February 18, 2015

ವಿದೇಶಿ ವ್ಯಾಸಂಗ

                                     ವಿದೇಶಿ ವ್ಯಾಸಂಗದ ಕನಸು

                           ಪರೀಕ್ಷೆ ಪಾಸಾದ್ರೆ ನನಸು


    ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಜಗತ್ತು ಕಿರಿದಾಗತೊಡಗಿದೆ. ಜಾಗತೀಕರಣ ಜಗತ್ತಿನಲ್ಲಿ ಅನೇಕ ಅಂತರರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ಯಮಾನಗಳಿಗೆ ಸ್ಪಂದಿಸಲು, ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ಕಾರಣಗಳನ್ನು ಕಂಡುಕೊಳ್ಳಲು ಯೋಗ್ಯ ನಾಗರೀಕರನ್ನು ತಯಾರಿಸುವುದು ಪ್ರತೀ ದೇಶದ ಸವಾಲಾಗಿದೆ.   
    ಆ ನಿಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಬಹುರಾಷ್ಟ್ರೀಯ/ಪ್ರತಿಷ್ಟಿತ ಕಂಪನಿಗಳ ಎಲ್ಲಾ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಜಾಗತಿಕ ಮಟ್ಟದ ಶೈಕ್ಷಣಿಕ ಪೈಪೋಟಿಗೆ ಭಾರತದ ವಿದ್ಯಾರ್ಥಿಗಳು ಸಿದ್ದಗೊಳ್ಳಬೇಕಾಗಿದೆ. ಅದಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗುತ್ತಿದೆ. ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಅನಿವಾರ್ಯವಾಗಲು ಪ್ರಮುಖ ಕಾರಣವೆಂದರೆ ಭಾರತದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಕೊರತೆ ಹಾಗೂ ಆ ಶಿಕ್ಷಣ ಸಂಸ್ಥೆಗಳ ಸೀಮಿತ ಸ್ಥಾನಗಳಿಗೆ ಇರುವ ಸ್ಪರ್ದೆ. ಅಲ್ಲದೇ ವಿದೇಶಗಳಲ್ಲಿ ಉನ್ನತ ಶಿಕ್ಷಣದ ಖರ್ಚು ಕಡಿಮೆ. ಏಕೆಂದರೆ ಅಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಸಾಕಾಗುವಷ್ಟು ವಿದ್ಯಾರ್ಥಿ ವೇತನ ನೀಡುತ್ತವೆ. ಜೊತೆಗೆ ವಿದ್ಯಾಭ್ಯಾಸದ ನಂತರ ಅರೆಕಾಲಿಕ ಹಾಗೂ ಪೂರ್ಣಪ್ರಮಾಣದ ವೃತ್ತಿ ಅವಕಾಶಗಳು ಹೆಚ್ಚು.
    ಇವುಗಳಲ್ಲದೇ ವಿವಿಧ ಐತಿಹಾಸಿಕತೆಗಳ ಅನುಭವ ಪಡೆಯಲು, ಸಾಂಸ್ಕøತಿಕ ಭಿನ್ನತೆಗಳು ಹಾಗೂ ಜಾಗತಿಕ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ವಿದೇಶಿ ವ್ಯಾಸಂಗದ ಅವಶ್ಯಕತೆ ಇದೆ.
