February 11, 2015

ಶಿಕ್ಷಕರು ಮತ್ತು ವಚನ ಸಾಹಿತ್ಯ

 ಫೆಬ್ರವರಿ 2015 ರ 'ಗುರುಮಾರ್ಗ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
                  ಶಿಕ್ಷಕರು ಮತ್ತು ವಚನ ಸಾಹಿತ್ಯ
    ನಾಡಿನ ಸಮಸ್ತ ಓದುಗರಿಗೆ ಹಾಗೂ ಜನತೆಗೆ ‘ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು’. ಇಂದು ಕನ್ನಡಕ್ಕೆ ಎಂಟು ಜ್ಞಾನಪೀಠಗಳು ಲಭಿಸಿರುವುದಕ್ಕೆ ಪರೋಕ್ಷವಾಗಿ ಶಿಕ್ಷಕರೇ ಕಾರಣ. ಏಕೆಂದರೆ ಪ್ರತಿಯೊಬ್ಬ ಸಾಹಿತಿಗೆ ಸಾಹಿತ್ಯದ ಹುಚ್ಚು ಹಚ್ಚಿದವರು ಶಿಕ್ಷಕರೆಂದರೆ ಅತಿಶಯೋಕ್ತಿಯೇನಲ್ಲ. ಇಂದು ಕನ್ನಡ ಸಾಹಿತ್ಯವೆಂಬುದು ಹಲವಾರು ಪ್ರಕಾರಗಳಿಂದ ಕೂಡಿ ಸಂಪದ್ಭರಿತವಾಗಿದೆ. ಆ ಪ್ರಕಾರಗಳಲ್ಲಿ ‘ವಚನ ಸಾಹಿತ್ಯ’ವೂ ಒಂದು. ವಚನ ಸಾಹಿತ್ಯದ ದೃಷ್ಟಿಯಿಂದ ಹೇಳುವುದಾದರೆ ಹನ್ನೆರಡನೇ ಶತಮಾನ ಚಿನ್ನದ ಕಾಲ ಎನ್ನಬಹುದು. ಅದೊಂದು ಕನ್ನಡ ಸಾಹಿತ್ಯದ ಮೌಲಿಕ ಘಟ್ಟ. ಕಾವ್ಯವಾಹಿನಿ ಶ್ರೀಸಾಮಾನ್ಯನ ಬಳಿಗೆ ಬಂದ ಕಾಲ. ಈ ವಚನ ಸಾಹಿತ್ಯದ ಪ್ರತಿಯೊಬ್ಬ ವಚನಕಾರರೂ ಒಂದಲ್ಲ ಒಂದು ವೈಶಿಷ್ಟ್ಯದಿಂದ ನಕ್ಷತ್ರದಂತೆ ಮಿನುಗಿದ್ದಾರೆ.
    ಆ ಕಾಲದ ವಚನ ಸಾಹಿತ್ಯ ಇಂದಿಗೂ ಜೀವಂತವಾಗಿದೆ, ಚಲನಶೀಲವಾಗಿದೆ ಎಂದರೆ ಅದಕ್ಕೆ ಮೂಲ ಕಾರಣರೇ ಶಿಕ್ಷಕರು ಎಂಬುದು ನನ್ನ ಭಾವನೆ. ಯಾಕೆಂದರೆ ಮಗುವಿನ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ವಿವಿಧ ಹಂತಗಳ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ವಚನ ಸಾಹಿತ್ಯದ ರಸ-ರುಚಿಯನ್ನು ತುಂಬಿ ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ವಚನ ಸಾಹಿತ್ಯದ ಆಳ ಅರಿವು ಇರಬೇಕಾದುದು ಅವಶ್ಯಕವಾಗಿದೆ.
