July 4, 2015

ಹೀಗೊಂದು ಮಕ್ಕಳ ಕಥೆ

           ದಿನಾಂಕ 04-07-2015 ರಂದು ಅವಧಿ ಬ್ಲಾಗ್ (http://avadhimag.com/2015/07/04/ಹೀಗೊಂದು-ಮಕ್ಕಳ-ಕಥೆ ) ನಲ್ಲಿ ಪ್ರಕಟವಾದ ಮಕ್ಕಳ ಕಥೆ.

                17 ಹಸುಗಳು ಹಾಗೂ 3 ಜನ ಮಕ್ಕಳು

ಆಕಳವಾಡಿ ಎಂಬ ಊರಲ್ಲಿ ಭರಮಪ್ಪ ಎಂಬ ರೈತ ತನ್ನ ಹೆಂಡತಿ ಹಾಗೂ ಮೂರು ಜನ ಮಕ್ಕಳೊಂದಿಗೆ ವಾಸವಾಗಿದ್ದ. ಜೀವನೋಪಾಯಕ್ಕಾಗಿ 17 ಹಸುಗಳನ್ನು ಸಾಕಿಕೊಂಡಿದ್ದ. ಹಸುಗಳ ಆದಾಯದಿಂದ ಜೀವನ ಸಾಗಿಸುತ್ತಿದ್ದ. ಇದ್ದ ಮೂರು ಜನ ಗಂಡುಮಕ್ಕಳನ್ನು ಓದಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ವಿದ್ಯೆ ಹತ್ತಲಿಲ್ಲ. ಮೂವರೂ ಶಾಲೆಯತ್ತ ಮುಖ ಮಾಡಲೇ ಇಲ್ಲ. ಮಕ್ಕಳು ಮದುವೆ ವಯಸ್ಸಿಗೆ ಬಂದರೂ ದುಡಿಯುವ ಯೋಚನೆ ಮಾಡಲಿಲ್ಲ. ವೃಥಾ ಕಾಲಹರಣ ಮಾಡುತ್ತಲೇ ದಿನಗಳನ್ನು ತಳ್ಳತೊಡಗಿದರು.

