May 21, 2015

`ಮ್ಯೂಸಿಯಾಲಜಿ’

ದಿನಾಂಕ 06-05-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ 'ಈಸಿಯಾಗಿ ಮಾಡಿ ಮ್ಯೂಸಿಯಾಲಜಿ ಕೋರ್ಸ್' ಎಂಬ  ಲೇಖನ.

                                      ಕಲೆ ಮತ್ತು ವಿಜ್ಞಾನಗಳ ಸಂಗಮ

                                 `ಮ್ಯೂಸಿಯಾಲಜಿ’

    ಅನೇಕ ವರ್ಷಗಳವರೆಗೆ ಇತಿಹಾಸ ಎಂಬುದು ಜನಸಾಮಾನ್ಯರಿಗೆ ನಿಲುಕದ ಕಲ್ಪನಾ ವಿಷಯವಾಗಿತ್ತು. ಅಂತ್ಯವಿಲ್ಲದ ಹೆಸರುಗಳು, ನೋಡದೇ ಇರುವ ಇಸ್ವಿಗಳು ವಿಷಯವನ್ನು ಬೋರ್ ಹೊಡೆಸುತ್ತವೆ. ಕಳೆದ ಮೂರ್ನಾಲ್ಕು ದಶಕಗಳವರೆಗೆ ಇತಿಹಾಸ ಎಂಬುದು ಕೋಟೆ ಕೊತ್ತಲಗಳಲ್ಲಿ, ಗವಿ ಗುಡಿಗಳಲ್ಲಿ ಅವಿತು ಕುಳಿತ್ತಿತ್ತು. ಅದನ್ನು ಪ್ರಚುರ ಪಡಿಸಿದ ಕೀರ್ತಿ ವಸ್ತು ಸಂಗ್ರಹಾಲಯಗಳಿಗೆ ಸಲ್ಲುತ್ತದೆ.
    ಇತಿಹಾಸ ಎಂಬುದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಸೀಮಿತ ಎಂಬುದು ಬಹುತೇಕರ ಅಭಿಮತ. ಇದೆಲ್ಲದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಇತಿಹಾಸ ಅಧ್ಯಯನಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ. ಅನೇಕ ಉತ್ಸಾಹಿ ಯುವಕರು ಇತಿಹಾಸದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಅನೇಕ ಐತಿಹಾಸಿಕ ರಹಸ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಆ ಮೂಲಕ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.
    ಹೀಗೆ ಇತಿಹಾಸದ ಸಂಶೋಧನೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಬಯಸುವವರಿಗೆ ‘ಮ್ಯೂಸಿಯಾಲಜಿ’ ಅತ್ಯುತ್ತಮ ಕ್ಷೇತ್ರವಾಗಿದೆ. ಇದು ಭಾರತದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು  ಹೊಂದಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಮಹತ್ವ ಪಡೆದ ಜನಪ್ರಿಯ ವಿಷಯವಾಗಿದೆ.
ಏನಿದು ಮ್ಯೂಸಿಯಾಲಜಿ?
