December 30, 2013

ಕಾಡಿನ ರಕ್ಷಣೆ

ಕಾಡಿನ ರಕ್ಷಣೆಯತ್ತ ಎಲ್ಲರ ಚಿತ್ತ

ಬೇಸಿಗೆ ಬಂತೆಂದರೆ ಸಾಕು ಪರಿಸರದಲ್ಲಿ ಅಸಮತೋಲನ ಸ್ಥಿತಿ ಉಂಟಾಗುತ್ತದೆ. ಬಿಸಿಲ ಧಗೆ ಏರಿದಂತೆ ನೆಲದ ಕಾವು ತೀವ್ರವಾಗುತ್ತದೆ. ಬಹುತೇಕ ಗಿಡಮರಗಳ ಎಲೆಗಳು ಉದುರಿ ಒಣಗಿದಂತೆ ತೋರುತ್ತವೆ. ಕಾಡಿಗಂತೂ ಇದು ಗಂಡಾಂತರದ ಕಾಲ. ಮಾನವ ಎಸಗುವ ಕೆಲವು ತಪ್ಪುಗಳು ಕಾಡಿನ ನಾಶಕ್ಕೆ ಕಾರಣವಾಗುತ್ತವೆ. 
ಬಿಸಿಲ ಜಿಲ್ಲೆಗಳೆಂದೇ ಹೆಸರುವಾಸಿಯಾದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರುಗಳಂತಹ ಜಿಲ್ಲೆಗಳಲ್ಲಿ ಮೈದಾನ ಪ್ರದೇಶದ ಕಾಡನ್ನು ಅಭಿವೃದ್ದಿ ಮಾಡುವ ಕಾರ್ಯ ಅವ್ಯಾಹತವಾಗಿ ಸಾಗುತ್ತಾ ಬಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 17.64 ಚದರ ಕಿ.ಮೀ, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 7.78 ಚದರ ಕಿ.ಮೀ ಹಾಗೂ ರಾಯಚೂರು ಜಿಲ್ಲೆಯಲ್ಲಿ ಶೇಕಡಾ 10.46 ಚದರ ಕಿ.ಮೀ ಅರಣ್ಯ ಪ್ರದೇಶವಿದ್ದು ಪ್ರತಿವರ್ಷ ಬೇರೆ ಬೇರೆ ಕಾರಣಗಳಿಗಾಗಿ ನಾಶವಾಗುತ್ತಾ ಕಾಡಿನ ಶೇಕಡಾ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಇದರಲ್ಲಿ ಕಾಡ್ಗಿಚ್ಚಿನಿಂದಾಗುವ ನಾಶದ ಪ್ರಮಾಣವೇ ಹೆಚ್ಚಾಗಿದೆ. 
ಪ್ರತಿವರ್ಷ ಬೇಸಿಗೆಯಲ್ಲಿ ಕಾಡನ್ನು ರಕ್ಷಸುವುದು ಅರಣ್ಯ ಇಲಾಖೆಗೆ ಒಂದು ಸವಾಲಿನ ಕಾರ್ಯವಾಗಿದೆ. ರಕ್ಷಾಣಾ ಕಾರ್ಯ ದುಸ್ಸಾದ್ಯವಾಗುತ್ತದೆ. ಇದಕ್ಕೆಲ್ಲಾ ಮುಖ್ಯ ಕಾರಣ ಕಾಡಿನ ಬಗ್ಗೆ ನಮ್ಮಲ್ಲಿರುವ ಅಪೂರ್ಣ ತಿಳುವಳಿಕೆ. ನಮ್ಮಿಂದ(ಮಾನವರಿಂದ) ಕಾಡಿಗೆ ನಿರಂತರವಾಗಿ ಶೋಷಣೆ ನಡೆಯುತ್ತಲೇ ಇದೆ. ಕಾಡನ್ನು ಕೇವಲ ಒಂದು ಮನೋರಂಜಕ ಪ್ರವಾಸಿ ತಾಣ ಎಂಬ ದೃಷ್ಟಿಯಿಂದ ನೋಡಿತ್ತಿದ್ದೇವೆಯೇ ವಿನಃ ಅದು ನಮ್ಮ ಸಂಪನ್ಮೂಲ ಎಂದು ನಾವಿನ್ನೂ ತಿಳಿದಿಲ್ಲ. 
