December 24, 2015

ಪಿ.ಎಚ್.ಡಿ. PHD

 ದಿನಾಂಕ 16-12-2015 ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ.

ಪಿ.ಎಚ್.ಡಿ. ಪಡೆಯೋಕೆ ರೆಡಿ ಆಗಿ

    ಪ್ರತಿಯೊಬ್ಬ ಪದವೀಧರರಿಗೂ ಡಾಕ್ಟರ್ ಆಗಬೇಕೆಂಬ ಹಂಬಲ ಸಹಜ. ಆದರೆ ಬಹುತೇಕರು ಪದವಿ ಮುಗಿಸುವುದೇ ಒಂದು ಮಹತ್ಸಾಧನೆ ಎಂದು ಭಾವಿಸಿ ಅಲ್ಲಿಗೆ ತಮ್ಮ  ವ್ಯಾಸಂಗವನ್ನು ಸ್ಥಗಿತಗೊಳಿಸುತ್ತಾರೆ. ಆದರೆ ನಿಜವಾದ ಪದವಿಯ ಸೌಭಾಗ್ಯ ಮತ್ತು ಹೆಮ್ಮೆ ಇರುವುದು ಮುಂದಿನ ಅಧ್ಯಯನದಲ್ಲಿ ಎಂಬುದನ್ನು ಮರೆಯುತ್ತಾರೆ. ಅಂತಹ ಪದವಿ ಎಂದರೆ ಪಿ.ಎಚ್.ಡಿ ಪದವಿ. ಪಿ.ಎಚ್.ಡಿ ಪದವಿ ಹೊಂದುವ ಮೂಲಕ ನೀವೂ ಡಾಕ್ಟರೇಟ್ ಆಗಬಹುದು.
    ಪಿ.ಎಚ್.ಡಿ ಅಥವಾ ಡಾಕ್ಟರೇಟ್ ಎನ್ನುವುದು ಒಂದು ಉನ್ನತ ಮತ್ತು ಮಹತ್ವದ ಶೈಕ್ಷಣಿಕ ಅರ್ಹತೆಯಾಗಿದೆ. ಪಿ.ಎಚ್.ಡಿ ಪದವಿಯು ಉದ್ಯೋಗ ಮತ್ತು ವೃತ್ತಿ ಪರಿಣತಿಯಲ್ಲಿ ಉತ್ತಮ ಹೆಸರು ಗಳಿಸಲು ಅತ್ಯುತ್ತಮ ಪದವಿಯಾಗಿದೆ.
    ವೃತ್ತಿಪರ ಕೌಶಲ್ಯತೆಗಳು ಸೇವಾ ಅನುಭವದಿಂದ ಬೆಳೆಯುತ್ತವೆಯೇ ಹೊರತು ಕ್ರಮಾಗತ ಸಂಶೋಧನೆಯಿಂದಲ್ಲ. ಆದರೆ ಪಿ.ಎಚ್.ಡಿ ಪದವಿ ಪಡೆಯುವುದರಿಂದ ಅಧ್ಯಯನ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಯುತ್ತದೆ ಹಾಗೂ ಪ್ರತಿಯೊಂದು ಸಮಸ್ಯೆಗಳನ್ನೂ ವೈಜ್ಞಾನಿಕ ತತ್ವಗಳ ಆಧಾರದ ಮೇಲೆ ಪರಿಹರಿಸಿಕೊಳ್ಳುವ ಗುಣಗಳು ಮೂಡುತ್ತವೆ. ಆದ್ದರಿಂದ ಪಿ.ಎಚ್.ಡಿ ಪದವಿಧರರಿಗೆ ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಬೇಡಿಕೆ ಇದೆ.

ಪಿ.ಎಚ್.ಡಿ. ಏಕೆ?

