April 3, 2016

ಶಿಲ್ಪವನದಲ್ಲಿ ಜಲಚರಗಳು AQUATICS IN SHILPAVANA HAMPI UNIVERSITY

ದಿನಾಂಕ 01-04-2016ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ನನ್ನ ಲೇಖನ.

ಶಿಲ್ಪವನದಲ್ಲಿ ಜಲಚರಗಳು


ಹಂಪೆ ಎಂದೊಡನೆ ಹಾಳಾಗಿ ಅಳಿದುಳಿದ ಕಲ್ಲಿನ ಕೆತ್ತನೆಗಳ ಚಿತ್ರಣ ಕಣ್ಮುಂದೆ ಹಾದು ಹೋಗುತ್ತವೆ. ಆದರೆ ಹಂಪೆಯ ಒಂದು ಭಾಗವೇ ಆಗಿರುವ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿನ ಶಿಲ್ಪವನದ ಚಿತ್ರಣಗಳು ತಾಜಾತನದೊಂದಿಗೆ ಕಂಗೊಳಿಸುತ್ತಿವೆ. 
ಈ ಬಾರಿ ಶಿಲ್ಪವನಕ್ಕೆ ಹೊಸ ಅತಿಥಿಗಳ ಸೇರ್ಪಡೆಯಾಗಿದೆ. ಈ ಅತಿಥಿಗಳು ಜಲವಿದೆಡೆಯೂ ಜೀವಿಸಬಲ್ಲೆವು ಎಂಬುದನ್ನು ಸಾಬೀತು ಮಾಡಲಿರುವ ಜಲಚರಗಳು. ಆಶ್ಚರ್ಯವಾಗುತ್ತಿದೆಯೇ? ಹೌದು ಶಿಲ್ಪವನದಲ್ಲೀಗ ಭಾರೀ ಗಾತ್ರದ ಮೀನುಗಳು, ಮೊಸಳೆಗಳು, ಆಮೆಗಳು, ಕಪ್ಪೆಗಳು ಬೀಡುಬಿಟ್ಟಿವೆ. 
ಎಲ್ಲಿದೆ ಶಿಲ್ಪವನ? : ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಶಿಲ್ಪವನವಿದೆ. ಇಲ್ಲಿ ಪ್ರಾಕೃತಿಕವಾಗಿ ಅಲ್ಲಲ್ಲಿ ಬಿದ್ದಿರುವ ಕಲ್ಲುಗಳಿಗೆ ಅವುಗಳ ಆಕಾರಕ್ಕೆ ತಕ್ಕಂತೆ ಕೆತ್ತನೆಯ ಸ್ಪರ್ಶ ನೀಡಿ ಆಕರ್ಷಕ ಶಿಲ್ಪಗಳನ್ನಾಗಿ ಮಾಡಲಾಗಿದೆ.
ಈಗಾಗಲೇ ಇರುವ ಅನೇಕ ಕಲಾಕೃತಿಗಳ ಜೊತೆ ಜಲಚರಗಳು ಸ್ಥಾನ ಪಡೆದಿವೆ. ಪ್ರಾಕೃತಿಕವಾಗಿ ಬಿದ್ದಿರುವ ಕಲ್ಲುಗಳಿಗೆ ಜಲಚರಗಳ ರೂಪು ನೀಡಿ ಶಿಲ್ಪವನವನ್ನು ಆಕರ್ಷಕಗೊಳಿಸಲಾಗಿದೆ. ಇಲ್ಲಿನ ದೈತ್ಯ ಕಲ್ಲುಬಂಡೆಗೆ ಕಲೆಯ ಸ್ಪರ್ಶ ನೀಡಿ ಆಮೆ, ಮೊಸಳೆ, ಮೀನು, ಮತ್ಸಕನ್ಯೆ, ಕಡಲ್ಗುದುರೆ, ಕಪ್ಪೆ ಹೀಗೆ ಮುಂತಾದ ಜಲಚರಗಳ ಆಕೃತಿಗಳ ಕೆತ್ತಲಾಗಿದೆ. ಇವು ನೋಡುಗರ ಆಕರ್ಷಣೆಯ ವಸ್ತುಗಳಾಗಿವೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗಂತೂ ಆಟದ ಸಾಮಗ್ರಿಗಳಾಗಿ ಪರಿಣಮಿಸಿವೆ. ಮಕ್ಕಳು ಅವುಗಳ ಮೇಲೆ ಕುಳಿತು, ಬಾಯಲ್ಲಿ ಕೈಯಿಟ್ಟು ಮೋಜನ್ನು ಅನುಭವಿಸುತ್ತಾರೆ. ಪ್ರೇಕ್ಷಕರಂತೂ ಮೊಬೈಲ್‍ನಲ್ಲಿ ಅವುಗಳ ಚಿತ್ರ ಸೆರೆಹಿಡಿಯುವರಲ್ಲೇ ಮಗ್ನರಾಗುತ್ತಾರೆ. 
ಸಾಹಿತ್ಯದ ಲಾಲಿತ್ಯ: ಜಲಚರಗಳ ಜೊತೆಗೆ ಅನೇಕ ನವ್ಯ ಶೈಲಿಯ ಕಲಾಕೃತಿಗಳೂ ಕೂಡಾ ಶಿಲ್ಪವನವನ್ನು ಶ್ರೀಮಂತಗೊಳಿಸಿವೆ. ಶಿಲ್ಪಗಳಿಗೆ ಸಾಹಿತ್ಯದ ಮೆರಗನ್ನು ನೀಡಿರುವುದು ನೋಡುಗರಿಗೆ ಸಾಹಿತ್ಯದ ಲಾಲಿತ್ಯವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಡಾ//ಚಂದ್ರಶೇಖರ ಕಂಬಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಅನೇಕ ಕಲಾಕೃತಿಗಳು ಪ್ರೇಕ್ಷಕರಿಗೆ ರಸದೌತಣ ನೀಡುತ್ತವೆ. ನೀವೇನಾದರೂ ಹಂಪೆಗೆ ಪ್ರವಾಸ ಕೈಗೊಂಡರೆ ತಪ್ಪದೇ ಕನ್ನಡ ವಿಶ್ವವಿದ್ಯಾಲಯಕ್ಕೂ ಭೇಟಿಕೊಡಿ.
                                        ಚಿತ್ರ ಬರಹ : ಆರ್.ಬಿ.ಗುರುಬಸವರಾಜ



No comments:

Post a Comment