September 11, 2015

ಯುವ ಪಕ್ಷಿಪ್ರೇಮಿ

ಸೆಪ್ಟಂಬರ್ 2015ರ 'ಶಿಕ್ಷಣವಾರ್ತೆ'ಯಲ್ಲಿ ಪ್ರಕಟವಾದ ನನ್ನ ಲೇಖನ.

ಯುವ ಪಕ್ಷಿಪ್ರೇಮಿ ವಿಜಯ್ ಇಟ್ಟಿಗಿ


ಬಳ್ಳಾರಿ ಎಂದೊಡನೆ ನಿಮ್ಮ ಕಣ್ಮುಂದೆ ಹಾಯುವುದು ಗಣಿಯ ದೂಳು ಮಾತ್ರ. ಗಣಿ ಕುಖ್ಯಾತಿಗೆ ಹೆಸರುವಾಸಿಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲೀಗ ವಿದೇಶಿ ಹಕ್ಕಿಗಳ ಕಲರವ ಕೇಳುತ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ಪರಿವರ್ತನೆಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣಕರ್ತರೆಂದರೆ 35 ವರ್ಷದ ಯುವಕ ವಿಜಯ್ ಇಟ್ಟಿಗಿಯವರು.
    ವಿಜಯ್ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಕ್ಯಾದಿಗಿಹಳ್ಳಿಯವರು. ಓಡಾಟಕ್ಕೆ ಕಾರು, ವಾಸಕ್ಕೆ ಬಂಗಲೆ, ಮನೋರಂಜನೆಗೆ ಸ್ವಂತ ಚಿತ್ರಮಂದಿರ ಇದ್ದರೂ ಇವರ ಒಲವು ಪರಿಸರ ಸಂರಕ್ಷಣೆಯತ್ತ ತಿರುಗಿದ್ದು ಸೋಜಿಗ. ಕಾನೂನು ಪದವಿ ಪಡೆದ ವಿಜಯ್ ಅವರನ್ನು ಆಕರ್ಷಿಸಿದ್ದು ಪರಿಸರ ಮತ್ತು ಪಕ್ಷಿ ಸಂರಕ್ಷಣೆ. ಇದಕ್ಕೆ ಸ್ಪೂರ್ತಿ ನೀಡಿದ್ದು ತೇಜಸ್ವಿಯವರ ಬರಹಗಳು.
    ತುಂಗಭದ್ರಾ ಆಣೆಕಟ್ಟಿನ ಹಿನ್ನೀರ ಗ್ರಾಮಗಳಾದ ಅಂಕಸಮುದ್ರ, ಹಗರಿಕ್ಯಾದಿಗಿಹಳ್ಳಿ, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ, ಶೀಗನಹಳ್ಳಿ, ಬನ್ನಿಗೋಳ, ಕೃಷ್ಣಾಪುರ, ಬಸರಕೋಡು ಮುಂತಾದ ಗ್ರಾಮಗಳಲ್ಲಿ ಅಲ್ಲೊಂದು ಇಲ್ಲೊಂದು ವಲಸೆ ಹಕ್ಕಿಗಳು ಬರುತ್ತಿದ್ದುದು ಸಾಮಾನ್ಯವಾಗಿತ್ತು. ಇದು ವಿಜಯ್ ಅವರ ಆಸಕ್ತಿಯನ್ನು ಕೆರಳಿಸಿತು. ಈ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ನಿರ್ಮಿಸುವ ವಿಚಾರ ಮೊಳಕೆಯೊಡೆಯಿತು. ಅದಕ್ಕೆ ಅಬ್ದುಲ್ ಸಮದ್ ಕೊಟ್ಟೂರು, ಹುರಕಡ್ಲಿ ಶಿವಕುಮಾರ, ಪೊಂಪಯ್ಯ ಮುಂತಾದವರ ಮಾರ್ಗದರ್ಶನ ಮತ್ತು ಸಹಕಾರದಿಂದ ಯೋಜನೆ ರೂಪಿತವಾಯಿತು. ಪರಿಣಾಮವಾಗಿ ಅಂಕಸಮುದ್ರ ಈಗ ಪಕ್ಷಿಧಾಮವಾಗಿ ರೂಪುಗೊಳ್ಳುತ್ತಿದೆ.
    ಈ ಪ್ರದೇಶ ಪಕ್ಷಿಧಾಮವನ್ನಾಗಿಸಲು ವಿಜಯ್ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅದರ ಫಲವಾಗಿ 178 ಜಾತಿಯ ಸಾವಿರಾರು ಹಕ್ಕಿಗಳು ಇಲ್ಲಿ ಬೀಡುಬಿಟ್ಟಿವೆ. ಅದರಲ್ಲಿ ಅಳಿವಿನಂಚಿಗೆ ಹತ್ತಿರವಾಗುತ್ತಿರುವ 11 ಜಾತಿಯ ಹಕ್ಕಿಗಳು ಮತ್ತು ಅಳಿವಿನಂಚಿನಲ್ಲಿರುವ ಲೆಸ್ಸರ್ ಅಡ್ಜಂಟ್ ಜಾತಿಯ ಹಕ್ಕಿಗಳು ಇಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ.