    ಮ್ಯೂಸಿಯಾಲಜಿ ಎಂಬುದು 2 ವರ್ಷಗಳ ಸ್ನಾತಕ ಪದವಿ ಕೋರ್ಸ ಆಗಿದ್ದು, ವಸ್ತು ಸಂಗ್ರಹಾಲಯದ ಆಡಳಿತ ಮತ್ತು ನಿರ್ವಹಣಾ ಅಧ್ಯಯನವಾಗಿದೆ. ಇದೊಂದು ಬಹುಕಾರ್ಯ ವಿಧಾನಗಳುಳ್ಳ ಕ್ಷೇತ್ರವಾಗಿದೆ. ಕಲೆ ಹಾಗೂ ವಿಜ್ಞಾನದ ಹಿನ್ನಲೆಯುಳ್ಳ ವಿದ್ಯಾರ್ಥಿಗಳಿಗೆ ಈ ಕೋರ್ಸ ಉತ್ತಮ. ಈ ಕೋರ್ಸನ ಮೂಲಭೂತ ಅವಶ್ಯಕತೆ ಎಂದರೆ ಇತಿಹಾಸದ ಪರಿಚಯ. ವಿಶೇಷವಾಗಿ ಪ್ರಾಚೀನ ಭಾರತದ ಇತಿಹಾಸದ ಪರಿಚಯ ಇರಬೇಕಾದುದು ಅಪೇಕ್ಷಣೀಯ.
ಇವರಿಗೆ ಸೂಕ್ತ
    ಪುರಾತತ್ವ ಸಮಸ್ಯೆಗಳಿಗೆ ಸೈದ್ದಾಂತಿಕ ಹಾಗೂ ವೈಜ್ಞಾನಿಕ ತತ್ವ ಮತ್ತು ಪರಿಕಲ್ಪನೆಗಳನ್ನು ಅನ್ವಯಿಸುವ ಸಾಮಥ್ರ್ಯ ಇರುವವರಿಗೆ, ಉತ್ಖನನದಲ್ಲಿ ಆಸಕ್ತಿ ಇರುವವರಿಗೆ, ಐತಿಹಾಸಿಕ ಸಮೀಕ್ಷೆ ಮತ್ತು ದಾಖಲೀಕರಣದಲ್ಲಿ ಆಸಕ್ತಿ ಇರುವವರಿಗೆ ಈ ಕೋರ್ಸ ಸೂಕ್ತವಾದುದು.
    ಪುರಾತತ್ವ ಪ್ರಯೋಗಾಲಯದ ಮಾಹಿತಿ ದಾಖಲೀಕರಣ, ಸಂಖ್ಯಾ ಸಂಗ್ರಹಣೆ, ವಿಶ್ಲೇಷಣೆ, ಆಂಕಿಕ ವಿಧಾನಗಳ ಅನ್ವಯಿಕ ಪ್ರಕ್ರಿಯೆಯಲ್ಲಿ ಆಸಕ್ತಿ ಇರುವವರಿಗೆ, ಪುರಾತನ ವಸ್ತುಗಳ ವ್ಯಾಖ್ಯಾನ ಮಡುವವರಿಗೆ, ಉನ್ನತ ವ್ಯಾಸಂಗಗಳ ಕಾಲೇಜುಗಳಲ್ಲಿ ಬೋಧಕರಾಗಲು ಬಯಸುವವರಿಗೆ ಈ ಕೋರ್ಸ ಉತ್ತಮ.
    ಸಂಶೋಧನಾ ಪ್ರವೃತ್ತಿ ಹೊಂದಿರುವ ಈಗಾಗಲೇ ಕೆಲವು ವೃತ್ತಿಗಳಲ್ಲಿ ತೊಡಗಿರುವ, ಸಂಶೋಧನೆ ಮಾಡಲಾಗದೇ ಪದೇ ಪದೇ ವೃತ್ತಿ ಬದಲಾಯಿಸುವವರೂ ಮ್ಯೂಸಿಯಾಲಜಿ ಕೋರ್ಸಗೆ ಸೇರಬಹುದಾಗಿದೆ.
ವಿದ್ಯಾರ್ಹತೆ ಮತ್ತು ವೆಚ್ಚ :    ಯಾವುದೇ ಪದವಿಯಲ್ಲಿ ಶೇಕಡಾ 50 ಅಂಕಗಳೊಂದಿಗೆ ಪ್ರವೇಶ ಪರೀಕ್ಷೆಯ ಉತ್ತೀರ್ಣತೆ ಹಾಗೂ ಸಂದರ್ಶನ ಕಡ್ಡಾಯ. 2 ವರ್ಷಗಳ ಈ ಕೋರ್ಸನ ವೆಚ್ಚ ರೂ.15-20 ಸಾವಿರಗಳು ಮಾತ್ರ. ಕೋರ್ಸನ ನಂತರ ಕೆಲವು ಶೈಕ್ಷಣಿಕ ಸಂಸ್ಥೆಗಳು ಇಂಟರ್ನಶಿಪ್ ಸೇವೆ ಒದಗಿಸುತ್ತವೆ. ಇಂಟರ್ನಶಿಪ್‍ನಲ್ಲಿ ಪುರಾತತ್ವ ಮೂಲಗಳ ಸಂರಕ್ಷಣೆ, ದಾಖಲೀಕರಣ, ಲೆಕ್ಕಪತ್ರ, ಸಾರ್ವಜನಿಕ ಸಂಬಂಧಗಳು, ಪ್ರದರ್ಶನ ವಿನ್ಯಾಸ ಮತ್ತು ವಿವಿಧ ರೀತಿಯ ವಸ್ತು ಸಂಗ್ರಹಾಲಯ ರೂಪಿಸುವ ಬಗ್ಗೆ ತರಬೇತಿ ನೀಡುತ್ತವೆ. ಕೆಲವು ಸಂಸ್ಥೆಗಳು ಇಂಡರ್ನಶಿಪ್‍ನಲ್ಲಿ ಗೌರವಧನ ನೀಡುತ್ತವೆ.

