March 14, 2016

ಅವಧಾನದ ವಿಜ್ಞಾನ SCIENCE OF ATTENTION

ಜನವರಿ 2016ರ 'ಗುರುಮಾರ್ಗ'ದಲ್ಲಿ ಪ್ರಕಟವಾದ ನನ್ನ ಲೇಖನ.

ಅವಧಾನದ ವಿಜ್ಞಾನ

ಬೋಧನೆ ಮಾಡುವಾಗ ವಿದ್ಯಾರ್ಥಿಗಳ ಅವಧಾನ/ಗಮನವನ್ನು ಎಷ್ಟು ಹೊತ್ತು ಕೇಂದ್ರೀಕರಿಸಬಹುದು? ಹೆಚ್ಚೆಂದರೆ 10-15 ನಿಮಿಷ.  40 ನಿಮಿಷಗಳ ಅವಧಿಯಲ್ಲಿ ಹೆಚ್ಚು ಹೊತ್ತು ವಿದ್ಯಾರ್ಥಿಗಳ ಗಮನ ಕೇಂದ್ರೀಕರಿಸುವುದು ನಿಜಕ್ಕೂ ಕಷ್ಟದ ಕೆಲಸ. 
ವಿದ್ಯಾರ್ಥಿಗಳ ಅವಧಾನದ ಮಟ್ಟವು ಪ್ರೇರಣೆ, ಭಾವನೆಗಳ ಹಂಚಿಕೆ, ಸಂತೋಷ ಮತ್ತು ಆ ದಿನದ ವಿಶೇಷಗಳನ್ನು ವ್ಯಾಪಕವಾಗಿ ಅವಲಂಬಿಸಿದೆ. ಪಾಠ ಬೋಧನೆಗೆ ತಕ್ಕಂತೆ ಕೆಲವು ದೃಶ್ಯಾವಳಿಗಳು, ಚಿತ್ರ ಪ್ರದರ್ಶನಗಳಂತಹ ಕೆಲವು ತಂತ್ರಗಳ ಅಳವಡಿಕೆಯಿಂದ ವಿದ್ಯಾರ್ಥಿಗಳ ಅವಧಾನವನ್ನು ಹೆಚ್ಚು ಹೊತ್ತು ಕೇಂದ್ರೀಕರಿಸಬಹುದೆಂಬುದು ಸಾಬೀತಾಗಿದೆ.  ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಿ ಅವರು ತರಗತಿಯ ಕಲಿಕೆಯಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುವಂತೆ ಮಾಡಬೇಕಾದುದು ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ನಾವದನ್ನು ಮಾಡುತ್ತಿದ್ದೇವೆಯಾ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಉತ್ತರ ಕೆಳಗಿನ ಶ್ರೇಣಿಗಳಲ್ಲಿರುತ್ತದೆ. 
ವಿದ್ಯಾರ್ಥಿಗಳಲ್ಲಿ ಅವಧಾನವು ಕಡಿಮೆಯಾಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಪಠ್ಯವಸ್ತು, ಹವಾಮಾನ ವೈಪರೀತ್ಯ, ಸ್ಥಳೀಯ ಹಬ್ಬಗಳು/ಆಚರಣೆಗಳು, ನೀರಸ ಬೋಧನೆ, ಕಠಿಣವಾದ ಪರಿಕಲ್ಪನೆಗಳು, ಅನಾರೋಗ್ಯ ಇತ್ಯಾದಿ ಅಂಶಗಳು ಕಾರಣವಾಗಿರಬಹುದು.
ಆದಾಗ್ಯೂ ಶಿಕ್ಷಕರಾದ ನಾವು ಬೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳನ್ನು ಸುಲಭವಾಗಿ ಮಕ್ಕಳಿಗೆ ತಲುಪಿಸುವ ಸುಗಮಕಾರರಾಗುವ ಅಗತ್ಯವಿದೆ. ಕೇವಲ ವಿಷಯದ ಆಳ ಮತ್ತು ವ್ಯಾಪ್ತಿ ತಿಳಿದಿದ್ದರೆ ಸಾಲದು. ಅದನ್ನು ಮಕ್ಕಳಿಗೆ ಸುಲಭವಾಗಿ ತಲುಪಿಸುವ ತಂತ್ರಗಾರಿಕೆ ತಿಳಿದಿರಬೇಕು. ಅದು ನಮ್ಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ನೀರೀಕ್ಷಿತ ಪ್ರತಿಫಲ ನೀಡುವಂತಿರಬೇಕು. 
