March 29, 2018

ಹವಾಯಿ ಅವಾಂತರ Hawai in college

ವಿಜಯವಾಣಿಯ ಯುಗಾದಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಕಿರುಬರಹ

ಹವಾಯಿ ಅವಾಂತರ

ಈಗ್ಗೆ 28 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಡೆದ ಪಜೀತಿಯನ್ನು ನೆನೆದರೆ ಈಗಲೂ ಮೈಜುಮ್ ಎನ್ನುತ್ತದೆ. ಹತ್ತನೇ ತರಗತಿ ಮುಗಿಸಿ ಹೂವಿನಹಡಗಲಿಯ ಜಿ,ಬಿ,ಆರ್ ಕಾಲೇಜಿನಲ್ಲಿ ಪಿಯುಸಿ(ವಿಜ್ಞಾನ ವಿಭಾಗ)ಗೆ ಸೇರಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಮದ್ಯಾಹ್ನ ಹನ್ನೆರಡರವರೆಗೆ ತರಗತಿಗಳು ನಡೆಯುತ್ತಿದ್ದವು. ವಾರದಲ್ಲಿ ಮೂರುದಿನ ಮದ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತಿದ್ದವು.
ಕಾಲೇಜಿಗೆ ಸೇರಿದಾಗಲೇ ಮೊದಲ ಬಾರಿಗೆ ಚಪ್ಪಲಿ ಹಾಕಿಕೊಂಡದ್ದು. ಹವಾಯಿ ಚಪ್ಪಲಿ ಅಂದಿನ ಟ್ರೆಂಡ್. ಅವುಗಳನ್ನು ಹಾಕಿಕೊಂಡು, ಅವುಗಳಿಂದ ಪಟ್ ಪಟ್ ಎಂಬ ಸದ್ದು ಮಾಡುತ್ತಾ ನಡೆಯುವುದೇ ಒಂದು ಮೋಜು. ಅಂದು ನಮಗೆ ಕೆಮಿಷ್ಟ್ರಿ ಲ್ಯಾಬ್ ಇತ್ತು.  ಊರಿನಿಂದ ತಂದಿದ್ದ ಊಟ ಮುಗಿಸಿ ಮದ್ಯಾಹ್ನ ಹನ್ನೆರಡೂವರೆಗೆ ಗೆಳೆಯ ಇಸ್ರಾರ್ ಅಹ್ಮದ್ ಮತ್ತು ನಾನು ಕಾಲೇಜಿಗೆ ವಾಪಾಸಾದೆವು. ಪ್ರಾಯೋಗಿಕ ತರಗತಿಗೆ ಇನ್ನೂ ಅರ್ದಗಂಟೆ ಸಮಯವಿತ್ತು. ಕಾಲೇಜಿನಲ್ಲಿ ಯಾರೂ ಇರಲಿಲ್ಲ. ನೀರವ ಮೌನ ಅಲ್ಲಿ ನೆಲೆಸಿತ್ತು. ನಾವಿಬ್ಬರೂ ಪರಸ್ಪರ ಜೋಕ್ಸ್‍ಗಳನ್ನು ಹೇಳುತ್ತಾ ಜೋರಾಗಿ ನಗುತ್ತಾ ಲ್ಯಾಬ್ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಪ್ರಿನ್ಸಿಪಾಲ್ ಛೇಂಬರ್ ದಾಟಿ ಲ್ಯಾಬ್‍ಗೆ ಹೋಗಬೇಕಾಗಿತ್ತು.  ಕಾಲೇಜು ನಿಶಬ್ದವಾಗಿದ್ದರಿಂದ  ನಮ್ಮಿಬ್ಬರದೇ ನಗು ಮತ್ತು ಹವಾಯಿ ಚಪ್ಪಲಿ ಶಬ್ದ ಮಾರ್ಧನಿಸುತ್ತಿತ್ತು. ನಗುವಿಗಿಂತ ಚಪ್ಪಲಿ ಶಬ್ದ ಜೋರಾಗಿಯೇ ಇತ್ತು. ನಮಗೆ ಬೇರೆ ಯಾರ ಮತ್ತು ಯಾವುದರ ಪರಿವೆಯೇ ಇರಲಿಲ್ಲ. ಇಬ್ಬರೂ ನಗುವಿನಲ್ಲೇ ಮೈಮರೆತಿದ್ದೆವು.