       ಕೋರ್ಸನಲ್ಲಿ ಕಲಿಯುವ ಪರಿಕಲ್ಪನೆಗಳು
•    ವಸ್ತು ಸಂಗ್ರಹಾಲಯದ ಇತಿಹಾಸ ಮತ್ತು ಸಂಗ್ರಹಗಳು
•    ದಾಖಲೀಕರಣ ಪ್ರಸ್ತುತಿ ಮತ್ತು ವ್ಯಾಖ್ಯಾನ
•    ಮ್ಯೂಸಿಯಂ ಶಿಕ್ಷಣ ಮತ್ತು ಸಂಶೋಧನೆ
•    ಮ್ಯೂಸಿಯಂನಲ್ಲಿ ಕಂಪ್ಯೂಟರ್ ಅನ್ವಯಿಕ
•    ಭಾರತೀಯ ಕಲೆ ಮತ್ತು ತತ್ವಶಾಸ್ತ್ರ
•    ಭಾರತೀಯ ಚಿತ್ರಕಲೆ ವರ್ಗೀಕರಣ ಮತ್ತು ಸಂಗ್ರಹಿಸುವುದು
•    ಮ್ಯೂಸಿಯಂ ನಿರ್ವಹಣೆ ಮತ್ತು ಆಡಳಿತ
•    ಮ್ಯೂಸಿಯಂ ಮತ್ತು ಸಾರ್ವಜನಿಕ ಸಂಪರ್ಕ
•    ಹೊಸ ಮ್ಯೂಸಿಯಾಲಜಿ ಹಾಗೂ ಭಾರತೀಯ ಮ್ಯೂಸಿಯಾಲಜಿ ನಿಯಮಗಳು
•    ಭಾರತೀಯ ಶಿಲ್ಪ/ಮೂರ್ತಿ
•    ಯೋಜನಾವರದಿ ಮತ್ತು ಪ್ರವಾಸ ವರದಿ
•    ಪ್ರದರ್ಶನ ಮತ್ತು ನಿರ್ವಹಣೆ
•    ಭಾರತೀಯ ಅಲಂಕಾರಿಕ ಕಲೆ
•    ಮ್ಯೂಸಿಯಂ ಸಂರಕ್ಷಣೆ ಮತ್ತು ಪ್ರಾಯೋಗಿಕ ತರಬೇತಿ
•    ವಿಜ್ಞಾನ ಮತ್ತು ಮಾನವಶಾಸ್ತ್ರೀಯ ಸಂಬಂಧಗಳಿಗೆ ಮ್ಯೂಸಿಯಂನ ಆಯಾಮಗಳು

ಕೋರ್ಸ ನಂತರದ ಹುದ್ದೆಗಳು
•    ಪ್ರದರ್ಶನ ಸಲಹೆಗಾರರು
•    ಉಪಮೇಲ್ವಿಚಾರಕರು
•    ಮ್ಯೂಸಿಯಂ ಗೈಡ್
•    ಒಳಾಂಗಣ ಕಲಾ ವಿನ್ಯಾಸಕಾರರು
•    ಗ್ರಾಫಿಕ್ ಡಿಸೈನರ್
•    ಮ್ಯೂಸಿಯಂ ಸಂರಕ್ಷಣಾಧಿಕಾರಿ
•    ಉಪನ್ಯಾಸಕರು

