December 24, 2015

ವಿಜ್ಞಾನೋತ್ಸವ-2015

 ದಿನಾಂಕ 02-11-2015ರ  ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015

    ಸಂಶೋಧನೆಗಳಿಗೆ ವೈಜ್ಞಾನಿಕ ಮನೋಭಾವವು ಮೂಲಭೂತ ಅಂಶ. ವೈಜ್ಞಾನಿಕ ಮನೋಭಾವವು ನಮ್ಮ ಆಲೋಚನಾ ರೀತಿ ಮತ್ತು ಸಮಸ್ಯಾ ಪರಿಹಾರ ವಿಧಾನಗಳಿಗೆ ಮಾನಸಿಕ ಪರಿವರ್ತನೆಯಾಗಿದೆ. ಈ ವರ್ತನೆಯು ದೇಶದ ಜನತೆಯನ್ನು ಉನ್ನತ ಹಂತಕ್ಕೆ ಬೆಳೆಸುತ್ತದೆ.
    ಭಾರತವು ಉತ್ಪಾದನೆ ಮತ್ತು ವಿತರಣೆಯಲ್ಲಿ ಅಮೂಲ್ಯ ಕೊಡುಗೆ ನೀಡಿದೆ. ಜೊತೆಗೆ ಅನೇಕ ವೈಜ್ಞಾನಿಕ ಸಾಧನೆಗಳ ಹೆಗ್ಗುರುತು ಮೂಡಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತವು ತಾಂತ್ರಿಕವಾಗಿ ಅರ್ಹರಾದ ಅನೇಕ ವೃತ್ತಿಪರರ ದೊಡ್ಡ ಗುಂಪನ್ನು ಹೊಂದಿದ್ದರೂ ದೇಶದಾದ್ಯಂತ ವೈಜ್ಞಾನಿಕ ಮನೋಭಾವ ಸಂಪೂರ್ಣವಾಗಿ ಬೆಳೆದುಬಂದಿಲ್ಲ. ಆದ್ದರಿಂದ ವೈಜ್ಞಾನಿಕ ಮನೋಭಾವದ ಮಂತ್ರ ಜಪಿಸುವುದು ಹಿಂದೆಂದಿಗಿಂತಲೂ ಈಗಿನ ತುರ್ತು ಅಗತ್ಯವಾಗಿದೆ. ಇಡೀ ಸಮಾಜದುದ್ದಕ್ಕೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕ ಮನೋಭಾವನೆ ಬಲಪಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯಗಳು ಜಂಟಿಯಾಗಿ ‘ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015’ನ್ನು ಸಂಘಟಿಸಿವೆ.
    ದೇಶದಾದ್ಯಂತ ಇರುವ ಯುವ ವಿಜ್ಞಾನಿಗಳಿಗೆ ವೈಜ್ಞಾನಿಕ ವಿಷಯದಲ್ಲಿನ ಹೊಸ ಐಡಿಯಾ, ಸಂಶೋಧನೆ, ಅನುಭವ, ಸಾಧನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರಸಾರ ಮಾಡಲು ವೇದಿಕೆ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಿದೆ. ಇದರಲ್ಲಿ ಜನಸಾಮಾನ್ಯರು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಉದ್ದಿಮೆದಾರರು, ವಿಜ್ಞಾನಿಗಳು ಹೀಗೆ ಒಟ್ಟು 3500 ಜನ ಭಾಗವಹಿಸುವ ನೀರೀಕ್ಷೆಯಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಮೂಲಕ ವೈಜ್ಞಾನಿಕ ಮನೋಭಾವನೆ ಮೂಡಿಸುವ ಆಶಯ ಹೊಂದಲಾಗಿದೆ.
ಯಾವಾಗ? ಎಲ್ಲಿ?: ಈ ಕಾರ್ಯಕ್ರಮವು 2015ರ ಡಿಸೆಂಬರ್ 4 ರಿಂದ 8ರವರೆಗೆ 5 ದಿನಗಳ ಕಾಲ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಉದ್ದೇಶಗಳು :

•    ವಿಜ್ಞಾನ ಮತ್ತು ತಂತ್ರಜ್ಞಾನದ ಫಲವನ್ನು ಜನಸಾಮಾನ್ಯರ ಗಮನಕ್ಕೆ ತರುವುದು.
•    ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಕಾರ್ಯತಂತ್ರ ರೂಪಿಸುವುದು.
•    ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಾರತೀಯರ ಕೊಡುಗೆಗಳನ್ನು ಪ್ರದರ್ಶಿಸುವುದು.
•    ಯುವ ವಿಜ್ಞಾನಿಗಳಿಗೆ ತಮ್ಮ ಹೊಸ ಐಡಿಯಾಗಳ ಪ್ರದರ್ಶನ ಮತ್ತು ಪ್ರಸಾರಕ್ಕೆ ವೇದಿಕೆ ಒದಗಿಸುವುದು.
•    ಗೌರವಾನ್ವಿತ ಪ್ರಧಾನಮಂತ್ರಿಗಳ ಪ್ರಮುಖ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಮುಂತಾದವುಗಳನ್ನು ಪೋಷಿಸುವುದು.

ಕಾರ್ಯ ಚಟುವಟಿಕೆಗಳು:

•    ವಿಜ್ಞಾನ ಪ್ರಯೋಗಾಲಯ ಪ್ರದರ್ಶನ : ದೆಹಲಿ ಸೇರಿದಂತೆ ಸುತ್ತಮುತ್ತಲ ಶಾಲಾ ಮಕ್ಕಳಿಗಾಗಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ಪ್ರದರ್ಶನ ನಡೆಯಲಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗೆಗಿನ ಸಾವಿರಾರು ಮಕ್ಕಳು ಬಾಗವಹಿಸಲಿದ್ದು, ಕೈಗಳಿಂದ ಮಾಡಬಹುದಾದ ಅನೇಕ ವಿಜ್ಞಾನ ಪ್ರಯೋಗಗಳನ್ನು ಪ್ರಾಯೋಗಿವಾಗಿ ಮಾಡಿ ಅನುಭವ ಪಡೆಯುವರು.