ವಿಷಯಗಳನ್ನು ಮಕ್ಕಳಿಗೆ ತಲುಪಿಸುತ್ತಿರುವಾಗ ಕೆಲವು ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ. ಈ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು ಅದಕ್ಕೆ ಪೂರಕವಾದ ಕಲಿಕಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಪಠ್ಯಕ್ಕೆ ಪೂರಕವಾದ ಸಂಯೋಜಿತ ಕಲಿಕಾ ವಿಧಾನಗಳನ್ನು ಬಳಸಬೇಕಾಗುತ್ತದೆ. 
ಬೋಧನೆಯಲ್ಲಿ ಮಕ್ಕಳ ಗಮನವನ್ನು ಕೇಂದ್ರೀಕರಿಸಿ ಕಲಿಕಾ ಮಟ್ಟವನ್ನು ಉನ್ನತಕ್ಕೇರಿಸಲು ಕೆಲವು ತಂತ್ರಗಳು ಅಗತ್ಯ. ಕೆಳಗಿನ ಕೆಲವು ತಂತ್ರಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಾಯಕವಾಗುತ್ತವೆ.
ಧ್ವನಿಯ ಮಟ್ಟ ಬದಲಿಸಿ : ವಿದ್ಯಾರ್ಥಿಗಳ ಗಮನ ಕೇಂದ್ರೀಕರಿಸುವಲ್ಲಿ ಶಿಕ್ಷಕರ ಧ್ವನಿಯ ಮಟ್ಟವು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕಾದುದು ಅಗತ್ಯ. ಅಂದರೆ ಕಲಿಕಾಂಶಕ್ಕೆ ಪೂರಕವಾದ ರೀತಿಯಲ್ಲಿ ಶಿಕ್ಷಕರು ಧ್ವನಿಯಲ್ಲಿ ಏರಿಳಿತ ಹಾಗೂ ಧ್ವನಿಯ ನಾದ(ತೀವ್ರತೆ)ದ ಮಟ್ಟವನ್ನು ಬದಲಾಯಿಸುತ್ತರಬೇಕು. ಇದರಿಂದ ಗಮನವನ್ನು ಪುನಃ ಕ್ರೂಡೀಕರಿಸಬಹುದು.
ಆಧಾರ ಮತ್ತು ಸಾದೃಶ್ಯಗಳನ್ನು ಬಳಸಿ : ಕಲಿಕಾಂಶಕ್ಕೆ ಪೂರಕವಾದ ಒಂದು ಚಿತ್ರ ಶಿಕ್ಷಕರ ಶ್ರಮವನ್ನು ಕಡಿಮೆ ಮಾಡುವುದಲ್ಲದೇ ವಿದ್ಯಾರ್ಥಿಗಳ ಗಮನವನ್ನು ಕಲಿಕೆಯಲ್ಲಿ ಕೇಂದ್ರೀಕರಿಸಲು ಸಹಾಯಕವಾಗುತ್ತದೆ. ಚಿತ್ರಗಳನ್ನು ಬಳಸುವಾಗ ಚಿತ್ರದ ಕುರಿತು ನಿಮ್ಮ ಅನಿಸಿಕೆ ತಿಳಿಸದೇ ವಿದ್ಯಾರ್ಥಿಗಳೇ ಮುಕ್ತವಾಗಿ ಮಾತನಾಡಲು ತಿಳಿಸಿ. ಆಗ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ಭಾಗವಹಿಸುವರಲ್ಲದೇ ಅವರ ಗಮನ ಬೋಧನೆಯಲ್ಲಿ ನೆಲೆಯೂರುತ್ತದೆ.
