಪ್ರದೇಶದ ಜನರ ಆರೋಗ್ಯದ ಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ. ಮತ್ತೊಂದೆಡೆ ಜನರ ಆರೋಗ್ಯದ ನೆಪದಲ್ಲಿ ಸುಲಿಗೆ ಮಾಡುವ ಖಾಸಗೀ ಆಸ್ಪತ್ರೆಗಳ ಕಾರುಬಾರು ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಆಹಾರ ಪದ್ದತಿ ಎನ್ನುವುದನ್ನು ಮರೆಯುವಂತಿಲ್ಲ. "ಊಟ ಬಲ್ಲವನಿಗೆ ರೋಗವಿಲ್ಲ ಎಂಬುದನ್ನು ಮರೆಯಲಾಗದು ಅಲ್ಲವೇ? ಇತ್ತೀಚಿಗೆ ಹಳ್ಳಿಗಳಲ್ಲೂ ಸಹ ನಗರೀಕರಣದ ಪ್ರಭಾವ ಹೆಚ್ಚಾಗಿದ್ದು, ಬ್ರೆಡ್ಡು, ಜಾಮ್ ಗಳು ಹಳ್ಳಿಗಳಿಗೆ ಎಂಟ್ರಿ ಕೊಟ್ಟಿವೆ. ಪಿಜ್ಜಾ, ಬರ್ಗರ್ ಗಳು ಕಾಲಿಡಲು ತವಕಿಸುತ್ತಿವೆ. ಇದನ್ನು ಮುಂದುವರೆಯಲು ಬಿಟ್ಟರೆ ಹಳ್ಳಿಗಳಲ್ಲೂ ಸಹ ಸಂಪೂರ್ಣವಾಗಿ ವಿದೇಶಿ ಆಹಾರ ಸಂಸ್ಕೃತಿ ತಲೆ ಎತ್ತಿ ನಿಲ್ಲುತ್ತದೆ. ಜನರ ಆರೋಗ್ಯ ನೆಲ ಕಚ್ಚುತ್ತದೆ. ಬನ್ನಿ! ಈ ಬಗ್ಗೆ ಒಂದಿಷ್ಡು ಚಿಂತಿಸಿ ಆರೋಗ್ಯವಂತರಾಗೋಣ.
                                                ಗುರುಬಸವರಾಜ.ಆರ್.ಬಿ.

No comments:

Post a Comment