June 4, 2015

ಅವನು ನನ್ನ ಕಣ್ಣು, ನಾನು ಅವನ ಕೈ

ಮೇ 2015ರ 'ಟೀಚರ್' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.

                           ಅವನು ನನ್ನ ಕಣ್ಣು, ನಾನು ಅವನ ಕೈ

    ಅವರಿಬ್ಬರಿಗೂ ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಬಯಕೆ ಅದಮ್ಯವಾಗಿತ್ತು. ಆದರೆ ಅಂಗವೈಕಲ್ಯ ಅಡ್ಡ ಬಂತು. ಅವರ ದೈಹಿಕ ಅಸಮರ್ಥತೆಗೆ ಉದ್ಯೋಗ ಸಿಗಲಿಲ್ಲ. ಕೊನೆಗೆ ಕೂಲಿ ಕೆಲಸವೂ ಕೂಡಾ ಸಿಗಲಿಲ್ಲ. ಏಕೆಂದರೆ ಒಬ್ಬನಿಗೆ ಎರಡೂ ಕೈಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕಣ್ಣುಗಳಿಲ್ಲ. ಆಗ ತಮ್ಮ ಭವಿಷ್ಯ ಕರಾಳ ಎನಿಸಿತು. ಆದರೂ ಬದುಕುವ ಹಾದಿ ಕುಡುಕಬೇಕಾಗಿತ್ತು. ಇಬ್ಬರೂ ತಮ್ಮ ಕೌಶಲ್ಯಗಳನ್ನು ಒಟ್ಟುಗೂಡಿಸಿ ವಿಶೇಷವಾದುದನ್ನು ಅಂದರೆ ಭವಿಷ್ಯಕ್ಕೆ ಉತ್ತಮವಾದುದನ್ನು ಸಾಧಿಸುವ ನಿರ್ಧಾರ ಮಾಡಿದರು. ಅದಕ್ಕಾಗಿ ಪ್ರತಿದಿನವೂ ಶ್ರಮವಹಿಸಿ ದುಡಿದರು. ಇಂದು ಅವರ ಶ್ರಮಕ್ಕೆ ಪ್ರತಿಫಲ ದೊರೆತಿದೆ. ಅವರ ಸಾಧನೆ ಕೇವಲ ಅವರ ಪ್ರಾಂತಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ಮಾದರಿಯಾದುದು.
    ವಿಚಿತ್ರವಾದರೂ ಸತ್ಯ : ಇದು ಯಾವುದೋ ಸಿನೆಮಾ ಕಥೆ ಎಂದುಕೊಂಡಿರಾ? ಇದು ಕಟ್ಟು ಕಥೆ ಅಲ್ಲ. ಬದುಕನ್ನು ಕಟ್ಟಿಕೊಳ್ಳಲು, ಆ ಬದುಕಿಗೆ ಆದಾಯದ ಮೂಲವನ್ನು ಹುಡುಕಿ ಹೊರಟವರ ವಾಸ್ತವ ಕಥೆ. ಈ ಸಾಧನೆ ಮಾಡಿದ ಮಹಾನ್ ಸಾಧಕರೆಂದರೆ ಚೀನಾದ ಜಿಯಾ ಹೈಕ್ಸಿಯಾ ಮತ್ತು ಜಿಯಾ ವ್ಯಾನ್ಗಿ. ಹೈಕ್ಸಿಯಾಗೆ ಎರಡೂ ಕಣ್ಣುಗಳಿಲ್ಲ, ವ್ಯಾನ್ಗಿಗೆ ಎರಡೂ ಕೈಗಳಿಲ್ಲ. 53 ವರ್ಷದ ಇವರೀರ್ವರೂ ಯಾವುದೇ ಸರಕಾರ ಸಂಘ-ಸಂಸ್ಥೆ ಅಥವಾ ತಂಡಗಳು ಮಾಡಲಾಗದ ಸಾಧನೆ ಮಾಡಿದ್ದಾರೆ. ಅದೂ ಕೇವಲ 10-12ವರ್ಷಗಳಲ್ಲಿ. ಅದೇನೆಂದರೆ ಉತ್ತರ ಚೀನಾದ ‘ಹೇಬೇ’ ಪ್ರಾಂತ್ಯದ “ಯೇಲಿ” ಎಂಬ ಹಳ್ಳಿಯಲ್ಲಿ 10000 ಮರಗಳನ್ನು ಬೆಳೆಸಿ ಯಶಸ್ವಿಯಾಗಿದ್ದಾರೆ. ಈ ಅದ್ಬುತ ಪ್ರಯತ್ನಕ್ಕಾಗಿ ಅವರಿಂದು ‘ಪರಿಸರ ಯೋಧ’ರಾಗಿ ಮತ್ತು ಇಡೀ ಜಗತ್ತಿನ ‘ಹೀರೋ’ಗಳಾಗಿ ಕಂಗೊಳಿಸುತ್ತಿದ್ದಾರೆ.
