ಜೀರೊದಿಂದ ಹೀರೊ...

ಇಂದು ಕೃಷಿಯಲ್ಲಿ ನೋವನ್ನು ಕಂಡ ಅನೇಕ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಸೋಲಿನ ಸರಮಾಲೆಗಳನ್ನೇ ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಇವರ ಹೆಸರು ಮಹೇಶಯ್ಯ. ಊರು ಬಳ್ಳಾರಿ ಜಿಲ್ಲೆಯ ಹರಿಹರ ತಾಲ್ಲೂಕು ನಂದಿಗಾವಿ.
ಸದಾ ಹೊಸತನ್ನು ಮಾಡಬೇಕೆಂಬ ಹಂಬಲದಿಂದ ಎಂಟು ವರ್ಷಗಳ ಹಿಂದೆ ಸಾಲ ಮಾಡಿ ಟ್ರಕ್ ಒಂದನ್ನು ಖರೀದಿಸಿದರು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಟ್ರಕ್ ಸಾಲದ ಜೊತೆಗೆ ಇತರೆ ಸಾಲವೂ ಬೆಳೆಯುತ್ತಾ ಹೋಯಿತು. ಸಾಲಗಾರರ ಕಾಟವೂ ಹೆಚ್ಚಿತು. 
ಟ್ರಕ್ ಮಾರಬೇಕಾದ ಅನಿವಾರ್ಯತೆ. ಆದರೂ ಎದೆಗುಂದಲಿಲ್ಲ. ಟ್ರಕ್‌ ಮಾರಿ ಸಾಲಗಾರರಿಗೆ ಕೊಡಬೇಕಾದ ಹಣ ಕೊಟ್ಟಾಗ ಕೈ ಬರಿದಾಯಿತು. ಇಷ್ಟಾದರೂ ದುಡಿಯುವ ಉತ್ಸಾಹ ಅದಮ್ಯವಾಗಿತ್ತು. ಇದ್ದ ಅಲ್ಪ ಜಮೀನಿನಲ್ಲೇ ಛಲ ಬಿಡದ ತ್ರಿವಿಕ್ರಮನಂತೆ ಕೃಷಿ ಮಾಡಲು ಯೋಜನೆ ರೂಪಿಸಿದರು. ಯೋಜನೆಗೆ ಹಣ ಹೊಂದಿಸಲು ಹಗಲಿರುಳು ಕೂಲಿ ಕೆಲಸ ಮಾಡಿದರು. ಇದಕ್ಕೆ ಪತ್ನಿ ಸುಜಾತಮ್ಮನೂ ಕೈಜೋಡಿಸಿದರು.
ಛಲ ಬಿಡದೇ ಶ್ರಮ
ಆರು ವರ್ಷಗಳ ಹಿಂದೆ ಇದ್ದ ೧೦ ಗುಂಟೆ ಜಮೀನಿನಲ್ಲಿ ಅಡಿಕೆ ಬೆಳೆಯಲು ತೀರ್ಮಾನಿಸಿದರು. ಅಲ್ಲಿಯೇ ಗುಡಿಸಲು ಕಟ್ಟಿಕೊಂಡರು. ಆಗ ಅವರಲ್ಲಿದ್ದ ೫೦೦ ರೂಪಾಯಿಗಳಲ್ಲಿ ೨೦೦ ಅಡಿಕೆ ಸಸಿಗಳನ್ನು ಖರೀದಿಸಿದರು. ದಂಪತಿ ಸೇರಿ ಗುಣಿ ತೆಗೆದು ಅಡಿಕೆ ಸಸಿಗಳನ್ನು ನೆಟ್ಟರು. ಅಕ್ಕಪಕ್ಕದ ಗದ್ದೆಗಳಲ್ಲಿ ಹೆಚ್ಚಾಗಿ ಹರಿಯುತ್ತಿದ್ದ ನೀರನ್ನು ಸಂಗ್ರಹಿಸಿ ಅಡಿಕೆ ಸಸಿಗಳನ್ನು ಬೆಳೆಸಿದರು. ಜೀವನೋಪಾಯಕ್ಕಾಗಿ ಅಡಿಕೆ ಸಸಿಗಳ ಮಧ್ಯೆ ತರಕಾರಿ ಬೆಳೆಸಿದರು.
