December 31, 2013

ಪ್ರಳಯ

ಪ್ರಳಯದ ಭೂತ ಓಡಿಸೋಣ
21ನೇ ಡಿಸೆಂಬರ್ 2012 ನೇ ದಿನವನ್ನು ಇಡೀ ವಿಶ್ವ ಕೌತುಕದಿಂದ ಕಾಯತೊಡಗಿದೆ. ಅಂತೆಯೇ ಬಳ್ಳಾರಿ ಜಿಲ್ಲೆಯ ಜನತೆಯೂ ಸಹ. ವಿಶ್ವ ಕಾಯುತ್ತಿರುವುದು ‘ಪ್ರಳಯ’ದ ಕುರಿತಾಗಿ. ಆದರೆ ಬಳ್ಳಾರಿ ಜನತೆ ಅದರಲ್ಲೂ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಕಾಯುತ್ತಿರುವುದು “ಜಿಲ್ಲಾ ಸಾಹಿತ್ಯ ಸಮ್ಮೇಳನ”ಕ್ಕಾಗಿ. ಒಂದು ಕಾಯುವಿಕೆ ಜಗತ್ತಿನ ಅಂತ್ಯವಾಗುವುದೆಂಬ ಮೌಢ್ಯತೆಯಿಂದ, ಇನ್ನೊಂದು ಕಾಯುವಿಕೆ ಹೊಸ ವೈಚಾರಿಕತೆಗಾಗಿ, ಹೊಸ ಸಾಹಿತಿಕ ಮುನ್ನೋಟಕ್ಕಾಗಿ. ಅದೇನೇ ಈಗ ಪ್ರಸ್ತುತ ವಿಷಯವೆಂದರೆ ‘ಪ್ರಳಯ’ ಭೂತ ಓಡಿಸುವುದು.
ಇತ್ತೀಚಿಗೆ ಅಮೇರಿಕಾದಲ್ಲಿ ಅಬ್ಬರಿಸಿದ ‘ಸ್ಯಾಂಡಿ’ ಹಾಗೂ ದಕ್ಷಿಣ ಭಾರತವನ್ನೇ ಅಲ್ಲೋಲ ಕಲ್ಲೋಲ ಮಾಡಿದ ‘ನೀಲಂ’ ಚಂಡಮಾರುತಗಳ ಕುರಿತು ಜನ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಅವುಗಳನ್ನು “ಪ್ರಳಯ”ದ ಮುನ್ಸೂಚನೆಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿದ್ಯಾವಂತರು ಇಂತಹ ಕಪೋಲ ಕಲ್ಪಿತ ಸುದ್ದಿಗಳನ್ನು ಜನಮನದಲ್ಲಿ ಬಿತ್ತುತ್ತಿದ್ದಾರೆ. ಇವುಗಳಿಗೆ ಇಂಬು ಕೊಡುವಂತೆ ದೃಶ್ಯ ಮಾಧ್ಯಮಗಳಂತೂ ತಮ್ಮ ಟಿ.ಆರ್.ಪಿ.ಗಾಗಿ ‘ಪ್ರಳಯ’ದ ಬಗ್ಗೆ ತೀರಾ ವಿಚಿತ್ರವಾದ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತಿರುವುದು ದೇಶದ ದುರಂತವೇ ಸರಿ.
‘ಪ್ರಳಯ’ಕ್ಕೆ ಸಂಬಂಧಿಸಿದ ಘಟನೆಗಳು ಕಪೋಲ ಕಲ್ಪಿತ ಎಂದು ಗೊತ್ತಿದ್ದರೂ ಮಾಧ್ಯಮದವರು ಪ್ರತಿಸೃಷ್ಟಿಸಿದ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡುವುದರಿಂದ ಮತ್ತು ಅದಕ್ಕನುಗುಣವಾದ ವಿಜ್ಞಾನದ ಪದಗಳನ್ನು ಬಳಸುವುದರಿಂದ ಜನರಿಗೆ ಯಾವುದು ಸತ್ಯ, ಯಾವುದು ಮಿತ್ಯ ಎಂಬುದು ಗೋಜಲು ಗೋಜಲಾಗಿದೆ. ಇದರಿಂದ ಜನರು ಮಾನಸಿಕವಾಗಿ ಚಿಂತಾಕ್ರಾಂತರಾಗಿದ್ದಾರೆ. ಅನೇಕ ಮಕ್ಕಳು ಪ್ರಳಯದ ಬಗ್ಗೆ ವಿಚಿತ್ರವಾದ ಭಯವನ್ನು ಹೊಂದಿದ್ದು ಕಲಿಕೆಯಲ್ಲಿ ನಿರಾಸಕ್ತರಾಗಿದ್ದಾರೆ. ಅದೆಷ್ಟೋ ಯುವಕರು ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ನಿಸ್ತೇಜರಾಗಿದ್ದಾರೆ. ಕೆಲವು ದೇಶಗಳ ಜನರು ಆತ್ಮಹತ್ಯೆಗೆ ಮುಂದಾಗಿರುವುದು ಮನುಕುಲದ ದುರಂತವಾಗಿದೆ.
