March 30, 2015

ಕಾನೂನು ಪದವಿಗೆ CLAT

ದಿನಾಂಕ 25-03-2015ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.

                                ಕಾನೂನು ಪದವಿಗೆ  CLAT

    ಸರ್ಕಾರಿ ಆಡಳಿತ ವ್ಯವಸ್ಥೆಯ ಮೂಲಾಂಶಗಳಲ್ಲಿ ಅತ್ಯಂತ ಗೌರವಯುತವಾದದ್ದು ನ್ಯಾಯಾಂಗ ವ್ಯವಸ್ಥೆ. ನ್ಯಾಯಾಂಗ ವ್ಯವಸ್ಥೆಗೆ ನ್ಯಾಯಾವಾದಿಗಳು ಹಾಗೂ ನ್ಯಾಯಾಧೀಶರ ಪಾತ್ರ ಮಹತ್ವದ್ದು. ದೇಶದ ಕಾನೂನು ವ್ಯವಸ್ಥೆಯನ್ನು ಸುವ್ಯವಸ್ಥೆಯಲ್ಲಿಟ್ಟು ಶಾಂತಿಯನ್ನು ಮೂಡಿಸುವುದು ನ್ಯಾಯಾಂಗದ ಪರಮಾವಧಿಕಾರವಾಗಿದೆ. ನ್ಯಾಯಾಂಗ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕಾನೂನುಗಳ ಅರಿವು, ಆಳ ಮತ್ತು ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕಾದುದು ಅನಿವಾರ್ಯ. ಅದಕ್ಕಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಕಾನೂನು ಶಿಕ್ಷಣ ನೀಡಲು ಪ್ರತಿವರ್ಷ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸುತ್ತದೆ. ಈ ಪ್ರಕ್ರಿಯೆಯೇ CLAT ಪರೀಕ್ಷೆ.
    CLAT ಎಂಬುದು ಕಾನೂನು ಪದವಿ ಶಿಕ್ಷಣ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ನಿಯೋಜಿತವಾದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. CLATನಲ್ಲಿ ಉತ್ತೀರ್ಣರಾದವರು ಮಾತ್ರ ರಾಷ್ಟ್ರದ 14 ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕ ಪದವಿ ಶಿಕ್ಷಣ ಪಡೆಯಬಹುದು. 2015 ರ CLAT ಪರೀಕ್ಷೆಯ ಹೊಣೆಯನ್ನು ಲಕ್ನೋದ ‘ರಾಮ್‍ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯ’ ವಹಿಸಿಕೊಂಡಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ : ಪದವಿ ಶಿಕ್ಷಣಕ್ಕಾಗಿ ಯಾವುದೇ  ವಿಭಾಗದ ಪಿ.ಯು.ಸಿ.ಯಲ್ಲಿ 45% ಅಂಕ (ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 40% ಅಂಕ) ಗಳಿಸಿದವರೆಲ್ಲರೂ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರು.    2015ರ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುತ್ತಿರುವವರೂ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಜೂನ್ 2015ರಲ್ಲಿ ನಡೆಯುವ ಪ್ರವೇಶ ಸಮಯದಲ್ಲಿ ಮೂಲ ಅಂಕಪಟ್ಟಿ ಹಾಜರುಪಡಿಸಬೇಕು. 1 ನೇ ಜುಲೈ 2015ಕ್ಕೆ 20 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
    ಸ್ನಾತಕ ಪದವಿ ಶಿಕ್ಷಣಕ್ಕೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಲ್ ಅಥವಾ ಎಲ್.ಎಲ್.ಬಿ.ಯಲ್ಲಿ 55% ಅಂಕ (ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 50% ಅಂಕ) ಗಳಿಸಿದವರು ಅರ್ಹರು. ಅಂತಿಮವರ್ಷ/ಕೊನೆ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗುತ್ತಿರುವವರೂ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶ ಸಮಯದಲ್ಲಿ ಮೂಲ ಅಂಕಪಟ್ಟಿಗಳನ್ನು ಹಾಜರುಪಡಿಸುವುದು ಕಡ್ಡಾಯ. ಸ್ನಾತಕ ಪದವಿಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : CLAT-2015 ರ ಅರ್ಜಿಗಳನ್ನು www.clat.in   ವೆಬ್‍ಸೈಟ್‍ನಿಂದ ಆನ್‍ಲೈನ್ ಮೂಲಕವೇ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು 31 ನೇ ಮಾರ್ಚ 2015 ಕೊನೆ ದಿನಾಂಕವಾಗಿದೆ.
    ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ನಂತರ ಶುಲ್ಕ ಪಾವತಿಸಬೇಕಾಗುತ್ತದೆ. ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 3500/- ಹಾಗೂ ಇನ್ನಿತರೇ ಅಭ್ಯರ್ಥಿಗಳಿಗೆ 4000/- ಅರ್ಜಿ ಶುಲ್ಕ ನಿಗದಿಯಾಗಿರುತ್ತದೆ. ಶುಲ್ಕವನ್ನು ನೆಟ್‍ಬ್ಯಾಂಕಿಂಗ್, ಡೆಬಿಟ್ ಕಾರ್ಡ ಮತ್ತು ಕ್ರೆಡಿಟ್ ಕಾರ್ಡ ಮೂಲಕವೂ ಪಾವತಿಸಬಹುದು ಅಥವಾ ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಚಲನ್ ಡೌನ್‍ಲೋಡ್ ಮಾಡಿಕೊಂಡು ಬ್ಯಾಂಕಿಗೆ ಹಣ ಸಂದಾಯ ಮಾಡುವ  ಮೂಲಕವೂ ಶುಲ್ಕ ಪಾವತಿಸಿಬಹುದು.
            ಅರ್ಜಿ ಸಲ್ಲಿಕೆ ವಿಧಾನ :
       ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಮೊದಲು ವೆಬ್‍ಸೈಟ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. www.clat.inವೆಬ್‍ಸೈಟ್ ತೆರೆದಾಗ ರಿಜಿಸ್ಟರ್ ಬಟನ್ ಆಯ್ಕೆ ಮಾಡಿಕೊಂಡು ಅದರಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಹೀಗೆ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ಕೂಡಲೇ ನೀವು ನೀಡಿದ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸಕ್ಕೆ ಬಳಕೆದಾರರ ಐ.ಡಿ ಹಾಗೂ ಪಾಸ್‍ವರ್ಡ ರವಾನೆಯಾಗುತ್ತದೆ. ಈ ಐ.ಡಿ ಮತ್ತು ಪಾಸ್‍ವರ್ಡಗಳು ಅರ್ಜಿ ತುಂಬಲು ಹಾಗೂ ಪ್ರತಿಬಾರಿ ಲಾಗಿನ್ ಆಗಲು ಬೇಕಾಗುತ್ತವೆ. ಆದ್ದರಿಂದ ಇವುಗಳನ್ನು ಜೋಪಾನವಾಗಿ ಕಾಯ್ದಿರಿಸಿಕೊಳ್ಳಬೇಕು.
    ಅರ್ಜಿಯ ಜೊತೆ ಅಪ್‍ಲೋಡ್ ಮಾಡಬೇಕಾದ ದಾಖಲೆಗಳು:
•    ಜನ್ಮ ದಿನಾಂಕ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ ಅಂಕಪಟ್ಟಿ
•    ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
•    ಅಂಗವಿಕಲರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.
•    ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತರು ಹಾಗೂ ಇತರೇ ಯಾವುದೇ ಮೀಸಲಾತಿ ಪ್ರಮಾಣ ಪತ್ರಗಳು.
•    ವ್ಯಾಸಂಗ ಪ್ರಮಾಣ ಪತ್ರ.
•    ಪಾಸ್‍ಪೋರ್ಟ ಅಳತೆಯ ಭಾವಚಿತ್ರ.
