July 31, 2015

ಬಾಲಸ್ಥೂಲತೆ

 ಸುಧಾ(ಆಗಸ್ಟ್ 6) ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ.



                                ಆಡುವ ಮಕ್ಕಳನ್ನು ಕಾಡುವ

                      ಬಾಲಸ್ಥೂಲತೆ

    ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ಸನು ತುಂಬಾ ಚೂಟಿ ಹುಡುಗ. ಸ್ನೇಹಿತರಿಂದ ‘ಡುಮ್ಮ’ ಎನ್ನುವ ಪಟ್ಟ. ಸ್ಥೂಲದೇಹಿಯಾದರೂ ಎಲ್ಲರಂತೆ ಆಟಪಾಠಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಊಟ ಮಾತ್ರ ಅಷ್ಟಕಷ್ಟೇ. ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಾನೆ. ಆದರೂ ದೇಹದ ಗಾತ್ರ ವಿಪರೀತವಾಗಿ ಏರುತ್ತಿದೆ.
    ನಾಲ್ಕನೆ ತರಗತಿಯ ಪ್ರಮೋದಿನಿಯದು ಭಿನ್ನಕಥೆ. ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರುತ್ತಾಳೆ. ಆಟೋಟಗಳಲ್ಲಿ ಭಾಗಿಯಾಗುವುದೇ ಇಲ್ಲ. ಯಾರೊಂದಿಗೂ ಹೆಚ್ಚು ಬೆರೆಯಲಾರಳು. ಏಕೆಂದರೆ ಸ್ಥೂಲತೆಯಿಂದಾಗಿ ಚಟುವಟಿಕೆಗಳಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ. ಏದುಸಿರು ಬಿಡುವಂತಾಗುತ್ತದೆ. ಹಾಗಾಗಿ ಯಾವುದರಲ್ಲೂ ಅವಳಗೆ ಆಸಕ್ತಿ ಇಲ್ಲ.
    ಇವರಿಬ್ಬರ ಚಟುವಟಿಕೆಗಳು ಭಿನ್ನವಾಗಿದ್ದರೂ ಸಮಸ್ಯೆ ಒಂದೇ. ಬಾಲಸ್ಥೂಲತೆ. ಇತ್ತೀಚೆಗೆ ಬಾಲಸ್ಥೂಲತೆಯು ಪ್ರೀಸ್ಕೂಲ್ ಮಕ್ಕಳಿಂದ ಹಿಡಿದು ಪಿ.ಯು.ಸಿ.ವರೆಗಿನ ಮಕ್ಕಳ ಒಂದು ಗಂಭಿರ ಸಮಸ್ಯೆಯಾಗಿದೆ. ಬಾಲಸ್ಥೂಲತೆಯ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಪಾಲಕರು ಕಳವಳಕ್ಕೀಡಾಗುತ್ತಿದ್ದಾರೆ. ಬಾಲಸ್ಥೂಲತೆ ಮಕ್ಕಳಲ್ಲಿ ತೂಕ ಹೆಚ್ಚಳದ ಸಮಸ್ಯೆಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಸಹ ತಂದೊಡ್ಡಿದೆ.
ಏನಿದು ಬಾಲಸ್ಥೂಲತೆ? : ಮಕ್ಕಳ ವಯಸ್ಸಿಗೆ ಅನುಗುಣವಾದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕ ಮತ್ತು ಸಾಮಾನ್ಯ ಗಾತ್ರಕ್ಕಿಂತ ಹೆಚ್ಚು ದೇಹಗಾತ್ರ ಹೊಂದಿರುವುದೇ ಬಾಲಸ್ಥೂಲತೆಯಾಗಿದೆ. ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾದಾಗ ಸ್ಥೂಲತೆ ಉಂಟಾಗುತ್ತದೆ.
    ಮಕ್ಕಳು ಸೇವಿಸುವ ಆಹಾರದ ಪ್ರಮಾಣ, ಸೇವನೆಯ ವಿಧಾನ, ಮನೆಯ ವಾತಾವರಣ, ದೈಹಿಕ ಚಟುವಟಿಕೆಗಳೆಲ್ಲವೂ ಬಾಲಸ್ಥೂಲತೆಯ ಮೇಲೆ ಪ್ರಭಾವಬೀರುವ  ಅಂಶಗಳಾಗಿವೆ.
ಕಾರಣಗಳು :
•    ದೈಹಿಕ ಚಟುವಟಿಕೆಗಳ ಕೊರತೆ
•    ಅನಾರೋಗ್ಯಕರ ಆಹಾರ ಪದ್ದತಿ
•    ವಂಶವಾಹಿಗಳು
•    ಆರೋಗ್ಯ ಸಮಸ್ಯೆಗಳು
•    ಹಾರ್ಮೋನುಗಳ ಏರುಪೇರು
•    ಔಷಧಗಳ ಸೇವನೆ
•    ದೈಹಿಕ ಚಟುವಟಿಕೆಗೆ ಪೂರಕ ವಾತಾವರಣದ ಕೊರತೆ
•    ಆಹಾರ ಮತ್ತು ಆರೋಗ್ಯ ಶಿಕ್ಷಣದ ಕೊರತೆ
•    ಆಹಾರ ಸೇವನೆಯ ವಿಧಾನಗಳÀಲ್ಲಿ ಏರುಪೇರು
ಪರಿಣಾಮಗಳು :
* ಅಧಿಕ ರಕ್ತದೊತ್ತಡ * ಅಧಿಕ ಕೊಲೆಸ್ಟ್ರಾಲ್ ಸಂಗ್ರಹ * ಟೈಪ್-2 ಡಯಾಬಿಟಿಸ್ * ನಿದ್ರಾಹೀನತೆ * ಅಸ್ತಮಾ * ಕೀಲುನೋವು * ಅಸ್ಥಿಮಜ್ಜೆ ಅಸ್ವಸ್ಥತೆ * ಹೃದಯ ಸಂಬಂಧಿ ಕಾಯಿಲೆಗಳು * ಪಿತ್ತಜನಕಾಂಗದ ಕಾಯಿಲೆ
* ಮಾನಸಿಕ ಒತ್ತಡ, ಖಿನ್ನತೆ * ಪರಾವಲಂಬಿ ಜೀವನ * ಕಡಿಮೆ ಜೀವನೋತ್ಸಾಹ * ಚಯಾಪಚಯ ಕ್ರಿಯೆಗಳ ತೊಂದರೆ * ಕಲಿಕಾ ತೊಂದರೆಗಳು * ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಕ್ರಿಯೆಗಳಲ್ಲಿ ಏರಿಳಿತ

