June 4, 2015

ಕರಿಯರ್ ನೆಟ್‍ವರ್ಕ್

ದಿನಾಂಕ 03-06-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.






                 ನೆಟ್ಟಗಿರಲಿ ಕರಿಯರ್ ನೆಟ್‍ವರ್ಕ್

    ವೃತ್ತಿಪರ ಕೋರ್ಸ ಮುಗಿಸಿಕೊಂಡು ಹೊರಬರುತ್ತಿರುವ ಶೃತಿಗೆ ದೊಡ್ಡದೊಂದು ಚಿಂತೆ ಶುರುವಾಗಿದೆ. ಅದು ರಿಸಲ್ಟ್ ಚಿಂತೆ ಅಲ್ಲ, ಲವ್ ಚಿಂತೆಯೂ ಅಲ್ಲ. ಬದಲಿಗೆ ಕರಿಯರ್ ಚಿಂತೆ. ಕೆಲಸ ಎಲ್ಲಿ ಹುಡುಕಬೇಕು? ಹೇಗೆ ಹುಡುಕಬೇಕು? ಅಲ್ಲಿನ ವಾತಾವರಣ ಹೇಗಿರುತ್ತದೆ? ಸಹುದ್ಯೋಗಿಗಳ ವರ್ತನೆ ಹೇಗಿರುತ್ತದೆ? ಎಂಬ ವೃತ್ತಿ ಚಿಂತೆ ಶುರುವಾಗಿದೆ. ಈಗ ಅವಳಿಗೆ ಮುಂದಿನ ದಾರಿ ಏನು? ಮಾರ್ಗಸೂಚಕರು ಯಾರು?
    ಆರೀಫನದು ಇದಕ್ಕೆ ಭಿನ್ನವಾದ ಚಿಂತೆ. ಆರೀಫ್ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಕಳೆದ ನಾಲ್ಕಾರು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಬಡ್ತಿ ಅಥವಾ ಉನ್ನತ ಹಂತಕ್ಕೆ ಏರಲು ನಿರೀಕ್ಷಿಸುತ್ತಿದ್ದಾನೆ. ಸದ್ಯಕ್ಕಂತೂ ಅದೇ ಕಂಪನಿಯಲ್ಲಿ ಅವನ ನಿರೀಕ್ಷೆಗೆ ಯಾವುದೇ ಭರವಸೆ ದೊರೆಯುತ್ತಿಲ್ಲ. ಅದಕ್ಕಾಗಿ ಅವನು ಬೇರೆ ಕಂಪನಿ ಸೇರಲು ನಿರ್ಧರಿಸಿದ್ದಾನೆ. ನಿಜವಾಗಿಯೂ ಈಗ ಅವನಿಗೆ ಸಲಹೆಗಾರರ ಅಥವಾ ಆಪ್ತಸಮಾಲೋಚಕರ ಅವಶ್ಯಕತೆ ಇದೆ. ಅವನು ವೃತ್ತಿಯಲ್ಲಿ ಮುಂದುವರೆಯಲು ಸಲಹೆ ನೀಡಲು ಯಾರಾದರೂ ಇರುವರೇ?
    ಇಂತಹ ಪ್ರಶ್ನೆಗಳು ಅಥವಾ ಘಟನೆಗಳು ನಿಮ್ಮ ವಲಯದಲ್ಲಿ ಕಂಡು ಬಂದಿವೆಯೇ? ಇಂತಹವರಿಗೆ ನಿಮ್ಮಲ್ಲಿ ಏನಾದರೂ ಮಾರ್ಗದರ್ಶನ ಇದೆಯೇ? ಇದ್ದರೆ ಇಂತಹವರಿಗೆ ನೀವೂ ಸಹಾಯ ಮಾಡಬಹುದು ಅಥವಾ ನಿಮ್ಮಲ್ಲಿ ಇಂತಹ ಸಂದೇಹಗಳಿದ್ದರೆ ನೀವೂ ಸಲಹೆ ಪಡೆಯಬಹುದು. ಅದು ಹೇಗೆ ಅಂತೀರಾ? ತೀರಾ ಸಿಂಪಲ್. ಕರಿಯರ್ ನೆಟ್‍ವರ್ಕ್‍ನ ಸದಸ್ಯರಾಗುವುದು.

