March 31, 2016

ಹಚ್ಚೆ TATOO

2016ರ ಏಪ್ರಿಲ್ 7 ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

ಹಚ್ಚೆಯಲ್ಲಿ  ಬೆಚ್ಚನೆಯ ಭಾವ!




ಕುತ್ತಿಗೆಯ ಮೇಲೆ ಕಚಗುಳಿಯಿಡುವ ಬಣ್ಣಬಣ್ಣದ ಚಿಟ್ಟೆ, ಸೊಂಟವನ್ನು ಸುತ್ತುವರೆದು ದೇಹಕ್ಕೆ ಬಿಗಿ ಹೆಚ್ಚಿಸಿದ ಹಾವು, ಎದೆಯ ಮೇಲೆ ಪ್ರೇಯಸಿಯ ಹೆಸರು, ವಕ್ಷಸ್ಥಳವನ್ನೆಲ್ಲಾ ಆವರಿಸಿಕೊಂಡ ವಿವಿಧ ಚಿತ್ತಾರಗಳು, ರಟ್ಟೆಯಲ್ಲಿ ಘರ್ಜಿಸುವÀ ಹುಲಿ, ಚಿರತೆ, ಸಿಂಹಗಳು, ಬೆನ್ನಿನ ಮೇಲೆ ಲಾಸ್ಯವಾಡುವ ಗಿಡಮರಗಳ ಬಳ್ಳಿಗಳು, ಮುಂಗೈಯಲ್ಲಿ ಪ್ರಿಯಕರನ ಹೆಸರಿನ ಮೊದಲಕ್ಷರ, ಇತ್ಯಾದಿ ಇತ್ಯಾದಿ,,,, ಇದು ಯಾವುದೋ ಚಿತ್ರಕಲಾವಿದ ರಚಿಸಿದ ಚಿತ್ರವಲ್ಲ. ಬದಲಿಗೆ ಇಂದಿನ ಯುವ ಪೀಳಿಗೆಯ ಮೈಮೇಲೆ ನಲಿದಾಡುವ ರಂಗುರಂಗಿನ ಹಚ್ಚೆಯ ಚಿತ್ತಾರದ ಸೊಬಗು. 
ಹೌದು ಇತ್ತೀಚೆಗೆ ಹಚ್ಚೆಯೆಂಬುದು ಯುವಪೀಳಿಗೆಯನ್ನು ಆಕರ್ಷಿಸುವ ಕಲೆಯಾಗಿದೆ. ಇದು ಚರ್ಮದ ಮೇಲಿನ ಶಾಸನ ಇದ್ದಂತೆ. ಯುವಪೀಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಟ್ಯಾಟೂ ಜನಪ್ರಿಯ ಮಾಧ್ಯಮವಾಗಿದೆ. ಕೇವಲ ರೂಪದರ್ಶಿಗಳು, ಕಲಾವಿದರು, ಸಾಹಸಿಗರು ಅಥವಾ ಸೈನಿಕರು ಮಾತ್ರ ಹಾಕಿಸಿಕೊಳ್ಳುತ್ತಿದ್ದ ಹಚ್ಚೆ ಇಂದು ಎಲ್ಲರನ್ನು ಆಕರ್ಷಿಸತೊಡಗಿದೆ. ಆಧುನಿಕ ಯಂತ್ರಗಳ ಸಹಾಯದಿಂದ ಹಾಕುವ ವೈವಿಧ್ಯಮಯ ವಿನ್ಯಾಸಗಳು, ವಿವಿಧ ಶೈಲಿಗಳು, ವೈವಿಧ್ಯಮಯ ವರ್ಣಗಳು, ರಂಗುರಂಗಿನ ಚಿತ್ತಾರಗಳು ಇಂದಿನ ಯುವಕರ ದೇಹವನ್ನು ಹಚ್ಚೆಯ ರೂಪದಲ್ಲಿ ಅಲಂಕರಿಸಿವೆ. ಕಣ್ಣು, ತುಟಿಗಳನ್ನು ಹೊರತುಪಡಿಸಿ ದೇಹದ ಬಹುತೇಕ ಭಾಗಗಳು ಹಚ್ಚೆಯಿಂದ ಆವೃತ್ತವಾಗಿವೆ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ ಹಚ್ಚೆ ಮೊದಲಿನಂತೆ ನಿಷೇಧಿತ ಅಭಿವ್ಯಕ್ತಿಯಾಗಿ ಉಳಿದಿಲ್ಲ. ಅದೊಂದು ಕಲೆಯ ಅಭಿವ್ಯಕ್ತಿ, ಭಾವನೆಗಳನ್ನು ಬಿಂಬಿಸುವ ಮಾಧ್ಯಮ, ವ್ಯಕ್ತಿತ್ವದ ಸಂಕೇತ ಹಾಗೂ ಫ್ಯಾಷನ್ ಆಗಿದೆ.