ವಚನ ಸಾಹಿತ್ಯದ ಪರಿಕಲ್ಪನೆ
    ಹನ್ನೆರಡನೇ ಶತಮಾನದ ಕನ್ನಡ ನೆಲದಲ್ಲಿ ಜೀವಿಸಿದ್ದ ಸಾವಿರಾರು ಶರಣರು ತಮ್ಮ ಕೈಯಲ್ಲಿನ ಕಾಯಕ, ಮನದಲ್ಲಿನ ಭಕ್ತಿ, ಮಾತಿನಲ್ಲಿನ ಸ್ಪಷ್ಟತೆಯಿಂದ ಒಡಗೂಡಿ ರಚಿಸಿದ ಸಾಹಿತ್ಯವೇ ‘ವಚನ ಸಾಹಿತ್ಯ’. ಕನ್ನಡದ ಆಡು ನುಡಿಯನ್ನು ಬಳಸಿಕೊಂಡು, ಅನುಭವ ಅಭಿವ್ಯಕ್ತಿಗಳಿಂದ ವಚನ ಸಾಹಿತ್ಯವು ಉದಯಿಸಿ ಬಂದಿದೆ. ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆದ್ಯಾತ್ಮಿಕ ಸಾಧನೆ ಸಿದ್ದಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯ ರಾಶಿ. ಮತ್ತೆ ಮತ್ತೆ ಮೊಗೆಮೊಗೆದು ಸವಿದರೂ ಮುಗಿಯಲಾರದ ಅನುಭಾವದ ರಸಪಾಕ. ಇಂದಿಗೂ ಅಚ್ಚುಮೆಚ್ಚಾದ  ಜೋತಿರ್ಮಯ ಸಾಹಿತ್ಯ.
    ಹನ್ನೆರಡನೇ ಶತಮಾನದ ಕರ್ನಾಟಕದಲ್ಲಿ ನಡೆದ ಶಿವಶರಣರ ಬಹುಮುಖ ಕ್ರಾಂತಿಯು ಜಾಗತಿಕ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಕಲುಷಿತವಾಗಿದ್ದ ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಪರಿಸರ ಈ ಕ್ರಾಂತಿಗೆ ಮೂಲವಾಗಿತ್ತು. ಶಿಕ್ಷಕರಾದ ನಾವು ಈ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು, ವಚನಗಳನ್ನು ಇಂದಿನ ಅಗತ್ಯತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಭೋದಿಸಬೇಕು. ಸಮಕಾಲಿನ ಸಮಸ್ಯೆಗಳನ್ನು ಕುರಿತು ಮಕ್ಕಳಲ್ಲಿ ಚಿಂತನಶೀಲ ಗುಣ ಬೆಳೆಸಿ, ಅವುಗಳಿಗೆ ಕಾರಣ ಮತ್ತು ಕಾರ್ಯ ಸಂಬಂಧವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಪೂರಕ ಅಂಶಗಳನ್ನು ಒದಗಿಸುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
ವಚನ ಸಾಹಿತ್ಯದ ಉಗಮ ಮತ್ತು ಆರಂಭ
    ವಚನ ಸಾಹಿತ್ಯದ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಅನ್ಯ ಭಾಷೆಗಳ ಮಾದರಿಯನ್ನು ಯಾವುದೇ ದೃಷ್ಟಿಯಿಂದಲೂ ಅನುಕರಿಸದೇ ಅಥವಾ  ಆರಂಭವಾಗಿಟ್ಟುಕೊಳ್ಳದೇ ಕೇವಲ ಅನುಭವದಿಂದಲೇ ಮೂಡಿ ರೂಪಿತವಾದ ಈ ಪ್ರಕಾರ ಕನ್ನಡದ ಹೆಮ್ಮೆಯಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡವು ನೀಡಿದ ಕಾಣಿಕೆಯಾಗಿದೆ.