ಕಾಡಿನ ಪ್ರದೇಶಗಳಲ್ಲಿ ಕೆಲವೊಮ್ಮೆ ಪ್ರವಾಸಿಗರು ಅಥವಾ ಕಿಡಿಗೇಡಿಗಳು ಎಸೆಯುವ ಬೀಡಿ, ಸಿಗರೇಟಿನ ತುಂಡುಗಳೇ ಬೆಂಕಿಗೆ ಕಾರಣವಾಗುವುದುಂಟು. ಅಲ್ಲದೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹಳ್ಳಿಗಳ ಜನರಿಗೆ ಕಾಡಿನ ಹುಲ್ಲು ತುಂಬಾ ಪ್ರಯೋಜನಕಾರಿ. ಹುಲ್ಲಿಗೆ ಬೆಂಕಿ ಇಟ್ಟರೆ ಹೊಸ ಹುಲ್ಲು ಬೆಳೆಯುತ್ತದೆ ಎಂಬ ಅವರ ತಪ್ಪು ಕಲ್ಪನೆಯೂ ಕೂಡಾ ಕಾಡಿನ ನಾಶಕ್ಕೆ ಕಾರಣವಾಗುತ್ತದೆ. ದಟ್ಟವಾದ ಮಳೆಕಾಡುಗಳಲ್ಲಿ ಮಿಂಚು, ಸಿಡಿಲುಗಳು, ಬಿದಿರಿನ ಮೆಳಗಳ ತಿಕ್ಕಾಟಗಳು ಬೆಂಕಿಗೆ ಕಾರಣವಾಗಬಹುದಾದರೂ ಮೈದಾನ ಪ್ರದೇಶಗಳಲ್ಲಿನ ಕಾಡಿನ ಬೆಂಕಿ ಪ್ರಕರಣಗಳಿಗೆ ಮನುಷ್ಯನೇ ಕಾರಣವೆಂಬುದು ಸತ್ಯ. 
ಕಾಡಿಗೆ ಹತ್ತಿಕೊಂಡ ಬೆಂಕಿ ತನ್ನ ಕೆನ್ನಾಲಿಗೆಯಿಂದ ಇಡೀ ಕಾಡನ್ನು ನುಂಗಲು ಯತ್ನಿಸುತ್ತದೆ. ಇದರ ಪರಿಣಾಮವಾಗಿ ಕಾಡಿನ ಅಮೂಲ್ಯ ಗಿಡಮರಗಳು, ಔಷಧಿ ಸಸ್ಯಗಳು, ಪ್ರಾಣಿ, ಪಕ್ಷಿ ಜೀವಸಂಕುಲ ಅಗ್ನಿಗೆ ಆಹುತಿಯಾಗುತ್ತವೆ. ಇದರಿಂದ ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ದೇಶದ ಅಮೂಲ್ಯ ಸಂಪತ್ತಿನ ನಷ್ಟ. ಹೀಗಾಗಿ ಇಡೀ ಪರಿಸರದಲ್ಲಿ ಅಸಮತೋಲನ ಏರ್ಪಡುತ್ತದೆ.
ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿನ ಕಾಡುಗಳಲ್ಲಿ ನೆಲದ ಹುಲ್ಲು, ಒಣ ಎಲೆಗಳು ಹೆಚ್ಚಾಗಿದ್ದು, ಬೆಂಕಿ ಹರಡಲು ಇವು ಉತ್ತೇಜನಕಾರಿಯಾಗಿವೆ. ನೆಲದಲ್ಲಿ ಹರಡುವ ಬೆಂಕಿ ಕೋಟ್ಯಾಂತರ ವರ್ಷಗಳಿಂದ ರೂಪಗೊಂಡಿರುವ ಫಲವತ್ತಾದ ಮೇಲ್ಮಣ್ಣನ್ನು ನಾಶ ಮಾಡುತ್ತದೆ. ಇದರಿಂದ ಮಣ್ಣಿನಲ್ಲಿ ಸಾರಜನಕ ಸಂಯುಕ್ತಗಳ ಪ್ರಮಾಣ ಕಡಿಮೆಯಾಗುತ್ತದೆ. ಬೆಂಕಿ ತಗುಲಿದ ಎಳೆಯ ಗಿಡಮರಗಳು ಸುಟ್ಟು ಕರಕಲಾಗುತ್ತವೆ. ಹೀಗೆ ಗಿಡಮರಗಳ ಹಿಡಿತ ತಪ್ಪಿಸಿಕೊಂಡ ಮೇಲ್ಮಣ್ಣು ಕ್ರಮೇಣವಾಗಿ  ಮಳೆಗಾಲದಲ್ಲಿ ತಗ್ಗಾದ ಪ್ರದೇಶಗಳಿಗೆ ಹರಿದು ಕೃಷಿಭೂಮಿಯನ್ನು ನಾಶಮಾಡುತ್ತದೆ ಹಾಗೂ ಅಕ್ಕಪಕ್ಕದಲ್ಲಿನ ಕೆರೆಗಳಲ್ಲಿ ಹೂಳಿನ ರೂಪದಲ್ಲಿ ತುಂಬಿಕೊಂಡು ಕೆರೆಗಳ ಅವಸಾನಕ್ಕೂ  ಕಾರಣವಾಗುತ್ತದೆ.  
