December 31, 2013

ಲೂಯಿ ಬ್ರೈಲ್

ವಿಶ್ವ ಅಂಧರ ದಿನಾಚರಣೆ (ಜನವರಿ 4) ನಿಮಿತ್ತ ಲೇಖನ
ಅಂಧರ ಬೆರಳಿಗೆ ಜ್ಞಾನ ತಂದಿಟ್ಟ ಬಾಲಕ
ಅದೊಂದು ಸಾರ್ವಜನಿಕ ಕಾರ್ಯಕ್ರಮ. ಅಲ್ಲಿ ಒಬ್ಬ ಬಾಲಕ ಆವಿಷ್ಕರಿಸಿದ ಹೊಸ ಕಲಿಕಾ ಪದ್ದತಿಯ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸ ಪದ್ದತಿಯನ್ನು ಕಂಡುಹಿಡಿದವ ಬಾಲಕನೂ ಅಂಧನಾಗಿದ್ದ. ಅಂಧ ಹೇಗೆ ಆವಿಷ್ಕರಿಸಿದ ಎನ್ನುವ ಆಶಾವಾದಿಗಳು ಒಂದೆಡೆಯಾದರೆ, ಕಣ್ಣಿದ್ದವರಿಗೇ ಸರಿಯಾಗಿ ಕಂಡುಹಿಡಿಂiÀiಲಾಗಿಲ್ಲ, ಕಣ್ಣಿಲ್ಲದ ಈ ಕುರುಡ ಅದೂ ಬಾಲಕ ಕಂಡುಹಿಡಿದುದು ಅಷ್ಟರಲ್ಲೇ ಇದೆ ಎನ್ನುವ ನಿರಾಶಾವಾದಿಗಳು ಇನ್ನೊಂದೆಡೆ. ಹೀಗೆ ಆ ಕಾರ್ಯಕ್ರಮಕ್ಕೆ ಅನೇಕರು ಸಾಕ್ಷಿಯಾಗಿದ್ದರು.
ಸುಮಾರು ಎಂಟು ವರ್ಷಗಳಿಂದ ಮಾಡಿದ ಸತತ ಪರಿಶ್ರಮ, ಅಭ್ಯಾಸ, ಸಾಧನೆಗಳ ಫಲಾಫಲಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮವಾಗಿತ್ತು. ಅದಕ್ಕಾಗಿ ವೇದಿಕೆಯ ಮೇಲೆ ಅಂಧ ಬಾಲಕಿಯನ್ನು ಕೂಡಿಸಲಾಗಿತ್ತು. ಅವಳ ಒಂದು ಕೈಯಲ್ಲಿ ದಪ್ಪ ಕಾಗದ ಜೋಡಿಸಿದ ಮರದ ಹಲಗೆ, ಇನ್ನೊಂದು ಕೈಯಲ್ಲಿ ಸ್ಟೈಲಸ್(ಅಂಧರು ಬರೆಯಲು ಬಳಸುವ ದಬ್ಬಳದಂತಹ ಚೂಪಾದ ಸಾಧನ) ಇತ್ತು. ಸಭಿಕರೊಬ್ಬರು ಒಂದು ಪುಸ್ತಕದಿಂದ ಹೇಳಿದ ಕೆಲವು ವಾಕ್ಯಗಳನ್ನು ಅವಳು ಹಲಗೆಯ ಮೇಲೆ ಚುಕ್ಕೆಗಳ ರೂಪದಲ್ಲಿ ಮೂಡಿಸಿದಳು. ನಂತರ ಆ ಚುಕ್ಕೆಗಳ ಮೇಲೆ ಬೆರಳಾಡಿಸುತ್ತಾ ಸರಸರನೇ ಓದಿದಳು. ಹೀಗೆ ಬೇರೆ ಬೇರೆ ಅಂಧರನ್ನು ವಿಧವಿಧವಾಗಿ ಪರೀಕ್ಷಿಸಿದಾಗಲೂ ಅವರೆಲ್ಲ ನಿಖರವಾಗಿ ಓದಲು, ಬರೆಯಲು ಸಾಧ್ಯವಾಗಿತ್ತು. ಇದನ್ನು ಗಮನಿಸಿದ ಸಭಿಕರು ಕರತಾಡನ ಮಾಡಿದರು. ಅಂಧರಿಗೆ ಇದೊಂದು ಅತ್ಯುತ್ತಮ ಮತ್ತು ಸುಲಭವಾದ ಕಲಿಕಾ ಮಾರ್ಗ ಎಂದು ಆವಿಷ್ಕರಿಸಿದವರನ್ನು ಹಾಡಿ ಹೊಗಳಿದರು. ಅಂದಿನಿಂದ ಎಲ್ಲ ಅಂಧರಿಗೂ ಇದೇ ಕಲಿಕೆಯ ಮಾರ್ಗವಾಯಿತು. ಇದನ್ನು ಆವಿಷ್ಕರಿಸಿದ ಅಂಧ ಬೇರಾರೂ ಅಲ್ಲ. ಅವನೇ ‘ಲೂಯಿ ಬ್ರೈಲ್’