    ವ್ಯಾಸಂಗದ ನಂತರ ವೃತ್ತಿ ಅವಕಾಶಗಳನ್ನು ಹುಡುಕಿ ವಿದೇಶಕ್ಕೆ ಹಾರುತ್ತಿದ್ದ ಅನೇಕ ಭಾರತೀಯ ಪ್ರತಿಭೆಗಳು ಇಂದು ವ್ಯಾಸಂಗಕ್ಕೂ ವಿದೇಶಕ್ಕೆ ಹಾರಬಯಸುವುದು ತಪ್ಪೇನಿಲ್ಲ. ಹಾಗಾಗಿ ಪ್ರತಿಯೊಬ್ಬರಿಗೂ ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂಬ ಕನಸು ಗರಿಗೆದರುವುದು ಸಾಮಾನ್ಯವಾಗಿದೆ. ವಿದೇಶಿ ವ್ಯಾಸಂಗ ಕನಸನ್ನು ನನಸು ಮಾಡಿಕೊಳ್ಳಲು  ಕೆಲವು ಪ್ರವೇಶ ಪರೀಕ್ಷೆಗಳು ಇವೆ. ಈ ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗದ ಕನಸಿಗೆ ರೆಕ್ಕೆ ಪುಕ್ಕ ಹಚ್ಚಿ ವಿದೇಶಕ್ಕೆ ಹಾರಲು ಸಹಾಯ ಮಾಡುತ್ತವೆ.
    ವಿದೇಶದಲ್ಲಿ ಪದವಿ ಪೂರ್ವ ವ್ಯಾಸಂಗಕ್ಕಾಗಿ “ಸ್ಯಾಟ್” ಎದುರಿಸಬೇಕಾಗುತ್ತದೆ. ಪದವಿ ತರಗತಿಗಳಿಗಾಗಿ ಜಿ-ಮ್ಯಾಟ್, ಜಿಆರ್‍ಇ ಪರೀಕ್ಷೆಗಳು ಅವಶ್ಯಕ. ಐಇಎಲ್ಟಿಎಸ್, ಟೋಫೆಲ್ ಇತ್ಯಾದಿಗಳು ಇಂಗ್ಲೀಷ್ ಭಾಷಾ ಜ್ಞಾನದ ಪರೀಕ್ಷೆಗಳಾಗಿವೆ. ವಿದೇಶಿ ವ್ಯಾಸಂಗದ ಪ್ರವೇಶ ಪರೀಕ್ಷೆಯಲ್ಲಿ ಈ ಪರೀಕ್ಷೆಗಳು ರಹದಾರಿಗಳಾಗಿವೆ. ಶಾಲಾ ಶಿಕ್ಷಣದಲ್ಲಿ ಕಡಿಮೆ ಅಂಕ/ಶ್ರೇಣಿ ಪಡೆದಿದ್ದರೂ ನಿಮ್ಮ ಅನುಭವ ಹಾಗೂ ಅನ್ವಯಗಳ ಆಧಾರದ ಮೇಲೆ ಇನ್ನಿತರೇ ಕ್ಷೇತ್ರಗಳಲ್ಲಿನ ನಿಮ್ಮ ಸಾಮಥ್ರ್ಯ ಪ್ರದರ್ಶಿಸುವ ಮೂಲಕ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿ ಮಾಡಿಕೊಳ್ಳಬಹುದು. ಅಂತಹ ಕೆಲವು ಪರೀಕ್ಷೆಗಳ ಬಗ್ಗೆ ಒಂದು ಕಿರು ಝಲಕ್ ಇಲ್ಲದೆ.
ಸ್ಯಾಟ್(Scholastic Aptitude Test) : ಇದೊಂದು ಪ್ರಮಾಣೀಕೃತ ತಾರ್ಕಿಕ ಪರೀಕ್ಷೆಯಾಗಿದ್ದು, ಯುನೈಟೆಡ್ ಸ್ಟೇಟ್ಸ್‍ನ ಕಾಲೇಜುಗಳಲ್ಲಿ ಪ್ರವೇಶ ಹೊಂದಲು ಅವಶ್ಯಕ. ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುವ ಯಾವುದೇ ಹಂತದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕನಿಷ್ಟ ಅಂಕಗಳ ಅವಶ್ಯಕತೆ ಇಲ್ಲ. ಆದಾಗ್ಯೂ ಕೆಲವು ಕಾಲೇಜುಗಳು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಉತ್ತಮ ಅಂಕ ಹಾಗೂ ಉತ್ತಮ ಶೈಕ್ಷಣಿಕ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತವೆ. ಕೆಲವು ಕಾಲೇಜುಗಳು ಅಲ್ಲಿನ ಕೋರ್ಸಿನ ವಿಷಯಗಳನ್ನಾಧರಿಸಿ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತವೆ.
ಆಕ್ಟ(American College Test): ಇದು ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ಇರುವ ಪ್ರವೇಶ ಪರೀಕ್ಷೆಯಾಗಿದೆ. ಇದೊಂದು ಪ್ರಮಾಣೀಕೃತ ಪರೀಕ್ಷೆಯಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದು ಅಮೇರಿಕಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಡ್ಡಾಯವಾದ ಪರೀಕ್ಷೆಯಾಗಿದ್ದು, ವರ್ಷಕ್ಕೆ 5 ಬಾರಿ ನಡೆಸಲಾಗುತ್ತದೆ.
