September 17, 2014

ದೇಹಭಾಷೆ

 ಹುಷಾರು, ದೇಹಭಾಷೇನೇ ನಿಮ್ಮ ಬಗ್ಗೆ ಹೇಳುತ್ತೆ!




    ನಮ್ಮ ದೈನಂದಿನ ವ್ಯವಹಾರವು ಶಾಬ್ದಿಕ ಮತ್ತು ಅಶಾಬ್ದಿಕ ಎಂಬ ಎರಡು ಸಂವಹನಗಳಿಂದ ನಡೆಯುತ್ತದೆ. ನಾವು ಶೇಕಡಾ 93ರಷ್ಟು ಪದರಹಿತವಾಗಿಯೇ ಅಂದರೆ ಅಶಾಬ್ದಿಕವಾಗಿ ಸಂವಹನ ನಡೆಸುತ್ತೇವೆ. ಧ್ವನಿ, ಲಯ, ದೇಹಭಂಗಿ, ಹಾವಭಾವಗಳು, ಮುಖದ ಅಭಿವ್ಯಕ್ತಿ ಇವೆಲ್ಲವೂ ಅಶಾಬ್ದಿಕ ಸಂವಹನದ ಉದಾಹರಣೆಗಳಾಗಿವೆ. ಇದನ್ನೇ ದೇಹಭಾಷೆ ಎನ್ನುತ್ತೇವೆ.
    ನಾವು ಶಾಲಾ ಶಿಕ್ಷಣದಲ್ಲಿ ಮಾತನಾಡುವ ಶೈಲಿಯನ್ನು ಕಲಿಯುವುದರ ಜೊತೆಗೆ ಶಬ್ದಭಂಢಾರವನ್ನು ಹೆಚ್ಚಿಸಿಕೊಳ್ಳುತ್ತೇವೆ. ಆದರೆ ಅಲ್ಲಿ ದೇಹಭಾಷೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಬಗ್ಗೆ ಯಾವುದೇ ಕಲಿಕೆ ಇರುವುದಿಲ್ಲ. ಇದು ನಮ್ಮಷ್ಟಕ್ಕೆ ನಾವೇ ಕಲಿತುಕೊಳ್ಳಬೇಕಾದ ಸ್ವಯಂ ಕಲಿಕೆಯಾಗಿದೆ. ನಿಲ್ಲುವ ಭಂಗಿ, ನಡೆಯುವ ರೀತಿ, ಇತರರಿಗೆ ಕಾಣುವ ರೀತಿ ಎಲ್ಲವನ್ನೂ ನಾವೇ ಕಲಿಯಬೇಕಾಗಿದೆ. ಆಕರ್ಷಕ ವ್ಯಕ್ತಿತ್ವ ನಮ್ಮದಾಗಲು ನಮ್ಮ ದೇಹ ಭಾಷೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು.
    ನಾವು ಭೇಟಿಯಾಗುವ ಜನರನ್ನು ಆಧರಿಸಿ ದೇಹಭಾಷೆ ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ನಮಗೆ ವಿದ್ಯೆ ಕಲಿಸಿದ ಗುರುಗಳೊಂದಿಗೆ ಮಾತನಾಡುವಾಗ ನೇರವಾಗಿ, ವಿಧೇಯರಾಗಿ ಕೈಕಟ್ಟಿ, ಚಡಪಡಿಕೆ ಇಲ್ಲದೇ ಸಭ್ಯರಾಗಿ ನಿಲ್ಲುತ್ತೇವೆ. ಅದೇ ನಾವು ಸ್ನೇಹಿತರೊಂದಿಗೆ ಇರುವಾಗ ಸಂಪೂರ್ಣವಾಗಿ ನಮ್ಮ ಚಹರೆ ಮತ್ತು ದೇಹಭಾಷೆ ಬೇರೆಯಾಗಿರುತ್ತದೆ. ಸ್ನೇಹಿತರೊಂದಿಗೆ ಕೈಕುಲುಕುತ್ತೇವೆ ಅಥವಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುದ್ದಾಡುತ್ತೇವೆ. ಒಬ್ಬರನ್ನೊಬ್ಬರು ಆಕರ್ಷಿಸುತ್ತಾ ಆಹ್ಲಾದಕರವಾಗಿ ಇರುತ್ತೇವೆ.    