ಲೂಯಿ ಬ್ರೈಲ್ ಫ್ರಾನ್ಸ್ ದೇಶದ ಪುಟ್ಟ ಹಳ್ಳಿ ಕೂವ್ರೆ ಎಂಬಲ್ಲಿ 1809 ಜನವರಿ 4 ರಂದು ಜನಿಸಿದನು. ತಂದೆ ಸೈನ್-ರೆ-ಬ್ರೈಲ್ ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸುವ ಕುಶಲಕರ್ಮಿ. ತಾಯಿ ಮೊನಿಕ ಕುಟುಂಬದ ಆರೈಕೆಯ ಹೊಣೆ ಹೊತ್ತವಳು. ತುಂಬು ಕುಟುಂಬದಲ್ಲಿ ಜನಿಸಿದ ಲೂಯಿ ಹುಟ್ಟಿನಿಂದ ಕುರುಡನಲ್ಲ. ಮೂರು ವರ್ಷಗಳವರೆಗೆ ಎಲ್ಲಾ ಮಕ್ಕಳಂತೆ ಸಹಜವಾಗಿ ಆಟ-ತುಂಟಾಟದಲ್ಲಿ ನಿರತನಾಗಿದ್ದ.
ತಂದೆ ಸೈಮನ್ ಮನೆಯ ಒಂದು ಕೋಣೆಯನ್ನೇ ತನ್ನ ಕಾರ್ಯಾಗಾರವನ್ನಾಗಿ ಮಾಡಿಕೊಂಡಿದ್ದ. ಒಂದು ದಿನ ಅಲ್ಲಿಗೆ ಆಕಸ್ಮಾತ್ ಆಗಿ ಬಂದ ಲೂಯಿ, ಕೊಠಡಿಯೊಳಗೆ ಇಣಿಕಿದ. ಯಾರೂ ಕಾಣಲಿಲ್ಲ. ಮೆಲ್ಲನೆ ಒಳನುಗ್ಗಿ ಅಲ್ಲಿದ್ದ ಸಾಧನಗಳೊಂದಿಗೆ ಆಟವಾಡತೊಡಗಿದ. ತನ್ನ ಮಾಡುವಂತೆ ಚರ್ಮದ ತುಂಡೊಂದಕ್ಕೆ ದಬ್ಬಳದಂತಹ ಚೂಪಾದ ಸಾಧನದಿಂದ ತೂತು ಹಾಕಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದ. ಅನಿರೀಕ್ಷಿತವಾಗಿ ಜಾರಿದ ದಬ್ಬಳ ನುಣುಚಿಕೊಂಡು ಅವನ ಎಡ ಕಣ್ಣಿಗೆ ಚುಚ್ಚಿಕೊಂಡಿತು. 
ತಕ್ಷಣ ಓಡಿ ಬಂದ ತಂದೆ-ತಾಯಿ ಎಡ ಕಣ್ಣಿನಿಂದ ರಕ್ತ ಸುರಿಯುವುದನ್ನು ನೋಡಿ ವೈದ್ಯರ ಬಳಿ ಕರೆದೊಯ್ದರು. ವೈದ್ಯರು ರಕ್ತ ಒರೆಸಿ ಮಲಾಮು ಹಚ್ಚಿದರು. ಅಂತಹ ಗಾಯಗಳನ್ನು ಸುಲಭವಾಗಿ ಗುಣಪಡಿಸಲು ಇಂದು ಅನೇಕ ಮಾರ್ಗಗಳಿವೆ. ಆದರೆ ಅಂದು ಸರಿಯಾದ ಔಷದೋಪಚಾರವಿಲ್ಲದೇ ಗಾಯ ಮಾಯುವ ಬದಲು ಕೆಲವೇ ದಿನಗಳಲ್ಲಿ ಕಣ್ಣಿನಲ್ಲಿ ಕೀವು ಕಟ್ಟಿ ಸೊಂಕಾಯಿತು. ಆ ಸೋಂಕು ಇನ್ನೊಂದು ಕಣ್ಣಿಗೂ ತಗುಲಿ ಆ ಕಣ್ಣೂ ಸಹ ಕುರುಡಾಯಿತು. ಒಂದು ವೇಳೆ ಅಂದು ಅವನ ಕಣ್ಣಿಗೆ ಅಫಘಾತವಾಗದಿದ್ದರೆ ಇಂದು ಅಂಧರ ಬಾಳು ನರಕವಾಗಿರುತ್ತಿತ್ತು. ಅಲ್ಲವೇ?