    ಬತ್ತದ ಆಸೆ : ಉದ್ಯೋಗ ದೊರೆಯುವುದು ದುರ್ಲಭವಾದಾಗ ಪ್ರತಿಯೊಬ್ಬರೂ ಹತಾಶರಾಗುವುದು ಸಹಜ. ತಮ್ಮ ಭವಿಷ್ಯ ಕರಾಳವಾದಂತೆ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಾರದು ಎಂದು ನಿರ್ಧರಿಸಿದ ಈ ಗೆಳೆಯರು 2001 ರಲ್ಲಿ ‘ಯೇಲಿ’ ಬಳಿಯ ನದಿತೀರದ 3 ಹೆಕ್ಟೇರ್ ಬಂಜರು ಭೂಮಿಯನ್ನು ಸ್ಥಳೀಯ ಸರಕಾರದಿಂದ ಗುತ್ತಿಗೆ ಪಡೆದು ಮರಗಿಡ ಬೆಳೆಸುವ ಪರಿಸರ ಯೋಧರಾಗಲು ಸಜ್ಜಾದರು. ಆದರೆ ಅವರು ಆಯ್ಕೆ ಮಾಡಿಕೊಂಡ ಹಾದಿ ಸುಗಮವಾಗಿರಲಿಲ್ಲ. ಏಕೆಂದರೆ ಒಬ್ಬನಿಗೆ ಎರಡೂ ಕೈಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿಯೇ ಇಲ್ಲ. ಆದರೂ ತಾವು ಯೋಜಿಸಿದ ಕೆಲಸದಲ್ಲಿ ಮುಂದುವರೆಯಲು ಕಾರ್ಯತತ್ಪರರಾದರು.
    ಸಾದನೆಯ ಹಾದಿ : ಇವರ ಸಾಧನೆಯ ಹಾದಿ ಕುತೂಹಲವಾದುದು. ಪ್ರತಿದಿನ ಬೆಳಿಗ್ಗೆ 7:00 ಗಂಟೆಗೆ ಇಬ್ಬರೂ ಮನೆಯಿಂದ ತಮ್ಮ ಕಾರ್ಯಕ್ಷೇತ್ರಕ್ಕೆ ಹೊರಡುತ್ತಿದ್ದರು. ವೇಗವಾಗಿ ಹರಿಯುವ ನದಿಯ ಉದ್ದಕ್ಕೂ ವ್ಯಾನ್ಗಿ ತನ್ನ ಕುರುಡು ಒಡನಾಡಿ ಹೈಕ್ಸಿಯಾನನ್ನು ಕರೆದೊಯ್ಯುತ್ತಿದ್ದ.
    ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಸಿಗಳನ್ನು ನೆಡಲು ನಿರ್ಧರಿಸಿದ್ದೇನೋ ಸರಿ. ಸಸಿಗಳನ್ನು ಖರೀದಿಸಲು ಹಣವೂ ಇರಲಿಲ್ಲ. ಆದರೆ ಸಾಧಿಸುವ ಛಲಕ್ಕೆ ಕೊರತೆ ಇರಲಿಲ್ಲ. ಮರಗಳಿಂದ ಟೊಂಗೆಗಳನ್ನು ಕತ್ತರಿಸಿ ಅವುಗಳಿಂದ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡರು. ಇದು ಸುಲಭದ ಕೆಲಸವಾಗಿರಲಿಲ್ಲ. ಯಾಕೆಂದರೆ ಅವರಿಬ್ಬರೂ ಅಂಗವಿಕಲರಾಗಿದ್ದರು. ಆದರೂ ದೃತಿಗೆಡದೇ ತಮ್ಮ ತಮ್ಮ ಕೌಶಲ್ಯಗಳನ್ನು ಒಟ್ಟುಗೂಡಿಸಿ ಕಾರ್ಯನಿರತರಾದರು.
