December 12, 2013

ಅಲೆದಾಟ ನಿಂತೀತೇ?

ಅಲೆದಾಟ ನಿಂತೀತೇ?

               ಘಟನೆ-1: ಅದು ಮದ್ಯಾಹ್ನದ ಮೊದಲನೆ ಅವಧಿ. ತರಗತಿ ಕೋಣೆಯಲ್ಲಿ ತುಂಬಾ ಉತ್ಸಾಹದಿಂದ ಬೋಧನೆಯಲ್ಲಿ ತೊಡಗಿದ್ದೆ. ಮಕ್ಕಳು ತನ್ಮಯರಾಗಿ ಆಲಿಸುತ್ತಿದ್ದರು. ಹೊರಗಿನಿಂದ ಬಂದ ಕರೆಯೊಂದು ಆ ವಾತಾವರಣವನ್ನು ಭಂಗಗೊಳಿಸಿತು. ತರಗತಿಯಿಂದ ಹೊರಬಂದು ವಿಚಾರಿಸಿದಾಗ ಗ್ರಾಮೀಣ ವ್ಯಾಸಂಗ ಪತ್ರಗಳನ್ನು ಭರ್ತಿಮಾಡಿಕೊಡಬೇಕೆಂದು ವಿನಂತಿಸಿದರು. ತರಗತಿ ಮುಗಿಸಿಕೊಂಡು ಬರುತ್ತೇನೆ, ಕಛೇರಿಯಲ್ಲಿರಿ ಎಂದು ಹೇಳಿದೆ. ನಾಳೆಯೇ ಡಾಕುಮೆಂಟ್ ವೆರಿಫಿಕೇಷನ್ ಇರುವುದೆಂದು, ಅದಕ್ಕಾಗಿ ಬೆಂಗಳೂರಿಗೆ ಹೋಗಬೇಕೆಂದು ಅಭ್ಯರ್ಥಿ ಗೋಗರೆದ.  ನನಗೆ ತರಗತಿ ಬಿಡುವಂತಿಲ್ಲ. ಆತನಿಗೋ ತುಂಬಾ ಅವಸರ. ಆದಷ್ಟೂ ಬೇಗನೇ ಹೋಗಬೇಕೆಂಬ ಆತುರ. ಮುಖ್ಯಗುರುಗಳ ಬಳಿ ಹೋಗಲು ಸೂಚಿಸಿದೆ. ಮುಖ್ಯಗುರುಗಳೇ ತಮ್ಮ ಬಳಿ ಕಳಿಸಿರುವುದಾಗಿ ತಿಳಿಸಿದ. ಅವನ ಚಡಪಡಿಕೆಯನ್ನು ನೋಡಲಾಗದೇ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಭರ್ತಿ ಮಾಡಿಕೊಟ್ಟು ಕಳಿಸಿ ತರಗತಿಗೆ ಬಂದೆ. ಅಷ್ಟೊತ್ತಿಗಾಗಲೇ ಮಕ್ಕಳ ಮನಸ್ಸು ವಿಚಲಿತಗೊಂಡಿತ್ತು. ಪರಿಕಲ್ಪನೆಯಿಂದ ದೂರವಾಗಿತ್ತು. ಮೊದಲು ಇದ್ದ ಆಸಕ್ತಿ ಮಕ್ಕಳಲ್ಲಿ ಹಾಗೂ ನನ್ನಲ್ಲಿ ಇರಲಿಲ್ಲ.

            ಘಟನೆ-2 :  ಅವನೊಬ್ಬ ಶಾಲೆಯ ಹಳೆ ವಿದ್ಯಾರ್ಥಿ. ವ್ಯಾಸಂಗ ಪ್ರಮಾಣ ಪತ್ರಕ್ಕಾಗಿ ಕಳೆದ ಎರಡು ದಿನಗಳಿಂದ ಶಾಲೆಗೆ ಎಡತಾಕುತ್ತಿದ್ದಾನೆ. ಮುಖ್ಯಗುರುಗಳು ತುರ್ತಾಗಿ ಆಸ್ಪತ್ರೆಗೆ ದಾಖಲಾದ್ದರಿಂದ ಶಾಲೆಯ ತಾತ್ಕಾಲಿಕ ಜವಾಬ್ದಾರಿಯನ್ನು ಯಾವ ಶಿಕ್ಷಕರಿಗೂ ವಹಿಸಿಲ್ಲ. ಮೂಲ ದಾಖಲೆಗಳಿರುವ ಗಾಡ್ರೇಜ್ ನ ಕೀಲಿಕೈ ಮುಖ್ಯಗುರುಗಳ ಬಳಿ ಇದೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿಯೊಬ್ಬ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ನೂರಾರು ಕಿಲೋಮೀಟರ್ ದೂರದಿಂದ ಬಂದಿದ್ದಾನೆ. ಮುಖ್ಯಗುರುಗಳು ಇನ್ನೂ ಎರಡು ದಿನ ಬರುವುದಿಲ್ಲ ಎಂಬ ಮುನ್ಸೂಚನೆ ಇದೆ. ಅಭ್ಯರ್ಥಿಗೆ ಪೀಕಲಾಟ ಶುರುವಾಯಿತು. ನಾಳೆಯೇ ಮೂಲ ದಾಖಲೆಗಳ ಪರಿಶೀಲನೆ ಇದೆ. ಅದಕ್ಕೆ ಶಾಲಾ ವ್ಯಾಸಂಗ ಪತ್ರದ ಅವಶ್ಯಕತೆ ಇದೆ. ಆದರೆ ಈಗ ಅದು ಸಿಗುವ ಸೂಚನೆ ಇಲ್ಲ. ಅದು ಸಿಗದೇ ಹೋದರೆ ತನಗೆ ಸಿಗಬೇಕಾದ ಹುದ್ದೆ ಸಿಗುತ್ತದೋ ಇಲ್ಲವೋ ಎನ್ನುವ ಆತಂಕದಲ್ಲಿ ಆ ಅಭ್ಯರ್ಥಿ ತೊಳಲಾಡತೊಡಗಿದ.