ಹಚ್ಚೆಯ ಬಣ್ಣವೇಕೆ ಶಾಶ್ವತ?
ಹಚ್ಚೆಯ ಕುರಿತು ಮಾತನಾಡುವಾಗ ಒಂದು ಪ್ರಶ್ನೆ ಬರುವುದು ಸಹಜ. ಅದೇನೆಂದರೆ ಹಚ್ಚೆಯ ಬಣ್ಣವೇಕೆ ಶಾಶ್ವತ?. ಈ ಪ್ರಶ್ನೆಗೆ ಬಹುತೇಕರಲ್ಲಿ ಉತ್ತರವಿಲ್ಲ. ಇದ್ದರೂ ಅಸ್ಪಸ್ಟ ಉತ್ತರ. ಇದಕ್ಕೆ ಸ್ಪಷ್ಟ ಉತ್ತರ ವಿಜ್ಞಾನದಲ್ಲಿ ದೊರೆಯುತ್ತದೆ. 
ಮಾನವರ ಚರ್ಮವು ಪ್ರತಿಗಂಟೆಗೆ 40000 ಕೋಶಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೋಶಗಳು ನಾಶವಾದರೂ ಹಚ್ಚೆ ಶಾಶ್ವತವಾಗಿ ಉಳಿಯುವುದ್ಹೇಗೆ ಎಂಬುದೇ ಸೋಜಿಗ.
ಹಚ್ಚೆ ಹಾಕುವ ಸೂಜಿಯಲ್ಲಿನ ಶಾಯಿಯು ಚರ್ಮದ ಹೊರಪದರದಲ್ಲಿ ರಂದ್ರಗಳನ್ನು ಮಾಡಿ ರಕ್ತನಾಳ ಮತ್ತು ನರಗಳ ಮೂಲಕ ಒಳಪದರದ ಆಳದೊಳಕ್ಕೆ ಜಿನುಗುತ್ತದೆ. ಪ್ರತಿಬಾರಿ ಸೂಜಿಯು ಚುಚ್ಚುವಿಕೆಯಿಂದ ಉಂಟಾದ ಗಾಯದಲ್ಲಿ ಈ ಶಾಯಿಯು ಹರಡಲ್ಪಡುತ್ತದೆ. ಗಾಯವು ಉರಿಯೂತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿನ ಜೀವಕೋಶಗಳು ಪ್ರತಿರಕ್ಷಣಾ ವ್ಯವಸ್ಥೆಯಿಂದ ಗಾಯದ ಸ್ಥಳವನ್ನು ಆಕ್ರಮಿಸಿ ಬಣ್ಣವನ್ನು ಪಡೆದುಕೊಳ್ಳುತ್ತವೆ. ಹಾಗಾಗಿ ಗಾಯಗೊಂಡ ಸ್ಥಳದಲ್ಲಿನ ಶಾಯಿಯ ಬಣ್ಣ ಪಡೆದುಕೊಂಡ ಜೀವಕೋಶಗಳು ಅಲ್ಲಿಯೇ ಉಳಿದು ಶಾಶ್ವತ ಬಣ್ಣಕ್ಕೆ ತಿರುಗುತ್ತವೆ. ಜೀವಕೋಶದಲ್ಲಿನ ಫೈಬ್ರೋಪ್ಲಾಸ್ಟ್ ಮತ್ತು ಮಾಕ್ರೋಪೇಜ್‍ಗಳೆಂಬ ಅಂಶಗಳು ಬಣ್ಣವನ್ನು ಹೀರಿಕೊಂಡು ಚರ್ಮದ ಒಳಭಾಗವನ್ನು ಲಾಕ್ ಮಾಡುತ್ತವೆ ಮತ್ತು ಬಣ್ಣವನ್ನು ಹೊರಸೂಸುತ್ತವೆ. 
