December 30, 2013

ಕಾಗದ ಕಲೆ

ಕಾಗದ ಕಲೆಯ ಮಾಂತ್ರಿಕ ಸಿದ್ದೇಶ್

ಆತನಿಗೆ ಕಾಲೇಜು ಸೇರಿ ಉನ್ನತ ಶಿಕ್ಷಣ ಪಡಯಬೇಕೆಂಬ ಆಸೆ. ಆದರೆ ಬಡತನದಿಂದಾಗಿ ಅವನಿಗೆ ಕಾಲೇಜು ಶಿಕ್ಷಣ ಗಗನಕುಸುಮ. ಆದರೂ ಅವನ ಕಂಗಳಲ್ಲಿನ ಹೊಳಪು, ಮುಖದಲ್ಲಿನ ಆತ್ಮವಿಶ್ವಾಸ, ಮಂದಹಾಸಗಳು ಎಂತಹವರನ್ನೂ ಚಕಿತಗೊಳಿಸಬಲ್ಲವು. ಇವನಿಗೆ ಕಲೆ ಹೇಗೆ ಸಿದ್ದಿಸಿದೆಯೋ ಬಲ್ಲವರಾರು? ಇವನ ಕೈಯಿಂದ ರೂಪಗೊಂಡ ಕಲಾಕೃತಿಗಳು ಮಾತ್ರ ಜೀವ ತಳೆದು ಬದುಕಿನ ಕತೆ ಹೇಳುತ್ತವೆ. ಅಂದಹಾಗೆ ಇವನಾರು ಎಂದು ತಿಳಿಯಬೇಕೇ? ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಪತ್ತಾರ ಸಿದ್ದೇಶ್(ಚಿರಪರಿಚಿತ ಪತ್ತಾರ ಪಾಲನೇತ್ರ ಇವರ ಕಿರಿಮಗ)ಎಂಬುವವನೇ ಆ ಕಲೆಗಾರ. ಕಾಗದ ಕತ್ತರಿಸಿ ಅದಕ್ಕೊಂದು ರೂಪ ಕೊಡುವುದೇ ಇವನ ಕಲೆ. 18 ವರ್ಷ ವಯಸ್ಸಿನ ಸಿದ್ದೇಶನ ಕೈಗೊಂದು ಬಣ್ಣದ ಕಾಗದ ಮತ್ತು ಕತ್ತರಿ ಕೊಟ್ಟರೆ ಸಾಕು, ಚಕಚಕನೇ ಕಾಗದವನ್ನು ಕತ್ತರಿಸಿ ಸುಂದರ ಕಲಾಕೃತಿಗಳನ್ನಾಗಿ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ನೋಡುಗರಿಗೆ ರಸಾನುಭವದ ಅಪೂರ್ವ ಅನುಭವ.
ಕಲೆ ಯಾರಿಗೂ ಸ್ವಂತದ್ದಲ್ಲ. ಆದರೂ ಎಲ್ಲರಿಗೂ ಸಿದ್ದಸುವುದಿಲ್ಲ. ಕಾಗದವನ್ನು ಮನಮೋಹಕ ವಿನ್ಯಾಸಗಳಲ್ಲಿ ಕತ್ತರಿಸಿ ಕಲಾಕೃತಿಗಳನ್ನು ರಚಿಸುವ ಕಲೆಯೇ “ಸಾಂಝೀ ಕಲೆ”. ತಾನು ಮಾಡುತ್ತಿರುವುದು ‘ಸಾಂಝೀ ಕಲೆ’ ಎಂಬುದನ್ನೂ ಸಹ ತಿಳಿಯದ ಸಿದ್ದೇಶ್ ಓದಿದ್ದು ಕೇವಲ 10 ನೇ ತರಗತಿ ಮಾತ್ರ. ಮುಂದೆ ಓದಲು ಬಡತನ ಅಡ್ಡಿಯಾದರೂ ಕಲೆಯ ಅಭಿವ್ಯಕ್ತಿಗೆ ಅದು ಪೂರಕವಾಯಿತು. ಆಗ ಅವನಲ್ಲಿ ಅಂತರ್ಗತವಾಗಿದ್ದ ಕಲಾಶಕ್ತಿ ಹೊಸ ರೂಪ ಪಡೆದು ಬಾಹ್ಯ ಜಗತ್ತಿಗೆ ತನ್ನನ್ನು ಅರ್ಪಿಸಿಕೊಂಡ.
ಕಲಾವಿದನೊಬ್ಬ ತನ್ನ ಅಭಿವ್ಯಕ್ತಿಗಾಗಿ ಆಯ್ದುಕೊಳ್ಳುವ ಮಾಧ್ಯಮಗಳು ಹಲವಾರು. ತನ್ನ ಆಸಕ್ತಿ ಹಾಗೂ ತನ್ನೊಳಗಿನ ಸೃಜನಶೀಲ ಮನಸ್ಸಿಗನುಗುಣವಾಗಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ಸಿದ್ದೇಶನೇ ಸಾಕ್ಷಿ. ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ಕಾಗದ ಕಲೆಯನ್ನು ಆಯ್ದುಕೊಂಡ. ಪ್ರಮಾಣಬದ್ದವಾಗಿ ವಿವಿಧ ಮಡಿಕೆಗಳಲ್ಲಿ ಮಡಿಚಿ ಕತ್ತರಿಸಿ ಬಿಡಸಿದಾಗ ಅದರಲ್ಲಿ ವಿವಿಧ ವಿನ್ಯಾಸದ ಚಿತ್ರಗಳು ಮೂಡಿರುತ್ತವೆ. ಹೀಗೆ ರಚಿತವಾದ ಕಲಾಕೃತಿಗಳು ಅವನ ಆಸಕ್ತಿ, ಚಿಂತನೆ ಮತ್ತು ಕೈಚಳಕಗಳನ್ನು ಪ್ರತಿಬಿಂಬಿಸುತ್ತವೆ. ಇವನಿಂದ ರಚಿತವಾದ ಪ್ರಾಣಿ, ಪಕ್ಷಿ, ಹಣ್ಣು, ತರಕಾರಿ, ಎಲೆ, ವಾಹನಗಳ ಚಿತ್ರಗಳು ಕಲಾನೈಪುಣ್ಯತೆಯ ಪ್ರತೀಕಗಳಾಗಿವೆ. 