ಒಂದೆರಡು ವರ್ಷ ಕಳೆದ ಬಳಿಕ ಬ್ಯಾಂಕ್‌ನವರಿಂದ ಸಾಲ ಪಡೆದು ಹೈನುಗಾರಿಕೆ ಪ್ರಾರಂಭಿಸಿದರು. ಇದರಿಂದ ಪ್ರತಿದಿನ ೪೫--ರಿಂದ೫೦ ಲೀಟರ್ ಹಾಲು ಸಂಗ್ರಹಿಸಿ ಪಕ್ಕದ ಹರಿಹರಕ್ಕೆ ಒಯ್ದು ಮಾರುತ್ತಿದ್ದರು. ಹೈನುಗಾರಿಕೆ­ಯಿಂದ ಕೊಂಚ ಮಟ್ಟಿಗೆ ಆರ್ಥಿಕ ಸ್ಥಿತಿ ಸುಧಾರಿಸಿತು. ಬ್ಯಾಂಕಿನ ಸಾಲ ತೀರಿಸಿ ಉಳಿದ ಹಣದಲ್ಲಿ ಪಕ್ಕದ ತುಂಗಭದ್ರಾ ನದಿಯಿಂದ ೨ ಸಾವಿರ ಅಡಿ ಪೈಪ್‌ಲೈನ್ ಜೋಡಿಸಿ ಅಡಿಕೆ ಗಿಡಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡರು.
ಕನಸು ಸಾಕಾರ
ಭವಿಷ್ಯದ ಕನಸುಗಳು ಸಾಕಾರಗೊಳ್ಳಲು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇರುವ ೧೦ ಗುಂಟೆ ಜಮೀನಿನ ಸುತ್ತ ೧೦೦ ತೇಗದ ಸಸಿಗಳನ್ನು, ಅಲ್ಲಲ್ಲಿ ನಿಂಬೆ, ಸೀಬೆ, ಸಪೋಟ, ಹಲಸು ಬೆಳೆಸಿದ್ದಾರೆ. ಅಂತರ ಬೇಸಾಯ ಪದ್ಧತಿಯಿಂದ ಕಬ್ಬನ್ನು ಬೆಳೆಸಿದ್ದಾರೆ. ಜೊತೆಗೆ ಪಕ್ಕದ ೩ ಎಕರೆ ಜಮೀನನ್ನು ಗುತ್ತಿಗೆ ಪಡೆದು ಭತ್ತ ಬೆಳೆಯುತ್ತಿದ್ದಾರೆ.
ಇವರಲ್ಲಿನ ದುಡಿಯುವ ಛಲವನ್ನು ಗಮನಿಸಿ ಬ್ಯಾಂಕ್‌ನವರು ಟ್ರ್ಯಾಕ್ಟರ್ ಸಾಲ ನೀಡಿದ್ದಾರೆ. ಟ್ರ್ಯಾಕ್ಟರ್‌ನಿಂದ ಅಲ್ಪಾದಾಯ ಬರುತ್ತಿದ್ದು ಇತರೆ ಖರ್ಚುಗಳಿಗೆ ಸಹಾಯವಾಗುತ್ತಿದೆ ಎನ್ನುತ್ತಾರೆ ಮಹೇಶಯ್ಯ. ಬಿಡುವಿನ ವೇಳೆಯಲ್ಲಿ ಟ್ರ್ಯಾಕ್ಟರ್‌ನಿಂದ ಮಣ್ಣನ್ನು ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸುತ್ತಾರೆ. ಇದೇ ಗೊಬ್ಬರವನ್ನೇ ಜಮೀನಿಗೆ ಬಳಸುತ್ತಾರೆ. ಸಂಪರ್ಕಕ್ಕೆ: 9902992905