ಹೀಗಿರಲು ಒಂದು ದಿನ ಜ್ವರ ಬಂದು ಮಲಗಿದ ಭರಮಪ್ಪ ಹಾಸಿಗೆ ಹಿಡಿದ. ಯಾವ ವೈದ್ಯರ ಬಳಿ ಹೋದರೂ ರೋಗ ವಾಸಿಯಾಗಲೇ ಇಲ್ಲ. ಅವನಿಗೆ ಹಿಡಿದುದು ಮಕ್ಕಳ ಬಗೆಗಿನ ಮಾನಸಿಕ ಕಾಯಿಲೆಯಾಗಿತ್ತು. ಹೀಗೆಯೇ ಒಂದು ದಿನ ಭರಮಪ್ಪ ಕೊನೆ ಉಸಿರೆಳೆದ. ಆದರೆ ಸಾಯುವ ಮುಂಚೆ ತನ್ನ ಮಕ್ಕಳಿಗಾಗಿ ಉಯಿಲು(ವಿಲ್) ಮಾಡಿಸಿದ್ದ. ಮರಣೋತ್ತರ ಕಾರ್ಯಗಳೆಲ್ಲಾ ಮುಗಿದ ಮೇಲೆ ಮಕ್ಕಳು ಉಯಿಲನ್ನು ಓದಿದರು. ಇದ್ದ ಅಲ್ಪ ಆಸ್ತಿಯನ್ನು ಮೂರು ಜನ ಮಕ್ಕಳಿಗೆ ಹಾಗೂ ಹೆಂಡತಿಗೂ ಸೇರಿ ನಾಲ್ಕು ಸಮಭಾಗಗಳಲ್ಲಿ ಹಂಚಲಾಗಿತ್ತು. ಆದರೆ 17 ಹಸುಗಳನ್ನು ಮಾತ್ರ ವಿಚಿತ್ರ ರೀತಿಯಲ್ಲಿ ಹಂಚಲಾಗಿತ್ತು. ಉಯಿಲಿನ ಪ್ರಕಾರ ಹಿರಿಯವನಿಗೆ ಒಂಬತ್ತನೇ ಒಂದು ಭಾಗ, ಮಧ್ಯದವನಿಗೆ ಮೂರನೇ ಒಂದು ಭಾಗ ಹಾಗೂ ಕಿರಿಯವನಿಗೆ ಎರಡನೇ ಒಂದು ಭಾಗದಷ್ಟು ಹಸುಗಳನ್ನು ಹಂಚಲಾಗಿತ್ತು. ಜೊತೆಗೆ ಒಂದು ಕರಾರು ಕೂಡಾ ಇತ್ತು. ಅದೇನೆಂದರೆ ಯಾವುದೇ ಕಾರಣಕ್ಕೂ ಹಸುಗಳನ್ನು ಕತ್ತರಿಸಿ ಭಾಗ ಮಾಡಿಕೊಳ್ಳುವಂತಿಲ್ಲ ಎಂಬುದು.
ಇದು ಮೂರೂ ಜನರಿಗೆ ಸಮಸ್ಯೆಯಾಯಿತು. ಹೇಗೇ ಲೆಕ್ಕಾಚಾರ ಮಾಡಿದರೂ 17 ಹಸುಗಳನ್ನು ಉಯಿಲಿನ ಪ್ರಕಾರ ಭಾಗಮಾಡಿಕೊಳ್ಳಲು ಆಗಲಿಲ್ಲ. ತಮ್ಮ ಸಮಸ್ಯೆಯನ್ನು ಊರ ಗೌಡನ ಬಳಿಗೆ ತೆಗೆದುಕೊಂಡು ಹೋದರು. ಗೌಡನಿಗೂ ಸಮಸ್ಯೆ ಬಗೆ ಹರಿಯಲಿಲ್ಲ. ಮರುದಿನ ಬರಲು ತಿಳಿಸಿದ. ಏನೇ ಲೆಕ್ಕಾಚಾರ ಮಾಡಿದರೂ ಉಯಿಲಿನಂತೆ ಹಸುಗಳನ್ನು ಭಾಗ ಮಾಡಲು ಸಾಧ್ಯವಾಗಲೇ ಇಲ್ಲ. ಇದನ್ನು ಗಮನಿಸಿದ ಗೌಡನ ಮಗ ಸಮಸ್ಯೆ ಏನೆಂದು ಕೇಳಿದ. ನನಗೆ ತಿಳಿಲಾರದ್ದು ನಿನಗೇನು ತಿಳಿದೀತು ಹೋಗಾಚೆ ಎಂದು ಗದರಿದ. ಆದರೂ ಸುಮ್ಮನಿರದ ಗೌಡನ ಮಗ ಸಮಸ್ಯೆ ತಂದ ಮೂರು ಜನರ ಬಳಿ ಹೋಗಿ ಸಮಸ್ಯೆ ಏನೆಂದು ಕೇಳಿದ. ಚಿಕ್ಕ ಹುಡುಗ ಇವನೇನು ಹೇಳಿಯಾನು ಎಂದು ಅನುಮಾನಿಸುತ್ತಾ, ಗೌಡನ ಮಗ ಎಂಬ ಕಾರಣಕ್ಕೆ ಸಮಸ್ಯೆಯನ್ನು ಅವನ ಮುಂದೆ ಹೇಳಿದರು. ತಕ್ಷಣವೇ ಅವನಿಗೆ ಇವರ ತಂದೆಯ ಬುದ್ದಿವಂತಿಕೆ ಅರ್ಥವಾಯ್ತು. 17 ಅವಿಭಾಜ್ಯ ಅಪವರ್ತನ ಎಂಬುದನ್ನು ಗ್ರಹಿಸಿದ ಕೂಡಲೇ ಅವನಿಗೆ ಉತ್ತರವೂ ಹೊಳೆಯಿತು. ಅವರನ್ನು ತಂದೆಯ ಬಳಿ ಕರೆದೊಯ್ದ. ಈ ಮೂವರ ಸಮಸ್ಯೆಗೆ ತಾನು ಉತ್ತರ ನೀಡುವುದಾಗಿ ತಂದೆಗೆ ತಿಳಿಸಿದ. ತಂದೆಗೆ ಆಶ್ಚರ್ಯವಾಯಿತು. ಆದರೂ ಅವಕಾಶ ಕೊಡೋಣ ಎಂದು ತೀಮರ್ಾನಿಸಿ ಒಪ್ಪಿಗೆ ಸೂಚಿಸಿದ.