ಜಿಆರ್‍ಇ(Graduate Record Exam) : ಸಾಮಾನ್ಯ ಪದವಿ ಅಥವಾ ವ್ಯವಹಾರಿಕ ಪದವಿಯು ವಿದೇಶದಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು ನೀಡುತ್ತದೆ. ವಿಶ್ವದೆಲ್ಲೆಡೆ ಪದವಿ ಮತ್ತು ವ್ಯವಹಾರಿಕ ಕಾರ್ಯಕ್ರಮಗಳು ಉತ್ತಮ ಮಾರ್ಗದರ್ಶನದಲ್ಲಿ ಗುರಿ ತಲುಪಲು ಜಿಆರ್‍ಇ ಎಂಬ ಸಾಮಾನ್ಯ ಪರೀಕ್ಷೆ ಅವಶ್ಯಕ.
    ಕೆಲವು ಪದವಿ/ವ್ಯವಹಾರಿಕ ಕಾಲೇಜುಗಳು ಅಭ್ಯರ್ಥಿಗಳ ಪದವಿ ವ್ಯಾಸಂಗದ ಸಿದ್ದತೆಯನ್ನು ಅಳೆಯಲು ಈ ಪರೀಕ್ಷೆ ನಡೆಸುತ್ತವೆ. ಈ ಪರೀಕ್ಷೆಯು ತಾರ್ಕಿಕ ಮಾತಿಗಾರಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಬರಹದ ಕೌಶಲಗಳನ್ನು ಮೌಲ್ಯಮಾಪನ ಮಾಡುತ್ತದೆ.
ಜಿ-ಮ್ಯಾಟ್(Graduate Management Admission Test) : ಇದೊಂದು ಪದವಿ ತರಗತಿಗಳ ಅದರಲ್ಲೂ ಮುಖ್ಯವಾಗಿ ವ್ಯವಹಾರಿಕ ಪದವಿಯ ಪ್ರವೇಶ ಪರೀಕ್ಷೆಯಾಗಿದೆ. ಪದವಿಪೂರ್ವ ವ್ಯಾಸಂಗದಲ್ಲಿನ ಇಂಗ್ಲೀಷ್ ಭಾಷೆ ಹಾಗೂ ಗಣಿತಗಳ  ಕಂಪ್ಯೂಟರ್‍ನ ಅನ್ವಯಗಳನ್ನು ತಿಳಿಯುವ ಅರ್ಹತಾ ಪರೀಕ್ಷೆಯಾಗಿದೆ.
    ವ್ಯವಹಾರೋಧ್ಯಮ ಕಾಲೇಜುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ಬಳಸುವ ಹಲವು ಮಾನದಂಡಗಳಲ್ಲಿ ಜಿ-ಮ್ಯಾಟ್ ಪ್ರಮುಖವಾದದ್ದು. ಇಲ್ಲಿ ಪ್ರಮುಖವಾಗಿ ಗಣಿತ ಮತ್ತು ಇಂಗ್ಲೀಷ್ ಭಾಷೆಗಳ ಸಾಮಥ್ರ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಗಳನ್ನು ಪ್ರಪಂಚದಾದ್ಯಂತ ವರ್ಷಕ್ಕೆ 2 ಬಾರಿ ಆನ್‍ಲೈನ್ ಮೂಲಕ ನಡೆಸಲಾಗುತ್ತದೆ. ಆನ್‍ಲೈನ್ ವ್ಯವಸ್ಥೆ ಇಲ್ಲದವರಿಗಾಗಿ ಕೆಲವು ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್‍ಗಳ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.
ಎಂ-ಕ್ಯಾಟ್(Medical College Admission Test) : ವಿದೇಶದಲ್ಲಿ ವೈದ್ಯಕೀಯ ವಿಜ್ಞಾನದ ಪ್ರವೇಶಕ್ಕಾಗಿ ಎಂ-ಕ್ಯಾಟ್ ಪರೀಕ್ಷೆ ನಡೆಸಲಾಗುತ್ತದೆ. ಇದು ಬಹುಆಯ್ಕೆಯ ಪ್ರಶ್ನೆಗಳುಳ್ಳ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳ ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಬಿಡಿಸುವ ವಿಧಾನ, ಬರಹ ಕೌಶಲ್ಯ, ವೈದ್ಯಕೀಯ ವಿಜ್ಞಾನದ ಮೂಲ ಪರಿಕಲ್ಪನೆ, ತತ್ವಗಳನ್ನಾಧರಿಸಿದ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಜೊತೆಗೆ ಭೌತಶಾಸ್ತ್ರ, ಜೀವರಸಾಯನಶಾಸ್ತ್ರ, ತಾರ್ಕಿಕ ಮಾತುಗಾರಿಕೆ ಇತ್ಯಾದಿಗಳಲ್ಲಿನ ಅಂಕಗಳನ್ನೂ ಸಹ ಗಣನೆಗೆ ತೆಗೆದುಕೊಳ್ಳಾಗುತ್ತದೆ. ಯುನೈಟೆಡ್ ಸ್ಟೇಟ್ಸ್‍ನ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಜಿ-ಮ್ಯಾಟ್ ಕಡ್ಡಾಯವಾಗಿದೆ.