ಜನರ ಮಾನಸಿಕ ಅಭದ್ರತೆ ಮತ್ತು ಭಯವನ್ನೇ ಅನೇಕರು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಪ್ರಳಯ ಸಿದ್ದಾಂತದ ಪ್ರಚಾರಕ್ಕಾಗಿ ಆಧುನಿಕ ವಿಜ್ಞಾನದ ಪದ ಪುಂಜಗಳನ್ನು ಬಳಸಿ ಜನರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತಿದ್ದಾರೆ. ಜನರ ಭಯ ಮತ್ತು ಮೂಢನಂಬಿಕೆಗಳನ್ನು ಬಂಡವಾಳ ಮಾಡಿಕೊಂಡ ಬಾಲಿವುಡ್, ಹಾಲಿವುಡ್‍ನ ನಿರ್ಮಾಪಕರು, ನಿರ್ದೇಶಕರು, ವಿತರಕರು ಜನರ ಜೇಬಿಗೆ ಕತ್ತರಿ ಹಾಕಿ ತಮ್ಮ ಖಜಾನೆಗಳನ್ನು  ತುಂಬಿಸಿಕೊಂಡಿದ್ದಾರೆ. ಹೀಗೆ ಜನರ ಜ್ಞಾನದ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಇನ್ನೂ ಅನೇಕ ಚಲನಚಿತ್ರಗಳು ಬಿಡುಗಡೆಯಾಗಬಹುದು.
ಪ್ರಳಯದ ಪ್ರತಿಪಾದಕರು ಹೇಳುವಂತೆ 21ನೇ ಡಿಸೆಂಬರ್ 2012ಕ್ಕೆ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳುವ ಅಂಶಗಳಿಗೆ ಯಾವುದೇ ವೈಜ್ಞಾನಿಕ ಹಿನ್ನಲೆಯಾಗಲೀ, ಬಲವಾದ ಆಧಾರಗಳಾಗಲೀ ಇಲ್ಲ. ಕೇವಲ ಊಹೆಗಳನ್ನಾಧರಿಸಿ ತಮ್ಮ ವಾದವನ್ನು ಜನರ ಮುಂದಿಟ್ಟಿದ್ದಾರೆ.
ಯಾವುದೇ ಮುನ್ಸೂಚನೆಗಳು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಅವುಗಳನ್ನು ‘ಊಹೆ’(hಥಿಠಿoಣhesis)ಗಳೆಂದು ಪರಿಗಣಿತವಾಗುತ್ತವೆ. ಇತರರು ಇಂತವುಗಳನ್ನು ಪರೀಕ್ಷಿಸಲು ಮುಕ್ತ ಅವಕಾಶವಿರುತ್ತದೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿರುವ ‘ಪ್ರಳಯ’ದ ಕುರಿತ ಮುನ್ಸೂಚನೆಗಳು ಕೇವಲ ಮನೋಜನ್ಯವಾಗಿದ್ದು, ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಲೂ ಆಗುವುದಿಲ್ಲ. ಏಕೆಂದರೆ ಪ್ರಳಯದ ಪ್ರತಿಪಾದಕರು ‘ನಂಬಿಕೆ ಮತ್ತು ಶ್ರದ್ಧೆ’ಗಳೆಂಬ ಚಿಪ್ಪಿನೊಳಗೆ ಅಡಗಿ ಕುಳಿತ್ತಿದ್ದಾರೆ. ಇಂತಹ ಅದೆಷ್ಟೋ ಭವಿಷ್ಯವಾಣಿಗಳು ವಿಫಲವಾದ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿವೆ.
ಆದರೆ ನಾವಿಲ್ಲಿ ಗಂಭಿರವಾಗಿ ಚರ್ಚಿಸಬೇಕಾಗಿರುವುದು ಪ್ರಳಯದ ಬಗ್ಗೆ ಅಲ್ಲ. ಮನುಕುಲವನ್ನು  ನಿಜವಾಗಿ ವಿನಾಶದತ್ತ ಕೊಂಡೊಯ್ಯುವ ಅಂಶಗಳು ಯಾವುವು ಎಂಬುದರ ಬಗ್ಗೆ. ಇಂದು ಭಾರತ ಮುಂದುವರೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿರುವುದೇನೋ ನಿಜ. ಆದರೆ ಮುಂದುವರೆದ ರಾಷ್ಟ್ರವಾಗುವುದು ಯಾವಾಗ? ಮುಂದುವರೆದ ರಾಷ್ಟ್ರವಾಗಲು ಇರುವ ಕೊರತೆಗಳೇನು? ದೇಶವನ್ನು ಕಾಡುತ್ತಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವೇನು? ಪರಿಹರಿಸುವವರು ಯಾರು? ಈ ಹಿಂದೆ ಇಂತಹ ಭೂಕಂಪ, ಭೂಕುಸಿತ, ಸುನಾಮಿ, ಚಂಡಮಾರುತಗಳು ನಡೆದಿಲ್ಲವೇ? ನಡೆದಾಗ ಪ್ರಳಯವಾಗಲಿಲ್ಲವೇ? ಆಗ ಕಾಡಲಾರದಂತ ಪ್ರಳಯ ಭೀತಿ ಈಗೇಕೆ? ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಉತ್ತರ ಕಂಡುಕೊಳ್ಳಬೇಕಾಗಿದೆ. 