ಗಮನಾರ್ಹವಾದುದನ್ನು ಸಾಧಿಸಲು : ಕೆಲವರು ಹಣ ಗಳಿಸಿ ಹೆಸರು ಗಳಿಸಬಹುದು. ಆದರೆ ಅದು ಕೇವಲ ಹಣ ಇರುವವರೆಗೆ ಮಾತ್ರ. ಪಿ.ಎಚ್.ಡಿ ಪದವಿಯು ಹಣ ಗಳಿಕೆಯ ಮಾರ್ಗವಲ್ಲ. ಬದಲಾಗಿ ಉನ್ನತ ಹೆಸರು ಮತ್ತು ಸಾಮಾಜಿಕ ಗೌರವ, ಸ್ಥಾನಮಾನ ಗಳಿಕೆಯ ಸಾಧನವಾಗಿದೆ. ಇತರರಿಗಿಂತ ಭಿನ್ನವಾದ ಸಾಧನೆಯ ಮಾರ್ಗವಾಗಿದೆ. ಗಮನಾರ್ಹವಾದುದನ್ನು ಸಾಧಿಸಬಯಸುವವರಿಗೆ ಪಿ.ಎಚ್.ಡಿ ಉತ್ತಮ ಪದವಿಯಾಗಿದೆ.
ಹೊಸದನ್ನು ಕಲಿಯಲು : ಮಗುವಿನಂತಹ ಕುತೂಹಲ ಇಲ್ಲದೇ ಯಾರೂ ಮಹಾನ್ ಸಂಶೋಧಕರಾಗಲು ಸಾಧ್ಯವಿಲ್ಲ. ಅಂತಹ ಕುತೂಹಲಗಳ ಹಾದಿಯಲ್ಲಿ ಪಯಣಿಸಿ ವಿಶೇಷವಾದುದನ್ನು ಸಂಶೋಧಿಸಿಲು ಪಿ.ಎಚ್.ಡಿ ಪದವಿಯೊಂದೇ ಮಾರ್ಗ. ಅಂತಹ ಅನ್ವೇಷಕ ಶಕ್ತಿಗೆ ಕುತೂಹಲದ ಕಲಿಕೆ ಮುಖ್ಯ. ಪರಿಪೂರ್ಣ ಕಲಿಕಾರ್ಥಿ ಆಗದ ಹೊರತು ಸಂಶೋಧಕನಾಗಲು ಸಾಧ್ಯವಿಲ್ಲ.
ವೈಯಕ್ತಿಕ ಹಾಗೂ ವೃತ್ತಿ ಜೀವನ ಸುಧಾರಿಸಲು : ಪಿ.ಎಚ್.ಡಿ ಪದವಿಯಿಂದ ಕೇವಲ ಉನ್ನತ ಹೆಸರು ಮಾತ್ರವಲ್ಲ ಬದಲಾಗಿ ವೃತ್ತಿ ಸಾಮಥ್ರ್ಯಗಳ ಅಭಿವೃದ್ದಿ ಆಗುತ್ತದೆ. ಈ ಸಾಮಥ್ರ್ಯಗಳು ವೃತ್ತಿ ಜೀವನವನ್ನು ಸುಂದರವಾಗಿಸುತ್ತದೆ ಜೊತೆಗೆ ವೈಯಕ್ತಿಕ ಜೀವನವನ್ನೂ ಸಹ ಸುಧಾರಿಸುತ್ತದೆ.
ಸಮಸ್ಯೆಗಳಿಗೆ ಪರಿಹಾರ : ಸಂಶೋಧನಾ ಅಭ್ಯರ್ಥಿಗೆ ಸಮಸ್ಯೆಗಳೇ ಇರುವುದಿಲ್ಲ. ಬಂದರೂ ಅದನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ವೈಜ್ಞಾನಿಕ ಮಾರ್ಗಗಳು ಸಿದ್ದಿಸಿರುತ್ತವೆ. ಇದರಿಂದಾಗಿ ಡಾಕ್ಟರೇಟ್ ಪಡೆದವರು ವೃತ್ತಿಯಲ್ಲಿ ಎಂದಿಗೂ ಸೋಲನ್ನು ಅನುಭವಿಸುವುದಿಲ್ಲ. ಅವರಲ್ಲಿನ ಆತ್ಮವಿಶ್ವಾಸ ಹಾಗೂ ಉತ್ತಮ ಸಂವಹನ ಕೌಶಲ್ಯಗಳಿಂದ ಸಂತೋಷದಾಯಕ ಜೀವನ ಕಳೆಯುತ್ತಾರೆ.
ವಿಷಯದ ಆಳ ಅರಿಯಲು : ಪಿ.ಎಚ್.ಡಿ.ಯಲ್ಲಿ ಕೈಗೊಳ್ಳುವ ಚಿಕ್ಕ ಚಿಕ್ಕ ಸಂಶೋಧನೆಗಳು ನಿಮ್ಮನ್ನು ಉನ್ನತ ಹಂತಕ್ಕೆ ಬೆಳೆಸುತ್ತವೆ. ಜೊತೆಗೆ ವಿಷಯದ ಕುರಿತ ಆಳವಾದ ಜ್ಞಾನವನ್ನು ಮೂಡಿಸುತ್ತವೆ. ವಿಷಯದ ಪರಿಣತೆಯಿಂದಾಗಿ ನೀವೊಬ್ಬ ಆತ್ಯಾಕರ್ಷಕ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ.
ನೈಜ ಜಗತ್ತಿನ ಅನಾವರಣ : ಸಂಶೋಧನೆಗಳನ್ನು ಕೈಗೊಳ್ಳಲು ಸಾಕಷ್ಟು ಅಧ್ಯಯನ ಹಾಗೂ ವಿವಿಧ ವ್ಯಕ್ತಿಗಳ ಭೇಟಿಯಿಂದಾಗಿ ನೈಜ ಜಗತ್ತಿನ ಅರಿವಾಗುತ್ತದೆ.


