February 11, 2015

ಮಾತಿನ ಮೋಡಿ

                               ಮಾತಿನ ಮೋಡಿ

 

    ಇಂದಿನ ಯುವಕರಿಗೆ ಭಾಷಣ ಕೇಳುವುದೆಂದರೆ ಅಲರ್ಜಿ. ಕೆಲವರಿಗೆ ಭಾಷಣ ಮಾಡುವುದೆಂದರೆ ಭಯ. ಆದರೆ ಭಾಷಣವು ಜನತೆಯ ವಿಚಾರವಂತಿಕೆಯನ್ನು, ಜ್ಞಾನಾರ್ಜನೆಯನ್ನು ವೃದ್ದಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಬಹುತೇಕರು ಗಮನಿಸಿಲ್ಲ.
    ಭಾಷಣವು ವಿಶಿಷ್ಟ ರೀತಿಯ ವಾಗ್ವಿಲಾಸವೂ, ಕಲಾತ್ಮಕವಾದ ಮಾತುಗಾರಿಕೆಯೂ, ಜನತೆಯ ಬುದ್ದಿ ಭಾವಗಳನ್ನು ಅಭಿವೃದ್ದಿಪಡಿಸುವ ಸಾಧನವೂ ಆಗಿದೆ. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಭಾಷಣ ಕಲೆಯ ಅರಿವು ಇರಬೇಕಾದುದು ಅವಶ್ಯವಾಗಿದೆ. ಕ್ರಾಂತಿಯೂ ಭಾಷಣದಿಂದ, ಶಾಂತಿಯೂ ಭಾಷಣದಿಂದ ಎಂಬುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತೇವೆ. ಉತ್ತಮವಾದ ಭಾಷಣವು ಲೋಕಕಲ್ಯಾಣಕ್ಕೆ ಕಾರಣವಾಯಿತೆಂಬುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತದೆ. ಹಾಗಾದರೆ ಭಾಷಣ ಎಂದರೇನು? ಭಾಷಣಕಾರ ಹೇಗಿರಬೇಕು? ಪರಿಣಾಮಕಾರಿ ಭಾಷಣ ಹೇಗಿರಬೇಕು? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಕೆಲವು ಪ್ರಶ್ನೆಗಳಿಗೆ ಕಿರು ಮಾಹಿತಿ ಇಲ್ಲಿದೆ.
   ಬುದ್ದಿಪೂರ್ವಕವಾಗಿ, ತರ್ಕಬದ್ದವಾಗಿ, ನ್ಯಾಯಯೋಚಿತವಾಗಿ, ಪ್ರಾಸಂಗಕ್ಕನುಗುಣವಾಗಿ ವಿಚಾರದ ಪ್ರತಿಪಾದನೆಯೇ ಭಾಷಣ. ಭಾಷಣವು ಕೇವಲ ಮಾತಿನ ಚತುರತೆಯಾಗಿರದೇ, ಜನತೆಯ ಮೇಲೆ ಪ್ರಭಾವ ಬೀರುವ ವಿಚಾರಶಕ್ತಿಯ ರೂಪವೂ ಆಗಿದೆ. ಉತ್ತಮ ಭಾಷಣವು ಒಂದು ಕಲೆಯಾಗಿದ್ದು, ಅದಕ್ಕೆ ಹೆಚ್ಚಿನ ನೈಪುಣ್ಯತೆ, ಸಿದ್ದತೆ, ಚತುರತೆ, ನಿರ್ಭಯತೆಗಳು ಅಗತ್ಯವಾಗಿವೆ. ಕೇಳುತ್ತಿರುವ ಇಡೀ ಜನಸ್ತೋಮವನ್ನು ತನ್ನೆಡೆಗೆ ಸೆಳೆದುಕೊಂಡು ವಿಷಯವನ್ನು ನಿರೂಪಿಸುವುದು ಸುಲಭದ ಕೆಲಸವಲ್ಲ.
