July 15, 2015

NATA ಪರೀಕ್ಷೆ

 ದಿನಾಂಕ 15-07-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.


                 NATAಗೆ ನೀಟಾಗಿ ತಯಾರಾಗಿ
    ಅತೀ ಹೆಚ್ಚು ವೃತ್ತಿ ಅವಕಾಶಗಳನ್ನು ಹೊಂದಿದ ಆರ್ಕಿಟೆಕ್ಚರ್ ಕೋರ್ಸ್ ಸೇರಲು NATA(ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಎಂಬುದು ಕಡ್ಡಾಯ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿದರೆ ಮಾತ್ರ 5 ವರ್ಷಗಳ ಆರ್ಕಿಟೆಕ್ಚರ್ ಕೋರ್ಸ್‍ಗೆ ಪ್ರವೇಶ ದೊರೆಯುತ್ತದೆ. ಆರ್ಕಿಟೆಕ್ಚರ್ ಕೌನ್ಸಿಲ್‍ನಿಂದ ಅಂಗೀಕೃತಗೊಂಡ ಯಾವುದೇ ಸರಕಾರಿ, ಅನುದಾನಿತ, ಅನುದಾನ ರಹಿತ, ಸ್ವಾಯತ್ತ ಕಾಲೇಜುಗಳು ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ NATA ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಯ ಚಿತ್ರಕಲೆ, ವೀಕ್ಷಣಾ ಕೌಶಲ್ಯ, ಸೌಂದರ್ಯ ಸಂವಹನಾ ಸಾಮಥ್ರ್ಯ, ನಿರ್ಣಾಯಕ ಚಿಂತನಾ ಸಾಮಥ್ರ್ಯಗಳನ್ನು ಅಳೆಯಲಾಗುತ್ತದೆ. ಹಾಗಾಗಿ ಆರ್ಕಿಟೆಕ್ಚರ್ ಸೇರಬಯಸುವವರಿಗೆ ಇದೊಂದು ಮಹತ್ವದ ಪರೀಕ್ಷೆಯಾಗಿದೆ.
ಅರ್ಹತೆ : NATA ಪರೀಕ್ಷೆ ಬರೆಯಲು ಯಾವುದೇ ಪದವಿ ಪೂರ್ವ ಪರೀಕ್ಷಾ ಮಂಡಳಿಯ ಪಿ.ಯು.ಸಿ.ಯಲ್ಲಿ ಶೇಕಡಾ 50 ರಷ್ಟು ಅಂಕಗಳಿಸಿ ಉತ್ತೀರ್ಣತೆ ಹೊಂದಿರಬೇಕು. ಜೊತೆಗೆ ಗಣಿತವನ್ನು ಒಂದು ವಿಷಯವಾಗಿ ಅಬ್ಯಾಸ ಮಾಡಿರಬೇಕು.
ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : NATA  ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. www.nata.in ವೆಬ್‍ತಾಣದಲ್ಲಿ ನೊಂದಣಿ ಮಾಡಿಕೊಂಡ ನಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ 1250/-ರೂ.ಗಳನ್ನು ICIC ಬ್ಯಾಂಕ್‍ನಲ್ಲಿ ಚಲನ್ ಕಟ್ಟುವ ಮೂಲಕ ಹಣ ಪಾವತಿಸಬೇಕು ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ಪಾವತಿ ಮಾಡಬಹುದು.
    ನೊಂದಣಿಗೆ 19-08-2015 ಕೊನೆಯ ದಿನವಾಗಿರುತ್ತದೆ. ನೊಂದಣಿಯಾದ ನಂತರ ಪರೀಕ್ಷಾ ದಿನಾಂಕ ಮತ್ತು ಸ್ಥಳದ ಮಾಹಿತಿಯು ಪ್ರವೇಶ ಪತ್ರದಲ್ಲಿ ನಮೂದಾಗುತ್ತದೆ. ಪ್ರವೇಶ ಪತ್ರವನ್ನು ಅದೇ ವೆಬ್‍ತಾಣದಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷಾ ವಿಧಾನ : NATA ಪರೀಕ್ಷೆಯು ಲಿಖಿತ ಹಾಗೂ ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಡ್ರಾಯಿಂಗ್ ಟೆಸ್ಟ್ ಲಿಖಿತ ರೂಪದಲ್ಲಿದ್ದರೆ, ಸೌಂದರ್ಯ ಸಂವೇದನಾ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಸ್ವರೂಪದಲ್ಲಿರುತ್ತದೆ. ಪ್ರತಿವಿಭಾಗಕ್ಕೂ ಎರಡು ಗಂಟೆಗಳ ಸಮುಯಾವಕಾಶ ಇರುತ್ತದೆ. ಡ್ರಾಯಿಂಗ್ ಟೆಸ್ಟ್‍ನಲ್ಲಿ ಎರಡು ಮುಖ್ಯ ಪ್ರಶ್ನೆಗಳಿದ್ದು ನಾಲ್ಕು ಉಪ ಪ್ರಶ್ನೆಗಳಿರುತ್ತವೆ. ಸೌಂದರ್ಯ ಸಂವೇದನಾ ಪರೀಕ್ಷೆಯಲ್ಲಿ 40 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಒಮ್ಮೆ ಈ ಪರೀಕ್ಷೆ ಉತ್ತೀರ್ಣರಾದರೆ ಅದು 2 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಪರೀಕ್ಷಾ ವಿಷಯಗಳು
ಡ್ರಾಯಿಂಗ್ ಟೆಸ್ಟ್    ಸೌಂದರ್ಯ ಸಂವೇದನಾ ಟೆಸ್ಟ್
* ದೃಷ್ಟಿ ಚಿತ್ರಣ ಮತ್ತು ಸ್ಥಿರ ಚಿತ್ರಣ
* ನೆರಳು ಬೆಳಕಿನ ಪರಿಣಾಮದ ಚಿತ್ರಣ
* ಡ್ರಾಯಿಂಗ್ ಬಗೆಗಿನ ದೃಷ್ಟಿಕೋನ
* ಕಟ್ಟಡ/ ರಚನಾತ್ಮಕ ರೂಪದ 3 ಆಯಾಮಗಳ ಚಿತ್ರಗಳ ಸಂಯೋಜನೆ ಮತ್ತು ಹೋಂದಾಣಿಕೆ
* ನೀಡಿದ ರೂಪ ಮತ್ತು ಆಕಾರ ಬಳಸಿಕೊಂಡು ಆಸಕ್ತಿದಾಯಕ 2 ಆಯಾಮದ ಚಿತ್ರ ರಚನೆ
* ದೃಷ್ಟಿ ಸಮರಸ್ಯದ ವರ್ಣ ಸಂಯೋಜನೆ
* ಅಳತೆಯ ಮಾನಗಳನ್ನು ಅರ್ಥೈಸಿಕೊಂಡಿರುವಿಕೆ
* ದೈನಂದಿನ ಅನುಭವಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಮೆಮೊರಿ ಚಿತ್ರಗಳನ್ನಾಗಿಸುವುದು.   
 * ಗ್ರಹಿಕೆ, ಕಲ್ಪನೆ, ವೀಕ್ಷಣೆ, ಸೃಜನಶೀಲತೆ ಮತ್ತು ಸಂವಹನಗಳ ಮೂಲಕ ಕಟ್ಟಡ ರಚನಾ ಅರಿವು ಮತ್ತು ಸೌಂದರ್ಯ ಸಂವೇದನೆ.
* 2 ಆಯಾಮದ ಚಿತ್ರಗಳಿಂದ 3 ಆಯಾಮದ ವಸ್ತುಗಳ ರಚನಾ ಕೌಶಲ್ಯ
* ವಿವಿಧ ಭಂಗಿಗಳಲ್ಲಿ 3 ಆಯಾಮದ ವಸ್ತುಗಳ ರಚನೆ
* ಕಟ್ಟಡ ರಚನೆ ಮತ್ತು ಗುಣಗಳನ್ನು ಆಧರಿಸಿ ಬಳಸಲಾದ ವಿವಿಧ ವಸ್ತುಗಳನ್ನು ಗುರುತಿಸುವುದು
* ವಿಶ್ಲೇಷಣಾತ್ಮಕ ತಾರ್ಕಿಕತೆ
* ಮಾನಸಿಕ ಸಾಮಥ್ರ್ಯ
* ಕಾಲ್ಪನಿಕ ಅಭಿವ್ಯಕ್ತಿ ಕೌಶಲ್ಯ
* ಆರ್ಕಿಟೆಕ್ಚರ್ ಜಾಗೃತಿ