ವಿದ್ಯಾರ್ಹತೆ : ಪಿ.ಎಚ್.ಡಿ. ಪದವಿ ಪಡೆಯಲು ಯಾವುದಾದರೂ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 55 ಹಾಗೂ ಪ.ಜಾ, ಪ.ಪಂ, ಪ್ರ ವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ ಸ್ನಾತಕ ಪದವಿ ಪಡೆದಿರಬೇಕು.
    ಪ್ರವೇಶ ಪರೀಕ್ಷೆ : ಪಿ.ಎಚ್.ಡಿ ಪದವಿಗಾಗಿ ಅವಶ್ಯಕ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಯು.ಜಿ.ಸಿ, ನೆಟ್, ಸ್ಲೆಟ್, ಗೇಟ್, ಎಂ.ಫಿಲ್ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಿ.ಎಚ್.ಡಿ. ಪದವಿಗೆ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಬಹು ಆಯ್ಕೆಯ ಸ್ವರೂಪದಲ್ಲಿದ್ದು, 100 ಪ್ರಶ್ನೆಗಳಿಗೆ 100 ಅಂಕಗಳು ನಿಗದಿಯಾಗಿರುತ್ತದೆ. ಇದರಲ್ಲಿ 50 ಅಂಕಗಳು ವಿಷಯದ ಅಧ್ಯಯನ ವಿಧಾನ ಹಾಗೂ 50 ಅಂಕಗಳು ಆಯ್ಕೆ ಮಾಡಿಕೊಂಡ ವಿಷಯದ ಜ್ಞಾನಕ್ಕೆ ಸಂಬಂಧಿಸಿರುತ್ತವೆ.
    ಪ್ರವೇಶ ಪರೀಕ್ಷಾ ಶುಲ್ಕ : ಆಯಾ ವಿಶ್ವವಿದ್ಯಾಲಯದ ನಿಯಮಾವಳಿಗೆ ತಕ್ಕಂತೆ ಶುಲ್ಕದಲ್ಲಿ ಬದಲಾವಣೆ ಇರುತ್ತದೆ. ಆದಗ್ಯೂ 500 ರೂ.ಗಳಿಂದ 750 ರೂ.ಗಳವರೆಗೆ ಶುಲ್ಕ ಇರುತ್ತದೆ.

   

ಹೀಗಿರಲಿ ಪಿ.ಎಚ್.ಡಿ!