    ದೇಹದ ಸ್ಥೂಲತೆ ಒಮ್ಮೆ ಹೆಚ್ಚಿದ ಮೇಲೆ ಅದರ ನಿಯಂತ್ರಣ ಕಷ್ಟ. ಏಕೆಂದರೆ ಅದನ್ನು ನಿಯಂತ್ರಿಸುವ ಚಿಕಿತ್ಸೆಗೆ ಹೆಚ್ಚು ಶ್ರಮ, ಸಮಯ ಮತ್ತು ಹಣ ವ್ಯಯವಾಗುತ್ತದೆ. ಕುಟುಂಬದ ಸಕ್ರಿಯ ಚಟುವಟಿಕೆಗಳು ಮತ್ತು ಆರೋಗ್ಯಕರ ಆಹಾರ ಪದ್ದತಿಯ ವಾತಾವರಣವು ಬಾಲಸ್ಥೂಲತೆಯನ್ನು ತಡೆಯುವ ಮಾರ್ಗದ ಮೊದಲ ಹೆಜ್ಜೆಯಾಗಿದೆ. ಆ ನಿಟ್ಟಿನಲ್ಲಿ ಪಾಲಕರು ಕೆಲವು ವರ್ತನೆ ಮತ್ತು ನಡವಳಿಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ.
ಹೀಗಿರಲಿ ನಮ್ಮ ನಡತೆ ಮತ್ತು ವರ್ತನೆಗಳು :
•    ಹೊರಗಿನಿಂದ ತರುವ ರೆಡಿಮೇಡ್ ಆಹಾರ ಪದಾರ್ಥಗಳ ಮೇಲೆ ನಿಯಂತ್ರಣ ಇರಲಿ. ಮಕ್ಕಳ ವಯಸ್ಸಿಗನುಗುಣವಾದ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿಸಿ.
•    ಕಡಿಮೆ ಸಿಹಿಕಾರಕ ಪಾನಿಯಗಳನ್ನು ಮಾತ್ರ ಖರೀದಿಸಿ. ಸಾಧ್ಯವಾದಷ್ಟೂ ಸ್ವಾಭಾವಿಕ ಪಾನೀಯಗಳಾದ ನೀರು, ಹಾಲು, ಮೊಸರು, ಮಜ್ಜಿಗೆ, ಎಳನೀರು,  ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಲು ಪ್ರೋತ್ಸಾಹಿಸಿ.
•    ಮಕ್ಕಳಿಗೆ ನೀಡುವ ಆಹಾರದಲ್ಲಿ ಹಸಿ ತರಕಾರಿಗಳು, ಮೊಳಕೆ ಬರಿಸಿದ ಧಾನ್ಯಗಳು, ನಾರಿನಂಶ ಇರುವ ಆಹಾರಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಿ.
•    ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ಕಾಣುವಂತೆ ಮತ್ತು ಸುಲಭವಾಗಿ ಸಿಗುವಂತೆ ಇಡಿ. ಅನಾರೋಗ್ಯಕರ ಆಹಾರ ಪದಾರ್ಥಗಳು ಮತ್ತು ಅಧಿಕ ಕ್ಯಾಲೋರಿ ಇರುವ ಆಹಾರಾಂಶಗಳನ್ನು ಮಕ್ಕಳಿಗೆ ಸಿಗದಂತೆ ಇಡಿ.
•    ಆಹಾರ ಸೇವನೆಯ ವಿಧಾನ ಮತ್ತು ವ್ಯಾಯಾಮಗಳ ವಿಚಾರದಲ್ಲಿ ಪಾಲಕರು ಮಕ್ಕಳಿಗೆ ಆದರ್ಶಪ್ರಾಯವಾಗಿರಲಿ.
•    ಮಕ್ಕಳ ಜೊತೆ ಸೇರಿ ಊಟ ಮಾಡುವ ಪದ್ದತಿ ಬೆಳೆಸಿಕೊಳ್ಳಿ. ಇದು ಆಹಾರ ಸೇವನೆಯ ವಿಧಾನದ ಮಾರ್ಗದರ್ಶನಕ್ಕೆ ಉತ್ತಮ ಸಮಯ.
