August 29, 2017

ಹಡಗಲಿ ಬಿ.ಆರ್.ಸಿ BRC HADAGALI

ಆಗಸ್ಟ್ 2017ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾದ ನನ್ನ ಬರಹ.
ಮಲ್ಲಿಗೆಯ ನಾಡಲ್ಲಿ ಸಂಪದ್ಭರಿತವಾದ
ಕ್ಷೇತ್ರ ಸಂಪನ್ಮೂಲ ಕೇಂದ್ರ


ಕುಟುಂಬದ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕುಟುಂಬವೇ ಮಾದರಿ ಕುಟುಂಬ ಆಗುತ್ತದೆ. ಅದೇರೀತಿ ಒಂದು ಕಛೇರಿ ಮುಖ್ಯಸ್ಥ ಮನಸ್ಸು ಮಾಡಿದರೆ ಇಡೀ ಕಛೇರಿ ವಾತಾವರಣವೇ ಬದಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕಛೇರಿ ಎಂದಾಕ್ಷಣ ಧೂಳು ಹಿಡಿದ ಕಡತಗಳು, ಜಾಡು ಕಟ್ಟಿದ ಮೂಲೆಗಳು, ಬಣ್ಣ ಮಾಸಿದ ಗೋಡೆಗಳು, ಇತ್ಯಾದಿ ದೃಶ್ಯಗಳು ಕಣ್ಮುಂದೆ ಹಾದು ಹೋಗುತ್ತವೆ. ಇಂತಹ ಎಲ್ಲಾ ಅಪಸ್ವರಗಳಿಗೆ ತಿಲಾಂಜಲಿ ಹೇಳಿ ಆಕರ್ಷಕ ಶೈಲಿಯಲ್ಲಿ ಕಛೇರಿ ಬದಲಾದರೆ ಹೇಗೆ? ನೋಡಲು ಸುಂದರವಾಗಿರುತ್ತದೆ ಅಲ್ಲವೇ? ಇದು ಹೇಳಲೇನೋ ಸುಲಭ. ಆದರೆ ಆಕರ್ಷಕವಾಗಿ ಮಾಡುವುದಾದರೂ ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲ ಹೊಂದಾಣಿಕೆ ಹೇಗೆ? ಎಂಬುದೇ ಎಲ್ಲರಿಗೂ ಯಕ್ಷ ಪ್ರಶ್ನೆ. ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲು ಸಜ್ಜಾಗಿದೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕ್ಷೇತ್ರ ಸಂಪನ್ಮೂಲ ಕೇಂದ್ರ.
ಕನಸಿನ ಬೆನ್ನೇರಿ : ಸಂಪನ್ಮೂಲ ಕೇಂದ್ರವು ಪಟ್ಟಣದ ಹೊರವಲಯದಲ್ಲಿದ್ದು ಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ತರಬೇತಿ ಹಾಗೂ ಇನ್ನಿತರೇ ಕಛೇರಿ ಕೆಲಸಕ್ಕೆಂದು ಬರುವ ಶಿಕ್ಷಕರು ಮತ್ತು ಪಾಲಕರಿಗೆ ಒಂದು ರೀತಿಯ ನೋವಿನ ಅನುಭವ ಕಾಡುತ್ತಿತ್ತು.   4-7-2016 ರಂದು ಹೆಚ್.ಕೆ.ಚಂದ್ರಪ್ಪ ಎಂಬುವವರು ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಇಲ್ಲಿಗೆ ಬಂದರು. ಇಲ್ಲಿನ ಭೌತಿಕ ವಾತಾವರಣ ಕಂಡು ಏನಾದರೂ ಹೊಸತನ ಮಾಡಬೇಕೆಂಬ ಕನಸು ಕಂಡರು. ಅದಕ್ಕೆ ಸಿಬ್ಬಂದಿಯ ಸಹಕಾರ ಬೇಡಿದರು. ಸಿಬ್ಬಂದಿಯೂ ಅದಕ್ಕೆ  ಸಕಾರಾತ್ಮಕವಾಗಿ ಸ್ಪಂದಿಸಿತು.  ಯೋಜನೆ ಸಿದ್ದಪಡಿಸಿದರು. ಅದರಂತೆ ಕಾರ್ಯತತ್ಪರರಾದರು.