    ಸುತ್ತಲ ಹತ್ತಾರು ಹಳ್ಳಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಪ್ರಾಣಿ ಪಕ್ಷಿ ಭೇಟೆಯನ್ನು ನಿಲ್ಲಿಸಲು ವಿಜಯ್ ಶ್ರಮಿಸಿದ್ದಾರೆ. ಪ್ರತಿ ಹಳ್ಳಿಯಲ್ಲಿ ಉಪನ್ಯಾಸ, ವಿಚಾರಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಭೇಟೆಯ ಅನಾಹುತಗಳನ್ನು ಮನವರಿಕೆ ಮಾಡುತ್ತಾ ಭವಿಷ್ಯದ ಯೋಜನೆಗೆ ಸಹಕಾರ ಕೋರಿದರು. ಅದಕ್ಕೆ ಗ್ರಾಮಸ್ಥರ ಸ್ಪಂದನೆಯೂ ದೊರೆಯಿತು. ಪ್ರತಿ ಹಳ್ಳಿಯಲ್ಲಿಯೂ ಒಂದೊಂದು ಯುವಕರ ಪಡೆ ಸಿದ್ದವಾಯಿತು. ಪ್ರಾರಂಭದಲ್ಲಿ ಅಂಕಸಮುದ್ರ ಕೆರೆ ಅಭಿವೃದ್ದಿ ಯೋಜನೆ ಕೈಗೆತ್ತಿಕೊಂಡರು. ಸಾವಿರಾರು ಕರಿಜಾಲಿ ಸಸಿಗಳನ್ನು ಬೆಳೆಸಿದರು. ಈಗ ಅವುಗಳೆಲ್ಲಾ ಮರಗಳಾಗಿವೆ. ಈ ಮರಗಳೇ ಪಕ್ಷಿಗಳ ಆಶ್ರಯ ತಾಣಗಳಾಗಿವೆ. ಮಾಹಿತಿ ನೀಡಲು ಇಬ್ಬರು ಸ್ವಯಂ ಸೇವಕರನ್ನು ನೇಮಿಸಿದ್ದು, ಅವರಿಗೆ ತಮ್ಮ ಜೇಬಿನಿಂದ ಕೂಲಿ ನೀಡುತ್ತಿದ್ದಾರೆ.
    ಈ ಹತ್ತಾರು ಹಳ್ಳಿಗಳ ತುಂಗಭದ್ರ ನದಿದಂಡೆಯ ಒಟ್ಟು 214 ಎಕರೆ ಪ್ರದೇಶದಲ್ಲಿ ಮರಬೆಳೆಸುವ ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕಾಗಿ  ಆ ಹಳ್ಳಿಗಳ ಶಾಲಾ ಮಕ್ಕಳಿಂದ ಗಿಡನೆಡಿಸಿ ಅವುಗಳ ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ.
    ತಾಲೂಕಿನ ಅನೇಕ ಶಾಲೆಗಳಿಗೆ ಭೇಟಿನೀಡಿ ಮಕ್ಕಳಿಗೆ ಪಕ್ಷಿಗಳ ಬಗ್ಗೆ, ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ. ಮಧ್ಯೆ ಮಧ್ಯೆ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಪ್ರಶ್ನಿಸುತ್ತಾ ಸರಿ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಾ ಮಕ್ಕಳ ಪ್ರೀತಿಗಳಿಸಿದ್ದಾರೆ.