ಆರಂಭದಲ್ಲಿ ಶಾಯಿಯು ಚರ್ಮದ ಹೊರಪದರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ನಂತರ ಹಾನಿಗೊಳಗಾದ ಹೊರಚರ್ಮದ ಜೀವಕೊಶಗಳು ದುರಸ್ತಿಯ ನಂತರ ಬಣ್ಣವನ್ನು ಹೊರಸೂಸುತ್ತವೆ. ಬಿಸಿಲು ಗಾಳಿಗೆ ಹೊರಚರ್ಮದ ಗಾಯಗೊಂಡ ಕೋಶಗಳು ನಾಶವಾಗಿ ಸಿಪ್ಪೆಸುಲಿದು ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ ಮತ್ತು ಶಾಯಿಯ ಶಾಶ್ವತ ಬಣ್ಣ ಪಡೆದುಕೊಳ್ಳುತ್ತವೆ. 
ಪ್ರಾಚೀನತೆಯಿಂದ ಇತ್ತೀಚಿನವರೆಗೆ,,,,
ಹಚ್ಚೆಯು ಕೇವಲ ಫ್ಯಾಷನ್ನಿನ ಪ್ರತೀಕವಲ್ಲ. ಅದು ಪುರಾತನ ಕಾಲದಿಂದ ಮಾನವನ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಜನರ ಆಚಾರ ವಿಚಾರ ಸಂಸ್ಕøತಿ ಧಾರ್ಮಿಕ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಸಂಸ್ಕøತಿಯಿಂದ ಸಂಸ್ಕøತಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹಚ್ಚೆಯ ಸ್ವರೂಪಗಳು ಬದಲಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. 
ಟ್ಯಾಟೂ ಎಂಬ ಇಂಗ್ಲೀಷ್ ಪದ ‘ಟಾಟೂ’ ಎಂಬ ಟಾಹಿಟಿ ದ್ವೀಪದ ಮೂಲದ್ದು. ಅಂದರೆ ‘ಗುರುತಿಸುವಿಕೆ’ ಎಂದರ್ಥ.
ಟ್ಯಾಟೂವಿನ ಇತಿಹಾಸ ಹುಡುಕಿ ಹೊರಟರೆ ಅದು ನಮ್ಮನ್ನು ಪೆರುವಿನ ಮಮ್ಮಿಗೆ ಕರೆದೊಯ್ಯುತ್ತದೆ. ಈಜಿಪ್ತಿನಲ್ಲಿ ಹುಟ್ಟಿಕೊಂಡ ಈ ಕಲೆಯು ಸಾಮ್ರಾಜ್ಯಗಳ ವಿಸ್ತರಣೆಯಿಂದ ವಿವಿಧ ನಾಗರೀಕತೆಗಳನ್ನು ತಲುಪಿತು. ಕ್ರೀಟ್, ಗ್ರೀಸ್, ಪರ್ಷಿಯಾ, ಅರೇಬಿಯನ್ ನಾಗರೀಕತೆಗಳಿಗೂ ವಿಸ್ತರಿಸಿತು. ಕ್ರಿ.ಪೂ.2000 ರಲ್ಲಿ ಈ ಕಲೆ ಚೀನಾ ತಲುಪಿತು. 