ಏನಿದು ಕರಿಯರ್ ನೆಟ್‍ವರ್ಕ್?
    ಕರಿಯರ್ ನೆಟ್‍ವರ್ಕ್ ಎಂಬುದು ವೃತ್ತಿ ನಿರತರೊಂದಿಗೆ ಸಂಪರ್ಕ ಹೊಂದುವುದು. ಅವರು ಕ್ಲಾಸ್‍ಮೇಟ್‍ಗಳು, ಸ್ನೇಹಿತರು, ಆಪ್ತಬಂಧುಗಳು, ಸಹುದ್ಯೋಗಿಗಳು ಅಥವಾ ಇತರೇ ಉದ್ಯೋಗಿಗಳಾಗಿರಬಹುದು. ಇಂತಹವರೊಂದಿಗೆ ಸಂಪರ್ಕ ಹೊಂದುವ ಮೂಲಕ ವೃತ್ತಿಗೆ ಬೇಕಾದ ಮಾಹಿತಿ ಪಡೆಯುವುದೇ ಕರಿಯರ್ ನೆಟ್‍ವರ್ಕ್.
    ಈ ನೆಟ್‍ವರ್ಕ್ ಮುಖಾಮುಖಿ ಆಗಿರಬಹುದು ಅಥವಾ ಇತರೆ ಸಂಪರ್ಕ  ಜಾಲಗಳಾದ ಫೇಸ್‍ಬುಕ್, ವಾಟ್ಸಪ್, ಇಮೇಲ್, ಲಿಂಕ್ಡ್‍ಇನ್, ಹೈಕ್, ಇತ್ಯಾದಿಗಳ ಮೂಲಕ ಸಂಪರ್ಕ ಸಾಧಿಸಿ, ವೃತ್ತಿಗೆ ಪೂರಕವಾದ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವುದೇ ಕರಿಯರ್ ನೆಟ್‍ವರ್ಕ್.
    ಕರಿಯರ್ ನೆಟ್‍ವರ್ಕ್ ಎಂಬುದು ಯೋಜಿತವಾಗಿ ನಡೆಯುತ್ತಿರುವ ಪ್ರಯತ್ನಗಳ ಸಮೂಹ. ನಿಮ್ಮ ವೃತ್ತಿಯ ಉದ್ದೇಶಗಳನ್ನು ಈಡೇರಿಸಲು ಬೇಕಾದ ಕಾರ್ಯನೀತಿಯನ್ನು ಅಭಿವೃದ್ದಿಪಡಿಸಲು ಹಾಗೂ ಮೌಲ್ಯಮಾಪನ ಮಾಡಿಕೊಳ್ಳಲು, ಅಗತ್ಯವಿದ್ದಲ್ಲಿ ಕಾರ್ಯನೀತಿಯಲ್ಲಿ ಬದಲಾವಣೆ ತರಲು ಈ  ನೆಟ್‍ವರ್ಕ್ ಸಹಾಯ ಮಾಡುತ್ತದೆ. ನಿಮ್ಮ ವೃತ್ತಿ ಜೀವನದುದ್ದಕ್ಕೂ ಹೊಸ ಅಂಶಗಳನ್ನು ಕಲಿಯಲು, ನಾವೀನ್ಯತೆ ಬೆಳೆಸಿಕೊಳ್ಳಲು ಒಟ್ಟಾರೆ ಉಜ್ವಲ ವೃತ್ತಿ ಜೀವನ ನಡೆಸಲು ಸಹಾಯ ಮಾಡುತ್ತದೆ.