ಇನ್ನಿತರೇ ಲಾಭಗಳು : ಶೈಕ್ಷಣಿಕ, ಕಲೆ ಮುಂತಾದ ವಸ್ತು ಸಂಗ್ರಹಾಲಯಗಳು ಮತ್ತು ಪ್ರವಾಸಿ ಸಂಬಂಧಿತ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಆಯ್ದ ವಿಷಯಗಳಲ್ಲಿ ಉನ್ನತ ಅಧ್ಯಯನಕ್ಕೆ ಸಹಕಾರಿಯಾಗಿದೆ. ಪುರಾತತ್ವ ಗುತ್ತಿಗೆದಾರರು, ಪುರಾತತ್ವ ವಿಶ್ವ ವಿದ್ಯಾಲಯಗಳಲ್ಲಿ, ರಾಷ್ಟ್ರೀಯ ಪರಂಪರಾ ಸಂಸ್ಥೆಗಳಲ್ಲಿ ಪುರಾತತ್ವ ಸಲಹೆಗಾರರಾಗಲು ಸಾಕಷ್ಟು ಅವಕಾಶಗಳಿವೆ. ಇತಿಹಾಸದ ಕುರುಹುಗಳ ಸಂರಕ್ಷಣೆಯ ಜೊತೆಗೆ ಜನಸಾಮಾನ್ಯರಿಗೆ ಮಾಹಿತಿ ಒದಗಿಸುವ ಮಾಹಿತಿದಾರರಾಗಿ ಸೇವೆ ಸಲ್ಲಿಸಬಹುದು.
    ಇದೊಂದು ಬಹುಕಾರ್ಯ ವಿಧಾನಗಳುಳ್ಳ ಹಾಗೂ ನಮ್ಮ ದೇಶದಲ್ಲಿ ಸಾಕಷ್ಟು ವ್ಯಾಪ್ತಿ ಹೊಂದಿದ ಕ್ಷೇತ್ರವಾಗಿದ್ದು, ಭಾರತದಲ್ಲಿ ಉಜ್ವಲತೆಯನ್ನು ಗಳಿಸುವ ಸವಾಲಿನ ಕ್ಷೇತ್ರವೂ ಆಗಿದೆ. ‘ಇತಿಹಾಸ ತಿಳಿಯಲಾರದವರು ಇತಿಹಾಸ ನಿರ್ಮಿಸಲಾರರು’ ಎಂಬ ಮಾತನ್ನು ಸಾಕಾರಗೊಳಿಸಲು ಈ ಕೋರ್ಸ ಅತ್ಯುತ್ತಮವಾಗಿದೆ. ಏಕೆಂದರೆ ಭವಿಷ್ಯದ ಪೀಳಿಗೆಗೆ ಏನಾದರೊಂದು ಉತ್ತಮ ಕಾಣ್ಕೆ ನೀಡಲು ಹಿಂದಿನ ಇತಿಹಾಸ ಅಗತ್ಯವಲ್ಲವೇ?

ಭಾರತದ ಸಂಸ್ಕøತಿ ಹಾಗೂ ಪರಂಪರೆಯ ಬಗ್ಗೆ ಕಲಿಯಲು ಆಸಕ್ತಿ ಇರುವವರಿಗಾಗಿ ಮತ್ತು ಅಂತಹ ಕುರುಹುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೀವಂತವಾಗಿಡುವ ಉದ್ದೇಶ ಹೊಂದಿರುವವರಿಗಾಗಿ ಈ ಕೋರ್ಸ. ಇದು ಇತಿಹಾಸ ತಿಳಿಯುವವರಿಗೆ ಅತ್ಯಂತ ಕುತೂಹಲಕಾರಿಯಾದ ಮತ್ತು ಸಮರ್ಪಣಾ ಮನೋಭಾವದ ಕೋರ್ಸ ಆಗಿದೆ.
-    ಶ್ರೀಮತಿ ರಶ್ಮಿ ಚಟರ್ಜಿ
     ಮ್ಯೂಸಿಯಾಲಜಿಸ್ಟ್ ಆಂಡ್ ಸೂಪರ್‍ವೈಸರ್
          ದ ಹಾಲೋ ಹೆರಿಟೇಜ್ ಆರ್ಟ ಗ್ಯಾಲರಿ ಕೋಲ್ಕತ್ತಾ

   ಕೋರ್ಸ ನೀಡುವ ಕೆಲವು ಸಂಸ್ಥೆಗಳು
•    ಬನಾರಸ್ ಹಿಂದೂ ವಿಶ್ವ ವಿದ್ಯಾಲಯ, ವಾರಣಾಸಿ.
•    ಜವಾಯಿ ವಿಶ್ವ ವಿದ್ಯಾಲಯ, ಗ್ವಾಲಿಯರ್.
•    ಮಹಾರಾಜ ಸಯಜಿರಾವ್ ಯೂನಿರ್ವಸಿಟಿ ಆಫ್ ಬರೋಡಾ, ವಡೋದರಾ, ಗುಜರಾತ್.
•    ರವೀಂದ್ರ ಭಾರತೀ ವಿಶ್ವ ವಿದ್ಯಾಲಯ, ಕೋಲ್ಕತ್ತಾ.
•    ಕೋಲ್ಕತ್ತಾ ವಿಶ್ವ ವಿದ್ಯಾಲಯ, ಕೋಲ್ಕತ್ತಾ.
•    ರಾಜಸ್ಥಾನ ವಿಶ್ವ ವಿದ್ಯಾಲಯ, ಜೈಪುರ.
•    ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹಿಸ್ಟರಿ ಆಫ್ ಆಟ್ರ್ಸ, ಕನ್ಸರ್‍ವೇಷನ್ ಆಂಡ್ ಮ್ಯೂಸಿಯಾಲಜಿ, ನವದೆಹಲಿ.

                                                                                                            ಆರ್.ಬಿ.ಗುರುಬಸವರಾಜ. ಹೊಳಗುಂದಿ

No comments:

Post a Comment