December 31, 2013

ಲಾಲ್ ಬಹದ್ದೂರು ಶಾಸ್ತ್ರಿ.

 ಸರಳತೆಯ ಹರಿಕಾರ 
ಲಾಲ್‍ಜೀಯವರಿಗೆ ನುಡಿನಮನ
ಇಂದು ಎಲ್ಲಾ ರಸ್ತೆ ಸಾರಿಗೆಯ ಬಸ್‍ಗಳಲ್ಲಿ ಮಹಿಳಾ ಕಂಡಕ್ಟರ್‍ಗಳನ್ನು ಕಾಣುತ್ತೇವೆ. ಸ್ವಾತಂತ್ರ ನಂತರ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್ ನೇಮಕಾತಿ ಮಾಡಿವರು ಯಾರು ಗೊತ್ತೇ ? ಅವರೇ ದೇಶದ ಅಪ್ರತಿಮ ನೇತಾರ, ಸರಳತೆಯ ಹರಿಕಾರ, ಪ್ರಾಮಾಣಿಕ ಪ್ರಧಾನಮಂತ್ರಿ ಎಂದೇ ಖ್ಯಾತಿಯಾಗಿದ್ದ ಲಾಲ್ ಬಹದ್ದೂರು ಶಾಸ್ತ್ರಿ. ಶಾಸ್ತ್ರಿಜಿ ಉತ್ತರ ಪ್ರದೇಶದ ಗೋವಿಂದ ವಲ್ಲಭಪಂತರ ಸರ್ಕಾರದಲ್ಲಿ ನಾಗರಿಕಯಾನ ಮತ್ತು ಸಾಗಾಣಿಕಾ ಸಚಿವರಾಗಿದ್ದಾಗ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್ ನೇಮಕಾತಿ ಮಾಡುವ ಮೂಲಕ ಅಂದಿನಿಂದಲೇ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು.
ಲಾಲ್ ಬಹದ್ದೂರ್‍ರವರು ಉತ್ತರ ಪ್ರದೇಶದ ಬನಾರಸ್ ಬಳಿಯ ಮೊಗಲ್ ಸರಾಯಿ ಎಂಬ ಪುಟ್ಟ ಹಳ್ಳಿಯಲ್ಲಿ 1904 ರ ಅಕ್ಟೋಬರ್ 2 ರಂದು ಶಾರದಾ ಪ್ರಸಾದ ಮತ್ತು ರಾಮ್‍ದುಲಾರಿ ದೇವಿಯವರ ಮಗನಾಗಿ ಜನಿಸಿದರು. ದುರದೃಷ್ಟವಶಾತ್ ಒಂದು ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಮಾರ್ಗದರ್ಶನದಲ್ಲಿಯೇ ಬೆಳೆದರು.
ಸಂಸ್ಕಾರಕ್ಕೆ ಪ್ರೇರಣೆ :
ಒಮ್ಮೆ ಆರು ವರ್ಷದ ಬಾಲಕನಾಗಿದ್ದಾಗ ಶಾಲೆಯಿಂದ ಮನೆಗೆ ಮರಳುವಾಗ ಗೆಳೆಯರೊಡನೆ ದಾರಿಯಲ್ಲಿನ ಹಣ್ಣಿನ ತೋಟಕ್ಕೆ ಹೋದರು. ಗೆಳಯರು ಮಾವಿನ ಮರ ಹತ್ತಿ ಹಣ್ಣು ಕೀಳತೊಡಗಿದರು. ಇವರು ಕೆಳಗೆ ನಿಂತು ಆರಿಸತೊಡಗಿದರು. ದೂರದಲ್ಲಿ ಬರುವ ಮಾಲಿಯನ್ನು ಕಂಡ ಗೆಳೆಯರು ಓಡಿಹೋದರು. ಮಾಲಿಯು ಕೈಗೆ ಸಿಕ್ಕಿಬಿದ್ದ ಶಾಸ್ತ್ರಿಯವರನ್ನು ಹೊಡೆಯತೊಡಗಿದ. ಆಗ ಶಾಸ್ತ್ರಿ ಹೊಡೆತ ತಪ್ಪಿಸಿಕೊಳ್ಳಲು ತಾನೊಬ್ಬ ತಬ್ಬಲಿ ಎಂದು ಹೇಳುತ್ತಾರೆ. ಇದನ್ನು ಕೇಳಿ ಮನನೊಂದ ಮಾಲಿ ಹೊಡೆಯುವುದನ್ನು ನಿಲ್ಲಿಸುತ್ತಾ ‘ನೀನು ತಬ್ಬಲಿಯಾದ್ದರಿಂದ ಬಿಡುತ್ತೇನೆ. ಇನ್ನೊಮ್ಮೆ ಇಂತಹ ಹೀನ ಕೃತ್ಯಕ್ಕೆ ಇಳಿಯಬೇಡ. ಉತ್ತಮ ಸಂಸ್ಕಾರ ಪಡೆದು ಉತ್ತಮ ಪ್ರಜೆಯಾಗು’ ಎಂದು  ಬುದ್ದಿ ಹೇಳುತ್ತಾನೆ. ಮಾಲಿಯ ಆ ಮಾತುಗಳೇ ಲಾಲ್‍ಜೀಯವರನ್ನು  ಉತ್ತಮ ಸಂಸ್ಕಾರವಂತರನ್ನಾಗಿಸಲು ಪ್ರೇರೇಪಿಸಿದವು.