ಯಾಕೆ ಕರಿಯರ್ ನೆಟ್‍ವರ್ಕ್?
    ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾದ ಕನಸಿನ ಹುದ್ದೆ ಹುಡುಕಲು, ರೆಪ್ಯುಟೆಡ್ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು, ಇರುವ ವೃತ್ತಿಯಲ್ಲಿ ನಾವೀನ್ಯತೆ ಗಳಿಸಲು, ವೃತ್ತಿ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ವೃತ್ತಿ ಸೌಲಭ್ಯಗಳ ಬಗ್ಗೆ ತಿಳಿಯಲು ಕರಿಯರ್ ನೆಟ್‍ವರ್ಕ್ ಅವಶ್ಯಕ. ವೃತ್ತಿಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲು ಕರಿಯರ್ ನೆಟ್‍ವರ್ಕ್ ಒಂದು ಉತ್ತಮ ವೇದಿಕೆಯಾಗಿದೆ. ಶೇಕಡಾ 65-80 ರಷ್ಟು ರೆಪ್ಯುಟೆಡ್ ಕಂಪನಿಗಳ ಹುದ್ದೆಗಳು ಇಂತಹ ಕರಿಯರ್ ನೆಟ್‍ವರ್ಕ್ ಮೂಲಕವೇ ಭರ್ತಿಯಾಗುತ್ತವೆ. ಹಾಗಾಗಿ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ, ಉದ್ಯೋಗ ನಿರತರು ಕರಿಯರ್ ನೆಟ್‍ವರ್ಕ್‍ಗೆ ಸೇರುವ ಮೂಲಕ ಅವಕಾಶಗಳ ಜಾಲವನ್ನು ವಿಸ್ತರಿಸಬಹುದು.
    ಕರಿಯರ್ ನೆಟ್‍ವರ್ಕ್‍ನ ಸದಸ್ಯರಾಗುವ ಮೂಲಕ ವೃತ್ತಿಗೆ ಪೂರಕವಾದ ಮಾಹಿತಿ ಒದಗಿಸುವ ಹಾಗೂ ಭಾವನಾತ್ಮಕ ಬೆಂಬಲ ನೀಡುವ  ಜನರ ಸಮುದಾಯವನ್ನೇ ನಿರ್ಮಿಸಬಹುದು. ಜೊತೆಗೆ ಈ ನೆಟ್‍ವರ್ಕ್ ಮೂಲಕ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಕಂಡುಕೊಳ್ಳಬಹುದು.  ನೆಟ್‍ವರ್ಕ್‍ನ ಇತರೆ ಸದಸ್ಯರಿಗೆ ನೀವು ಮಾಹಿತಿ ನೀಡುವಂತಾದರೆ ನೀವೊಬ್ಬ ಉತ್ತಮ ಐಕಾನ್ ಆಗುವ ಮೂಲಕ ಉತ್ತಮ ನಾಯಕರಾಗಿ ಹೊರಹೊಮ್ಮಬಹುದು. ಇತರರ ಸಮಸ್ಯೆಗಳನ್ನು ಪರಿಹರಿಸಿದ ಸಂತೃಪ್ತ ಭಾವ ನಿಮ್ಮದಾಗುತ್ತದೆ.
    ಕರಿಯರ್ ನೆಟ್‍ವರ್ಕ್ ಒಂದು ಅಕಲ್ಪಿತ ಕಲ್ಪನೆ ಅಲ್ಲ. ವೃತ್ತಿ ಜೀವನ ಆರಂಭಿಸುವ  ಹಾಗೂ ವೃತ್ತಿಗೆ ಪೂರಕವಾದ ತಂತ್ರಗಾರಿಕೆ ತಿಳಿಯುವ ಸುಲಭ ಮಾರ್ಗ. ಉತ್ತಮ ವೃತ್ತಿ ಪರಿಣಿತರ ಸಂಕರ್ಪದಲ್ಲಿರಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆಟ್‍ವರ್ಕ್ ಸಹಕಾರಿ. ಕರಿಯರ್ ನೆಟ್‍ವರ್ಕ್ ವೃತ್ತಿಯ ನಿಜವಾದ ಪ್ರಾಮಾಣಿಕ ಆಪ್ತಮಿತ್ರನಿದ್ದಂತೆ.