ಭ್ರಷ್ಟಾಚಾರ, ಲಂಚಕೋರತನ, ಅಧಿಕಾರದ ಲಾಲಸೆ, ಉಗ್ರಗಾಮಿತನ, ಭಯೋತ್ಪಾದಕತೆ ಮುಂತಾದ ಸಮಸ್ಯೆಗಳು ದೇಶವನ್ನು ಕಿತ್ತು ತಿನ್ನುತ್ತಿವೆ. ಗೋದಾಮುಗಳಲ್ಲಿ ಅಪಾರ ಆಹಾರ ಸಾಮಗ್ರಿಗಳು ಕೊಳೆಯುತ್ತಿದ್ದರೂ ಜನರಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ದೇಶದ ಕಪ್ಪುಹಣ ಹೊರದೇಶದಲ್ಲಿ ಭದ್ರವಾಗಿದ್ದರೂ ಜನರು ಬಡವರಾಗಿ ಬೀದಿ ಬಿಕಾರಿಯಾಗಿದ್ದಾರೆ. ವೆಚ್ಚ ಭರಿಸಲಾಗದೇ ಅದೆಷ್ಟೋ ಜನ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಇಂತಹ ಪ್ರಳಯಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ನಾವ್ಯಾರೂ ಅವುಗಳ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಪ್ರವಾಹ, ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಭೂಮಿ ಉಗಮವಾದಾಗಿನಿಂದ ನಡೆಯುತ್ತಿದ್ದರೂ ಇಂದಿಗೂ ಅವುಗಳ ಮುನ್ಸೂಚನೆಗಳ ಮಾಹಿತಿ ಸಂಗ್ರಹಿಸಲಾಗುತ್ತಿಲ್ಲ. ತಮ್ಮ ಸ್ವಾರ್ಥ ದುರಾಸೆಗಳಿಗಾಗಿ ಕೆಸರೆರಚಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಇವುಗಳ ಪರಿವೆಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಪ್ರಳಯದ ಮುನ್ಸೂಚನೆ ಬಗ್ಗೆ ಜನರ ಮನಸ್ಸಿನಲ್ಲಿ ಇಲ್ಲಸಲ್ಲದ ಭೀತಿಯನ್ನು ಹುಟ್ಟುಹಾಕಿ ಶಾಂತಿ-ನೆಮ್ಮದಿ ಕದಡಿದವರ ವಿರುದ್ದ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ನಮ್ಮ ಕಾನೂನುಗಳ ದುರವ್ಯಸ್ಥೆಯೇ? 
ಅಮಾಯಕರನ್ನು ಅನಗತ್ಯ ಸಂಕಷ್ಟಗಳಿಂದ ಪಾರು ಮಾಡುವುದು, ಜನರ ಶ್ರದ್ಧೆ ಮತ್ತು ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡ ದುಷ್ಟಶಕ್ತಿಗಳ ವಿರುದ್ದ ಹೋರಾಡುವುದು ಪ್ರತಿಯೊಬ್ಬ ಚಿಂತನಾಶೀಲ ವ್ಯಕ್ತಿಯ ಕರ್ತವ್ಯ. ವೈಜ್ಞಾನಿಕ ದೃಷ್ಟಿಕೋನ ಎತ್ತಿಹಿಡಿದು, ಅಂಧವಿಶ್ವಾಸಗಳನ್ನು ಸೋಲಿಸಲು ವಿಜ್ಞಾನದ ನೈಜವಾದ ಆಳವಾದ ಮತ್ತು ಸ್ಪಷ್ಟವಾದ ಅರಿವು ಅತ್ಯಗತ್ಯ. ಈ ನಿಟ್ಟಿನಲ್ಲಿ ನಾಡಿನ ಪ್ರಗತಿಪರ ಹಾಗೂ ವೈಜ್ಞಾನಿಕ ಚಿಂತಕರು, ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸೇವಕರು, ವಿದ್ವಾಂಸರು ಎಲ್ಲರೂ ಒಟ್ಟಾಗಿ ಜನರ ಮನವನ್ನು ಕಲಕಿದ ವಿಚಿತ್ರಕಾರಿ ಅಂಶಗಳನ್ನು ಕಿತ್ತೊಗೆದು ಶಾಂತಿ ಸುವ್ಯವಸ್ಥಿತ ನಾಡ ಕಟ್ಟಲು ಕೈಜೋಡಿಸುವುದು ಅನಿವಾರ್ಯವಲ್ಲವೇ?
- ಆರ್.ಬಿ.ಗುರುಬಸವರಾಜ.

No comments:

Post a Comment