    ಕ್ರಿ.ಶ 11-12ನೇ ಶತಮಾನದ ಕರ್ನಾಟಕದಲ್ಲಿ ರಾಜಮನೆತನಗಳು ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ತಮ್ಮತಮ್ಮಲ್ಲೇ ಹೊಡೆದಾಡುತ್ತಿದ್ದು, ಬೇರೆ ವಿಷಯಗಳತ್ತ ಗಮನ ಹರಿಸಲು ಸಾಧ್ಯವಿಲ್ಲದಂತಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸಲಾಗಿತ್ತು. ಸಮಾಜದಲ್ಲಿ ಅಭದ್ರತೆ, ಅಸ್ಥಿರತೆ ತಾಂಡವವಾಡುತ್ತಿದ್ದವು. ನೆರೆಯ ತಮಿಳುನಾಡಿನಲ್ಲಿ ಪ್ರಾರಂಭವಾಗಿದ್ದ ಭಕ್ತಿ ಆಂದೋಲನ ಕರ್ನಾಟಕದಲ್ಲಿ ಬೇರೊಂದು ರೀತಿಯ ಆಂದೋಲನವನ್ನು ಹುಟ್ಟು ಹಾಕಿತು. ಸಮಾಜದ ಅಮೂಲಾಗ್ರ ಬದಲಾವಣೆಯನ್ನು ಹಮ್ಮಿಕೊಂಡು ವೈಚಾರಿಕ ಕ್ರಾಂತಿಯನ್ನುಂಟು ಮಾಡುವ ಮೂಲಕ ಜನತೆಯ ಬುದ್ದಿ ಮತ್ತು ಹೃದಯಗಳನ್ನು ತಟ್ಟಿ, ಜನಜಾಗೃತಿ ಮೂಡಲು ವಚನಕಾರರು ಉದಯಿಸಿದರು. ವಸ್ತು, ರೀತಿ, ಅಲಂಕಾರ, ರಸ ಹೀಗೆ ಎಲ್ಲ ದೃಷ್ಟಿಯಿಂದಲೂ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯ ಸೃಷ್ಟಯಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಮನ್ವಂತರ ಪ್ರಾರಂಭವಾಯತು.
    ವಚನ ಸಾಹಿತ್ಯ ಸಹಜ ಸ್ಪೂರ್ತಿಯ ಹಿನ್ನಲೆಯನ್ನೊಳಗೊಂಡು ಶ್ರೀಸಾಮಾನ್ಯನ ಮಧ್ಯದಿಂದಲೇ ಬಂದ ಸಾಹಿತ್ಯ ಪ್ರಕಾರವಾದುದುರಿಂದ ಇದಕ್ಕೆ ಅನ್ಯಭಾಷಾ ಸಾಹಿತ್ಯ ಪ್ರಕಾರಗಳು ನೇರವಾದ ಪ್ರಭಾವ ಬೀರಿದವು ಎಂಬುದು ವಿಚಾರಣೀಯವಾದ ಅಂಶ. ವಚನಕಾರರು ಪ್ರಜ್ಞಾವಂತರಾಗಿದ್ದು, ಸಮಾಜದ ನೇರ ಅನುಭವವನ್ನು ಪಡೆದು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಅದರ ಸಾಕ್ಷಾತ್ಕಾರ ಮಾಡಿಕೊಂಡು ನಿಜವಾದ ನೆಲೆ-ಬೆಲೆಗಳನ್ನು ಅರಿತು ಬದುಕಿದ್ದರು. ಹೀಗಾಗಿ ಅವರಿಂದ ಹೊರಟ ಪ್ರತಿಯೊಂದು ನುಡಿಯೂ ಅಂದಿನ ಸಮಾಜದ ಪರಿಸ್ಥಿಯ ಅರಿವನ ನುಡಿಯಾಯಿತು. ಅನುಭಾವದ ನುಡುಯಾಯಿತು. ವಚನಕಾರರೇ ಈ ವಚನ ಸಾಹಿತ್ಯದ ಮೊದಲಿಗರಾದರು.