 ನೆಟ್‍ವರ್ಕ್ ಸೇರುವ ದಾರಿ ಸಿಂಪಲ್
    ಕರಿಯರ್ ನೆಟ್‍ವರ್ಕ್‍ಗೆ ಸೇರಲು ಮುಖ್ಯವಾಗಿ ಎರಡು ಮಾರ್ಗಗಳಿವೆ. ಮೊದಲನೆಯದು ಹಾರ್ಡವೇರ್ ಮಾರ್ಗ, ಎರಡನೆಯದು ಸಾಫ್ಟ್‍ವೇರ್ ಮಾರ್ಗ. ಹಾರ್ಡ್‍ವೇರ್ ಮಾರ್ಗವೆಂದರೆ ಭೌತಿಕವಾಗಿ ವ್ಯಕ್ತಿಗಳನ್ನು ಮುಖತಃ ಭೇಟಿಯಾಗುದು. ಸಭೆ ಸಮಾರಂಭಗಳು, ಸಮಾವೇಶಗಳು, ಚರ್ಚಾಗೋಷ್ಟಿಗಳ ಮೂಲಕ ಅಥವಾ ವೈಯಕ್ತಿಕ ಭೇಟಿಯ ಮೂಲಕ ವ್ಯಕ್ತಿಗಳನ್ನು ನೇರವಾಗಿ ಭೇಟಿಯಾಗಿ ಮಾಹಿತಿ ಪಡೆಯುವುದು.
    ಸಾಫ್ಟ್‍ವೇರ್ ಮಾರ್ಗವೆಂದರೆ ಫೋನ್, ಇಮೇಲ್, ಫೇಸ್‍ಬುಕ್, ವಾಟ್ಸಪ್, ಲಿಂಕ್ಡ್‍ಇನ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು. ಇವೆರಡೂ ಮಾರ್ಗಗಳ ಮೂಲಕ ಹೊಸ ಹೊಸ ಜನರನ್ನು ಸಂಪರ್ಕಿಸಿ ವೃತ್ತಿ ಸಂವಾಧ ನಡೆಸಿ ಸಂದೇಹಗಳನ್ನು ಪರಿಹರಿಸಿಕೊಳ್ಳುವುದೇ ಕರಿಯರ್ ನೆಟ್‍ವರ್ಕ್‍ನ ಉದ್ದೇಶ.
   