ಲೂಯಿ ತುಂಬಾ ತುಂಟ ಹುಡುಗನಾಗಿದ್ದು, ಕಣ್ಣಿಲ್ಲದಿರುವುದು ಅವನಿಗೆ ಕೊರತೆ ಎನಿಸಲಿಲ್ಲ. ಕೈಯಲ್ಲೊಂದು ಕೋಲು ಹಿಡಿದುಕೊಂಡು ಮನೆ, ಓಣಿ, ಊರಲೆಲ್ಲಾ ಸುತ್ತಾಡುತ್ತಿದ್ದ.  ಊರಿನ ಜನರೊಂದಿಗೆ ಮಾತಿಗಿಳಿಯುತ್ತಿದ್ದ. ಪ್ರತಿಯೊಂದು ಧ್ವನಿಯನ್ನು ಗುರುತಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಅನ್ಯರ ಅನುಕಂಪದ ಮಾತುಗಳಿಗೆ ಕಿವಿಗೊಡಲಿಲ್ಲ. ಅದರ ಬಗ್ಗೆ ಕೊರಗಲಿಲ್ಲ.
ಲೂಯಿ ಬೆಳೆದು ದೊಡ್ಡವನಾದಂತೆ ಅವನ ಭವಿಷ್ಯದ ಬಗ್ಗೆ ತಂದೆ ತಾಯಿಗಳಿಗೆ ಆತಂಕ ಪ್ರಾರಂಭವಾಯಿತು. ತಮ್ಮ ಮಗನೂ ಸ್ವತಂತ್ರವಾಗಿ ಬಾಳಬೇಕೆಂದು ಬಯಸಿದ ಅವರು ಅವನನ್ನು ಪಾದ್ರಿಯೊಬ್ಬರ ಸಹಾಯದಿಂದ ಪ್ಯಾರಿಸ್‍ಗೆ ಓದಲು ಕಳಿಸಿದರು. ಮಹಾಪುರುಷರ ಜೀವನದಲ್ಲಿ ಅಸಾಧ್ಯವಾದುದು ಸಾಧ್ಯವಾಗಿ ಅದು ಲೋಕಕಲ್ಯಾಣಕ್ಕೆ ನಾಂದಿಯಾಗುವಂತೆ ಲೂಯಿಯ ಪ್ಯಾರಿಸ್ ಪಯಣ ಹೊಸ ಮಾರ್ಗಕ್ಕೆ ನಾಂದಿಯಾಯಿತು. 
ಪ್ಯಾರಿಸ್‍ನಲ್ಲಿ ‘ದಿ ರಾಯಲ್ ಇನ್ಸಿಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್’ ಎಂಬ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ. ಈ ಶಾಲೆಯಲ್ಲಿ ವ್ಯಾಕರಣ, ಗಣಿತ, ಭೂಗೋಳ, ಇತಿಹಾಸ, ಸಂಗೀತ ಹೀಗೆ ಅನೇಕ ವಿಷಯಗಳನ್ನು ಕಲಿಸಲಾಗುತ್ತಿತ್ತು. ಲೂಯಿ ವಯಸ್ಸಿನಲ್ಲಿ ಕಿರಿಯವನಾದರೂ ಅಧ್ಯಯನದಲ್ಲಿ ಎಲ್ಲರಿಗಿಂತ ಮುಂದೆ ಇರುತ್ತಿದ್ದ. ವ್ಯಾಲೆಂಟೆನ್ ಹೂವ್ವಿ ಎಂಬಾತ ರೂಪಿಸಿದ್ದ ‘ಏರಿಕೆ ಮುದ್ರಣ’ ಅಂಧರ ಕಲಿಕಾ ಮಾರ್ಗವಾಗಿತ್ತು. ಆದರೆ ಅದು ತುಂಬಾ ಸಂಕೀರ್ಣತೆಯಿಂದ ಕೂಡಿದ್ದು, ಕ್ಲಿಷ್ಟಕರ  ಅಬ್ಯಾಸ ಮಾರ್ಗವಾಗಿತ್ತು.  ಇದು ಲೂಯಿಗೆ ಮಾತ್ರವಲ್ಲ ಇತರರಿಗೂ ತುಂಬಾ ಕಷ್ಟಕರವಾಗಿತ್ತು. ಬಾರ್ಬಿ ಎಂಬ ಇನ್ನೊಬ್ಬ ತಜ್ಞ ರೂಪಿಸಿದ್ದ ಕಲಿಕಾ ಮಾರ್ಗವೂ ಸಹ ಸಮರ್ಪಕವಾಗಿರಲಿಲ್ಲ. ಉಬ್ಬಿದ ಚುಕ್ಕೆಗಳ ಪರಿಕಲ್ಪನೆಯೇ ಸರಿಯಿಲ್ಲವೇನೋ ಎಂಬಂತಾಗಿತ್ತು ಲೂಯಿಗೆ.