ಕ್ರಿ.ಪೂ.6000 ರಲ್ಲಿ ಪೆರುವಿನ ಮಮ್ಮಿಯಲ್ಲಿ ಜಗತ್ತಿನ ಮೊದಲ ದಾಖಲಿತ ಹಚ್ಚೆಯು ಪತ್ತೆಯಾಗಿದೆ.
ಹಚ್ಚೆಯ ಕಲೆಯು ಪಾಶ್ಚಿಮಾತ್ಯರ ಸಂಸ್ಕøತಿಯ ಪ್ರತೀಕವೇ ಆಗಿತ್ತು ಎಂಬುದಕ್ಕೆ ಅವರು ಆಗಿದ್ದಾಂಗ್ಗೆ ಏರ್ಪಡಿಸುತ್ತಿದ್ದ ಹಚ್ಚೆ ಉತ್ಸವಗಳೇ ಸಾಕ್ಷಿ. ಪ್ರತಿ ಉತ್ಸವದಲ್ಲಿ ಹೊಸ ಹೊಸ ಶೈಲಿಗಳು, ವಿನ್ಯಾಸಗಳು ಪ್ರದರ್ಶಿತವಾಗುತ್ತಿದ್ದವು. ಈ ಉತ್ಸವಗಳ ಕಿರಿಕಿರಿಯಿಂದ ಮನನೊಂದÀ  ಪೋಪ್ ಹೆಡ್ರಿ ಕ್ರಿ.ಶ.747 ರಲ್ಲಿ ಹಚ್ಚೆ ಹಾಕುವುದನ್ನು ನಿಷೇಧಿಸಿದರು. ಪುನಃ 12 ಶತಮಾನದಲ್ಲಿ ಪ್ರಾರಂಭವಾದರೂ 16 ನೇ ಶತಮಾನದವರೆಗೂ ಅದರ ಬಳಕೆ ಆಮೆ ವೇಗದಲ್ಲಿತ್ತು. 1691 ರಲ್ಲಿ ಪಾಶ್ಚಿಮಾತ್ಯ ನಾವಿಕ ವಿಲಿಯಂ ಡ್ಯಾಂಫರ್ ಪುನಃ ಹಚ್ಚೆಯ ಬಳಕೆಗೆ ಮುನ್ನುಡಿ ಬರೆದನು. ಅಲ್ಲಿಂದ ಹಚ್ಚೆಯು ಪಾಶ್ಚಿಮಾತ್ಯ ಸಂಸ್ಕøತಿಯ ಒಂದು ಭಾಗವೇ ಆಯಿತು. 
ಪಾಶ್ಚಿಮಾತ್ಯರಲ್ಲಿ ಹಚ್ಚೆಯ ಬಳಕೆ ಕಡಿಮೆಯಾದ ಕಾಲಕ್ಕೆ ಜಪಾನ್‍ನಲ್ಲಿ ಪ್ರಸಿದ್ದಿ ಪಡೆಯಿತು. ಪ್ರಾರಂಭದಲ್ಲಿ ಅಪರಾಧಿಗಳನ್ನು ಗುರುತಿಸಲು ಅವರ ಹಣೆಗೆ ಹಚ್ಚೆಯ ಗೆರೆ  ಹಾಕಲಾಗುತ್ತಿತ್ತು. ಕಾಲಕ್ರಮೇಣವಾಗಿ ಜಪಾನ್‍ನಲ್ಲಿ ಹಚ್ಚೆಯು ಸೌಂದರ್ಯಕಲೆಯಾಗಿ ಬೆಳೆಯಿತು. 1700 ರ ಸುತ್ತಮುತ್ತ ಜಪಾನ್‍ನಲ್ಲಿ ಹಚ್ಚೆ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಯಿತು. ಆಗ ಕೇವಲ ಶ್ರೀಮಂತರು ಮಾತ್ರ ಅಲಂಕಾರಿಕ ಉಡುಪುಗಳನ್ನು ಧರಿಸಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಮಧ್ಯಮ ವರ್ಗದ ಜನರು ತಮ್ಮ ದೇಹವನ್ನು ಹಚ್ಚೆಯಿಂದ ಅಲಂಕರಿಸತೊಡಗಿದರು. ಇದು ಎಲ್ಲರನ್ನು ಆಕರ್ಷಿಸತೊಡಗಿತು. ಹೀಗಾಗಿ ಹಚ್ಚೆಯು ಹೆಚ್ಚು ವ್ಯಾಪಕವಾಗಿ ಜಗತ್ತಿನ ಎಲ್ಲೆಡೆ ಪಸರಿಸಿತು. ಹಚ್ಚೆಗೆ ಯಂತ್ರಗಳ ಬಳಕೆಯ ನಂತರ ಅದರ ವೇಗ ಹೆಚ್ಚಾಯಿತು.
