March 29, 2018

ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ

ದಿನಾಂಕ 20-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ
 




  ಪುರಾಣೇತಿಹಾಸ ಕಾಲದಿಂದಲೂ ಕಲೆ ಮತ್ತು ಸಾಹಿತ್ಯದ ಕಥಾ ವಸ್ತುವಾಗಿರುವ ಚಂದ್ರ ಅಸಂಖ್ಯಾತ ಕೆಲಸಗಳಿಗೆ ಸ್ಪೂರ್ತಿಯಾಗಿದೆ. ಕಥೆ, ಕಾವ್ಯ, ಗದ್ಯ, ಪದ್ಯ, ಸಂಗೀತ, ಕಲೆ ಇತ್ಯಾದಿಗಳ ಸೃಷ್ಟಿಗೆ ಪ್ರೇರಕಾಂಶ. ಲೌಕಿಕ ಮತ್ತು ಅಲೌಕಿಕ ಬದುಕಿನ ಒಂದು ಭಾಗವಾದ ಚಂದ್ರ ಅಬಾಲವೃದ್ದರಿಗೂ ಪ್ರಿಯವಾದ ವಸ್ತು. ಅರಿಸ್ಟಾಟಲ್‍ನಿಂದ ಇಂದಿನವರೆಗೂ ಅಧ್ಯಯನ ವಸ್ತುವಾಗಿರುವ ಚಂದ್ರನ ಬಗ್ಗೆ ಮೊಗೆದಷ್ಟೂ ಕುತೂಹಲ ಕಥನಗಳು ಹುಟ್ಟುತ್ತಲೇ ಇವೆ. ಇದೇನಿದು ಚಂದ್ರನ ಬಗ್ಗೆ ಇಷ್ಟೊಂದು ವರ್ಣನೆ ಎನ್ನುತ್ತೀರಾ? ಇದೇ ಜನವರಿ 31 ಕ್ಕೆ ರಾತ್ರಿ ಬಾನಂಗಳದಲ್ಲಿ ಒಂದು ವಿಸ್ಮಯ ನಡೆಯಲಿದೆ. ಅದೇನೇಂದು ಬಲ್ಲಿರಾ? ಅದೇ ಈ ವರ್ಷದ ಮೊದಲ ಚಂದ್ರಗ್ರಹಣ. ನೀವು ಈಗಾಗಲೇ ಚಂದ್ರಗ್ರಹಣದ ಬಗ್ಗೆ ತಿಳಿದಿರುತ್ತೀರಿ. ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕಿಗೆ ಅಡ್ಡಲಾಗಿ ಭೂಮಿ ಬಂದು ಕೆಲಕಾಲ ಚಂದ್ರನ ಮೇಲೆ ಭೂಮಿಯ ನೆರಳು  ಬೀಳುತ್ತದೆ. ಆಗ ಭೂಮಿಯಲ್ಲಿದ್ದ ಜೀವರಾಶಿಗೆ ಚಂದ್ರ ಕೆಲಕಾಲ ಕಾಣದಂತೆ ಮಾಯವಾಗುತ್ತಾನೆ. ಇದನ್ನೇ ನಾವು ಚಂದ್ರಗ್ರಹಣ ಎಂದು ಶಾಲಾ ಪಠ್ಯದಲ್ಲಿ ಓದಿದ್ದೇವೆ. ಆದರೆ ಜನವರಿ 31ರ ಚಂದ್ರಗ್ರಹಣ ತುಂಬಾ ವಿಶೇಷವುಳ್ಳದ್ದಾಗಿದೆ. ವಿಶೇಷತೆ ಏನು ಅಂತಿರಾ? 
ವಿಶೇಷ ಚಂದ್ರಗ್ರಹಣ : ಇದು ಈ ವರ್ಷದ ಮೊದಲ ಗ್ರಹಣವಾಗಿದ್ದು ಮೋಡಗಳಿಲ್ಲದ ರಾತ್ರಿ ಸಂಭವಿಸುವುದರಿಂದ ವೀಕ್ಷಣೆಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೇ ಇದು ಸೂಪರ್ ಮೂನ್ ದಿನದಂದೇ ಸಂಭವಿಸುತ್ತದೆ. ಇನ್ನೊಂದು ವಿಶೇಷ ಎಂದರೆ  ಜನವರಿ 31ರ ಹುಣ್ಣಿಮೆಯನ್ನು ಬ್ಲೂಮೂನ್ ಎಂತಲೂ ಕರೆಯುತ್ತಾರೆ. ಅಲ್ಲದೇ ಈ ಗ್ರಹಣವು ಹೆಚ್ಚಾಗಿ ಕರ್ನಾಟಕದೆಲ್ಲೆಡೆ ಸಂಜೆ ಚಂದ್ರೋದಯದ ಸಮಯದಲ್ಲಿ ಸಂಭವಿಸುವುದರಿಂದ ವೀಕ್ಷಿಸಲು ಅನುಕೂಲ. ಗ್ರಹಣವು 18:15(ಸಂಜೆ 6:15)ಕ್ಕೆ ಪ್ರಾರಂಭವಾಗಿ 21:38(ರಾತ್ರಿ 09:38) ಕ್ಕೆ ಮುಕ್ತಾಯವಾಗುತ್ತದೆ. ಒಟ್ಟು 3ಗಂಟೆ 23ನಿಮಿಷಗಳ ಕಾಲ ಈ ಗ್ರಹಣವನ್ನು ನೋಡಬಹುದು. 
ಬರಿಗಣ್ಣಿನಿಂದಲೇ ವೀಕ್ಷಿಸಿ : ಚಂದ್ರಗ್ರಹಣ ನೋಡಲು ಯಾವುದೇ ವಿಶೇಷ ಉಪಕರಣಗಳೇನೂ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಿ ಆನಂದಿಸಬಹುದು ಮತ್ತು ಇದರಿಂದ ಕಣ್ಣಿಗೆ ಯಾವುದೇ ಅಪಾಯವಿಲ್ಲ. ಆದರೆ ಚಂದ್ರಗ್ರಹಣದ ಸಂಪೂರ್ಣ ವೀಕ್ಷಣೆಗೆ ಬೈನಾಕುಲರ್ ಅಥವಾ ದೂರದರ್ಶಕ ಯಂತ್ರಗಳಿದ್ದರೆ ಸಮೀಪದ ದೃಶ್ಯಾವಳಿಗಳ ಆನಂದ ಅನುಭವಿಸಬಹುದು. ಜೊತೆಗೆ ಚಂದ್ರಗ್ರಹಣದ ಸಂಪೂರ್ಣ ಗುಣಲಕ್ಷಣಗಳನ್ನು ನಿಖರವಾಗಿ ಅಧ್ಯಯನ ಮಾಡಬಹುದು. 