ಬದಲಾದದ್ದಾರೂ ಏನು ? : ಒಂಭತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಡೀ ಕಛೇರಿಯ ವಾತಾವರಣವೇ ಬದಲಾಗಿದೆ. ಗೋಡೆಗಳು ಮಾಸಲು ಬಣ್ಣ ಕಳಚಿಕೊಂಡು ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತವೆ. ಈ ಬಣ್ಣ  ಆಕರ್ಷಕವಾಗಿ ಕಾಣಲು ವರ್ಲಿ ಚಿತ್ರಣಗಳನ್ನು ಚಿತ್ರಿಸಲಾಗಿದೆ. ಇಡೀ ಶಿಕ್ಷಣದ ರೂಪರೇಷಗಳನ್ನು ಬಿಂಬಿಸುವ ಚಿತ್ರಗಳನ್ನು ಅಲ್ಲಲ್ಲಿ ಬಿಡಿಸಲಾಗಿದೆ. ಕೆಂಪು ಬಣ್ಣದ ಸಿಮೆಂಟ್ ನೆಲ ಈಗ ಟೈಲ್ಸ್ ಕಲ್ಲುಗಳಿಂದ ಸಪೂರವಾಗಿದೆ. ದೂಳಿನಿಂದ ತುಂಬಿದ್ದ ಕಿಟಕಿಗಳು ಅಲುಗಾಡುತ್ತಿರುವ ಸುಂದರ ಕರ್ಟನ್ ಗಳನ್ನು ಹೊಂದಿವೆ. ನೀರಿಲ್ಲದೇ ಒಣಗಿದ್ದ ಶೌಚಾಲಯಗಳು ಆಹ್ಲಾದಕರ ಪರಿಮಳದಿಂದ ಕೂಡಿವೆ. ಕುಡಿಯಲು ಶುದ್ದ ನೀರಿನ ಘಟಕ ಅಳವಡಿಸಲಾಗಿದೆ. ಒಂದು ಕೊಠಡಿಯನ್ನು ಗ್ರಂಥಾಲಯವಾಗಿ ಮಾರ್ಪಾಟು ಮಾಡಲು ಸಕಲ ಸಿದ್ದತೆ ನಡೆದಿದೆ. ಇನ್ನೊಂದು ಕೊಠಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿವಿಧ ಕಲಿಕೋಪಕರಣಗಳುಳ್ಳ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲು ಸಿದ್ದತೆ ನಡೆದಿದೆ. ತಾಲೂಕಿನಲ್ಲಿ 350 ವಿಶೇಷ ಅಗತ್ಯವುಳ್ಳ ಮಕ್ಕಳಿದ್ದು, ಅವರಿಗೆ ಶಾಶ್ವತ ಫಿಜಿಯೋ ಥೆರಪಿ ಕೇಂದ್ರ ಪ್ರಾರಂಭಿಸಲು ಅಗತ್ಯ ಸಾಧನಗಳನ್ನು ವ್ಯವಸ್ಥೆ ಮಾಡಲಾಗಿದೆ.  
ಬದಲಾದ ತರಬೇತಿ ಕೊಠಡಿ : ಇಡೀ ತರಬೇತಿ ಕೊಠಡಿಯ ಚಿತ್ರಣ  ಬದಲಾಗಿದೆ. ಸಂಪೂರ್ಣ ಕೊಠಡಿ ಡಿಜಿಟಲ್ ಮಯವಾಗಿದೆ. 55 ಇಂಚಿನ ಎಲ್.ಇ.ಡಿ  ಟಿ.ವಿ ಗೋಡೆಯನ್ನು ಅಲಂಕರಿಸಿದೆ. ಅದಕ್ಕೆ ಪೂರಕವಾಗಿ ಹೋಮ್ ಥೇಟರ್ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ತರಬೇತಿ ಕೊಠಡಿಯಲ್ಲಿ ತಲೆ ಎತ್ತಿದರೆ ಸಾಕು ಇಡೀ ನಲಿ-ಕಲಿಯ ದಿವ್ಯ ದರ್ಶನವಾಗುತ್ತದೆ. ಅಂದರೆ ನಲಿ-ಕಲಿ ಪದ್ದತಿಗೆ ಪೂರಕವಾದ ಕ್ರಾಫ್ಟ್ ವರ್ಕ್ ಗಳನ್ನು ಚಪ್ಪರಕ್ಕೆ ನೇತುಹಾಕಲಾಗಿದೆ. ನೆಲಕ್ಕೆ ಮ್ಯಾಟ್ ಹಾಕಲಾಗಿದ್ದು, ಕುಳಿತುಕೊಳ್ಳಲು ಕಾಲಿಟ್ಟರೆ ಕೊಳಕಾಗುತ್ತದಲ್ಲ ಎಂಬ ಭಾವನೆ ಬರುತ್ತದೆ. ಜೊತೆಗೆ ಒಂದಿಷ್ಟು ಖಾಯಂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ತರಬೇತಿ ಸಮಯದಲ್ಲಿ ವಿಡೀಯೋ/ಆಡಿಯೋ ಬಳಸುವಾಗ ವಿದ್ಯುತ್ ಸರಬರಾಜು ಕಡಿತವಾಗುವ ಭಯವಿಲ್ಲ. ಬ್ಯಾಟರಿ ಮತ್ತು ಯು.ಪಿ.ಎಸ್ ಅಳವಡಿಸಿದ್ದು ಯಾವುದೇ ತೊಂದರೆ ಇಲ್ಲದೇ ನಿರಾಯಾಸವಾಗಿ ತರಬೇತಿ ಸಾಗುತ್ತವೆ. ಮೊದಲೆಲ್ಲಾ ಇಲ್ಲಿಗೆ ತರಬೇತಿಗೆ ಬಂದವರಿಗೆ ಆದಷ್ಟೂ ಬೇಗನೇ ಇಲ್ಲಿಂದ ಹೊರಹೋದರೆ ಸಾಕು ಎನಿಸುತ್ತಿತ್ತು. ಆದರೆ ಈಗ ಇಲ್ಲಿಂದ ಹೊರಹೋಗಲು ಮನಸ್ಸೇ ಬರುತ್ತಿಲ್ಲ ಎಂಬುದು ಶಿಕ್ಷಕರ ಅಭಿಮತ.
ಬದಲಾದ ಔಟ್ ಲುಕ್ : ಕೊಠಡಿಯೊಳಗಿನ ಚಿತ್ರಣ ಬದಲಾದಂತೆ ಕಟ್ಟಡದ ಹೊರಗಿನ ಔಟ್ ಲುಕ್ ಕೂಡಾ ಬದಲಾಗಿದೆ. ಹೊರಭಾಗವೂ ಕೂಡಾ ವರ್ಲಿ ಚಿತ್ರಣಗಳೊಂದಿಗೆ ಆಕರ್ಷಕ ರೂಪು ಪಡೆದಿದೆ. ಕಟ್ಟಡದ ಸುತ್ತಲೂ ರಡಿಮೇಡ್ ಕಾಂಪೌಂಡ್ ಹಾಕಲಾಗಿದ್ದು ಅಲ್ಲಿಯೂ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಪ್ರವೇಶದ್ವಾರದ ಗೇಟ್ ನಲ್ಲಿ ಶಿಕ್ಷಣದ ಮಹತ್ವ ಸಾರುವ ಥೀಮ್ ಆಧಾರಿತ ಚಿತ್ರ ಎಲ್ಲರ ಕಣ್ಮನ ಸೆಳೆಯುತ್ತವೆ. ಇಲ್ಲಿನ ಎಲ್ಲಾ ಚಿತ್ರಗಳು ರಮೇಶ ಮರೋಳ್ ಅವರ ಕುಂಚದಿಂದ ಮೂಡಿಬಂದಿವೆ.
ದಾನಿಗಳಿಂದ ಸಂಪದ್ಭರಿತ : ಇಲ್ಲಿನ ಎಲ್ಲಾ ಬದಲಾವಣೆಗಳ ಪ್ರಾಯೋಜಕರು ದಾನಿಗಳು. ಬದಲಾವಣೆಗೆ ಪ್ರೇರಕ ಶಕ್ತಿ ಸಮನ್ವಯಾಧಿಕಾರಿಗಳು ಮತ್ತು  ಸಿಬ್ಬಂದಿ. ಇವರೆಲ್ಲರ ಒಮ್ಮತದ ಕಾರ್ಯದಿಂದ ಸಂಪನ್ಮೂಲ ಕೇಂದ್ರವು ಸಂಪದ್ಭರಿತವಾಗಿದೆ.  ಕಾರ್ಯನಿರತ ಶಿಕ್ಷಕರು, ನಿವೃತ್ತ ಶಿಕ್ಷಕರು, ಶಿಕ್ಷಣಾಭಿಮಾನಿಗಳು ಜನಪ್ರಿನಿಧಿಗಳು, ಪಾಲಕ-ಪೋಷಕರು ಸ್ವಪ್ರೇರಣೆಯಿಂದ ದಾನ ನೀಡಿದ್ದಾರೆ.