    ಹೈಕ್ಸಿಯಾ ತನ್ನ ಒಡನಾಡಿ ವ್ಯಾನ್ಗಿಯ ಹೆಗಲೇರಿ ಅಲ್ಲಿಂದ ನಿಧಾನವಾಗಿ ಮರಗಳನ್ನು ಏರುತ್ತಿದ್ದ. ವ್ಯಾನ್ಗಿಯ ಮಾರ್ಗದರ್ಶನದಂತೆ ಮರದ ಗೆಲ್ಲುಗಳನ್ನು ಕತ್ತರಿಸುತ್ತಿದ್ದ. ನಂತರ ವ್ಯಾನ್ಗಿಯ ಮಾರ್ಗದರ್ಶನದಂತೆ ಗುಂಡಿ ಅಗೆದು ಸಸಿಗಳನ್ನು ನೆಡುತ್ತಿದ್ದ. ಇಬ್ಬರೂ ಜೊತೆಗೂಡಿ ನದಿನೀರನ್ನು ತರುತ್ತಿದ್ದರು ಮತ್ತು ಗಿಡಗಳಿಗೆ ನೀರು ಹಾಕುತ್ತಿದ್ದರು. ಪ್ರಾರಂಭದ ವರ್ಷ ಕೇವಲ ಗಿಡನೆಡುವ ಕಾರ್ಯದಲ್ಲೇ ಕಳೆಯಿತು. ನಂತರದ ವರ್ಷಗಳಲ್ಲಿ ಅವುಗಳ ಪಾಲನೆ ಪೋಷಣೆ ಮಾಡಿದರು. ಇದು ಸಂಪೂರ್ಣವಾಗಿ ನಿಧಾನವಾಗಿ ನಡೆಯುವ ಕೆಲಸವಾಗಿತ್ತು. ಇವರಿಬ್ಬರ ಬಗ್ಗೆ ಕೇಳುವುದು, ತಿಳಿಯುವುದು, ಓದುವುದು, ಬರೆಯುವುದು ತುಂಬಾ ಸುಲಭ. ಆದರೆ ಇವರು ಮಾಡಿದ ಕಾರ್ಯ ಸುಲಭಾವಾದುದು ಆಗಿರಲಿಲ್ಲ. ಏಕೆಂದರೆ ಇವರಲ್ಲಿ ಒಬ್ಬನಿಗೆ ಎರಡೂ ಕಣ್ಣುಗಳಿಲ್ಲ, ಇನ್ನೊಬ್ಬನಿಗೆ ಎರಡೂ ಕೈಗಳಿಲ್ಲ ಎಂಬುದನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಲೇಬೇಕು. ಇದನ್ನೇ ಜಿಯಾ ಹೈಕ್ಸಿಯಾ ಹೀಗೆ ಹೇಳುತ್ತಾನೆ. “ಅವನು ನನಗೆ ಕಣ್ಣುಗಳಾದ. ನಾನು ಅವನಿಗೆ ಕೈಗಳಾದೆ” ತುಂಬಾ ಅರ್ಥಗರ್ಭಿತವಾದ ಮಾತಲ್ಲವೇ? ಸಾಮಾನ್ಯ ಜನರು ತಮ್ಮ ಇಡೀ ಜೀವಮಾನದಲ್ಲಿ ಮಾಡಲಾಗದ ಸಾಧನೆಯನ್ನು ಇವರಿಬ್ಬರೂ ಕೇವಲ 10-12 ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅದೂ ಪ್ರಸ್ತುತ ದಿನಗಳಿಗೆ ಪೂರಕವಾದ ಗಿಡಮರ ಬೆಳೆಸುವ ಕಾರ್ಯದಲ್ಲಿ.
    ಪರಿಸರಕ್ಕೆ ಜೈ! ರಕ್ಷಣೆಗೆ ಸೈ! : ಇವರಿಬ್ಬರ 10 ವರ್ಷಗಳ ಸತತ ಪರಿಶ್ರಮ ಇಂದು ಸಾರ್ಥಕವಾಗಿದೆ. ಆ ಪ್ರದೇಶ ಕೇವಲ ಮರಗಿಡಗಳಿಂದ ಕೂಡಿಲ್ಲ. ಅದೊಂದು ವನವಾಗಿ ಮಾರ್ಪಟ್ಟಿದೆ. ಫಲಭರಿತ ಹಣ್ಣು ಹಂಪಲಗಳ ತೋಟವಾಗಿದೆ. ಸಾವಿರಾರು ಪಕ್ಷಿಗಳ ಆಶ್ರಯತಾಣವಾಗಿದೆ. ಅಷ್ಟೇ ಅಲ್ಲ, ನದಿ ಪ್ರವಾಹದಿಂದ ಹಳ್ಳಿಯನ್ನು ರಕ್ಷಿಸುವ ರಕ್ಷಣಾ ಗೋಡೆಯಾಗಿದೆ ಎನ್ನುತ್ತಾರೆ ಅಲ್ಲಿನ ಸ್ಥಳಿಯರು. ಇವರ ಪ್ರಾರಂಭಿಕ ವರ್ಷಗಳ ಕೆಲಸ ನೋಡಿದ ಸ್ಥಳೀಯ ಸರಕಾರ ಇವರಿಂದ ಭೂಮಿ ಗುತ್ತಿಗೆಯ ಹಣ ಪಡೆಯದೇ ಸಹಾಯದ ಅಭಯ ನೀಡಿ ಗೌರವಿಸಿತ್ತು.
    ಒಂದು ಸಾದಾರಣ ಆದಾಯದ ಆಶಯದೊಂದಿಗೆ ಮೀಸಲಿಟ್ಟ ಅಂದಿನ ಕೆಲಸದ ದಿನಗಳು ಇಂದು ಬಹುದೊಡ್ಡ ಆದಾಯದ ಮೂಲಗಳಾಗಿವೆ. ಅದು ಕೇಲವ ದೇಶಕ್ಕಲ್ಲ. ಇಡೀ ಪ್ರಪಂಚಕ್ಕೆ ಮಾದರಿಯಾದ ಆದಾಯದ ಮೂಲ. ಬೆಲೆಕಟ್ಟಲು ಸಾಧ್ಯವಾಗದ ಪರಿಸರ ಪ್ರಜ್ಞೆಯ ಮೌಲ್ಯ. ಪ್ರಾಣಿ ಸಂಕುಲಗಳ ಉಸಿರಾಟಕ್ಕೆ ಬೇಕಾದ ಸ್ವಚ್ಚ ಹಾಗೂ ಶುದ್ದ ಗಾಳಿಯ ಮೌಲ್ಯಗಳಾಗಿವೆ. ಕಣ್ಣು ಕೈಗಳಿದ್ದೂ ಅಂಗವಿಕಲರಂತಾದ ನಮಗೆಲ್ಲಾ ಇವರಿಬ್ಬರ ಜೀವನ ಆದರ್ಶಪ್ರಾಯವಾದುದು. ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಲು ಇವರಿಂದ ಮತ್ತೆ ನಮಗೆ ಕಣ್ಣು ಕೈಗಳು ಬರಲಿ!. ಇಬ್ಬರಿಗೂ ನಮ್ಮ ಕೋಟಿ ಕೋಟಿ ನಮನಗಳು.
ಇಬ್ಬರೂ ಅಂಗವಿಕಲರಾದದ್ದು ಸೋಜಿಗ : 53 ವರ್ಷದ ಜಿಯಾ ವ್ಯಾನ್ಗಿ ಮೂರು ವರ್ಷದ ಬಾಲಕನಿದ್ದಾಗ ಆದ ಅಫಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ.  ಅದೇ ರೀತಿ 53 ವರ್ಷದ ಜಿಯಾ ಹೈಕ್ಸಿಯಾ ಜನ್ಮಜಾತ ದೃಷ್ಟಿದೋಷ ಹೊಂದಿದ್ದ. ಎಡಗಣ್ಣು ಸಂಪೂರ್ಣವಾಗಿ ದೃಷ್ಟಿಹೀನವಾಗಿತ್ತು. ಬಲಗಣ್ಣಿನ ಮಂದ ದೃಷ್ಟಿಯಿಂದಲೇ ಜೀವನ ಸಾಗಿತ್ತು. ಆದರೆ 2000ನೇ ಇಸ್ವಿಯಲ್ಲಿ ಬಲಗಣ್ಣಿನ ದೃಷ್ಟಿಯೂ ಸಹ ನಿಂತುಹೋಯಿತು. ಸಂಪೂರ್ಣ ಅಂಧತ್ವ ಆವರಿಸಿತು. ಇಬ್ಬರೂ ವಿಕಲಾಂಗತೆಯ ದುರದೃಷ್ಟತೆಯಿಂದ ಸುರಕ್ಷಿತ ಉದ್ಯೋಗದಿಂದ ವಂಚಿತರಾದರು. ಆ ದುರದೃಷ್ಟವನ್ನೇ ಅದೃಷ್ಟವನ್ನಾಗಿಸಿಕೊಂಡರು.


                                                                                                            ಆರ್.ಬಿ.ಗುರುಬಸವರಾಜ

No comments:

Post a Comment