ಇದರಿಂದ ಬೇಸತ್ತ ಲೂಯಿಗೆ ಹೊಸದೊಂದು ಪದ್ದತಿಯನ್ನು ಕಂಡು ಹಿಡಿಯಬೇಕೆಂಬ ಆಸೆ ಮೊಳೆಯಿತು. ಆ ಆಸೆ ಪ್ರಯತ್ನಗಳನ್ನು ಹುಟ್ಟು ಹಾಕಿತು. ಇದಕ್ಕೆ ಸ್ನೇಹಿತರ ಸವಾಲೂ ಸಹ ಕಾರಣವಾಗಿತ್ತು. ಇನ್ನೊಬ್ಬರ ವಿಫಲವನ್ನೇ ಬಂಡವಾಳ ಮಾಡಿಕೊಂಡ ಲೂಯಿಗೆ ಉಬ್ಬಿದ ಚುಕ್ಕೆಗಳದೇ ದ್ಯಾನವಾಯಿತು. ಯಾವ ದಬ್ಬಳ ಅವನ ಅಂಧತ್ವಕ್ಕೆ ಕಾರಣವಾಗಿತ್ತೋ ಅದೇ ದಬ್ಬಳದಂತಹ ಸ್ಟೈಲಸ್ ಅವನ ಹೊಸ ಸಂಶೋದನೆಗೆ ನಾಂದಿಯಾಯಿತು. 
ಕೆಲವಾರು ವರ್ಷಗಳ ಕಠಿಣ ಪರಿಶ್ರಮ, ಸತತ ಅಭ್ಯಾಸ ಅವನ ಸಾಧನೆಯನ್ನು ಉತ್ತುಂಗಕ್ಕೆ ಏರಿಸಿದ್ದವು. ಅಂಧರು ಸುಲಭವಾಗಿ ಓದಲು ಬರೆಯಲು ಬಳಸಬಹುದಾದಂತಹ ಹೊಸ ವರ್ಣಮಾಲೆಯನ್ನು ಲೂಯಿ ಸೃಷ್ಟಿಸಿದ್ದ. ಆ ಮೂಲಕ ಜ್ಞಾನ ಭಂಡಾರವನ್ನು ಅಂಧರ ಬೆರಳ ತುದಿಗೆ ತಂದಿಟ್ಟ. ಅದೂ ಅವನ ಹದಿನೈದನೇ ವಯಸ್ಸಿನಲ್ಲಿ. ಈ ಹಿಂದೆ ಅವನ ಕಲಿಕಾ ಪದ್ದತಿಯನ್ನು ಹೀಯಾಳಿಸಿದ ಅನೇಕರು ಅವನ ಕಾಲಿಗೆ ಬೀಳುವಂತಾಗಿತ್ತು. ಅವನು ಕಂಡು ಹಿಡಿದ ಲಿಪಿ “ಬ್ರೈಲ್ ಲಿಪಿ” ಎಂದು ಖ್ಯಾತಿಯಾಯಿತು. 
ಪ್ಯಾರಿಸ್‍ನ ಶೀತ ವಾತಾವರಣದಿಂದಾಗಿ ಲೂಯಿಗೆ ಕ್ಷಯರೋಗ ತಗುಲಿತು. ಕ್ರಮೇಣ ರೋಗದ ಪ್ರಾಬಲ್ಯ ಹೆಚ್ಚಾಗಿ ಲೂಯಿ ಜನವರಿ 6 1852 ರಲ್ಲಿ ಕೊನೆಯ ಉಸಿರು ಎಳೆದನು. ಅಂಧನೊಬ್ಬ ಮಾತ್ರ ಇನ್ನೊಬ್ಬ ಅಂಧನ ಸಂಕಷ್ಟ ಅರಿಯಬಲ್ಲ ಎಂಬುದಕ್ಕೆ ಲೂಯಿ ಸಾಕ್ಷಿಯಾದ. ಅಂಧರ ಬಾಳಿಗೆ ಬೆಳಕಾದ. ಜಗತ್ತಿನ ಅಂಧರ ಕಲಿಕೆಗೆ ಕಾರಣನಾದ. ಲೂಯಿಯ ಈ ಸಾಧನೆಗಾಗಿ ಅವನ ಜನ್ಮದಿನವನ್ನು ಅಂದರೆ ಜನವರಿ 4 ನ್ನು “ವಿಶ್ವ ಅಂಧರ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತದೆ.
                                                                                                                - ಆರ್.ಬಿ. ಗುರುಬಸವರಾಜ.

No comments:

Post a Comment