    ಪಿ.ಎಚ್.ಡಿ ಎಂಬುದು ಕೇವಲ ಪದವಿಯಲ್ಲ. ಇದೊಂದು ಸಂಶೋಧನಾ ವಿಧಾನ. ಭವಿಷ್ಯದ ಮಾರ್ಗದರ್ಶಿ. ನಿಮ್ಮ ವೃತ್ತಿ ಹಾಗೂ ಪ್ರವೃತ್ತಿಯ ಪ್ರತೀಕ. ಹಾಗಾಗಿ ಪಿ.ಎಚ್.ಡಿ ಮಾಡುವಾಗ ಕೆಲವು ಕಟ್ಟುನಿಟ್ಟಿನ ಕ್ರಮಗಳು ಅಗತ್ಯ.
ಸಕ್ರಿಯತೆ ಇರಲಿ : ಪಿ.ಎಚ್.ಡಿ.ಯಲ್ಲಿ ಸಂಶೋಧನೆಗೆ ಪ್ರಮುಖ ಪ್ರಾಧಾನ್ಯತೆ ಇದ್ದು, ಸಂಶೋಧನೆಗೆ ವಿಷಯ ಆಯ್ಕೆ ಮಾಡುವಾಗ ಜಾಗ್ರತೆ ಇರಲಿ. ವಿಷಯದ ಕುರಿತ ಸಕ್ರಿಯವಾಗಿ ಸಂಶೋಧನೆ ಕೈಗೊಳ್ಳಿ. ವಿಷಯದ ಮಾಹಿತಿಗಾಗಿ ಪುಸ್ತಕಗಳು, ಸ್ಥಳಗಳು, ವ್ಯಕ್ತಿಗಳು, ಸಂಸ್ಥೆಗಳು ಹೀಗೆ ಎಲ್ಲೆಲ್ಲಿ ಮಾಹಿತಿ ಪಡೆಯಲು ಸಾಧ್ಯವೋ ಅವುಗಳಲ್ಲೆಲ್ಲಾ ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ಸಂಗ್ರಹಿಸಿ.
ನಿರ್ದಿಷ್ಟತೆ ಇರಲಿ : ಬಹುತೇಕ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಸೇರುವವರೆಗೂ ತಾವೇನು ಸಂಶೋಧಿಸಬೇಕೆಂಬ ಬಗ್ಗೆ ನಿಖರ  ಕಲ್ಪನೆ ಇರುವುದಿಲ್ಲ. ಗೊತ್ತು ಗುರಿ ಇಲ್ಲದ ಪದವಿಯು  ಪರಿಪೂರ್ಣ ಶಿಕ್ಷಣ ಅಲ್ಲ. ಹಾಗಾಗಿ ಪದವಿ ಹಂತದಲ್ಲಿಯೇ ಮುಂದಿನ ಗುರಿಯ ಬಗ್ಗೆ ಕನಸು ಕಾಣಬೇಕು ಹಾಗೂ ಅದನ್ನು ಸಾಕಾರಗೊಳಿಸುವ ಮಾರ್ಗಗಳ ಕುರಿತು ಮಾಹಿತಿ ಸಂಗ್ರಹಿಸಬೇಕು. ಏಕೆಂದರೆ ಅದೊಂದು ನೈಪುಣ್ಯದ ಸಂಶೋಧನೆ. ಪಿ.ಎಚ್.ಡಿ ಕಾರ್ಯಕ್ರಮದ ಕೊನೆಗೆ ನಿಮ್ಮ ನೈಪುಣ್ಯಕ್ಕೆ ಅಭೂತಪೂರ್ವ ಬೆಲೆ, ಗೌರವ, ಮನ್ನಣೆ ಸಿಗಲಿದೆ. ಆದ್ದರಿಂದ ಪದವಿ ಹಂತದಲ್ಲಿರುವಾಗಲೇ ಸಂಶೋಧನೆಯ ತಂತ್ರ ಮತ್ತು ಸತ್ಯಶೋಧನೆಯ ಮಾರ್ಗಗಳನ್ನು ವಿನ್ಯಾಸಗೊಳಿಸಿಕೊಳ್ಳಿ.
ಕನಸಿಗೆ ಬಣ್ಣಕೊಡಿ : ಸಂಶೋಧನೆಗೆ ನಿರ್ದಿಷ್ಟ ವಿಷಯಗಳಿಲ್ಲ. ನಿಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಬಹುದು. ಆರೋಗ್ಯ, ಕೃಷಿ, ಶಿಕ್ಷಣ, ಕಲೆ, ಸಾಹಿತ್ಯ, ರಂಗಭೂಮಿ, ಸಿನೆಮಾ, ಜನಜೀವನ, ಆರ್ಥಿಕತೆ, ಸಂಸ್ಕøತಿ, ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಯಾವುದೇ ವಿಷಯದ ಮೇಲೆ ಸಂಶೋಧನೆ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಆದರೆ ನಿಮ್ಮ ಕನಸಿನ ಸಂಶೋಧನೆಗೆ ಶ್ರಮದ ಬಣ್ಣ ಕೊಟ್ಟು ಆಕರ್ಷಕವಾಗಿ ಸತ್ಯ ಶೋಧಿಸುವುದು ಮುಖ್ಯ.
ಸಂಪೂರ್ಣ ಮಾಹಿತಿ ಇರಲಿ : ಸಂಶೋಧನೆ ಕೈಗೊಳ್ಳುವ ವಿಷಯದ ಮೇಲೆ ಪ್ರಭುತ್ವ, ಹಿಡಿತ ಅಗತ್ಯ. ಗೊತ್ತಿರುವ ಕ್ಷೇತ್ರದಲ್ಲಿ ಗೊತ್ತಿಲ್ಲದ ಅಂಶಗಳನ್ನು ಹುಡುಕುವುದೇ ಪಿ.ಎಚ್.ಡಿ.ಯ ಮುಖ್ಯ ಉದ್ದೇಶ. ಆದ್ದರಿಂದ ಸಂಶೋಧನೆಗೆ ಆಯ್ಕೆ ಮಾಡಿಕೊಂಡ ಕ್ಷೇತ್ರದ ಸಂಪೂರ್ಣ ಮಾಹಿತಿ ಇರಲಿ. ಸಂಶೋಧನೆ ನೈಜ ಜಗತ್ತಿಗೆ ಸಂಬಂಧಿಸಿರಬೇಕು ಮತ್ತು ವೃತ್ತಿಪರರು ಬಳಸಲು ಮಾರ್ಗಸೂಚಿಯಾಗಬೇಕು. ಸಂಶೋಧನೆಯಲ್ಲಿ ಅಗತ್ಯವಾದ ಅಂಕಿ ಅಂಶಗಳಿರಲಿ ಮತ್ತು ವಿಶ್ಲೇಷಣಾತ್ಮಕ ಅಂಶಗಳಿರಲಿ.
ವೈವಿಧ್ಯಮಯ ಸಂಪರ್ಕ ಇರಲಿ : ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮುಖ್ಯ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಸಂಪರ್ಕ ಅಗತ್ಯ. ಅಲ್ಲದೇ ಸಂಶೋಧನಾ ವರದಿ ಸಿದ್ದಪಡಿಸುವಲ್ಲಿ ಈ ಹಿಂದೆ ಸಂಶೋಧನೆ ಕೈಗೊಂಡ ಹಿರಿಯ ಮಾರ್ಗದರ್ಶಕರ ಸಂಪರ್ಕವೂ ಅಗತ್ಯ.
ಯೋಜಿತ ಯೋಜನೆ ಇರಲಿ : ಸಂಶೋಧನೆಗೆ ಸುವ್ಯವಸ್ಥಿತ ಯೋಜನೆ ಅತೀ ಮುಖ್ಯ. ಸಂಶೋಧನೆ ಪ್ರಾರಂಭದಿಂದ ವರದಿ ಸಲ್ಲಿಕೆವರೆಗಿನ ಕಾಲಾವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಯೋಜನೆ ಮತ್ತು ವೇಳಾಪಟ್ಟಿ ಪ್ರಮುಖವಾದದ್ದು. ಸಂಪರ್ಕಿಸಬೇಕಾದ ವ್ಯಕ್ತಿ, ಸ್ಥಳಗಳ ಕುರಿತ ಪಟ್ಟಿ, ನಮೂನೆಗಳು ಮಾಹಿತಿ ಸಂಗ್ರಹಣೆಯ ಆಕರಗಳು ಎಲ್ಲವನ್ನೂ ಯೋಜನೆಯಲ್ಲಿ ದಾಖಲಿಸಬೇಕು. ಯೋಜನೆಯ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವುದು ಅತೀಮುಖ್ಯ. ಏಕೆಂದರೆ ಸಂಶೋಧನೆಯನ್ನು ನಿರ್ದಿಷ್ಟ ಸಮಯದಲ್ಲಿ ಮುಕ್ತಾಯಗೊಳಿಸಿ ವರದಿ ಸಿದ್ದಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕಾದ್ದರಿಂದ ಯೋಜಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವುದು ಅಗತ್ಯ.
ವಿಶೇಷತೆ ಇರಲಿ : ಈಗಾಗಲೇ ಕೈಗೊಂಡ ಅನೇಕ ಸಂಶೋಧನಾ ಪ್ರಬಂಧಗಳ ಜೊತೆ ನಿಮ್ಮದೂ ಒಂದು ಆಗಬಾರದು. ಇತರರಿಗಿಂತ ಭಿನ್ನವಾದ ಆಕರ್ಷಕವಾದ ಸಂಶೋಧನಾ ಪ್ರಬಂಧ ನಿಮ್ಮದಾಗಬೇಕು. ಅದು ನಿಮ್ಮ ಶ್ರಮ, ಕೌಶಲ್ಯಗಳು, ಸೃಜನಾತ್ಮಕತೆ ಮತ್ತು ನಿಮ್ಮ ಸಮಯ ಪ್ರಜ್ಞೆಗಳನ್ನು ಅವಲಂಬಿಸಿರುತ್ತದೆ. ಸಾಧ್ಯವಾದಷ್ಟೂ ಭವಿಷ್ಯದಲ್ಲಿ ಎಲ್ಲರೂ ಉಪಯೋಗಿಸಲು ಸಾಧ್ಯವಾಗುವ ಸಂಶೋಧನಾ ವರದಿ ನಿಮ್ಮದಾಗಲಿ.

