September 11, 2015

ಜೀವನ ಪರೀಕ್ಷೆ

ಸೆಪ್ಟಂಬರ್ 2015ರ 'ಹೊಸತು' ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಕತೆ.

                    ಜೀವನ ಪರೀಕ್ಷೆ  (ಸತ್ಯಕ್ಕೆ ಒಂಚೂರು ಬಣ್ಣ)

    ಅಂದು ಬೈಕ್‍ನಲ್ಲಿ ಶಾಲೆಗೆ ಹೊರಟ ನನಗೆ 7ನೇ ತರಗತಿ ಓದುತ್ತಿರುವ ಸುಮಿತ್ರ ಕೈಯಲ್ಲಿ ಬುತ್ತಿ ಹಿಡಿದು ಎದುರಿಗೆ ಬಂದಳು. ನನ್ನನ್ನು ನೋಡಿದ್ದೇ ತಡ ರಸ್ತೆ ಬಿಟ್ಟು ಹೊಲಗಳಲ್ಲಿ ಓಡತೊಡಗಿದಳು. ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಅವಳ ಹಿಂದೆ ನಾನೂ ಓಡುವ ಪ್ರಯತ್ನ ಮಾಡಿದೆ. ಆದರೆ ಅವಳನ್ನು ಹಿಡಿಯುವುದು ಸಾಧ್ಯವಿರಲಿಲ್ಲ. ರಸ್ತೆಯಲ್ಲಿ ಸಂಚರಿಸುವವರೆಲ್ಲ ಇದನ್ನು ತಮಾಷೆಯಾಗಿ ನೋಡುತ್ತಿದ್ದರು. ಒಂದು ಕ್ಷಣ ನನಗೆ ನಾಚಿಕೆ ಎನಿಸಿತು.
    “ಯಾಕ್ರೀ ಮೇಷ್ಟ್ರೇ, ಅವಳ ಹಿಂದೆ ಓಡ್ತೀರಾ?” ಎಂದು ಯಾರೋ ಪ್ರಶ್ನಿಸಿದರು. ಏನು ಹೇಳಬೇಕೋ ತೋಚಲಿಲ್ಲ.
    ಕೊನೆಗೂ ದೈರ್ಯ ಮಾಡಿ “ನೋಡ್ರೀ ಇವಳು ಕಳೆದ ಎರಡು ತಿಂಗಳಿಂದ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಒಂದು ದಿನ ಬಂದರೆ ಒಂದು ವಾರ ಶಾಲೆಗೆ ಬರೋದಿಲ್ಲ. ಕಾರಣ ಕೇಳಿದರೆ ಏನೋ ಒಂದು ನೆಪ ಹೇಳಿ ನುಣುಚಿಕೊಳ್ತಾಳೆ” ಎಂದೆ.
    “ಅದ್ಕ್ಯಾಕೆ ಅವ್ಳ ಹಿಂದೆ ಓಡ್ಬೇಕು. ಅವ್ಳ ಅಪ್ಪನಿಗೆ ಹೇಳಿದ್ರೆ ಕಳಿಸ್ತಾನೆ. ಇಲ್ಲಾಂದ್ರೆ ನಾವೇ ಹೇಳಿ ಕಳ್ಸೋ ವ್ಯವಸ್ಥೆ ಮಾಡ್ತೀವಿ, ನೀವೀಗ ಹೊಂಡ್ರಿ” ಎಂದರು ಅಲ್ಲಿದ್ದವರಲ್ಲಿ ಒಬ್ಬರು.
    “ಅವ್ಳ ಅಪ್ಪಂಗೆ ಹೇಳಿ ಹೇಳಿ ಸಾಕಾಯ್ತು ಬಿಡ್ರಿ. ಈಗ ನೀವ ಏನಾರ ಹೇಳಿ ಕಳಿಸಬೇಕು ನೋಡ್ರೀ. ನಿಮಗೆ ಪುಣ್ಯ ಬರುತ್ತೆ. ಹೆಣ್ಣು ಮಗು. ಓದಿ ನಾಲ್ಕಕ್ಷರ ಕಲಿತರೆ ಮುಂದೆ ಒಳ್ಳೇದಾಗುತ್ತೆ” ಎಂದು ಉಪದೇಶ ನೀಡಿ ಬೈಕನ್ನೇರಿ ಶಾಲೆಗೆ ಹೊರಟೆ.