ಚಕಿತ ವಾಕ್ಯ ಅಥವಾ ಹೇಳಿಕೆ ನೀಡಿ : ಕಲಿಕಾಂಶಕ್ಕೆ ಪೂರಕವಾದ ಒಂದು ಹೇಳಿಕೆ ಅಥವಾ ಒಂದು ವಾಕ್ಯವನ್ನು ಕಪ್ಪು ಹಲಗೆಯ ಮೇಲೆ ಬರೆಯುವುದೂ ಕೂಡಾ ಉತ್ತಮವಾದ ಪರಿಣಾಮ ಬೀರುತ್ತದೆ. ಹೀಗೆ ಬರೆಯುವಾಗ ಹೇಳಿಕೆ ಅಥವಾ ವಾಕ್ಯದ ಅರ್ದ ಭಾಗವನ್ನು ಮಾತ್ರ ಬರೆದು ಉಳಿದ ಭಾಗವನ್ನು ಪೂರ್ಣಗೊಳಿಸಲು ಮಕ್ಕಳಿಗೆ ತಿಳಿಸಿ. ಅಥವಾ ಕೆಲವು ಅಕ್ಷರಗಳನ್ನು ಬಿಟ್ಟು ಬರೆಯಿರಿ. ಅದಕ್ಕೆ ಸರಿಯಾದ ಅಕ್ಷರಗಳನ್ನು ಸೇರಿಸಿ ಅರ್ಥವತ್ತಾದ ಹೇಳಿಕೆಯನ್ನಾಗಿಸಲು ತಿಳಿಸಿ. ಉದಾ: ಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು.(ಸರಿಯಾದ ರೂಪ : ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು). ಆಗ ಇಡೀ ತರಗತಿಯೇ ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತದೆ. 
ಸವಾಲಿನ ಪ್ರಶ್ನೆ ಹಾಕಿ : ವಿಷಯಕ್ಕೆ ಸಂಬಂಧಿಸಿದಂತೆ ಮೂಲಭೂತ ಗ್ರಹಿಕೆಯನ್ನು ತಿಳಿಯಲು ಒಂದು ಸವಾಲಿನ ಪ್ರಶ್ನೆಯನ್ನು ಬರೆಯಿರಿ. ವಿದ್ಯಾರ್ಥಿಗಳು ತುಂಡು ಹಾಳೆಯಲ್ಲಿ ಉತ್ತರ ಬರೆದು ಕೊಡಲು ತಿಳಿಸಿ. ಇದರಿಂದ ವಿದ್ಯಾರ್ಥಿಗಳು ಪಠ್ಯವಸ್ತುವಿನತ್ತ ಗಮನ ಹರಿಸುತ್ತಾರೆ. ಉತ್ತರ ಕ್ರೂಡೀಕರಣದ ನಂತರ ಪ್ರಶ್ನೆ ಕುರಿತು ಚರ್ಚೆ ನಡೆಸಬಹುದು.
ಸೂಕ್ತ ಉದಾಹರಣೆಗಳನ್ನು ಆಯ್ಕೆ ಮಾಡಿ : ವಿದ್ಯಾರ್ಥಿಗಳ ಮನೋಭಾವವನ್ನು ಅರಿತು ವಿಷಯವನ್ನು ಅವರಿಗೆ ತಲುಪಿಸಿ. ವೈಯಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಮನೋಭಾವವನ್ನು ಅರಿತು ವಿಷಯ ತಲುಪಿಸುವುದು ಅಸಾಧ್ಯವಾದರೂ ನಿಯಮಿತವಾಗಿ ಉದಾಹರಣೆ ಮತ್ತು ಸನ್ನಿವೇಶಗಳನ್ನು ಬಳಸಿಕೊಂಡು ಪ್ರಯತ್ನಿಸಬೇಕು.
ಕಾಠಿಣ್ಯತೆಯ ಮಟ್ಟದಲ್ಲಿ ಕಲಿಸಿ : ಕೆಲವು ವಿಷಯಗಳು ಮಕ್ಕಳ ಮಾನಸಿಕ ಮತ್ತು ಬೌಧ್ದಿಕ ಮಟ್ಟಕ್ಕೆ ಕಠಿಣವೆನಿಸಬಹುದು. ಹಾಗೆ ನೋಡಿದರೆ ಯಾವ ವಿಷಯವೂ ಕಠಿಣವಲ್ಲ. ಅದನ್ನು ತಲುಪಿಸುವ ಮಾರ್ಗದಲ್ಲಿ ಉಂಟಾದ ಲೋಪದಿಂದಾಗಿ ಅದು ಕಠಿಣವೆನಿಸುತ್ತದೆ. ವಿಷಯವನ್ನು ಸುಲಭವಾಗಿ ಕಲಿಸುವ  ಮಾರ್ಗಗಳನ್ನು ತಂತ್ರಗಾರಿಕೆಯನ್ನು ತಿಳಿದಿರಬೇಕು. ಇದನ್ನು ವಿಷಯ ಪರಿಣಿತರು ಅಥವಾ ಸಹುದ್ಯೋಗಿಗಳಿಂದಲೂ ಕಲಿಯಬಹುದು.
ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ : ಮಕ್ಕಳನ್ನು ಬೋಧನೆ-ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ತಂತ್ರವಾಗಿದೆ. ಕಲಿಕಾಂಶಗಳನ್ನು ಮಕ್ಕಳೇ ವಿವರಿಸಲು ತಿಳಿಸುವುದು. ಚಿತ್ರ, ನಕ್ಷೆ, ಗಣಿತದ ಕೆಲವು ಸಮಸ್ಯೆಗಳನ್ನು ಕಪ್ಪು ಹಲಗೆಯ ಮೇಲೆ ಮಕ್ಕಳಿಂದ ಬಿಡಿಸುವುದು ಮಕ್ಕಳ ಗಮನವನ್ನು ಕೇಂದ್ರೀಕರಿಸುವ ಮತ್ತೊಂದು ತಂತ್ರವಾಗಿದೆ.
ಹಾಸ್ಯ ಬಳಸಿ : ಗಮನ ಕೇಂದ್ರೀಕರಿಸಲು ನಗೆಹನಿಗಿಂತ ಮಿಗಿಲಾದ ಮತ್ತೊಂದು ತಂತ್ರ ಇರಲಾರದು. ಪಾಠ ಬೋಧನೆಯಲ್ಲಿ ಶಿಕ್ಷಕರು ಹಾಸ್ಯ ಸೇರಿಸುವುದನ್ನು ವಿದ್ಯಾರ್ಥಿಗಳು ಇಷ್ಟಪಡುತ್ತಾರೆ. ಹೀಗಾಗಿ ತರಗತಿಯಲ್ಲಿನ ವಸ್ತು, ವಿಷಯ, ವ್ಯಕ್ತಿಗಳ ಕುರಿತಾದ ಒಂದು ಲಘು ವ್ಯಂಗ್ಯ ಇಡೀ ತರಗತಿಯನ್ನು ನಗೆಗಡಲಲ್ಲಿ ತೇಲಿಸುತ್ತದೆ. ಜೊತೆಗೆ ಮಕ್ಕಳ ಗಮನವನ್ನು ನಿಸ್ಸಂದೇಹವಾಗಿ ಕೇಂದ್ರೀಕರಿಸುತ್ತದೆ.
ನಿಯಮಿತ ಕಾರ್ಯದ ಕಾಲಮಿತಿ ಸ್ಥಾಪಿಸಿ : ಗುಂಪು ಕಾರ್ಯಗಳನ್ನು ನೀಡುವ ಮೊದಲು ಕಾರ್ಯಕ್ಕೆ ತಕ್ಕಂತೆ ಕಾಲಮಿತಿ ನೀಡಿ. ಇದು ಅವರು ಗುರಿಯತ್ತ ಮನ್ನುಗಲು ಅವರನ್ನು ಸದಾ ಎಚ್ಚರಿಸುತ್ತದೆ.
ಯೋಜನೆ ಸ್ಪಷ್ಟವಾಗಿರಲಿ : ಕಲಿಕಾಂಶದ ಉದ್ದೇಶ ಮತ್ತು ಯೋಜನೆ ಮಕ್ಕಳಿಗೆ ಸ್ಪಷ್ಟವಾಗಿಲ್ಲದಿದ್ದರೆ ಅವರು ಗಮನ ಕಳೆದುಕೊಳ್ಳುತ್ತಾರೆ. ಕಾರಣ ಪಾಠದ ಉದ್ದೇಶ ಮತ್ತು ಯೋಜನೆಯನ್ನು ಮಕ್ಕಳಿಗೆ ಸ್ಪಷ್ಟಪಡಿಸಿ. ಕಲಿಕೆಯ ಪ್ರಮುಖಾಂಶಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಿರಿ. ಇದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಕಾರಿ.
ಕೌಶಲ್ಯಗಳನ್ನು ಬಳಸಿಕೊಳ್ಳಿ : ಮಕ್ಕಳಲ್ಲಿ ಉತ್ತಮವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಕೆಲವು ವಿಷಯಗಳನ್ನು ಚರ್ಚೆ/ಸಂವಾದದ ಮೂಲಕ ಕಲಿಯಲು ಅವಕಾಶ ಒದಗಿಸಬೇಕು. ಆಗ ಎಲ್ಲರೂ ಅದರಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು.