ಟೋಯ್ಫೆಲ್ (Test Of English as a Foreign Language) : ಆಂಗ್ಲ ಭಾಷೆಯಲ್ಲಿನ ಸಾಮಥ್ರ್ಯ, ಬಳಕೆಯ ವಿಧಾನ ಮತ್ತು ಅನ್ವಯಗಳ ಕುರಿತ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಟೋಯ್ಫೆಲ್ ಪರೀಕ್ಷೆ ನಡೆಸಲಾಗುತ್ತದೆ. ಕೆಲವು ವಿದೇಶಿ ಕಾಲೇಜುಗಳು/ವಿಶ್ವವಿದ್ಯಾಲಯಗಳು ಸ್ಥಳೀಯ ಇಂಗ್ಲೀಷ್ ಭಾಷಿಕರಲ್ಲದವರಿಗಾಗಿ ಈ ಪರೀಕ್ಷೆ ನಡೆಸುತ್ತವೆ. ಕೆಲವು ವಿದೇಶಿ ಸರಕಾರಿ ಸಂಸ್ಥೆಗಳು, ಪರವಾನಿಗೆ ಸಂಸ್ಥೆಗಲ್ಲಿನ ವೃತ್ತಿಗಾಗಿ ಅಥವಾ ಕೆಲವು ಕಾಲೇಜುಗಳಲ್ಲಿನ ಸ್ಕಾಲರ್‍ಶಿಪ್‍ಗಾಗಿ ಟೋಯ್ಫೆಲ್ ಪರೀಕ್ಷೆಯ ಅವಶ್ಯಕತೆ ಇದೆ.
    ಈ ಅರ್ಹತಾ ಪರೀಕ್ಷೆಯ ಉತ್ತೀರ್ಣತೆಯ ಪ್ರಮಾಣಪತ್ರ 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ವೃತ್ತಿಯಲ್ಲಿರುವವರು 2 ವರ್ಷಗಳಿಗೊಮ್ಮೆ ಈ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯ.     ಇಂಗ್ಲೀಷ್ ಮಾತನಾಡುವ ರಾಷ್ಟ್ರಗಳಲ್ಲಿ ವ್ಯಾಸಂಗ, ಉದ್ಯೋಗ ಮತ್ತು ವ್ಯವಹಾರಕ್ಕಾಗಿ ಟೋಯ್ಫೆಲ್ ಪರೀಕ್ಷೆ ಕಡ್ಡಾಯವಾಗಿದೆ.
ಐಇಎಲ್‍ಟಿಎಸ್(International English Language Testing System) : ಜಗತ್ತಿನಾದ್ಯಂತ ಇಂಗ್ಲೀಷ್‍ನ ಕುಶಲತೆಯನ್ನು ತಿಳಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದು ವಿಶ್ವದ ಅತ್ಯಂತ ಶ್ರೇಷ್ಟ ಇಂಗ್ಲೀಷ್ ಪರೀಕ್ಷೆಯಾಗಿದ್ದು, ಈಗಾಗಲೇ 1.4 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ. ವಿಶ್ವದಾದ್ಯಂತ 500 ಕೇಂದ್ರಗಳಲ್ಲಿ ತಿಂಗಳಿಗೆ 4 ಬಾರಿ ನಡೆಸಲಾಗುತ್ತದೆ. ಇದು ಅಂತರರಾಷ್ಟ್ರೀಯ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ಆಯಾ ರಾಷ್ಟ್ರಗಳಲ್ಲಿನ ಆಂಗ್ಲ ಭಾಷೆಯ ಮೇಲಿನ ಉದ್ಯೋಗಾವಕಾಶಗಳಿಗೂ ಇದು ಅನುಕೂಲಕರ.