•    ಯುವ ವಿಜ್ಞಾನಿಗಳ ಸಮಾವೇಶ : ಭಾರತದಲ್ಲಿನ ಯುವವಿಜ್ಞಾನಿಗಳ ಹೊಸ ಐಡಿಯಾಗಳ ಪ್ರಸಾರ ಮತ್ತು ಪ್ರಚಾರ ಮಾಡುವ ವೇದಿಕೆ ಇದಾಗಿದೆ. ಇದರಲ್ಲಿ ಪ್ರಮುಖವಾಗಿ ನವೀನ ಕೃಷಿ ಪದ್ದತಿಗಳು, ರಿಮೋಟ್ ತಂತ್ರಜ್ಞಾನದ ಅನ್ವಯಿಕಗಳು, ಮೇಕ್ ಇನ್ ಇಂಡಿಯಾಗಾಗಿ ನವೀನ ವಿನ್ಯಾಸಗಳು, ಹಸಿರು ಶಕ್ತಿ, ತಾಜ್ಯ ನಿರ್ವಹಣೆ, ಪರಿಸರ ನಿರ್ವಹಣೆ ಹೀಗೆ ಹಲವಾರು ವಿಷಯಗಳ ಕುರಿತು ಯುವ ವಿಜ್ಞಾನಿಗಳ ಉಪನ್ಯಾಸ ಮತ್ತು ಸಂವಾದ ನಡೆಯುತ್ತದೆ.

•    ಶೈಕ್ಷಣಿಕ ಮತ್ತು ಔಧ್ಯಮಿಕ ಸಮಾಗಮ : ವಿದ್ಯಾರ್ಥಿಗಳಲ್ಲಿ ಉಧ್ಯಮ ಜ್ಞಾನದ ಬಲವರ್ಧನೆಗಾಗಿ ಶೈಕ್ಷಣಿಕ ಔಧ್ಯಮಿಕ ಸಮಾಗಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಪರಿಸರ ಜ್ಞಾನ ಮತ್ತು ಉಧ್ಯಮ ಜ್ಞಾನ ನೀಡುವುದು ಇದರ ಆಶಯ.

•    ಚಲನಚಿತ್ರ ಪ್ರದರ್ಶನ : ಶೈಕ್ಷಣಿಕ ಹಾಗೂ ವೈಜ್ಞಾನಿಕ ಮನೋಭಾವದ ಹಿನ್ನಲೆಯಲ್ಲಿ ರಚನೆಯಾದ ಯಶಸ್ವಿ ಚಲನಚಿತ್ರಗಳ ಪ್ರದರ್ಶನ ವಿಜ್ಞಾನೋತ್ಸವದ ಮತ್ತೊಂದು ಆಕರ್ಷಣೆ. ಸಮಕಾಲೀನ ಮತ್ತು ಜಾಗತಿಕ ಮೆಚ್ಚುಗೆ ಪಡೆದ ಹಲವಾರು ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಗ್ರಾಮೀಣ ಪ್ರದೇಶಗಳಿಗೆ ಡಿಜಿಟಲ್ ತಂತ್ರಜ್ಞಾನವನ್ನು ತಲುಪಿಸುವ ಹಾಗೂ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮತ್ತು ಶೈಕ್ಷಣಿಕ ಘಟನಾಧಾರಿತ ಚಲನಚಿತ್ರ ತರಬೇತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

•    ತಾಂತ್ರಿಕ ಉಧ್ಯಮ ಎಕ್ಸ್‍ಪೊ : ತಂತ್ರಜ್ಞಾನಕ್ಕೆ ಸಂಬಂಧಿಸಿದ ನಾವಿನ್ಯತೆಗಳು, ಸಾಧನೆಗಳು, ಆಧುನಿಕ ಮತ್ತು ಭವಿಷ್ಯದ ಮಾದರಿಗಳ ಪ್ರದರ್ಶನ ನಡೆಯಲಿದೆ. ಕಲಾವಿದರು, ತಂತ್ರಜ್ಞರು, ವಿನ್ಯಾಸಕಾರರು, ಹಾಗೂ ವಿಜ್ಞಾನಿಗಳ ಸಂವೇದನಾತ್ಮಕ ವೇದಿಕೆ ಇದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸಂಸ್ಕøತಿ ಹಾಗೂ ಸಂಪ್ರದಾಯ ಉಳಿಸುವ ಚಿತ್ರಣ ಕಲೆಯ ಪ್ರದರ್ಶನ ನಡೆಯಲಿದೆ.

•    ವಿಜ್ಞಾನ ವಸ್ತು ಪ್ರದರ್ಶನ : ಎಲ್ಲಾ ರಾಜ್ಯಗಳಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇನ್‍ಸ್ಪೈರ್ ಅವಾರ್ಡ್‍ನ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ನಡೆಯಲಿದೆ. ಇದರಲ್ಲಿ 800ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಅಂತಿಮವಾಗಿ 3 ಮಾದರಿಗಳನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಗೆ ಪ್ರಶಸ್ತಿ ನೀಡಲಾಗುತ್ತದೆ.

  

ಆರ್.ಬಿ.ಗುರುಬಸವರಾಜ





No comments:

Post a Comment