•    ಅಭ್ಯರ್ಥಿಯ ಸಹಿ

ಪರೀಕ್ಷಾ ವಿಧಾನ : ಪರೀಕ್ಷೆಯು ಆನ್‍ಲೈನ್ ವಿಧಾನದಲ್ಲಿರುತ್ತದೆ. ಪರೀಕ್ಷೆಯು 10 ನೇ ಮೇ 2015 ರಂದು ದೇಶದ 42 ಪರೀಕ್ಷಾ ಕೇಂದ್ರಗಳಲ್ಲಿ (ಬೆಂಗಳೂರು ಸೇರಿದಂತೆ) ಏಕಕಾಲಕ್ಕೆ ನಡೆಯುತ್ತದೆ. ಪ್ರವೇಶ ಪರೀಕ್ಷೆಗೆ ನೊಂದಾಯಿಸಿಕೊಂಡ ಎಲ್ಲಾ ಅಭ್ಯರ್ಥಿಗಳಿಗೂ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ಬಳಸಿ ಪರೀಕ್ಷೆ ಬರೆಯಬೇಕು.
ಪರೀಕ್ಷಾ ವಿನ್ಯಾಸ : ಪದವಿ ಶಿಕ್ಷಣಕ್ಕೆ 200 ಅಂಕಗಳ 200 ವಸ್ತುನಿಷ್ಟ ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ. 2 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿಗಳು ಕಂಪ್ಯೂಟರ್ ಮೌಸ್ ಬಳಸಿ ಉತ್ತರಗಳನ್ನು ಆಯ್ಕೆ ಮಾಡುವ ಮೂಲಕ ಪರೀಕ್ಷೆಯನ್ನು  ಎದುರಿಸಬೇಕು.
    ಸ್ನಾತಕ ಪದವಿಗೆ 2 ಗಂಟೆಗಳಲ್ಲಿ 150 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಇದರಲ್ಲಿ 100 ಅಂಕಗಳಿಗೆ (25 ಅಂಕದ 4 ಪ್ರಶ್ನೆಗಳು) ಪ್ರಬಂಧ ಮಾದರಿಯ ವಿವರಣಾತ್ಮಕ ಪ್ರಶ್ನೆಗಳಿಗೆ ಹಾಗೂ 50 ಅಂಕಗಳ 50 ವಸ್ತುನಿಷ್ಟ ಬಹು ಆಯ್ಕೆಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಪದವಿ ಹಾಗೂ ಸ್ನಾತಕ ಪದವಿ ಪ್ರವೇಶ ಪರೀಕ್ಷೆಗಳಲ್ಲಿನ ಪ್ರತಿತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುವುದು.
                             ಪರೀಕ್ಷಾ ವಿಷಯಗಳು ಹಾಗೂ ಅಂಕಗಳ ವರ್ಗೀಕರಣ
ಪದವಿ ಶಿಕ್ಷಣ  
    ಇಂಗ್ಲೀಷ್ ಗ್ರಹಣಶಕ್ತಿ (40 ಅಂಕಗಳು)
    ಸಾಮಾನ್ಯಜ್ಞಾನ ಮತ್ತು  ಪ್ರಚಲಿತ ಜ್ಞಾನ (50 ಅಂಕಗಳು)
    ಸಾಮಾನ್ಯ ಗಣಿತ (20 ಅಂಕಗಳು)
    ಕಾನೂನು ಕೌಶಲ್ಯಗಳು (50 ಅಂಕಗಳು)
    ತಾರ್ಕಿಕ ಕೌಶಲ್ಯ (40 ಅಂಕಗಳು)   
 ಸ್ನಾತಕ ಪದವಿ ಶಿಕ್ಷಣ
