February 11, 2015

ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪೆರಾಕ್ಸೈಡ್   ಔಷಧ ಒಂದು ಚಿಕಿತ್ಸೆ ಹಲವು
    ಹೈಡ್ರೋಜನ್ ಪೆರಾಕ್ಸೈಡ್ ನೀರು ಮತ್ತು ಆಮ್ಲಜನಕ ಇರುವ ಏಕೈಕ ರೋಗಾಣುಕಾರಕ ಔಷಧವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್‍ನ್ನು 19ನೇ ಶತಮಾನದಲ್ಲಿ ಅಸ್ತಮಾ, ಕ್ಷಯ, ಕಾಲರಾ, ಸಿಫಿಲಸ್, ಟೈಫಾಯಿಡ್, ನಾಯಿಕೆಮ್ಮು, ಹುಣ್ಣುಗಳು ಮುಂತಾದ ಕಾಯಿಲೆಗಳ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. 20ನೇ ಶತಮಾನದಲ್ಲಿ ಇದರ ಬಳಕೆ ಕಡಿಮೆಯಾಗಿತ್ತಾದರೂ ಈಗ ಪುನಃ ಅದರ ಬಳಕೆ ಹೆಚ್ಚುತ್ತಿದೆ. ಅನೇಕ ಜನರು ಸಾಂಪ್ರದಾಯಿಕ ಚಿಕಿತ್ಸೆಗಾಗಿ ಹೈಡ್ರೋಜನ್ ಪೆರಾಕ್ಸೈಡ್‍ನ ಮೊರೆಹೋಗುತ್ತಿದ್ದಾರೆ. ಇದರಲ್ಲಿ ಯಾವುದೇ ವಿಷಕಾರಕ ರಸಾಯನಿಕಗಳು ಇಲ್ಲದೇ ಇರುವುದು ಇದರ ಬಳಕೆ ಹೆಚ್ಚಲು ಕಾರಣವಾಗಿವೆ. ಹೈಡ್ರೋಜನ್ ಪೆರಾಕ್ಸೈಡ್‍ನ ಚಿಕಿತ್ಸೆಯನ್ನು “ಆಕ್ಸಿಜನ್ ಥೆರಪಿ” ಎಂದು ಕರೆಯಲಾಗುತ್ತದೆ.
    ಇದು ವಿಶ್ವದ ಎಲ್ಲಾ ಕಡೆಗಳಲ್ಲಿ ಸುಲಭವಾಗಿ ದೊರೆಯುವ ಸುರಕ್ಷಿತ, ನೈಸರ್ಗಿಕ ಮತ್ತು ಪರಿಣಾಮಕಾರಿಯಾದ ನಿರ್ಮಲೀಕಾರಕವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಮಾನವ ದೇಹದಲ್ಲಿನ ಸೊಂಕುಗಳ ವಿರುದ್ದ ಹೋರಾಡುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ನೋವು ನಿವಾರಕ ಔಷಧವಲ್ಲದಿದ್ದರೂ ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳ ವಿರೋಧಿ ಔಷಧವಾಗಿದೆ. ಅಂದರೆ ಸೊಂಕು ಚಿಕಿತ್ಸೆಗೆ ಪರಿಣಾಮಕಾರಿಯಾದ ಔಷಧವಾಗಿದೆ. ಇದು ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ.

