May 17, 2015

ರಜಾ ವಿತ್ ಮಜಾ

ದಿನಾಂಕ 04-04-2015 ರ ವಿಜಯವಾಣಿಯ 'ಪುಟಾಣಿ' ಪುರವಣಿಯಲ್ಲಿ ಪ್ರಕಟವಾದ ಲೇಖನ


                                                       ರಜಾ ವಿತ್ ಮಜಾ

                                                  ಬೇಸಿಗೆ ರಜೆ ಬಂದ್ಬಿಡ್ತು
    ಏಪ್ರಿಲ್ ಬಂತೆಂದರೆ ಸಾಕು, ಯುವ ಮನಸ್ಸುಗಳಲ್ಲಿ ರೋಮಾಂಚನ ಶುರುವಾಗುತ್ತದೆ. ಅಕಾಡೆಮಿಕ್ ಕೋರ್ಸ ಮುಕ್ತಾಯವಾಗಿರುತ್ತದೆ. ಕ್ಲಾಸ್ ಮತ್ತು ಎಕ್ಸಾಂ ಟೆನ್ಶನ್ ಇರುವುದಿಲ್ಲ. ಪರೀಕ್ಷೆಗಳು ಮುಗಿದು ರಜಾ ಆರಂಭವಾಗಿರುತ್ತದೆ. ಮೈಂಡ್ ರಿಫ್ರೆಶ್ ಮಾಡಿಕೊಳ್ಳಲು ಹಾಗೂ ಜೋಶ್ ಆಗಿರಲು  ರಜೆ ಎಂಬುದು ವರ್ಷದ ಅತ್ಯುತ್ತಮ ಅವಧಿ. ರಜೆಯಲ್ಲಿ ಕುಟುಂಬದ ಸದಸ್ಯರು, ಗೆಳೆಯರು ಅಥವಾ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯಲು ಸಾಕಷ್ಟು ಅವಕಾಶಗಳಿರುತ್ತವೆ.
    ಇತ್ತೀಚೆಗೆ ಬಹುತೇಕ ಕುಟುಂಬಗಳೆಲ್ಲವೂ ಒಂಟಿ ಕುಟುಂಬಗಳಾಗಿದ್ದು, ಅದರಲ್ಲಿನ ಸದಸ್ಯರ ಸಂಖ್ಯೆ ಐದಕ್ಕಿಂತ ಕಡಿಮೆ ಇರುತ್ತದೆ. ಅದರಲ್ಲೂ ಯುವ ಮನಸ್ಸುಗಳ ಸಂಖ್ಯೆ ಇನ್ನೂ ಕಡಿಮೆ. ಹಾಗಾಗಿ ರಜೆ ಎಂಬುದು ಕೆಲವರ ಪಾಲಿಗೆ ಸಜೆ ಆಗುವುದುಂಟು. ಈ ರೀತಿ ರಜೆಯನ್ನು ಸಜೆಯನ್ನಾಗಿಸುವ ಬದಲು ಮಜವನ್ನಾಗಿಸಿಕೊಳ್ಳಲು ಅನೇಕ ಅವಕಾಶಗಳಿವೆ. ನಿಮ್ಮ ವಿಚಾರ, ಚಿಂತನೆಗಳಿಗೆ ಸರಿಹೊಂದುವ ಗೆಳೆಯರ ಬಳಗ ಸೇರಿಸಿಕೊಳ್ಳಿ ಅಥವಾ ನೀವೇ ಆ ಬಳಗಕ್ಕೆ ಸೇರಿಕೊಳ್ಳಿ. ರಜೆ ಎಂಬುದು ಎಲ್ಲರಿಗೂ ಸಂತೋಷವನ್ನು ಅನುಭವಿಸಲು ಇರುವ ಮಹತ್ತರ ಅವಕಾಶ ಎಂಬುದು ನೆನಪಿರಲಿ.
    ರಜೆ ಮಜವಾಗುವ ಜೊತೆಗೆ ಅರ್ಥಪೂರ್ಣವಾಗಿರಲು ಅನೇಕ ಅಂಶಗಳಿವೆ. ಅವುಗಳನ್ನು ಪಾಲಿಸಿದರೆ ನಾವು ಖುಷಿಪಡುವ ಜೊತೆಗೆ ಇತರರನ್ನೂ ಖುಷಿಪಡಿಸಬಹುದು.