    ಭಾಷಣಕಾರ ಹೇಗಿರಬೇಕು? : ಭಾಷಣವೆಂಬುದು ಒಂದು ವಿಷಯದ ಗಂಭೀರ ನಿರೂಪಣೆಯಾಗಿದೆ. ಇದು ವಿಚಾರದ ಪ್ರಚೋದನೆಯೂ, ಸಂದೇಶದ ವಾಹಕವೂ ಹಾಗೂ ಜನಜಾಗೃತಿಯ ಸಾಧನವೂ ಆಗಿದೆ. ಆದ್ದರಿಂದ ಭಾಷಣಕಾರನು ಹೆಚ್ಚಿನ ಮಾನಸಿಕ ಹಾಗೂ ಬೌದ್ದಿಕ ಸಾಮಥ್ರ್ಯ ಹೊಂದಿದ್ದು, ಸಭಿಕರಿಗೆ ರಸದೌತಣ ನೀಡುವಂತಿರಬೇಕು. ಭಾಷಣಕಾರನು ಎಲ್ಲರಂತೆ ತಾನೂ ಒಬ್ಬ ಪ್ರೇಕ್ಷಕ ಎಂದು ತಿಳಿಯದೇ, ತಾನು ನಿರ್ದಿಷ್ಟ ವಿಷಯವನ್ನು ತಿಳಿಸಲು ಬಂದಿರುವ ಸಂದೇಶವಾಹಕ ಎಂಬ ಪ್ರಜ್ಞೆ ಇರಬೇಕು. ಆದ್ದರಿಂದ ಭಾಷಣಕಾರನಿಗೆ ಜಾಣ್ಮೆ, ವಿದ್ವತ್ತು ಮತ್ತು ವಿವೇಕಗಳ ಜೊತೆಗೆ ಸಮಯಪ್ರಜ್ಞೆ ಇರಬೇಕು.
    ಭಾಷಣಕಾರನಿಗೆ ಅನುಭವ ಪಾಂಡಿತ್ಯ ಮತ್ತು ಪರಿಶ್ರಮಗಳೇ ಬಂಡವಾಳ. ಇವುಗಳನ್ನು ಗಳಿಸಿಕೊಳ್ಳಲು ಸತತ ಅಭ್ಯಾಸ ಅಗತ್ಯ. ಭಾಷಣವು ಸಮಯೋಚಿತವಾಗಿದ್ದು, ವಿಷಯ ನಿರೂಪಣೆ ಸರಳವೂ, ಗಂಭೀರವೂ, ಹೃದ್ಯವೂ ಆಗಿರಬೇಕು. ಭಾಷಣಕಾರನು ಸದಾ ಜಾಗೃತನಾಗಿದ್ದು, ಸಭಿಕರನ್ನು ತನ್ನ ಮಾತಿನ ಮೋಡಿಯಿಂದ ವಶೀಕರಿಸಿಕೊಂಡು ಮೈಮರೆಸಬೇಕು. ಆಗಾಗ ಸಭಿಕರನ್ನು ನಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು.
