July 21, 2018

ಸಂಬಂಧಗಳು ಸೇತುವೆಯಾಗಲಿ

ಸಂಬಂಧಗಳು ಸೇತುವೆಯಾಗಲಿ
ಜುಲೈ 2018ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಒಂದೆಡೆ ಮಾನವನ ವ್ಯವಹಾರಗಳು ಜಗತ್ತಿನಾದ್ಯಂತ ವಿಸ್ತಿರಿಸುತ್ತಿವೆ. ಇನ್ನೊಂದೆಡೆ ಮಾನವ ಸಂಬಂಧಗಳು ದೂರವಾಗುತ್ತಿವೆ. ಕೂಡು ಕುಟುಂಬಗಳಲ್ಲಿನ ಅವಿನಾಭವ ಸಂಬಂಧಗಳು ಕಡಿತಗೊಂಡಿವೆ. ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ನಾದಿನಿ-ಮೈದುನ, ಇತ್ಯಾದಿ ಸಂಬಂಧಗಳು  ಅರ್ಥ ಕಳೆದುಕೊಳ್ಳುತ್ತಿವೆ. ಎಲ್ಲವೂ ತಾಂತ್ರಿಕ ಜಗತ್ತಿನ ಓಟಕ್ಕೆ ಓಡತೊಡಗಿವೆ.  ಎಲ್ಲಾ ಮಾನವೀಯ ಸಂಬಂಧಗಳ ಸ್ವಾಸ್ಥವು ವ್ಯಕ್ತಿ ವ್ತಕ್ತಿಗಳ ನಡುವಿನ ಸದ್ಭಾವನೆಗಳನ್ನು ಅವಲಂಬಿಸಿವೆ ಎಂಬುದನ್ನು ಮರೆತಿದ್ದೆವೆ. 
ಆಧುನಿಕ ಜಗತ್ತಿನಲ್ಲಿ ಸಣ್ಣ ಕುಟುಂಬಗಳು ಅನಿವಾರ್ಯವಾದರೂ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವೆ. ಭಾವನಾತ್ಮಕ ಸಂಬಂಧಗಳ ಪರಿಚಯವೇ ಇಲ್ಲದಾಗಿದೆ. ಸಣ್ಣ ಕುಟುಂಬಗಳಲ್ಲೂ ಸಹ ಅವಿನಾಭಾವ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿವೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸಂಬಂಧಗಳು ಮುರಿದು ಬೀಳಲು ಪ್ರಮುಖ ಕಾರಣವೇನೆಂದರೆ ವಿಚಾರಗಳೊಂದಿಗಿನ ಭಿನ್ನಾಭಿಪ್ರಾಯ. ಪ್ರತಿ ವ್ಯಕ್ತಿಯೂ ತನ್ನದೇ ಸರಿ ಎಂದು ರುಜುವಾತುಗೊಳಿಸಲು ವಾದಕ್ಕಿಳಿಯುತ್ತಾನೆ. ಈ ವಾದಗಳೇ ಮನುಷ್ಯ ಸಂಬಂಧಗಳಿಗೆ ಮಾರಕವಾಗುತ್ತವೆ. ಮನುಷ್ಯ ಸಂಬಂಧಗಳ ದೃಷ್ಟಿಯಿಂದ ನೋಡಿದಾಗ ವಾದ ಮಾಡಿ ಗೆಲ್ಲುವುದು ಗೆಲುವಲ್ಲ. ಬದಲಿಗೆ ವಾದಗಳು ನಡೆಯದಂತೆ ತಡೆಹಿಡಿಯುವುದೇ ನಿಜವಾದ ಗೆಲುವು.
ಸಹಜೀವಿಗಳೊಂದಿಗೆ ಪ್ರಿಯವಾದ ಮಾತು ಹಾಗೂ ಕೆಲಸ ಕಾರ್ಯಗಳಲ್ಲಿ ಸಹಾಯ ಹಸ್ತ ನೀಡುವುದು, ನೋವಿನಲ್ಲಿ ಸಹಾನುಭೂತಿ ತೋರುವುದು ಇವು ಸಹಜೀವಿಗಳಲ್ಲಿ ಸಂತಸ ಸಮಾಧಾನ ತರುತ್ತವೆ. ವ್ಯಕ್ತಿಗಳನ್ನು ಕುರಿತು ನಮ್ಮಲ್ಲಿರುವ ಪ್ರೀತಿ, ಮೆಚ್ಚುಗೆ ಕಾಳಜಿಗಳನ್ನು ಅಭಿವ್ಯಕ್ತಿಸುವುದನ್ನು ಕಲಿಯಬೇಕು. ಗುಣಗಳನ್ನು ಗುರುತಿಸುವ ಬದಲು ಸದಾ ಕಣ್ಣಿಗೆ ಪಟ್ಟಿಕೊಂಡವರಂತೆ ದೋಷಗಳನ್ನೆ ಹೇಳುತ್ತಾ ಹೋಗುತ್ತೆವೆ. ಆಗ ಗಟ್ಟಿಯಾಗಬೇಕಿದ್ದ ಸಂಬಂಧಗಳು ಮುರಿದು ಬೀಳುತ್ತವೆ. ಇತರರ ಸ್ಥಾನದಲ್ಲಿ ನಿಂತು ಆಲೋಚಿಸಿ ನೋಡಿದಾಗ, ಮಾತ್ರ ಅವರ ನಡೆ-ನುಡಿಗಳನ್ನು ಅರ್ಥೈಸಿಕೊಳ್ಳಲು ಅಭ್ಯಾಸ ಮಾಡಿಕೊಂಡಾಗ ಮಾತ್ರ ಬಹುಪಾಲು ಭಿನ್ನಾಭಿಪ್ರಾಯಗಳು ಮಾಯವಾಗಿ ಮಾನವ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಪ್ರೀತಿ, ಗೌರವ, ಕಾಳಜಿಗಳೆಂಬ ಅಂಟಿನ್ನು ಹಾಕಿ ಮಾನವೀಯ ಸಂಬಂಧಗಳನ್ನು ಗಂಬಂಧಗಳನ್ನಾಗಿ ಮಾಡೋಣ. ಸಂಬಂಧಗಳು ಬೇಲಿಯಾಗದೇ ಸೇತುವೆಯಾಗಲಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment