August 29, 2017

ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ

2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ
ಮಕ್ಕಳ ಮೆಚ್ಚಿನ ದೈಹಿಕ ಶಿಕ್ಷಕ ಟಿ.ಎಂ.ವೀರಭದ್ರಯ್ಯ

ಸಾಮಾನ್ಯವಾಗಿ ದೈಹಿಕ ಶಿಕ್ಷಕರಿಗೆ ಶಾಲೆಯ ಶಿಸ್ತು ಹಾಗೂ ಸ್ವಚ್ಚತೆಯ ಜವಾಬ್ದಾರಿ ವರ್ಷವಿಡೀ ಇರುತ್ತದೆ. ಅದರಲ್ಲೂ ವರ್ಷದ ಮೂರು ತಿಂಗಳು ಮಾತ್ರ ಅಂದರೆ ಕ್ರಿಡಾಕೂಟಗಳು ಮುಗಿಯುವವರೆಗೆ ಮಾತ್ರ ಕಾರ್ಯದ ಒತ್ತಡ ಹೆಚ್ಚು. ಉಳಿದ ದಿನಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಹಾಗೂ ಪ್ರಾಯೋಗಿಕ ತರಗತಿಗಳಲ್ಲಿ ತೊಡಗಿರುತ್ತಾರೆ. ಆದರೆ ಇಲ್ಲೊಬ್ಬ ದೈಹಿಕ ಶಿಕ್ಷಕರು ವರ್ಷವಿಡೀ ಮಕ್ಕಳನ್ನು ತರಬೇತು ಮಾಡುವುದರಲ್ಲೆ ಕಾಲ ಕಳೆಯುತ್ತಾರೆ.  ಅವರೇ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ಶ್ರಿ.ಗು.ಕ.ಸ.ಮಾ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಕರಾದ ಟಿ.ಎಂ.ವೀರಭದ್ರಯ್ಯ.
ಮಕ್ಕಳಿಗಾಗಿ ಮೀಸಲಾದ ಬದುಕು: ಇವರು ದಿನದ ಹೆಚ್ಚು ಹೊತ್ತು ಮಕ್ಕಳ ಜೊತೆಯಲ್ಲಿಯೇ ಕಾಲ ಕಳೆಯುತ್ತಾರೆ. ಅದರಲ್ಲೆನು ವಿಶೇಷ ಅಂತಿರಾ? ವಿಶೇಷ ಇರೊದೇ ಇವರ ವಿಶೇಷ ಚಟುವಟಿಕೆಗಳಲ್ಲಿ. ಬೆಳಿಗ್ಗೆ 6 ಗಂಟೆಗೆ ಶಾಲಾ ಆವರಣದೊಳಕ್ಕೆ ಬರುವ ಇವರು ಅಲ್ಲಿಯೇ ದೈಹಿಕ ವ್ಯಾಯಾಮದಲ್ಲಿ ತೊಡಗುತ್ತಾರೆ. 6;30ರಿಂದ 7;00 ಗಂಟೆಯೊಳಗೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಾರೆ. ಆಗಮಿಸಿದ ಎಲ್ಲಾ ಮಕ್ಕಳಿಗೂ ಯೋಗ ಮತ್ತು  ದೈಹಿಕ ಕಸರತ್ತುಗಳನ್ನು ಹೇಳಿಕೊಡುತ್ತಾರೆ. 8;30 ರವರೆಗೆ ಮಕ್ಕಳ ಜೊತೆಗಿದ್ದು ಮನೆಗೆ ತೆರಳುತ್ತಾರೆ. ಪುನಃ ಮನೆಯಿಂದ 9;00 ಗಂಟೆಗೆ ಶಾಲೆಗೆ ಆಗಮಿಸಿದರೆ ಮನೆಗೆ ತೆರಳುವುದು ಸಂಜೆ 7:00ಕ್ಕೆ. ಇದು ಕೇವಲ ಒಂದು ದಿನ ಅಥವಾ ಒಂದು ವಾರದ ಕಥೆಯಲ್ಲ. 20 ವರ್ಷಗಳ ಸೇವಾವಧಿಯುದ್ದಕ್ಕೂ ನಡೆದ ಅತ್ಯಮೂಲ್ಯ ಸೇವಾ ಬದುಕು.
ವೈವಿಧ್ಯಮಯ ಕಾರ್ಯಗಳು:  ಶಾಲಾ ಕೆಲಸದ ವೇಳೆಯಲ್ಲಿಯೂ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಸ್ವಚ್ಛತೆ, ಶಾಲಾವನದ ನಿರ್ವಹಣೆ, ಕ್ರಿಡಾಕೂಟಗಳ ಆಯೋಜನೆ, ವಿವಿಧ ಜಯಂತಿ ಹಾಗೂ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮತ್ತು ನಿರ್ವಹಣೆ ಹೀಗೆ ಇಡೀ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಇವರದ್ದೆ ಓಡಾಟ. ಜೊತೆಗೆ ತರಗತಿಗಳು ಖಾಲಿ ಇದ್ದಾಗ ಅಲ್ಲಿ ಹಾಜರಾಗಿ ಭಾಷಾ ಆಟಗಳ ಮೂಲಕ ಇಂಗ್ಲಿಷ್ ಬೋಧಿಸುತ್ತಾರೆ. ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಸದಾ ಶ್ರಮಿಸುತ್ತಿರುತ್ತಾರೆ.
ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಪ್ರಭಾತ್‌ಪೇರಿ ಹೊಗಬೇಕಿದ್ದರೆ ಇವರ ಬ್ಯಾಂಡ್‌ಸೆಟ್ ಮುನ್ನಡೆಯುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಸಿದ ಶಿಸ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿತವಾಗುತ್ತದೆ. ಪ್ರಮುಖ ರಾಷ್ಟಿಯ ದಿನಾಚರಣೆಗಳಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಮಕ್ಕಳಿಂದ ಆಕರ್ಷಕ ಕವಾಯತು ಮತ್ತು ಜನಜಾಗೃತಿ ಮೂಡಿಸುವ ಕಿರು ರೂಪಕಗಳ ಪ್ರದರ್ಶನ ಇರುತ್ತದೆ.