     ಭಾರತದ ಸಂವಿಧಾನ (50ಅಂಕಗಳು)
    ನ್ಯಾಯಶಾಸ್ತ್ರ (50 ಅಂಕಗಳು)
    ಇತರೆ ಕಾನೂನು ವಿಷಯಗಳು (ಕಾಂಟಾಕ್ಟ್ಸ್, ಟಾಟ್ರ್ಸ, ಕ್ರಿಮಿನಲ್ ಲಾ, ಅಂತರಾಷ್ಟ್ರೀಯ ಕಾನೂನು) (50 ಅಂಕಗಳು)

                                         ವಿಷಯಗಳ ಸಿದ್ದತೆ ಹೀಗಿರಲಿ
ಇಂಗ್ಲೀಷ್ : ಈ ವಿಭಾಗದಲ್ಲಿ ಅಭ್ಯರ್ಥಿಯ ಇಂಗ್ಲೀಷ್ ವಿಷಯದ ಗ್ರಹಣ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಒಂದು ಗದ್ಯ ಭಾಗವನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ವ್ಯಾಕರಣಾಂಶಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅಂದರೆ ವಾಕ್ಯ ಸರಿಪಡಿಸುವುದು, ಬಿಟ್ಟ ಸ್ಥಳ ತುಂಬುವುದು, ವ್ಯಾಕರಣ ಸರಿ ಪಡಿಸುವುದು ಇತ್ಯಾದಿ ಪ್ರಶ್ನೆಗಳ ಮೂಲಕ ಅಭ್ಯರ್ಥಿಯ ಇಂಗ್ಲೀಷ್ ಗ್ರಹಣಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ವಿವಿಧ ಇಂಗ್ಲೀಷ್ ಗದ್ಯಭಾಗಗಳನ್ನು ಓದಿ ಅರ್ಥೈಸಿಕೊಂಡು ಅದರಲ್ಲಿನ ಗ್ರಾಮರ್, ಥೀಮ್ ಹಾಗೂ ಪ್ರಮುಖಾಂಶಗಳನ್ನು ಅಭ್ಯಸಿಸಿ ಸಿದ್ದತೆ ಮಾಡಿಕೊಳ್ಳಬೇಕು.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಜ್ಞಾನ : ಸಾಮಾನ್ಯ ಜ್ಞಾನದಲ್ಲಿ ದೇಶದ ಸಂಸ್ಕøತಿ, ಇತಿಹಾಸ, ಆಟೋಟ, ಸುದ್ದಿ ಸಮಾಚಾರಗಳು, ಹೊಸ ಸಂಶೋಧನೆಗಳು ಇತ್ಯಾದಿಗಳ ಜ್ಞಾನ ಪರೀಕ್ಷಿಸಲಾಗುತ್ತದೆ. ಪ್ರಮುಖವಾಗಿ ಮೇಲಿನ ವಿಭಾಗಗಳ ಮಾಹಿತಿಯನ್ನು ಅಂಕಿ-ಅಂಶಗಳೊಂದಿಗೆ ಸಂಗ್ರಹಿಸಿ ಅಭ್ಯಸಿಸಿದರೆ ಉತ್ತಮ. ಪ್ರಚಲಿತ ಜ್ಞಾನವನ್ನು ಏಪ್ರಿಲ್ 2014 ರಿಂದ ಮಾರ್ಚ 2015 ರವರೆಗಿನ ಜ್ಞಾನವನ್ನು ಅಳೆಯಲಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಗಳು ಈ ಅವಧಿಯ ವಿವಿಧ ದಿನಪತ್ರಿಕೆಗಳನ್ನು ಸಂಗ್ರಹಿಸಿ ಮಾಹಿತಿ ಸಿದ್ದಪಡಿಸಿಕೊಂಡರೆ ಸುಲಭವಾಗಿ ಉತ್ತರಿಸಬಹುದು.