ತಯಾರಿ ಮುಖ್ಯ : ಪರೀಕ್ಷೆಗೆ ನಿರ್ದಿಷ್ಟ ಪಠ್ಯವಸ್ತು ಇಲ್ಲದೇ ಇರುವುದರಿಂದ ಕಠಿಣ ಶ್ರಮ ಅಗತ್ಯ. ಆದಾಗ್ಯೂ ವಿದ್ಯಾರ್ಥಿಗಳು ಆರ್ಕಿಟೆಕ್ಚರ್‍ಗೆ ಸಂಬಂಧಿಸಿದ ಪರಾಮರ್ಶನ ಗ್ರಂಥಗಳನ್ನು ಅಭ್ಯಾಸ ಮಾಡಬೇಕು. ಐತಿಹಾಸಿಕ ವಾಸ್ತುಶಿಲ್ಪಗಳ ಕಟ್ಟಡ ರಚನಾ ಕೌಶಲ್ಯಗಳನ್ನು ಅರಿಯಬೇಕು. ಜೊತೆಗೆ ನವೀನ ಮಾದರಿಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಸಿದ್ದ ಕಟ್ಟಡಗಳ ರಚನಾ ಕ್ರಮ ಹಾಗೂ ನಕ್ಷಾ ಸ್ವರೂಪ ತಿಳಿದಿರಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಅಭ್ಯಾಸ ಮಾಡಬೇಕು.
                                                                                                                     ಆರ್.ಬಿ.ಗುರುಬಸವರಾಜ.

No comments:

Post a Comment