    ಕನ್ನಡದಲ್ಲಿ ವಚನ ಸಾಹಿತ್ಯ ಯಾವಾಗ ಆರಂಭವಾಯಿತು ಎಂಬುದಕ್ಕೆ ಖಚಿತ ಆಧಾರಗಳಿಲ್ಲವಾದರೂ ಬಸವಣ್ಣನವರ ಕಾಲದ ಹೊತ್ತಿಗೆ ವಿಜೃಂಭಿಸುತ್ತಿದ್ದ ವಚನ ಸಾಹಿತ್ಯ, ಬಸವಣ್ಣನಿಗಿಂತ ಪೂರ್ವದಲ್ಲಿ ಇದ್ದಿತೆನ್ನಲು ಸಾಕಷ್ಟು ಪುರಾವೆಗಳಿವೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಕೆಲವು ಹಿರಿಯ ವಚನಕಾರರಾದ ದೇವರ ದಾಸಿಮಯ್ಯ, ಮಾದರಸ ಮುಂತಾದವರನ್ನು ಸ್ತುತಿಸಿರುವುದರಿಂದ ಅವರಿಗಿಂತಲೂ ಹಿಂದೆಯೇ ವಚನ ಸಾಹಿತ್ಯ ಇತ್ತೆಂಬುದು ವೇದ್ಯವಾಗುತ್ತದೆ. “ವಚನ ವಾಗ್ಮಯದ ಕಾಲ ಬಸವಣ್ಣನಿಗಿಂತ ಒಂದು ಶತಮಾನದಷ್ಟು ಹಿಂದೆಯೇ ಇತ್ತೆಂದು ಊಹಿಸಬಹುದು” ಎಂದು ಆರ್.ಸಿ.ಹಿರೇಮಠರವರು ಹೇಳುತ್ತಾರೆ. ‘ವಚನ ಸಾಹಿತ್ಯವು ಕ್ರಿ.ಶ 09-10ನೇ ಶತಮಾನದಲ್ಲಿ ಇತ್ತೆಂದು, ಈಗ ಉಪಲಬ್ದವಿರುವ ಎಷ್ಟೋ ವಚನಗಳು ಪಂಪನ ಸಾಹಿತ್ಯಕ್ಕಿಂತ ಪ್ರಾಚೀನ’ ಎಂದು ಎಲ್.ಬಸವರಾಜರವರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ವಚನ ಸಾಹಿತ್ಯದ ಉಗಮದ ಬಗ್ಗೆ ನಾನಾ ರೀತಿಯ ಹೇಳಿಕೆಗಳಿದ್ದಾಗ್ಯೂ 12ನೇ ಶತಮಾನದಲ್ಲಿ ಉಚ್ಪ್ರಾಯ ಸ್ಥಿತಿಯಲ್ಲಿತ್ತೆಂದು ತಿಳಿಯಬಹುದಾಗಿದೆ.
ವಚನ ಸಾಹಿತ್ಯದ ಸ್ವರೂಪ
    ವಚನ ಸಾಹಿತ್ಯದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳು ಇರುವಂತೆ ಸ್ವರೂಪದ ಬಗ್ಗೆಯೂ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ವಚನ ಸಾಹಿತ್ಯ ಗದ್ಯಪದ್ಯಗಳ ಹದವಾದ ಮಿಶ್ರಣವಾಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ವಚನಗಳಲ್ಲಿ ಗದ್ಯದ ನಿರರ್ಗಳತೆ ಇಲ್ಲದಿದ್ದರೂ ಸರಳತೆ ಇದೆ. ಪದ್ಯದ ಕ್ರಮಬದ್ದ ಛಂದೋಗತಿ ಇಲ್ಲದಿದ್ದರೂ ಲಯವಿದೆ.
    “ವಚನಗಳು ಗದ್ಯಪದ್ಯಗಳ ಮಧ್ಯದ ಇನ್ನೊಂದು ಜಾತಿಯಾಗಿದ್ದು, ಅವುಗಳನ್ನು ಲಯಾನ್ವಿತ ಗದ್ಯವೆಂದೂ, ಅನಿಶ್ಚಿತ ಲಯವಿರುವ ಪದ್ಯವೆಂದೂ ಕರೆಯಬಹುದು” ಎಂಬುದು ಎಂ.ಚಿದಾನಂದಮೂರ್ತಿಯವರ ನಿಲುವು. ಸ್ಪಷ್ಟವಾಗಿ ಹೇಳುವುದಾದರೆ ವಚನಗಳೆಂದರೆ ನಡುಗನ್ನಡ ಶೈಲಿಯ ಅನುಭಾವ ಗದ್ಯದಲ್ಲಿ ಉಸುರಿದ ಆದ್ಮಾತ್ಮಿಕ ಭಾವಗೀತೆಗಳು.