ನೆಟ್‍ವರ್ಕ್ ಸೇರುವ ಮುನ್ನ,,,,
    ಗುರಿಯ ಸ್ಪಷ್ಟತೆ ಇರಲಿ: ನೀವು ಉತ್ತಮ ವೃತ್ತಿಗೆ ಸೇರಲು ಇಚ್ಚಿಸಿರುವಿರೋ? ವೃತ್ತಿ ಬದಲಾಯಿಸಲು ಬಯಸಿರುವಿರೋ? ವೃತ್ತಿ ಮಾರ್ಗದರ್ಶಕರನ್ನು ಹುಡುಕುತ್ತಿರುವಿರೋ? ಅಥವಾ ಸ್ವ-ಉದ್ಯೋಗಿಗಳನ್ನು ಭೇಟಿ ಮಾಡಲು ಬಯಸಿರುವಿರೋ? ನೀವು ಯಾರನ್ನು ಏಕೆ ಭೇಟಿಯಾಗಲು ಬಯಸಿರುವಿರಿ, ನಿಮ್ಮ ಗುರಿ ಏನು ಎಂಬ ಬಗ್ಗೆ ಸ್ಪಷ್ಟತೆ ಇರಲಿ.
    ಅಗತ್ಯತೆ ಮತ್ತು ಆಸಕ್ತಿಗಳನ್ನು ಗುರುತಿಸಿ: ವೃತ್ತಿಜಾಲ ಸೇರುವ ಮುನ್ನ ನಿಮ್ಮ ಬಗ್ಗೆ ನೀವೇ ತಿಳಿಯಿರಿ. ಅಂದರೆ ನಿಮ್ಮ ಆಸಕ್ತಿಗಳು, ವೃತ್ತಿಯ ಕನಸುಗಳು, ಇರಬಹುದಾದ ಅವಕಾಶಗಳು, ಮಿತಿಗಳು ಹಾಗೂ ನಿಮ್ಮನ್ನು ಪ್ರಭಾವಿತಗೊಳಿಸಿದ ಅಂಶಗಳು, ನಿಮ್ಮ ವ್ಯಕ್ತಿತ್ವ ಬಿಂಬಿಸುವ ಇನ್ನಿತರೇ ಅಂಶಗಳನ್ನು ಗಮನಿಸಿ ಪಟ್ಟಿ ಮಾಡಿಕೊಳ್ಳಿ.
    ನೆಟ್‍ವರ್ಕನ ಮಾಹಿತಿ ತಿಳಿಯಿರಿ: ನೀವು ಸೇರಬಯಸುವ ನೆಟ್‍ವರ್ಕ್ ಔಪಚಾರಿಕವೋ? ಅನೌಪಚಾರಿಕವೋ? ಅದರ ಗುರಿ-ಉದ್ದೇಶಗಳೇನು? ಕಾರ್ಯನೀತಿ ಏನು? ಸಂಪನ್ಮೂಲಗಳು, ಮಾರ್ಗದರ್ಶಕರು, ಆಕರ ಗ್ರಂಥಗಳು, ಸದಸ್ಯರು ಇತ್ಯಾದಿ ಮಾಹಿತಿಯನ್ನು ತಿಳಿಯಿರಿ. ನಂತರ ಈ ನೆಟ್‍ವರ್ಕ್ ನಿಮ್ಮ ವೃತ್ತಿಗೆ ಪೂರಕವಾದ ಮಾಹಿತಿ ಒದಗಿಸಬಲ್ಲದೇ, ಇಲ್ಲವೇ ಎಂಬುದನ್ನು ನಿರ್ಧರಿಸಿ.

ವೃತ್ತಿ ನೆಟ್ಟಗಿರಲು,,,,
    ವೃತ್ತಿ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಲು ನೆಟ್‍ವರ್ಕ್ ಸೇರುವುದೊಂದೇ ಸುಲಭ ಮಾರ್ಗ. ಈ ನೆಟ್‍ವರ್ಕ್ ಸೇರಿದ ನಂತರ ಸದಸ್ಯರೊಂದಿಗೆ ಚರ್ಚೆ, ಸಂವಾದ ನಡೆಸಿ. ಪ್ರಶ್ನಿಸುವ ಮೂಲಕ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಕೆಲವರು ಇತರರಿಗೆ ಸಹಾಯ/ಮಾರ್ಗದರ್ಶನ ಮಾಡಲು ಉತ್ಸುಕರಾಗಿರುತ್ತಾರೆ. ಅಂತಹವರ ಸಲಹೆ ಪಡೆಯಿರಿ. ನಿಮ್ಮಲ್ಲಿನ ಆಲೋಚನೆಗಳು, ಅನುಭವಗಳನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
    ಕೆಲವು ವೃತ್ತಿಪರ ಜಾಲತಾಣಗಳು, ಬ್ಲಾಗ್ ಬರಹಗಳನ್ನು ಓದಿ. ನಿಮ್ಮ ಕಾಮೆಂಟ್ ತಿಳಿಸಿ. ಉತ್ತಮ ಎನಿಸಿದರೆ ಇತರರೊಂದಿಗೆ ಹಂಚಿಕೊಳ್ಳಿ. ನೆಟ್‍ವರ್ಕ್ ಸದಸ್ಯರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ. ವೃತ್ತಿಗೆ ಸಂಬಂಧಗಳು  ಬ್ರೆಡ್ಡಿನಂತೆ. ಅದರಲ್ಲಿನ ಪ್ರತಿ ಹೋಳನ್ನು ಇತರರೊಂದಿಗೆ ಹಂಚಿಕೊಂಡಾಗಲೇ ವೃತ್ತಿ ಜೀವನ ಉಜ್ವಲವಾಗಿರುತ್ತದೆ.
   
