September 1, 2014

ಪುಟ್ಟ ಹೆಜ್ಜೆಯನ್ನಿಡೋಣ

                            ಪುಟ್ಟ ಹೆಜ್ಜೆಯನ್ನಿಡೋಣ
    ಶಿಕ್ಷಕ ವೃತ್ತಿಗೆ ಸೇರಿದ ನಾವೆಲ್ಲರೂ ಒಂದಿಲ್ಲೊಂದು ತರಬೇತಿ, ಚರ್ಚೆ, ವಿಚಾರಗೋಷ್ಟಿ, ಸೆಮಿನಾರ್‍ಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಅಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಬಹುಕಾಲ ಉಳಿಯುವುದಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದ ಅಂಶ. ಸಾಮಾನ್ಯವಾಗಿ ಅಲ್ಲಿನ ಕಲಿಕೆ ಕಠಿಣವಾಗಿರುವುದಿಲ್ಲ. ಆದರೂ ಅದು ಶಾಶ್ವತವಾಗಿ ಉಳಿಯುವುದಿಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ‘ನಮ್ಮ ತರಗತಿ ಕೋಣೆಯನ್ನು, ಬೋಧನಾ ವಿಧಾನಗಳನ್ನು, ಒಟ್ಟಾರೆ ನಮ್ಮ ವೃತ್ತಿ ಜೀವನವನ್ನು ಬದಲಾಯಿಸಿಕೊಳ್ಳಬೇಕು’ ಎಂದು ಪಣ ತೊಡುತ್ತೇವೆ. ಈಗಿರುವುದಕ್ಕಿಂತ ಉತ್ತಮವಾಗಿ ತೊಡಗಿಸಿಕೊಳ್ಳಬೇಕು, ಉತ್ತಮ ಶಿಕ್ಷಕ/ಸುಗಮಕಾರರಾಗಬೇಕು, ಹೆಚ್ಚು ವಿವೇಕಯುತ ವ್ಯಕ್ತಿಗಳಾಗಬೇಕು ಎಂದುಕೊಳ್ಳುತ್ತೇವೆ. ಆದರೆ ಎರಡು ದಿನಗಳ ನಂತರ ಮೊದಲಿನಂತೆಯೇ ನಕಾರಾತ್ಮಕ ಭಾವನೆ ಹೊಂದುತ್ತೇವೆ. ಇಂತಹ ಕಾರ್ಯಕ್ರಮಗಳಿಂದ ಕಲಿತ ಕಲಿಕೆ ಕೆಲಸ ಮಾಡಲಿಲ್ಲ. ಏಕೆಂದರೆ ನಾವು ಬದಲಾಗಲಿಲ್ಲ.
    ಪ್ರಸಿದ್ದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ನೋಡಿದರೆ ಅವರು ಜೀವನದಲ್ಲಿ ಯಶಸ್ವಿಯಾಗಿರುವುದನ್ನು, ಶಾಶ್ವತ ಪರಿವರ್ತನೆ ಆಗಿರುವುದನ್ನು ಗಮನಿಸುತ್ತೇವೆ. ಅವರು ಹೇಗೆ ಉನ್ನತ ಹಂತ ತಲುಪಿದರು? ನಾವೇಕೆ ಉನ್ನತ ಹಂತಕ್ಕೆ ಬೆಳೆಯಲಿಲ್ಲ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಕಾರಣಗಳನ್ನು ಹುಡುಕಿದಾಗ ನಾವು ಹಿಂದುಳಿಯಲು ನಾಲ್ಕು ಪ್ರಮುಖ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ನಾನು ಅನಿಷ್ಟಗಳೆಂದು ಕರೆಯುತ್ತೇನೆ. ಅವುಗಳನ್ನು ದೂರವಿರಿಸಿದರೆ ಮಾತ್ರ ನಾವು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ನಿರ್ಧಾರಗಳು ಉತ್ತಮವಾಗಿದ್ದರೆ ಪರಿಣಾಮವೂ ಉತ್ತಮವಾಗಿರುತ್ತದೆ. ನಮ್ಮ ದೌರ್ಬಲ್ಯಗಳು ಯಾವುವೆಂದು ತಿಳಿಯದ ಹೊರತು ನಿವಾರಣೆ ಸಾಧ್ಯವಿಲ್ಲ. ಅಂದರೆ ನಮ್ಮ ತಿಳುವಳಿಕೆ ಹೆಚ್ಚಾದಷ್ಟೂ ಉತ್ತಮವಾಗಿ ಕೆಲಸ ನಿರ್ವಹಿಸಬಹುದು. ನಾವು ಬಯಸುವ ಪರಿವರ್ತನೆಯನ್ನು ತಡೆಯುವ ಆ ನಾಲ್ಕು ಅನಿಷ್ಟಗಳು ಹೀಗಿವೆ.