ಪಾತ್ರಗಳನ್ನು ಸ್ಪಷ್ಟಪಡಿಸಿ : ಚರ್ಚೆ ಮತ್ತು ಸಂವಾದಗಳು ಯಶಸ್ವಿಯಾಗಲು ಪ್ರತಿ ಗುಂಪಿನ ಸದಸ್ಯರ ಪಾತ್ರದ ಸ್ಪಷ್ಟತೆ ಇರಬೇಕು. ಗುಂಪಿನಲ್ಲಿ ಯಾರು ಹೇಗೆ ಭಾಗವಹಿಸಬೇಕು?, ವಿಷಯವನ್ನು ಯಾರು, ಹೇಗೆ ಮಂಡಿಸಬೇಕು? ಪ್ರಶ್ನೆಗಳನ್ನು ಯಾರು ಕೇಳಬೇಕು? ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಇರಬೇಕು. ಹೀಗೆ ಪ್ರತಿಯೊಬ್ಬರ ಪಾತ್ರಗಳನ್ನು ಸ್ಪಷ್ಟಪಡಿಸುವುದರಿಂದ ಜವಾಬ್ದಾರಿ ಹೆಚ್ಚುತ್ತದೆ. ಕಲಿಕೆಯಲ್ಲಿ ಉತ್ಸುಕರಾಗಿ ಭಾಗವಹಿಸುತ್ತಾರೆ.
ಬದಲಾವಣೆ ಮತ್ತು ಅಚ್ಚರಿಯನ್ನು ಪರಿಚಯಿಸಿ : ‘ಬದಲಾವಣೆಯೊಂದೇ ಶಾಶ್ವತ’ ಎಂಬುದನ್ನು ಮಕ್ಕಳಿಗೆ ಪರಿಚಯಿಸಿ. ನಮ್ಮ ಪರಿಸರದಲ್ಲಿ ಏನೇನು ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಗಮನಿಸಲು ತಿಳಿಸಿ. ಆಗ ಪರಿಸರದ ಬಗ್ಗೆ ಕಾಳಜಿ ಸಹಜವಾಗಿ ಮೂಡುತ್ತದೆ. ಪ್ರತಿ 10-15 ನಿಮಿಷಗಳಿಗೊಮ್ಮೆ ಅಚ್ಚರಿಯ ಕೆಲವು ಅಂಶಗಳನ್ನು ತಿಳಿಸಿ, ಅಥವಾ ಒಂದು ನಗೆಹನಿಯನ್ನಾದರೂ ಹೇಳಿ. ಇದು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ.
ಒತ್ತಡ ನಿವಾರಿಸಿ : ಅಮೂರ್ತ ಮನಸ್ಸಿನ ನಿರ್ವಹಣೆ ಅಸಾದ್ಯ. ನೋಟ, ಧ್ವನಿ, ರುಚಿ, ಅಭಿಪ್ರಾಯಗಳ ಮೂಲಕ ಸಂಪರ್ಕ ಮತ್ತು ಸಂವೇದನಾ ವಿವರಗಳನ್ನು ವಾಸ್ತವಕ್ಕೆ ತನ್ನಿ. ಮಕ್ಕಳು ಆಲೋಚಿಸಲು ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿ. ಒತ್ತಾಯ ಪೂರ್ವಕ ಕಲಿಕೆ ಬೇಡ.
ಕಥೆ ಹೇಳಿ : ಮನಸ್ಸು ಪ್ರಫುಲ್ಲವಾಗಿರಲು ಕಥೆಗಳು ಸಹಾಯಕ. ಕಥೆಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸುವುದಲ್ಲದೇ ಕಲಿಕೆಯನ್ನು ಸುಗಮ ಹಾಗೂ ಸುಮನೋಹರಗೊಳಿಸುತ್ತವೆ. ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಯಲು ಸಹಕಾರಿಯಾಗಿವೆ.
ಈ ಮೇಲಿನ ಅಂಶಗಳಲ್ಲದೇ ನಿಮ್ಮದೇ ಆದ ತಂತ್ರಗಳನ್ನೂ ಬಳಸಿ ತರಗತಿಯಲ್ಲಿ ಮಕ್ಕಳ ಅವಧಾನವನ್ನು ಕೇಂದ್ರೀಕರಿಸಬಹುದು. ಒಟ್ಟಾರೆ ಕಲಿಕೆ ಸಂತಸವಾಗಿರಬೇಕು ಹಾಗೂ ಶಾಶ್ವತವಾಗಿರಬೇಕು.
ಆರ್.ಬಿ.ಗುರುಬಸವರಾಜ 


No comments:

Post a Comment