ಸೂಪರ್ ಮೂನ್ ಬ್ಲೂಮೂನ್
ಭೂಮಿಯ ಸುತ್ತ ಸುತ್ತುವ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತೀ ಕನಿಷ್ಠ ದೂರ ಇರುವ ದಿನವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ದಿನದಂದು ಚಂದ್ರನು ಸಾಮಾನ್ಯತೆಗಿಂತ 14% ಹೆಚ್ಚು ದೊಡ್ಡದಾಗಿ ಹಾಗೂ 30% ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. 3 ಡಿಸೆಂಬರ್ 2017, 1 ಜನವರಿ 2018 ಮತ್ತು 31 ಜನವರಿ 2018 ರ ಹುಣ್ಣಿಮೆಗಳು ಸೂಪರ್ ಮೂನ್‍ಗಳಾಗಿವೆ. ಎರಡು ಹುಣ್ಣಿಮೆಗಳ ನಡುವಿನ ಕಾಲಾವಧಿ 29.5 ದಿನಗಳು(709 ಗಂಟೆಗಳು). ಒಂದೇ ಕ್ಯಾಲೆಂಡರ ತಿಂಗಳಲ್ಲಿ ಎರಡು ಹುಣ್ಣಿಮೆಗಳಿದ್ದು, ಎರಡನೆ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯುಲಾಗುತ್ತದೆ. ಇದೇ ಜನವರಿ ತಿಂಗಳಲ್ಲಿ ಎರಡು ಹುಣ್ಣಿಮೆಗಳಿವೆ. ಜನವರಿ 1 ಹಾಗೂ  31.  ಹಾಗಾಗಿ ಜನವರಿ  31 ರ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ. 