•    ಜಡ ಮನೋರಂಜನಾ ಅವಕಾಶಗಳನ್ನು ಕಡಿಮೆ ಮಾಡಿ. ಟಿ.ವಿ, ಕಂಪ್ಯೂಟರ್, ವೀಡಿಯೋ ಗೇಮ್‍ಗಳನ್ನು ಊಟದ ಕೊಠಡಿ ಮತ್ತು ಮಲಗುವ ಕೊಠಡಿಗಳಿಂದ ದೂರವಿಡಿ. ಇವು ಊಟ ಮತ್ತು ನಿದ್ರೆಗೆ ಭಂಗ ತರುತ್ತವೆ.
•    ಮಕ್ಕಳ ಟಿ.ವಿ. ನೋಡುವ ಅವಧಿಯನ್ನು ಮಿತಿಗೊಳಿಸಿ. ರಜಾದಿನಗಳಲ್ಲಿ 2 ಗಂಟೆಗಿಂತ ಹೆಚ್ಚು ಹೊತ್ತು ಟಿ.ವಿ. ನೋಡುವುದನ್ನು ನಿಷೇಧಿಸಿ.
•    ಹೆಚ್ಚು ಹೊತ್ತು ಟಿ.ವಿ. ನೋಡುವುದು ಮತ್ತು ನೋಡುತ್ತಾ ತಿನ್ನುವುದು ಎರಡು ರೀತಿಯ ದುಷ್ಪರಿಣಾಮಗಳನ್ನು ತರುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬಿನಾಂಶ ಶೇಖರಣೆ ಆಗುತ್ತದೆ ಮತ್ತು ನಿಷ್ಕ್ರಿಯತೆ ಉಂಟಾಗುತ್ತದೆ.
•    ಟಿ.ವಿ. ನೋಡುವ ಸಮಯವನ್ನು ಇತರೆ ಚಟುವಟಿಕೆಗಳಿಗೆ ಬದಲಾಯಿಸಿ.
•    ಸ್ಥೂಲದೇಹಿ ಮಕ್ಕಳ ಚಟುವಟಿಕೆಗಳ ಪಟ್ಟಿ ಮತ್ತು ಆಹಾರ ಪ್ರಮಾಣವನ್ನು ದಿನಚರಿ/ಕ್ಯಾಲೆಂಡರ್‍ಗಳಲ್ಲಿ ಮಕ್ಕಳಿಗೆ ಕಾಣುವಂತೆ ನಮೂದಿಸಿ. ಅದರಂತೆ ದೈನಂದಿನ ಚಟುವಟಿಕೆ ನಡೆಸುವಂತೆ ಪ್ರೋತ್ಸಾಹಿಸಿ.
•    ಮಕ್ಕಳು ಹೆಚ್ಚುಹೊತ್ತು ಪಾಲಕರೊಂದಿಗೆ ಸಮಯ ಕಳೆಯಲು ಅಥವಾ ಪಾಲಕರ ಚಟುವಟಿಕೆಗಳಲ್ಲಿ ಭಾಗಿಯಾಗಲು ಇಷ್ಟಪಡುತ್ತಾರೆ. ನಿಮ್ಮ ಚಟುವಟಿಕೆಗಳಲ್ಲಿ ಅವರನ್ನು ಸೇರಿಸಿಕೊಳ್ಳಿ. ಇದರಿಂದ ಅವರಿಗೆ ಉತ್ತಮ ದೈಹಿಕ ಚಟುವಟಿಕೆ ದೊರೆಯುತ್ತದೆ ಹಾಗೂ ಮಕ್ಕಳು ಮತ್ತು ಪಾಲಕರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ.
•    ಮಕ್ಕಳು ಸಾಕಷ್ಟು ನಿದ್ದೆ ಮಾಡಲು ಅವಕಾಶ ನೀಡಿ. ಮಕ್ಕಳ ವಯಸ್ಸಿಗನುಗುಣವಾಗಿ ಅಗತ್ಯ ನಿದ್ದೆ ಮಾಡಿದ ಮಕ್ಕಳಲ್ಲಿ ಸ್ಥೂಲದೇಹದ ಸಾಧ್ಯತೆ ಕಡಿಮೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