    ಅಲ್ಲಿದ್ದವರೆಲ್ಲಾ ಹೇಳಿದ್ದರಿಂದಲೋ ಏನೋ ಮರುದಿನ ಅಂಜುತ್ತಾ, ಅಳುಕುತ್ತಾ ಶಾಲೆಗೆ ಬಂದ ಸುಮಿತ್ರಳನ್ನು ಪ್ರೀತಿಯಿಂದ ಸ್ವಾಗತಿಸಿದೆ. ಆದರೂ ಅವಳ ಮನದ ಮೂಲೆಯಲ್ಲಿ ಭಯ, ಆತಂಕಗಳು ಮನೆ ಮಾಡಿದ್ದನ್ನು ಗಮನಿಸಿದೆ. ತರಗತಿಯಲ್ಲಿ ಹಾಜರಿ ಹೇಳಿದ ನಂತರ ಹಾಗೆಯೇ ನಿಂತುಕೊಂಡಳು. ಶಾಲೆ ಬಿಟ್ಟಿದ್ದಕ್ಕೆ ಕಾರಣ ಕೇಳಿ ಎಲ್ಲಾ ಮಕ್ಕಳೆದುರು ಅವಮಾನ ಮಾಡುತ್ತಾರೆ ಎಂಬ ಭಯ ಆವರಿಸಿತ್ತು. ಆ ಬಗ್ಗೆ ಏನೂ ಕೇಳದೇ ಕುಳಿತುಕೊಳ್ಳಲು ಹೇಳಿದಾಗ ಅವಳಿಗೆ ಕೊಂಚ ಧೈರ್ಯ ಬಂದಿತ್ತು. ತರಗತಿ ಮುಗಿಸಿದ ನಂತರ ಸುಮಿತ್ರಳಿಗೆ, ವಿರಾಮ ವೇಳೆಯಲ್ಲಿ ಸಿಬ್ಬಂದಿ ಕೊಠಡಿಗೆ ಬರಲು ಹೇಳಿ ವಾಪಾಸಾದೆ.
    ಅಲ್ಪವಿರಾಮದ ಘಂಟೆ ಬಾರಿಸಿತು. ಸುಮಿತ್ರಳ ಬರುವನ್ನು ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಯಿತು. ಅವಳು ಬರಲಿಲ್ಲ. ನನ್ನಲ್ಲಿ ಚಡಪಡಿಕೆ ಶುರುವಾಯಿತು. ಇದನ್ನು ಗಮನಿಸಿದ ಮುಖ್ಯಗುರುಗಳು ನನ್ನ ಚಡಪಡಿಕೆಗೆ ಕಾರಣ ಕೇಳಿದರು. ವಿಷಯವನ್ನು ವಿವರಿಸಿದೆ. ಅವರೂ ಕೂಡಾ ಅವಳನ್ನು ವಿಚಾರಿಸುವ ಬಗ್ಗೆ ಮನಸ್ಸು ಮಾಡಿದರು ಮತ್ತು ಬೇರೆ ವಿದ್ಯಾರ್ಥಿಗಳಿಂದ ಅವಳನ್ನು ಬರ ಹೇಳಿದರು.
    ಮುಖ್ಯಗುರುಗಳ ಕರೆ ಎಂದೊಡನೆ ಅಂಜುತ್ತಾ ಮೆಲ್ಲನೆ ಬಾಗಿಲ ಬಳಿ ಬಂದು ‘ಮೆ ಕಮಿನ್ ಸರ್’ ಎಂದಳು. ‘ಎಸ್’ ಎಂದೆ. ಒಳಗೆ ಬಂದಳು. ಮುಖದಲ್ಲಿ ಭಯ, ಆತಂಕ, ತಪ್ಪಿತಸ್ಥ ಭಾವನೆಗಳು ತುಂಬಿಕೊಂಡಿದ್ದವು.