ಭಯ ಬೇಡ : ಗ್ರಹಣ ಎಂದರೆ ನೆರಳಿನ ಕತ್ತಲು. ಗ್ರಹಣಗಳ ಬಗ್ಗೆ ಕೆಲವು ಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಗ್ರಹಣಗಳ ಸಮಯದಲ್ಲಿ ಹೊರಗೆ ಬರಬಾರದು, ಊಟ ಮಾಡಬಾರದು, ಬಸುರಿ ಮತ್ತು ಬಾಣಂತಿಯರಿಗೆ ಗ್ರಹಣದ ನೆರಳು ಬೀಳಬಾರದು ಇತ್ಯಾದಿ ತಪ್ಪು ಅಭಿಪ್ರಾಯಗಳಿವೆ. ಇವೆಲ್ಲಾ ತಪ್ಪು ಅಭಿಪ್ರಾಯಗಳೇ ಹೊರತು ಸತ್ಯವಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಹಿನ್ನಲೆಗಳಿವೆ. ಹಿಂದಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ದೀಪಗಳ ವ್ಯವಸ್ಥೆ ಇರಲಿಲ್ಲ. ಕತ್ತಲಿನಲ್ಲಿ ಊಟ ಮಾಡುವಾಗ ಹುಳು/ಕೀಟಗಳು ಆಹಾರದ ತಟ್ಟೆಯೊಳಗೆ ಬೀಳಬಹುದು ಎಂಬ ಕಾರಣಕ್ಕೆ ಗ್ರಹಣದ ವೇಳೆ ಆಹಾರ ಸೇವಿಸಬಾರದು ಎಂದು ಹೇಳಿರಬಹುದು. ಕತ್ತಲಲ್ಲಿ ಬಸುರಿ/ಬಾಣಂತಿ ಹೊರಗೆ ಬಂದರೆ ಬೀಳಬಹುದು ಎಂಬ ಕಾರಣಕ್ಕೆ ಹೊರಗೆ ಬರಬಾರದು ಎಂದು ಹೇಳಿದ್ದಾರೆಯೇ ವಿನಹ ಅನ್ಯ ಕಾರಣಗಳಿಗಲ್ಲ. ಗ್ರಹಣಗಳು ನಿಸರ್ಗದಲ್ಲಿ ನಡೆಯುವ ಅವಿಸ್ಮರಣೀಯ ವಿದ್ಯಮಾನಗಳು. ಇವು ಬೇಕೆಂದಾಗ ನೋಡಲು ಸಿಗುವುದಿಲ್ಲ. ಅವು ಸಂಭವಿಸಿದಾಗಲೇ ನೋಡಿ ಆನಂದಿಸಬೇಕು. ಸೂರ್ಯಗ್ರಹಣವನ್ನು ಮಾತ್ರ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರಗ್ರಹಣ ನೋಡಲು ಯಾವುದೇ ಅಭ್ಯಂತರ ಹಾಗೂ ಅಪಾಯಗಳಿಲ್ಲ. 
ನೆನಪಿರಲಿ :
ಹುಣ್ಣಿಮೆಯ ದಿನ ಚಂದ್ರಗ್ರಹಣ ಮತ್ತು ಅಮವಾಸ್ಯೆ ದಿನ ಸೂರ್ಯಗ್ರಹಣ ಸಂಭವಿಸುತ್ತವೆ. ಆದರೆ ಎಲ್ಲಾ ಹುಣ್ಣಿಮೆ ಅಥವಾ ಅಮವಾಸ್ಯೆ ದಿನ ಗ್ರಹಣ ಸಂಭವಿಸುವುದಿಲ್ಲ. ಗ್ರಹಣಗಳು ಸಂಭವಿಸಲು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬರಬೇಕು. ಆಗ  ಮಾತ್ರ ಗ್ರಹಣಗಳು ಸಂಭವಿಸುತ್ತವೆ.