ಮೆಲುಕುಹಾಕಿ : ಕಳೆದ ವರ್ಷಗಳ ಧನಾತ್ಮಕ ಅಂಶಗಳನ್ನು ಮೆಲುಕುಹಾಕಿ. ನೀವು ಉನ್ನತ ಹಂತಕ್ಕೆ ಏರಲು ಸಣ್ಣ ಸಣ್ಣ ಸಾಧನೆಗಳು ಹೇಗೆ ಸಹಕಾರಿಯಾದವು ಎಂಬುದನ್ನು ನೆನಪಿಸಿಕೊಳ್ಳಿ. ಇದರಿಂದ ನಿಮ್ಮಲ್ಲಿ ಧನಾತ್ಮಕ ಮನೋಭಾವ ಮೂಡುತ್ತದೆ. ಜೊತೆಗೆ ಬಾಲ್ಯದ ದಿನಗಳು, ಕುಟುಂಬದ ಸಂತಸದ ಕ್ಷಣಗಳನ್ನು ಮೆಲುಕುಹಾಕಿ.
ಹಬ್ಬಮಾಡಿ : ನಿಮ್ಮ ಬಗ್ಗೆ ಕಾಳಜಿ ಇರುವವರೊಂದಿಗೆ ಅಂದರೆ ಕುಟುಂಬದ ಸದಸ್ಯರು, ಗೆಳೆಯರೊಂದಿಗೆ ಹೆಚ್ಚು ಸಮುಯವನ್ನು ಕಳೆಯಿರಿ. ಮಧುರ ಕ್ಷಣಗಳನ್ನು ಹಂಚಿಕೊಳ್ಳಿ. ರಜಾದಿನಗಳನ್ನು ಹಬ್ಬದಂತೆ ಕಳೆಯಿರಿ. ಏಕೆಂದರೆ ಪ್ರತಿದಿನವೂ ಅಮೂಲ್ಯವಾದುದು.
ಖುಷಿ ನೀಡುವ ಕೆಲಸ ಮಾಡಿ : ಚಲನಚಿತ್ರ ನೋಡುವುದಿರಲಿ, ಆಟ ಆಡುವುದಿರಲಿ, ಟ್ರಿಪ್ ಹೋಗುವುದಿರಲಿ ಅಥವಾ ಇನ್ನಾವುದೇ ಚಟುವಟಿಕೆಗಳಿಂದ ನಿಮಗೆ ಖುಷಿ ಸಿಗಬೇಕೇ ವಿನಹ ನೋವು ತರುವಂತಹ ಅಥವಾ ಇತರರಿಗೆ ನೋವಾಗುವಂತಹ ಕೆಲಸ ಮಾಡಬೇಡಿ. ನಿಮ್ಮ ನೆಚ್ಚಿನ ಚಟುವಟಿಕೆಗಳಿಂದ ಎಲ್ಲರಿಗೂ ಸಂತೋಷ ಸಿಗುವುದು ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸದಾ ಆಕ್ಟೀವ್ ಆಗಿರಿ : ವರ್ಷದುದ್ದಕ್ಕೂ ಮಾಡಲಾಗದೇ ಇರುವ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಿ.  ಸ್ವಿಮ್, ಜಿಮ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇವು ನೀವು ಫುಲ್ ಆಕ್ಟಿವ್ ಆಗಿರಲು ಸಹಾಯ ಮಾಡುತ್ತವೆ. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ರಜೆಯಲ್ಲಿ ಸಿಕ್ಕಿದ್ದನ್ನೆಲ್ಲಾ ತಿಂದು ಅನಾವಶ್ಯಕವಾಗಿ ಬಾಡಿ ಬೆಳೆಸಿಕೊಳ್ಳುವ ಬದಲು ಸ್ಲಿಮ್ ಆಗಲು ಇದು ಸಕಾಲ.
ಪತ್ರ ಚಳುವಳಿ ಪ್ರಾರಂಭಿಸಿ : ಮೆಸೇಜ್, ಇಮೆಲ್ ಅಥವಾ ಚಾಟಿಂಗ್‍ನಿಂದಾಗಿ ಪತ್ರ ಬರೆಯುವ ಕೌಶಲ್ಯ ಮಾಯವಾಗುತ್ತಿದೆ. ರಜೆಯಲ್ಲಿ ಸಾಧ್ಯವಾದಷ್ಟೂ ಮೆಸೇಜ್ ಇಮೇಲ್ ಬಳಕೆ ಕಡಿಮೆ ಮಾಡಿ ಪತ್ರ ಚಳುವಳಿ ಪ್ರಾರಂಭಿಸಿ. ಇದು ನಿಮ್ಮ ಬರವಣೆಗೆಯ ಕೌಶಲ್ಯವನ್ನು ಜೀವಂತವಾಗಿಡುತ್ತದೆ ಹಾಗೂ ಭವಿಷ್ಯದಲ್ಲಿ ದಾಖಲೆಯ ರೂಪದಲ್ಲಿ ನೆನಪುಗಳನ್ನು ಮಧುರವಾಗಿಸುತ್ತದೆ. ನೀವು ಪತ್ರ ಚಳುವಳಿ ಪ್ರಾರಂಬಿಸುವ ಜೊತೆಗೆ ಗೆಳೆಯರನ್ನೂ ಪತ್ರ ಬರೆಯಲು ಪ್ರೋತ್ಸಾಹಿಸಿ.