1)    ಭಯ: ಸಾಮಾನ್ಯವಾಗಿ ನಾವೆಲ್ಲರೂ ಅಪರಿಚಿತ ವಾತಾವರಣದಲ್ಲಿ ಜೀವಿಸಲು ಇಷ್ಟಪಡುವುದಿಲ್ಲ. ಅಜ್ಞಾತ ವಲಯಕ್ಕೆ ಲಗ್ಗೆ ಹಾಕಲು ಬಯಸುವುದಿಲ್ಲ. ಇದನ್ನೇ ತರಗತಿ ಕೋಣೆಗೆ ಹೋಲಿಸುವುದಾದರೆ ನಮಗೆ ಗೊತ್ತಿರುವ ವಿಷಯಗಳನ್ನು ಮಾತ್ರ ಬೋಧಿಸಲು ನಾವು ಬಯಸುತ್ತೇವೆ. ಗೊತ್ತಿರದ ಅಥವಾ ಕಠಿಣವೆನಿಸುವ ವಿಷಯಗಳನ್ನು ಬೋಧಿಸಲು ಭಯಪಡುತ್ತೇವೆ. ತೊಂದರೆ ತೆಗೆದುಕೊಳ್ಳಲು ನಿರಾಕರಿಸುತ್ತೇವೆ. ಇದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಅಂಟಿದ ರೋಗವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇರುವ ಸಾಮಾನ್ಯ ಕಾಯಿಲೆ. ನಿಶ್ಚಿತತೆ ಮನುಷ್ಯನನ್ನು ಮಿತಗೊಳಿಸುತ್ತದೆ. ಆದರೂ ನಾವದನ್ನು ಬಯಸುತ್ತೇವೆ. ಬಹುತೇಕರು ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಯಾವುದರ ಬಗ್ಗೆ ನಮಗೆ ಭಯ ಇರುತ್ತದೆಯೋ ಅದನ್ನೇ ಮಾಡುವುದು ಭಯವನ್ನು ನಿರ್ವಹಿಸುವುದರ ಕೀಲಿಕೈ. ಭಯವನ್ನು ನಾಶಮಾಡಲು ಅದೇ ಅತ್ತುತ್ತಮ ಸಾಧನ. ಪ್ರತಿಯೊಂದು ಭಯದ ಗೋಡೆಯಾಚೆ ಅಮೂಲ್ಯವಾದ ಖಜಾನೆ ಇರುತ್ತದೆ ಎಂಬುದನ್ನು ನಾವು ಮರೆಯಬಾರದು.
2)    ಸೋಲು: ಯಾರೂ ಸೋಲನ್ನು ಬಯಸುವುದಿಲ್ಲ. ಹಾಗಾಗಿ ನಮ್ಮಲ್ಲಿ ಬಹುತೇಕ ಮಂದಿ ಪ್ರಯತ್ನವನ್ನೇ ಮಾಡುವುದಿಲ್ಲ. ಇದು ವಿಷಾದಕರ. ನಮ್ಮ ಆರೋಗ್ಯ ಸುಧಾರಣೆಗಾಗಲೀ, ಕನಸುಗಳನ್ನು ನನಸಾಗಿ ಮಾಡುವುದಕ್ಕಾಗಲೀ ಮೊದಲ ಹೆಜ್ಜೆಯನ್ನು ಇಡುವುದೇ ಇಲ್ಲ. ಪ್ರಯತ್ನವನ್ನು ಮಾಡದಿರುವುದೇ ದೊಡ್ಡ ಸೋಲು. ರಿಸ್ಕ್ ತೆಗೆದುಕೊಳ್ಳದಿರುವುದೇ ದೊಡ್ಡ ರಿಸ್ಕ್. ಇದಕ್ಕೆ ಬದಲಾಗಿ ಒಂದು ಪುಟ್ಟ ಹೆಜ್ಜೆ ದೊಡ್ಡ ಸಾಧನೆಯ ಮೈಲಿಗಲ್ಲಾಗಬಹುದು. ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ “ನನ್ನ ಈ ಪುಟ್ಟ ಹೆಜ್ಜೆ ಮನುಕುಲದ ಒಂದು ದೊಡ್ಡ ನೆಗೆತ” ಎಂದು ಹೇಳಿದ ಮಾತು ತುಂಬಾ ಅರ್ಥಗರ್ಭಿತವಾದುದು. ಸೋಲು ಗೆಲುವಿನ ಅವಿಭಾಜ್ಯ ಅಂಗ. ಸೋಲಿಲ್ಲದೇ ಗೆಲುವು ಸಾಧ್ಯವಿಲ್ಲ ಅಲ್ಲವೇ?
3)    ಮರೆವು: ತರಬೇತಿ ಅಥವಾ ಇನ್ನಿತರೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸ್ಪೂರ್ತಿ ಪಡೆದು ಇಡೀ ತರಗತಿ ಪ್ರಕ್ರಿಯೆಯನ್ನೇ ಅಥವಾ ಶಾಲಾ ವಾತಾವರಣವನ್ನೇ ಬದಲಾಯಿಸುವ ಉತ್ಸಾಹದಿಂದ ಹಿಂದಿರುಗುತ್ತೇವೆ. ಆದರೆ ಮರುದಿನ ತರಗತಿ ಕೋಣೆಗೆ ಹೋದಾಗ ವಾಸ್ತವ ಎದುರಾಗುತ್ತದೆ. ಸಹಕಾರ ನೀಡದ ಸಹುದ್ಯೋಗಿಗಳು, ಸುವ್ಯವಸ್ಥಿತವಲ್ಲದ ತರಗತಿ ಕೋಣೆ, ಬದಲಾವಣೆಗೆ ಹೊಂದಿಕೊಳ್ಳದ ಮಕ್ಕಳು, ತೃಪ್ತರಾಗದ ಪಾಲಕರು ಇತ್ಯಾದಿ ಇತ್ಯಾದಿ. ವೈಯಕ್ತಿಕ ಮತ್ತು ವೃತ್ತಿಪರ ನಾಯಕತ್ವ ಬೆಳೆಸಿಕೊಳ್ಳಲು ನಾವು ಮಾಡಿದ ಯೋಜನೆಗಳಂತೆ ಕೆಲಸ ಮಾಡಲು ಸಮಯ ದೊರೆಯದೇ ಇರುವುದು, ಈ ಎಲ್ಲಾ ಕಾರಣಗಳಿಂದ ನಾವು ತರಬೇತಿಯ ಅಂಶಗಳನ್ನು ಮರೆತುಬಿಡುತ್ತೇವೆ. ಇದಕ್ಕೆ ಒಂದು ಉಪಾಯವಿದೆ. ಅದೇನೆಂದರೆ ಮಾಡಿದ ನಿರ್ಧಾರಗಳನ್ನು ಸದಾ ಮನಸ್ಸಿನಲ್ಲಿ ಸ್ಥಿರವಾಗಿಟ್ಟುಕೊಳ್ಳುವುದು. ಸಮಯ ದೊರೆತಾಗಲೆಲ್ಲ ಯೋಜನೆಯಂತೆ ಕಾರ್ಯ ನಿರ್ವಹಿಸುವುದು. ನಮ್ಮ ಅರಿವಿನ ಆಳವನ್ನು ಹೆಚ್ಚಿಸಿಕೊಳ್ಳುವುದು. ಅರಿವು ಹೆಚ್ಚಿದಷ್ಟೂ ಆಯ್ಕೆ ಉತ್ತಮವಾಗಿರುತ್ತದೆ. ಆಗ ಪರಿಣಾಮವೂ ಉತ್ತಮವಾಗಿರುತ್ತದೆ. ನಮಗೆ ನಾವೇ ವಚನ ಕೊಟ್ಟುಕೊಳ್ಳುವುದು. ಕೊಟ್ಟ ವಚನವನ್ನು ಸಾಧ್ಯವಾದಲೆಲ್ಲ ಬರೆದಿಡುವುದು ಅಥವಾ ಒಂದು ಹಾಳೆಯಲ್ಲಿ ಬರೆದು ದಿನನಿತ್ಯ ನಮಗೆ ಕಾಣುವಂತೆ ಅಂಟಿಸುವುದು. ಇದು ತೀರಾ ‘ಸಿಲ್ಲಿ’ ಎನಿಸಿದರೂ ಪರಿಣಾಮ ಉತ್ತಮವಾಗಿರುತ್ತದೆ.