ಇಂದು ಬಳಸುವ ಯಂತ್ರಗಳು ಪ್ರತಿನಿಮಿಷಕ್ಕೆ 50 ರಿಂದ 3000 ತರಂಗಾಂತರದಲ್ಲಿ ಚರ್ಮಕ್ಕೆ ಬಣ್ಣವನ್ನು ಸೇರಿಸುತ್ತವೆ. 

20 ನೇ ಶತಮಾನದ ತಿರುವಿನಲ್ಲಿ ಹಚ್ಚೆಯು ಕಾರ್ಮಿಕ ವರ್ಗದ ಆಕರ್ಷಣೆಯ ಕೇಂದ್ರವಾಯಿತು. ನಂತರ ಮನೆ ಮನೆಗಳಲ್ಲಿ ಹಚ್ಚೆ ಹಾಕುವವರ ಸಂಖ್ಯೆಯೂ ಹೆಚ್ಚಿತು. ಎರಡನೇ ಮಹಾಯುದ್ದದ ನಂತರ ಹಚ್ಚೆಯು ಜಗತ್ತಿನ ಎಲ್ಲೆಡೆ ಪಸರಿಸಿತು. 1961 ರಲ್ಲಿ ಹೆಪಟೈಟೀಸ್‍ನ ಭೀತಿಯಿಂದ ಬಳಕೆಯ ಪ್ರಮಾಣ ಕುಗ್ಗಿತಾದರೂ ಸಂಸ್ಕರಿಸಿದ ಸೂಜಿ ಬಳಕೆಯಿಂದ ಪುನಶ್ಚೇತನ ಪಡೆಯಿತು. 
ಇಂದು ಹಚ್ಚೆಯು ಎಲ್ಲಾ ವರ್ಗದ ಜನರನ್ನು ತಲುಪಿದೆ. ಅದಕ್ಕಾಗಿ ಅನೇಕ ಪಾರ್ಲರ್‍ಗಳೂ ತಲೆ ಎತ್ತಿವೆ. ಪ್ರಸಿದ್ದ ಹಚ್ಚೆ ಕಲಾವಿದರಿಗೆ ಬೇಡಿಕೆಯೂ ಹೆಚ್ಚಿದೆ. ಈ ಜನಪ್ರಿಯತೆ ಹಚ್ಚೆ ಕಲಾವಿದರನ್ನು ಫೈನ್ ಆಟ್ರ್ಸ್ ವಿಭಾಗಕ್ಕೆ ಸೇರಿಸಿದೆ. ಇಂದಿನ ಹಚ್ಚೆ ಕಲಾವಿದರು ತಮ್ಮ ಅನನ್ಯ ಮತ್ತು ಅದ್ಭುತ ಕಲಾಶಕ್ತಿಯಿಂದ ದೇಹದ ಮೇಲೆ ವೈವಿಧ್ಯ ಶೈಲಿಯ ಚಿತ್ರಗಳನ್ನು ರಚಿಸುತ್ತಾರೆ. 
ಆರೋಗ್ಯ ಸಮಸ್ಯೆಗಳು
ಇಷ್ಟೆಲ್ಲಾ ಆಡಂಬರದ ಅಲಂಕಾರಿಕ ಕಲೆಯಾದ ಹಚ್ಚೆಯು ಕೆಲವು ವೇಳೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಚ್ಚೆಗೆ ಬಳಸುವ ಶಾಯಿಯು ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಇರುವುದಿಲ್ಲ. ಶಾಯಿಯಲ್ಲಿ ಕಾರ್ಬನ್, ಕ್ರೋಮಿಯಂ, ಕಬ್ಬಿಣದಂತಹ ಕೆಲವು ಅಪಾಯಕಾರಿ ಲೋಹದ ಅಂಶಗಳು ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೊಸದಾಗಿ ಹಾಕಿಸಿಕೊಂಡ ಹಚ್ಚೆಯು ಅಸುರಕ್ಷಿತ ಕ್ರಮಗಳಿಂದ ಸೊಂಕು ತಗಲಬಹುದು. ಇದರಿಂದಾಗಿ ತುರಿಕೆ, ಉರಿಯೂತ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳು ವರದಿಯಾಗಿವೆ. ಇವುಗಳ ಜೊತೆಗೆ ವಿರಳವಾಗಿ ಹೆಪಟೈಟಿಸ್, ಕ್ಷಯ, ಹೆಚ್.ಐ.ವಿ.ಯಂತಹ ಆತಂಕಕಾರಿ ಸಮಸ್ಯೆಗಳನ್ನು ತಂದೊಡ್ಡಬಹುದು. ಕೆಲವು ದೇಶದಲ್ಲಿ ಹಚ್ಚೆ ಹಾಕಿಸಿಕೊಂಡವರ ರಕ್ತವನ್ನು ದಾನವಾಗಿ ಸ್ವೀಕರಿಸುವುದಿಲ್ಲ. 
ವಯಸ್ಸು ಮೀರಿದಂತೆ ಹಚ್ಚೆಯು ಕೆಲವೊಂದು ಸಮಸ್ಯೆಗಳನ್ನು ತರಬಹುದು. ಚರ್ಮದ ಆಳದಲ್ಲಿನ ಬಣ್ಣ ಮಂದವಾಗಬಹುದು. ಇಂತಹ ಅಸ್ಪಷ್ಟತೆಯಿಂದಾಗಿ ದೇಹವು ವಿಕಾರವಾಗುತ್ತದೆ. ಅಲ್ಲದೇ ದೇಹದ ಮೇಲೆ ಹಾಕಿಸಿಕೊಂಡ ಪ್ರೀತಿ ಪಾತ್ರದವರ ಹೆಸರು ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡಬಹುದು. ಬೇಕು ಅಂದಾಗ ಚುಚ್ಚಿಸಿಕೊಂಡು ಬೇಡವೆಂದಾಗ ಅಳಿಸಿ ಹಾಕಲು ಇದು ಸಾಮಾನ್ಯ ಪ್ರಕ್ರಿಯೆಯಲ್ಲ. 


ಹಚ್ಚೆಯನ್ನೂ ಅಳಿಸಬಹುದು!