    “ಯಾಕೆ ನೀನು ಸರಿಯಾಗಿ ಶಾಲೆಗೆ ಬರುತ್ತಿಲ್ಲ?” ಎಂಬ ಮುಖ್ಯಗುರುಗಳ ಪ್ರಶ್ನೆಯಿಂದ ಬೆಚ್ಚಿದಳು. ಉತ್ತರಿಸಲು ತತ್ತರಿಸುತ್ತಿದ್ದಳು. ಅವಳಿಗೆ ಧೈರ್ಯ ನೀಡಲೇಬೇಕೆಂದು ನಿರ್ಧರಿಸಿ “ಅಲ್ಲಮ್ಮಾ ಕಲಿಯಲು ನಿನಗೆ ಏನಾದರೂ ತೊಂದರೆ ಇದೆಯಾ? ಅಥವಾ ಪಾಠ ಅರ್ಥವಾಗುತ್ತಿಲ್ಲವೋ? ಏನು ಸಮಾಚಾರ” ಎಂದು ಪ್ರಶ್ನಿಸಿದೆ. ಅದ್ಯಾವುದೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು.
    “ಮನೆಯಲ್ಲಿ ಏನಾದರೂ ತೊಂದರೆ ಇದೆಯಾ?” ಎಂದು ಪ್ರಶ್ನಿಸಿದ್ದೇ ತಡ ಅವಳ ಕಣ್ಣೀರಿನ ಕಟ್ಟೆ ಒಡೆದೇ ಹೋಯಿತು. ಗೊಳೋ ಎಂದು ಅಳಲು ಶುರುಮಾಡಿದಳು.
    “ಏನಾಯ್ತು, ಯಾಕೆ ಅಳ್ತೀಯಮ್ಮಾ” ಎಂದು ಮುಖ್ಯಗುರುಗಳು ಕೇಳಿದಷ್ಟೂ ಅವಳ ಅಳು ಹೆಚ್ಚಾಯಿತೇ ಹೊರತು ಕಾರಣ ಏನೆಂದು ಹೇಳಲಿಲ್ಲ. ಅಸ್ಟೊತ್ತಿಗೆ ಮಹಿಳಾ ಶಿಕ್ಷಕಿಯರೂ  ಬಂದರು. ಅವರಿಗೂ ಏನೊಂದೂ ಅರ್ಥವಾಗದ ಆಶ್ಚರ್ಯ. ಅತ್ತೂ ಅತ್ತೂ ಮನದೊಳಗಿನ ಭಾರ ಕಡಿಮೆಯಾದಂತಾಯ್ತು. ಅಳು ನಿಧಾನವಾಗಿ ಮಾತಿನ ಸ್ವರೂಪ ಪಡೆದುಕೊಂಡಿತು. ಅವಳ ಅಂತರಂಗದ ಕಥೆ ಬಿಚ್ಚಿಕೊಂಡಿತು.
    “ಸಾರ್, ನಿಮಗೆಲ್ಲಾ ತಿಳಿದ್ಹಾಂಗೆ ನಮ್ಮಪ್ಪ ನಮ್ಮವ್ವಂಗೆ ನಾವು ನಾಲ್ಕು ಜನ ಮಕ್ಳು. ಅದ್ರಾಗ ನಾನ ದೊಡ್ಡವಳು. ನಮ್ಮಪ್ಪ ಮೂಗ. ನಮ್ಮವ್ವನೇ ನಮಗೆಲ್ಲಾ ದಿಕ್ಕು ದೆಸೆ ಆಗಿದ್ದಳು. ಆದರೆ ಕಳೆದ ಮೂರು ವರ್ಷಗಳ ಆದ ಟ್ರ್ಯಾಕ್ಟರ್ ಆಕ್ಸಿಡೆಂಟ್‍ನಲ್ಲಿ ನಮ್ಮವ್ವ ಸತ್ತುಹೋದಳು. ನಮಗೆಲ್ಲಾ ಆಸರೆಯಾಗಿದ್ದ ನಮ್ಮವ್ವ ಸತ್ತು ಹೋದಾಗಿಂದ ನಮ್ಮಪ್ಪನೂ ಸರ್ಯಾಗಿ ದುಡೀತಿಲ್ಲ. ನನ್ನ ಇಬ್ಬರು ತಂಗಿ ಒಬ್ಬ ತಮ್ಮನನ್ನು ಸಾಕೋರು ಯಾರೂ ಇಲ್ಲ ಸಾರ್. ಅದ್ಕಾಗಿ ನಾನೇ ಕೂಲಿ ಮಾಡ್ತಾ ಇದ್ದೀನಿ. ನನ್ನ ಹಣೆ ಬರಹದಲ್ಲಿ ಓದೋದು ಬರ್ದಿಲ್ಲ ಅಂತ ಕಾಣ್ತದ. ಕೊನೆಗೆ ನನ್ನ ತಮ್ಮ ತಂಗಿಯಂದಿರಾದ್ರೂ ಓದ್ಲಿ ಅಂತ ಅವ್ರನ್ನ ಸಾಲಿಗೆ ಕಳಿಸ್ತೀನಿ. ನಿನ್ನೆ ನೀವು ನನ್ನನ್ನ ಹಿಂಬಾಲ ಹತ್ತಿದ್ದ ನೋಡಿ ನನಗೂ ವಿಷಯ ತಿಳಿಸಲೇಬೇಕು ಅಂತ ಅನ್ನಿಸ್ತು. ಅದ್ಕ ಇವತ್ತು ಸಾಲಿಗೆ ಬಂದೀನಿ. ನಾಳೆ ಮತ್ತೆ ನಾನು ಕೂಲಿ ಕೆಲ್ಸಕ್ಕೆ ಹೋಗಲೇಬೇಕು. ಇಲ್ಲಾಂದ್ರ ನಮ್ಮ ಜೀವ್ನ ನಡೆಯೋದಿಲ್ಲ” ಎಂದು ತನ್ನ ಗಟ್ಟಿ ನಿರ್ಧಾರವನ್ನು ಹೇಳಿಯೇಬಿಟ್ಟಳು.
    ತಾಯಿ ಸತ್ತ ಸುದ್ದಿಯನ್ನಷ್ಟೇ ತಿಳಿದಿದ್ದ ನಮಗೆ ತಂದೆ ಸರಿಯಾಗಿ ದುಡಿಯುತ್ತಿಲ್ಲ, ಮಕ್ಕಳನ್ನು ಕಾಪಾಡುತ್ತಿಲ್ಲ ಎಂಬ ವಿಷಯ ನಮ್ಮನ್ನು ವಿಚಲಿತರನ್ನಾಗಿಸಿತು.
    “ಅಲ್ಲಮ್ಮ, ನಿಮ್ಮವ್ವ ಸತ್ತು ಮೂರು ವರ್ಷಾತು. ಆಗಿನಿಂದಲೂ ಸರಿಯಾಗಿ ಶಾಲೆಗೆ ಬರುತ್ತಿದ್ದಾಕಿ ಈಗೇಕೆ ಸರಿಯಾಗಿ ಬರುತ್ತಿಲ್ಲ?” ಎಂದರು ಶಿಕ್ಷಕರೊಬ್ಬರು.
    “ಹೌದು ಸಾರ್, ಆಗ ನಾನು ಧಣ್ಯರ ಮನ್ಯಾಗ ಕೆಲಸಕ್ಕೆ ಹೋಕಿದ್ದೆ. ದಿನಾಲೂ ಬೆಳಿಗ್ಗೆ ಮತ್ತು ಸಂಜೆ ಅವರ ಮನೆ ಕೆಲಸ ಮಾಡ್ತಿದ್ದೆ. ಸಾಲಿ ಟೈಮ್ನಾಗ ಮಾತ್ರ ಸಾಲಿಗೆ ಬರ್ತಿದ್ದೆ. ಅವ್ರು ಕೊಡೋ ಕೂಲಿಯಿಂದ ಹೆಂಗೋ ಜೀವನ ನಡೀತಿತ್ತು. ಆದ್ರ,,,, ಅವತ್ತೊಂದಿನ ಧಣ್ಯರ ಮನ್ಯಾಗ ಅವ್ರ ಪರ್ಸ ಕಳುವಾತು. ಅವ್ರೆಲ್ರಿಗೂ ನನ್ನ ಮ್ಯಾಲೆ ಅನುಮಾನ ಬಂತು. ಎಲ್ರೂ ನನ್ನನ್ನ ವಿಚಾರಿದ್ರು. ನೀನೇ ಕಳ್ಳಿ ಅಂದ್ರು. ನನ್ನ ಹೊಡೆಯೋಕೂ ಪ್ರಯತ್ನ ಮಾಡಿದ್ರು. ಅಲ್ಲಿಂದ ನಾನು ತಪ್ಸಿಕೊಂಡು ಮನೆ ಸೇರಿದೆ. ಆಮ್ಯಾಲೆ ನಮ್ಮಪ್ಪನ್ನ ಕರೆಸಿ ವಿಚಾರಿದ್ರು ಅಂತ ಗೊತ್ತಾತು. ಆತ ಮೊದ್ಲೇ ಮೂಗ, ಅದೇನೋ ಹೇಳಿದ್ನೋ ಏನೋ? ನಾನು ಮತ್ತೆ  ಅವ್ರ ಮನೆ ಕಡೆ ಸುಳಿಲಿಲ್ಲ. ನನಗೆ ಹಣದ ಅವಶ್ಯಕತೆ ಇತ್ತು ನಿಜ. ಆದರೆ ಕಳ್ಳತನ ಮಾಡಿ ಹಣ ಸಂಪಾದ್ಸೋ ಕೆಟ್ಟ ಬುದ್ದ ಇರ್ಲಿಲ್ಲ. ಮತ್ತೆ ನಾನು ಕೂಲಿ ಹುಡುಕಿ ಹೊರಟೆ. ಮೊದಮೊದ್ಲು ಸಣ್ಣವಳು ಅಂತ ಯಾರೂ ನನ್ನ ಕೆಲಸಕ್ಕೆ ಸೇರಿಸ್ಕೊಳಿಲ್ಲ. ಯಾರೋ ಒಬ್ಬ ಪುಣ್ಯಾತ್ಮ ನನ್ನ ಪರಿಸ್ಥಿತಿ ತಿಳಿದು ಕೆಲಸಕ್ಕೆ ಸೇರಿಸಿಕೊಂಡ್ರು. ಈಗ ಕೂಲಿನೇ ನನ್ಗೆ ಗತಿ” ಎಂದು ತನ್ನ ಬದುಕಿನ ಹೋರಾಟವನ್ನು ನಮ್ಮ ಮುಂದೆ ಇಟ್ಟಳು.
    “ನೀನು ನಿಜವಾಗ್ಲೂ ಪರ್ಸ ಕದ್ದಿದ್ಯಾ? ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದರು.
    “ಇಲ್ಲ ಮೇಡಂ, ಅದನ್ನ ಬೇರೆ ಇನ್ನೊಬ್ರು ಕದ್ದಿದ್ರಂತೆ. ಒಂದು ವಾರದ ನಂತರ ವಿಷಯ ಗೊತ್ತಾತಂತೆ. ಆಮೇಲೆ ಅವ್ರು ನಮ್ಮನಿಗೆ ಬಂದು ‘ಪರ್ಸ ಕದ್ದಿದ್ದು ನೀನಲ್ಲ. ಬೇರೆಯವ್ರು ಅಂತ ಗೊತ್ತಾತು. ಸುಮ್ನೆ ನಿನ್ನ ಮ್ಯಾಲೆ ಅನುಮಾನ ಪಟ್ವಿ, ನಿನ್ಗೆ ತೊಂದ್ರೆ ಕೊಟ್ವಿ. ನೀನು ತುಂಬಾ ಒಳ್ಳೇ ಹುಡುಗಿ. ಪುನಃ ನಮ್ಮನಿ ಕೆಲಸಕ್ಕೆ ಬಾ’ ಅಂತ ಕರೆಯೋಕೆ ಬಂದ್ರು. ನನಗೂ ರೋಷ, ಕಿಚ್ಚು, ಸ್ವಾಭಿಮಾನ ಅನ್ನೋದು ಇತ್ತು. ಅದ್ಕಾಗಿ ನಾನು ಖಂಡಿತವಾಗಿ ಬರೋದಿಲ್ಲ ಅಂತ ಹೇಳಿ ಕಳ್ಸಿದೆ. ನಾನು ಮಾಡಿದ್ದು ತಪ್ಪಾ! ಹೇಳ್ರೀ ಮೇಡಂ? ಎಂದಳು.
    ಅವಳ ಮಾತುಗಳಲ್ಲಿ ದಿಟ್ಟತನವಿತ್ತು. ಕಂಗಳಲ್ಲಿ ಅವಮಾನದ ಪ್ರತೀಕಾರ ಇತ್ತು. ಸಾಧಿಸುವ ಛಲವಿತ್ತು. ಚಿಕ್ಕ ವಯಸ್ಸಿನಲ್ಲಿ ಅವಳು ಅನುಭವಿಸಿದ ಅವಮಾನ, ಯಾತನೆÀ, ಹೋರಾಟ, ತಮ್ಮ ತಂಗಿಯರ ಭವಿಷ್ಯದ ಕಾಳಜಿ, ಇವುಗಳ ಮುಂದೆ ನಾವು ಕುಬ್ಜರಾದೆವು. ಆದರೂ ಅವಳ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು.