ಸಾಮಾನ್ಯ ಗಣಿತ : ಈ ವಿಭಾಗದಲ್ಲಿ ಅಭ್ಯರ್ಥಿಯ 10ನೇ ತರಗತಿಯವರೆಗಿನ ಗಣಿತದ ಪರಿಕಲ್ಪನೆಗಳನ್ನು ಪರೀಕ್ಷಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಲಾಭ-ನಷ್ಟ, ದಶಮಾಂಶ, ಭಿನ್ನರಾಶಿ, ಶೇಕಡಾಕ್ರಮ, ಸರಾಸರಿ, ಮದ್ಯಾಂಕ, ಅನುಪಾತ, ಸಮಾನುಪಾತ, ವಿಲೋಮಾನುಪಾತ, ಲ.ಸಾ.ಅ, ಮ.ಸಾ.ಅ, ಅವ್ಯಕ್ತ ಪದಗಳು ಹಾಗೂ ಇನ್ನಿತರೇ ಸರಳ ಗಣಿತದ ತತ್ವಗಳನ್ನು ಆಧರಿಸಿದ ಪ್ರಶ್ನೆಗಳಿಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಪಠ್ಯ ಪುಸ್ತಕಗಳ ಅಭ್ಯಾಸಗಳನ್ನು ಕರಗತ ಮಾಡಿಕೊಳ್ಳಬೇಕು.
ಕಾನೂನು ಕೌಶಲ್ಯಗಳು : ಈ ವಿಭಾಗದಲ್ಲಿ ಅಭ್ಯರ್ಥಿಯ ಕಾನೂನು ಯೋಗ್ಯತಾ ಆಸಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಅಂದರೆ ಕಾನೂನು ಶಿಕ್ಷಣದ ನಂತರ ಸಂಶೋಧನೆ, ಸಮಸ್ಯಾ ಪರಿಹಾರ ವಿಧಾನಗಳಲ್ಲಿನ ಆಸಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಸತ್ಯ ಪ್ರತಿಪಾದಿಸಲು ಅಭ್ಯರ್ಥಿಯು ಬಳಸುವ ಮಾರ್ಗಗಗಳನ್ನು ಪರೀಕ್ಷಿಸಲಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಯು ವಿವಿಧ ಸಾಮಾನ್ಯ ಸಮಸ್ಯಾ ಪರಿಹಾರ ತಂತ್ರಗಳ ಕುರಿತು ಅಭ್ಯಸಿಸಬೇಕಾಗುತ್ತದೆ.
ತಾರ್ಕಿಕ ಕೌಶಲ್ಯ : ಅಭ್ಯರ್ಥಿಯ ತರ್ಕಬದ್ದವಾದ ವಾದ ವೈಖರಿಯನ್ನು ಅಳೆಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ವಿವಿಧ ನಮೂನೆಗಳನ್ನು, ಸಾದೃಶ್ಯಗಳನ್ನು, ಸರಣಿಗಳನ್ನು, ದೃಷ್ಟಿಗೋಚರ ತರ್ಕಗಳನ್ನು ನೀಡಲಾಗಿರುತ್ತದೆ. ಅಭ್ಯರ್ಥಿಯು ಇವುಗಳ ಆಧಾರದ ಮೇಲೆ ತಮ್ಮ ತರ್ಕಬದ್ದ ವಾದವನ್ನು ಉತ್ತರಗಳ ಮೂಲಕ ಮಂಡಿಸಬೇಕು. ಅದಕ್ಕಾಗಿ ಸತತ ಅಭ್ಯಾಸ ಅಗತ್ಯ.
CLAT-2015 ರ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ : 1ನೇ ಜನವರಿಯಿಂದ 31ನೇ ಮಾರ್ಚ 2015
ಪರೀಕ್ಷಾ ದಿನಾಂಕ : 10 ನೇ ಮೇ 2015
ಫಲಿತಾಂಶ ದಿನಾಂಕ : 25 ನೇ ಮೇ 2015
ಕೌನ್ಸಿಲಿಂಗ್ ದಿನಾಂಕ : 4 ರಿಂದ 22 ಜೂನ್ 2015
ಪ್ರವೇಶ ದಿನಾಂಕ : 24 ರಿಂದ 27 ಜೂನ್ 2015
                                                                                                         ಆರ್.ಬಿ.ಗುರುಬಸವರಾಜ










No comments:

Post a Comment