ಆರೋಗ್ಯಕಾರಿ ಪ್ರಯೋಜನಗಳು :
    ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸಮಯ ಕಾಲು ಚೀಲ ಬಳಸುವುದರಿಂದ ಪಾದಗಳು ಸೊಂಕಿಗೆ ಒಳಗಾಗುತ್ತವೆ. ಈ ಸೊಂಕನ್ನು ನಿವಾರಿಸಲು ಪ್ರತಿರಾತ್ರಿ ಪಾದಗಳಿಗೆ ಹೈಡ್ರೋಜನ್ ಪೆರಾಕ್ಸೈಡ್ ಹಚ್ಚುವುದರಿಂದ ಶಿಲೀಂದ್ರಗಳು ನಾಶವಾಗಿ ಪಾದಗಳು ಆರೋಗ್ಯಕಾರಿಯಾಗಿರುತ್ತವೆ.
    ಒಸಡುಗಳ ಉರಿಯೂತ ನಿವಾರಣೆಗೆ ಹೈಡ್ರೋಜನ್ ಪೆರಾಕ್ಸೈಡ್ ದಿವ್ಯೌಷಧವಾಗಿದೆ. ದಿನಕ್ಕೆ ಎರಡು ಬಾರಿ ಹೈಡ್ರೋಜನ್ ಪೆರಾಕ್ಸೈಡ್‍ನ ನಾಲ್ಕಾರು ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಮುಕ್ಕಳಿಸುವುದರಿಂದ ಒಸಡುಗಳ ಉರಿಯೂತ ನಿವಾರಣೆ ಆಗುತ್ತದೆ. ಜೊತೆಗೆ ಒಸಡುಗಳ ಆರೋಗ್ಯ ಹೆಚ್ಚುತ್ತದೆ.
     ಚರ್ಮ ರಂದ್ರಗಳಲ್ಲಿನ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಜಮಾವಣೆಯೇ ಮೊಡವೆಗಳು. ಹರಳೆ(ಹತ್ತಿ)ಗೆ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ನೆನೆಸಿ ಮೊಡವೆಗೆ ಸವರುವುದರಿಂದ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಮೊಡವೆಗಳು ನಿರ್ಮೂಲನೆಯಾಗುತ್ತವೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
    ಬಾಯಿಯೊಳಗಿನ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದಾದ ದುರ್ಗಂಧಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಉತ್ತಮ ಔಷಧವಾಗಿದೆ. ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ದುರ್ಗಂಧ ನಿವಾರಣೆ ಆಗುತ್ತದೆ ಹಾಗೂ ಬಾಯಿಯಲ್ಲಿ ತಾಜಾತನದ ಆಹ್ಲಾದ ಇರುತ್ತದೆ.
    ದೇಹದ ಯಾವುದೇ ಭಾಗದಲ್ಲಿನ ತೀವ್ರವಾದ ಯೀಸ್ಟ್ ಸೊಂಕನ್ನು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ತೊಳೆಯುವುದರಿಂದ ಸೊಂಕು ನಿವಾರಣೆಯಾಗುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್ ತುರಿಕೆ ಹಾಗೂ ಗಾಯಗಳನ್ನು ನಿವಾರಿಸುತ್ತದೆ.
    ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾದ ಚರ್ಮದ ಸೊಂಕು, ಗ್ಯಾಂಗ್ರಿನ್‍ನ ಚಿಕಿತ್ಸೆಗೆ ಹೈಡ್ರೋಜನ್ ಪೆರಾಕ್ಸೈಡ್ ಅತ್ಯುತ್ತಮ ಔಷಧವಾಗಿದೆ.
    ಹೈಡ್ರೋಜನ್ ಪೆರಾಕ್ಸೈಡ್ ಚರ್ಮದ ಮೇಲಿನ ಕ್ರಿಮಿಕೀಟಗಳನ್ನು ಕೊಲ್ಲುವ ಔಷಧವಾಗಿದ್ದು, ಚರ್ಮದ ರಕ್ಷಣೆ ಮಾಡುತ್ತದೆ.
    ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ಕ್ಲೋರಿನೇಟೆಡ್ ಅಲ್ಲದ ನೀರಿಗೆ ಸೇರಿಸಿ ಮೂಗಿನ ಒಳಭಾಗದಲ್ಲಿ ಸ್ಪ್ರೇ ಮಾಡಿಕೊಳ್ಳುವುದರಿಂದ ನಾಸಿಕ ನಾಳದ ಸಮಸ್ಯೆಗಳು ನಿವಾರಣೆ ಆಗುತ್ತವೆ.
    ಹೈಡ್ರೋಜನ್ ಪೆರಾಕ್ಸೈಡ್‍ನ್ನು ವೈದ್ಯಕೀಯ ಕ್ಷೇತ್ರದಲ್ಲಿ ಯಥೇಚ್ಚವಾಗಿ ಗಾಯಗಳನ್ನು ತೊಳೆಯಲು, ಸತ್ತ ಜೀವಕೋಶಗಳನ್ನು ತೆಗೆಯಲು ಮತ್ತು ಬಾಯಿಯ ಹುಣ್ಣನ್ನು ನಿವಾರಿಸಲು ಬಳಸಲಾಗುತ್ತದೆ.
    ದುರ್ಬಲಗೊಳಿಸದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಕಿವಿಯ ಮೇಣವನ್ನು ತೆಗೆಯಲು ಬಳಸಲಾಗುತ್ತದೆ. ಇದು ಕಿವಿಯ ಮೇಣದಿಂದಾದ ನೋವಿಗೆ ಉಪಶಮನ ನೀಡುವುದರ ಜೊತೆಗೆ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
    ದುರ್ಬಲಗೊಳಿಸಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಗಂಟಲಿನ ಉರಿಯೂತವನ್ನು ತೆಗೆದು ಹಾಕುತ್ತದೆ.