ಆಗ ಇದ್ದಕ್ಕಿದ್ದಂತೆ “ಏಯ್ ಬನ್ರೋ ಇಲ್ಲಿ” ಎಂಬ ಮಾತು ಕೇಳಿ ಇಬ್ಬರೂ ಬೆಚ್ಚಿದೆವು. ಪ್ರಿನ್ಸಿಪಾಲರು ಛೇಂಬರಿನ ಬಾಗಿಲಲ್ಲಿ ನಿಂತು ಕರೆಯುವುದನ್ನು ಕಂಡು ಬೆಚ್ಚಿದೆವು. ಆಗ ಕೆ.ವಿರುಪಾಕ್ಷಗೌಡ್ರು ಪ್ರಿನ್ಸಿಪಾಲರಾಗಿದ್ದರು. ಶಿಸ್ತು ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ಕೆ.ವಿ.ಗೌಡ್ರು. ಅಂತಹ ಘನ ವ್ಯಕ್ತಿತ್ವಕ್ಕೆ ಸಿಟ್ಟು ಬಂದ್ದದ್ದು ಕಂಡು ಆಶ್ಚರ್ಯ ಮತ್ತು ಭಯ ಮಿಶ್ರಭಾವಗಳು ಉಂಟಾಗಿ ಕಾಲುಗಳು ನಡುಗತೊಡಗಿದವು. ಆ ಧ್ವನಿ ಮತ್ತೊಮ್ಮೆ ಬಂತು. “ಏಯ್ ಬನ್ರೋ ಇಲ್ಲಿ, ಕರೆದದ್ದು ಕೇಳಲಿಲ್ವಾ?”. ಕೈಕಟ್ಟಿಕೊಂಡು ಛೇಂಬರಿನತ್ತ ಹೆಜ್ಜೆ ಹಾಕಿದೆವು. ಅವರು ಅದಾಗಲೇ ತಮ್ಮ ಆಸನದಲ್ಲಿ ಕುಳಿತರು. ನಾವು ಒಳಹೋಗಿ ಕೈಕಟ್ಟಿಕೊಂಡು ತಲೆಬಗ್ಗಿಸಿಕೊಂಡು ನಿಂತೆವು. “ಯಾವ ಕ್ಲಾಸ್?” ಎಂಬ ಮೊದಲ ಸೌಮ್ಯ ಪ್ರಶ್ನೆಗೆ ‘ಪಿ.ಯು.ಸಿ. ಮೊದಲನೆ ವರ್ಷ ಸರ್’ ಎಂದೆನು. “ಯಾವ ಸೆಕ್ಷನ್?” ಎಂಬ ಎರಡನೆ ಪ್ರಶ್ನೆಗೆ ‘ಸ,,,ಸೈನ್ಸ್,,,’ ಎಂದು ತಡವರಿಸುತ್ತಾ ಉತ್ತರಿಸಿದೆ. “ಸೈನ್ಸ್ ಅಂತೀರಾ, ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇದೆಯಾ? ಕಾಲೇಜಿನ ಸಮಯ ಮುಗೀತಲ್ಲಾ. ನಿಮಗೇನು ಕೆಲಸ” ಎಂದರು. ‘ಸರ್ ನಮಗೆ ಲ್ಯಾಬ್ ಇದೆ. ಅದ್ಕೆ ಪುನಃ ಬಂದೆವು’ ಎಂದ ಗೆಳೆಯ. 
“ಹೌದಾ, ಇದೇನು ನಿಮ್ಮ ಮಾವನ ಮನೆ ಅಂದ್ಕೊಂಡಿದ್ದೀರಾ? ಇದು ಕಾಲೇಜು ಎಂಬ ಪ್ರಜ್ಞೆ ನಿಮಗಿದೆಯಾ. ಏನು ನೀವಿಬ್ರೇನಾ ಚಪ್ಪಲಿ ಹಾಕ್ಕೊಂಡಿರೋದು? ಚಟ್‍ಪಟ್ ಚಟ್‍ಪಟ್ ಅಂತ ಅನ್ಸುತ್ತಾ  ನಡೆಯೋಕೆ ನೀವೇನು ರೌಡಿಗಳಾ? ನೀವಿಲ್ಲಿ ಕಲಿಯೋಕೆ ಬರ್ತೀರಾ ಅಥ್ವಾ  ಧಿಮಾಕು ಮಾಡೋಕೆ ಬರ್ತೀರಾ? ನಿಮ್ಮ ತಂದೆ ತಾಯಿ ನಿಮ್ಗೆ ಚಪ್ಪಲಿ ಕೊಡ್ಸಿರೋದು ಕಾಲಿಗೆ ಹಾಕಿಕೊಂಡು ನಡೆಯೋಕಾ ಅಥ್ವಾ ಅದ್ರಿಂದ ಶಬ್ದ ಮಾಡುತ್ತಾ ಇನ್ನೊಬ್ರಿಗೆ ತೊಂದ್ರೆ ಕೊಡೋಕಾ? ಗೋತ್ತಾಗೋಲ್ವ ನಿಮ್ಗೆ. ನೀವೇನು ಇನ್ನೂ ಚಿಕ್ಕ ಮಕ್ಳು ಅಂದ್ಕೋಂಡಿದ್ರಾ? ನಿಮ್ಮಂಥಾವ್ರಿಗೆ ಯಾಕೆ ಕಾಲೇಜು. ದನ ಕಾಯೋಕೆ ಮಾತ್ರ ನೀವು ಲಾಯಕ್ಕು,,,,,” ಎಂದು ಬಯ್ಯುತೊಡಗಿದರು. 