    ಇವರು ಹೊಸವರ್ಷವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಂದು ಪಂಜರದಲ್ಲಿರುವ ಪಕ್ಷಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಮಕ್ಕಳ ಸಮ್ಮುಖದಲ್ಲಿ ಅದನ್ನು ಬಂಧಮುಕ್ತಗೊಳಿಸಿ ಸಂಭ್ರಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಜಾಗೃತಿಯ ಬೀಜ ಬಿತ್ತುತ್ತಾರೆ. ಜೊತೆಗೆ ಕಾಳಸಂತೆಯಲ್ಲಿ ನಡೆಯುವ ನಕ್ಷತ್ರ ಆಮೆ, ನೀರನಾಯಿ, ಮೊಲ, ಕಾಡುಹಂದಿ, ಚಿಪ್ಪುಹಂದಿ, ಹಾವುಗಳು ಮತ್ತು  ಕೆಲವು ಜಾತಿಯ ಪಕ್ಷಿಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮಾರಾಟವನ್ನು ನಿಲ್ಲಿಸಿದ್ದಾರೆ.
    “ಸ್ಥಳೀಯ ಜನ ಸಮುದಾಯಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದಿದ್ದಲ್ಲಿ ಸಂರಕ್ಷಣೆ ಚಟುವಟಿಕೆಗಳು ಸಾಧ್ಯವಿಲ್ಲ” ಎಂಬುದು ವಿಜಯ್ ಅವರು ಕಂಡುಕೊಂಡ ಸತ್ಯ. ಅದಕ್ಕಾಗಿ ಸರ್ಕಾರದ ಬೆಂಬಲ ಪಡೆಯುವ ಮೊದಲು ಸ್ಥಳೀಯ ಸಮುದಾಯಗಳ ಸಹಕಾರ ಪಡೆದಿದ್ದಾರೆ.
    ‘ಜೀವವೈವಿಧ್ಯ ಸಂರಕ್ಷಣೆ ಬಹುಕಾಲದವರೆಗೆ ಉಳಿಯಬೇಕಾದರೆ ಜೀವ ಪರಿಸರ ಸುರಕ್ಷತೆ ಮತ್ತು ಜೀವನೋಪಾಯ ಪರಿಗಣಿಸಬೇಕು. ಜನಸಮುದಾಯದ ಹಕ್ಕುಗಳನ್ನು ಖಾತ್ರಿಗೊಳಿಸಿದಾಗ ಮಾತ್ರ ಜೀವವೈವಿಧ್ಯ ಉಳಿಸಲು ಸಾಧ್ಯ’ ಎನ್ನುತ್ತಾರೆ ವಿಜಯ್. ಅದಕ್ಕಾಗಿ ಮಕ್ಕಳು ಮತ್ತು ಯುವಕರಿಗೆ ಶಿಕ್ಷಣ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೇಂದ್ರೀಕರಿಸಿದ್ದಾರೆ.
    ಇವರ ಈ ಕಾರ್ಯಕ್ಕೆ  ಕುಟುಂಬ ನೀಡಿದ ಸಹಕಾರವನ್ನು ನೆನೆಯುತ್ತಾರೆ. ಈ ಪ್ರದೇಶಕ್ಕೆ ಅನೇಕ ವಿದೇಶಿ ಪಕ್ಷಿತಜ್ಞರು ಭೇಟಿ ನೀಡಿದ್ದಾರೆ. ಅವರಿಗೆಲ್ಲಾ ವಿಜಯ್ ಮಾರ್ಗದರ್ಶಕರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪಕ್ಷಿ ಗಣತಿಯಲ್ಲಿ ತಜ್ಞರೊಂದಿಗೆ ಭಾಗವಹಿಸಿದ ಅನುಭವವಿದೆ. ಹೀಗಾಗಿ ಸಾವಿರಾರು ಪಕ್ಷಿಗಳ, ಪ್ರಾಣಿಗಳ, ಪರಿಸರದ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಇಷ್ಟೆಲ್ಲಾ ಸಾಧನೆಯ ನಡುವೆಯೂ ಚಿತ್ರಮಂದಿರ ಹಾಗೂ ಜಮೀನಿನ ಹೊಣೆಗಾರಿಕೆಯನ್ನು ತಪ್ಪಿಸಿಕೊಂಡಿಲ್ಲ. ಈ ಎಲ್ಲಾ ಚಟುವಟಕೆಗಳಿಂದ ವಿಜಯ್ ಅವರು ಇಂದಿನ ಯುವಕರಿಗಿಂತ ಭಿನ್ನವಾಗಿದ್ದಾರೆ. ವಿಜಯ್ ಅವರನ್ನು ಸಂಪರ್ಕಿಸಲು 9945296077 ಕ್ಕೆ ಕರೆಮಾಡಿ.
                                                                                                 ಆರ್.ಬಿ.ಗುರುಬಸವರಾಜ.

No comments:

Post a Comment