ಆತ್ಮಗೌರವ ಮತ್ತು ಸ್ವಾಭಿಮಾನದ ಪರಾಕಾಷ್ಟೆ : 
ಅವರ ಬಾಲ್ಯದಲ್ಲಿ ನಡೆದ ಇನ್ನೊಂದು ಘಟನೆ ಶಾಸ್ತ್ರಿಯವರ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಬಿಂಬಿಸುತ್ತದೆ. ಒಮ್ಮೆ ಗೆಳೆಯರೊಂದಿಗೆ ಜಾತ್ರೆ ನೋಡಲು ಪಕ್ಕದೂರಿಗೆ ಹೋಗುತ್ತಾರೆ. ದಾರಿಯಲ್ಲಿನ ದೊಡ್ಡ ಹಳ್ಳವನ್ನು ದೋಣಿಯ ಮೂಲಕ ದಾಟಬೇಕಾಗುತ್ತದೆ. ಜೇಬಿನಲ್ಲಿದ್ದ ಒಂದೇ ಒಂದು ಕಾಸನ್ನು ಕೊಟ್ಟು ದೋಣಿ ಮೂಲಕ ದಾಟುತ್ತಾರೆ. ಜಾತ್ರೆಯನ್ನೆಲ್ಲಾ ಸುತ್ತಾಡಿದ ನಂತರ ಗೆಳೆಯರೆಲ್ಲಾ ವಾಪಾಸಾಗಲು ಹೊರಡುತ್ತಾರೆ. ಆದರೆ ಶಾಸ್ತ್ರಿಜಿ  ‘ನಾನು ಜಾತ್ರೆ ನೋಡುವುದು ಇನ್ನೂ ಇದೆ, ತಡವಾಗಿ ಬರುತ್ತೇನೆ, ನೀವು ನಡೆಯಿರಿ’ ಎಂದು ಅವರನ್ನು ಸಾಗಹಾಕುತ್ತಾರೆ. ಆದರೆ ನಿಜವಾಗಿಯೂ ಜಾತ್ರೆ ನೋಡುವುದು ಇರಲಿಲ್ಲ. ಜಾತ್ರೆಯಲ್ಲಿ ವಸ್ತುಗಳನ್ನು ಕೊಳ್ಳುವುದಿರಲಿ ವಾಪಾಸು ಹೋಗುವಾಗ ದೋಣಿಯವನಿಗೆ ಕೊಡಲು ಕಾಸು ಇರುವುದಿಲ್ಲ. ಗೆಳೆಯರಲ್ಲಿ ದುಡ್ಡು ಕೇಳಿದ್ದರೆ ಕೊಡುತ್ತಿದ್ದರು. ಆದರೆ ಇವರಿಗೋ  ಸ್ವಾಭಿಮಾನ. ಸಂಜೆಯಾದ ನಂತರ ಹಳ್ಳವನ್ನು ಈಜಿಕೊಂಡು ದಡ ಸೇರುತ್ತಾರೆ. ಬಾಲ್ಯದಿಂದಲೇ ಆತ್ಮಗೌರವ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಧೈರ್ಯ, ಸ್ಥೈರ್ಯ, ಕಷ್ಟ ಸಹಿಷ್ಣುತೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. 