ಒಮ್ಮೆ ಹಾಕಿದ ಹಚ್ಚೆಯನ್ನು ಅಳಿಸುವುದು ತುಂಬಾ ಕಷ್ಟಕರ. ಕೆಲವರು ಹಚ್ಚೆಯ ಭಾಗವನ್ನು ಕತ್ತರಿಸುವ ಅಥವಾ ಸುಟ್ಟುಕೊಳ್ಳುವಂಥಹ ಹುಚ್ಚು ಕೃತ್ಯಕ್ಕೆ ಮುಂದಾಗಿರುವುದೂ ಸತ್ಯ. ಇವುಗಳನ್ನು ಹೊರತುಪಡಿಸಿ ಹಚ್ಚೆಯನ್ನು ಅಳಿಸಿ ಹಾಕಲು ಅನೇಕ ವಿಧಾನಗಳಿವೆ. ಶಸ್ತ್ರ ಚಿಕಿತ್ಸೆ ಮಾಡಿಸುವುದು, ಡರ್ಮಬ್ರೆಷನ್, ರೇಡಿಯೋ ಫ್ರೀಕ್ವೆನ್ಸಿ ಮುಂತಾದವು ಚಾಲ್ತಿಯಲ್ಲಿವೆ. ಆದರೆ ಇವು ಸಂಪೂರ್ಣವಾಗಿ ಅಳಿಸಿ ಹಾಕುವುದಿಲ್ಲ. ಅಲ್ಪ ಪ್ರಮಾಣದ ಕಲೆ ಉಳಿಯುತ್ತದೆ. ಇವೆಲ್ಲವುಗಳಿಗಿಂತ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಕ್ಯೂ ಲೇಸರ್ ವಿಧಾನ. ಇದು ಹಚ್ಚೆಯ ಕಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಳಿಸಿಹಾಕುವ  ಅತ್ಯಾಧುನಿಕ ಲೇಸರ್ ಚಿಕಿತ್ಸೆ. ಇದು ತುಂಬಾ ವೆಚ್ಚದಾಯಕವಾದರೂ ಅತ್ಯಂತ ಸುರಕ್ಷಿತ ವಿಧಾನವಾಗಿದೆ. 
ಕಾಳಜಿ ಮುಖ್ಯ
ಕೇವಲ ಹಚ್ಚೆ ಹೇಗೆ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿದರೆ ಸಾಲದು. ಹಚ್ಚೆ ಹಾಕಿಸಿಕೊಳ್ಳುವ ಮುನ್ನ ಅದನ್ನು ಕಾಪಾಡಿಕೊಳ್ಳುವ ಸಂರಕ್ಷಣಾ ತಂತ್ರಗಳ ಬಗ್ಗೆ ತಿಳುವಳಕೆ ಮುಖ್ಯ. ಈ ತಂತ್ರಗಳನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಮತ್ತು ಗುಣಮಟ್ಟವನ್ನು ಉಳಿಸಿಕೊಳ್ಳಬಹುದು. ಹಚ್ಚೆ ಹಾಕಿಸಿಕೊಂಡ ನಂತರ ಅನುಸರಿಸುವ ಕೆಲವು ಸಾಮಾನ್ಯ ನಿಯಮಗಳು.
ಹಚ್ಚೆಯನ್ನು ಪರಿಣಿತ ತಜ್ಞರ ಬಳಿ ಮಾತ್ರ ಹಾಕಿಸಿಕೊಳ್ಳಬೇಕು.
ಹಚ್ಚೆ ಹಾಕಿಸಿಕೊಂಡ ನಂತರ ಕಟ್ಟಿದ ಬ್ಯಾಂಡೇಜನ್ನು 1-2 ಗಂಟೆಯ ನಂತರ ತೆಗೆಯಬೇಕು.
ನಂಜು ನಿವಾರಕ ಸೋಪಿನಿಂದ ಗಾಯವನ್ನು ತಣ್ಣೀರ ಸಹಾಯದಿಂದ ತೊಳೆಯಬೇಕು.
ಹಚ್ಚೆಯ ಭಾಗವನ್ನು ನಿಧಾನವಾಗಿ ಒತ್ತಿ ಒರೆಸಬೇಕು. ಉಜ್ಜಬಾರದು.
ಹಚ್ಚೆಯ ಭಾಗದಲ್ಲಿ ತೆಳುವಾಗಿ ನಂಜುನಿವಾರಕ ಮಲಾಮು ಹಚ್ಚಬೇಕು. ಹೆಚ್ಚಿಗೆ ಮಲಾಮು ಹಚ್ಚುವುದರಿಂದ ಬಣ್ಣ ಕದಡುವ ಸಂಭವ ಹೆಚ್ಚು.