    ಭಾಷಣವು ವಿದ್ವತ್ತು ಪ್ರತಿಭೆ ಮತ್ತು ಅನುಭವಗಳಿಗೆ ಸಂಬಂಧಿಸಿದೆಯಾದರೂ ಮಂದಸ್ಮಿತ ಮುಖ, ಉತ್ಸಾಹ, ಉಡುಪುಗಳೂ ಸಹ ಪ್ರಭಾವಕಾರಿ ಅಂಶಗಳಾಗಿವೆ. ಧ್ವನಿಯು ಸ್ಪಷ್ಟತೆಯಿಂದ ಕೂಡಿದ್ದು, ಸೂಕ್ತ ಧ್ವನಿಯ ಏರಿಳಿತದೊಂದಿಗೆ ವಿಚಾರಕ್ರಾಂತಿಗೆ ಮುನ್ನುಡಿ ಬರೆಯಬೇಕು. ವಿಚಾರಗಳನ್ನು ಕ್ರಮಬದ್ದವಾಗಿ, ರಸಭರಿತವಾಗಿ, ಸ್ವಾರಸ್ಯಕರವಾಗಿ ನಿರೂಪಿಸಬೇಕು. ವೈಯಕ್ತಿಕ ವಿಚಾರಗಳಿಗಿಂತ ವೈಚಾರಿಕ ವಿಚಾರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಅಂದಾಗ ಮಾತ್ರ ಸಭಿಕರ ಮತ್ತು ವ್ಯವಸ್ಥಾಪಕರ ನಿರೀಕ್ಷೆ ಮತ್ತು ಆಶೋತ್ತರಗಳನ್ನು ಈಡೇರಿಸಲು ಸಾಧ್ಯ.  ಭಾಷಣದ ಪ್ರಾರಂಭ ಮತ್ತು ಮುಕ್ತಾಯದ ವೇಳೆ ಅಧ್ಯಕ್ಷರಿಗೆ, ಅತಿಥಿಗಳಿಗೆ, ಸಭಿಕರಿಗೆ, ಮಾಧ್ಯಮದವರಿಗೆ ಮತ್ತು ಆಯೋಜಕರಿಗೆ  ಗೌರವಪೂರ್ವಕ ವಂದನೆ ಸಲ್ಲಿಸಬೇಕು.
                                                    ಉತ್ತಮ ಭಾಷಣಕ್ಕೆ ಅಷ್ಟ ಮಾರ್ಗಗಳು
ವಿಷಯ ತಿಳಿಯಿರಿ : ನೀವು ಮಾತನಾಡಬೇಕಾದ ವಿಷಯದ ಸಂಪೂರ್ಣ ಜ್ಞಾನ ಇರಲಿ. ನಿಮ್ಮದೇ ಆದ ಭಾಷಾ ಶೈಲಿಯನ್ನು ಬಳಸಿ ವಿಷಯವನ್ನು ನಿರೂಪಿಸಿ. ಹೇಳಬೇಕಾದ ವಿಷಯದ ಮೇಲೆ ಸಂಪೂರ್ಣ ನಿಗಾ ಇರಲಿ, ವಿಷಯವನ್ನು ಮರೆಯಬೇಡಿ.
ಅಬ್ಯಾಸ ಮಾಡಿ : ವೇದಿಕೆಗೆ ತೆರಳುವ ಮುಂಚೆ ಸಾಕಷ್ಟು ಅಭ್ಯಾಸ ಮುಖ್ಯ. ನಿಮಗೆ ದೊರೆಯುವ ಎಲ್ಲಾ ಸಾಧನ ಸಲಕರಣೆಗಳನ್ನು ಬಳಸಿಕೊಂಡು ನಿಮ್ಮದೇ ಆದ ಯೋಜನೆಯಂತೆ ಅಭ್ಯಾಸ ಮಾಡಿ. ಸಾಧ್ಯವಾದರೆ ನಿಮ್ಮ ಭಾಷಾ ಶೈಲಿಯನ್ನು ಮೊಬೈಲ್‍ನಲ್ಲಿ ರೆಕಾರ್ಡ ಮಾಡಿ ಕೇಳಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಿ. ಆಂಗಿಕ ಚಲನೆ(ದೇಹಭಾಷೆ) ಬಳಸಿ. ಇದಕ್ಕಾಗಿ ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡಿ. ತಪ್ಪುಗಳನ್ನು ತಿದ್ದಿಕೊಳ್ಳಿ. ನಿಗದಿತ ಸಮಯದಲ್ಲಿ ವಿಷಯದ ಹೊಂದಾಣಿಕೆ ಮಾಡಿಕೊಳ್ಳಿ.