ಅಲಂಕಾರಗೊಳಿಸಿ : ರಜಾವಧಿಯಲ್ಲಿ ಮನೆಯನ್ನು ಅಂದವಾಗಿಡಲು ಪ್ರಯತ್ನಿಸಿ. ರೀಡಿಂಗ್ ರೂಮ್, ಡೈನಿಂಗ್ ರೂಮ್, ಹಾಲ್, ಗೆಸ್ಟ್ ರೂಮ್ ಇತ್ಯಾದಿಗಳನ್ನು ವಿಶೇಷವಾಗಿ ಅಲಂಕರಿಸಲು ಪ್ರಯತ್ನಿಸಿ. ಅಲಂಕಾರ ನಿಮ್ಮ ಕನಸಿಗೆ ಬಣ್ಣ ಕೊಡುವಂತಿರಲಿ. ಅಲಂಕಾರವು ನಿಮ್ಮ ಸೃಜನಶೀಲತೆಯನ್ನು ಬಿಂಬಿಸುವುದಲ್ಲದೇ ನೋಡುಗರಿಗೆ ರಸದೌತಣ ನೀಡುತ್ತದೆ. ಕಡಿಮೆ ಬೆಲೆಯ ಅಥವಾ ಬಳಸಿ ಬಿಸಾಡಿದ ವಸ್ತುಗಳಿಂದ ಕ್ರಿಯೇಟಿವ್ ಆಗಿ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ನೇತು ಹಾಕಿ. ಇವು ಮನೆಯ ಅಂದ ಹೆಚ್ಚಿಸುವುದಲ್ಲದೇ ಮನಸ್ಸಿಗೆ ಮುದ ನೀಡುತ್ತವೆ.
ಆತ್ಮೀಯರನ್ನು ಆಮಂತ್ರಿಸಿ : ರಜೆಯಲ್ಲಿ ಆತ್ಮೀಯ ಕುಟುಂಬಗಳ ಸದಸ್ಯರನ್ನು ಸ್ನೇಹಿತರನ್ನು ಆಮಂತ್ರಿಸಿ. ಇದರಿಂದ ಪರಸ್ಪರ ಕುಟುಂಬಗಳ ನಡುವಿನ ಭಾಂದವ್ಯ ಗಟ್ಟಿಗೊಳ್ಳುವುದಲ್ಲದೇ ಮನೋರಂಜನೆ ದೊರೆಯುತ್ತದೆ. ಏಕಾಂಗಿತನ ಕಳೆದು ಸಂತೋಷ ಹೆಚ್ಚುತ್ತದೆ.
ಸ್ವಯಂ ಸೇವಕರಾಗಿ : ಅವಕಾಶ ದೊರೆತಾಗಲೆಲ್ಲ ನಿರಾಶ್ರಿತರಿಗೆ, ಅಶಕ್ತರಿಗೆ ಸಹಾಯ ಮಾಡುವ ಸ್ವಯಂ ಸೇವಕರಾಗಿ. ಬಡಮಕ್ಕಳಿಗೆ ಪಾಠ ಹೇಳಿ ಅಥವಾ ಸ್ನೇಹಿತರೊಡಗೂಡಿ ಆರೋಗ್ಯ/ಯೋಗದಂತಹ ಶಿಬಿರಗಳನ್ನು ನಡೆಸಿ. ಹೀಗೆ ಮಾಡುವುದರಿಂದ ನೀವು ವಾಸಿಸುವ ಸಮುದಾಯದ ಸಕ್ರಿಯ ಸದಸ್ಯರಾಗುತ್ತೀರಿ.
ವಿಶೇಷ ವ್ಯಕ್ತಿಗಳನ್ನು ಸಂಪರ್ಕಿಸಿ : ನಿಮ್ಮ ಸುತ್ತಮುತ್ತಲಿನ ವಿಶೇಷ ವ್ಯಕ್ತಿಗಳನ್ನು ಅಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಸಂಪರ್ಕಿಸಿ. ಅವರ ಜೀವನದ ಸಾಧನೆಯ ಮೈಲಿಗಲ್ಲುಗಳನ್ನು ತಿಳಿದುಕೊಳ್ಳಿ. ನೀವೂ ಉನ್ನತ ಹಂತಕ್ಕೆ ಬೆಳೆಯಲು ಇವು ಸಹಕಾರಿ.
ಬರವಣಿಗೆಯ ಕೌಶಲ್ಯ ಬೆಳೆಸಿಕೊಳ್ಳಿ : ನಿಮ್ಮ ಶಕ್ತಿ ಸಾಮಥ್ರ್ಯಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಅಥವಾ ಪ್ರಚಾರ ಪಡಿಸಲು ಬರವಣಿಗೆ ಅತ್ಯಂತ ಪ್ರಭಾವಿ ಮಾಧ್ಯಮ. ನಿಮ್ಮ ಭಾವನೆಗಳಿಗೆ, ಅಭಿಪ್ರಾಯಗಳಿಗೆ, ಜೀವನದ ಮಧುರ ಕ್ಷಣಗಳಿಗೆ ಬರವಣಿಗೆಯ ಸ್ವರೂಪ ನೀಡಿ. ಈ ಹವ್ಯಾಸವನ್ನು ವೃದ್ದಿಸಿಕೊಂಡರೆ ನಿಮ್ಮನ್ನು ನೀವು ಉನ್ನತ ಹಂತಕ್ಕೆ ಕೊಂಡೊಯ್ಯಬಹುದು. ನಿಮ್ಮ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ಹಾಗೂ ಗುರಿಗಳನ್ನೂ ಸಹ ಪಟ್ಟಿಮಾಡಿ. ಇವು ನೀವು ಸರಿದಾರಿಯಲ್ಲಿ ನೆಡೆಯಲು ಸಹಕಾರಿಯಾಗುತ್ತವೆ. ಆದ್ದರಿಂದ ಸಮಯ ದೊರೆತಾಗಲೆಲ್ಲ  ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ.
ಕಿರುಚಿತ್ರ/ಸಾಕ್ಷ್ಯಚಿತ್ರ ನಿರ್ಮಿಸಿ : ಇತ್ತೀಚೆಗೆ ಯೂಟ್ಯೂಬ್‍ನಂತಹ ವೆಬ್‍ಸೈಟ್‍ಗಳಲ್ಲಿ ಅತ್ಯುತ್ತಮವಾದ ಕಿರುಚಿತ್ರಗಳು ಜನಪ್ರಿಯ ಆಗುತ್ತಿರುವುದನ್ನು ನೋಡಿದರೆ ವೀಕ್ಷಕರಿಗೆ ಕಿರುಚಿತ್ರದ ಜ್ವರ ಹಿಡಿದಿರುವಂತೆ ಭಾಸವಾಗುತ್ತದೆ. ಉತ್ತಮ ಸಂದೇಶಗಳನ್ನು ರವಾನಿಸಲು ವಿಡಿಯೋಗಳು ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿವೆ. ಸ್ನೇಹಿತರ ಜೊತೆಗೂಡಿ ಸ್ವಸ್ಥ ಸಮಾಜಕ್ಕೆ ಪೂರಕವಾದ ಅಥವಾ ಪರಿಸರ ಕಾಳಜಿ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಬಹುದು. ಸಾಮಾನ್ಯವಾಗಿ ಇಂದು ಬಹುತೇಕರ ಬಳಿ ಮಲ್ಟಿ ಮೀಡಿಯಾ ಮೋಬೈಲ್ ಇರುತ್ತದೆ. ಇಂತಹ ಮೊಬೈಲ್‍ಗಳಿಂದಲೇ ಚಿತ್ರೀಕರಣ ಮಾಡಿ 5-10 ನಿಮಿಷಗಳ ಕಿರುಚಿತ್ರ ನಿರ್ಮಿಸಬಹುದು. ಇದಕ್ಕೆ ಬೇಕಾದ ಥೀಮ್, ಸಂಭಾಷಣೆ ಇತ್ಯಾದಿಗಳನ್ನು ಸ್ನೇಹಿತರೇ ಸೇರಿ ಹೊಂದಾಣಿಕೆ ಮಾಡಿಕೊಂಡರೆ ಇನ್ನೂ ಉತ್ತಮ. ಇದೊಂದು ಉತ್ತಮ ಹವ್ಯಾಸವಾಗಿದ್ದು, ಸಾಮಾಜಿಕ ಪರಿವರ್ತನೆಯಲ್ಲಿ ತಂತ್ರಜ್ಞಾನದ ಸಹಾಯ ಪಡೆಯಲು ಸಹಕಾರಿಯಾಗಿದೆ.
