December 31, 2013

ಶೌಚಾಲಯ ಕ್ರಾಂತಿ

ಶೌಚಾಲಯ ಕ್ರಾಂತಿ

ಭಾರತ ದೇಶದಲ್ಲಿ ಶೇಕಡಾ 80 ರಷ್ಟು ಹಳ್ಳಿಗಳಿದ್ದು ದೇಶದ ಅಭಿವೃದ್ದಿಯ ಸೂಚ್ಯಾಂಕದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಕರ್ನಾಟಕವೂ ಸಹ ಇದಕ್ಕೆ ಹೊರತಲ್ಲ. ಬಹುತೇಕ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ದೂರವುಳಿದಿವೆ. ಸ್ವಾತಂತ್ರ ಬಂದು 65 ವರ್ಷ ಕಳೆದರೂ ನಮ್ಮ ಮಹಿಳೆಯರು ಶೌಚಕ್ಕಾಗಿ ಅನುಭವಿಸುವ ನರಕ ಯಾತನೆ ಇನ್ನೂ ನಿಂತಿಲ್ಲ. 
ಬೆಳಗಿನ ಜಾವ ಅಥವಾ ಸಂಜೆಯ ಹೊತ್ತಿನಲ್ಲಿ ಗ್ರಾಮಕ್ಕೆ ಹೊಂದಿಕೊಂಡ ರಸ್ತೆಯ ಇಕ್ಕೆಲಗಳಲ್ಲಿ ಅವರು ಅನುಭವಿಸುವ ನರಕ ಯಾತನೆಯನ್ನು ಪರಿಹರಿಸಲು ನಾವಿನ್ನೂ ಮುಂದಾಗದಿರುವುದು ನಮ್ಮ ದೌರ್ಭಾಗ್ಯವೇ ಸರಿ.
2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 1,02,32,133 ಜನವಸತಿ ಕುಟುಂಬಗಳಿದ್ದು ಅದರಲ್ಲಿ 66,75,173 ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ಹಾಗೂ 35,56,960 ಕುಟುಂಬಗಳು ನಗರ ಪ್ರದೇಶದಲ್ಲಿ ವಾಸಿಸುತ್ತಿವೆ. ಇದರಲ್ಲಿ ಗ್ರಾಮೀಣ ಪ್ರದೇಶದ ಶೇಕಡಾ 17.4 ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದು ಉಳಿದ ಶೇಕಡಾ 82.6 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳೇ ಇಲ್ಲ. ಆದರೆ ನಗರ ಪ್ರದೇಶದ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ನಗರ ಪ್ರದೇಶದಲ್ಲಿ ಶೇಕಡಾ 75.2 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳಿದ್ದು, ಶೇಕಡಾ 24.8 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳು ಇಲ್ಲ. ಒಟ್ಟಾರೆ ರಾಜ್ಯದಲ್ಲಿ ಶೇಕಡಾ 37.5 ರಷ್ಟು ಕುಟುಂಬಗಳಲ್ಲಿ ಮಾತ್ರ ಶೌಚಾಲಯಗಳಿದ್ದು ಉಳಿದ ಶೇಕಡಾ 62.5 ರಷ್ಟು ಕುಟುಂಬಗಳಲ್ಲಿ ಶೌಚಾಲಯಗಳೇ ಇಲ್ಲ. 
ಶೌಚಾಲಯಗಳಿಲ್ಲದ ಈ ಎಲ್ಲಾ ಕುಟುಂಬಗಳು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿವೆ. ಬಯಲು ಶೌಚಾಲಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಜಲಮಾಲಿನ್ಯಕ್ಕೂ ಕಾರಣವಾಗುತ್ತದೆ. ಕೆಲವು ಸಲ ಮಾನಹಾನಿ ಮತ್ತು ಪ್ರಾಣಾಪಾಯಗಳನ್ನು ತಂದೊಡ್ಡುತ್ತವೆ. 
ಪರಿಸ್ಥಿತಿ ಹೀಗಿರುವಾಗ ಇದನ್ನೆಲ್ಲ ಕಡೆಗಣಿಸಿ ಇನ್ನಿತರೇ ಎಲ್ಲಾ ಸೌಲಭ್ಯಗಳನ್ನು ಹೊಂದಿಸಿಕೊಳ್ಳುವ ನಾವುಗಳು ಶೌಚಾಲಯಗಳ ನಿರ್ಮಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಅಲ್ಲದೇ ಬೇರೆ ಬೇರೆ ಕಾರ್ಯಕ್ರಮಗಳಿಗೆ ದೇಣಿಗೆ ಸಂಗ್ರಹಿಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವ ನಾವುಗಳು ಶೌಚಾಲಯ ಕ್ರಾಂತಿಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಬದಲಾಗಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ತೋರುವ ಬದ್ದತೆಯನ್ನು ಶೌಚಾಲಯ ನಿರ್ಮಾಣಕ್ಕೂ ತೋರಿದರೆ ಒಳಿತಲ್ಲವೇ. ಕಾರ್ಯಕ್ರಮಗಳಿಗೆ ಸಂಘಟಿತರಾಗುವಂತೆ  ಶೌಚಾಲಯ ನಿರ್ಮಾಣಕ್ಕೂ ಸಂಘಟಿತರಾಗಿ ಕ್ರಾಂತಿಯನ್ನು ಹಬ್ಬಿಸುವ ಮೂಲಕ ನಮ್ಮ ತಾಯಂದಿರ ಹಾಗೂ ಸಹೋದರಿಯರ ಮಾನ, ಪ್ರಾಣ ಕಾಪಾಡಬಹುದಲ್ಲವೇ ?
- ಆರ್.ಬಿ.ಗುರುಬಸವರಾಜ.

No comments:

Post a Comment