    ಅದಕ್ಕಾಗಿ “ಏನಾದರೂ ಆಗಲಿ, ಈಗ ಪರೀಕ್ಷೆಗಳು ಸಮೀಪಿಸುತ್ತಿವೆ. ಕೊನೆಗೆ ಪರೀಕ್ಷೆಗಾದ್ರೂ ಹಾಜರಾಗು” ಎಂದರು ತರಗತಿ ಶಿಕ್ಷಕರು.
    “ಸಾರ್, ಪರೀಕ್ಷೆ ಬರೆಯೋಕೆ ನನ್ನ ತಲೇಲಿ ಈಗ ಏನೂ ಉಳಿದಿಲ್ಲ. ಏನಂತ ಬರೀಲಿ” ಎಂದಳು.
    “ನೀನು ಏನೂ ಬರೀದಿದ್ರೂ ಚಿಂತೆಯಿಲ್ಲ. ಪರೀಕ್ಷೆಗೆ ಹಾಜರಾದ್ರೆ ಸಾಕು. ನಿನ್ನ ಪಾಸ್ ಮಾಡೋ ಜವಾಬ್ದಾರಿ ನಮ್ದು” ಎಂದರು ಮುಖ್ಯಗುರುಗಳು. ಏಕೆಂದರೆ ಅವಳು ಹೆಣ್ಣು ಮಗುವಾಗಿದ್ದು ಶಿಕ್ಷಣದಿಂದ ವಂಚಿತಳಾಗಬಾರದು ಎಂಬುದು ಅವಳ ಕಾಳಜಿಯಾಗಿತ್ತು.
    “ಇಲ್ಲ ಸಾರ್, ನಾನು ಈ ಪರೀಕ್ಷೆ ಪಾಸು ಮಾಡಿ ಏನು ಮಾಡ್ಬೇಕು? ಸದ್ಯ ನನ್ಗೆ ಜೀವನವೇ ಒಂದು ದೊಡ್ಡ ಪರೀಕ್ಷೆ. ಅದ್ರಲ್ಲಿ ನಾನು ಪಾಸಾಗಲೇ ಬೇಕು. ನನ್ನ ತಮ್ಮ ತಂಗಿಯರ ಭವಿಷ್ಯವನ್ನು ಉತ್ತಮ ಪಡಿಸಲೇಬೇಕು. ಇದಕ್ಕೆ ನಿಮ್ಮ ಸಹಕಾರ ನನ್ಗೆ ಬೇಕು. ದಯವಿಟ್ಟು ಈಗ ನನ್ಗೆ ಹೋಗಲು ಅಪ್ಪಣೆ ಕೊಡಿ” ಎಂದು ತನ್ನ ನಿರ್ಧಾರವನ್ನು ತಿಳಿಸಿದಳು.
    ಸದ್ಯ ಅವಳಿಗೆ ಔಪಚಾರಿಕ ಶಿಕ್ಷಣ ಬೇಕಿರಲಿಲ್ಲ. ಅಗಾಧ ಬದುಕಿನ ಅನೌಪಚಾರಿಕ ಶಿಕ್ಷಣದ ಅವಶ್ಯಕತೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ತಂಗಿಯರ ಭವಿಷ್ಯದ ಕನಸನ್ನು ಸಾಕಾರಗೊಳಿಸಬೇಕಾಗಿತ್ತು. ಅವಳ ನಿರ್ಧಾರ ಬದಲಿಸಲು ಶಿಕ್ಷಕರಿಂದಾಗಲೀ ವ್ಯವಸ್ಥೆಯಿಂದಾಗಲೀ ಸಾಧ್ಯವಿರಲಿಲ್ಲ. ಏಕೆಂದರೆ ಅವಳ ನಿರ್ಧಾರ ಅಚಲವಾಗಿತ್ತು.
                                                                                               ಆರ್.ಬಿ.ಗುರುಬಸವರಾಜ

No comments:

Post a Comment