ಆ ವೇಳೆಗಾಗಲೇ ಅನೇಕ ವಿದ್ಯಾರ್ಥಿಗಳು ಆಗಮಿಸಿ ನಮಗೆ ಮಂಗಳಾರತಿ ಆಗುವುದನ್ನು ಕಿಟಕಿಗಳಿಂದ ಇಣುಕಿ ನೋಡುತ್ತಿದ್ದರು. ಮೊದಲೇ ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆಲ್ಲಾ ಭಯ. ನಮಗೆ ಕಾಲುಗಳು ಸೋತ ಅನುಭವ. ತಗ್ಗಿದ ತಲೆ ಮೇಲೆ ಎತ್ತಲಾಗದ ಸಂಧಿಗ್ದ ಪರಿಸ್ಥಿತಿ. ಮುಖದಲ್ಲಿ ಬೆವರು ಹೆಚ್ಚಾಗಿ ಕೆಳಗಿಳಿಯುತಿದೆ. ಪ್ಯಾಂಟ್ ಜೇಬಿನಲ್ಲಿದ್ದ ಕರ್ಚೀಪ್ ತೆಗೆದು ಮುಖ ಒರೆಸಲೂ ಅಗದ ಪರಿಸ್ಥಿತಿ. ಕಿಟಿಕಿಯಲ್ಲಿ ಇಣುಕಿ ಹಾಕುವ ಕಣ್ಣುಗಳು ಒಂದೆಡೆಯಾದರೆ, ಬೈಗುಳದ ಸುರಿಮಳೆ ಮತ್ತೊಂದೆಡೆ. ಕಣ್ಣಲ್ಲಿನ ನೀರು ಹೊರಬರುವುದೊಂದೇ ಬಾಕಿ ಉಳಿದಿತ್ತು. ಇಂತದ್ದರ ನಡುವೆ “ಇನ್ನೊಮ್ಮೆ ಹೀಗೆ ಮಾಡಿದರೆ ನಿಮ್ಮನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡ್ತೀನಿ” ಎಂಬ ಮಾತು ಕೇಳಿ ನಿಜಕ್ಕೂ ಸೋತುಹೋದೆವು. ಕ್ಷಮಾಪಣೆ ಕೇಳಿ ಚಪ್ಪಲಿಯನ್ನು ಕಾಲಲ್ಲಿ ಬಿಗಿಯಾಗಿ ಹಿಡಿದುಕೊಂಡು ಸದ್ದು ಮಾಡದೇ ಮೆಲ್ಲನೇ ಛೇಂಬರ್‍ನಿಂದ ಹೊರಬಂದೆವು. ಆಗ ಇಂತದ್ದೆಲ್ಲಾ ಅಸಹಜವಾಗಿತ್ತು. ನೇರವಾಗಿ ಲ್ಯಾಬ್‍ಗೆ ತೆರಳಿದೆವು. ಅಂದು ಹವಾಯಿ ಚಪ್ಪಲಿ ತಂದ ಪಜೀತಿಯನ್ನು  ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಜೊತೆಗೆ ಪ್ರಿನ್ಸಿಪಾಲರು ಹೇಳಿದ ಉಪದೇಶದ ಮಾತುಗಳನ್ನು ಈಗಲೂ ನನಗೆ ದಾರಿದೀಪವಾಗಿವೆ.  ಅಂದಿನಿಂದ ಹವಾಯಿ ಚಪ್ಪಲಿ ಧರಿಸಿದಾಗಲೆಲ್ಲ ಮತ್ತು ಯಾವುದೇ ಕಛೇರಿಗಳಲ್ಲಿ ಹವಾಯಿ ಧರಿಸಿದವರನ್ನು ಕಂಡರೆ ಕಾಲೇಜಿನ ಪಜೀತಿ ಪ್ರಸಂಗ ನೆನಪಿಗೆ ಬರುತ್ತದೆ. 
ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment