December 30, 2013

ಶಾಲಾ ಬಿಂಬ

ಶಾಲಾ ಬಿಂಬ

ಶಿಕ್ಷಣದ ಮೂಲೋದ್ದೇಶಗಳನ್ನು ಈಡೇರಿಸುವಲ್ಲಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಣದ ಎಲ್ಲಾ ಕನಸುಗಳನ್ನು ಈಡೇರಿಸುವ ಕೇಂದ್ರವೇ ಶಾಲೆ. ಈ ಹಿಂದೆ ಸಾಲೆಗಳು ಸೇವಾ ಕೇಂದ್ರಗಳಾಗಿದ್ದವು. ಆದರೆ ಇಂದು ಅವು ಸೇವಾ ಕೇಂದ್ರಗಳಾಗಿ ಉಳಿದಿಲ್ಲ. ಸಮುದಾಯ, ಪಂಚಾಯಿತಿ, ಪೋಷಕರು ಹೀಗೆ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುವ ಕೇತ್ರವಾಗಿದೆ. ಇಂದು ಶಿಕ್ಷಣದಲ್ಲಿ ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಸಮುದಾಯವನ್ನು ಶಿಕ್ಷಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಾಗ ಮಾತ್ರ ಶಿಕ್ಷಣದ ಧ್ಯೇಯೋದ್ದೇಶಗಳು ಸುಲಭವಾಗಿ ಈಡೇರಲು ಸಾಧ್ಯ.
ಸಾರ್ವಜನಿಕರು ಶಾಲೆಯನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಶಾಲೆಯನ್ನು ತಮ್ಮ ದೃಷ್ಟಕೋನದಂತೆ ಬೆಳೆಸಲು ಹಂಬಲಿಸುತ್ತಾರೆ. ಪ್ರತಿ ಶಾಲೆಯನ್ನು ಇನ್ನೊಂದು ಶಾಲೆಯೊಂದಿಗೆ ಹೋಲಿಸಿ ನೋಡುತ್ತಾರೆ. ಮೇಲ್ನೋಟಕ್ಕೆ ಎರಡು ಶಾಲೆಗಳು ಒಂದೇ ರೀತಿ ಕಂಡರೂ ಒಳಹೊಕ್ಕು ನೋಡಿದಾಗ ಅದರದ್ದೇ ಆದ ವಿಶೇಷತೆ, ವಿಭಿನ್ನತೆ ಮತ್ತು ವ್ಯತ್ಯಾಸಗಳು ಗೋಚರಿಸುತ್ತವೆ. ಇಂತಹ ಭಿನ್ನತೆಗಳನ್ನು ಸಮುದಾಯ ಗುರುತಿಸುತ್ತದೆ. ಹೀಗೆ ಶಾಲೆಯೊಂದು ಸಮುದಾಯದಿಂದ ಗುರುತಿಸಲ್ಪಡುವುದನ್ನು `ಶಾಲಾಬಿಂಬ’ ಎನ್ನಲಾಗುತ್ತದೆ. 
ಪ್ರತಿಯೊಂದು ಶಾಲೆ ತನ್ನದೇ ಆದ ಗುರಿ ಉದ್ದೇಶಗಳನ್ನು ಹೊಂದಿದ್ದು, ಅವುಗಳನ್ನು ಈಡೇರಿಸಲು ಶ್ರಮಿಸುತ್ತದೆ. ಅಗತ್ಯವಾದಾಗ ಸಮುದಾಯದ ಸಹಭಾಗಿತ್ವ ಪಡೆಯುತ್ತದೆ. ಹೀಗೆ ಸಮುದಾಯದ ಸಹಕಾರದಿಂದ ಅಭಿವೃದ್ದಿ ಹೊಂದಿದ ಶಾಲೆ ಸಮಾಜದಲ್ಲಿ, ಸಮುದಾಯದಲ್ಲಿ ತನ್ನದೇ ಆದ ಛಾವು ಮೂಡಿಸುತ್ತದೆ. ತನ್ನ ಮೂಲೋದ್ದೇಶಗಳನ್ನು ಸಮುದಾಯದ ಸದ್ವರ್ತನೆಯಲ್ಲಿ ಬಿಂಬಿಸುವಂತಾಗುವುದೇ ‘ಶಾಲಾ ಬಿಂಬ’. 
ಶಾಲಾ ಬಿಂಬದ ಅವಶ್ಯಕತೆ 
ಶಾಲಾ ಬಿಂಬದ ಅವಶ್ಯಕತೆಯನ್ನು ಕೆಳಗಿನ ಅಂಶಗಳಿಂದ ದೃಢಿಕರಿಸಬಹುದು.
ಶಾಲೆಯ ಅಸ್ತಿತ್ವಕ್ಕಾಗಿ : ಶಾಲೆ ತನ್ನ ಅಸ್ತಿತ್ವಕ್ಕಾಗಿ ಸಮುದಾಯದಿಂದ ಗುರುತಿಸಲ್ಪಡಬೇಕಾದ ಅವಶ್ಯಕತೆ ಇದೆ. ಈ ಗುರುತಿಸುವಿಕೆ ಇಲ್ಲಿದಿದ್ದರೆ ಶಾಲೆಗೆ ವಿದ್ಯಾರ್ಥಿಗಳು ಬರುವುದಿಲ್ಲ. ವಿದ್ಯಾರ್ಥಿಗಳಿಲ್ಲದ ಶಾಲೆಗೆ ಅಸ್ತಿತ್ವವಿಲ್ಲ ಅಲ್ಲವೇ ? ಶಾಲೆಯೊಂದು ತನ್ನ ಅಸ್ತಿತ್ವಕ್ಕಾಗಿ ‘ಶಾಲಾ ಬಿಂಬ’ವನ್ನು ಕಟ್ಟಿಕೊಳ್ಳಬಾಕಾಗಿದೆ.
ಶಿಕ್ಷಕರ ಶ್ರೇಷ್ಟತೆಗಾಗಿ : ಶಿಕ್ಷಕರು ಇಂದು ಬೋಧಕರಾಗಿ ಉಳಿದಿಲ್ಲ. ವಿಭಿನ್ನ ಹಾಗೂ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಬೇಕಾಗಿದೆ.  ಈ ನಿಟ್ಟಿನಲ್ಲಿ ಅವರ ಕಾರ್ಯತತ್ಪರತೆ ತುಣಬಾ ಮಹತ್ವದ್ದು. ಶಿಕ್ಷಕರು ಶ್ರೇಷ್ಟತೆಯನ್ನು ಸಾಧಿಸಬೇಕಾದರೆ ಅವಿರತ ಪರಿಶ್ರಮ ಅಗತ್ಯ. ಅದಕ್ಕಾಗಿ ಅವರು ಸಮಾಜದಲ್ಲಿ ಶ್ರೇಷ್ಟರೆಂದು ಗುರುತಿಸಲ್ಪಡುತ್ತಾರೆ. 
ಸ್ಪರ್ಧಾತ್ಮಕತೆಗಾಗಿ : ಇಂದಿನದು ಸ್ಪರ್ಧಾ ಪ್ರಪಂಚ. ಎಲ್ಲಾ ಹಂತದಲ್ಲೂ ನಮ್ಮ ಸುತ್ತಲಿನ ಸಮಾಜದಲ್ಲಿ ಸ್ಪರ್ಧೆ ಇದೆ. ಅದರಲ್ಲೂ ಖಾಸಗೀ ಮತ್ತು ಸರ್ಕಾರಿ ಶಾಲೆಗಳಲ್ಲಿನ ಸ್ಪರ್ಧೆ ಹೇಳತೀರದು. ಈ ಸ್ಪರ್ಧೆಯನ್ನೆದುರಿಸಲು ಶಾಲೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಪೋಷಕರಿಗೆ ಶಾಲೆಯಲ್ಲಿ ಉತ್ತಮ  ಗುಣಮಟ್ಟದ ಶಿಕ್ಷಣ ದೊರೆಯುತ್ತದೆಯೆಂಬ ಭರವಸೆ ಮೂಡಿದಾಗ ಮಾತ್ರ  ಅಂತಹ ಶಾಲೆಯ ಕಡೆಗೆ ವಾಲುತ್ತಾರೆ. ಇಂತಹ ಸ್ಪರ್ಧೆಗಳಿಂದ ಶಾಲೆಗಳ ಗುಣಮಟ್ಟ ಹೆಚ್ಚುವುದಲ್ಲದೇ ಆಂತರಿಕ ಮತ್ತು ಬಾಹ್ಯ ಸೌಲಭ್ಯಗಳು ಹೆಚ್ಚುತ್ತವೆ. 
ಕಡೆಗಣಿಸಲ್ಪಟ್ಟ ಮಕ್ಕಳ ಹಿತದೃಷ್ಟಿಗಾಗಿ : ಇಂದು ಸರ್ಕಾರಿ ಶಾಲೆಗೆ ಬರುವಂತಹ ಬಹುಪಾಳು ಮಕ್ಕಳು ಬಡತನ ರೇಖೆಗಿಂತ ಕೆಳಗಿರುವ, ಕೊಳಚೆ ಪ್ರದೇಶದ, ಸಮುದಾಯದ ಅಂಚಿನ ವರ್ಗದ ಅಂದರೆ ಪ.ಜಾತಿ ಮತ್ತು ಪ.ವರ್ಗದ, ಹಾಗೂ ಸಮುದಾಯದಿಂದ ನಿರ್ಲಕ್ಷಿಸ್ಪಟ್ಟ ನಿರ್ಗತಿಕ ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕಾದುದು ಪ್ರತಿಯೊಬ್ಬ ಸರ್ಕಾರಿ ಶಾಲಾ ಶಿಕ್ಷಕರಾದ್ಯ ಕರ್ತವ್ಯವಾಗಿದೆ. ಇಂತಹ ಮಕ್ಕಳ ಏಳಿಗೆಯಿಂದ ಸಮುದಾಯದ ಹಾಗೂ ದೇಶದ ಅಭಿವೃದ್ದಿಯಾಗುತ್ತದೆ. ಅದಕಾಗಿ ಪ್ರತಿಯೊಂದು ಸರ್ಕಾರಿ ಶಾಲೆಯೂ ‘ಶಾಲಾಬಿಂಬ’ವಾಗಬೇಕಿದೆ.
ನಿರೀಕ್ಷೆಗಳನ್ನು ಪೂರೈಸಲು : ಒಮ್ಮೆ ಶಾಲೆಗೆ ಉತ್ತಮ ಛಾಪು ಬಂದರೆ ಸಾಕು ಸಮಾಜ ಉನ್ನತ ನಿರೀಕ್ಷೆಗಳನ್ನು ಅಪೇಕ್ಷಿಸುತ್ತದೆ. ಶಿಕ್ಷಕರು ಮಕ್ಕಳಿಂದ, ಮಕ್ಕಳು ಶಿಕ್ಷಕರಿಂದ, ಶಾಲೆ ಸಮಾಜದಿಂದ, ಸಮಾಜ ಶಾಲೆಯಿಂದ ಉತ್ತಮ ನಿರೀಕ್ಷೆಗಳನ್ನು ಅಪೇಕ್ಷಿಸುತ್ತದೆ. ಈ ನಿರೀಕ್ಷೆಗಳು ಸಾಕಾರಗೊಳ್ಳಲು ಪರಸ್ಪರ ಸಹಾಯ ಸಹಕಾರ ಅಗತ್ಯ. ಅದಕ್ಕಾಗಿ ಭಾಗೀದಾರರೆಲ್ಲರೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಶಾಲಾಬಿಂಬದ ಆಯಾಮಗಳು

1) ಸ್ಪಷ್ಟತೆ : ಶಾಲೆ ಯಾವ ವಿಚಾರದಲ್ಲಿ ಮುಂದುವರೆಯಬೇಕೆಂಬ ಸ್ಪಷ್ಟ ನಿಲುವು, ವಿಶ್ಲೇಷಣೆ ಅಗತ್ಯ. ಸಾಧಿಸಬೇಕಾದ ಗುರಿಗಳು, ಅವುಗಳನ್ನು ಸಾಧಿಸಲು ಮಾರ್ಗಗಳು, ರೂಪಿಸಿಕೊಂಡ ಚಟುವಟಿಕೆಗಳು, ಅಳವಡಿಸಿಕೊಂಡ ಮೌಲ್ಯಗಳು ಇತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟತೆ ಇರಬೇಕು ಮತ್ತು ಇವುಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕು. ಅಂದಾಗ ಮಾತ್ರ ಶಾಲೆಯ ದೂರದೃಷ್ಟಿತ್ವ ಸಮುದಾಯದಿಂದ ಗುರುತಿಸಲ್ಪಡುತ್ತದೆ.
2) ಗುಣಮಟ್ಟ : ನಮ್ಮ ಶಾಲೆಗೆ ಮಗುವನ್ನು ಸೇರಿಸಿದರೆ ಆ ಮಗುವಿಗೆ ದೊರೆಯುವ ಗುಣಮಟ್ಟವೇನು ? ಪ್ರಯೋಜನಗಳೇನು ? ಎಂಬುದನ್ನು ಪಾಲಕರಿಗೆ ತಿಳಿಸಲು ಅಗತ್ಯ ಮಾಹಿತಿಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ತಮ್ಮ ಶಾಲಾ ಸಾಧನೆಗಳನ್ನು ಪರಿಚಯಿಸುವ ಕಿರು ಮಾಹಿತಿ ಪುಸ್ತಕ (ಠಿಡಿosಠಿeಛಿಣus) ಇದ್ದರೆ ಒಳಿತು.
3) ಪ್ರಾವೀಣ್ಯತೆ : ಎಲ್ಲಿ ಸ್ಪಷ್ಟತೆ ಮತ್ತು ಗುಣಮಟ್ಟ ಇರುತ್ತದೋ ಅಲ್ಲಿ ಪ್ರಾವೀಣ್ಯತೆ ಇರುತ್ತದೆ. ನಾವೀನ್ಯ ಬೋಧನಾ ವಿಧಾನಗಳನ್ನು , ಉತ್ತಮ ದರ್ಜೆಯ ಹೊಸ ಹೊಸ ತಂತ್ರಜ್ಞಾನ ಬಳಸಿ ಬೋಧಿಸಿದಾಗ ಮಕ್ಕಳಲ್ಲಿ ಪ್ರಾವೀಣ್ಯತೆ ತಾನೇ ತಾನಾಗಿ ಕಾಣಿಸಿಕೊಳ್ಳುತ್ತದೆ. ಇದು ಶಾಲೆಯು ಸಮುದಾಯದಿಂದ ಗುರುತಿಸುವಲ್ಲಿ ಸಹಾಯ ಮಾಡುತ್ತದೆ.
ನಿಮ್ಮ ಶಾಲೆ ಬಿಂಬಿಸಲು ಕೆಳಗಿನ ಸೂತ್ರಗಳು ಸಹಾಯವಾಗಬಹುದು.
ನಿಮ್ಮ ಶಾಲಾ ಗುರಿ ಮತ್ತು ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇರಲಿ.
ನಿಮ್ಮ ಶಾಲೆಯ ಸರ್ವತೋಮುಖ ಬೆಳವಣಿಗೆ ಉತ್ತಮ ಗುಣಮಟ್ಟದಲ್ಲಿರಲಿ.
ನಿಮ್ಮ ಶಾಲೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಮಾರ್ಗೋಪಾಯಗಳಿರಲಿ.
ನಿಮ್ಮ ಶಾಲೆಗೆ ಉನ್ನತ ನಿರೀಕ್ಷೆಗಳಿರಲಿ. ಅವುಗಳನ್ನು ಸಾಕಾರಗೊಳಿಸಲು ಪರಿಶ್ರಮವಿರಲಿ.
ಆರೋಗ್ಯಕರ ಸ್ಪರ್ಧೆ ಇರಲಿ. ಅದು ಪ್ರಗತಿಗೆ ಪೂರಕವಾಗಿರಲಿ.
ಸಾಂಘಿಕ ಕಾರ್ಯ ನಿರ್ವಹಿಸುವ ಚತುರತೆ ನಿಮ್ಮಲ್ಲಿರಲಿ.
ಹೀಗೆ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕೂಡಿದ, ಉತ್ತಮ ಗುಣಮಟ್ಟ ನೀಡುವ ಶಾಲೆ ಎಲ್ಲರನ್ನು ಆಕರ್ಷಿಸುವುದು ಸಹಜ. ಇಂತಹ ಸುಂದರ ಕನಸಿನ ಶಾಲೆ ನಿರ್ಮಿಸುವಲ್ಲಿ ಅಲ್ಲಿನ ಶಿಕ್ಷಕರ ಪರಿಶ್ರಮ ಅಡಗಿರುತ್ತದೆ. ನಾವೀನ್ಯ ತಂತ್ರಗಾರಿಕೆಯೊಂದಿಗೆ, ಹೊಸ ಹೊಸ ಚಟುವಟಿಕೆಗಳೊಂದಿಗೆ ನಿಮ್ಮ ಶಾಲೆ ಸಮುದಾಯದಿಂದ ಗುರುತಿಸಲ್ಪಡುವ ‘ಶಾಲಾಬಿಂಬ’ವಾಗಲಿ ಎಂಬುದೇ ನಮ್ಮ ಆಶಯ.
- ಆರ್.ಬಿ.ಗುರುಬಸವರಾಜ. 

No comments:

Post a Comment