ಪ್ರೇಕ್ಷಕರ ಬಗ್ಗೆ ತಿಳಿಯಿರಿ : ನೀವು ಯಾರಿಗೆ ಭಾಷಣ ಮಾಡುತ್ತೀರಿ, ಪ್ರೇಕ್ಷಕರ ಮನೋಸ್ಥಿತಿ, ಸಾಂಸ್ಕøತಿಕತೆ, ವೈಚಾರಿಕತೆ ಇವುಗಳ ಬಗ್ಗೆ ತಿಳಿಯಿರಿ. ಭಾಷಣದ ಪ್ರಾರಂಭದಲ್ಲಿ ಅಲ್ಲಿನ ಕೆಲವು ವ್ಯಕ್ತಿಗಳ ಹೆಸರನ್ನು, ಸಂಘ-ಸಂಸ್ಥೆಗಳ ಹೆಸರನ್ನು, ಸ್ನೇಹಿತರ ಗುಂಪುಗಳ ಹೆಸರನ್ನು ಉಲ್ಲೇಖಿಸಿ. ಇದು ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ.
ಸ್ಥಳದ ಬಗ್ಗೆ ತಿಳಿಯಿರಿ : ಮಾತನಾಡಬೇಕಾದ ವೇದಿಕೆಯು ಒಳಾಂಗಣವೋ, ಹೊರಾಂಗಣವೋ ತಿಳಿಯಿರಿ. ಕಾರ್ಯಕ್ರಮ ಪ್ರಾರಂಭಕ್ಕಿಂತ ಮುಂಚೆ ಸ್ಥಳ ಪರಿಶೀಲನೆ ನಡೆಸಿ. ಧ್ವನಿವರ್ಧಕ ಹಾಗೂ ದೃಶ್ಯ ಸಾಧನಗಳ ಕಾರ್ಯಕ್ಷಮತೆಯನ್ನೂ ಪರಿಶೀಲಿಸಿ.
ನಿರಾಳವಾಗಿರಿ : ಧೀರ್ಘವಾದ ಉಸಿರಾಟ ನಡೆಸಿ. ಭಾಷಣದ ಪ್ರಾರಂಭದಲ್ಲಿ ವೇದಿಕೆಯಲ್ಲಿನ ಗಣ್ಯರನ್ನು, ಸಭಿಕರನ್ನು ಉದ್ದೇಶಿಸಿ ಮಾತು ಪ್ರಾರಂಭಿಸಿ. ಇದು ಸಭಾಕಂಪನವನ್ನು ಹತೋಟಿಗೆ ತರುತ್ತದೆ.
ಮಾತುಗಳಿಗೆ ದೃಶ್ಯರೂಪ ನೀಡಿ : ಸ್ಪಷ್ಟವಾದ, ಗಟ್ಟಿಯಾದ ಧ್ವನಿಯಿಂದ ನಿಮ್ಮ ಮಾತುಗಳಿಗೆ ಚಲನಶೀಲತೆ ನೀಡಿ. ಧ್ವನಿಯಲ್ಲಿ ಹಿಡಿತವಿರಲಿ, ಅಗತ್ಯಕ್ಕೆ ತಕ್ಕ ಏರಿಳಿತವಿರಲಿ, ಧ್ವನಿಯಲ್ಲಿ ಆತ್ಮ ವಿಶ್ವಾಸವಿರಲಿ. ವಚನಗಳು, ಗಾದೆಮಾತುಗಳು, ಹಾಸ್ಯ, ರಮ್ಯತೆ ಇವುಗಳಿಂದ ವಿಷಯವು ಶ್ರೀಮಂತವಾಗಿರಲಿ. ಆಗ ನಿಸ್ಸಂದೇಹವಾಗಿ ನಿಮ್ಮ ಮಾತುಗಳಿಗೆ ದೃಶ್ಯರೂಪ ಸಿಗುತ್ತದೆ.