ಕೆಲವೊಮ್ಮೆ ಪರಸ್ಪರರು ಭೇಟಿಯಾಗಿ ವಿಶ್ ಮಾಡಿದಾಗ ಅದು ಚೀರಿದಂತೆ ಅಥವಾ ಕೂಗಿದಂತೆ ಇರುತ್ತದೆ. ಇದು ನೋಡುಗರಿಗೆ ಅಸಹ್ಯವಾಗಿರುತ್ತದೆ. ಆದ್ದರಿಂದ ನಾವು ಸಮಯ ಸಂದರ್ಭಕ್ಕೆ ಅನುಗುಣವಾಗಿ ದೇಹಭಾಷೆಯನ್ನು ಬಳಸಿಕೊಳ್ಳಬೇಕು. ಇಂತಹ ಅಶಾಬ್ದಿಕ ಅಥವಾ ಪದರಹಿತ ಸಂವಹನವನ್ನು ಉತ್ತಮಪಡಿಸಿಕೊಳ್ಳಲು “ಪಂಚಕಜ್ಜಾಯ” ಇಲ್ಲಿದೆ.
ನೋಟ ನೆಟ್ಟಗಿರಲಿ : ನಮ್ಮ ಎದುರಿಗೆ ಇದ್ದವರಿಗೆ ನಾವು ಹೇಳಬೇಕಾದುದನ್ನು ನಮ್ಮ ಕಣ್ಣುಗಳು ಹೇಳುತ್ತವೆ. ಕಣ್ಣುಗಳು ನಮ್ಮ ಮನಸ್ಸಿನ ಮತ್ತು ಹೃದಯದ ರಹದಾರಿಗಳಿದ್ದಂತೆ. ಕಣ್ಣುಗಳನ್ನು ನೋಡಿದಾಕ್ಷಣ ಸಂತೋಷವಾಗಿರುವರೋ, ದುಃಖದಲ್ಲಿರುವರೋ, ಭಯ ಭೀತರಾಗಿರುವರೋ ಅಥವಾ ಯಾವುದೋ ವಿಷಯವನ್ನು ಆಂತರ್ಯದಲ್ಲಿ ಅಡಗಿಸಿ ಕೊಂಡಿರುವರೋ ಎಂದು ಹೇಳಬಹುದು. ಆದ್ದರಿಂದ ಇತರರೊಂದಿಗೆ ಸಂಭಾಷಿಸುವಾಗ ನಮ್ಮ ನೋಟ ನಿಖರವಾಗಿರಲಿ. ಆ ನೋಟದಲ್ಲಿ ಆತ್ಮೀಯತೆ ಇರಲಿ.
ಉತ್ತಮ ಮನೋಭಾವ : ನಮ್ಮ ಮನೋಭಾವ ಜನರನ್ನು  ನಮ್ಮ ಹತ್ತಿರಕ್ಕೆ ಅಥವಾ ನಮ್ಮನ್ನು ಜನರ ಹತ್ತಿರಕ್ಕೆ ಕರೆದೊಯ್ಯುತ್ತದೆ. ವ್ಯಕ್ತಿಯ ಮನೋಭಾವವನ್ನು ಅವರು ನಿಂತಭಂಗಿ, ಹಾವಭಾವ, ನೋಟಗಳಿಂದ ಗುರುತಿಸಬಹುದು. ಉತ್ತಮ ಮನೋಭಾವದಿಂದ ಎಂತಹ ವೈರಿಯನ್ನಾದರೂ ಗೆಲ್ಲಬಹುದು. ಅದಕ್ಕೆ ಗೌತಮ ಬುದ್ದ ಅಂಗುಲೀಮಾಲನನ್ನು ಬದಲಾಯಿಸಿದ ಉದಾಹರಣೆಗಿಂತ ಮತ್ತೊಂದಿರಲಾರದು.
ಅಂತರ ಕಾಯ್ದುಕೊಳ್ಳಿ : ಪ್ರತಿಯೊಬ್ಬ ವ್ಯಕ್ತಿಯು ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಂದರೆ ನಾವು ವ್ಯವಹರಿಸುವ ವ್ಯಕ್ತಿಗಳೊಂದಿಗೆ ಸೂಕ್ತ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ನೇಹಿತರೊಂದಿಗೆ ಸಲುಗೆಯಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುವಂತೆ ಗೌರವಾನ್ವಿತರೊಂದಿಗೆ ನಡೆದುಕೊಳ್ಳಬಾರದು. ಅತೀ ದೂರದಲ್ಲಿ ಅಥವಾ ಅತೀ ಸಮೀಪದಲ್ಲಿ ನಿಲ್ಲುವುದು ಸಹ ಉಚಿತವಲ್ಲ. ಏಕೆಂದರೆ ಅದು ನೀವು ಅವರನ್ನು ತಿರಸ್ಕರಿಸುತ್ತೀರಿ ಅಥವಾ ಅವರಲ್ಲಿ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ವ್ಯವಹರಿಸುವ ವ್ಯಕ್ತಿಗಳನ್ನು ಆಧರಿಸಿ ಸೂಕ್ತ ಅಂತರ ಕಾಯ್ದುಕೊಳ್ಳಿ.