ಬಾಲ್ಯದಲ್ಲಿಯೇ ಅಂದರೆ 10 ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಸಿದ್ದೇಶನಿಗೆ ಸೋದರಮಾವ ಹಾಲೇಶಪ್ಪ ಬಾಳಿಗೆ ಬೆಳಕಾದರು. ಈ ಕಾಗದ ಕಲೆ ಇವರ ಕುಲಕಸಬು ಆಗಿದ್ದರೂ ‘ಸೋದರಮಾವನೇ ನನ್ನ ಗುರು’ ಎಂದು ಅವರನ್ನು ಸ್ಮರಿಸುತ್ತಾನೆ. “1ನೇ ತರಗತಿ ಸೇರುವ ವೇಳೆಗೆ ವಿವಿಧ ಆಕೃತಿಗಳನ್ನು ಕತ್ತರಿಸುವುದನ್ನು ಕಲಿತಿದ್ದೆ” ಎಂದು ಬಾಲ್ಯದ ದಿನಗಳನ್ನು ನೆನೆಯುವ ಸಿದ್ದೇಶನಿಗೆ ‘ಶಿಲ್ಪಕಲೆ’ ಕಲಿಯಬೇಕೆಂಬ ಆಸೆ. ಆದರೆ ಬಡತನ ಮತ್ತು ಮನೆಯವರ ಒತ್ತಾಸೆ ಇಲ್ಲೇ ಹಿಡಿದು ನಿಲ್ಲಿಸಿದೆ.  ಈ ಕಲೆಗೆ ಸೃಜನಶೀಲತೆ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ಇದ್ದರೆ ಸಾಕು ಯಾವುದೇ ಕಾಲೇಜು ಶಿಕ್ಷಣದ ಅವಶ್ಯಕತೆ ಇಲ್ಲ ಎಂಬುದಕ್ಕೆ ಸಿದ್ದೇಶನೇ ಸಾಕ್ಷಿ. 
“ಗಣೇಶಚೌತಿ, ದೀಪಾವಳಿ ಹಾಗೂ ಮದುವೆ ಸೀಜನ್‍ಗಳಲ್ಲಿ ಮಾತ್ರ ಹೆಚ್ಚು ಬೇಡಿಕೆ ಇರುತ್ತದೆ. ಇದರಿಂದ ಬರುವ ಹಣ ಹೊಟ್ಟೆಬಟ್ಟೆಗೂ ಸಾಲುತ್ತಿಲ್ಲ. ಕುಲಕಸಬು ಬಿಡಬಾರದೆಂದು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ” ಎನ್ನುವ ಸಿದ್ದೇಶನ ಮಾತುಗಳಲ್ಲಿ ವಿಷಾದವಿದೆ. ಔದ್ಯೋಗೀಕರಣದ  ಭರಾಟೆಯಿಂದ ಮಾರುಕಟ್ಟೆಯಲ್ಲಿ ಆಕರ್ಷಕವಾದ ವಿವಿಧ ಬಣ್ಣಗಳ ಪ್ಲಾಸ್ಟಿಕ್ ಕಾಗದಗಳು ಕಡಿಮೆ ಬೆಲೆಗೆ ದೊರೆಯುತ್ತಿದ್ದು, ಇಂತಹ ಗ್ರಾಮೀಣ ಜನಪದ ಕಲೆಗಳು ಮೂಲೆಗುಂಪಾಗುತ್ತವೆ. ಆದರೂ ಕಲೆಯನ್ನು ಆರಾಧಿಸುವವರಿಗೆ, ಆಸ್ವಾದಿಸುವವರಿಗೆ ಹಾಗೂ ಸ್ವಾವಲಂಬಿ ಜೀವನ ನಡೆಸಲು ಬದ್ದರಾದವರಿಗೆ ಸಿದ್ದೇಶ ಮಾದರಿಯಾಗಿ ನಿಲ್ಲುತ್ತಾನೆ. ಗ್ರಾಮೀಣ ಜನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂಬ ಇವನ ಕಾಳಜಿ ಮೆಚ್ಚುವಂತದ್ದು. ಈ ಕಾರಣಕ್ಕಾಗಿ ಸಿದ್ದೇಶ ಇಂದಿನ ಯುವಕರಿಗೆ ಸ್ಪೂರ್ತಿಯಾಗಬಹುದಲ್ಲವೇ? ದೇಶದ ಸಾಂಸ್ಕøತಿಕ ಪರಂಪರೆಯ ಪ್ರತೀಕವಾದ ಈ ಕಲೆ ಆಧುನೀಕರಣದಿಂದಾಗಿ ನಶಿಸುತ್ತಿದೆ. ಇಂತಹ ಕಲೆಯನ್ನು ಗುರುತಿಸಿ ಉಳಿಸಿ ಬೆಳೆಸುವತ್ತ ಸರ್ಕಾರ ಗಮನಹರಿಸುತ್ತದೆಯಾ? ಕಾದು ನೋಡಬೇಕಾಗಿದೆ.
ಸಂಪರ್ಕಿಸಿ: ಕಾಗದಕಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಬೇಡಿಕೆಗಾಗಿ ಸಿದ್ದೇಶನ ಮೊಬೈಲ್ ಸಂಖ್ಯೆ 7829933701 ನ್ನು ಸಂಪರ್ಕಿಸಲು ವಿನಂತಿ.