ವಶೀಕರಣಗೊಳಿಸಿ : ನಿಮ್ಮ ಮಾತಿನ ಮೋಡಿಯಿಂದ ಸಭಿಕರ ಮನಸ್ಸನ್ನು ಕೇಂದ್ರೀಕರಿಸಿ. ಮಾಹಿತಿಗಳು, ಅಂಕಿ-ಅಂಶಗಳಿಂದ ಕಾತುರತೆ ಹುಟ್ಟಿಸಿ. ಜೊತೆಗೆ ಮನೋರಂಜನೆ ನೀಡುತ್ತಾ ಪ್ರೇಕ್ಷಕರ ಮನಸ್ಸನ್ನು ವಶೀಕರಣಗೊಳಿಸಿ.
ಸಂದೇಶದ ಮೇಲೆ ಗಮನವಿರಲಿ : ನೀವೊಬ್ಬ ಸಂದೇಶವಾಹರು ಎಂಬುದನ್ನು ಮರೆಯದೇ, ನಿಮ್ಮ ಭಾಷಣದಿಂದ ಜನರಿಗೆ ತಲುಪಬೇಕಾದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿ. ಇತರರ ಮಾತಿಗೆ ಕಿವಿಗೊಡಬೇಡಿ.    

               ಭಾಷಣಗಳಲ್ಲಿನ ವೈವಿಧ್ಯತೆ
ಸ್ವಾಗತ ಭಾಷಣ : ಕಾರ್ಯಕ್ರಮ/ಸಭೆಗೆ ಆಗಮಿಸಿದ ಅತಿಥಿಗಳ ಸೂಕ್ಷ್ಮ ಪರಿಚಯದೊಂದಿಗೆ ಪ್ರೀತಿ ಪೂರ್ವಕ ಸ್ವಾಗತ ಕೋರುವುದು. ಜೊತೆಗೆ ಸಭಿಕರಿಗೆ, ಮಾಧ್ಯಮದವರಿಗೆ, ಆಯೋಜಕರಿಗೆ ಸ್ವಾಗತ ಕೋರುವುದು.
ಪರಿಚಯ ಭಾಷಣ : ವಿಶೇಷ ಆಹ್ವಾನದ ಮೇರೆಗೆ ಬರಮಾಡಿಕೊಂಡ ಅತಿಥಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು.
ಉದ್ಘಾಟನಾ ಭಾಷಣ : ವಿವಿಧ ಮೂಲ ಸೌಲಭ್ಯಗಳ ಉದ್ಘಾಟನೆ, ಸಂಘ-ಸಂಸ್ಥೆಗಳ ಉದ್ಘಾಟನೆ, ಕ್ರೀಡಾಕೂಟಗಳು, ಸಾಂಸ್ಕøತಿಕ ಸ್ಪರ್ದೆಗಳು ಇತ್ಯಾದಿಗಳನ್ನು ಉದ್ಘಾಟಿಸಿ ಮಾಡುವ ಸಂಕಲ್ಪ ಭಾಷಣ.
ಸಮಾರೋಪ ಭಾಷಣ : ತರಬೇತಿ, ಕ್ರೀಡಾಕೂಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಾರ್ಷಿಕೋತ್ಸವಗಳ ಮುಕ್ತಾಯ ಸಮಾರಂಭದ ಭಾಷಣ.
ಬಹುಮಾನ ವಿತರಣಾ ಭಾಷಣ : ವಿವಿಧ ಸ್ಪರ್ದೆಗಳಲ್ಲಿ ಜಯಶೀಲರಾದವರಿಗಾಗಿ ಪ್ರೋತ್ಸಾಹದಾಯಕ ಭಾಷಣ.
ಅತಿಥಿಗಳ ಭಾಷಣ : ಆಯಾ ದಿನದ ಅಥವಾ ಕಾರ್ಯಕ್ರಮದ ವಿಶೇಷತೆ ಕುರಿತು ಮಾಡುವ ಬಾಷಣ.