ನೀವೇನು ಮಾಡಬಹುದು? : 
ಮೊದಲು ನಿಮ್ಮ ಮನೆಯ ಎಲ್ಲಾ ಸದಸ್ಯರಿಗೆ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿ. ಗ್ರಹಣದ ದಿನ ಮನೆಯವರೊಡಗೂಡಿ ಗ್ರಹಣ ವೀಕ್ಷಿಸಿ.
ನಿಮ್ಮ ಗ್ರಾಮ ಅಥವಾ ನಗರಗಳ ವಾರ್ಡ್ ಮಟ್ಟದಲ್ಲಿ ಗ್ರಹಣಗಳ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆ ಹೋಗಲಾಡಿಸಲು ಸಭೆ/ಗೋಷ್ಠಿಗಳನ್ನು ನಡೆಸಿ.
ಗ್ರಹಣ ಕುರಿತ ಜನರಲ್ಲಿನ ಅಂಧಾನುಕರಣೆ ಮತ್ತು ಮೌಢ್ಯತೆಗಳನ್ನು ಹೊಡೆದು ಹಾಕಲು ಮಾರ್ಗದರ್ಶನ ನೀಡಿ. 
ನಿಮ್ಮ ಸಮೀಪದ ಶಾಲಾ ಕಾಲೇಜುಗಳಲ್ಲಿ ಗ್ರಹಣ ಕುರಿತಾದ ಮಾಹಿತಿ ಕಾರ್ಯಾಗಾರ/ವೀಡಿಯೋ ಪ್ರದರ್ಶನ ಏರ್ಪಡಿಸಿ.
ಸಾಮಾಜಿಕ ಜಾಲತಾಣಗಳಲ್ಲಿ ಗ್ರಹಣ ವೀಕ್ಷಣೆಯ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುವುದು. ಆ ಮೂಲಕ ಜನಜಾಗೃತಿ ಮೂಡಿಸಿ.
ಗ್ರಹಣದ ದಿನ ಎತ್ತರವಾದ ಸ್ಥಳದಲ್ಲಿ ಗ್ರಹಣ ವೀಕ್ಷಣೆಗೆ ಸ್ಥಳ ಹುಡುಕಿಕೊಳ್ಳುವುದು. ಆದಷ್ಟೂ ಹೆಚ್ಚು ಜನರನ್ನು ಸೇರಿಸಿ ಗ್ರಹಣ ಕುರಿತಾದ ಚರ್ಚೆ ಹಾಗೂ ವೀಕ್ಷಣೆಗೆ ಅವಕಾಶ ಕಲ್ಪಿಸಿ.
ದೂರದರ್ಶಕ ಯಂತ್ರಗಳನ್ನು ಅಳವಡಿಸಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸುವುದು. ಆ ಮೂಲಕ ಗ್ರಹಣ ಕುರಿತು ಅಧ್ಯಯನ ಕೈಗೊಳ್ಳಿ.
ಗ್ರಹಣ ಸಮಯದಲ್ಲಿ ಸಾಮೂಹಿಕ ಭೋಜನ ಸೇವನೆ ಹಾಗೂ ಮನೋರಂಜನೆ ಕಾರ್ಯಕ್ರಮ ಏರ್ಪಡಿಸಿ.
ಗ್ರಹಣ ವೀಕ್ಷಣೆಯ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಿಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ

No comments:

Post a Comment