ಅದಕ್ಕೆ ಆ ಹುಡುಗನು 17 ಹಸುಗಳನ್ನು ತರಲು ಹೇಳಿದ. ಅದರಂತೆ ಮೂವರೂ 17 ಹಸುಗಳನ್ನು ಅಲ್ಲಿಗೆ ತಂದರು. ತನ್ನ ತಂದೆಗೆ ಇನ್ನೊಂದು ಹಸು ತರಿಸಲು ಕೇಳಿಕೊಂಡ. 17 ಹಸುಗಳ ಜೊತೆಗೆ ಗೌಡನ ಒಂದು ಹಸು ಸೇರಿ 18 ಹಸುಗಳಾದವು. ಈಗ ಉಯಿಲನ್ನು ಓದಲು ತಿಳಿಸಿದ. ಹಿರಿಯವನಿಗೆ ಒಂಭತ್ತನೇ ಒಂದು ಭಾಗ. 18 ಹಸುಗಳನ್ನು ಒಂಭತ್ತು ಭಾಗ ಮಾಡಿದರು. ಅದರಲ್ಲಿ ಒಂದು ಭಾಗವನ್ನು ಹಿರಿಯವನಿಗೆ ಹಂಚಲಾಯಿತು. ಅಂದರೆ 2 ಹಸುಗಳು. ಮಧ್ಯದವನಿಗೆ ಮೂರನೇ ಒಂದು ಭಾಗ. 18 ಹಸುಗಳನ್ನು ಮೂರು ಭಾಗ ಮಾಡಿ ಅದರಲ್ಲಿ ಒಂದು ಭಾಗ ಅವನಿಗೆ ನೀಡಲಾಯಿತು. ಅಂದರೆ 6 ಹಸುಗಳು. ಕಿರಿಯವನಿಗೆ ಎರಡನೇ ಒಂದು ಭಾಗ. ಪುನಃ 18 ಹಸುಗಳನ್ನು ಎರಡು ಭಾಗ ಮಾಡಲಾಯಿತು. ಅದರಲ್ಲಿ ಒಂದು ಭಾಗ ಕಿರಿಯವನಿಗೆ ನೀಡಲಾಯಿತು. ಅಂದರೆ 9 ಹಸುಗಳು. ಹಿರಿಯವನಿಗೆ 2, ಮಧ್ಯದವನಿಗೆ 6 ಹಾಗೂ ಕಿರಿಯವನಿಗೆ 9 ಹಸು ಒಟ್ಟು 17 ಹಸುಗಳನ್ನು ಹಂಚಲಾಯಿತು. ಉಳಿದ ಒಂದು ಹಸುವನ್ನು ಗೌಡನಿಗೆ ಪುನಃ ಹಿಂದಿರುಗಿಸಲಾಯಿತು.

ತನ್ನ ಮಗ ಇಷ್ಟೊಂದು ಸುಲಭವಾಗಿ ಈ ಸಮಸ್ಯೆ ಬಗೆಹರಿಸಿದ್ದನ್ನು ನೋಡಿ ಗೌಡನಿಗೆ ಆಶ್ಚರ್ಯವಾಯಿತು. ಇದು ಹೇಗೆ ಸಾಧ್ಯವಾಯಿತೆಂದು ಮಗನನ್ನು ಕೇಳಲು ಅವನು ಇದನ್ನೆಲ್ಲಾ ನಮ್ಮ ಶಾಲೆಯಲ್ಲಿ ಕಲಿಸುತ್ತಾರೆ ಎಂದು ತಿಳಿಸಿದ. ಇದರಿಂದ ಸಂತೋಷಗೊಂಡ ಗೌಡ ಮೂವರಿಗೂ ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಬುದ್ದಿವಾದ ಹೇಳಿ ಕಳಿಸಿದ. ಮೂವರೂ ಮದುವೆ ಆಗಿ ಮಕ್ಕಳಾದ ಮೇಲೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವ ನಿಧರ್ಾರ ಮಾಡಿ ತಮ್ಮ ತಮ್ಮ ಪಾಲಿನ ಹಸುಗಳೊಂದಿಗೆ ಮನೆಗೆ ನಡೆದರು.
                                                                                                                        ಆರ್.ಬಿ.ಗುರುಬಸವರಾಜ

No comments:

Post a Comment