ಗಾಯದ ಮೇಲೆ ನೇರವಾಗಿ ನೀರು ಸುರಿಯಬೇಡಿ ಅಥವಾ ನೀರಿನಲ್ಲಿ ನೆನಸಬೇಡಿ.
ಸೂರ್ಯ ಕಿರಣಗಳು ಗಾಯದ ಮೇಲೆ ನೇರವಾಗಿ ಬೀಳದಿರಲಿ. ಗಾಯದ ಮೇಲಿನ ಹಕ್ಕಳೆಗಳನ್ನು ಕೀಳಬೇಡಿ. ಸ್ವಾಭಾವಿಕವಾಗಿ ಉದುರಲು ಬಿಡಿ.
ಗಾಯ ಊದಿಕೊಂಡು ಉರಿಯೂತ ಹೆಚ್ಚಾಗಿದ್ದರೆ ಐಸ್ ಗಡ್ಡೆಯನ್ನಿಡಿ. ನೋವು ಅಧಿಕವಾಗಿದ್ದರೆ ಚರ್ಮ ತಜ್ಞರನ್ನು ಭೇಟಿಯಾಗಿ.
ಸುರಕ್ಷಿತ ಟ್ಯಾಟೂ ಪಾರ್ಲರ್
ಟ್ಯಾಟೂ ಹಾಕಿಸಿಕೊಳ್ಳುವುದು ಅನಿವಾರ್ಯ ಎಂದಾದರೆ ಸುರಕ್ಷಿತ ಟ್ಯಾಟೂ ಪಾರ್ಲರ್‍ಗಳಲ್ಲೇ ಹಾಕಿಸಿಕೊಳ್ಳಿ. ಜಾತ್ರೆ ಅಥವಾ ಸಂತೆಗಳ ರಸ್ತೆ ಬದಿಯಲ್ಲಿನ ಟ್ಯಾಟೂ ಹಾಕುವವರಿಂದ ದೂರವಿರಿ. ಟ್ಯಾಟೂ ಪಾರ್ಲರ್‍ಗಳು ಸಂಬಂಧಿತ ಇಲಾಖೆಯಿಂದ ಪರವಾನಿಗೆ ಪಡೆದಿರಬೇಕು. ಪಾರ್ಲರ್‍ಗಳಲ್ಲಿ ಸ್ವಚ್ಛತೆ ಹಾಗೂ ವೃತ್ತಿಪರ ಪ್ರಮಾಣ ಪತ್ರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
ಕ್ರಿಮಿನಾಶಕ ಅಥವಾ ಬಳಸಿ ಬಿಸಾಡುವ ಸೂಜಿ ಬಳಸಲು ಒತ್ತಾಯಿಸಿ. ಒಮ್ಮೆ ಬಳಸಿದ ಕೈಗವಸು ಹಾಗೂ ಇತರೆ ಸಾಮಗ್ರಿಗಳನ್ನು ಪುನಃ ಬಳಸದಿರಲು ಕೇಳಿಕೊಳ್ಳಿ. ಹಚ್ಚೆ ಹಾಕುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಗ್ಗೆ ಮತ್ತು ಅವರ ಗಮನ ಹಚ್ಚೆ ಹಾಕುವತ್ತ ಕೇಂದ್ರೀಕೃತವಾಗಿರುವದನ್ನು ದೃಡಪಡಿಸಿಕೊಳ್ಳಿ. ಹಚ್ಚೆ ಕಲಾವಿದರ ಅರ್ಹತೆ ಹಾಗೂ ಸೇವಾನುಭವವನ್ನು ಕೇಳಿ ತಿಳಿಯಿರಿ. 
ಆರ್.ಬಿ.ಗುರುಬಸವರಾಜ


No comments:

Post a Comment