                   ಇದು ಕೇವಲ ಒಬ್ಬ ಅಭ್ಯರ್ಥಿ ಅಥವಾ ಒಬ್ಬ ಶಿಕ್ಷಕರ ಸಮಸ್ಯೆಯಲ್ಲ. ಬಹುತೇಕರು  ಇಂತಹ ಸಮಸ್ಯೆಯ ಸ್ವರೂಪವನ್ನು ಅನುಭವಿಸಿರುತ್ತಾರೆ. ಯಾವುದಾದರೂ ಉದ್ಯೋಗಕ್ಕಾಗಲೀ ಅಥವಾ ಉನ್ನತ ವ್ಯಾಸಂಗಕ್ಕಾಗಲೀ ಶಾಲಾ ಪ್ರಮಾಣ ಪತ್ರಗಳು ಅತೀ ಮುಖ್ಯ. ಅದರಲ್ಲಿ  ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳನ್ನು ಒಮ್ಮೆ ಮಾತ್ರ ಯಾವುದೇ ಶುಲ್ಕವಿಲ್ಲದೇ ಪಡೆಯುವ ಅವಕಾಶ ಇರುತ್ತದೆ. ಇನ್ನು ಕೆಲವು ಪ್ರಮಾಣ ಪತ್ರಗಳಾದ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಜನ್ಮ ದಿನಾಂಕ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಪತ್ರ, ಇತ್ಯಾದಿಗಳನ್ನು  ಅಭ್ಯರ್ಥಿಗಳು ಶುಲ್ಕವಿಲ್ಲದೇ ಎಷ್ಟು ಬಾರಿಯಾದರೂ ಪಡೆಯಬಹುದು.

           ನಿಜವಾದ ಸಮಸ್ಯೆ ಇರುವುದೇ ಇಲ್ಲಿ. ಪ್ರತಿಬಾರಿ ನೇಮಕಾತಿ ಪ್ರಕ್ರಿಯೆ ನೆಡೆದಾಗ ಅಥವಾ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವಾಗ , ಅಭ್ಯರ್ಥಿಗಳು ಮೇಲಿನ ಪ್ರಮಾಣ ಪತ್ರಗಳನ್ನು ಪುನಃ ಹೊಸದಾಗಿ ( ಈ ಹಿಂದೆ ಪಡೆದಿದ್ದರೂ ಸಹ) ತಾವು ಓದಿದ ಶಾಲೆಗಳಿಂದ ಪಡೆದುಕೊಳ್ಳಬೇಕು. ಇದು ಅಭ್ಯರ್ಥಿಗಳಿಗೆ ಹಾಗೂ ಶಾಲೆಗಳಲ್ಲಿ ದಾಖಲೆ ನಿರ್ವಹಿಸುವವರಿಗೆ ತುಂಬಾ ಕಿರಿಕಿರಿ ಎನಿಸುತ್ತದೆ. ಈ ಪ್ರಪತ್ರ(Forms)ಗಳಲ್ಲಿ ಆದೇಶ ಸಂಖ್ಯೆ ಮಾತ್ರ ಬದಲಾಗಿರುತ್ತದೆಯೇ ವಿನಹ ಅವುಗಳಲ್ಲಿ ಭರ್ತಿ ಮಾಡಬೇಕಾದ ಅಥವಾ ಭರ್ತಿ ಮಾಡಿದ ಮಾಹಿತಿಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಕಾಲಕಾಲಕ್ಕೆ ಆದೇಶಗಳು ಬದಲಾಗಬಹುದೇ  ಹೊರತು ಅಭ್ಯರ್ಥಿ ಓದಿದ ಶಾಲೆ, ಜನ್ಮ ದಿನಾಂಕ,  ಓದಿದ ವರ್ಷ ಇತ್ಯಾದಿ ಮಾಹಿತಿಗಳು ಬದಲಾಗಲು ಸಾಧ್ಯವಿಲ್ಲ.