       ಸಂಶೋಧನೆಯು ಸಂಶೋಧಕನ  ಸೃಜನಾತ್ಮಕ ಆಸಕ್ತ ಅಧ್ಯಯನ ಕ್ಷೇತ್ರವಾಗಿರಬೇಕು. ಕೈಗೊಳ್ಳುವ ಸಂಶೋಧನೆಯ ಫಲಿತವು ಆಯಾ ಕ್ಷೇತ್ರದಲ್ಲಿ ಬಳಕೆಯಾಗಿ ಬದಲಾವಣೆಗೆ ಕಾರಣವಾಗಬೇಕು. ಹೊಸ ಹೊಳಹುಗಳಿಗೆ ನಾಂದಿಯಾಗಬೇಕು. ಹಿರಿಯ ಸಂಶೋಧಕ ಡಾ.ಎಂ. ಎಂ. ಕಲಬುರ್ಗಿಯವರು “ಸಂಶೋಧನೆಯೆಂಬುದು ಒಂದು ಸೃಜನಕ್ರಿಯೆಯಾಗಿದ್ದು ಅದು ಅಲ್ಪ ವಿರಾಮದಿಂದ ಅರ್ಧ ವಿರಾಮದವರೆಗೆ ನಡೆಯುತ್ತದೆ” ಎಂದಿದ್ದಾರೆ. ಹಾಗಾಗಿ ಆಯಾ ಕ್ಷೇತ್ರದಲ್ಲಿ ನಿರತವಾದ ಸಂಶೋಧನೆಯು ಪದವಿಯ ನಂತರವೂ ಮುಂದುವರಿಸಬೇಕು. ಮಕ್ಕಳಕ್ಷೇತ್ರ ಹಾಗೂ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು. ಬಂದ ಸಂಶೋಧನೆಗಳನ್ನು ಸಂಶೋಧಕರನ್ನು ಈ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಡಾ. ನಿಂಗು ಸೊಲಗಿ
ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ. ಮುಂಡರಗಿ
ಗದಗ(ಜಿ)   
9448640213
(ಸದ್ರಿ ಶಿಕ್ಷಕರ ‘ಮಕ್ಕಳ ರಂಗಭೂಮಿ ಪ್ರದರ್ಶನ-ಪ್ರಕ್ರಿಯೆ’ ಎಂಬ ಸಂಶೋಧನಾ ಪ್ರಬಂಧಕ್ಕೆ ಕನ್ನಡ ವಿ.ವಿ.ಹಂಪಿಯಿಂದ ಡಾಕ್ಟರೇಟ್ ಪುರಸ್ಕಾರ ಲಭಿಸಿದೆ.)


ಆರ್.ಬಿ.ಗುರುಬಸವರಾಜ

4 comments:

  1. ನಿಮ್ಮ ಸಂಶೋಧನಾ ಲೇಖನ .. ನನ್ನ ನಾಳಿನ ಸಂಶೋಧನೆಗೆ ಮಾರ್ಗ ತೋರಿದೆ.

    ReplyDelete
  2. ಧನ್ಯ ಧನ್ಯವಾದಗಳು ಶರಣು ಶರಣಾರ್ಥಿ

    ReplyDelete