ನೆಟ್‍ವರ್ಕ್ ವಿಸ್ತರಿಸಿ:
    ನಿಮ್ಮ ಕರಿಯರ್ ನೆಟ್‍ವರ್ಕ್‍ನಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದು ಮುಖ್ಯವಲ್ಲ. ಎಂತಹ ಸದಸ್ಯರಿದ್ದಾರೆ ಎಂಬುದು ಮುಖ್ಯ. ಅಂದರೆ ಸಂಖ್ಯಾಬಲಕ್ಕಿಂತ ಗುಣಾತ್ಮಕ ಬಲ ಮುಖ್ಯ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೆಟ್‍ವರ್ಕ್‍ನ್ನು ವಿಸ್ತರಿಸಿ.
1. ನಿಮ್ಮ ಆಪ್ತ ಸ್ನೇಹಿತರ/ವೃತ್ತಿ ನಿರತರ ನೆಟ್‍ವರ್ಕ್ ವಲಯದಲ್ಲಿ ಸೇರಿಕೊಳ್ಳಿ. ಫ್ರೆಂಡ್ ಆಫ್ ಫ್ರೆಂಡ್ ಆಗುವ ಮೂಲಕ ವೃತ್ತಿ ಜಾಲದ ಸದಸ್ಯರಾಗಿರಿ.
2. ವೃತ್ತಿ ಸಂಬಂಧಿತ ಸಂಘಟನೆಗಳಿಗೆ ಸೇರಿಕೊಳ್ಳಿ. ಆ ಮೂಲಕ ನಿಮ್ಮ ಆಸಕ್ತಿಗಳು, ವಿಚಾರಗಳು, ಗುರಿ ಉದ್ದೇಶಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಹಾಗೂ ಇತರರ ಸಲಹೆ ಸೂಚನೆಗಳನ್ನು ಅನುಸರಿಸಿ.
3. ವೃತ್ತಿ ಸಂಬಂಧಿತ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ. ಇದರಿಂದ ಪರಿಣಿತರ ಭೇಟಿಯ ಜೊತೆಗೆ ನಿಮ್ಮ ನೆಟ್‍ವರ್ಕ್ ವಿಸ್ತಾರವಾಗುತ್ತದೆ.
4. ಸಮಯ ದೊರೆತಾಗಲೆಲ್ಲ ನೆಟ್‍ವರ್ಕ್ ವಿಸ್ತರಿಸಲು ಇರುವ ಮಾರ್ಗಗಳ ಮೂಲಕ ಹೊಸ ಹೊಸ ಸದಸ್ಯರ ವಲಯ ಸೇರಿಕೊಳ್ಳಿ/ಸೇರಿಸಿಕೊಳ್ಳಿ. ಆ ಮೂಲಕ ನೆಟ್‍ವರ್ಕ್ ವಿಸ್ತರಿಸಲು ಸ್ವಯಂಸೇವಕರಾಗಿ ಕಾರ್ಯ ಪ್ರವೃತ್ತರಾಗಿ.
5. ಹೊಸ ಮತ್ತು ಬಲವಾದ ನೆಟ್‍ವರ್ಕ್ ಸಂಪರ್ಕಗಳನ್ನು ನಿರ್ಮಿಸಲು ಕಾಲೇಜು/ವಿಶ್ವ ವಿದ್ಯಾಲಯಗಳೊಂದಿಗೆ ಉತ್ತಮ ಭಾಂಧವ್ಯ ಬೆಳೆಸಿಕೊಳ್ಳಿ.
6. ಸೇರಿದ ನೆಟ್‍ವರ್ಕ್‍ನ ಸಕ್ರಿಯ ಕಾರ್ಯಕರ್ತರಾಗಿ. ನಿಮ್ಮ ಪ್ರಶ್ನೆಗಳನ್ನು, ಅನಿಸಿಕೆಗಳನ್ನು, ಸಲಹೆಗಳನ್ನು, ಮಾಹಿತಿಗಳನ್ನು, ಸಾಧನೆಗಳನ್ನು ನೆಟ್‍ವರ್ಕ್ ಮೂಲಕ ಇತರರೊಂದಿಗೆ ಹಂಚಿಕೊಳ್ಳಿ.
7. ನಿವೃತ್ತರು, ವೃತ್ತಿ ಪರಿಣಿತರು, ಮಾರ್ಗದರ್ಶಕರನ್ನು ಆಗಿದ್ದಾಂಗ್ಗೆ ಭೇಟಿ ಮಾಡಿ ಸಲಹೆ ಪಡೆಯಿರಿ.