ಕಾಡ್ಗಿಚ್ಚಿನಿಂದ ಉರಗ, ಹಲ್ಲಿ, ಓತಿಕಾಟಗಳಂತಹ ಕೆಲವು ಸರೀಸೃಪಗಳು, ಚಿಟ್ಟೆಗಳು, ಕ್ರಿಮಿಕೀಟಗಳು, ನೆಲದಲ್ಲಿ ಗೂಡು ಕಟ್ಟುವ ಕೆಲವು ಪಕ್ಷಿಗಳು, ಇರುವೆಗಳು, ಗೆದ್ದಲುಗಳು, ಗಿಡಮರಗಳಲ್ಲಿ ವಾಸಿಸುವ ಅಪಾರ ಜೀವರಾಶಿಗಳು ಮೊಟ್ಟೆಗಳ ಸಮೇತ ನಾಶ ಹೊಂದುತ್ತವೆ. ಹೀಗಾಗಿ ಕೆಲವು ಜೀವಿಗಳ ಸಂತತಿ ಸಂಪೂರ್ಣವಾಗಿ ನಾಶವಾಗಿದೆ.
ಪ್ರತಿವರ್ಷ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಸುತ್ತಮುತ್ತ ಹಾಗೂ ಅರಣ್ಯ ರಸ್ತೆಗಳ ಅಕ್ಕಪಕ್ಕ ನಿಗದಿತ ಅಂತರದಲ್ಲಿ ಅಂದರೆ ಸುಮಾರು 20 ರಿಂದ 30 ಅಡಿ ಅಗಲದ ಬೆಂಕಿ ತಡೆರೇಖೆಗಳನ್ನು ನಿರ್ಮಿಸುವುದುಂಟು. ಬೇಸಿಗೆ ಆರಂಭಕ್ಕೂ ಮುನ್ನ ಈ ರೇಖೆಗಳ ಹಾಗೂ ನೆಡು ತೋಪಿನ ನಡುವಿನ ರಸ್ತೆಗಳ ಅಕ್ಕಪಕ್ಕದಲ್ಲಿ ಉದುರಿದ ಎಲೆ, ಕಂಟಿಗಳನ್ನೆಲ್ಲಾ ತೆಗೆದು ಮುಂಜಾಗ್ರತಾ ಕ್ರಮವಾಗಿ ಬೆಂಕಿಯಿಟ್ಟು ಸುಟ್ಟು ಹಾಕುತ್ತಾರೆ.
ಜೀವಸಂಕುಲದ ಮೂಲಾಧಾರವಾದ ಕಾಡಿನ ರಕ್ಷಣೆಯಲ್ಲಿ ಜನರ ಸಹಕಾರ ಅತ್ಯಗತ್ಯ. ಮಾನವ ಪ್ರಕೃತಿಯಿಂದ ಪಾಠ ಕಲಿಯುವ ದಿನಗಳು ದೂರವಿಲ್ಲ. ಬಹುಶಃ ಅದರ ಅರಿವಾಗುವ ವೇಳೆಗೆ ಮಾನವನ ಅಧಃಪತನ ಪ್ರಾರಂಭವಾಗಿರುತ್ತದೆ. ಆದ್ದರಿಂದ ಮಾನವ ಎಚ್ಚೆತ್ತುಕೊಳ್ಳಲು ಈಗ ಸಕಾಲವಾಗಿದೆ. ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿನ ‘ಗ್ರಾಮ ಅರಣ್ಯ ಸಮಿತಿ’ಯ ಸದಸ್ಯರ ನೆರವು ಅವಶ್ಯಕ. ಬೆಂಕಿ ಬೀಳುವ ಮುನ್ನವೇ ಸಂರಕ್ಷಣೋಪಾಯ ಕ್ರಮಗಳನ್ನು ಜರುಗಿಸುವುದು ಉತ್ತಮ. ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ಆಸ್ಥೆಯಿಂದ ಈ ಕಾರ್ಯದಲ್ಲಿ ಮುಂದಾಗಬೇಕು. ಕೇವಲ ಸಸಿ ನೆಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಇರುವಂತಹ ಗಿಡಮರಗಳ ರಕ್ಷಣೆಯತ್ತ ಎಲ್ಲರೂ ಚಿತ್ತ ಹರಿಸಬೇಕಾಗಿದೆ.
    - ಆರ್.ಬಿ.ಗುರುಬಸವರಾಜ

No comments:

Post a Comment