ದಾನಗಳ ವಿವರ : ಪೇಂಟ್, ಪೇಂಟಿಂಗ್ ಕೂಲಿ, ಫ್ಲೋರಿಂಗ್ ಟೈಲ್ಸ್, ಫ್ಲೋರಿಂಗ್ ಮ್ಯಾಟ್, ಪ್ಯಾನ್ ಮತ್ತು ಕರ್ಟನ್ಸ್, ರಾಷ್ಟ್ರ ನಾಯಕರ ಫೋಟೋ, ಟೇಬಲ್, ಸಿಂಟೆಂಕ್ಸ್, ಬೋರ್ ವೆಲ್, ಪಂಪ್ ಮತ್ತು ಪೈಪ್ಸ್, 55 ಇಂಚಿನ ಎಲ್.ಇ.ಡಿ ಟಿ.ವಿ, ಹೋಮ್ ಥೇಟರ್, ಯು.ಪಿ.ಎಸ್ ಮತ್ತು ಬ್ಯಾಟರಿ, ಡಿಶ್ ಕನೆಕ್ಷನ್, ಮಹಾದ್ವಾರ ಮತ್ತು ಗೇಟ್, ಕಾಂಪೌಂಡ್ ವಾಲ್, ಧ್ವಜಸ್ಥಂಭ, ಪಾರ್ಕಿಂಗ್ ಟೈಲ್ಸ್, ಪಾರ್ಕ್ ಸ್ವಚ್ಛತೆ ಮತ್ತು ಮಣ್ಣು ಹೇರಿದ್ದು, ಶುದ್ದ ಕುಡಿಯುವ ನೀರಿನ ಘಟಕ, ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಹೀಗೆ ಒಟ್ಟು 8ಲಕ್ಷ 20 ಸಾವಿರ ಮೌಲ್ಯದ ದೇಣಿಗೆ ಸಂಗ್ರಹಿಸಲಾಗಿದೆ. ಸಮಗ್ರ ಬದಲಾವಣೆಯೂ ಸ್ವಯಂ ಪ್ರೇರಿತ ದಾನಿಗಳಿಂದ ಸಾಧ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಕಟ್ಟಡದ ಬಳಿಯ ಜಾಗೆಯಲ್ಲಿ ಪಾರ್ಕ್ ನಿರ್ಮಿಸುವ ಯೋಜನೆ ಇದೆ. ಅದಕ್ಕೆ  ಅಗತ್ಯವಿರುವ ಸಸಿಗಳನ್ನು ವಿತರಿಸಲು ದಾನಿಗಳು ಮುಂದೆ ಬಂದಿದ್ದಾರೆ. ಇದೆಲ್ಲಾ ಕೇವಲ ಒಂದು ವಾರ ಅಥವಾ ಒಂದು ತಿಂಗಳಲ್ಲಿ ಆದ ಕೆಲಸವಲ್ಲ. ಇಷ್ಟೆಲ್ಲಾ ಆಕರ್ಷಣೆ ಹಾಗೂ ಬದಲಾವಣೆಯ ರೂಪು ಪಡೆಯಲು ಒಂದು ವರ್ಷದ ಕಾಲಾವಧಿ ಬೇಕಾಗಿದೆ.