    ಇದರಲ್ಲಿ 2 ರೀತಿಯ ಪರೀಕ್ಷೆಗಳಿವೆ. ಒಂದು ಶೈಕ್ಷಣಿಕ ಪರೀಕ್ಷೆ, ಇನ್ನೊಂದು ಸಾಮಾನ್ಯ ಪರೀಕ್ಷೆ. ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಪರೀಕ್ಷೆ ಮೀಸಲಿದ್ದರೆ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರೇ ಕೆಲಸಗಳಿಗೆ ಸಾಮಾನ್ಯ ಪರೀಕ್ಷೆ ಮೀಸಲು. ಈ ಎರಡೂ ವಿಧದ ಪರೀಕ್ಷೆಗಳಲ್ಲಿ ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯನ್ನು ಆಧರಿಸಿದ ಪ್ರಶ್ನೆಗಳಿರುತ್ತವೆ.
ಓಯಟ್(Occupational English Test) : ಬೇರೆ ಬೇರೆ ರಾಷ್ಟ್ರಗಳಲ್ಲಿ ವೃತ್ತಿ ಮಾಡಲು ಅರ್ಹರಾದ ವೈದ್ಯಕೀಯ ವೃತ್ತಿಪರರಿಗೆ  ಹಾಗೂ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ತಾತ್ಕಾಲಿಕವಾಗಿ ನೊಂದಣಿ ಮಾಡಿಸಿಕೊಂಡವರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿನ ಇಂಗ್ಲೀಷ್ ಭಾಷಾ ಬಳಕೆಯ ವಿಧಾನ ಅರಿಯಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ವಿಶ್ವದ 40 ಪರೀಕ್ಷಾ ಕೇಂದ್ರಗಳಲ್ಲಿ ವರ್ಷಕ್ಕೆ 10 ಬಾರಿ ನಡೆಸಲಾಗುತ್ತದೆ.
    ಮೇಲಿನ ಪರೀಕ್ಷೆಗಳಲ್ಲದೇ ಕೆಲವು ರಾಷ್ಟ್ರಗಳು ತಮ್ಮದೇ ಆದ ಕೆಲವು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಒಟ್ಟಾರೆ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವವರು ಒಂದಲ್ಲ ಒಂದು ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದುದು ಕಡ್ಡಾಯ. ನಿಮ್ಮ ವಿದೇಶಿ ವ್ಯಾಸಂಗದ ಕನಸನ್ನು ನನಸಾಗಿಸುವ ಪರೀಕ್ಷೆಗಳಿಗೆ ಇಂದೇ ಸಿದ್ದರಾಗಿರಿ.

ವಿದೇಶಿ ವ್ಯಾಸಂಗಕ್ಕಾಗಿ ಕೆಲವು ಅಂತರಜಾಲ ತಾಣಗಳು


               www.embassy.org/embassies/index.html,
               www.goabroad.com
               www.language-learning.net,
               www.studyabroad.com
               www.cie.uci.edu
               internationalcenter.umich.edu/swt/index.html
               www.international.umn.edu
               www.globaled.us/wwcu/
               www.aasianst.org
               www.amscan.org
 


                                                                                                                             ಆರ್.ಬಿ.ಗುರುಬಸವರಾಜ

No comments:

Post a Comment