4)    ಅಶ್ರದ್ಧೆ: ನಮ್ಮಲ್ಲಿ ಬಹುತೇಕರಿಗೆ(ನನ್ನನ್ನೂ ಸೇರಿದಂತೆ) ಶ್ರದ್ಧೆ ಇಲ್ಲ. ಸಿನಿಕತೆಯೇ ಹೆಚ್ಚು. ‘ತರಬೇತಿಗಳು, ಗೋಷ್ಟಿಗಳು, ಉಪನ್ಯಾಸಗಳು ಎಲ್ಲಾ ಬೊಗಳೆ, ಇವುಗಳಿಂದ ಏನೂ ಪ್ರಯೋಜನವಿಲ್ಲ’ ಎಂಬ ನಕಾರಾತ್ಮಕ ಮನೋಭಾವನೆ ನಮ್ಮಲ್ಲಿ ಮನೆಮಾಡಿದೆ. ಇನ್ನು ಕೆಲವರು “ಈ ವಯಸ್ಸಿನಲ್ಲಿ ನಾನು ಬದಲಾಗಲು ಸಾಧ್ಯವಿಲ್ಲ” ಎನ್ನುತ್ತಾರೆ. ಈ ತರಹದ ಸಿನಿಕತೆಗೆ ನಿರಾಶೆಯೇ ಕಾರಣ. ಸಿನಿಕತೆಯನ್ನು ಬೆಳೆಸಿಕೊಳ್ಳುವುದಕ್ಕಿಂತ ಮೊದಲು ನಾವ್ಯಾರೂ ಹೀಗಿರಲಿಲ್ಲ. ಒಂದು ಕಾಲದಲ್ಲಿ ನಮ್ಮಲ್ಲಿ ಮಕ್ಕಳಲ್ಲಿರುವಂತಹ ಉತ್ಸಾಹವಿತ್ತು, ಆಶಾವಾದವಿತ್ತು, ಹೊಸದಾಗಿ ವೃತ್ತಿಗೆ ಸೇರಿದಾಗ ಇದ್ದ ತುಡಿತ, ಮಿಡಿತ ಈಗಿಲ್ಲ. ನಾವು ಮಾಡಿದ ಪ್ರಯತ್ನಗಳು ವಿಫಲವಾದವು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯದ ನಾವು ಪ್ರಯತ್ನವನ್ನು ಮುಂದುವರೆಸದೇ ಕೈಬಿಟ್ಟೆವು. ಸೋಲಿನ ನೋವನ್ನು ತಪ್ಪಿಸಲು ನಾವೆಲ್ಲ ಸಿನಿಕರಾದೆವು.
    ಹೀಗೆ ಈ ನಾಲ್ಕೂ ಅನಿಷ್ಟಗಳು ನಮ್ಮ ಸ್ವಪರಿವರ್ತನೆಯನ್ನು, ನಾಯಕತ್ವದ ಬೆಳವಣಿಗೆಯನ್ನು ತಡೆಹಿಡಿದವು. ಅವುಗಳ ಸ್ವರೂಪ ಅರಿತುಕೊಂಡರೆ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. ಸಾಮಾನ್ಯ ಶಿಕ್ಷಕನೂ ಸಹ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ಯಾವುದನ್ನೇ ಆಗಲಿ ಮೊದಲು ಯೋಚಿಸಿ ಒಂದು ಪುಟ್ಟ ಹೆಜ್ಜೆಯನ್ನಿಡೋಣ. ಆ ಮೂಲಕ ನಮ್ಮ ಸಾಮಥ್ರ್ಯವೇನೆಂಬುದನ್ನು ಜಗಕ್ಕೆ ತೋರಿಸೋಣ.
                                                               ಆರ್.ಬಿ.ಗುರುಬಸವರಾಜ.

“ಟೀಚರ್” ಸೆಪ್ಟಂಬರ್ 2014


No comments:

Post a Comment