ಸಾಂಝೀ ಕಲೆ: ಕಾಗದವನ್ನು ಮನಮೋಕವಾಗಿ ಮಡಿಚಿ ಕತ್ತರಿಸುವ ಕಲೆಯೇ ಸಾಂಝೀ ಕಲೆ. ಸರಳವಾಗಿ ಹೇಳುವುದಾದರೆ ಇದೊಂದು ‘ಪೇಪರ್ ಕಟ್ಟಿಂಗ್ ಆರ್ಟ’. ಈ ಕಲೆಗೆ ಬಣ್ಣ ಮತ್ತು ಕುಂಚದ ಹಂಗಿಲ್ಲ. ಕಾಗದ ಮತ್ತು ಕತ್ತರಿ ಇದ್ದರೆ ಸಾಕು. ಭಾರತ ಮೂಲದ ಈ ಕಲೆ ಇಂದು ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಪ್ರಸಿದ್ದಿ ಪಡೆದಿದೆ. ಮದುವೆ, ಮುಂಜಿಗಳಂತಹ ಶುಭ ಕಾರ್ಯಗಳಲ್ಲಿ, ಮನೆ, ಶಾಲೆ ಇತ್ಯಾದಿಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ ಸಿಂಗಾರ ಮಾಡಲು ಈ ಕಲೆಯನ್ನು ಬಳಸಲಾಗುತ್ತದೆ. ಇದೊಂದು ದೈಹಿಕ ಶ್ರಮವಿಲ್ಲದ ಜನಪದ ಕಲೆಯಾಗಿದ್ದು ಒಬ್ಬರಿಂದ ಇನ್ನೊಬ್ಬರಿಗೆ ಕಲಿಸಲ್ಪಟ್ಟು ಮುಂದುವರೆದುಕೊಂಡು ಬಂದಿದೆ.
                                                                                         - ಆರ್.ಬಿ.ಗುರುಬಸವರಾಜ

No comments:

Post a Comment