ವಿಶೇಷ ಚಟುವಟಿಕೆಗಳು: ಇವರು ಗುರುತಿಸಿಕೊಂಡಿರುವುದು ಇವರ ವಿಶೇಷ ಚಟುವಟಿಕೆಗಳಿಂದ. ಅವುಗಳೆಂದರೆ ತಬಲಾ ವಾದನ ಮತ್ತು ಚಿತ್ರಕಲೆ. ತಬಲ ವಾದನ ಮತ್ತು ಚಿತ್ರಕಲೆ ಇವರ ವಿಶೇಷ ಹವ್ಯಾಸವಾಗಿದ್ದು, ಮಕ್ಕಳಲ್ಲೂ ಅದನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಇವರು ತಬಲ ವಾದನದ ಸಾಥ್ ನೀಡುತ್ತಾರೆ. ಆಯಾ ದಿನದ ವಿಶೇಷಕ್ಕೆ ಅನುಗುಣವಾಗಿ ಸೂಚನಾಫಲಕದಲ್ಲಿ ಅಲಂಕಾರಿಕವಾಗಿ ಬರೆಯುತ್ತಾರೆ. ಜೊತೆಗೆ ಅದಕ್ಕೊಪ್ಪುವ ಮಾಹಿತಿ ನೀಡುವ ಕಿರುಚಿತ್ರವನ್ನೂ ಬರೆಯುತ್ತಾರೆ. ಇದು ನೋಡುಗರಿಗೆ ಅತ್ಯಾಕರ್ಷಕವಾಗಿ ಕಾಣುತ್ತದೆ ಮತ್ತು ದಿನದ ವಿಶೇಷತೆ ತಿಳಿಯುತ್ತದೆ. ದಿನವಿಡೀ ಮಕ್ಕಳ ಜೊತೆ ಹೆಚ್ಚುಹೊತ್ತು ಕಳೆಯುವ ಇವರು ಶಾಲಾ ಅವಧಿಯ ನಂತರ ಹೊಸ ಹೊಸ ಆಟಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾರೆ. ಶಾಲಾ ಶಿಕ್ಷಕರ ಸಹಕಾರದಿಂದ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಪ್ರತಿವರ್ಷ ಬೇಸಿಗೆ ಶಿಬಿರ ಆಯೋಜಿಸುತ್ತಾರೆ.
ಮುಡಿಗೇರಿದ ಪ್ರಶಸ್ತಿ ಪುರಸ್ಕಾರಗಳು: 
2004-05 ರಲ್ಲಿ ಎನ್.ಪಿ.ಇ.ಜಿ.ಇ.ಎಲ್ ವತಿಯಿಂದ “ಉತ್ತಮ ಶಿಕ್ಷಕ” ಪುರಸ್ಕಾರ.
2006-07 ರಲ್ಲಿ “ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಕ” ಪ್ರಶಸ್ತಿ
2007-08 ರಲ್ಲಿ ಸಿರಗುಪ್ಪದ ಮಾಜಿ ಶಾಸಕ ಸೋಮಲಿಂಗಪ್ಪ ಇವರಿಂದ “ಮಯಾರಶ್ರಿÔ ಪುರಸ್ಕಾರ.
2016-17 ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿ
ವಿಶೇಷ ಸಾಧನೆ : ಒಬ್ಬ ದೈಹಿಕ ಶಿಕ್ಷಕರಾಗಿ ವಿವಿಧ ಹಂತಗಳ ಕ್ರಿಡಾಕೂಟಗಳಿಗೆ ಮಕ್ಕಳನ್ನು ಸಿದ್ದಗೊಳಿಸುವ ಜೊತೆಗೆ ಪ್ರತಿಭಾ ಕಾರಂಜಿ, ಕಲಿಕೋತ್ಸವ, ಯೋಗಾಸನ, ಚಿತ್ರಕಲೆ ಮುಂತಾದ ಸ್ಪರ್ದೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುತ್ತಾರೆ. ಆಗಾಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸ್ಪರ್ದೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಉತ್ತೆಜಿಸುತ್ತಾರೆ.
ವೃತ್ತಿಗೆ ಸೇರಿದಾಗ ಇದ್ದ ವೃತ್ತಿನಿಷ್ಠೆ ಮತ್ತು ಸಮಯಪ್ರಜ್ಞೆಗಳು ಇಂದಿಗೂ ಮುನ್ನಡೆದಿವೆ. ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಇತರೆ ಶಿಕ್ಷಕರಿಗೆ ಮಾದರಿ ಶಿಕ್ಷಕರಾಗಿ ಸರಳ ಜೀವನ ನಡೆಸುತ್ತಿರುವ ವೀರಭ್ರದ್ರಯ್ಯ ಇತರರಿಗಿಂತ ಭಿನ್ನವಾಗಿದಾರೆ. ಅವರ ನಡೆ ನುಡಿ ಇತರರಿಗೆ ಪ್ರೆÃರಣೆ.
ಆರ್.ಬಿ.ಗುರುಬಸವರಾಜ ಹೊಳಗುಂದಿ
ಶಿಕ್ಷಕರು. ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ(ತಾ) ಬಳ್ಳಾರಿ(ಜಿ) 
9902992905


ಟೀಚರ್ ಆಗಸ್ಟ್-2017

No comments:

Post a Comment