                ಕೆಲವು ಅನಿವಾರ್ಯ ಕಾರಣಗಳಿಗಾಗಿ ತಾವು ವಾಸಿಸುವ ಸ್ಥಳದಿಂದ ನೂರಾರು ಕಿಲೋಮೀಟರ್ ದೂರದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳ ಪಾಡು ಹೇಳತೀರದು. ಈ ಪ್ರಮಾಣ ಪತ್ರಗಳನ್ನು ಪಡೆಯಲು ಶಾಲೆಗಳಿಗೆ ಹೋದಾಗ ಕೆಲವೊಮ್ಮೆ  ಮುಖ್ಯಗುರುಗಳು ಕರ್ತವ್ಯದ ನಿಮಿತ್ತವೋ ಅಥವಾ ವೈಯಕ್ತಕ ಕೆಲಸದ ನಿಮಿತ್ತವೋ ಶಾಲೆಯಲ್ಲಿ ಇರುವುದಿಲ್ಲ. ಅಲ್ಲದೇ ಇಂತಹ ಪ್ರಮಾಣ ಪತ್ರಗಳಿಗೆ ಪ್ರಭಾರ ವಹಿಸಿಕೊಂಡ ಶಿಕ್ಷಕರು ಸಹಿ ಹಾಕಲು ಹಿಂದು ಮುಂದು ನೋಡುತ್ತಾರೆ.

   
                 ಅಭ್ಯರ್ಥಿಗಳು ಬೇರೆ ಬೇರೆ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಂತೂ ಅವರ ಪಾಡು ಅನುಭವಿಸಿದವರಿಗೇ ಗೊತ್ತು. ಈ ಎಲ್ಲಾ ಪ್ರಕ್ರಿಯೆಗಳು ಸುಗಮವಾಗಿ ನಡೆದರೂ ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮೋದನೆ ಅಗತ್ಯ. ಹೀಗೆ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ  ಅಭ್ಯರ್ಥಿಗಳಿಗೆ ಸಾಕುಸಾಕಾಗಿರುತ್ತದೆ. ಕೆಲವೊಮ್ಮೆ ನಮೂನೆಗಳು ಬದಲಾಗಿವೆ ಎಂಬ ಸುಳ್ಳು ವದಂತಿಗಳು ಅಬ್ಯರ್ಥಿಗಳನ್ನು ಮತ್ತೊಮ್ಮೆ ಅಲೆದಾಟಕ್ಕೆ ಹಚ್ಚುತ್ತವೆ. 

                      ಈ ಎಲ್ಲಾ ಅಲೆದಾಟ, ಪರದಾಟಗಳನ್ನು ಸರ್ಕಾರ ಕೆಲವೊಂದು ಬದಲಾವಣೆಗಳೊಂದಿಗೆ ತಪ್ಪಿಸಬಹುದಾಗಿದೆ. ಇದಕ್ಕೆ ಎರಡು ಮಾರ್ಗೋಪಾಯಗಳಿವೆ. ಒಂದನೆಯದು, ಒಮ್ಮೆ ಶಾಲೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ಅಭ್ಯರ್ಥಿ ಖಾಯಂ ಆಗಿ ತಮ್ಮಲ್ಲೇ ಇಟ್ಟುಕೊಳ್ಳುವುದು(ಅಂಕ ಪಟ್ಟಿಗಳ ರೀತಿಯಲ್ಲಿ). ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ  ನಕಲು(ಜೆರಾಕ್ಸ್) ಪ್ರತಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅರ್ಜಿ ಹಾಕುವುದು. ಆಯ್ಕೆ ಸಂದರ್ಭದಲ್ಲಿ ಮೂಲ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಆಯ್ಕೆ ಮಾಡುವುದು. ಎರಡನೆಯದು, ಶಾಲೆಗಳಲ್ಲಿನ ದಾಖಲಾತಿ ವಹಿ ಹಾಗೂ ಅಂಕವಹಿಗಳನ್ನು ಗಣಕೀಕೃತಗೊಳಿಸುವುದು  ( ಪಹಣಿ ಪತ್ರದ ರೀತಿಯಲ್ಲಿ) ಪ್ರತೀ ಅಭ್ಯರ್ಥಿಗೆ ದಾಖಲಾತಿ ಸಮಯದಲ್ಲಿ ನೀಡುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಆನ್ ಲೈನ್ ಮೂಲಕ ಪರಿಶೀಲನೆ ನಡೆಸಬಹುದು. ಹೀಗೆ ಮಾಡುವುದರಿಂದ ಅಭ್ಯರ್ಥಿಗಳ ಅಲೆದಾಟವೂ ನಿಲ್ಲುತ್ತದೆ, ಶಿಕ್ಷಕರಿಗೆ ಪದೇ ಪದೇ ದಾಖಲೆ ನೀಡುವ ಕಿರಿಕಿರಿಯೂ ನಿಲ್ಲುತ್ತದೆ.
                                                                                                 - ಆರ್.ಬಿ.ಗುರುಬಸವರಾಜ.

No comments:

Post a Comment