    “ವಚನಗಳು ಪದ್ಯದ ಲಯವನ್ನು, ಗದ್ಯದ ಸ್ವಾಚ್ಛಂಧವನ್ನು ಒಳಗೊಂಡಿವೆ. ಗದ್ಯದಂತೆ ಓದಬಹುದು, ಪದ್ಯದಂತೆ ಹೇಳಬಹುದು, ಗೀತದಂತೆ ಹಾಡಬಹುದು” ಎಂಬುದು ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಮಾತು. ಹೀಗೆ ವಿವಿಧ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಲೋಕಿಸುವುದಾದರೆ ವಚನಗಳು ಕಾಲಮಾನದ ಎಲ್ಲಾ ಬಯಕೆ ಬೇಡಿಕೆಗಳನ್ನು ತನ್ನ ನಡೆ ನುಡಿಯಲ್ಲಿ  ಪರಿಮಳದಂತೆ ಅರಳಿಸಿದ ಸಂಪ್ರದಾಯಗಳನ್ನು ಗಾಳಿಗೆ ತೂರಿ, ಹೊಸ ಮಾರ್ಗವೊಂದನ್ನು ಸೃಷ್ಟಿಸಿದ ಸಾಹಿತ್ಯವಾಗಿದೆ. ಗದ್ಯಪದ್ಯಗಳೆರಡರ ಗುಣಾಂಶಗಳನ್ನು ಒಳಗೊಂಡು ತಂತಾನೇ ಅನುಭಾವ ಸಿದ್ದಿಸಿದ ಸಾಕ್ಷಾತ್ಕಾರದ ಸಾಕಾರದ ಆದ್ಯಾತ್ಮಿಕ ಭಾವಗೀತೆಗಳು ಎನಿಸುತ್ತವೆ.
ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳು
    ‘ಜೀವನ ಮೌಲ್ಯಗಳು ಅಧಃಪತನಕ್ಕಿಳಿದಿವೆ’ ಎಂಬಂತಹ ಮಾತು ಇತ್ತೀಚಿಗೆ ಕೇಳಿಬರುತ್ತಿವೆ. ಇದನ್ನು ಹೋಗಲಾಡಿಸಿ ಮಕ್ಕಳಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಲು ವಚನಗಳು ವಿಪುಲ ಅವಕಾಶ ಒದಗಿಸಿ ಕೊಡುತ್ತವೆ. ಪ್ರತಿಯೊಂದು ವಚನಗಳು ಮಾನವೀಯ/ಜೀವನ ಮೌಲ್ಯಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡಿರುತ್ತವೆ. ಅವುಗಳನ್ನು ಗುರುತಿಸಿ ಮಕ್ಕಳಲ್ಲಿ ಬೆಳೆಸಬೇಕಾದುದು ಶಿಕ್ಷಕರಿಗೆ ಅನಿವಾರ್ಯವಾಗಿದೆ.
    ಶರಣರು ವಚನ ಸೃಷ್ಟಿಗೈದುದು ತಮಗಾಗಿ ಅಲ್ಲ, ಜನಸಾಮಾನ್ಯರಿಗಾಗಿ. ಅದು ಅವರಲ್ಲಿನ ನಿಸ್ವಾರ್ಥ ಮನೋಭಾವನೆಯನ್ನು, ನಿಷ್ಕಾಮ ಪ್ರೇಮವನ್ನು, ನಿಷ್ಕಲ್ಮಷ ಮನಸ್ಸನ್ನು ತೋರಿಸುತ್ತದೆ. ಇದನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡಿಸಬೇಕಾಗಿದೆ. ವಿಶ್ವಶಾಂತಿಗೆ ಶರಣತತ್ವ ಶಾಂತಿ ಸಮಾದಾನ ನೀಡಬಲ್ಲದು. ದ್ವೇಷ, ವಿರಸ, ದ್ವಂದ್ವ ರಹಿತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಅಧ್ಯಯನ ಬಹಳ ಮುಖ್ಯ. ಇದನ್ನು ನಮ್ಮ ಪೀಳಿಗೆಗೆ ತಿಳಿಸಿ ಹೇಳಬೇಕಾಗಿದೆ. ವಚನ ಜ್ಞಾನ ವ್ಯಕ್ತಿಯಲ್ಲಿರುವ ಅಜ್ಞಾನವನ್ನು ಸುಟ್ಟುಹಾಕಿ ಅವನನ್ನು ಚೈತನ್ಯ ಸ್ವರೂಪನನ್ನಾಗಿಸುತ್ತದೆ. ಈ ಹಿನ್ನಲೆಯಲ್ಲಿ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳು ವ್ಯಕ್ತಿಯಲ್ಲಿ ಹಾಗೂ ಸಮಾಜದಲ್ಲಿ ಹೇಗೆ ಅರ್ವಿಭಾವಿಸಿವೆ ಎಂಬುದು ತಿಳಿದು ಬರುತ್ತದೆ.