ಸೌಂದರ್ಯಕಾರಿ ಪ್ರಯೋಜನಗಳು :
    ಹೈಡ್ರೋಜನ್ ಪೆರಾಕ್ಸೈಡ್‍ನ 3 ಹನಿಗಳನ್ನು ಒಂದು ಲೋಟ ನೀರಿಗೆ ಸೇರಿಸಿ ಬಾಯಿಗೆ ಹಾಕಿ ಮುಕ್ಕಳಿಸುವುದರಿಂದ ಹಲ್ಲುಗಳು ಪಳಪಳನೇ ಹೊಳೆಯುತ್ತವೆ. ಜೊತೆಗೆ ಬಾಯಿಯ ತಾಜಾತನ ಕಾಪಾಡುತ್ತದೆ.
    ನೇಲ್ ಪಾಲಿಷ್‍ನ ಕಲೆಯನ್ನು ಹೋಗಲಾಡಿಸಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಐ ಮಾಡುತ್ತದೆ ಹಾಗೂ ಉಗುರುಗಳು ಹೊಳೆಯುವಂತೆ ಮಾಡುತ್ತದೆ.
    ಬೇಕಿಂಗ್ ಸೋಡಾದ ಜೊತೆಗೆ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಪೇಸ್ಟ್ ತಯಾರಿಸಿ ಹಲ್ಲುಗಳಿಗೆ ಉಜ್ಜುವುದರಿಂದ ಹಲ್ಲುಗಳ ಕಲೆಯು ಮಾಯವಾಗುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್‍ನಿಂದ ಸೌಂದರ್ಯ ಸಾಧನಕ್ಕೆ ಬಳಸುವ ಬ್ರಷ್, ಬಾಚಣಿಕೆ ಮತ್ತು ಹಲ್ಲುಜ್ಜುವ ಬ್ರಷ್‍ಗಳನ್ನು ತೊಳೆಯುವುದರಿಂದ ಅವುಗಳಲ್ಲಿನ ಸೂಕ್ಷ್ಮಜೀವಿಗಳನ್ನು ನಾಶವಾಗುತ್ತವೆ.
    ತಲೆಗೂದಲಿನ ಗಾಢವಾದ ಕೃತಕ ಬಣ್ಣವನ್ನು ಕಡಿಮೆ ಮಾಡಲು ಹೈಡ್ರೋಜನ್ ಪೆರಾಕ್ಸೈಡ್ ಸಹಾಯ ಮಾಡುತ್ತದೆ. ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
    ಹೈಡ್ರೋಜನ್ ಪೆರಾಕ್ಸೈಡ್ ಕಾಂಟಾಕ್ಟ್ ಲೆನ್ಸ್‍ನ್ನು ಶುಚಿಗೊಳಿಸಲು ಸಹಾಯ ಮಾಡುತ್ತದೆ. ಲೆನ್ಸ್‍ನಲ್ಲಿನ ಸೂಕ್ಷ್ಮಜೀವಿಗಳನ್ನು ನಾಶ ಮಾಡಿ ಸೋಂಕು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.
    ಹೀಗೆ ಅನೇಕ ಆರೋಗ್ಯಕಾರಿ ಹಾಗೂ ಸೌಂದರ್ಯಕಾರಿ ಪ್ರಯೋಜನಗಳನ್ನು ಹೊಂದಿದ ಹೈಡ್ರೋಜನ್ ಪೆರಾಕ್ಸೈಡ್‍ನ್ನು ಎಲ್ಲಾ ವಯಸ್ಸಿನವರೂ ಬಳಸಬಹುದು. ಏಕೆಂದರೆ ಇದು ಯಾವುದೇ ಅಡ್ಡಪರಿಣಾಮಗಳಿಲ್ಲದ ಒಂದು ದಿವ್ಯೌಷಧವಾಗಿದೆ.

‘ಟೀಚರ್’ ಫೆಬ್ರವರಿ 2015                                                                            ಆರ್.ಬಿ.ಗುರುಬಸವರಾಜ



No comments:

Post a Comment