ಅಧ್ಯಕ್ಷರ ಭಾಷಣ : ಇಡೀ ಕಾರ್ಯಕ್ರಮದ ಸೂಕ್ಷ್ಮಾವಲೋಕನ ಭಾಷಣ. ಇದು ಇಡೀ ಕಾರ್ಯಕ್ರಮದ ಘನತೆಯ ಭಾಷಣ.
ವಂದನಾರ್ಪಣ ಭಾಷಣ : ಆಗಮಿಸಿದ ಅತಿಥಿಗಳಿಗೆ, ಸಭಿಕರಿಗೆ, ಆಯೋಜಕರಿಗೆ, ಕಾರ್ಯಕ್ರಮಕ್ಕೆ ಶ್ರಮಿಸಿದವರಿಗೆ ಕೃತಜ್ಞತೆ ಸಮರ್ಪಿಸುವ ಭಾಷಣ.
ಬೀಳ್ಕೋಡಿಗೆ ಭಾಷಣ : ಸನ್ಮಿತ್ರರು, ಸಹುದ್ಯೋಗಿಗಳು ವರ್ಗ/ಬಡ್ತಿ/ನಿವೃತ್ತಿ ಆದಾಗ ಮಾಡುವ ಭಾಷಣ.
ಅಭಿನಂದನಾ ಭಾಷಣ : ಹೊಸ ಹುದ್ದೆ ಗಳಿಸಿದಾಗ, ಉನ್ನತ ಹುದ್ದೆಗೆ ಬಡ್ತಿ ದೊರೆತಾಗ, ಬಹುಮಾನ ಪಡೆದಾಗ, ಮಹಾತ್ಕಾರ್ಯ ನೆರವೇರಿಸಿದಾಗ ಸಹೃದಯತೆಯಿಂದ ಅಭಿನಂದಿಸುವ ಭಾಷಣ.
ದಿನಾಚರಣೆ/ಜಯಂತೋತ್ಸವ ಭಾಷಣ : ಆಯಾ ದಿನದ ವಿಶೇಷತೆ ಕುರಿತು ಮಾಡುವ ಭಾಷಣ.
ಶಂಕುಸ್ಥಾಪನಾ ಭಾಷಣ : ಜನಹಿತ ಕಾರ್ಯಗಳ ನಿರ್ಮಾಣ ಕುರಿತ ಉಪನ್ಯಾಸ ಭಾಷಣ.
ಮನವಿ ಭಾಷಣ : ಧಾರ್ಮಿಕ, ಸಾಮಾಜಿಕ ಸೇವಾ ಸಂಸ್ಥೆಗಳ ಸ್ಥಾಪನೆ, ಜೀರ್ಣೋದ್ದಾರಕ್ಕಾಗಿ ಧನಸಹಾಯ ಕೋರಿ ಮನವಿ ಭಾಷಣ.
ಸಂತಾಪಸೂಚಕ ಭಾಷಣ : ವಿಶ್ವ, ದೇಶ ಅಥವಾ  ಸಾಮಾಜಿಕ ಉದ್ದಾರಕ್ಕಾಗಿ ಶ್ರಮಿಸಿ ದಿವಂಗತರಾದ ಮಹನೀಯರಿಗೆ ಸಂತಾಪ ಸೂಚಿಸಿ ಮಾಡುವ ಭಾಷಣ.
ಆಶುಭಾಷಣ : ಪೂರ್ವ ಸಿದ್ದತೆಯಿಲ್ಲದೇ, ಇದ್ದಕ್ಕಿದ್ದಂತೆ ಸಮಯಸ್ಪೂರ್ತಿಯಿಂದ ಮಾಡುವ ಭಾಷಣ.

‘ವಿಜಯವಾಣಿ’ಯ ಮಸ್ತ್ ಪುರವಣಿ 11-02-2015
                                                                                                             ಆರ್.ಬಿ.ಗುರುಬಸವರಾಜ ಶಿಕ್ಷಕರು

No comments:

Post a Comment