ಕೊನೆಹನಿ :
    ನೆಟ್‍ವರ್ಕ್ ಎನ್ನುವುದು ಪರಸ್ಪರರ ಸಂಬಂಧವನ್ನು ಗಟ್ಟಿಗೊಳಿಸುವುದಾಗಿದೆ. ಇಂದು ನಿಮಗೆ ಸಲಹೆಯು ಅಗತ್ಯವಾಗಿರಬಹುದು, ನಾಳೆ ನೀವೇ ಸಲಹೆಗಾರರು ಆಗಬಹುದು. ಹಾಗಾಗಿ ನೆಟ್‍ವರ್ಕ್‍ನ ಸದಸ್ಯರ ಸಹಾಯ ಪಡೆಯಲು ಹಿಂಜರಿಯಬೇಡಿ. ನಿಮಗೆ ಬೇಕಾದ ವೃತ್ತಿ ಪಡೆಯಲು ಇತರರನ್ನು ಒತ್ತಾಯಿಸಬೇಡಿ. ಆದರೆ ಇರುವ ಸಾಧ್ಯತೆಗಳನ್ನು ಬಗ್ಗೆ ತಿಳಿಯಲು ಮರೆಯಬೇಡಿ.
    ಹೊಸ ಸದಸ್ಯರನ್ನು ಭೇಟಿಯಾದಾಗ ನಿಮ್ಮ ಬಗ್ಗೆ ಎಲ್ಲವನ್ನೂ ನೀವೇ ಹೇಳಬೇಡಿ. ಆ ವ್ಯಕ್ತಿಯ ವಿಚಾರಗಳು, ಅನುಭವಗಳನ್ನು ಸ್ಪಷ್ಟವಾಗಿ ಆಲಿಸಿ. ಅವರ ವ್ಯಕ್ತಿತ್ವ ತಿಳಿಯಲು ಪ್ರಯತ್ನಿಸಿ. ನಿಮ್ಮ ವೃತ್ತಿ ವಿಕಾಸದಲ್ಲಿ ಯಾರು ಪ್ರಮುಖ ಪಾತ್ರ ವಹಿಸುತ್ತಾರೆಂಬುದು ಗೊತ್ತಿಲ್ಲ. ಕರಿಯರ್ ನೆಟ್‍ವರ್ಕ್ ಸೇರುವ ಮೂಲಕ ಅವಕಾಶಗಳ ಬಾಗಿಲು ತೆರೆಯಿರಿ. ಅವಕಾಶಗಳು ಯಾರಿಂದಲಾದರೂ, ಯಾವಾಗಲಾದರೂ, ಹೇಗಾದರೂ ದೊರೆಯುಬಹುದಲ್ಲವೇ? ಅಥವಾ ಒಬ್ಬ ವ್ಯಕ್ತಿ ಇಡೀ ನಿಮ್ಮ ಜೀವನವನ್ನೇ ಬದಲಾಯಿಸಹುದು. ಆದ್ದರಿಂದ ಎಲ್ಲರೊಂದಿಗೂ ಬೆರೆತು ವೃತ್ತಿ ಜೀವನವನ್ನು ಎಂಜಾಯ್ ಮಾಡಿ.
                                                                                                                ಆರ್.ಬಿ.ಗುರುಬಸವರಾಜ.

No comments:

Post a Comment