ಸಮ್ಮರ್ ಕ್ಯಾಂಪ್ ನಡೆಸಿ : ನೀವು ವಾಸಿಸುವ ಪರಿಸರದಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್ ನಡೆಸಿ. ಸಾಮಾನ್ಯವಾಗಿ ಖಾಸಗೀ ಅಥವಾ ನಗರ ಶಾಲೆಗಳ ಮಕ್ಕಳು ವಿವಿಧ ಕ್ಯಾಂಪ್‍ಗಳಲ್ಲಿ ಭಾಗವಹಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಇದರಿಂದ ವಂಚಿತರಾಗಿರುತ್ತಾರೆ. ಈ ಕೊರತೆಯನ್ನು ನೀಗಿಸಲು ಹಾಗೂ ನಿಮ್ಮನ್ನು ಆಕ್ಟೀವ್ ಆಗಿಡಲು ಇಂತಹ ಕ್ಯಾಂಪ್‍ಗಳು ಸಹಕಾರಿ. ಇವು ನಿಮಗೆ ಗೌರವ ಸಮರ್ಪಣೆಯ ಅವಕಾಶಗಳು.
ಆಲ್ಬಂ ರಚಿಸಿ : ಹಳೆಯ ಚಿತ್ರಗಳನ್ನು, ಫೋಟೋಗಳನ್ನು, ಅಂಚೆಚೀಟಿಗಳನ್ನು, ವಿವಿಧ ದೇಶಗಳ ನೋಟುಗಳನ್ನು ನಾಣ್ಯಗಳನ್ನು ಸಂಗ್ರಹಿಸಿ ಆಲ್ಬಂ ತಯಾರಿಸಿ. ಇವು ಕಾಲಘಟ್ಟದ ಘಟನೆಗಳನ್ನು ಮೆಲುಕು ಹಾಕಲು ಇರುವ ಉತ್ತಮ ಚಟುವಟಿಕೆಗಳು.
ಹೊಸದನ್ನು ಕಲಿಯಿರಿ : ವಿಶೇಷವಾದುದನ್ನು ಮಾಡಲು ಅಥವಾ ಹೊಸ ಅಂಶಗಳನ್ನು ಕಲಿಯಲು ರಜಾವಧಿ ಅತ್ಯುತ್ತಮ ಅವಕಾಶ. ಅದು ಹೊಸ ಆಟವಾಗಿರಬಹುದು, ಹೊಸ ರುಚಿಯಾಗಿರಬಹುದು, ಸಂಗೀತ ಕಲಿಯುವುದು ಆಗಿರಬಹುದು ಅಥವಾ ಹೊಸ ಭಾಷೆ ಕಲಿಯುವುದು ಆಗಿರಬಹುದು. ಒಟ್ಟಾರೆ ಯಾವುದೇ ಧನಾತ್ಮಕ ಹೊಸ ಅಂಶ ಕಲಿಯಲು ಇರುವ ಉತ್ತಮ ಅವಕಾಶ ಕಳೆದುಕೊಳ್ಳಬೇಡಿ.
    ಮೇಲಿನ ಅಂಶಗಳಲ್ಲದೇ ನಿಮ್ಮ ವ್ಯಕ್ತಿತ್ವ ವೃದ್ದಿಸಲು ಸಹಕಾರಿಯಾದ ಇನ್ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಿ. ಅವಕಾಶಗಳಿಗೆ ಕೊನೆಯಿಲ್ಲ ನಿಜ. ಆದರೆ ಇರುವ ಅವಕಾಶ ಕಳೆದುಕೊಂಡರೆ ಮತ್ತೆ ದೊರಕಲಾರದು ಎಂಬುದನ್ನು ನೆನಪಿಡಿ. ರಜೆಯನ್ನು ಸಂಪೂರ್ಣವಾಗಿ ಅರ್ಥಪೂರ್ಣವಾಗಿ ಕಳೆಯಿರಿ. ಮಸ್ತ್ ಮಜಾ ಮಾಡಿ. ಖುಷಿ ಪಡಿ.
ಆರ್.ಬಿ.ಗುರುಬಸವರಾಜ
ಹೊಳಗುಂದಿ(ಪೊ)
ಹಡಗಲಿ(ತಾ)
ಬಳ್ಳಾರಿ(ಜಿ) 583219
9902992905

No comments:

Post a Comment