ಸ್ವಾತಂತ್ರ ಚಳುವಳಿಗೆ ಪಾದಾರ್ಪಣೆ : 
1921 ರಲ್ಲಿ ಗಾಂಧಿಜಿಯವರು ಅಸಹಕಾರ ಚಳುವಳಿಗೆ ಕರೆ ನೀಡಿದರು. ಅನೇಕ ದೇಶಾಭಿಮಾನಿಗಳು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಈ ಚಳುವಳಿಯಲ್ಲಿ ಭಾಗವಹಿಸಿದರು. ಆಗ ಶಾಸ್ತ್ರಿಜಿ ವಾರಣಾಸಿಯಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದರು. ಗಾಂಧಿಜಿವರಿಂದ ಪ್ರೇರಿತರಾದ ಶಾಸ್ತ್ರಿಜಿ ತಾಯಿ ಮತ್ತು ಬಂಧುಗಳ ಮಾತನ್ನು ಧಿಕ್ಕರಿಸಿ ಅಸಹಕಾರ ಚಳುವಳುಯಲ್ಲಿ ಭಾಗವಹಿಸಿದರು. ಆಗಲೇ ಅವರಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ 17 ವರ್ಷದ ಶಾಸ್ತ್ರಿಜಿಯವರನ್ನು ಬಂಧಿಸಲಾಯಿತು. ನಂತರ ವಯಸ್ಸು ಚಿಕ್ಕದೆಂಬ ಕಾರಣಕ್ಕೆ ಬಿಡುಗಡೆಗೊಳಿಸಲಾಯಿತು.
ಜಾತ್ಯಾತೀತತೆಯ ಮಂತ್ರ :
ಶಾಸ್ತ್ರಿ ಎಂಬುದು ಅವರ ಮನೆತನದ ಹೆಸರು ಅಲ್ಲ. ಅವರ ಮನೆತನದ ಹೆಸರು ‘ಶ್ರೀವಾಸ್ತವ’ ಎಂದು. ಅದೊಂದು ಜಾತಿ ಸೂಚಕ ಪದ ಎಂಬ ಕಾರಣಕ್ಕೆ ಅವರು ಅದನ್ನು ತಮ್ಮ ಹೆಸರಿಗೆ ಅಂಟಿಸಿಕೊಳ್ಳಲಿಲ್ಲ. ಉನ್ನತ ವ್ಯಾಸಂಗದಲ್ಲಿ 1926ರಲ್ಲಿ ‘ಶಾಸ್ತ್ರಿ’ ಪದವಿ ತೇರ್ಗಡೆಯಾದ ನಂತರ ‘ಶಾಸ್ತ್ರಿ’ ಎಂಬ ಪದವನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಭಾರತೀಯರು ಬಡವರು, ಆದರೆ ಭಿಕ್ಷುಕರಲ್ಲ : 
ನೆಹರು ಪ್ರಧಾನಮಂತ್ರಿಯಾಗಿದ್ದಾಗ ಶಾಸ್ತ್ರಿಜಿ ಗೃಹ ಮಂತ್ರಿಯಾಗಿದ್ದರು. ಅದೊಂದು ದಿನ ವಿಶ್ವದ ಗೃಹ ಮಂತ್ರಿಗಳೆಲ್ಲಾ ಒಂದು ವೇದಿಕೆಯಲ್ಲಿ ಸೇರಬೇಕಾಗಿತ್ತು. ಆಗ ಶಾಸ್ತ್ರಿಜಿ ಮಾಸಿದ ಮತ್ತು ಸ್ವಲ್ಪ ಹರಿದ ಕೋಟನ್ನು ಹಾಕಿಕೊಂಡು ಹೊರಡಲು ಸಜ್ಜಾದರು. ಆಗ ನೆಹರು ಶಾಸ್ತ್ರಜಿಯವರನ್ನು ನೋಡಿ “ನೀವು ನಮ್ಮ  ದೇಶವನ್ನು ಪ್ರತಿನಿಧಿಸುವ ವ್ಯಕ್ತಿಯಾದ್ದರಿಂದ ಈ ಹರಿದ ಕೋಟನ್ನು ಹಾಕಿಕೊಂಡು ಹೋಗಬೇಡಿ. ಬದಲಾಗಿ ಬೇರೆ ಹೊಸ ಕೋಟನ್ನು ಹಾಕಿಕೊಂಡು ಹೋಗಿ” ಎಂದು ಸಲಹೆ ನೀಡಿದರು.  ಶಾಸ್ತ್ರಿಜಿ “ನನ್ನ ಬಳಿ ಬೇರೆ ಯಾವ ಕೋಟೂ ಇಲ್ಲ” ಎಂದರು. ದೇಶದ ಒಬ್ಬ ಗೃಹ ಮಂತ್ರಿಯ ಬಳಿ ಹಾಕಿಕೊಳ್ಳಲು ಒಂದು ಒಳ್ಳೆಯ ಕೋಟು ಇಲ್ಲ ಎಂದರೆ ಅವರ ಸರಳತೆ ಹೇಗಿತ್ತು ಎಂಬುದನ್ನು ನಾವು ಅರಿಯಬಹುದು. ನೆಹರೂರವರು ತಮ್ಮ ಕೋಟನ್ನು ಕೊಡುವದಾಗಿ ಹೇಳುತ್ತಾರೆ. ಶಾಸ್ತ್ರಿಜಿ ಅದನ್ನು ನಿರಾಕರಿಸುತ್ತಾ “ನಾನು ಈ ಹರಿದ ಬಟ್ಟೆ ಧರಿಸಿ ಹೋದರೆ ಭಾರತ ಬಡದೇಶ, ಆದ್ದರಿಂದ  ಭಾರತೀಯ ನಾಯಕನೂ ಬಡವನು ಎಂದು ಭಾವಿಸುತ್ತಾರೆ. ನಿಮ್ಮ ಕೋಟು ನನಗೆ ಉದ್ದವಾಗುತ್ತದೆ. ಅದನ್ನು ನಾನು ಹಾಕಿಕೊಂಡು ಹೋದರೆ ಭಾರತೀಯರು ಬೇರೆಯವರು ನೀಡಿದ ಬಟ್ಟೆಗಳನ್ನು ಹಾಕಿಕೊಳ್ಳುವ ಭಿಕ್ಷುಕರು ಎಂದು ತೋರಿಸಿದಂತೆ ಆಗುತ್ತದೆ. ಭಾರತೀಯರು ಬಡವರು ಎನಿಸಿಕೊಂಡರೂ ಪರವಾಗಿಲ್ಲ. ಭಿಕ್ಷುಕರು ಅಂತ ಕರೆಸಿಕೊಳ್ಳಲು ನನಗೆ ಇಷ್ಟವಿಲ್ಲ” ಎಂದರು. ಇದು ಶಾಸ್ತ್ರಿಜಿಯವರ ಜನಪರ ಕಾಳಜಿ ಮತ್ತು ದೇಶಾಭಿಮಾನದ ದ್ಯೋತಕವಲ್ಲವೇ? ವಿದೇಶ ಪ್ರವಾಸದ ನೆಪದಲ್ಲಿ ಸೂಟು, ಕೋಟು, ಬೂಟು, ಹ್ಯಾಟು ಹಾಕಿಕೊಳ್ಳುವ ಇಂದಿನ ರಾಜಕಾರಣಿಗಳೆಲ್ಲಿ?, ಅಂದಿನ ಶಾಸ್ತ್ರಿಜಿಯವರ ಆದರ್ಶಗಳೆಲ್ಲಿ? ಎಷ್ಟೊಂದು ಅಜಗಜಾಂತರ ವ್ಯತ್ಯಾಸವಲ್ಲವೇ ?
ಸ್ವಾವಲಂಬನೆಯ ಹರಿಕಾರ : 
ಇಂದು ದೇಶವು ಆಹಾರ ಕ್ಷೇತ್ರದಲ್ಲಿ  ಏನಾದರೂ  ಸ್ವಾವಲಂಬನೆ ಸಾಧಿಸಿದೆ ಎಂದರೆ ಅದಕ್ಕೆ ಕಾರಣೀಭೂತರೇ ಲಾಲ್ ಬಹದ್ದೂರು ಶಾಸ್ತ್ರೀಜಿಯವರು. ಅಂದು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಒದ್ದಾಡುತ್ತಿದ್ದ ಭಾರತವನ್ನು ಹಾಗೂ ಅದರ ರೈತಾಪಿ ವರ್ಗವನ್ನು ಮೇಲೆತ್ತಲು “ಜೈ ಜವಾನ್ ಜೈ ಕಿಸಾನ್” ಎಂಬ ಘೋಷವಾಕ್ಯ ಮೊಳಗಿಸುವ ಮೂಲಕ ‘ಹಸಿರು ಕ್ರಾಂತಿ’ಯನ್ನು ಬೆಂಬಲಿಸಿದರು. ತನ್ಮೂಲಕ ಭಾರತ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರಾದರು. ಅಂತೆಯೇ ಹೈನೋಧ್ಯಮವನ್ನು  ಉತ್ತೇಜಿಸುವ  ‘ಕ್ಷೀರಕ್ರಾಂತಿ’ಗೂ ಕಾರಣರಾದರು. 
ವೈಯಕ್ತಿಕತೆಗೆ ತೆತ್ತ ದಂಡ :
ಶಾಸ್ತ್ರಿಜಿ ಪ್ರಧಾನಮಂತ್ರಿಯಾಗಿದ್ದಾಗ ಅವರ ಮಗ ಸುನಿಲ್ ಶಾಸ್ತ್ರಿ ವೈಯಕ್ತಿಕ ಕೆಲಸಕ್ಕಾಗಿ ಪ್ರಧಾನಿಯವರ ವಾಹನ ಬಳಸಿರುವುದು ಗಮನಕ್ಕೆ ಬರುತ್ತದೆ. ಕೂಡಲೇ ಚಾಲಕನಿಂದ ವಾಹನ ಕ್ರಮಿಸಿದ ದೂರದ ವಿವಿರ ಪಡೆದು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸುವ ಮೂಲಕ ತಮ್ಮ ಪ್ರಾಮಾನಿಕತೆಯನ್ನು ಮೆರೆಯುತ್ತಾರೆ. ಅವರ ಸರಳ ವ್ಯಕ್ತಿತ್ವವೇ ಇಂದಿನ ಭ್ರಷ್ಠ ರಾಜಕಾರಣಿಗಳಿಗೆ ಒಂದು ದೊಡ್ಡ ಪಾಠ.  ನೆಹರೂರವರ ಸಂಪುಟದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದಾಗ 1956 ರಲ್ಲಿ ನಡೆದ ರೈಲು ದುರಂತದ ನೈತಿಕ ಹೊಣೆ ಹೊತ್ತು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಇಂತಹ ಅನೇಕ ನಿದರ್ಶನಗಳು ಅವರ ಜೀವನದುದ್ದಕ್ಕೂ ನೆಡೆದಿವೆ.
ಇಲ್ಲಿ ಇನ್ನೊಂದು ಘಟನೆಯನ್ನು ಪ್ರಸ್ತಾಪಿಸಲೇಬೇಕು. ಅದೇನೆಂದರೆ ಶಾಸ್ತ್ರಿಯವರು ಕುಟುಂಬದ ಒತ್ತಡಕ್ಕೆ ಮಣಿದು ಸಾಲ ಮಾಡಿ ಕಾರು ಕೊಂಡುಕೊಳ್ಳುತ್ತಾರೆ. ಆದರೆ ಅದನ್ನು ತೀರಿಸಲಾಗದೇ ಮರಣ ಹೊಂದುತ್ತಾರೆ. ಶಾಸ್ತ್ರಿಯವರ ಕಾರಿನ ಸಾಲವನ್ನು ಪತ್ನಿ ಲಲಿತಾ ದೇವಿಯವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ತೀರಿಸಿದರು. ಅಲ್ಲದೇ ಶಾಸ್ತ್ರಿಜಿಯವರು ತಮ್ಮ ಜೀವನದ ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ಇದ್ದರು. ಇಂದಿನ ರಾಜಕಾರಣಿಗಳೆಲ್ಲ ಸಾಲವನ್ನು ಬಡ್ಡಿಗೆ ಕೊಡುವ ಲೆಕ್ಕಾಚಾರದಲ್ಲಿದ್ದಾರೆ. ತಮಗೂ ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ, ಮರಿಮೊಮ್ಮಕ್ಕಳಿಗೂ ಎಂಬಂತೆ ಹತ್ತಾರು ತಲೆಮಾರುಗಳಿಗೆ ಸಾಕಾಗುವಷ್ಟು ಹಣ ಆಸ್ತಿ ಸಂಪಾದಿಸಿಡುವಾಗ ಶಾಸ್ತ್ರಿಯವರು  ಕಾರಿನ ಸಾಲ ತೀರಿಸಲಾಗದೇ ಕೊನೆಯುಸಿರೆಳೆದುದು ವಿಪರ್ಯಸವಲ್ಲವೇ? ಇಂದಿನ ಭ್ರಷ್ಠ ರಾಜಕಾರಣಿಗಳಿಗೆ ಶಾಸ್ತ್ರಿಯವರ ಪ್ರಾಮಾಣಿಕ ಬದುಕು ಒಂದು ಹಾಸ್ಯಮಯ ನಾಟಕವಾಗಿ ತೋರಬಹುದೇ ಅಥವಾ ಉತ್ತರವಾಗಬಲ್ಲದೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
- ಆರ್.ಬಿ.ಗುರುಬಸವರಾಜ. 

No comments:

Post a Comment