ಮಾತು ಮುತ್ತಾಗಲಿ : ಇತರರೊಂದಿಗೆ ವ್ಯವಹರಿಸುವಾಗ ಮಾತನಾಡುವ ಶೈಲಿಯೂ ಸಹ ತುಂಬಾ ಪ್ರಾಮುಖ್ಯವಾದುದು. ಮಾತು ಹಿತ ಮಿತವಾಗಿರಲಿ. ಮಾತಿನಲ್ಲಿ ಶಿಸ್ತು, ಸಭ್ಯತೆ ಇರಲಿ. ಮಾತಿನಲ್ಲಿ ಆತ್ಮವಿಶ್ವಾಸ ಇರಲಿ. ಜೊತೆಗೆ ಮಾತಿನ ಮೇಲೆ ನಿಗಾ ಇರಲಿ. ಸಮಯ ಸಂದರ್ಭಗಳು ನೆನಪಿರಲಿ. ನಾನೆಲ್ಲಿದ್ದೇನೆ, ಯಾರೊಂದಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಪ್ರಜ್ಞೆ ಇರಲಿ. ಮಾತಿನ ಜೊತೆಗೆ ಕಣ್ಣು, ಕೈಗಳ ಚಲನೆ ಇರಲಿ. ಸೂಕ್ತ ಹಾವಭಾವ ತುಂಬಿರಲಿ.
ನಗೆ ಬಾಣ ಬೀರಿ : ಒಂದು ಸಣ್ಣ ನಗು ಸಾಕಷ್ಟು ಜನರ ಹೃದಯ ಗೆಲ್ಲುತ್ತದೆ. ಅಂತಹ ಅಮೋಘ ಶಕ್ತಿ ಇರುವುದು ನಗುವಿಗೆ ಮಾತ್ರ. ಇತರರೊಂದಿಗೆ ಮಾತನಾಡುವಾಗ ಸದಾ ನಿಮ್ಮ ಮುಖದಲ್ಲೊಂದು ಸಣ್ಣ ನಗುವಿರಲಿ. ನಗುವಿನಿಂದ ಎಂತಹ ಗಟ್ಟಿಯಾದ ಸಂಕೋಲೆಗಳನ್ನೂ ಮುರಿಯಬಹುದು. ಒಂದು ಸಣ್ಣ ನಗು ಸಿಹಿಯಾದ ವಾತಾವರಣವನ್ನು ನಿರ್ಮಿಸುತ್ತದೆ. ಆದ್ದರಿಂದ ನಿಮ್ಮ ಮುಖದಲ್ಲಿ ಯಾವಾಗಲೂ ಮಂದಹಾಸ ತುಂಬಿರಲಿ.
    ಹಿತಕರವಾದ ದೇಹಭಾಷೆ ಸಹಜವಾಗಿ ಬರುತ್ತದೆ. ಆದರೂ ಸ್ವಲ್ಪ ಪ್ರಯತ್ನದಿಂದ ಅದನ್ನು ಉತ್ತಮವಾಗಿ ಬೆಳೆಸಿಕೊಳ್ಳಬಹುದು. ದೇಹಭಾಷೆಯನ್ನು ಬೆಳೆಸಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಕೆಲವು ಪರಿಣಾಮಕಾರಿ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳುವುದರಿಂದ ಶಾಶ್ವತವಾಗಿ ಅದನ್ನು ನಮ್ಮದಾಗಿಸಿಕೊಳ್ಳಬಹುದು. ಆರಂಭದಲ್ಲಿ ಇದು ನಟನೆಯಂತೆ ಕಂಡರೂ ಸತತ ಅಭ್ಯಾಸದಿಂದ ಉತ್ತಮವಾಗಿ ಬೆಳೆಸಿಕೊಳ್ಳಬಹುದು.
                                                                                                               ಆರ್.ಬಿ.ಗುರುಬಸವರಾಜ

No comments:

Post a Comment