        ಮಕ್ಕಳ ಮತ್ತು ಪಾಲಕರ ನಡವಳಿಕೆಗಳು ಬಾಲ ಸ್ಥೂಲತೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ಆದ್ದರಿಂದ ಪಾಲಕರು ಮೊದಲು ಉತ್ತಮ ಆಹಾರ ಪದ್ದತಿಗಳನ್ನು ಪ್ರದರ್ಶಿಸಲಿ. ನಂತರ ಮಕ್ಕಳಲ್ಲಿ ಆ ಪದ್ದತಿಗಳನ್ನು ಬೆಳೆಸಲು ಪ್ರಯತ್ನಿಸಲಿ. ಮಕ್ಕಳ ಉತ್ತಮ ಪ್ರಯತ್ನಗಳನ್ನು ಪ್ರಶಂಸಿಸಿ.    
ಇವುಗಳನ್ನೂ ಗಮನಿಸಿ! :
    ನಿಮ್ಮ ಮಗು ಅಗತ್ಯಕ್ಕಿಂತ ಅಧಿಕ ತೂಕ ಹೊಂದಿದ್ದರೆ, ಆ ಮಗುವಿಗೆ ಇಡೀ ಕುಟುಂಬದ ದೈಹಿಕ, ಮಾನಸಿಕ ಬೆಂಬಲ ಅಗತ್ಯ. ಮಕ್ಕಳ ಭಾವನೆಗಳು ಹೆತ್ತವರ ಭಾವನೆಗಳನ್ನು ಆಧರಿಸಿವೆ. ಮಗು ಯಾವುದೇ ತೂಕ ಹೊಂದಿರಲಿ, ಮೊದಲು ನೀವು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಆಗ ಮಗುವಿನಲ್ಲಿ ಆತಂಕ ಮರೆಯಾಗುತ್ತದೆ.
    ತೂಕದ ಬಗ್ಗೆ ಮಗುವಿನೊಂದಿಗೆ ಮಾತನಾಡಿ ಕಾಳಜಿ ಮತ್ತು ಅವಕಾಶಗಳನ್ನು ಹಂಚಿಕೊಳ್ಳಿ. ತೂಕದ ವಿಷಯ ಗಮನದಲ್ಲಿರಿಸಿಕೊಂಡು ಮಗುವನ್ನು ಪ್ರತ್ಯೇಕಿಸುವುದು  ಸೂಕ್ತವಲ್ಲ. ಬದಲಾಗಿ ಆಹಾರ ಸೇವನಾ ಪದ್ದತಿ ಮತ್ತು ದೈಹಿಕ ಚಟುವಟಿಕೆಗಳನ್ನು ಬದಲಿಸುವತ್ತ ಗಮನ ಹರಿಸಿ.
    ಮಗುವಿನ ಅಗತ್ಯತೆ ಮತ್ತು ಕಾರ್ಯ ಸಾಧ್ಯತೆಗಳ ಬಗ್ಗೆ ಸೂಕ್ಷ್ಮದಿಂದಿರಿ. ಸ್ಥೂಲದೇಹಿ ಮಕ್ಕಳು ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಲು ಅನಾಸಕ್ತಿ ಹೊಂದಿರುತ್ತಾರೆ. ಚಟುವಟಿಕೆಗಳು ಸ್ಥೂಲದೇಹಿ ಮಗುವಿಗೆ ಆತ್ಮವಿಶ್ವಾಸ ನೀಡುವಂತಿರಬೇಕೇ ಹೊರತು ಮಾನಸಿಕವಾಗಿ ಹಿಂಸೆ ನೀಡುವಂತರಬಾರದು.
    ಪ್ರತಿಯೊಂದು ಮಗುವೂ ಕೂಡಾ ರಾಷ್ಟ್ರದ ಆಸ್ತಿ. ಈ ಆಸ್ತಿಯನ್ನು ಉತ್ತಮವಾಗಿ ಬೆಳೆಸಿ. ದೇಶದ ಅಭಿವೃದ್ದಿಗೆ ಕೈಜೋಡಿಸೋಣವೇ?
                                                                                                               ಆರ್.ಬಿ.ಗುರುಬಸವರಾಜ.

No comments:

Post a Comment