    ಜ್ಞಾನ ಉದಯಿಸಿದ ಕ್ಷಣದಲ್ಲಿ ಅಜ್ಞಾನಕ್ಕೆ ಜಾಗವಿಲ್ಲ. ನಮ್ಮ ಸುತ್ತಲೂ ಆವರಿಸಿದ ಕತ್ತಲು ಒಂದು ಸಣ್ಣ ಬೆಳಕಿನಿಂದ ದೂರ ಸರಿಯುವಂತೆ, ವಿದ್ಯೆ ಮತ್ತು ಜ್ಞಾನಗಳು ವ್ಯಕ್ತಿಯ ಅಜ್ಞಾನ ತೊಲಗಿಸಿ ಸುಜ್ಞಾನ ಮೂಡಿಸುತ್ತವೆ. ವಚನಗಳ ಅಧ್ಯಯನದಿಂದ ಮಕ್ಕಳಲ್ಲಿ ಇಂತಹ ಸುಜ್ಞಾನ ಮೂಡಿ ಸರಳತೆ, ಸಜ್ಜನಿಕೆಗಳು ಮೇಳವಿಸಿ, ಭೇಧ ಮರೆತು ಸಮರಸರಿಂದ ಬಾಳುವ ವಿಶ್ವಭ್ರಾತೃತ್ವ ಗುಣಗಳನ್ನು ಬೆಳೆಸಬಹುದಾಗಿದೆ.
    ಸದ್ಗುಣಗಳು ಮಾನವನಿಗೆ ಆಭರಣ ಇದ್ದಂತೆ. ವ್ಯಕ್ತಿಯು ಮೊದಲು ಗುಣಾಢ್ಯನಾಗಬೇಕು. ಪ್ರತಿಕ್ಷಣ ತನ್ನನ್ನು ತಾನೇ ಸ್ವವಿಮರ್ಶೆಗೆ ಒಳಪಡಿಸಿಕೊಂಡು ಅಂಕು-ಡೊಂಕುಗಳನ್ನು ತಿದ್ದಿಕೊಳ್ಳಲು ಶ್ರಮಿಸಬೇಕು ಎಂಬುದನ್ನು ವಚನಗಳು ತಿಳಿಸಿಕೊಡುತ್ತವೆ.
    ವಚನ ಸಾಹಿತ್ಯ ವಿಸ್ತಾರವಾದ ನೆಲೆಗಟ್ಟುಳ್ಳದ್ದಾಗಿದ್ದು, ಜೀವನದ ಮೌಲ್ಯಗಳನ್ನು ವ್ಯಕ್ತಿಯಲ್ಲಿ ಬೆಳೆಸಲು ಪೂರಕವಾಗಿವೆ. ವ್ಯಕ್ತಿಗೆ ಅವಶ್ಯಕವಾದ ಸಂಸ್ಕಾರಯುತ ಮೌಲ್ಯಗಳನ್ನು ವಚನ ಸಾಹಿತ್ಯ ನೀಡುತ್ತದೆ. ಇಂದಿನ ವಿಶ್ವದ ವಿಷಮ ಸ್ಥಿತಿಗೆ ವಚನ ಸಾಹಿತ್ಯ ಸಿದ್ದೌಷಧವೆಂದರೆ ಅತಿಶಯೋಕ್ತಿ ಏನಲ್ಲ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಾಗಿದೆ. ವಚನ ಸಾಹಿತ್ಯವನ್ನು ತಮ್ಮ ಬಾಹ್ಯ ಮತ್ತು ಆಂತರಿಕ ಶಾಲಾ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಬೆಳೆಯುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಇದನ್ನು ಅರಿತು ನಾವೆಲ್ಲರೂ ಮುನ್ನುಗ್ಗೋಣ. ಆ ಮೂಲಕ ವಚನ ಸಾಹಿತ್ಯವನ್ನು ವಿಶ್ವಭ್ರಾತೃತ್ವಕ್ಕೆ ಬಳಸಿಕೊಂಡು ಹೊಸ ಮನ್ವಂತರಕ್ಕೆ ಸಾಕ್ಷಿಯಾಗೋಣ.
‘ಗುರುಮಾರ್ಗ’ ನವೆಂಬರ್ 2014                                                                       ಆರ್.ಬಿ.ಗುರುಬಸವರಾಜ.
       

                                   

   

No comments:

Post a Comment