 ಇದೆಲ್ಲಾ ತುಂಬಾ ರಿಸ್ಕಿನ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹೇಗೋ ಒಂದಿಷ್ಟು ಕಾಲಹರಣ ಮಾಡಿ ಮನೆಗೆ ಹೋದರೆ ಅಂದಿನ ಡ್ಯೂಟಿ ಮುಗಿಯಿತು ಎಂಬುವವರೇ ಹೆಚ್ಚು. ಆದರೆ ಇಲ್ಲಿನ ಸಿಬ್ಬಂದಿ  10 ರಿಂದ 5 ರವರೆಗೆ ಕಛೇರಿ ಕೆಲಸಗಳನ್ನು ಮುಗಿಸಿಕೊಂಡು 5 ಗಂಟೆಯ ನಂತರ ಬದಲಾವಣೆಯ ಕೆಲಸವನ್ನು ಪೂರೈಸಿದ್ದಾರೆ. ದಾನಿಗಳ ಭೇಟಿ ಹಾಗೂ  ಕೆಲಸದ ಮೇಲುಸ್ತುವಾರಿ ವಹಿಸುವುದರಲ್ಲಿ ಮಗ್ನರಾಗಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು : ಇಷ್ಟೆಲ್ಲಾ ಕಾರ್ಯಭಾರಗಳ ನಡುವೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ. ತಾಲೂಕಿನಾದ್ಯಂತ ಬದಲಾವಣೆಯ ಗಾಳಿ ಬೀಸತೊಡಗಿದೆ. ಬದಲಾದ ಬಿ.ಆರ್.ಸಿ ಸನ್ನಿವೇಶ ಗಮನಿಸಿದ ಶಿಕ್ಷಕರು ತಮ್ಮ ಶಾಲಾ ವಾತಾವರಣವನ್ನು ಬದಲಾಯಿಸುವ ಮನಸ್ಸು ಮಾಡಿದ್ದಾರೆ. ಅನೇಕ ಶಾಲೆಗಳು ಪ್ರಗತಿಯತ್ತ ಹೆಜ್ಜೆ ಹಾಕಿವೆ. ಪ್ರಾರಂಭದಲ್ಲಿ ತಾಲೂಕಿನಾದ್ಯಂತ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಿವೆ. ಬಿ.ಆರ್.ಸಿಯ ಸಮಗ್ರ ಚಿತ್ರಣ ಬದಲಾದ್ದರಿಂದ ಮಲ್ಲಿಗೆಯ ನಾಡಲ್ಲಿ ಶಿಕ್ಷಣದ ಪರಿಮಳ ಸೂಸುತ್ತಿದೆ.
ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಎಂತಹ ಕಾರ್ಯವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಮ್ಮ ಬಿ.ಆರ್.ಸಿ ಹೊಸ ರೂಪು ಪಡೆದಿರುವುದೇ ಸಾಕ್ಷಿ. ಇಲ್ಲಿನ ಅಧಿಕಾರಿಗಳು ಆದೇಶಕ್ಕಿಂತ ಕಾರ್ಯ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಪಾರದರ್ಶಕವಾಗಿ ಅಭಿವೃದ್ದಿ ಕೆಲಸ  ಮಾಡಿದ್ದಾರೆ. ಮೊದಲು ಇಲ್ಲಿಗೆ ಬರಲು ಎಲ್ಲರಿಗೂ ಒಂದು ರೀತಿಯ ಕಿರಿಕಿರಿ ಎನಿಸುತ್ತಿತ್ತು. ಆದರೆ ಈಗ ಎಲ್ಲರೂ ಖುಷಿಯಿಂದ ಬರುತ್ತಾರೆ.
        ಸುರೇಶ ಅರುಣಿ. (ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು).

ಬಿ.ಆರ್.ಸಿ.ಯ ಬದಲಾದ ಸ್ವರೂಪ ಖುಷಿ ತಂದಿದೆ. ಇಲ್ಲಿನ ಬದಲಾವಣೆಯಂತೆ ಪ್ರತಿ ಸರ್ಕಾರಿ ಶಾಲೆಯನ್ನೂ  ಬದಲಾಯಿಸಲು ಪ್ರತ್ನಿಸುತ್ತೇವೆ. ಗುಣಮಟ್ಟದ  ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂವನ್ನು ಕ್ರೂಢೀಕರಿಸಲು ಶ್ರಮಿಸುತ್ತಿದ್ದೇವೆ. ತರಬೇತಿಯಲ್ಲಿ ಕಲಿತ ವಿಷಯಗಳು ತರಗತಿ ಕೋಣೆಯಲ್ಲಿ ಬಳಕೆಯಾಗುವಂತೆ ಮೇಲುಸ್ತುವಾರಿ ವಹಿಸಲು ಆಧ್ಯತೆ ನೀಡಿದ್ದೇವೆ.
         ಜಿ.ಕೊಟ್ರೇಶ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೂವಿನಹಡಗಲಿ.

ಆರ್.ಬಿ.ಗುರುಬಸವರಾಜ ಹೊಳಗುಂದಿ
ಸಹ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಬನ್ನಿಕಲ್ಲು
ಹಗರಿಬೊಮ್ಮನಹಳ್ಳಿ (ತಾ) ಬಳ್ಳಾರಿ(ಜಿ)

9902992905

No comments:

Post a Comment